ಮಂಗಳವಾರ, ಆಗಸ್ಟ್ 28, 2018

ದಿನೇಶ ಉಪ್ಪೂರ:


*#ನನ್ನೊಳಗೆ - 2*

ಭಾಗ - 4


ಆದರೆ ವಿಧಿ.

ಹಾಗೆಯೇ ಆಯಿತು. ಯಾರೋ ಈ ಹುಡುಗ ಎರಡು ಕಡೆಯಲ್ಲಿ ಕೆಲಸ ಮಾಡುತ್ತಾನೆ ಎಂದು ಇವನ ಬಾಸ್ ಗೆ ತಿಳಿಸುವುದಾಗಿ ಹೆದರಿಸಬೇಕು.

. ಆರ್ ಎಂ ಎಸ್ ನ ಇವನ ಬಾಸ್ ಗೆ , ಇವನೇ ಹೋಗಿ ಹೇಳಿದ.

“ಏನು ಮಾಡುವುದು? ಸರ್ ಹೇಳಿ “ ಎಂದು

ಪಿಪಿಸಿಯಲ್ಲಿ ಇವನು ಕೆಲಸ ಮಾಡುವುದು ಅವರಿಗೂ ಗೊತ್ತಿತ್ತು.

ಅವರು ಹೇಳಿದರಂತೆ “ನಿನಗೆ ಈ ಕೆಲಸ ಅಲ್ಲ. ನೀನು ಪ್ರತಿಭಾವಂತ. ನಿನಗೆ ಒಳ್ಳೆಯ ಭವಿಷ್ಯವಿದೆ. ಓದು”.

ಇವನ ವಿರುದ್ಧ ಯಾರೂ ದೂರು ದಾಖಲಿಸಲಿಲ್ಲ.

ಮುಂದೆ ಒಳ್ಳೆಯದಾಗುತ್ತದೆ, ಎಂದದ್ದೇ, “ನಿಮ್ಮ ಆಶೀರ್ವಾದ” ಎಂದು ಆ ಖಾಯಂ ಕೆಲಸಕ್ಕೆ ರಾಜಿನಾಮೆ ಕೊಟ್ಟು ಬಿಟ್ಟ. ಧೈರ್ಯ ವಂತ.

*****


ಹೆದರಲಿಲ್ಲ. ಬದುಕು ಕೊಡುವ ಖಾಯಂ ಕೆಲಸ. ಸೆಂಟ್ರಲ್ ಗವರ್ನ್ ಮೆಂಟ್ ಕೆಲಸ. ಇವನಿಗೆ ತುಚ್ಚವಾಗಿ ಕಂಡಿತು.

ನನಗಿನ್ನೂ ದೊಡ್ಡ ಭವಿಷ್ಯವಿದೆ. ಕನಸು ಕಂಡ ಹುಡುಗ,

ಪಿ ಎಚ್ ಡಿ ಮಾಡಿದ.ಡಾಕ್ಟರೇಟ್ ಪಡೆದ.

********




ಈಗ ಪಾರ್ಟ್ ಟೈಮ್ ಕಡಿಮೆ ಸಂಬಳ. ತಿಂಗಳಿಗೆ ನಾನೂರೋ ಐನೂರೋ ಸಂಬಳ. ಅವನಿಗೆ ಅದು ಕೆಡುಕು ಅನ್ನಿಸಲಿಲ್ಲ .

ಕಮಲಶಿಲೆ ಮೇಳಕ್ಕೆ ಹೋಗಿ ಭಾಗವತನಾಗಿ ಕುಳಿತು ತಾಳ ಹಿಡಿದ. ಆದರೆ ಅದು ಅವನನ್ನು ಹಿಡಿಯಲಿಲ್ಲ. ಅದನ್ನೂ ಬಿಟ್ಟ.

*********



ರಾಜಕೀಯದವರ ಜೊತೆಗೆ ಸೇರಿ ಚುನಾವಣಾ ಪ್ರಚಾರದ ಭಾಷಣ ಮಾಡಿದ.

ಅದು ಬದುಕಿಗೆ ಅನ್ನ ಕೊಡಲಿಲ್ಲ.

ಓದುವ ದಾಹ. ಅಲ್ಲಿಯೇ ಇದ್ದು ಅದೇ ಸಂಬಳದಲ್ಲಿ ಪಿಹೆಚ್ ಡಿ ಯನ್ನು ಮಾಡಿದ . ಮುಂದೆ ಅದೇ ಕೆಲಸ ಖಾಯಂ ಆಯಿತು.

ಈಗ ಬಹುಷ್ಯ ಯುಜಿಸಿ ಸ್ಕೇಲ್. ಒಂದು ಲಕ್ಷಕ್ಕೆ ಕಡಿಮೆ ಇಲ್ಲದಂತೆ ತೆಗೆದು ಕೊಳ್ಳುತ್ತಿರಬಹುದು. ನನ್ನ ಸಮಪ್ರಾಯ ಅವನಿಗೆ . ಇನ್ನೂ ಸರ್ವೀಸ್ ಇದೆ.

ಈಗ ಅವನೇ ಪಿಪಿಸಿಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥನಂತೆ

********



“ನೀವು ಚೆನ್ನಾಗಿ ಬರೆಯುತ್ತೀರಿ. ಸರಳವಾಗಿ. ಕಾರಂತರಂತೆ.

ನಿಜಕ್ಕೂ, ನನಗೆ  ಕಾರಂತರ ‘ಅಳಿದ ಮೇಲೆ’ ನೆನಪಾಯಿತು”.

“ಒಳ್ಳೆಯ ಹುಡುಗಾಟ ನಿಮ್ಮದು’.

ವಾಟ್ಸಾಪ್ ನಲ್ಲಿ ಬಂದ ನನ್ನ “ನನ್ನೊಳಗೆ”

ಓದಿ ಅವನ ಉದ್ಘಾರ ಅದು. ಕಾರಂತರೆಲ್ಲಿ ನಾನೆಲ್ಲಿ !

ನಾನು ಈಗಷ್ಟೆ ಕಣ್ಣು ಬಿಟ್ಟವನು. ಬರೆಯಲು ಪ್ರಾರಂಭಿಸಿದವನು. ಬದುಕಿನ ಕೊನೆಯಲ್ಲಿ. ಇದ್ದ ಸರಕಾರಿ ಉದ್ಯೋಗವನ್ನು ಬಿಟ್ಟು. ನಾನೇನು ಸಾಧಿಸಬಲ್ಲೆ?.

ಪಾಪ . ಅವರ ಮನಸ್ಸು ದೊಡ್ಡದು.

********




ಹೌದು. ಲೈಬ್ರೆರಿಯಲ್ಲಿ ನಾನು ಮೊದಲು ಓದತೊಡಗಿದ್ದು ಕಾರಂತರ ಪುಸ್ತಕಗಳನ್ನು.

ಶ್ರೀಧರ ಅಣ್ಣಯ್ಯನಲ್ಲೂ ಕೆಲವು ಪುಸ್ತಕ ಇತ್ತು .

ಕೇಳಿ ತಂದೆ ಓದಿದೆ. ಒಂದೊಂದೆ.

ಅದೊಂದು ಭಾವಲೋಕ. ಯಾರೂ ಬರೆಯಲಾರದಷ್ಟು ಬರೆದಿದ್ದಾರೆ. ಮೈಮನಗಳ ಸುಳಿಯಲ್ಲಿ,  ಮರಳಿ ಮಣ್ಣಿಗೆ , ಧರ್ಮರಾಯನ ಸಂಸಾರ, ಬೆಟ್ಟದ ಜೀವ, ಕರುಳಿನ ಕರೆ.ಶನೀಶ್ವರನ ನೆರಳಿನಲ್ಲಿ,, ಸ್ವಪ್ನದ ಹೊಳೆ, ಮುಗಿದ ಯುದ್ಧ,  ಸನ್ಯಾಸಿಯ ಬದುಕು, ಔದಾರ್ಯದ ಉರುಳಲ್ಲಿ, ಸರಸಮ್ಮನ ಸಮಾಧಿ. ಕುಡಿಯರ ಕೂಸು. ಮೂಕಜ್ಜಿಯ ಕನಸುಗಳು……..ಇನ್ನೂ..

ಅವರು ಸಾವಿರದಷ್ಟು ಬರೆದಿರಬಹುದು.

ಒಂದಾ ಎರಡಾ? ಎಲ್ಲ ಕ್ಷೇತ್ರದಲ್ಲಿ ಯೂ ಇದ್ದಾರೆ.

******



ಅವರ ಆತ್ಮಕತೆ ಹುಚ್ಚು ಮನಸ್ಸಿನ ಹತ್ತು ಮುಖಗಳು.ಓದಬೇಕು.

ಅದೊಂದೇ ಸಾಕು. ಅವರ ವಿರಾಟ್ ರೂಪವನ್ನು ತಿಳಿಯುವುದಕ್ಕೆ.

ಅದು ಅವರಿಗೆ ಸಾಕಾಗಲಿಲ್ಲ ಮತ್ತೂ ಬರೆದರು. ಮತ್ತೆ  ನಾಲ್ಕಾರು ಪುಸ್ತಕಗಳು.

ಸ್ಮೃತಿ ಪಟಲದಲ್ಲಿ……

ಒಂದು ಜೋಳಿಗೆ ಚೀಲ ಬಗಲಲ್ಲಿ.

ಅದರಲ್ಲಿ‌ ಗೋದಿ ಹಿಟ್ಟು. ಅವಲಕ್ಕಿ. ಇಷ್ಟೆ. ದಿನದ ಹಸಿವಿನ ಶಮನಕ್ಕೆ

ಅವಧೂತನಂತೆ ಊರೂರು ತಿರುಗಿದರು. ಬರೆದರು.

ಕುಣಿದರು ವಿದೇಶಕ್ಕೆ ಹಾರಿದರು. ಇತರರಿಗೆ ಕಲಿಸಿದರು.

ಯಕ್ಷಗಾನ ಬಯಲಾಟಕ್ಕೆ ಪ್ರಶಸ್ತಿಯ ಗರಿ.

*****




ಮತ್ತೆ  ದೊಡ್ಡ ದೊಡ್ಡವರ ಆತ್ಮ ಚರಿತ್ರೆ ಓದಬೇಕು.

ಲೈಬ್ರೆರಿಯಲ್ಲಿ ಹುಡುಕಾಡಿದಾಗ ಕೈಗೆ ಸಿಕ್ಕಿದ್ದು.

ಬಿ.ವಿ.ಕಾರಂತರ ಬದುಕು.

ವೈದೇಹಿಯವರು, ಅವರ ಜೊತೆಗೆ ಇದ್ದು, ಬರೆದದ್ದು ತಿಂಗಳು ಗಟ್ಟಳೆ .

ಮತ್ತೂ ದೀರ್ಘ ಅವಧಿ.

 ಕೊನೆಗೆ ಬಿವಿ ಕಾರಂತರ ಅನಾರೋಗ್ಯ.

ರಾತ್ರಿಯೂ ಪೋನ್ ಮಾಡುತ್ತಿದ್ದರಂತೆ.

“ವೈದೇಹಿ, ಬೇಸರ ಮಾಡಬೇಡ. ಇದೊಂದು ಹೇಳುವುದು ಬಿಟ್ಟು ಹೋಯಿತು”.

ಇವರು “ಇಲ್ಲ ತೊಂದರೆ ಇಲ್ಲ . ಹೇಳಿ”  ಎಂದು ಆಗಲೇ ನೋಟ್ ಮಾಡಿಕೊಳ್ಳುತ್ತಿದ್ದರು. ಅವರೂ ಒಂದು ಅದ್ಭುತ.

ಅವರು ಮಾತನಾಡುವುದು, ಇಂದಿಗೂ ಕುಂದಾಪುರ ಕನ್ನಡದಲ್ಲಿ.

*********


*ಮುಂದುವರಿಯುವುದು….*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ