ಶುಕ್ರವಾರ, ಆಗಸ್ಟ್ 24, 2018

ದಿನೇಶ ಉಪ್ಪೂರ
ಕಥನದೊಳಗೆ– 3
*#ಉಪ್ಪಿಟ್ಟು*
            ಪುಟ 1
ಕಾವೇರಮ್ಮ ಅಂದರೆ ನಮ್ಮ ಹಾಲಾಡಿಯ ತಟ್ಟುವಟ್ಟು, ಚೋರಾಡಿ, ಕಲ್ಲಟ್ಟೆ, ಚೇರಿಕೆ, ಮುದೂರಿಯ ಸುತ್ತಮುತ್ತ ಹಳ್ಳಿಗಳಲ್ಲಿ ಗೊತ್ತಿಲ್ಲದೇ ಇರುವವರೇ ಇಲ್ಲ ಎನ್ನಬಹುದು.
ನಮ್ಮ ಆಸುಪಾಸಿನ ಯಾವ ಬ್ರಾಹ್ಮಣರ ಮನೆಯಲ್ಲಿ ಏನು ವಿಶೇಷದ ಊಟವೋ, ಶ್ರಾದ್ಧವೋ, ಪೂಜೆಯೋ, ಹೋಮವೋ ಇದ್ದರೆ, ಒಳಗಿನ ಅರೆಯುವ ಹೊರಿಯುವ ಅಥವ ಎಂಜಲು ತೆಗೆದು ಶುದ್ಧ ಮಾಡುವ ಅಷ್ಟೇ ಏಕೆ? ಮಧ್ಯಾಹ್ನ ಊಟವಾದ ಮೇಲೆ ಎರಡನೆ ಪಂಕ್ತಿಗೆ ಬಡಿಸುವುದರಿಂದ ಹಿಡಿದು, ಆಮೇಲೆ ನೆರೆಕರೆಯ ಇತರರು,ಕೆಲಸದವರು, ಹೆಂಗಸರು, ಮಕ್ಕಳು ಕೂಲಿಯವರಿಗೆ ಊಟ ಬಡಿಸುವುದಲ್ಲದೇ, ಉಳಿದಿದ್ದ ಪದಾರ್ಥಗಳನ್ನು, ಸಣ್ಣ ಸಣ್ಣ ಪಾತ್ರೆಗಳಿಗೆ ಹಾಕಿ ದೊಡ್ಡದೊಡ್ಡ ಪಾತ್ರೆಗಳನ್ನು ಹೊರಗೆ ತೊಳೆಯಲು ಕೆಲಸದವರಿಗೆ ಹಾಕುವುದರವರೆಗೆ ಎಲ್ಲ ಒಳಗಿನ ಕೆಲಸಗಳನ್ನೂ ಅವರೇ ಮಾಡುವುದು.
ಅಂದು ಮಾಡಿದ ಸ್ವೀಟ್ ಖಾರಗಳನ್ನು ಸಣ್ಣ ಸಣ್ಣ ಪೊಟ್ಟಣ ಮಾಡಿ, ಆವತ್ತು ಬಂದ ಹತ್ತಿರದ ನೆಂಟರೋ ಇಷ್ಟರೋ ಕಂಡರೆ ಅವರನ್ನು ಒಳಗೆ ಅಡಿಗೆಮನೆಯವರೆಗೆ ಕರೆದು,
“ತಗೊಳ್ಳಿ ನಿಮ್ಮ ಮನೆಯವರಿಗೆ ಬಾಯಿ ಸಿಹಿ ಮಾಡಲಿಕ್ಕೆ”
ಎಂದು ಉಪಚಾರದ ಎರಡು ಮಾತನ್ನಾಡಿ ಕೊಟ್ಟು ಬೀಳ್ಕೊಡುವ ಕೆಲಸವನ್ನೂ ಅವರು ಮಾಡುತ್ತಿದ್ದುದರಿಂದ ಮನೆಯವರಿಗೆ ಅವರು ಬರದಿದ್ದರೆ ಕೈಯೇ ಕಟ್ಟಿ ನಿಲ್ಲಿಸಿದ ಹಾಗಾಗುತ್ತದೆ.
ಕಾವೇರಮ್ಮ ಮನೆಯಲ್ಲಿ ಇದ್ದರು ಅಂದರೆ ಒಂದು ರೀತಿಯ ನಿರಮ್ಮಳ ಮನಸ್ಸಿಗೆ.
ಹಾಗಂತ ಅವರು ಮನೆಯಲ್ಲಿ ಇದ್ದಾಗ ಅವರನ್ನು ಕರೆದು,
“ಹ್ವಾಯ್ ಕಾವೇರಮ್ಮ ಸಾರಿಗೆ ಇಷ್ಟು ಉಪ್ಪು ಸಾಕಾ? ಕೆಸವಿನ ಗೊಜ್ಜಿಗೆ ಹುಣಿಸೇಹಣ್ಣು ಎಷ್ಟು ಹಾಕಬೇಕು?”
ಎಂದು ಸಲಹೆ ಕೇಳಿ ಸ್ವಲ್ಪ ಉಬ್ಬಿಸಿ ಮೇಲೆ ಇಟ್ಟರಂತೂ ಅವರು ತಾನೇ ಎಲ್ಲಕ್ಕೂ ಹೊಣೆ ಎಂಬಷ್ಟು ಜವಾಬ್ದಾರಿಯಿಂದ ಎಲ್ಲ ಕೆಲಸಗಳನ್ನು ನೋಡಿಕೊಂಡು ಮಾಡುತ್ತಾರೆ. ನಮಗೆ,
“ಹಾಗೆ ಮಾಡು ಹೀಗೆ ಮಾಡು”
ಎಂದು ನಿರ್ದೇಶಿಸಿ, ನಮ್ಮ ಮನೆಯ ಹೆಂಗಸರ ಗಡಿಬಿಡಿಯನ್ನು, ದುಗುಡವನ್ನು ಕಡಿಮೆ ಮಾಡುತ್ತಾರೆ.
ಕಾವೇರಮ್ಮನಿಗೆ ಗದ್ದೆ ಬೇಸಾಯವಿಲ್ಲ. ತಟ್ಟುವಟ್ಟಿನ ಭಾಸ್ಕರ ಭಟ್ಟರಿಗೆ ಸೇರಿದ ದಾರಿ ಬದಿಯ ಹೋಟೇಲೊಂದರಲ್ಲಿ ಅವರ ಗಂಡ ಮಾಣಿಯಾಗಿ ಕೆಲಸಕ್ಕಿದ್ದರಂತೆ.
ನಾವು ನೋಡುವಾಗ ಆ ಹೋಟೇಲೂ ಇರಲಿಲ್ಲ. ಆ ಹೋಟೇಲಿರುವ ಜಾಗದ ಪಕ್ಕದಲ್ಲೇ ಅದಕ್ಕೆ ತಾಗಿ ಇರುವ ಸಣ್ಣ ಹಂಚಿನ ಮಾಡಿನ ಭಾಗದಲ್ಲಿ, ಕಾವೇರಮ್ಮ ಮತ್ತು ಅವರ ಗಂಡ ಹೋಟೇಲು ಮಾಣಿಯಾಗಿದ್ದ ಭಟ್ಟರಿಗೆ ಇರಲು ಭಟ್ಟರು ಜಾಗ ಕೊಟ್ಟಿದ್ದರಂತೆ. ಅದು ಭಾಸ್ಕರ ಭಟ್ಟರ ಜಾಗವೇ.

********


ವಾಸ್ತವ್ಯವೇ ಇಲ್ಲದೆ ಹೋಟೇಲಿನ ಭಾಗ ಬಿದ್ದು ಹೋದರೂ, ಪಕ್ಕದ ಭಾಗ ರಿಪೇರಿ ಮಾಡಿಕೊಂಡು,
“ಇದ್ದುಕೊಳ್ಳಲಿ ಪಾಪ”
ಎಂದು ಅವರೂ ಸುಮ್ಮನಿದ್ದರು.
ಅಲ್ಲದೇ ಅವರ ಮನೆಯಲ್ಲಿ ನಡೆಯುವ ನವರಾತ್ರಿ, ಯುಗಾದಿ, ಚೌತಿ, ದೀಪಾವಳಿಯಂತಹ ಅನುದಿನವೂ ನಡೆಯುವ ಕಾರ್ಯಕ್ರಮಗಳು ಈ ಕಾವೇರಮ್ಮ ಇಲ್ಲದಿದ್ದರೆ ನಡೆಯುವುದೇ ಇಲ್ಲ ಎನ್ನುವಷ್ಟು ಅವರು ಭಟ್ಟರ ಮನೆಗೆ ಅನಿವಾರ್ಯವಾಗಿದ್ದರಲ್ಲ.
ಆದರೆ ಅವರ ಗಂಡ ಅವರ ಹೆಸರು ಏನೋ ಮರೆತು ಹೋಗಿದೆ, ಆ ಭಟ್ಟರು ಹೋಟೇಲು ಮುಚ್ಚಿದ ನಂತರ ಎಲ್ಲಿಯೂ ಸರಿಕಟ್ಟು ಕೆಲಸ ಇಲ್ಲದೇ ಬದುಕಿರುವಾಗಲೇ ಅಲ್ಲಿ ಇಲ್ಲಿ ಸಾಲ ಮಾಡಿಕೊಂಡು ಬೇಜವಾಬ್ದಾರಿಯಿಂದ ಬದುಕಿದ್ದರಿಂದ, ಅವರು ಇದ್ದ ಮನೆಯನ್ನು ಬಿಟ್ಟರೆ  ಏನೂ ಆಸ್ತಿ ಮನೆ ಮಾಡಲಿಲ್ಲ.
ಊಟಕ್ಕೆ ಅವರಿವರ ಮನೆಯಲ್ಲಿ, ವಿಶೇಷದ ಮನೆಯಲ್ಲಿ ಅಡುಗೆ ಮಾಡಿಯೋ, ಮದುವೆ ಮನೆಯಲ್ಲಿ ಬಡಿಸಿಯೊ ದಿನದ ಊಟಕ್ಕೆ ನೋಡಿಕೊಳ್ಳುವ ಪರಿಸ್ಥಿತಿ.
ಆದರೆ ಒಕ್ಕಲು ಮಸೂದೆ ಕಾನೂನು ಬಂದಾಗ ಮಾತ್ರಾ ಅವರು ಜಾಗ ಬಿಡಬೇಕು ಅಂತ ಆದಾಗ, ಭಟ್ಟರೇ ಉದಾರತನ ತೋರಿ ಆ ಮನೆಯ ಅರ್ಧ ಮಾಡು ಇರುವ ಜಾಗವನ್ನು ಅವರಿಗೇ ಬಿಟ್ಟುಕೊಟ್ಟರು ಅಂತ ಹೇಳುತ್ತಾರೆ. ಅವರ ಗಂಡನಿಗೆ ಸುಮಾರು ನಲವತ್ತು ವರ್ಷವಾಗುವಾಗಲೇ ಒಮ್ಮೆ,
“ತಲೆಯಲ್ಲಿ ಏನೋ ಹರಿದಾಡಿದಂತಾಗುತ್ತದೆ, ಎಲ್ಲಾದರೂ ತಲೆ ತಿರುಗಿ ಬೀಳುತ್ತೇನೆ”
ಎಂದು ಹೆದರಿಕೆ ಶುರುವಾಗಿ, ಮನೆ ಬಿಟ್ಟು ಹೋಗುವುದನ್ನೇ ಕಡಿಮೆ ಮಾಡಿದಾಗ ಕಾವೇರಮ್ಮನಿಗೆ ಮನೆಯಿಂದ ಹೊರಗೆ ಬರುವುದು ಅನಿವಾರ್ಯವಾಯಿತು.
ಅವರಿವರ ಮನೆಯಲ್ಲಿ ಹಪ್ಪಳ ಸಂಡಿಗೆ ಮಾಡಿಕೊಡುವುದು  ವಿಶೇಷದ ದಿನಗಳಲ್ಲಿ ಹೋಗಿ ಸಹಾಯ ಮಾಡಿ, ಅವರು ಕೊಟ್ಟಷ್ಟನ್ನು ಮನೆಗೆ ತಂದು ಗಂಡನೊಂದಿಗೆ ಹಂಚಿ ತಿನ್ನುವುದು ಅನಿವಾರ್ಯವಾಯಿತು. ತಾನೂ ಹಪ್ಪಳ ಸಂಡಿಗೆ ಮಾಡಿ ಗುರುತಿನವರ ಮನೆಗೆ ಹೋಗಿ,
“ಬೇಕಾ ಬೇಕಾ?” ಎಂದು ಕೊಡಲೂ ಶುರುಮಾಡಿದರು. ಅವರ ಮೇಲೆ ನಿಜವಾದ ಮಮತೆಯಿದ್ದ ನನ್ನ ಅಮ್ಮನಂತವರು,
“ಕೊಡಿ ಕೊಡಿ ಇನ್ನೂ ನಾಲ್ಕು ಪೊಟ್ಟಣ ಹೆಚ್ಚುಕೊಡಿ ಮಗಳ ಮನೆಗೆ ಕಳಿಸಿಕೊಡಲು ಆಗುತ್ತದೆ”
ಎಂದು ಅದು ಅಷ್ಟೇನೂ ಒಳ್ಳೆಯದಿದ್ದರೂ ಅವರಿಂದ ಖರೀದಿ ಮಾಡುತ್ತಿದ್ದರು.
ಆದರೆ ಅವರ ಗಂಡ  ತಲೆನೋವಿನಿಂದ ಕಂಗಾಲಾಗಿ ಹಾಸಿಗೆ ಹಿಡಿದಾಗ ಅವರಿವರು ಸೂಚಿಸಿದಂತೆ ಗಂಡನನ್ನು ಮಣಿಪಾಲಕ್ಕೆ ಕರೆದುಕೊಂಡು ಹೋದರು. ಏನು ಕಾಯಿಲೆಯೆಂದೇ ಡಾಕ್ಟರರಿಗೆ ಕಂಡು ಹಿಡಿಯಲು ಆಗಲಿಲ್ಲವಂತೆ, ಅಂತೂ ಟೆಸ್ಟು, ಸ್ಕ್ಯಾನಿಂಗು, ಮಣ್ಣು ಮಸಿ ಅಂತ ಸಾವಿರಾರು ರುಪಾಯಿ ಖರ್ಚಾಯಿತು,


*""""""********



ಆದರೂ ಕಾವೇರಮ್ಮನಿಗೆ ಗಂಡನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಒಂದು ತಿಂಗಳಲ್ಲೇ ಹೆಣವಾಗಿ ಬಂದ ಗಂಡನ ಅಂತ್ಯಸಂಸ್ಕಾರವನ್ನು ಅವರ ಒಂದೇ ಒಂದು ಸಣ್ಣ ಮಾಣಿಯಿಂದ ಮಾಡಿಸಬೇಕಾಯಿತು.
ಕೈತುಂಬಾ ಸಾಲ. ಅದರಲ್ಲೂ ಇದ್ದ ಒಬ್ಬನೇ ಮಗನಿಗೆ ಹೇಗಾದರೂ ಮಾಡಿ ಓದಿಸಬೇಕೆಂಬ ಹಠ. ಮೈಯಲ್ಲಿ ಕಸುವಿದ್ದುದರಿಂದ ಕಾವೇರಮ್ಮ ಹೆದರಲಿಲ್ಲ.
ಹತ್ತಿರದ ಆತ್ಮೀಯ ಗೆಳತಿಯರಲ್ಲಿ ಅವರ ಅನುಕಂಪದ ಮಾತಿಗೆ, ಸೆರಗಿನ ಮರೆಯಲ್ಲಿ ಕಣ್ಣೀರು ಹಾಕಿ ಒರೆಸಿಕೊಂಡಿದ್ದರೂ ಯಾರ ಎದುರಿಗೂ ಭಿಕ್ಷೆ ಬೇಡಲಿಲ್ಲ. ದೀನರಾಗಿ ಕೈ ಚಾಚಲಿಲ್ಲ.
ಹಗಲಿರುಳೂ ಅವರು ದುಡಿದರು.
ಕಷ್ಟಪಟ್ಟು ಮಗನನ್ನು ಓದಿಸಿದರು.
ಆದರೆ ಮಗ ಒಂದು ನಮೂನೆ. ಆಚೀಚೆ ಮನೆಯವರ ಅನುಕೂಲಗಳನ್ನು ನೋಡುತ್ತಾ,
ಅದು ನಮಗೆ ಯಾಕೆ ಇಲ್ಲ? ಅದು ಬೇಕು. ಇದು ಬೇಕು”
ಎಂದು ಹಠ ಹಿಡಿದು ಪಡೆದುಕೊಂಡು ಅಮ್ಮನ ಮುದ್ದಿನೊಂದಿಗೆ ಬೆಳೆದ. ಆದರೆ ಕಲಿಯಲು ಬಹಳ ಚುರುಕು ಇದ್ದುದರಿಂದ ಓದಿ ಡಿಗ್ರಿ ಮುಗಿಯುತ್ತಿದ್ದಂತೆ ಬೆಂಗಳೂರಿನಲ್ಲಿ ಯಾವುದೋ ಬ್ಯಾಂಕಿನಲ್ಲಿ ಕ್ಲರ್ಕ್ ಕೆಲಸವೂ ಸಿಕ್ಕಿತು.
“ಇನ್ನೇನು? ಮಗ ಕೈಗೆ ಬಂದ, ನನಗೆ ಇನ್ನೇನೂ ತೊಂದರೆ ಇಲ್ಲ”
ಎಂದು ಕಾವೇರಮ್ಮ ಸಂಭ್ರಮ ಪಡುವುದರ ಒಳಗೆ, ಆ ಮಗ ತಾನೇ ಒಬ್ಬಳು ಹುಡುಗಿಯನ್ನು ಮದುವೆ ಮಾಡಿಕೊಂಡು, ಮನೆಗೆ ಬಂದು,
“ಮದುವೆ ಮಾಡಿಕೊಂಡೆ”
ಎಂದು ಅಮ್ಮನ ಕಾಲಿಗೆ ಬಿದ್ದು ಹೇಳಿದ.
ಒಬ್ಬನೇ ಮಗ. ತನಗೆ ಅವನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎಂಬುದರಿಂದ ಕಾವೇರಮ್ಮ ಅದಕ್ಕೆ ಮೌನವಾಗಿ ಸಮ್ಮತಿಸಿದರು. ಪುಣ್ಯಕ್ಕೆ ನಮ್ಮ ಬ್ರಾಹ್ಮಣರ ಜಾತಿಯವಳನ್ನೇ ಕಟ್ಟಿಕೊಂಡನಲ್ಲ ಎಂದು ಸಮಾಧಾನಪಟ್ಟುಕೊಂಡಳು.
ಅದರಲ್ಲೂ ಕೆಲಸದಲ್ಲಿ ಇರುವವಳು. ಒಟ್ಟಾರೆ,
“ಎಲ್ಲಿದ್ದರೂ ಚೆನ್ನಾಗಿರಲಿ”
ಎಂದು ಮಗಾ ಎಂಬ ಅಂತಃಕರಣದಿಂದ ಮನಸ್ಸಿನಲ್ಲೇ ಹಾರೈಸಿದಳು.
ಕೆಲವು ವರ್ಷ ಕಳೆಯುವುದರಲ್ಲಿ ಬೆಂಗಳೂರಲ್ಲಿಯೇ ಮನೆಯನ್ನೂ ಮಾಡಿಯಾಯಿತು.
ಅಪರೂಪಕ್ಕೆ ಒಮ್ಮೆ ಆ ಮಗ ಮನೆಗೆ ಬಂದಾಗ,
“ಇನ್ನು ನನ್ನ ಕಾಲವಾಯಿತು. ಮಗಾ, ವಯಸ್ಸೂ ಆಯಿತು. ಇಲ್ಲಿ ಕಾಯಿಲೆ ಕಸಾಲೆ ಆದರೆ ಯಾರೂ ನೋಡಿಕೊಳ್ಳುವವರು ಇಲ್ಲ. ತಾನೂ ಬೆಂಗಳೂರಿಗೆ ಬರುತ್ತೇನೆ” ಎಂದು ಹೇಳಿದಾಗ,
ಮಗ,
“ಅಲ್ಲಿ ಇರುವ ನಮ್ಮ ಮನೆ ಬಹಳ ಸಣ್ಣದು. ಸ್ವಲ್ಪ ದಿನ ಹೋಗಲಿ. ನಿನಗೆ ಇಲ್ಲಿ ಏನು ಕೊರತೆ? ನಾನು ಆಗಾಗ ಬರುತ್ತಿರುತ್ತೇನಲ್ಲ”
ಎಂದಾಗ ಮಾತ್ರ ಕಾವೇರಮ್ಮನಿಗೆ ಅದೂ ಹೌದೆನಿಸಿತು. ಆದರೂ ತಾನು ಬೆಂಗಳೂರಿಗೆ ಬರುವುದು ಅವನಿಗೆ ಇಷ್ಟವಿಲ್ಲವೋ ಏನೋ ಅನ್ನಿಸಿ, ಕರುಳು ಚುರಕ್ಕೆಂದಿತು.
ಮತ್ತೊಮ್ಮೆ ಬಂದಾಗ ಹೇಳಿದ.
ಅವನ ಹೆಂಡತಿಯು ಹೇಳಿದಳಂತೆ
“ನಿಮ್ಮಮ್ಮ ಇಲ್ಲಿಯೇ ಬಂದು ಇದ್ದರೆ, ಮತ್ತೆ ನಮ್ಮ ಕಡೆಯವರನ್ನು ಕರೆದುಕೊಂಡು ಬಂದಾಗ, ಅವರಿಗೆ ಆ ಮನೆಯಲ್ಲಿ ಫ್ರೀ ಆಗಿ ಓಡಾಡಿಕೊಂಡು ಇರಲು ಸಂಕೋಚವಾಗುತ್ತದೆ”
ಅಂತ.
ಆದ್ದರಿಂದ
“ಏನು ಮಾಡುವುದು?  “
ಎಂದು ಅವನು ಕಾವೇರಮ್ಮನನ್ನೇ ಕೇಳಿದ.

"""""""""""****


ಅದೂ ಅವನು ಅದನ್ನು ಕಾವೇರಮ್ಮನಲ್ಲೇ ಕೇಳಿದನಲ್ಲ.
ಕಾವೇರಮ್ಮನಿಗೆ ಮಗನ ಅಂತಃರಂಗ ತಿಳಿದುಹೋಯಿತು.
ಕಣ್ಣಿನಲ್ಲಿ ನೀರು ತಂದುಕೊಂಡರು.
ಆದರೆ ಮಗನಿಗೆ ಏನೂ ಹೇಳಲು ಧೈರ್ಯ ಬರಲಿಲ್ಲ.
ತನ್ನ ಮುಂದಿನ ಬದುಕಿನ ಚಿತ್ರ ಕಣ್ಣಮುಂದೆ ಬಂದು, ತಾನು ಸೋಲುವುದಿಲ್ಲ ಎಂದು ಮನಸ್ಸನ್ನು ಗಟ್ಟಿಮಾಡಿಕೊಂಡರು.
“ತನ್ನ ಗಂಡನಾದರೂ ನನಗೆ ಏನು ಸುಖ ಕೊಟ್ಟ?. ಅವರ ಮಗನೇ ಅಲ್ಲವೆ ಇವನು? ಇವನಿಂದ ಇದಕ್ಕಿಂತ ಹೆಚ್ಚಿನದೇನನ್ನು ನಿರೀಕ್ಷೆ ಮಾಡಲು ಸಾಧ್ಯ? ಎಲ್ಲ ನನ್ನ ಹಣೆಯಲ್ಲಿ ಬರೆದಂತಾಗುತ್ತದೆ”
ಎಂದುಕೊಂಡರು.
ನನ್ನ ಅಮ್ಮನಿಗೂ, ಅವರಿಗೂ ಬಹಳ ಸ್ನೇಹ.
ನಮ್ಮ ಮನೆಗೆ ಬಂದರೆ ಮನೆಯವರಂತೆಯೇ ಆಗಿ ಹತ್ತಾರು ದಿನವಿದ್ದು ಹೋಗುವವರು. ಅಮ್ಮನೂ ತೀರಿಹೋಗಿ ಬಹಳ ಕಾಲವಾಯಿತು. ವಯಸ್ಸಾದ್ದರಿಂದ ಕಾವೇರಮ್ಮನೂ ತಿರುಗಾಟವನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ.
ಒಮ್ಮೆ ನಾನು ಹಾಲಾಡಿಯ ನನ್ನ ಮನೆಗೆ ಅಮ್ಮನ ಶ್ರಾದ್ಧಕ್ಕೆ ಅಂತ ಹಿಂದಿನ ದಿನವೇ ಹೋಗಿದ್ದೆ. ನಮ್ಮದು ಅವಿಭಕ್ತ ಕುಟುಂಬ.
ಪ್ರತೀ ವರ್ಷ ಅಪ್ಪಯ್ಯ ಮತ್ತು ಅಮ್ಮನ ಶ್ರಾದ್ಧಕ್ಕೆ ನಾನು, ನನ್ನ ಹೆಂಡತಿ ಮಗನೊಂದಿಗೆ ಆ ಹಿರಿಯರ ಮನೆಗೆ ಹೋಗುತ್ತಿದ್ದೆ.
ಆ ದಿನ ಕಾವೇರಮ್ಮನೂ ಬಂದಿದ್ದರು.
ಈಗ ಸುಮಾರು ಎಪ್ಪತ್ತರ ವಯಸ್ಸು ಅವರಿಗಿರಬಹುದು. ಬಾಯಿಯಲ್ಲಿ ಹಲ್ಲು ಇರಲಿಲ್ಲ. ಮೈಕೈಯೆಲ್ಲ ಚರ್ಮ ಜೋಲು ಬಿದ್ದಂತೆ ಇದ್ದರೂ ಅವರ ಉತ್ಸಾಹ ಮೊದಲಿನಂತೆಯೆ. ಮಾತುಕತೆ ಹಾಗೆಯೇ. ವಿಧವೆಯರಲ್ಲವೇ? ಹಿಂದಿನವರಂತೆಯೇ ಸಂಪ್ರದಾಯದವರು. ತಲೆ ಬೋಳು. ಮಸುಕು ಸೀರೆ ಉಟ್ಟಿದ್ದರು. ರವಿಕೆಯಂತೂ ಹಾಕಿದರೆ ಹಾಕಿದರು ಇಲ್ಲದಿದ್ದರೆ ಇಲ್ಲ. ಆವರು ಸೀರೆ ಉಡುವ ಕ್ರಮವೇ ಬೇರೆ. ಈಗಿನ ಹೆಂಗಸರಂತೆ ಸೊಂಟದ ಕೆಳಗೆ ರಾಶಿ ನೆರಿಗೆ ಬರುವಂತೆ ಎಂದೂ ಸೀರೆ ಉಟ್ಟವರಲ್ಲ. ಅದೇನೋ ಮುಂದೆ ನೆರಿಗೆಯೇ ಇರುತ್ತಿರಲಿಲ್ಲವಪ್ಪ. ಹೊಟ್ಟೆಯ ಮೇಲೆ ಒಂದು ಗಂಟು ಹಾಕಿ ಸೀರೆ ಉಡುತ್ತಿದ್ದರು ಅಂತ ಕಾಣುತ್ತದೆ. ನನಗೆ ಹೆಚ್ಚು ಆ ಬಗ್ಗೆ ಗೊತ್ತಿಲ್ಲ.
“ಏನು? ಕಾವೇರಮ್ಮ ಹೇಗಿದ್ದೀರಿ?”  
ಎಂದೆ.
“ಕಾಂಬಿಲೆ ಮಗಾ, ಹೀಂಗಿದ್ದೆ. ಕಾಣು. ಕಾಡು ಬಾ ಅನ್ನತ್ ಊರು ಹೋಗು ಅನ್ನತ್ತ್ , ಇನ್ನು ಹಿಂದೆ ಹೋದಷ್ಟು ದಿನ ಮುಂದೆ ಹೋತ್ತಾ?” ಅಂದರು ವಿಷಾದದ ನಗೆ ನಗುತ್ತಾ.  
ಅಷ್ಟರಲ್ಲಿ ನಮ್ಮ ದೊಡ್ಡ ಅತ್ತಿಗೆ, ಅವರೇ ಆ ಮನೆಯಲ್ಲಿ ಈಗ ಯಜಮಾನಿ,
“ಅವರು ಈಗ ಮೊದಲಿನಂತೆ ನಮ್ಮ ಮನೆಗೆಲ್ಲಾ ಬತ್ತಿಲ್ಲೆ ಮಾರಾಯ. ಸ್ವಲ್ಪ ದೊಡ್ಡಸ್ತಿಕೆ ಬಂತಾ ಅಂತ? ” ಅಂದರು. ಅವರ ಮೇಲೆ ಪ್ರೀತಿಯಿಂದ.
ಅದಕ್ಕೆ ಅವರು,
“ಹೌದು ಹೆಣೆ, ನಂಗಿನ್ನು ದೊಡ್ಡಸ್ತಿಕೆ ಬಪ್ದಾ? ವರ್ಷ ಆಯ್ತು. ಇನ್ನು ನನಗೇನು ? ಅವ ಬಾ ಅಂದ ಕೂಡ್ಲೆ ಹೋಪುದೆ”
ಅಂದರು.
ಅವರ ಮನಸ್ಸಿನಲ್ಲಿ ಅದೆಂತ ನೋವು ತುಂಬಿಕೊಂಡಿದೆಯೋ?
ನಾನು,
“ಅವ ಅಂದ್ರೆ ಯಾರು ಮರ್ರೆ?  ಮಗನಾ? ಅವನು ಬೆಂಗಳೂರಲ್ ಇಪ್ದ್ ಅಲ್ದಾ? ನೀವು ಇಷ್ಟರಲ್ಲೇ ಹೋಗ್ಲಕ್ಕಿತ್ತಲೆ. ಒಳ್ಳೇ ಕೆಲ್ಸದಲ್ಲಿದ್ದ ಅಂಬ್ರಲೆ”
ಅಂದೆ. ನನಗೆ ಆ ವಿಷಯ ಗೊತ್ತಿತ್ತು. ಈಗ ಏನಾದರೂ ಮಗನ ಮನಸ್ಸು ಬದಲಾಗಿರಬಹುದೇ ಎಂದು ನನ್ನ ಆಸೆ. ಮತ್ತು ಸ್ವಲ್ಪ ವಾತಾವರಣ ತಿಳಿಮಾಡುವ ಅನ್ನಿಸಿತು. ಅಷ್ಟೆ.
ಅದಕ್ಕೆ ಅವರು,
“ಇಲ್ಲಪ್ಪ ಅವರಿಗೆಲ್ಲ ನಾವು ಹಿಂದಿನ ಕಾಲದವರು. ಜೊತೆಗೆ ಇದ್ರೆ ಸರಿ ಆತ್ತಿಲ್ಲೆ ಅಂಬ್ರೆ. ನಂಗು ಹಾಂಗೆ ಮಗಾ, ಈ ಊರೇ ಸಾಕು. ಇಲ್ಲಿ ಓಡಾಡ್ಕಂಡಿದ್ದು ಅಲ್ಲಿ ನನ್ನಂತವ್ಳಿಗೆ ದಿನಕಳೆಯುವುದು ಕಷ್ಟ ಆಪ್ಕೂ ಸಾಕ್”
ಅಂದರು.
“ಅಬ್ಬಾ ಹೆಂಗುಸೆ “
ಅಂದುಕೊಂಡೆ.
ಕಣ್ಣಿನಲ್ಲಿ ನೀರು ಬರದೇ ಇದ್ದರೂ, ಅವರ ಧ್ವನಿ ನಡುಕವಿತ್ತು. ಅವರನ್ನು ಮತ್ತೆ ನೋಯಿಸಬಾರದು ಎಂದು ನಾನು ಸುಮ್ಮನಾದೆ.
“ನಿನ್ನ ಅಮ್ಮ ಇರುವಾಗ, ಅವಳಿಗೆ ನನ್ನಷ್ಟೇ ವಯಸ್ಸು. ಇಲ್ಲಿ ಬಂದು ಬಂದು ನಾಲ್ಕು ದಿನ ಇದ್ದು ಮನಸಾರೆ ಮಾತಾಡಿ ಹೋಗ್ತಿದ್ದೆ. ಇಲ್ಲೇ ಅದೂ ಇದೂ ಮಾಡ್ಕಂಡ್ ಇರ್ತಿದ್ದೆ. ಅವಳಿಗೆ ನಾನು ಅಂದ್ರೆ ಸೈ. ಏನು ಮಾಡೂದ್? ಅವಳಿಗೆ ಅಷ್ಟೇ ಆಯಸ್ಸು. ಹೆಚ್ಚು ನಬೆಯದೇ, ನೋವು ಉಣ್ಣದೇ ಇದ್ದಕ್ಕಿದ್ದ ಹಾಂಗೆ ಕಣ್ಮುಚ್ಕಂಡ್ಲು. ಪುಣ್ಯಾತ್ಗಿತ್ತಿ. ರಾತ್ರಿ ಮಲ್ಕಂಡವಳು ಬೆಳಿಗ್ಗೆ ಏಳೂದ್ರೊಳಗೆ ಇಲ್ಲಾಂದ್ರೆ!. ನಾನು ಇನ್ನೂ ಬದುಕಿ ಇದ್ದೆ ಕಾಣು. ಭೂಮಿಗ್ ಭಾರ, ಕೂಳಿಗ್ ದಂಡ. ಇನ್ನು ಏನೇನು ಕಾಂಬುಕಿತ್ತೋ”
ಎಂದು ದೇವರಿಗೇ ಗೊತ್ತು ಎಂಬಂತೆ ಮೇಲೆ ಎರಡೂ ಕೈ ಎತ್ತಿದರು..
ನನಗೂ ಮನಸ್ಸು ಭಾರವಾಗಿತ್ತು.

**********



        ಹೀಗೆ ಅದೂ ಇದೂ ಮಾತನಾಡುತ್ತಾ ಚಾವಡಿಯಲ್ಲಿ ರಾತ್ರಿ ಬಹಳ ಹೊತ್ತಿನವರೆಗೆ ಎಚ್ಚರಾಗಿದ್ದು ಆಮೇಲೆ ಮಲಗಿದ್ದೆವು.
          ರಾತ್ರಿ ಎಷ್ಟು ಹೊತ್ತಿಗೆ ನಿದ್ರೆ ಬಂತೋ ಗೊತ್ತಿಲ್ಲ.
ಬೆಳಿಗ್ಗೆ ಎಲ್ಲರೂ ಬೇಗನೇ ಎದ್ದು ಅಮ್ಮನ ಶ್ರಾದ್ಧದ ಬಗ್ಗೆ ತಯಾರಿಗೆ ಶುರುಮಾಡಿದೆವು.
ಎಲ್ಲವೂ ದೊಡ್ಡಅಣ್ಣಯ್ಯನೇ ಮಾಡುವುದು. ನಾನು ಉಪಚಾರಕ್ಕೆ.
“ಅಣ್ಣಯ್ಯಾ, ಅದು ಅತ್ತಿ ಕೊಡಿ ಬಂತಾ? ದೊನ್ನೆ ರೆಡಿ ಆಯ್ತಾ? ಬಾಳೆ ಎಲೆ ಬಾಡಿಸಿದ್ದು ಉಂಟಾ ? ತೋಟಕ್ಕೆ ಹೋಗಿ ತುಳಸಿಕೊಡಿ ತರ್ಕಾ?  ಇಷ್ಟೇ ಸಾಕಾತ್ತಾ? ಅನ್ನುವುದು ಅಷ್ಟೆ. ಗಡಿಬಿಡಿ ಮಾಡುವುದು.
ಅವನು ಬೆಳಿಗ್ಗೆ ಬೇಗ ಎದ್ದು ಬಚ್ಚಲಿನ ಹಂಡೆಯ ಅಡಿಯ ಒಲೆಗೆ, ಬೆಂಕಿ ಹಾಕಿ ಹಾಕಿ ಬೇಗ ಸ್ನಾನ ಮಾಡಿ ಅದೊಂದು ವೃತದಂತೆ, ಗಂಧದ ಕೊರಡಿನಿಂದ ಗಂಧ ತೇಯುವುದರಿಂದ ಹಿಡಿದು, ಎಳ್ಳು, ಅಕ್ಷತೆ, ಹೂವು ಬಾಳೆಹಣ್ಣು, ದರ್ಭೆಕಟ್ಟು ಶೇಡಿ ಪುಡಿ ಅಂತ ಎಲ್ಲವನ್ನೂ ಗಡಿಬಿಡಿಯಲ್ಲಿ ಓಡಾಡಿ, ನಮ್ಮ ಪುರೋಹಿತರಾದ ಹರಿ ಅಡಿಗರು  ಬರುವುದರೊಳಗೆ ರೆಡಿ ಮಾಡಿರುತ್ತಿದ್ದ. ಮತ್ತು ಅವರು ಬಂದ ಕೂಡಲೆ, ಮತ್ತೊಮ್ಮೆ ಆದ್ಯಂತವಾಗಿ ಎಲ್ಲದರ ಮೇಲೂ ಒಮ್ಮೆ ಕಣ್ಣಾಡಿಸಿ,
“ನಂಗ್ ನೆನಪಾದ್ ಎಲ್ಲ ರೆಡಿ ಮಾಡಿದ್ನಪ. ಬಿಟ್ ಹ್ವಾದ್ ಇದ್ರೆ ಹೇಳಿ ಅಡಿಗ್ಳೆ, ಒಂದ್ ಗಳಿಗೆ ಒಳ್ಗೆ ರೆಡಿ ಮಾಡ್ವಾ” ಎಂದು ವಿನಯದಿಂದ ಹೇಳುತ್ತಿದ್ದ.
ಅಂದು ಬೆಳಿಗ್ಗೆ ಮುಸುರೆ ತಿನ್ನಲಿಕ್ಕಿಲ್ಲ. ಕಾವೇರಮ್ಮನ ಮುಂದಾಳುತನದಲ್ಲಿ ಅತ್ತಿಗೆ ರವೆ ಉಪ್ಪಿಟ್ಟು ಮಾಡಿ,  ಬಡಿಸಿ ನಮ್ಮನ್ನೆಲ್ಲ ತಿಂಡಿಗೆ ಕರೆದರು.
ತಿಂಡಿ ತಿನ್ನುವಾಗ ಕಾವೇರಮ್ಮ ಹೇಳಿದರು.
“ನೋಡಿ ಮಕ್ಳೆ, ಇದಕ್ಕೆ ಉಪ್ಪಿಟ್ಟು ಅಂತ್ರಪ. ಅಂದ್ರೆ ಉಪ್ಪ್ ಮತ್ತು ಹಿಟ್ಟು ಅಂದೇಳಿ ಅಲ್ದಾ? ಆದ್ರೆ ಇದ್ರಲ್ಲಿ ಹಿಟ್ಟೇ ಇಪ್ಪುದಿಲ್ಲ. ಇದಕ್ಕೆ ಹಾಕೂದು ರವೆಯನ್ನು. ಅಕ್ಕಿ ತರಿ ಅಥ್ವಾ ಗೋದಿ ರವೆಯಿಂದ್ಲೂ ಉಪ್ಪಿಟ್ಟೂ ಮಾಡೂಕಾತ್, ಆದ್ರೆ ಈ ಉಪ್ಪಿಟ್ಟನ್ನು ಒಂದೇ ಮಾಡಿ ತಿನ್ನುವವರೂ ಕಮ್ಮಿ. ಆ ಉಪ್ಪಿಟ್ಟಿನ ಜೊತೆಗೆ ಅವಲಕ್ಕಿಯೋ, ಶೀರಾವನ್ನೋ ಮಾಡಿ ತಿಂಬುದೂ ಇತ್. ಕೆಲವ್ರು ಅದಕ್ಕೆ ಕಾಫಿಯನ್ನೋ ಮೊಸರನ್ನೋ ಹಾಕಿ ತಿನ್ನುವವರೂ ಇದ್ರು. ಇದಕ್ಕೇ ಒಂದು ಪ್ರತ್ಯೇಕತೆ ಅಂತ ಇಲ್ಲೆ. ಅದರೆ ಇದು ಎಲ್ಲದ್ರ ಜೊತೆಗೂ ಸೇರಿಕೆಯಾತ್. ಅದಕ್ಕೂ ಹೆಚ್ಚೆಂದರೆ, ಇದನ್ನು ಸ್ವಲ್ಪ ಹೆಚ್ಚು  ಸಣ್ಣ ಬೆಂಕಿಯಲ್ಲಿ ಬೇಯಿಸಿ ಬಾಣಲಿ ಬುಡಕ್ ಹಿಡಿಸಿದರೆ ಅದೂ ತಿಂಬ್ಕೆ ಬಾಳ ರುಚಿ. ಆದರೂ.... ಉಪ್ಪಿಟ್ಟು ಅಂದ್ ಕೂಡಲೆ,
“ಹೋ, ಉಪ್ಪಿಟ್ಟಾ? ಅಂತ ಮೂಗು ಮುರಿಯುವವರೇ ಇಪ್ಪುದು. ಸಸಾರ ಮಾಡುವವರೇ ಹೆಚ್ಚು. ಯಾಕೆ ಹಾಗೆ ಅಂತ?
ನಾವ್ಯಾರೂ ಮಾತಾಡಲಿಲ್ಲ.
ಆ ಮೌನವೇ ಅವರಿಗೆ ಉತ್ತರವಾಗಿ ಅವರೂ ಸ್ವಲ್ಪ ಹೊತ್ತು ಸುಮ್ಮನಿದ್ದು, ಒಂದು ನಿಟ್ಟುಸಿರು ಬಿಟ್ಟರು. ನಾವೆಲ್ಲ ತಿಂಡಿ ತಿಂದು ಕಾಫಿ ಕುಡಿದು ಶ್ರಾದ್ಧಕ್ಕೆ ಸಿದ್ಧರಾದೆವು. ಹರಿ ಅಡಿಗರು, “
ಬನ್ನಿ ಬನ್ನಿ ಶುರು ಮಾಡ್ವಾ ಎಂದು, ಶುಕ್ಲಾಂಭರದರಂ……... “
ಎಂದು ಗಟ್ಟಿಯಾಗಿ ಮಂತ್ರವನ್ನು ಶುರುಮಾಡಿದರು.

*ಮುಗಿಯಿತು*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ