ಸೋಮವಾರ, ಆಗಸ್ಟ್ 27, 2018


ದಿನೇಶ ಉಪ್ಪೂರ:

*#ನನ್ನೊಳಗೆ - 2*

ಭಾಗ - 3

ಮೊಬೈಲಲ್ಲಿ ಬರೆಯುವುದೇ ನನಗೆ ಇಷ್ಟ.
ಕೈಯಿಂದ ಪೇಪರಲ್ಲಿ ಬರೆಯುವುದು ಯಾವಾಗಲೋ ಬಿಟ್ಟು ಹೋಯಿತು. ಕಂಪ್ಯೂಟರ್ ಮುಂದೆ ಕುಳಿತರೆ ಬರೆಯಬಹುದು.
ಆದರೆ ಇತ್ತೀಚೆಗೆ ಅದೂ ಟಚ್ಚು ಬಿಟ್ಟು ಹೋಗಿದೆ.
*******

ಮೊಬೈಲಲ್ಲಾದರೆ ಬರೆಯಬಹುದು.
ಕುಳಿತು . ನಿಂತು. ಮಲಗಿ. ಇದಕ್ಕೆ ಒಂದೇ ಬೆರಳು ಸಾಕು.
ಪಟಪಟಾ ಅಂತ ಬರೆಯಬಲ್ಲೆ.
ನನಗೆ ಅದು ಅಭ್ಯಾಸವಾಗಿ ಹೋಗಿದೆ. ಮನಸ್ಸಿನಲ್ಲಿ ಇದ್ದದ್ದು ಕೂಡಲೇ ಮೊಬೈಲಿಗೆ ಇಳಿಸಬಹುದು.
ಕೊನೆಗೆ ಎಲ್ಲ ಆದ ಮೇಲೆ ವಾಕ್ಯ ಶಬ್ಧ ಸರಿಮಾಡಬಹುದು.
********

ಹೌದು. ಎಲ್ಲಿಗೆ ನಿಲ್ಲಿಸಿದೆ?
ಹೌದು ಲೈಬ್ರೆರಿಗೆ ಹೋಗುತ್ತಿದ್ದೆ . ಪ್ರತೀದಿನ ಯಾವು ಯಾವುದೋ ಪುಸ್ತಕ ತರುತ್ತಿದ್ದೆ . ಓದುತ್ತಿದ್ದೆ ಮರಳಿಸುತ್ತಿದ್ದೆ.
ಹಿಂದೆ ಆಫೀಸಿನ ಜಂಜಾಟದಲ್ಲಿ ಬರೆಯುವುದು, ಓದುವುದೇ ಬಿಟ್ಟುಹೋಗಿತ್ತು.
***********

ಮೊದಲಿಗೆ ಕಾರಂತರ ಪುಸ್ತಕ ಓದುವ ಅಂತ ಅನ್ನಿಸಿತು.
ಅದು ಅಡೀ ಇತ್ತು. ಅದನ್ನು ಓದುವವರು ಕಡಿಮೆ.
 ಲೈಬ್ರೆರಿಯಿಂದ ಸಿಕ್ಕಿದ್ದು ತಂದು ಓದಿದೆ ಓದಿದೆ. ಅದು ಎಂತದ್ದು !
ಕಾರಂತರು ಒಬ್ಬ ಮನುಷ್ಯ ಅಲ್ಲ .ದೈತ್ಯ ಅಲ್ಲ.  ಆ ಹೋಲಿಕೆ ಬೇಡ. ವಿರಾಟ್ ಆಗಿ ಬೆಳೆದ ದೈವ ಅಲ್ಲ ದೇವ ಶಕ್ತಿ ಅವರು.
ಒಂದು ಭಂಡಾರ .
ಕಾರಂತರು ಮುಟ್ಟದ ವಿಷಯ ಇಲ್ಲ . ಹಿತ್ತಲ ಗಿಡ ಮದ್ದಲ್ಲ.
ಆಡು ಮುಟ್ಟದ ಸೊಪ್ಪಿಲ್ಲ . ಯಾರೋ ಬರೆದಿದ್ದರು .
ಹೌದು ಕಾರಂತರು ಈಗಲೂ ಇದ್ದಿದ್ದರೆ ಇನ್ನೂ ಬರೆಯುತ್ತಿದ್ದರು. ನೀವು ಬೇಕಾದರೆ ಓದಿ . ಬೇಡದಿದ್ದರೆ ಬಿಡಿ.  ನನಗೆ ಬರೆಯಬೇಕು ಅನ್ನಿಸಿದೆ. ಬರೆಯುತ್ತೇನೆ.
ಬೇಡ ಅನ್ನಿಸಿದರೆ ಬಿಡುತ್ತೇನೆ.
ಇದು ಕಾರಂತರ ಮಾತು .
ನನಗೂ ಹಾಗೆಯೇ.
ನಾನು ಸಣ್ಣವ.
*********

 ನಾನು ಕಾರಂತರನ್ನು ಆವಾಹಿಸಿಕೊಂಡವನು.
ಯಾರು ಓದದಿದ್ದರೂ ನಾನು ಬರೆಯ ಬೇಕು ಅನ್ನಿಸಿದರೆ, ಬರೆಯುತ್ತೇನೆ . ಈಗ ಮೊದಲಿನ ಹಾಗೆ ಅಲ್ಲ.  ಪ್ರಕಟಿಸುವವರು ಅಂತ ಪತ್ರಿಕೆ ಬೇಕಿಲ್ಲ . ಸಂಪಾದಕರ ಹಂಗಿಲ್ಲ.
ಮನಸ್ಸಿಗೆ ತೋಚಿದಂತೆ ಫೇಸ್ ಬುಕ್ಕಿನಲ್ಲಿ ಬರೆದುಬಿಡಬಹುದು.
ವಾಟ್ಸಾಪ್ ನಲ್ಲಿ ಹರಿದು ಬಿಡಬಹುದು.
ಬರೆಯಬೇಕು ಅನ್ನಿಸಿದರೆ ಬರೆದು ಬಿಡುತ್ತೇನೆ ನಾನು.
ನಾನು ನನ್ನ ಕುಷಿಗೆ ಬರೆಯುವವನು.
*****************


ಅವನು ಶ್ರೀಕಾಂತ.
 ನನಗೆ ಯಾವಾಗಲಾದರೊಮ್ಮೆ ನೆನಪಾಗುತ್ತಾನೆ . ನಾನು ಎಂಟನೇ ಕ್ಲಾಸಿನಿಂದ ಅವನನ್ನು ಬಲ್ಲೆ.
 ಬಹಳ ಹಠವಾದಿ. ಅವನಿಗೆ ಪಿಯುಸಿ ಯಾಗುವಾಗಲೇ ಕೆಲಸ ಸಿಕ್ಕಿತ್ತು. ಆರ್ ಎಮ್ ಎಸ್ ನಲ್ಲಿ ಕೆಲಸ.
 ಅವನಿಗೆ ಆಗಿನ ಕಾಲಕ್ಕೆ ಅದು ಒಳ್ಳೆಯ ಕೆಲಸವೆ. ಆದರೆ ಹುಡುಗನಿಗೆ ಓದುವ ಹುಚ್ಚು.
ಮನೆಯಲ್ಲಿ ಅಂತಹ ಅನುಕೂಲವೇನಿಲ್ಲ.  ಉಡುಪಿಯಲ್ಲಿ ಕಾಲೇಜು ಸೇರಿ ಓದಿದ.
ಮಾಸ್ಟರ್ ಡಿಗ್ರಿ ಪಡೆದೂ ಆಯಿತು.
ಮತ್ತೆ ಅವನಿಗೆ ಪಾಠ ಮಾಡುವ ಹುಚ್ಚು. ಆರ್ ಎಂ ಎಸ್ ನಲ್ಲಿ ಕುಳಿತು ಬರೆಯುವುದು ನನಗೆ ಸಾಧ್ಯವಿಲ್ಲ ಅನ್ನಿಸಿರಬೇಕು.
ಪಿಪಿಸಿಯಲ್ಲಿ ಪಾರ್ಟ್ ಟೈಮ್ ಆಗಿ ಕೆಲಸ ಸಿಕ್ಕಿಯೇ ಬಿಟ್ಟಿತು. ಹಗಲಿನಲ್ಲಿ ಪಾಠ ಮಾಡುವುದು. ರಾತ್ರಿ ಆರ್ ಎಂ ಎಸ್ ನಲ್ಲಿ ದುಡಿಯುವುದು. ಆರೂರು ಕಂಪೌಂಡ್ ನಲ್ಲಿ ವಾಸ.
 ನನಗೂ ಆಗಿನ ಕೆಇಬಿಯಲ್ಲಿ ಕೆಲಸ ಇತ್ತಲ್ಲ?. ಆಗಾಗ ಎದುರು ಸಿಗುತ್ತಿದ್ದ. “ಉಪ್ಪೂರರೆ, ನನಗೆ ರೀಸರ್ಚ್ ಮಾಡಬೇಕು”
 ನಾನು,
“ ಮಾಡಿ ಮರ್ರೆ . ರೀಸರ್ಚ್ ಮಾಡಿ. ಇನ್ನೇನೇ ಮಾಡಿ.  ಆದರೆ ಹೀಗೆ ಮಾಡಿ ಎರಡು ದೋಣಿಗೆ ಕಾಲು ಹಾಕಿಕೊಂಡು, ಇರುವ ಕೆಲಸ ಕಳೆದುಕೊಳ್ಳಬೇಡಿ. ಹೊಟ್ಟೆಯ ಹಿಟ್ಟಿಗೆ ಮೋಸ ಮಾಡಿಕೊಳ್ಳಬೇಡಿ” ಎಂದೆ.
*****************

*ಮುಂದುವರಿಯುವುದು……….*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ