ಶುಕ್ರವಾರ, ಆಗಸ್ಟ್ 24, 2018



ದಿನೇಶ ಉಪ್ಪೂರ
ಕಥನದೊಳಗೆ -4
*#ಆಘಾತ*

ಪುಟ 1

ಅಗ್ರಹಾರದ ಮೂಲೆಮನೆಯ ವೆಂಕಮ್ಮ ತಮ್ಮ ಸಂಬಂಧಿಕರೊಬ್ಬರ ಮದುವೆಗೆ ಹೋಗುವ ಗಡಿಬಿಡಿಯಲ್ಲಿದ್ದರು. ಸೊಸೆ ಕನಕಮ್ಮ ಆಗಲೇ ಎದ್ದು ಅಂಗಳವನ್ನು ಗುಡಿಸಿ, ಮೇಲೆ ಚೆನ್ನಾಗಿ ನೀರು ಚಿಮುಕಿಸಿ ಹೆಬ್ಬಾಗಿಲಿನ ಎದುರು ರಂಗೋಲಿಯನ್ನು ಹಾಕಿ ಹೊಸ್ತಿಲು ಬರೆಯುತ್ತಿದ್ದಳು.

ಅವಳು ಸಣ್ಣಗೆ ಗುಣುಗುತ್ತಿದ್ದ ಹಾಡನ್ನು ಆಲಿಸಿದ ವೆಂಕಮ್ಮ "ಪಾಪ ತನ್ನ ಆಸೆಗಳನ್ನೆಲ್ಲ ತನ್ನಲ್ಲೇ ಅಮುಕಿ ಹಿಡಿದು ಒದ್ದಾಡುತ್ತಿದೆ ಈ ಮಗು. ಇದರ ಭವಿಷ್ಯ ಹೇಗೋ ಏನೋ” ಎಂದುಕೊಂಡು ಮನಸ್ಸಿನಲ್ಲಿಯೇ ಹೇಳಿಕೊಂಡರು.

ಅವರು ಬೆಳಿಗ್ಗೆ ಬೇಗ ಎದ್ದು ನಿತ್ಯಾಹ್ನಿಕಗಳನ್ನೆಲ್ಲಾ ಮುಗಿಸಿ ಬಾವಿಕಟ್ಟೆಯಲ್ಲಿ ಬಾವಿಯಿಂದ ನೀರನ್ನು ಸೇದಿ ಎತ್ತಿ ತಲೆಗೆ ಹೊಯ್ದುಕೊಂಡು, ತಣ್ಣೀರಿನ ಸ್ನಾನ ಮಾಡಿದರು. ಮಡಿಯಲ್ಲಿ ದೇವರ ಮನೆಯನ್ನು ಸೇರಿ ಒಂದು ಗಂಟೆ ಭಕ್ತಿಯಿಂದ ಕುಳಿತು ಹಲವಾರು ಶ್ಲೋಕಗಳನ್ನು, ದೇವರ ನಾಮಗಳನ್ನು ಹೇಳಿದರು. ಬಾಯಿಯಿಂದ ಅದನ್ನು ಸಲೀಸಾಗಿ ಹೇಳುತ್ತಿದ್ದರೂ ಅವರ ಮನಸ್ಸು ಮದುವೆ ಮನೆಯ ನೆಂಟರು ಇಷ್ಟರನ್ನು ಕಾಣುವ ಆತುರದಿಂದ ತುಂಬಾ ಉಲ್ಲಸಿತವಾಗಿತ್ತು.

ತನಗೆ ವರ್ಷ ಅರವತ್ತಾದರೂ ಬದುಕು ಬೇಡವೆನಿಸಿದ್ದೇ ಇಲ್ಲ. ತನ್ನ ಬದುಕಿನ ಇಡೀ ಬಡತನದ ಬೇಗೆಯಲ್ಲಿ ಬೆಂದಿದ್ದರೂ ತಾನು ಮರ್ಯಾದೆಯಿಂದ ಬದುಕಿದ್ದೇನೆ ಎಂಬ ತೃಪ್ತಿ ಅವರಲ್ಲಿತ್ತು. ಹಿಂದೆ ಗಂಡ ಅಗ್ರಹಾರದ ಅನಂತಯ್ಯ ಐತಾಳರು ಅವರಿವರ ಮನೆಗೆ ಹೋಗಿ ಪೌರೋಹಿತ್ಯ ಮಾಡಿ ಜೀವನ ನಡೆಸುತ್ತಿದ್ದರು. ಅದರಿಂದ ಆಗುವ ಸಂಪಾದನೆ ಅಷ್ಟಕ್ಕಷ್ಟೆ. ಖಾಯಂ ಆಗಿ ಶ್ರಾದ್ಧಕ್ಕೋ ಮತ್ತೊಂದಕ್ಕೋ ಕರೆಯುವ ಮನೆಯವರು, ಹತ್ತು ವರ್ಷದ ಹಿಂದೆ ಎಷ್ಟು ದಕ್ಷಿಣೆ ಕೊಡುತ್ತಿದ್ದರೋ ಅಷ್ಟನ್ನೇ ದಕ್ಷಿಣೆ ಎಂದು  ಕೊಡುತ್ತಿದ್ದಾಗ, ಅಸಮಾಧಾನವಾಗುತ್ತಿದ್ದರೂ, ಗಟ್ಟಿಯಾಗಿ ಮಾತನಾಡಲೂ ಆಗದ ದಾಕ್ಷಿಣ್ಯ ಸ್ವಭಾವದ ಅನಂತಯ್ಯ, ಮನೆಯಲ್ಲಿ ಊಟಕ್ಕೆ ಕಷ್ಟವಿದ್ದರೂ ,

"ಇಷ್ಟು ಸಾಕಾಗುವುದಿಲ್ಲ  ಹೆಚ್ಚಿಗೆ ಕೊಡಿ'

ಎಂದು ಹೇಳುತ್ತಿರಲಿಲ್ಲ.

ಆಚೀಚೆಯ ಪುರೋಹಿತರಿಗೆ ಹೆಚ್ಚು ಹಣ ಕೊಡುತ್ತಿದ್ದರೂ ಅದು ಗೊತ್ತಿದ್ದರೂ ಇವರು

"ಖಾಯಂ ಪುರೋಹಿತರು ದಕ್ಷಿಣೆ ಹೆಚ್ಚು ಮಾಡಿದರೆ ಮುಂದಿನ ವರ್ಷ ಅದಕ್ಕಿಂತ ಹೆಚ್ಚು ಕೊಡಬೇಕಾಗುತ್ತದೆ"

ಎಂದು ಲೆಕ್ಕಾಚಾರ ಹಾಕುತ್ತಿದ್ದರು. ಇವರ ಸಣ್ಣ ಬುದ್ದಿ ಗೊತ್ತಾಗಿ ಕೊನೆಗೆ ಬೇಸರ ಬಂದು ತಾನಿನ್ನು ಪೌರೋಹಿತ್ಯವನ್ನೇ ಮಾಡುವುದಿಲ್ಲ ಎಂದು ನಿರ್ಧರಿಸಿ ಎಲ್ಲ ಮನೆಗಳ ಪೌರೋಹಿತ್ಯಕ್ಕೆ ಕರೆದಾಗ, ಬೇರೆಯವರಿಗೆ ತಿಳಿಸಲು ಹೇಳಿದರು.

**********





ಆದರೆ ಬದುಕಬೇಕಲ್ಲ. ಬ್ಯಾಂಕಿನಲ್ಲಿ ಸಾಲ ಮಾಡಿ ನಾಲ್ಕು ದನಗಳನ್ನು ತಂದು ಸಾಕಿದರು. ದಿನಾ ಅದರ ಹಾಲನ್ನು ಶಂಕರನಾರಾಯಣದ ಹಾಲು ಡೈರಿಗೆ ಕೊಟ್ಟುಬರತೊಡಗಿದರು. ಒಟ್ಟಿನಲ್ಲಿ ತಲೆಗೆ ಎಳೆದರೆ ಕಾಲಿಗೆ ಇಲ್ಲ, ಕಾಲಿಗೆ ಎಳೆದರೆ ತಲೆಗಿಲ್ಲ ಎಂಬ ಪರಿಸ್ಥಿತಿ.  ವಯಸ್ಸಿಗೆ ಬಂದ ಮಗನಿಗೆ ಮದುವೆ ಮಾಡಿದರೂ, ಬುದ್ದಿ ಮಾಂದ್ಯನಾದ ಅವನು ಸ್ವಲ್ಪ ದಿನದಲ್ಲಿಯೇ ಹೇಳದೇ ಕೇಳದೇ ಮನೆಯನ್ನು ಬಿಟ್ಟು ಹೋದ.

ಇದೇ ಚಿಂತೆಯಲ್ಲಿ ಅನಂತಯ್ಯನವರು ಒಂದು ದಿನ ರಾತ್ರಿ ಉಂಡು ಮಲಗಿದವರು ಬೆಳಿಗ್ಗೆ ಏಳುವಾಗ ಹೆಣವಾಗಿದ್ದರು. ಅತ್ತೆ ಸೊಸೆಯರಿಬ್ಬರೇ ಉಳಿದರು. ಏನು ಮಾಡುವುದು? ತಮ್ಮ ಜೀವವನ್ನೇ ಹೋರಾಟಕ್ಕೆ ಒಡ್ಡಿ  ಬದುಕುವಂತಾಯಿತು. ಇದೆಲ್ಲ ಅವರ ಮನಃಪಟಲದಲ್ಲಿ ಹಾದುಹೋದ ಅವರ ಎರಡು ಮೂರು ವರ್ಷಗಳಷ್ಟು ಹಿಂದಿನ ಚರಿತ್ರೆ.

 ವೆಂಕಮ್ಮ ಯೋಚಿಸಿದರು. ಮನೆಯಲ್ಲಿದ್ದುದು  ಒಂದೇ ಒಂದು ಜರಿಸೀರೆ. ಒಂದೋ ತಾನು ಮದುವೆಗೆ ಹೋಗಬೇಕು ಅಥವ ಸೊಸೆಯನ್ನು ಕಳಿಸಬೇಕು. ತನ್ನ ಆಸೆಯನ್ನು ಅದುಮಿ ಹಿಡಿದುಕೊಂಡು ವೆಂಕಮ್ಮ ಸೊಸೆಯನ್ನು ಕರೆದು ಹೇಳಿದರು,
"ಹೆಣೆ, ಎಂತ ಮದ್ವಿಗೆ ನೀನು ಹ್ಯಾತ್ಯಾ ನಾನು ಹ್ವಾಪ್ದಾ?"

ಎಂದಾಗ ಆ ಸೊಸೆ ,
"ನೀವೇ ಹೋಯ್ನಿ ಅಕಾ"

ಎಂದು ಹೇಳಿದಾಗ ಅವರಿಗೆ ಆದ ಖುಷಿ ಅಷ್ಟಿಷ್ಟಲ್ಲ.

ಅಪರೂಪಕ್ಕೆ ಜರಿ ಸೀರೆಯನ್ನು ಉಟ್ಟು ಶೃಂಗಾರ ಮಾಡಿಕೊಂಡು ಮದುವೆಗೆ ಹೊರಟು ನಿಂತ ವೆಂಕಮ್ಮ ಸೊಸೆಯನ್ನು ಕರೆದು, "ಹಂಗಾರೆ ನಾನ್ ಹೋಯಿ ಬತ್ತೆ. ಮನೆಯ ಕಡೆ ಸ್ವಲ್ಪ ಜಾಗ್ರತೆ" ಎಂದು ಹೇಳುತ್ತಾ ಸೆರಗನ್ನು ಸರಿಮಾಡಿಕೊಳ್ಳುತ್ತಾ ಚಾವಡಿಗೆ ಬಂದರು. ಅಚಾನಕ್ಕಾಗಿ ಅವರ ಕಣ್ಣು ಗೋಡೆಯ ಮೇಲಿದ್ದ ಅವರ ಗಂಡನ ಭಾವಚಿತ್ರದ ಮೇಲೆ ಹೋಯಿತು.

ವೆಂಕಮ್ಮ ಕ್ಷಣ ಹೊತ್ತು ತನ್ನ ಗಂಡನ ಭಾವಚಿತ್ರವನ್ನೇ ತದೇಕದೃಷ್ಟಿಯಿಂದ ನೋಡಿದರು. ಅರಿವಿಲ್ಲದಂತೆಯೇ ಅವರ ಬಾಯಿಯಿಂದ ಮಾತು ಹೊರಟಿತು.

"ಅದೆಂತಕೆ ಹಾಂಗ್ ನೀವು ನನ್ನನ್ ಕಾಂಬುದೆ? ಛೀ ಹಾಂಗ್ ಕಾಣ್ಬೇಡಿ. ನಾನ್ ಇಷ್ಟ್ ಬೇಗ ಬತ್ತಿಲ್ಯೆ. ನನ್ ಜಂಬ್ರ ಇನ್ನೂ ಮುಗೀಲಿಲ್ಲೆ. ಸ್ವಲ್ಪ ದಿನ ಇಲ್ಲೇ ಇರ್ತೆ ಅಕ್ಕಾ ? ನಾನ್ ಇನ್ನೂ ಇಲ್ಲೇ ಅನುಭವಿಸುದ್ ಇತ್ತೆ".

ಎಂದು ಹೇಳಿ ನಾಚಿಕೆಯಿಂದ ಮುಖವನ್ನು ಸೀರೆಯ ಸೆರಗಿನಿಂದ ಮುಚ್ಚಿಕೊಂಡರು. ಈಗ ಅವರ ವಯಸ್ಸು ಸುಮಾರು ಎಪ್ಪತ್ತರ ಸಮೀಪವೇ ಇರಬಹುದು.

ಹಾಗೆಯೇ, ಅಂಗಳಕ್ಕಿಳಿದು ಮದುವೆಯ ಮನೆಯ ದಾರಿ ಹಿಡಿದರು.

ಮುಂಡ್ಕೋಡು ಸೀತಾರಾಮ ಅಡಿಗರ ಮನೆಯಲ್ಲಿ ಮದುವೆ. ಮದುವೆಯ ಮನೆಯೂ ಅಂತಹ ದೂರವೇನೂ ಇರಲಿಲ್ಲ. ಮೂರು ಮೈಲು ಹಾಡಿಯಲ್ಲಿ ನಡೆದು ಹೋಗಿ,  ಕಟ್ಟೆಮಕ್ಕಿಯ ಗುಡ್ಡೆಯನ್ನು ಹತ್ತಿ ಇಳಿದು ನಂತರ ಸಣ್ಣ ಹಾಡಿಯನ್ನು ಹಾದು ಹಾಲಾಡಿ ಹೊಳೆಯನ್ನು ದಾಟಿದರೆ ಅದರ ಆಚೆಯ ಮಗ್ಗುಲಲ್ಲೇ ಸೀತಾರಾಮಯ್ಯನ ಮನೆ.

ಅವನ ಮಗನ ಮಗಳಿಗೇ ಮದುವೆ. ಸೀತಾರಾಮಯ್ಯ ಅಂದರೆ ಅನಂತಯ್ಯನವರ ತಂಗಿಯ ಗಂಡ. ಮೊದಲು ಯಾವುದೋ ಮನೆಯ ಪೌರೋಹಿತ್ಯದ ವಿಷಯದಲ್ಲಿ ಅನಂತಯ್ಯನವರಿಗೂ, ಸೀತಾರಾಮಯ್ಯನಿಗೂ ಜಗಳವಾಗಿದ್ದು ಅವರ ಮತ್ತು ಇವರ ಮನೆಗೆ ಹೊಕ್ಕು ಬರುವ ಬಳಕೆ ನಿಂತು ಹೋಗಿತ್ತು,

ಅಂತೂ ಇಷ್ಟು ಸಮಯದ ನಂತರ ಅದನ್ನೆಲ್ಲ ಮರೆತು ಸೀತಾರಾಮಯ್ಯನೇ ಮನೆಯವರೆಗೂ ಸ್ವತಹ ಬಂದು, ಮಾಡಿದ ಉಪಚಾರವನ್ನು ಸ್ವೀಕರಿಸಿ, "ಮದುವೆಗೆ ಬರಬೇಕು" ಎಂದು ಹೇಳಿಕೆ ಕೊಟ್ಟು ಹೋಗಿದ್ದ. ಈ ಮದುವೆಯ ನೆಪದಿಂದಲಾದರೂ ಮತ್ತೆ ಅವರನ್ನೆಲ್ಲ ಕಾಣುವ ಅವಕಾಶವಾಯಿತಲ್ಲ ಎಂದು ವೆಂಕಮ್ಮನಿಗೆ ಸಂತೋಷವಾಗಿತ್ತು.

********







ಮದುವೆಯೂ ಯಾರ್ಯಾರದ್ದೋ ಅಲ್ಲ. ತನ್ನ ಯಜಮಾನರ ತಂಗಿಯ ಗಂಡ ಅಂದರೆ ಭಾವನ ಮಗನ ಮಗಳಿಗೆ ಮದುವೆ. ತನಗೆ ಕರೆಬಂದಾಗ ತಾನು ಅಜ್ಜಿಯ ಸ್ಥಾನದಲ್ಲಿ ನಿಂತು ಎಲ್ಲರನ್ನೂ ಒಮ್ಮೆ ನೋಡಿ ಮಾತಾಡಿಸಬೇಕು, ಬಂದ ಬಂಧುಬಾಂಧವರಲ್ಲಿ ಸುಖಕಷ್ಟಗಳನ್ನು ಹಂಚಿಕೊಳ್ಳಬೇಕು ಎನ್ನಿಸಿ ವೆಂಕಮ್ಮ ಖುಷಿಯಾಗಿದ್ದರು. ತನ್ನ ಸೊಸೆಯ ಮನಸ್ಸು ಹೇಗೋ? ಅವಳಿಗೆ ಮದುವೆಗೆ ಹೋಗಲು ಆಸೆ ಇತ್ತೋ ಏನೋ ಎಂದು ತಿಳಿಯಲು, ಅವಳನ್ನು ಹತ್ತಿರ ಕರೆದು "ಹೆಣೆ, ನೀನೇ ಮದ್ವೆಗೆ ಹೋಪ್ದಾದ್ರೆ ಹೋಯಿ ಬಾ" ಎಂದು ಹೇಳಿದ್ದು, ಅವಳು ತನಗೇ ಆ ಪಟ್ಟ ಕಟ್ಟಿಬಿಟ್ಟಳಲ್ಲ.

"ನೀವೇ ಹೋಗಿ ಬನ್ನಿ, ಅತ್ತೆ"

ಎಂದಳಲ್ಲ.
ಭಾರಿ ಖುಷಿಯಾಯಿತು. ಎಂತಾ ಒಳ್ಳೆಯ ಸೊಸೆ. ಪಾಪದ ಹೆಣ್ಣು. ಒಂದು ಮಾತಾಡದೇ ನನ್ನನ್ನು ಅನುಸರಿಸಿಕೊಂಡು ಹೋಗುತ್ತಿದೆ. ಒಂದು ಗೊಣಗಾಟ ಇಲ್ಲ ಸಿಟ್ಟುಶಡ ಇಲ್ಲ. ಕತ್ತೆಯ ಹಾಗೆ ದುಡಿಯುತ್ತದೆ. ಅದು ಬೇಕು ಇದು ಬೇಕು ಎಂದು ಒಂದು ದಿನವೂ ಹೇಳಿದವಳಲ್ಲ. ಮಗ ರಾಮಯ್ಯನಿಗೆ ಬುದ್ದಿ ಇಲ್ಲ. ಇಂತಹ ಚಿನ್ನದಂತಹ ಹೆಂಡತಿಯನ್ನು ಬಾಳಿಸುವ ಅದೃಷ್ಟ ಇಲ್ಲದೇ ಊರುಬಿಟ್ಟು ಹೋದನಲ್ಲ. ಎಲ್ಲಿ ಇದ್ದನೋ ಏನೋ.

ಮಗನ ನೆನಪು ಆಗುತ್ತಿದ್ದಂತೆ ವೆಂಕಮ್ಮನಿಗೆ ಗಂಟಲು ಒತ್ತಿ ಬಂತು. ತಾನು ಸಾಯುವುದರ ಒಳಗೆ ಈ ಹೆಣ್ಣಿಗೊಂದು ನೆಲೆ ಕಾಣಿಸಬೇಕು. ಮಗನನ್ನು ಎಲ್ಲಿಯಾದರೂ ಹುಡುಕಿಸಿ ತರಬೇಕು. ಮದುವೆಯ ಮನೆಯಲ್ಲಿ ಯಾರಿಗಾದರೂ ಅವನ ಸುದ್ದಿ ತಿಳಿದಿದ್ದರೆ ಒಳ್ಳೆಯದಾಯಿತು. ಹುಡುಕುತ್ತಿರುವ ಬಳ್ಳಿ ಕಾಲಿಗೆ ಸಿಕ್ಕಿದಂತೆ. ವೆಂಕಮ್ಮ ನಡೆಯುವ ವೇಗವನ್ನು ಹೆಚ್ಚಿಸಿದರು.

ತೋಟದ ಮಧ್ಯದಲ್ಲಿರುವ ದೊಡ್ಡ ಮದುವೆಯ ಮನೆಯ ಮುಂದಿನ ದೊಡ್ಡ ಅಂಗಳದಲ್ಲಿ ಮಡಲಿನ ಚಪ್ಪರವನ್ನು ಸುತ್ತ ದಿಡಕಿಯನ್ನು ಹಾಕಿದ್ದರು. ಎದುರಿಗೇ ಮಾವಿನ ಎಲೆಯ ತೋರಣ. ಚಪ್ಪರದ ಒಳಗೆ ಒಂದು ಬದಿಯಲ್ಲಿ ಮಂಟಪವನ್ನೂ ಕಟ್ಟಿದ್ದರು. ಹಿಂದೆ ಒಂದು ಜಮಖಾನವನ್ನು ಕಟ್ಟಿ ಸೇವಂತಿಗೆ ಹೂವಿನಹಾರವನ್ನು ಮೇಲಿನಿಂದ ಇಳಿಬಿಟ್ಟು ಅಲಂಕರಿಸಿದ್ದರು. ಮಂಟಪದ ನಾಲ್ಕೂ ದಿಕ್ಕಿನಲ್ಲಿ ಕಂಬವನ್ನು ಹೊಯಿಗೆಯ ಡಬ್ಬದಲ್ಲಿ ಹುಗಿದು ಬಾಳೆಯ ದಿಂಡನ್ನು ಆ ಕಂಬಗಳಿಗೆ ಕಟ್ಟಿ ಮೇಲಿನಿಂದ ಸುತ್ತಲೂ ಮಾವಿನ ಎಲೆಯ ತೋರಣವನ್ನು ಮಾಡಿ ಸಿಂಗರಿಸಿದ್ದರು.

ಮನೆಯ ಹೆಬ್ಬಾಗಿಲಿನ ಎರಡೂ ಬದಿಯಲ್ಲಿ ಎರಡು ಕಂಬಗಳನ್ನು ಊರಿ ಅದಕ್ಕೂ ಎಳೆಯ ಮಾವಿನಕುಡಿಯ ತುಂಡನ್ನು ಹಗ್ಗದಲ್ಲಿ ಕಟ್ಟಿ ಸುತ್ತಿ ಹಾರದಂತೆ ಮಾಡಿ ಅಲಂಕರಿಸಿದ್ದರು. ಚಪ್ಪರದಲ್ಲಿ ಅಲ್ಲಲ್ಲಿ ಬಣ್ಣಬಣ್ಣದ ಬೆಲೂನ್ ಗಳನ್ನು ನೇತುಹಾಕಿ ಕಟ್ಟಿದ್ದು ಅದು ಗಾಳಿಯಲ್ಲಿ ಓಲಾಡುತ್ತಿತ್ತು. ಮನೆಯಲ್ಲಿ ಎಲ್ಲರೂ ಸಂಭ್ರಮದಿಂದ ಓಡಾಡುತ್ತಿದ್ದರು. ವೆಂಕಮ್ಮನನ್ನು ಕಂಡ ಒಬ್ಬರು,

"ಬನ್ನಿ ಬನ್ನಿ. ಬಹಳ ಅಪರೂಪ"

ಎಂದು ಕರೆದು ಕುಳ್ಳಿರಿಸಿ, ಉಪಚಾರ ಮಾಡಿ ಕುಡಿಯಲು ಪಾನಕವನ್ನು ಕೊಟ್ಟರು. ವೆಂಕಮ್ಮ ಪಾನಕ ಕುಡಿದು ಪ್ರಯಾಣ ಮಾಡಿ ಆದ ದಣಿವನ್ನು ಪರಿಹರಿಸಿಕೊಂಡರು.

ನಂತರ ವೆಂಕಮ್ಮನೂ ಖುಷಿಯಿಂದ ಮನೆಯವರೊಂದಿಗೆ ಬೆರೆತು ಗುರುತಿನವರನ್ನೆಲ್ಲ ಕಂಡು ಹೋಗಿ ಹೋಗಿ ಮಾತಾಡಿಸಿದರು. ಸಂಭ್ರಮಪಟ್ಟರು.

ಮದುವೆ ಶಾಸ್ತ್ರಗಳೆಲ್ಲ ಮುಗಿಯಿತು. ಊಟವೂ ಆಯಿತು. ವೆಂಕಮ್ಮ ಒಂದು ಬದಿಯಲ್ಲಿ ಕುಳಿತು ಯಾರ ಹತ್ತಿರವೋ ಮಗನ ವಿಷಯ ಹೇಳಿಕೊಂಡು ಅವನನ್ನು ಹುಡುಕಿಸುವ ವಿಷಯದ ಬಗ್ಗೆ ಮಾತಾಡುತ್ತಿದ್ದರು.

ಆಗ ಸೀತಾರಾಮಯ್ಯ,

"ಅತ್ತೆ, ಸ್ವಲ್ಪ ಇಲ್ಲಿ ಬನ್ನಿ"

ಎಂದು ಕರೆದ.

***********






ಹಿರಿಯರಾದ ವೆಂಕಮ್ಮ ಏನೋ ಶಾಸ್ತ್ರದ ಬಗ್ಗೆ ಕೇಳಲಿಕ್ಕಿದೆಯೋ ಎಂದು ದಡಕ್ಕನೇ ಎದ್ದು ಲಗುಬಗೆಯಿಂದ ಬಂದು,

"ಎಂತ ಮಾರಾಯಾ? ಎಲ್ಲಾ ಮುಗೀತಲ್ಲ. ಇನ್ನೇನು"

ಎನ್ನುತ್ತಾ ಅವನು ಇದ್ದಲ್ಲಿಗೆ ಹೋದರು.

ಅವನ ಮುಖ ವ್ಯಗ್ರವಾಗಿತ್ತು.

ವೆಂಕಮ್ಮ ಹತ್ತಿರ ಬರುತ್ತಲೇ,
“ಅತ್ತೆ ನೀವು ಆಗ ಕೋಣೆಗೆ ಹೋದ್ರಲ್ಲ.
ಅಲ್ಲಿ ಸರಸು ಒಂದು ಉಂಗುರ ಇಟ್ಟಿದ್ಲಂತೆ . ಈಗ ಕಾಣ್ತಾ ಇಲ್ಲ. ನೀವು ತೆಗೆದ್ರಾ? ಎಂದ.

ವೆಂಕಮ್ಮ ಬಾಯಿ ತೆರೆಯುವಷ್ಟರಲ್ಲೆ ,
"ಈ ನಾಟಕ ಸಾಕು ಅತ್ತೆ, ಎಲ್ಲಿ ನಮ್ಮ ಆ ಉಂಗುರ ಕೊಟ್ಟುಬಿಡಿ"
ಅಂದ.
ವೆಂಕಮ್ಮನಿಗೆ ಏನು ಎಂದು ಅರ್ಥವಾಗುವುದರ ಒಳಗೆ ಅವನು,
"ಊಂ" ಎಂದು ಗುಟುರು ಹಾಕಿದ.

"ನಂಗೆ ಗೊತ್ತಿತ್ತು ನೀವೇ ತಗಂಡದ್ದು. ನಿಮ್ಮ ಸ್ವಭಾವ ನನಗೆ ಚೆನ್ನಾಗಿ ಗೊತ್ತು. ನೀವು ಆ ಕೋಣೆಗೆ ಹೋದದ್ದು ನಾನು ನೋಡಿದ್ದೇನೆ".
“ಆ ಉಂಗುರ ಇಟ್ಟಲ್ಲಿ ಇಲ್ಲದೇ ಇರಬೇಕಾದರೆ ಮತ್ತೆಲ್ಲಿ ಹೋಗುತ್ತದೆ? ಅದು ನಿಮ್ಮದೇ ಕೆಲಸ. ಎಲ್ಲಿದೆ ಉಂಗುರ ಹೇಳಿ?"
ಎಂದು ಸೀತಾರಾಮಯ್ಯನ ಹೆಂಡತಿ ಸರಸುವೂ ಗಟ್ಟಿಯಾಗಿ ಹೇಳಿದಾಗ ವೆಂಕಮ್ಮನಿಗೆ ಅದರ ಅರ್ಥ ಆಗುತ್ತಾ ಹೋದಂತೆ ಮೈಯೆಲ್ಲ ಬೆವರಲು ಶುರುವಾಗಿ ಕಣ್ಣು ಕತ್ತಲೆ ಬಂದ ಹಾಗಾಯಿತು.
"ಅಯ್ಯೋ ದೇವರೆ, ಉಂಗುರವಾ? ನನಗೆ ಗೊತ್ತಿಲ್ಲ. ನಾನು ತಗೊಂಡಿದ್ದಾ? ನಂಗ್ಯಾಕೆ ನಿನ್ನ ಉಂಗ್ರ? ಸುಮ್ಮನೇ ನನ್ನ ಮೇಲೆ ಕಳ್ಳತನದ ಆರೋಪ ಮಾಡಬೇಡ. ನಾನು ಯಾವ ಉಂಗುರವನ್ನು ನೋಡಲೂ ಇಲ್ಲ. ನನಗೆ ಗೊತ್ತೇ ಇಲ್ಲ"

ಎಂದು ಗದ್ಗದಿತರಾಗಿ ಹೇಳಿದರು.

ಸಿಟ್ಟಿಗೆದ್ದ ಆಳಿಯ ಸೀತಾರಾಮಯ್ಯ ,
"ಮೊದಲಿಂದ ನಿಮ್ಮನ್ನು ಬಲ್ಲೆ ನಾನು. ನಿಮ್ಮ ಮನೆತನವೇ ಹಾಂಗೆ. ಒಳ್ಳೆಯ ಮಾತಿನಿಂದ ಉಂಗುರ ಕೋಡ್ತೀರಾ ಇಲ್ಯಾ?"
ಎಂದು ಅಬ್ಬರಿಸಿದ ಸೀತಾರಾಮಯ್ಯನನ್ನೇ ದೀನಳಾಗಿ ನೋಡಿದರು.
"ಮಗೂ, ನನಗೇನು ಗೊತ್ತಿಲ್ಲ. ನಾವು ಬಡವರಿರಬಹುದು. ಆದರೆ ಕಳ್ಳತನ ಮಾಡುವಷ್ಟು ನೀಚರಲ್ಲ".

ಎಂದು ಹೇಳಿ ಬಿಕ್ಕಿದರು.
ಆದರೆ ಸೀತಾರಾಮಯ್ಯ ಇದರಿಂದ ಕರಗುವ ಸ್ಥಿತಿಯಲ್ಲಿರಲಿಲ್ಲ.
"ಅತ್ತೆ, ನನಗೆಲ್ಲ ಗೊತ್ತು. ನೀವು ಆ ಕೋಣೆಗೆ ಹೋದದ್ದನ್ನು ಕಂಡವರಿದ್ದಾರೆ. ಉಂಗುರ ಎಲ್ಲಿ ಅಡಗಿಸಿಟ್ಟಿದ್ದೀರಿ? ಕೊಟ್ಟುಬಿಡಿ. ಇಲ್ಲದಿದ್ದರೆ ನಿಮ್ಮ ಬಟ್ಟೆಯನ್ನು ಬಿಚ್ಚಿ ಉಂಗುರ ಉದುರಿಸಬೇಕಾಗುತ್ತದೆ"
ಎಂದಾಗಲಂತೂ ವೆಂಕಮ್ಮ ಹೌಹಾರಿದರು.
"ನಾನು ಕದಿಯಲಿಲ್ಲ ನಾನು ಕಳ್ಳಿ ಅಲ್ಲ"

ಎಂದು ಪರಿಪರಿಯಾಗಿ ಅಂಗಲಾಚಿದರು. ಆದರೆ ಯಾರೂ ಕನಿಕರ ಸಹ ತೋರಿಸುವಂತೆ ಕಾಣಲಿಲ್ಲ. ನೆಂಟರೆಲ್ಲ ಸುತ್ತನೆರೆದು ನಾಟಕ ನೋಡುತ್ತಿದ್ದರು. ಕೆಲವರು ಅವರವರಷ್ಟಕ್ಕೇ ಏನೇನೋ ಮಾತಾಡುವುದು ವೆಂಕಮ್ಮನಿಗೆ ಕೇಳಿಸುತ್ತಿತ್ತು.
"ಅಯ್ಯೋ ದೇವರೆ, ಇಂತಹ ಮಾತನ್ನು ಕೇಳಲು ಇಲ್ಲಿಯವರೆಗೆ ಬರಬೇಕಾಯಿತೇ?. ನನಗೆ ಸಾವು ಬರಬಾರದೇ"

ಎಂದು ವೆಂಕಮ್ಮ ಹಲುಬಿದರು.

********





"ಇದೆಲ್ಲ ನಾಟಕ. ಬಡತನ ಏನು ಬೇಕಾದರೂ ಮಾಡಿಸುತ್ತದೆ"
ಎಂದು ಯಾರೋ ಹಿಂದಿನಿಂದ ಹೇಳಿದರು.

ಛೆ ನಾನು ಯಾಕಾದರೂ ಇಲ್ಲಿಗೆ ಬಂದೆನೋ ಎನ್ನಿಸಿ ,
"ನಾನು ಕಳ್ಳಿಯಲ್ಲ, ಕಳ್ಳಿಯಲ್ಲ. ಎಲ್ಲಿ ಬೇಕಾದರೂ ಹೇಳುತ್ತೇನೆ ಯಾವ ದೇವರ ಮುಂದೆ ಬೇಕಾದರೂ ಪ್ರಮಾಣ ಮಾಡುತ್ತೇನೆ ನನ್ನನ್ನು ನಂಬಿ"

ಎಂದು ಹಲುಬಿ ಕೂಗಿಕೊಳ್ಳುತ್ತಿರುವಾಗಲೇ ಯಾರೋ ಗಟ್ಟಿಯಾದ ದಢೂತಿ ಹೆಂಗಸೊಬ್ಬಳು ಅವರ ರಟ್ಟೆಯನ್ನು ಹಿಡಿದು ಧರಧರ ಹತ್ತಿರದ ಕೋಣೆಗೆ ಎಳೆದೊಯ್ದರು.

ಅವರು ಹೌಹಾರಿ, ತನ್ನ ಸೀರೆಯ ನೆರಿಗೆಯನ್ನು ಗಟ್ಟಿಯಾಗಿ ಹಿಡಿದು,
"ಬಿಡಿ ಬಿಡಿ"
ಎನ್ನುತ್ತಿರುವಾಗಲೇ ಅವರ ಸೀರೆಯನ್ನು ಆ ಹೆಂಗಸು ‘ದರಾದರಾ ‘ ಎಳೆದೇ ಬಿಟ್ಟರು.


ಕೊನೆಗೂ ವೆಂಕಮ್ಮನ ಸೀರೆ, ಅವರ ದೇಹದಿಂದ ಬೇರ್ಪಟ್ಟು ನೆಲಕ್ಕೆ ಬಿದ್ದಾಗ ವೆಂಕಮ್ಮ ಗೋಳಾಡುತ್ತಾ ನೆಲಕ್ಕೆ ಬಿದ್ದರು. ಆದರೆ ಉಂಗುರ ಸಿಕ್ಕದೇ ಇದ್ದಾಗ ನಿರಾಶರಾದ ಆ ಹೆಂಗಸು ವೆಂಕಮ್ಮನನ್ನು ತುಳಿದುಕೊಂಡೇ ಏನೇನೋ ಬೈಯುತ್ತಾ ಹೊರಗೆ ಹೋದಾಗ ವೆಂಕಮ್ಮ ಹತಾಶರಾಗಿ ಮೆಲ್ಲನೇ ಎದ್ದು ಸೀರೆಯನ್ನು ಸುತ್ತಿಕೊಂಡು ಮೂಲೆಯಲ್ಲಿ ಮುರುಟಿಕೊಂಡು ಕುಳಿತುಕೊಂಡರು.

ರಾತ್ರಿ ಬೆಳಕು ನೀಡಲು ತಂದು ಸಾಲಾಗಿ ಇಟ್ಟ ಹತ್ತಾರು ಪೆಟ್ರೋಮ್ಯಾಕ್ಸ್ ಗಳು ಇವರ ಪರಿಸ್ಥಿತಿಯನ್ನು ಕಂಡು ನಗುತ್ತಾ ಇದ್ದಂತೆ ಅವರಿಗೆ ಭಾಸವಾಯಿತು.

ಆದರೆ ಸೀತಾರಾಮಯ್ಯ ಉಂಗುರ ಕಳೆದುಕೊಂಡ ಹತಾಶೆಯಿಂದ ಇನ್ನೂ ಹೊರಬಂದಿರಲಿಲ್ಲ. ಅವನು ಮತ್ತೆ ಒಳಗೆ ಬಂದು, ಒಂದು ತೆಂಗಿನ ಕಾಯಿಯನ್ನು ಕೈಯಲ್ಲಿ ಹಿಡಿದುಕೊಂಡು ವೆಂಕಮ್ಮನ ಮುಂದೆ ಚಾಚಿ
" ಹೇಳಿ, ಇದನ್ನು ಮುಟ್ಟಿ ಹೇಳಿ. ಉಂಗುರ ಕದಿಯಲಿಲ್ಲ ಎಂದು"
ಎಂದು ಕೂಗಿದಾಗ,
ವೆಂಕಮ್ಮನಿಗೆ ದುಃಖದ ಬದಲು ರೋಷ ಉಕ್ಕಿಬಂತು. ಒಮ್ಮೆಲೆ ಸೀರೆಯ ಸೆರಗನ್ನು ಕೈಯಲ್ಲಿ ಹಿಡಿದು ಸೊಂಟಕ್ಕೆ ಬಿಗಿದು ಕಟ್ಟಿ ಎದ್ದು ನಿಂತು ಅಬ್ಬರಿಸಿದರು.
"ಏನೋ, ಬೋ… ಮಗನೆ ಇಷ್ಟು ಮಾಡಬೇಕಂತ ನನ್ನನ್ನು ಕರೆಸಿದ್ದಾ? ಏನಂತ ಮಾಡಿದ್ದಿ? ನಿನ್ನ ಮಗಳ ಮದುವೆ ಮಾಡಿ ನನಗೆ ಇಷ್ಟು ಅವಮಾನ ಮಾಡ್ಬೇಕು ಅಂತ ನನ್ನ ಇಲ್ಲಿಗೆ ಕರೆಸಿದ್ಯಾ? ನನ್ನನ್ನು ಜೀವಂತ ಹೊಂಡ ತೆಗೆದು ಹುಗಿಯಬೇಕು ಅಂತ ಮಾಡಿದ್ಯೇನೋ. ನಿನ್ನ ಬುದ್ದಿ ಗೊತ್ತಿದ್ದೂ ಗೊತ್ತಿದ್ದು ಹಿಂದಿನದ್ದೆಲ್ಲ ಮರೆತು, ಆ ಹೆಣ್ಣಿಗೆ ಒಂದು ಆಶೀರ್ವಾದ ಮಾಡಿ ಹೋಗುವ ಅಂತ ಬಂದೆನಲ್ಲೋ, ನನಗೆ ಸರಿಯಾಗಿ ಮಂಗಳಾರತಿ ಮಾಡಿದ್ಯಲ್ಲ. ಆದರೆ ಇದು ಇಷ್ಟಕ್ಕೇ ಮುಗೀತು ಅಂತ ತಿಳೀಬ್ಯಾಡ. ನನಗೆ ಇಂದು ಮಾಡಿದ ಅವಮಾನಕ್ಕೆ ನಿನಗೆ ಶಿಕ್ಷೆ ಆಗಿಯೇ ಆಗುತ್ತದೆ"

ಎಂದು ಒಂದೇ ಉಸಿರಿನಲ್ಲಿ ಒರಲುತ್ತಾ ಹುಚ್ಚು ಆವೇಶದಿಂದ ಎದುರಿಗಿದ್ದವರನ್ನು  ದೂಡಿಕೊಂಡು ಅಂಗಳ ಇಳಿದು ಹೊರಟೇ ಬಿಟ್ಟರು.

ಅವರ ಕಣ್ಣು ಕೆಂಡದ ಉಂಡೆಯಾಗಿತ್ತು.
ಅವರ ಅವತಾರವನ್ನು ಕಂಡು, ತಡೆಯುವ ಧೈರ್ಯ ಅಲ್ಲಿ ಯಾರಿಗೂ ಇರಲಿಲ್ಲ.

ಓಡಿಕೊಂಡೇ ಮನೆಗೆ ಬಂದ ವೆಂಕಮ್ಮನಿಗೆ ಮೈಮೇಲೆ ಜ್ಞಾನವೇ ಇದ್ದಂತಿರಲಿಲ್ಲ. ಏದುಸಿರು ಬಿಡುತ್ತಾ ಚಾವಡಿಯನ್ನು ಏರಿ ಗಂಡನ ಭಾವ ಚಿತ್ರದ ಮುಂದೆ ಮಂಡಿಯೂರಿ ಕುಳಿತು,ಹೇಗೆ ಬಂದರೊ ಬಹುಷ್ಯ ಅವರಿಗೂ ಗೊತ್ತಿಲ್ಲ . ಮೈಯ ಮೇಲೆ ಜ್ಞಾನ ಅವರಿಗೂ ಇರಲಿಲ್ಲ.

"ಕಂಡ್ರ್ಯಾ? ಕಂಡ್ರ್ಯಾ? ಇವತ್ ಬೆಳಿಗ್ಗೆ ಹೇಳಿದ್ನಲೆ. ನಾನು ಇಷ್ಟ್ ಬೇಗ ಬತ್ತಿಲ್ಲೆ, ಸ್ವಲ್ಪ ದಿನ ಇರ್ತೆ. ಜಂಬ್ರ ಇತ್ತು ಅಂತ. ಸಾಕು. ಮರ್ರೆ ಸಾಕು. ಎಲ್ಲ ಕಂಡಾಯ್ತು. ಇನ್ನೂ ಯಾಕೆ ಬದ್ಕಿ ಇಪ್ಪುದ್?. ನನ್ನನ್ನೂ ಬೇಗ ಕರ್ಕಂಡ್ ಹೋಯ್ನಿ.  ನಂಗ್ ಈ ಜನ್ಮವೇ ಸಾಕ್. ಇನ್ನು ಈ ಜನ್ಮದಲ್ಲಿ ನಾನು ಯಾರಿಗೂ ಮುಖ ತೋರ್ಸುಕಿತ್ತಾ?. ಇಷ್ಟು ದಿನ ಬದುಕಿದ್ದು ಇಂತಹ ಅವಮಾನವನ್ನು ಅನುಭವಿಸುವದಕ್ಕೆ ಅಂತ ಆಯಿತಲ್ಲ. ನಾನ್ ಬರ್ತೆ, ನನ್ನನ್ನ್ ಕರ್ಕಂಡ್ ಹೋಯ್ನಿ ಕರ್ಕಂಡ್ ಹೋಯ್ನಿ"

ಎಂದು ನೆಲಕ್ಕೆ ಬಾಗಿ ಹಣೆಯನ್ನು ಮತ್ತೆ ಮತ್ತೆ ಬಡಿದುಕೊಂಡು ಗೋಳಾಡಿದರು.

ಕೊನೆಗೆ ಬಳಲಿಕೆಯಿಂದ ಎಂಬಂತೆ ಹಾಗೆಯೇ ಕುಸಿದು ಒಂದು ಬದಿಗೆ ಬಾಗಿ ಮಲಗಿಕೊಂಡರು.

***********




ಸೊಸೆ ಅದನ್ನು ಕಂಡು ಗಾಬರಿಯಾಗಿ ಚಾವಡಿಗೆ ಓಡಿಬಂದು,

"ಏನಾಯ್ತು ಅತ್ತೇ? ಯಾಕೆ ಹಾಂಗ್ ಮಲ್ಕಂಡಿದ್ರಿ? ಏಳಿ ಏಳಿ. ನಂಗೆ ಹೆದರಿಕೆ ಆತ್ "

ಎಂದು ಹತ್ತಿರ ಬಂದು ಅಳುತ್ತಾ ಹೇಳಿದಾಗ, ಅವಳನ್ನು ಸಿಟ್ಟಿನಿಂದ ದುರುದುಟ್ಟಿ ನೋಡಿದ ವೆಂಕಮ್ಮ,

" ದೂರ ಹೋಗು, ನನ್ನನ್ನು ಮುಟ್ಟಬ್ಯಾಡ. ದೂರ ಹೋಗು. ನಾನು ಈಗ ಒಬ್ಳೇ ಇರ್ಕ್. ಮಾತಾಡಿಸ್ಬ್ಯಾಡ ಹೋಗು"

ಎಂದು ಕಣ್ಣು ಕೆಂಪು ಮಾಡಿಕೊಂಡು ಅಬ್ಬರಿಸಿದರು.

ವೆಂಕಮ್ಮನ ಸ್ಥಿತಿಯನ್ನು ನೋಡಿ ಅವಳಿಗೆ ಹೆದರಿಕೆಯಾಗಿ ಹಿಂದೆ ಹಿಂದೆ ಹೋದವಳು, ಅತ್ತೆಯ ಮನಸ್ಸಿಗೆ ಶಾಂತಿ ಸಿಗುವುದಾದರೆ ಹಾಗೆ ಮಲಗಿರಲಿ ಎಂದುಕೊಂಡಳು. ಬೆಳಿಗ್ಗೆಯಿಂದ ಕೆಲಸ ಮಾಡಿ ಸುಸ್ತಾಗಿದ್ದ ಅವಳು ಅಲ್ಲಿಯೇ ಜಗಲಿಯ ಮೇಲೆ ಒಂದು ಗೋಣಿಯ ಚೀಲವನ್ನು ಗೋಡೆಗೆ ಆನಿಸಿ ತಲೆದಿಂಬು ಮಾಡಿಕೊಂಡು ಒರಗಿಕೊಂಡಳು. ಹಾಗೇ ಜೊಂಪು ಹತ್ತಿತು. ಮತ್ತೆ ಎಚ್ಚರಾಗಿ ಅತ್ತೆಯನ್ನು ಕಂಡದ್ದು ಮುಸ್ಸಂಜೆಯ ಕತ್ತಲಾಗುವ ಹೊತ್ತಿಗೆ.

ಅತ್ತ ಮದುವೆಯ ಮನೆಯಲ್ಲಿ, ಇಂತಹ ಒಂದು ಅಹಿತಕರ ಘಟನೆ ನಡೆದದ್ದರಿಂದ ಮದುವೆಯ ಮನೆಯ ಸಂಭ್ರಮವೇ ಹಾಳಾಗಿಹೋಗಿತ್ತು. ಯಾರಿಗೂ ಉತ್ಸಾಹವೇ ಇರಲಿಲ್ಲ. ಅಂತೂ ಸೀತಾರಾಮಯ್ಯ ಮದುವೆಗೆ ಬಂದ ನೆಂಟರನ್ನೆಲ್ಲ ಕಳಿಸಿ, ಮಗಳನ್ನು ಗಂಡನ ಮನೆಗೆ ಕಳುಹಿಸಿ ಕೊಟ್ಟು,

"ಅಯ್ಯಬ್ಬ ಅಂತೂ ಮುಗಿಯಿತಲ್ಲ"

ಎಂದು ಸ್ವಲ್ಪ ಒರಗಿದರು.

ಸಂಜೆ ಕತ್ತಲು ಕವಿಯುವ ಹೊತ್ತಿಗೆ ಎದ್ದು, ಮನೆಯ ಹೊರಗಡೆ ತೋಟಕ್ಕೆ ಹೋಗಿದ್ದಾಗ ಬಚ್ಚಲ ಮನೆಯ ನೀರು ಹರಿದು ಹೋಗುವ ಜಾಗದ ತೆಂಗಿನ ಹೊಂಡದ ಬುಡದಲ್ಲಿ ಏನೋ ಹೊಳೆಯುತ್ತಿದ್ದುದನ್ನು ನೋಡಿದರು.  ಪುನಃ ಮನೆಗೆ ಹೋಗಿ ಬ್ಯಾಟರಿ ತಂದು, ಅದರ ಬೆಳಕಿನಲ್ಲಿ ಹತ್ತಿರ ಹೋಗಿ ಇಣುಕಿ ನೋಡಿದರೆ,

ಅದೇ ಉಂಗುರ!

ಬಚ್ಚಲ ನೀರಿನೊಂದಿಗೆ ಹರಿದುಕೊಂಡು ಬಂದಿರಬೇಕು. ಅದು ಆ ಕಪ್ಪು ಕೆಸರಿನ ಮಧ್ಯದಲ್ಲಿ ಹುಗಿದು ಹೋಗಿತ್ತು, ಅದನ್ನು ಒಂದು ಕೋಲಿಗೆ ಸಿಕ್ಕಿಸಿ ಎತ್ತಿ ಹಿಡಿದು ನೋಡಿದರು.

ಹೌದು ಅದೇ ಉಂಗುರ.

ಮಧ್ಯಾಹ್ನ ನಡೆದ ಒಂದೊಂದು ಘಟನೆಯೂ ಕಣ್ಣಮುಂದೆ ಹಾದುಹೋಯಿತು.

ತಾನು ಎಲ್ಲರ ಮುಂದೆ ಎಷ್ಟು ಕಠೋರವಾಗಿ ವರ್ತಿಸಿದೆ ಎಂದು ನೊಂದುಕೊಂಡರು.

ಸುತ್ತಲೂ ಕತ್ತಲು ಕವಿಯುತ್ತಿತ್ತು. ಮದುವೆಯ ಮನೆಯಲ್ಲಿ ಮಕ್ಕಳೆಲ್ಲ ಗ್ಯಾಸ್ ಲೈಟಿನ ಬೆಳಕಿನಲ್ಲಿ ಆಡುತ್ತಿದ್ದವು.

***********






ಸೀತಾರಾಮಯ್ಯನಿಗೆ ಏಕೋ ಉಂಗುರ ಸಿಕ್ಕಿದ್ದು ಖುಷಿಯಾಗಲಿಲ್ಲ. ಆದರೂ ಅದನ್ನು ಹೆಂಡತಿಗೆ ತೋರಿಸಲು ಕೂಗಿ ಕರೆಯಬೇಕು ಎನ್ನುವಷ್ಟರಲ್ಲಿ,

ಯಾರೋ ಒಬ್ಬ ಒಕ್ಕಲು ಆಳು ಅಡಿಕೆ ಸೋಗೆಯ ಸೂಡಿಯನ್ನು ಬೀಸುತ್ತಾ ಅದರ ಬೆಳಕಿನಲ್ಲಿ ಏದುಸಿರು ಬಿಡುತ್ತಾ ಬಂದವನು ದೂರದಿಂದಲೇ,

"ಅಯ್ಯಾ, ವೆಂಕಮ್ಮನೋರು ತೀರಿಕೊಂಡರಂತೆ"

ಎಂದು ಕೂಗಿ ಸುದ್ದಿ ಮುಟ್ಟಿಸಿದ.

ಸೀತಾರಾಮಯ್ಯನಿಗೆ ತೀರಾ ಆಘಾತವಾಯಿತು.

“ಈ ಉಂಗುರದಿಂದಲೇ ಇಷ್ಟೆಲ್ಲ ಆಯಿತು”

ಎಂದು ಅದನ್ನೇ ತದೇಕದೃಷ್ಟಿಯಿಂದ ನೋಡಿದರು. ಅವರ ಕಣ್ಣಿನಲ್ಲಿ ನೀರು.
ಇಷ್ಟಕ್ಕೆಲ್ಲ ಕಾರಣ ಆ ಉಂಗುರ, ಅದು ತನಗೆ ಸಿಕ್ಕಲೇ ಇಲ್ಲ ಅಂತ ಮಾಡಿದರೆ?

ಅವರು ತಡ ಮಾಡಲಿಲ್ಲ.ಅವರದೂ ಒಳ್ಳೆಯ ಹೃದಯವೆ
ಕಾವೇರಮ್ಮನ ಎದುರು ತಾನು ಮತ್ತೊಮ್ಮೆ ತೀರ  ಚಿಕ್ಕವನಾದೆ ಎನ್ನಿಸಿತು ಅವರಿಗೆ. ಹಿಂದಿನ ವೈಷಮ್ಯ ಮರೆತು ನಾನು ಮದುವೆ ಹೇಳಿಕೆ ಹೇಳಲು ಹೋದಾಗ ಅವರ ಮಗನೇ ಬಂದ ಅಂತ ಸಂಭ್ರಮ ಪಟ್ಟರಲ್ಲ. ಎಷ್ಟೊ ವರ್ಷದಿಂದ ಮಾತುಕತೆ ಇರಲಿಲ್ಲ. ಯಾರದೋ ಹಿಂದಿನವರ ದ್ವೇಷ. ಅದೇನೋ ಆಣೆ ಭಾಷೆ ಅಂತೆ. ಹಿಂದೆಲ್ಲ ಹಾಗೆಯೇ ಇತ್ತು. ತಾನು ಅಂದು ನಡೆಯಲಿಲ್ಲ ಎಂದ ಕೂಡಲೇ ಧರ್ಮಸ್ಥಳ ಭೂತ ದೇವರು ಎಲ್ಲವೂ ಎದುರು ಸಾಕ್ಷಿಯಾಗಿ ಬಂದು ಬಿಡುತ್ತದೆ.

ನಾನು ಸರಿ ಮಾಡಲು ಹೊರಟೆ. ಹೀಗಾಯಿತು.

ಸೀದಾ ಬಾವಿಯ ಕಟ್ಟೆಗೆ ಬಂದು ಉಂಗುರವನ್ನು ತೆಗೆದು ಬಾವಿಗೆ ಎಸೆದುಬಿಟ್ಟರು.

ತನ್ನ ತಪ್ಪಿಗೆ ಪ್ರಾಯಶ್ಚಿತ್ತವಾಗಲೇ ಬೇಕು ಎಂದು ಹೆಗಲಿನ ಮೇಲಿನ ಪಾಣಿ ಪಂಚೆಯನ್ನು ಒಮ್ಮೆ ನೆಲಕ್ಕೆ ಕೊಡವಿ ತಲೆಯಡಿ ಮಾಡಿಕೊಂಡು ಏನೋ ಒಂದು ದೃಢನಿಶ್ಚಯಕ್ಕೆ ಬಂದವರಂತೆ, ಅಲ್ಲಿಂದಲೇ ವೆಂಕಮ್ಮನ ಮನೆಯತ್ತ ವೇಗವಾಗಿ ನಡೆಯತೊಡಗಿದರು.

*#ಮುಗಿಯಿತು.*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ