ಭಾನುವಾರ, ಏಪ್ರಿಲ್ 1, 2018

ದಿನೇಶ ಉಪ್ಪೂರ:

*ನನ್ನೊಳಗೆ-88*

ನಾನು ಕುಂಜಿಬೆಟ್ಟಿನ ಕೆಇಬಿ ವಸತಿಗೃಹದಲ್ಲಿ ಇದ್ದ ಸಮಯ. ಆಗ ಒಮ್ಮೆ ಸಡನ್ನಾಗಿ ಮುರಾ ಮಾರ್ಕೆಟ್ ಎಂಬ ಒಂದು ಅಂಗಡಿ ಇದ್ದಕ್ಕಿದ್ದಂತೆ ತೆರೆಯಿತು. ಅಲ್ಲಿ ಯಾವ ಸಾಮಾನು ಇದೆ, ಯಾವ ಸಾಮಾನು ಇಲ್ಲ ಎಂದು ಹೇಳಲಿಕ್ಕಿಲ್ಲ.  ಟಿವಿ, ಫ್ರಿಜ್ಜು, ಗ್ರೈಂಡರ್, ವಾಶಿಂಗ್ ಮಿಶನ್ ಡೈನಿಂಗ್ ಟೇಬಲ್, ಮಂಚ, ಕಪಾಟು ಎಲ್ಲವೂ ಇತ್ತು. ಒಂದುವೇಳೆ ಇಲ್ಲದಿದ್ದರೂ ನಿಮಗೆ ಬೇಕಾದುದನ್ನು ತರಿಸಿಕೊಡುತ್ತಿದ್ದರು.  ಎಲ್ಲ ಸಾಮಾನುಗಳಿಗೂ ಅರ್ಧ ದರ. ಆದರೆ ಒಂದು ಶರತ್ತು. ಅಂದರೆ ಹಣ ಮುಂಗಡ ಪಾವತಿ ಮಾಡಬೇಕು. ಹದಿನೈದು ದಿನದ ನಂತರ ನಿಮಗೆ ಬೇಕಾದ ಸಾಮಾನು ಹಸ್ತಾಂತರ.

 ಮೊದಮೊದಲು ಯಾರೂ ನಂಬಲಿಲ್ಲ. ಆದರೂ ಕೆಲವರು ಸಣ್ಣ ಸಣ್ಣ ಸಾಮಾನು ಅಂದರೆ ಇಸ್ತ್ರಿ ಪೆಟ್ಟಿಗೆ, ಕುಕ್ಕರು ಚಪ್ಪಲಿ ಕುರ್ಚಿ ಮೊದಲಾದುವನ್ನು ತೆಗೆದುಕೊಂಡರು. ಹೌದು! ಅರ್ಧ ಬೆಲೆಯಲ್ಲಿ ಅದು ಸಿಕ್ಕಿತ್ತು. ಅವರಿಗೆ ಖುಷಿಯೋ ಖುಷಿ. ಖುಷಿಯಾದ ಮೇಲೆ ತಮ್ಮ ಗೆಲುವನ್ನು, ಬುದ್ಧಿವಂತಿಕೆಯನ್ನು ಇತರರಲ್ಲಿ ಹಂಚಿಕೊಳ್ಳಲೇ ಬೇಕಲ್ಲ. ಇನ್ನೊಬ್ಬರಿಗೂ ಹೇಳಿದರು. ಸರಿ. ಅಲ್ಲಿ ರಶ್ ಶುರುವಾಯಿತು. ಕೊನೆಕೊನೆಗೆ ದೊಡ್ಡ ದೊಡ್ಡ ವಸ್ತುಗಳಿಗೂ ಅರ್ಧ ಬೆಲೆಕೊಟ್ಟು ಬುಕ್ ಮಾಡಿದ್ದಾಯಿತು. ನಮ್ಮದು ಬುದ್ಧಿವಂತರ ಊರು ಅಂತ ಮೊದಲೇ ತೀರ್ಮಾನವಾಗಿತ್ತಲ್ಲ.

 ಅವನಿಗೆ ಹೇಗೆ ಇದು ಪೂರೈಸುತ್ತದೆ? ಅಂತಲೂ ಚರ್ಚೆಯಾಯಿತು. ಅವನ ಹತ್ತಿರವಿದ್ದ ಕಳ್ಳಹಣವನ್ನು ಬೆಳ್ಳಗೆ ಮಾಡುತ್ತಾನೆ ಅಂದರು ಕೆಲವರು. ಅವನು ಮೋಸಮಾಡಿ ಓಡಿಹೋಗುವುದಂತೂ ಗ್ಯಾರಂಟಿ ಅಂದರು. ಅವನು ನಮ್ಮ ಊರಿನವರನ್ನೇ ಕೆಲಸಕ್ಕೆ ಇಟ್ಟು ಕೊಂಡಿದ್ದ. ಹಾಗೆ ಮಾಡಲು ಆಗುವುದಿಲ್ಲ ಅಂದರು ಮತ್ಯಾರೋ. ಏನೇ ಆಗಲಿ. ಹಾಗೆ ಓಡಿಹೋಗುವ ಮೊದಲೇ ಒಂದಷ್ಟು ಸಾಮಾನು ಹೊಡೆದುಕೊಳ್ಳುವ ಅಂತಲೂ ಕೆಲವರ ಲೆಕ್ಕಾಚಾರವಾಯಿತು.
 
ಅಂತೂ ಎಲ್ಲರು ಎಣಿಸಿದಂತೆ ಒಂದು ದಿನ ಬೆಳಿಗ್ಗೆ ಎಲ್ಲರನ್ನೂ ನಂಬಿಸಿ ಗರಿಷ್ಟ ಜನರ ಅರ್ಧ ಹಣವು ಬಂದ ಒಂದು ದಿನ, ಅಲ್ಲಿನ ಕೆಲಸದವರಿಗೂ ಹೇಳದೆ, ಹಣದೊಂದಿಗೆ ಅವನು ಜಾಗ ಖಾಲಿ ಮಾಡಿದ. ಬೆಳಿಗ್ಗೆ ವಾಕಿಂಗ್ ಹೋದವರು ನೋಡುವಾಗ ಆ ಅಂಗಡಿಯಲ್ಲಿ ಇದ್ದ ಬದ್ದ ಸಾಮಾನುಗಳನ್ನು ಯಾರ್ಯಾರೋ ತೆಗೆದುಕೊಂಡುಹೋಗುತ್ತಿದ್ದರು. ಅಕ್ಕಪಕ್ಕದ ಜನ ಸೇರಿ ಕೈಗೆ ಸಿಕ್ಕಿದನ್ನು ಲೂಟಿ ಮಾಡಿ ತೆಗೆದುಕೊಂಡು ಹೋಗುತ್ತಿದ್ದರು. ಕೆಲವರು ತಮ್ಮ ಹಣ ಹೋಯಿತು ಎಂದು ಬೊಬ್ಬೆ ಹಾಕಿದರು. ಮತ್ತೆ ಕೆಲವರು ಅಲ್ಲಿ ಕೆಲಸಕ್ಕೆ ಇದ್ದ ಹುಡುಗರನ್ನು ಹುಡುಕಿ ಎಳೆದು ತಂದು ಹೊಡೆದರು. ಬೈದರು. ಬೊಬ್ಬೆ ಹೊಡೆದರು. ಪೋಲೀಸ್ ಕಂಪ್ಲೆಂಟ್ ನ್ನೂ ಕೊಟ್ಟಾಯಿತು. ಸ್ವಲ್ಪ ದಿನ ಯಾರ ಬಾಯಿಯಲ್ಲಿ ಕೇಳಿದರೂ ಅದೇ ಸುದ್ಧಿ. ಮತ್ತೆ ಎಲ್ಲವೂ ತಣ್ಣಗಾಯಿತು‌.

ಇದೇನು ಹೊಸದಲ್ಲ. ಈಗಲೂ ಎಷ್ಟೋ ಪೈನಾನ್ಸ್ ಕಂಪೆನಿಗಳು ಹೀಗೆ ಸಾರ್ವಜನಿಕರನ್ನು ನಂಬಿಸಿ ಅವರಿಂದ ಠೇವಣಿ ಅಂತ ಹೆಚ್ಚಿಗೆ ಬಡ್ಡಿಯ ಆಸೆ ತೋರಿಸಿ ಪಡೆದು ಒಂದು ದಿನ ಇದ್ದಕ್ಕಿದ್ದಂತೆ ಮಾಯವಾದ ಎಷ್ಟು ಉದಾಹರಣೆ ನಮ್ಮಲ್ಲಿಲ್ಲ. ಚೈನ್ ಸಿಸ್ಟಂ ನಲ್ಲಿ ಮೂರುಜನ ಹೊಸಬರನ್ನು ಮಾಡಿದರೆ ನಮ್ಮ ಹಣವಾಪಾಸ್ ಎನ್ನುವ ಸ್ಕೀಮ್ ಗಳು. ಶೇರು ಪೇಟೆಯೂ ಒಂದು ತರಹದಲ್ಲಿ ಹಾಗೆಯೇ ಅಲ್ಲವೇ.

ಹಿಂದೆ ನಮ್ಮ ರಾಜ್ಯದಲ್ಲಿ ತಾಂಡವವಾಡುತ್ತಿದ್ದ, ದೈನಂದಿನ ಲಾಟರಿಯಲ್ಲಿ ಹಣ ಹಾಕಿ ಕಳೆದುಕೊಂಡವರೆಷ್ಟು ಜನ ಇಲ್ಲ. ನಮ್ಮ ಆಫೀಸಿನಲ್ಲಿ ಇದ್ದ ಒಬ್ಬರಿಗೆ ಆಗ ತಲೆಯೇ ಕೆಟ್ಟುಹೋಗಿ, ಎಲ್ಲಿ ಎದುರಾದರೂ ಇವತ್ತು ಈ ನಂಬರ್ ಆ ನಂಬರ್ ಅಂತ, ಬರೀ ನಂಬರ್ ಗಳನ್ನೇ ಹೇಳುತ್ತಿದ್ದರು.

ಆದರೂ ಈ  ಜನ ಎಚ್ಚೆತ್ತುಕೊಳ್ಳುವುದಿಲ್ಲ. ಎಲ್ಲಿಯವರೆಗೆ ಟೋಪಿ ಹಾಕಿಸಿಕೊಳ್ಳುವವರಿರುತ್ತಾರೋ ಅಲ್ಲಿಯವರೆಗೆ ಟೋಪಿ ಹಾಕುವವರಿರುತ್ತಾರೆ ಎಂಬ ಮಾತಿನಂತೆ ನಾಳೆ ಮತ್ತೆ ಅಂತಹ ಅಂಗಡಿ ಬಂದರೆ ಜನ ಮುಗಿಬೀಳುತ್ತಾರೆ. ಎಲ್ಲರಿಗೂ ಶ್ರಮವಿಲ್ಲದೇ ಲಾಭ ಬರಬೇಕೆಂಬ ಆಸೆ. ಇನ್ನೊಬ್ಬರಿಗೆ ಮೋಸವಾದರೂ ಅಡ್ಡಿಲ್ಲ ನಮಗೆ ಇದ್ದಕ್ಕಿದ್ದಂತೆ ಹಣ ಸಿಗಲಿ ಎಂಬ ಮನೋಭಾವ. ಮತ್ತೂ ಬೇಕು ಎಂಬ ದುರಾಶೆ. ಯಾಕೆ ಹೀಗೆ?.

ನಮ್ಮ ಹಿರಿಯರು ಹೀಗೆ ಇರಲಿಲ್ಲ. ಅವರಿಗೆ ಇನ್ನೊಬ್ಬರದ್ದು ಎಂದಿಗೂ ಬೇಡವಾಗಿತ್ತು. ನಮಗೆ ಸಿಕ್ಕುವುದು ಸಿಕ್ಕಿದರೆ ಸಾಕು.  ಆದರೆ ನಮ್ಮದು ನಮಗೆ ಸಿಕ್ಕದಿದ್ದರೆ ಪ್ರಾಣ ಹೋದರೂ ಬಿಡುವವರಲ್ಲ. ಇದ್ದುದರಲ್ಲಿಯೇ ತೃಪ್ತಿ. ಇನ್ನೊಬ್ಬರದು ಎಂದೂ ನಮ್ಮದಲ್ಲ ಎಂಬ ಭಾವ.
ಶಿವರಾಮ ಕಾರಂತರ ಯಾವುದೋ ಒಂದು ಕಾದಂಬರಿಯಲ್ಲಿ, ಮಗನು ಕೆಲಸಕ್ಕೆ ಹೋಗುವ ಧನಿಗಳ ಮನೆಯಿಂದ ರಾತ್ರಿ ಬರುವಾಗ ದಾರಿಯಲ್ಲಿ ಬಿದ್ದ ಒಂದು ತೆಂಗಿನಕಾಯಿಯನ್ನು, ಮನೆಗೆ ತಂದ ಎಂದು ಗೊತ್ತಾಗಿ ತಾಯಿ ಗಲಾಟೆ ಮಾಡುತ್ತಾಳೆ. ಕೊನೆಗೆ ಆ ಮಗ ಇನ್ನು ಹಾಗೆ ಮಾಡುವುದಿಲ್ಲ ಎಂದು ತಾಯಿಗೆ ಭಾಷೆಯನ್ನು ಕೊಟ್ಟದ್ದೂ ಅಲ್ಲದೇ, ಆ ತೆಂಗಿನಕಾಯಿಯನ್ನು ಧನಿಗೇ ಹಿಂತಿರುಗಿಸಿ ಕ್ಷಮೆ ಕೇಳುವವರೆಗೂ ಆ ತಾಯಿ ಬಿಡುವುದಿಲ್ಲ.

ಈಗ ಹಾಗಿನ ತಾಯಂದಿರು ಅಪರೂಪ. ಮತ್ತು ಓದಿದ ಮಕ್ಕಳು ತಾಯಿಯ ಮಾತನ್ನು ಕೇಳುವುದು ಕಡಿಮೆ. ಮತ್ತು ಎಲ್ಲರೂ ಹೋರಾಟವೇ ಇಲ್ಲದ ಬದುಕನ್ನು ಬಯಸುವವರು. ಧರ್ಮಕ್ಕೆ ಸಾಲ ಕೊಡಿ. ಕೊಟ್ಟ ಸಾಲದ ಬಡ್ಡಿ ಮನ್ನಾ ಮಾಡಿ. ಯೋಗ್ಯತೆ, ಅರ್ಹತೆ ಇಲ್ಲದಿದ್ದರೂ "ಭಾಗ್ಯ"ವನ್ನು ಪಡೆಯಿರಿ ಎಂಬ ಧೋರಣೆಯ, ಕಣ್ಣ ಮುಂದಿನ ಸರಕಾರದ ಎಲ್ಲ ಸ್ಕೀಮ್ ಗಳೂ ಅಂತದ್ದೇ ಆಗಿದೆಯಲ್ಲ.  ಜನರ ತೆರಿಗೆ ಹಣವನ್ನು ಅವರೂ ತಿನ್ನಬೇಕು, ಅವರ ಚೇಲಾಗಳಿಗೂ ಹಂಚಬೇಕು. ಅನ್ಯಾಯ ತಪ್ಪುಗಳನ್ನು ನೋಡಿದಾಗಲೂ ನಮಗ್ಯಾಕೆ? ನಮ್ಮ ತಲೆಗೆ ಬರುವಾಗ ನೋಡಿಕೊಂಡರೆ ಸಾಕು ಎಂಬಂತೆ ಬದುಕಬೇಕು.

 ಯಾಕೆ ಹೀಗಾಗಿದೆ?. ನಮ್ಮ ಮನಸ್ಸನ್ನೇ, ನಮ್ಮ ಸುತ್ತಲೇ ಸ್ವಚ್ಚ ಇಟ್ಟುಕೊಳ್ಳದ ನಾವು, ಊರಿನ ಸ್ವಚ್ಛತೆಯ ಬಗ್ಗೆ ಹೇಳಲು ಅರ್ಹತೆ ಪಡೆಯುತ್ತೇವೆಯೇ? "ಅವರು ಮಾಡಲಿಲ್ಲ" ಮತ್ತೆ ಅವರು ಇರುವುದು ಯಾತಕ್ಕೆ? ಎನ್ನುವುದು ತಪ್ಪಲ್ಲವೇ?. ಇಂತಹ ಮನೋಭಾವ ಮುಗಿಯುವುದು ಎಂದು?. ಮತ್ತೆ ಹಿಂದಿನ ಒಬ್ಬರನ್ನು ಇನ್ನೊಬ್ಬರು ನಂಬುವ, ವಿಶ್ವಾಸದಿಂದ ಕಾಣುವ ಕಾಲ ಬರುತ್ತದೆಯೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ