ಬುಧವಾರ, ಏಪ್ರಿಲ್ 4, 2018

ದಿನೇಶ ಉಪ್ಪೂರ:

*ನನ್ನೊಳಗೆ-90*

ಮೊನ್ನೆ ಊರಿಗೆ ಹೋಗಿದ್ದಾಗ ಅತ್ತಿಗೆ ಹೇಳಿದರು. "ನಮ್ಮ ಮನೆಯ ಮೇಲು ಬದಿಯ ಹಾಡಿಯಲ್ಲಿರುವುದು ನಮ್ಮ ಮೂಲ ನಾಗ ಅಲ್ಲ ಅಂತೆ ಮಾರಾಯಾ. ಇನ್ನು ಅದು ಎಲ್ಲಿದೆ ಅಂತ ಹುಡುಕಿಕೊಂಡು ಹೋದರೆ ಸೈ" ಅಂದರು. ಎರಡು ವರ್ಷದ ಹಿಂದೆಯಷ್ಟೇ ಯಾರೋ ಜ್ಯೋತಿಷ್ಯರು ಹೇಳಿದರು ಅಂತ ಆ ನಾಗನ ಕಲ್ಲು ಭಿನ್ನ ಆಗಿದೆ ಎಂದು, ಹೊಸದಾಗಿ ನಾಗನನ್ನು ಪ್ರತಿಷ್ಟೆ ಮಾಡಿಸಿ, ದೋಷ ಪರಿಹಾರಕ್ಜಾಗಿ ಆಶ್ಲೇಷ ಬಲಿಯನ್ನು ನಾಗಕಲಶಹೋಮವನ್ನು ಹಲವಾರು ಬ್ರಾಹ್ಮಣ ಪುರೋಹಿತರನ್ನು ಕರೆಸಿ ವಿದ್ಯುಕ್ತವಾಗಿ ಮಾಡಿಸಿದ್ದೆವಲ್ಲ. ಈಗ ಆ ನಾಗನೇ ನಮ್ಮದಲ್ಲ ಅಂದರೆ ಹೇಗೇ? ಎಂದೆ. ಏನೋ ಮಾರಾಯ ನಂಗೊಂದೂ ಗೊತ್ತಾತಿಲ್ಲೆ ಎಂದರು.

 ನಾನೂ ಚಿಕ್ಕವನಿರುವಾಗ ನೆರೆಕರೆಯ ಒಕ್ಕಲುಮನೆಯವರು ಬಾಳೆಗೊನೆಯನ್ನು ತಂದು, " ಒಮ್ಮೆ ನಾಗನಿಗೆ ಒಪ್ಪಿಸಿಕೊಡಿ ಅಯ್ಯ", "ಒಂದು ತನು ಹಾಕಿ ಅಯ್ಯ" ಎಂದು ಹೇಳುತ್ತಿದ್ದರು. ಆಗ ನಾನು ಸ್ನಾನಮಾಡಿ ಪಾಣಿಪಂಚೆಯನ್ನು ಉಟ್ಟು ಮಡಿಯಲ್ಲಿ ಅವರು ತಂದ ಹಣ್ಣುಕಾಯಿಯನ್ನು ನಾಗನಿಗೆ ಅರ್ಪಿಸಿ, ನಾಗನ ಕಲ್ಲಿಗೆ ಹಾಲು ಎರೆದು, ಬಾಳೆಹಣ್ಣಿನ ತುದಿಮುರಿದು, ಗೊತ್ತಿದ್ದ ಮಂತ್ರವನ್ನು ಹೇಳಿ ಆರತಿಮಾಡಿ, ಪೂಜೆ ಮಾಡುವುದು ಇತ್ತು. ಮನೆಯಲ್ಲಿ ಗಂಟಿಕರುಗಳಿಗೆ ಹುಷಾರಿಲ್ಲದಾಗ, ಏನಾದರೂ ಗಂಭೀರವಾದ ಸಮಸ್ಯೆಗಳು ಕಾಯಿಲೆಗಳು ಬಂದಾಗ, ನಾಗನಿಗೆ ಒಂದು ಕಲಶವಿಟ್ಟು ಪೂಜೆಮಾಡುತ್ತೇವೆ ಎಂದು ಹರಕೆ ಹೊತ್ತು ಅದರಂತೆ ನಡೆದುಕೊಳ್ಳುವುದು ಇತ್ತು. ಅದರಿಂದ  ನಮ್ಮ ಕಷ್ಟಪರಿಹಾರ ಮಾಡಿಕೊಳ್ಳುವುದು ಹಿಂದಿನಿಂದಲೂ  ಬಂದದ್ದು.

ನನ್ನ ಕಛೇರಿಯ ಸಹೋದ್ಯೋಗಿಗಳೊಬ್ಬರು ಶೆಟ್ಟರಿದ್ದರು. ಅವರ ಅಣ್ಣನಿಗೆ ಇದ್ದಕ್ಕಿದ್ದಂತೆ ಒಮ್ಮೆ ಹುಷಾರಿಲ್ಲದ ಹಾಗಾಗಿ ಪ್ರಜ್ಞೆ ತಪ್ಪಿ ಕೋಮಕ್ಕೆ ಹೋದರಂತೆ. ಅವರನ್ನು ಮಣಿಪಾಲಕ್ಕೆ ಕರೆದುಕೊಂಡು ಹೋಗಿ ಎಲ್ಲಾ ಚಿಕಿತ್ಸೆಮಾಡಿದರೂ ಏನೂ ಪ್ರಯೋಜನವಾಗದಿದ್ದಾಗ ಜ್ಯೋತಿಷ್ಯರ ಮೊರೆ ಹೋದರು. ಅವರು "ನಿಮ್ಮ ಮೂಲನಾಗನ ಉಪದ್ರ" ಎಂದು ಹೇಳಿದರು. ಮತ್ತು ಅದು ಎಲ್ಲಿ ಯಾವ ದಿಕ್ಕಿನಲ್ಲಿ ಇದೆ ಎಂದೂ ಕೆಲವು ಕುರುಹುಗಳನ್ನು ಹೇಳಿ ಅಲ್ಲಿಗೆ ಹೋಗಿ ಪರಿಹಾರಮಾಡಿಕೊಳ್ಳಿ ಎಂದರು.

 ಸರಿ. ಅವರು ತಿಳಿಸಿದ ಹಾಗೆ ಯಾರು ಯಾರನ್ನೋ ವಿಚಾರಿಸುತ್ತಾ ಸ್ಥಳವನ್ನು ಅರಸುತ್ತಾ ನನ್ನ ಆ ಸಹೋದ್ಯೋಗಿಗಳು ಬಂದದ್ದು ಹಳ್ಳಿಯ ನಮ್ಮ ಮನೆಗೆ.

 ನಾವು ಚಿಕ್ಕಂದಿನಿಂದಲೂ ಪೂಜೆ ಮಾಡುತ್ತಿದ್ದ ನಮ್ಮ ತೋಟದ ಮಧ್ಯ ಇರುವ ನಾಗ ಅವರ ಮೂಲನಾಗ ಅಂತ ಆಯಿತು. ಗೊತ್ತಾದ ಮೇಲೆ ಅದಕ್ಕೆ ಏನಾಗಬೇಕೋ ಅದನ್ನು ಮಾಡಿಸುತ್ತೇವೆ ಎಂದು ಹರಕೆ ಹೊತ್ತರಂತೆ. ಅವರ ಅಣ್ಣ ಕಣ್ಣುಬಿಟ್ಟು ಹುಷಾರಾದರಂತೆ. ಅವರು ಆಸ್ಪತ್ರೆಯಿಂದ ಮನೆಗೆ ಬಂದ ಮೇಲೆ ಒಬ್ಬ ಆರೋಡ ಪ್ರಶ್ನೆಯನ್ನು ಹೇಳುವ ದೊಡ್ಡ ಜ್ಯೋತಿಷ್ಯರನ್ನು ಕರೆದುಕೊಂಡು ಅವರ ಕುಟುಂಬದವರೆಲ್ಲಾ  ಸೇರಿಕೊಂಡು ನಮ್ಮ ಮನೆಗೆ ಒಂದುದಿನ ಬಂದೇ ಬಿಟ್ಟರು.

ನಾವೂ ಆಚೀಚೆಯ ಹಿರಿಯರನ್ನು ವಿಚಾರಿಸಿದಾಗ ಅವರು ಸಣ್ಣವರಿರುವಾಗ ಮೇಲೆ ಮಕ್ಕಿಯ ಬಳಿಯ ವಿಶಾಲ ಜಾಗದಲ್ಲಿ ಹಳೆಯ ಒಂದು ಬಾಗಿಲ ದಾರಂದ, ಅರೆಯುವ ಕಲ್ಲು, ಹಾಳುಬಿದ್ದ ಗೋಡೆ ಎಲ್ಲ ಇದ್ದಿತ್ತಪ ಎಂದು ಹೇಳಿದರು. ಮತ್ತೆ ಕೆಲವರು ಇಲ್ಲಿ ಮೊದಲು ದೊಡ್ಡ ಶ್ರೀಮಂತಿಕೆಯಲ್ಲಿ ಮೆರೆದ ಶೆಟ್ರು ಒಬ್ಬರಿದ್ದರಂತೆ. ಆಮೇಲೆ ಅವರ ಸಂಸಾರದ ಆಂತರಿಕ ಕಲಹದಿಂದಾಗಿ ಆ ಆಸ್ತಿಯನ್ನು ಮಾರಿ ಎಲ್ಲಿಗೋ ಹೋದರಂತೆ ಅಂದದ್ದೂ ನನ್ನ ಸಹೋದ್ಯೋಗಿ ಶೆಟ್ಟರ ಕತೆಗೆ ಹೊಂದಾಣಿಕೆಯಾಯಿತು. ಆರೋಡ ಪ್ರಶ್ನೆಯಲ್ಲಿ ಅವರ ಪೂರ್ವಿಕರು ಅಲ್ಲಿ ಇದ್ದದ್ದು ಹೌದು ಎಂದದ್ದು ಮೇಲಿನ ಮಾತು ಧೃಡವಾಯಿತು.

ಆರೋಡ ಪ್ರಶ್ನೆಯಲ್ಲಿ ಆ ಜ್ಯೋತಿಷಿಗಳು ಗಹನವಾದ ಹಲವು ಸಂಗತಿಗಳನ್ನು ತಿಳಿಸಿ, ನೀವು ಮೂಲನಾಗನನ್ನು ಬಿಡುವ ಹಾಗಿಲ್ಲ, ಅದಕ್ಕೆ ನಡೆದುಕೊಳ್ಳದೇ ಇರುವುದರಿಂದ ಇನ್ನೂ ಕಷ್ಟಗಳು ಬರಬಹುದು. ಅಲ್ಲಿಯೇ ಒಂದು ನಾಗಮಂಡಲ ಮಾಡಿ ಆ ನಾಗನಿಗೆ ಕಳೆಬರುವಂತೆ ಮಾಡಬೇಕೆಂದೂ ಪ್ರತೀವರ್ಷವೂ ಪೂಜೆ ಸಲ್ಲಿಸಬೇಕೆಂದೂ ತಿಳಿಸಿದರು. ಹಣವಿದ್ದವರವರು ಅದನ್ನು ಮುಂದೆ ಮಾಡಿಯಾರು.

ಅಲ್ಲಿಗೆ ನಾವು ಚಿಕ್ಕಂದಿನಿಂದಲೂ ಪೂಜಿಸಿಕೊಂಡು ಬಂದ ನಮ್ಮ ನಾಗ ಅವರ ಮೂಲನಾಗವೆಂದು ನಾವು ತಿಳಿಯಬೇಕಾಯಿತು. ಹಾಗೆಯೇ ಈಗ ನಮ್ಮ ಜ್ಯೋತಿಷ್ಯರು ಹೇಳಿದ ಮಾತಿನಂತೆ ನಮ್ಮ ಮೂಲ ನಾಗ ಎಲ್ಲಿ ಇದೆಯೆಂದು ನಾವೀಗ ಹುಡುಕುವುದಾಯಿತು. ಕೆಲವು ಸ್ನೇಹಿತರು ನಾಗರಪಂಚಮಿಯನ್ನು ಆಚರಿಸುವವರು ಅವರ ಮೂಲನಾಗ ಎಲ್ಲಿ ಇದೆಯೆಂದು ತಿಳಿದು ಪ್ರತೀವರ್ಷ ಅಲ್ಲಿಗೆ ಹೋಗಿ ಪೂಜೆ ಸಲ್ಲಿಸಿಬರುವುದನ್ನೂ ನಾನು ನೋಡಿದ್ದೆ.

ಇದೇ ರೀತಿ ಕುಲದೇವರು ಯಾವುದು ಎಂಬ ಬಗ್ಗೆಯೂ ನಮ್ಮದು ಗೊಂದಲವಿದೆ. ಒಬ್ಬರು ನೀಲಾವರ ಅಂದರೆ, ಮತ್ತೊಬ್ಬರು ಅನಂತೇಶ್ವರ ಅನ್ನುತ್ತಾರೆ.ಇನ್ನು ಕೆಲವರು ಕುಂಜಾರುಗಿರಿ ಅಂದರು. ಒಬ್ಬರು ಈಶ್ವರ ಅಂದರೆ ಮತ್ತೊಬ್ಬರು ಅಮ್ಮನವರು ಅನ್ನುತ್ತಾರೆ.

ಮೊದಲು ಬಡತನದಿಂದ ಬದುಕಿಗಾಗಿ ಅನ್ನವನ್ನು ಹುಡುಕಿಕೊಂಡು ಯಾವ ಯಾವ ಊರನ್ನೋ ಸೇರುತ್ತೇವೆ. ಅಲ್ಲಿಯ ಬದುಕಿನ ಜಂಜಾಟದಲ್ಲಿ ಹಿಂದಿನ ದೇವರನ್ನೋ ದಿಂಡರನ್ನೋ ಮರೆತುಬಿಡುತ್ತೇವೆ. ಆದರೆ ಕಷ್ಟಕಾರ್ಪಣ್ಯಗಳು ತಲೆದೋರಿದಾಗ ಮತ್ತೆ ಮೂಲವನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ನಾಸ್ತಿಕರು ಅನ್ನುವವರು ಏನೇ ಹೇಳಲಿ ನಮ್ಮ ಮೂಲ ದೇವರು, ಮೂಲನಾಗ, ಮೂಲದೈವ ಎಂದು ನಮ್ಮ ದಕ್ಷಿಣಕನ್ನಡ ಉಡುಪಿಯಲ್ಲಿ ಇತ್ತೀಚೆಗೆ ಅದೆಷ್ಟೋ ದೇವಸ್ಥಾನಗಳು ನಾಗಬನಗಳ ಸ್ಥಳಗಳು ಜೀರ್ಣೋದ್ಧಾರವಾಗಿ ಇಂದು ಅಭಿವೃದ್ಧಿಯಾಗಿದೆ ಎನ್ನುವುದು ಸುಳ್ಳಲ್ಲ. ಇದರಿಂದ ಒಂದು ಧಾರ್ಮಿಕ ಶ್ರದ್ಧೆ, ಪಾಪಭೀರುತ್ವ ಮನಸ್ಸಿನಲ್ಲಿ ನೆಲೆಯೂರುತ್ತದೆ ಎಂಬುದು ಅಷ್ಟೇ ಸತ್ಯ.

 ನಮ್ಮ ಊರಿನ ಪಕ್ಕದ ಬೇಸಾಯಗಾರರೊಬ್ಬರು ತಮ್ಮ ಹಿರಿಯರ ಆಸ್ತಿಯನ್ನು ಏನೋ ಕಾರಣದಿಂದ ಮಾರಾಟಮಾಡಿ ಪೇಟೆಗೆ ಹೋಗಿ ಮನೆಮಾಡಿಕೊಂಡು ಇದ್ದರು. ಆದರೆ ಸ್ವಲ್ಪ ಸಮಯದಲ್ಲೇ ಅವರಿಗೆ ಏಳ್ಗತಿಯಾಗದೇ,ಮನಸ್ಸಿನ ನೆಮ್ಮದಿ ಕಳೆದುಕೊಂಡು ಹಲವು ತಾಪತ್ರಯಗಳನ್ನು ಎದುರಿಸಿ ಕೊನೆಗೆ ಮನೆಯ ದೇವರಿಗೆ ಪೂಜೆಯಿಲ್ಲದೇ ಹಾಗಾಯಿತು ಎಂದು ಜ್ಯೋತಿಷಿಗಳು ಹೇಳಿದರು ಎಂದು ನಂತರ ಮೊದಲಿನದಕ್ಕಿಂತ ಹೆಚ್ಚು ಹಣ ಕೊಟ್ಟು ಅದೇ ಆಸ್ತಿಯನ್ನು ಮತ್ತೆ ತೆಗೆದುಕೊಂಡರು ಎಂದು ಹೇಳುವುದನ್ನು ಕೇಳಿದ್ದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ