ಶುಕ್ರವಾರ, ಆಗಸ್ಟ್ 31, 2018

ದಿನೇಶ ಉಪ್ಪೂರ:


*#ನನ್ನೊಳಗೆ - 2*


ಭಾಗ - 7


ಹೌದು.

ಆತ್ಮ ಕತೆ ಬರೆಯುವುದು ಅಷ್ಟು ಸುಲಭ ಅಲ್ಲ.

ತನ್ನನ್ನೇ ತೆರದಿಡುವುದು ಕಷ್ಟ.

ಆದರೂ ಒಮ್ಮೊಮ್ಮೆ ಮೋಸವಾಗಿ ಬಿಡುತ್ತದೆ

ಸುಳ್ಳು ನುಸುಳಿ ಬಿಡುತ್ತದೆ. ಅದು ಆತ್ಮ ವಂಚನೆ. ಅದಾಗಬಾರದು.

ಆದಷ್ಟು ಪ್ರಾಮಾಣಿಕವಾಗಿಯೇ ಬರೆಯಬೇಕು.

********

ನನಗೋ “ಏಕತಾನತೆ ಇದ್ದ ಆ ಒಳ್ಳೆಯ ಕೆಲಸ ಬೇಡ” ಎಂದು ಬಿಟ್ಟುಬಿಟ್ಟಿದ್ದೆ .

ನಾನು ಮಹತ್ವಾಕಾಂಕ್ಷಿಯಲ್ಲ.  ಅಲ್ಪ ತೃಪ್ತನೆ.

ಇಷ್ಟು ಸಾಕು ನನಗೆ.  ಆದರೂ ಮಾಡಲು ಕೆಲಸ ಬೇಕು. ಸುಮ್ಮನೇ ಇರಲಾರೆ.

ಸುತ್ತಬೇಕು . ಅರ್ಧದಷ್ಟಾದರೂ ದುಡಿದದ್ದನ್ನು ಕಳೆಯಬೇಕು. ಮಗನಿಗೆ ಕೆಲಸ ಸಿಕ್ಕಿದೆ. ಅವನು ನನ್ನನ್ನು ನಂಬಿ ಇಲ್ಲ..

ಅವನಿಗೆ ಹೇಳಿ ಬಿಟ್ಟಿದ್ದೇನೆ “ನಿನ್ನದನ್ನು ನೀನು ಉಳಿಸಿಕೊ”

ಆದರೆ ಜಾಗ್ರತೆ. ದುಡಿದದ್ದನ್ನು ಹಾಳುಮಾಡಬೇಡ . 

ಅತೀ ಆಸೆ ಬೇಡ” ಅಂತ.

ಅವನೂ ಜಾಣ. ನನ್ನನ್ನು ಅರ್ಥಮಾಡಿಕೊಂಡವನು.

ಸಾಕು ನನಗೆ

******

ಆವತ್ತು ಶಿರಡಿ ನಾಸಿಕ್ ಎಲ್ಲೋರಾ ಟೂರನ್ನು ನನ್ನ ಸ್ನೇಹಿತರೊಂದಿಗೆ ಮುಗಿಸಿಕೊಂಡು ವಾಪಾಸು ಬರುತ್ತಿದ್ದೆ. ನನ್ನ ಅಣ್ಣಯ್ಯನ ಮಗನ ಮಾವನ ಫೋನ್,

“ ನಿಮ್ಮ ಅಣ್ಣನ ಮಗ, ಜ್ಞಾನ ತಪ್ಪಿದೆ . ಕೋಮಾದಲ್ಲಿದ್ದಾನೆ. ಬನ್ನಿ”

ನಾನು ಮನೆಗೆ ಬಂದವನೇ ಓಡಿದೆ.

ನನಗೆ ಅವನ ಹೆಚ್ಚು ಎಟ್ಯಾಚ್ ಮೆಂಟ್ ಇಲ್ಲ . ಬೆಂಗಳೂರಿನಲ್ಲಿ ಅಣ್ಣನೊಂದಿಗೆ ಇದ್ದವನು,

ಅದು ಏನೋ ಆಗಿ ಊರಿಗೆ ಬಂದು ಇಲ್ಲಿಯೇ ಮಣಿಪಾಲದಲ್ಲಿ, ಯಾವುದೋ ಕೆಲಸದಲ್ಲಿ ಇದ್ದ.

ಆಗಾಗ ಸಿಗುತ್ತಲೂ ಇದ್ದ.

“ಚಿಕ್ಕಪ್ಪ, ನಿಮ್ಮಲ್ಲಿ ಎಲ್ಲ ಲಂಚ. ದೊಡ್ಡ ಆಫೀಸಿನಲ್ಲಿ ಕಷ್ಟ. ನಿಮಗಿದು ಕಷ್ಟ”

ಹೌದು. ನನಗೂ ಹಾಗೆಯೇ ಅನ್ನಿಸಿತ್ತು ಬಹುಷ್ಯ. ಇರಲಿ

*********

ಅವನಿಗೆ ರಕ್ತ ಹೆಪ್ಪುಗಟ್ಟುವ ಅದೇನೋ ಕಾಯಿಲೆ.

ದಿನವೂ ಮದ್ದು ತೆಗೆದು ಕೊಳ್ಳಬೇಕು.

ಒಂದೂವರೆ ತಿಂಗಳಿಗಿಂತಲೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಇದ್ದ.

ಪ್ರತೀ ದಿನ ಹೋಗುತ್ತಿದ್ದೆ .

ಮಣಿಪಾಲ ಆಸ್ಪತ್ರೆಗೆ ಅವನ ಜೊತೆಗೆ ಇರಲು.

ಅವರು ಹೇಳಲಿ ಬಿಡಲಿ.

ಒಮ್ಮೆ ಕರೆದರಲ್ಲ. ಅದು ನನಗೆ ಕರ್ತವ್ಯ.

ನನಗೆ ಮಾಡಲು ಬೇರೆ ಕೆಲಸವಾದರೂ ಏನಿದೆ?.

ಅವನಿಗೆ ಡಿಸ್ಚಾರ್ಜ್ ಆಗುವವರೆಗೂ ಹೋಗುತ್ತಿದ್ದೆ.

ನನ್ನ ಕೆಲಸವಾಯಿತು.

*******

ಆ ಒಂದು ಸಮಯದಲ್ಲೇ ಶುರು ಮಾಡಿದ್ದು, ನಾನು ಹೀಗೆ ಬರೆಯಲಿಕ್ಕೆ . ಮೊಬೈಲಿನಲ್ಲಿ.

ಎಂದೋ ಬಿಟ್ಟುಹೋಗಿತ್ತು.  ಬರೆಯುವುದು.

ಸುಮ್ಮನೇ ಅವನ ಪಕ್ಕದಲ್ಲಿ ಕುಳಿತುಕೊಳ್ಳಬೇಕಲ್ಲ.

ಅವನು ಮಾತಾಡುವುದಿಲ್ಲ. ಹಾಗೆ ಶುರುವಾದದ್ದು ಇದು “ನನ್ನೊಳಗೆ” ಮಥನ.

***

ಯಾಕೋ ನಮ್ಮ ಗೋಪಾಲ ಮಾಸ್ಟ್ರು ನೆನಪಾದರು.

ಅವರು ನಾನು ಉಡುಪಿಯಲ್ಲಿ ಕೆಲಸಕ್ಕೆ ಸೇರಿ,  ನನ್ನ ಭಾವ ಸುಬ್ರಮಣ್ಯ ಉಡುಪರಿದ್ದ ರೂಮಿಗೆ ಬಂದಾಗ ಅಲ್ಲಿಯೇ ಕೆಳಗಿನ ಮನೆಯಲ್ಲಿದ್ದರು. ಅವರ ಬಗ್ಗಹಿಂದೆಯೂ ಹೇಳಿದ್ದೆ.

ನಮಗೆಲ್ಲ ತುಂಬಾ ಆತ್ಮೀಯರು.

ಬಹಳ ಸಮಯದ ನಂತರ ಒಮ್ಮೆ ರಥಬೀದಿಯಲ್ಲಿ ಸಿಕ್ಕಿದ್ದರು.

ನಾನು ಆಗ ನನ್ನ ಕೆಲಸದಲ್ಲಿ ಪ್ರೊಮೋಶನ್ ಆಗಿ ಮುಲ್ಕಿಗೆ ಹೋಗಿದ್ದೆ ಅಂತ ನೆನಪು.

ಯಾಕೆಂದರೆ ನಾನು ಉಡುಪಿಯಲ್ಲಿ ಇದ್ದಿದ್ದರೆ,  ಅವರು ನಮ್ಮ ಮನೆಗೆ ಬಂದೇ ಅವರ ಮಗಳ ಮದುವೆಯ ಹೇಳಿಕೆ ಹೇಳುತ್ತಿದ್ದರು.

“ಉಪ್ಪೂರರೆ, ಬೇಸರಿಸಬಾರದು.

ನನಗೆ ಮನೆಗೆ ಬಂದು ಹೇಳಿಕೆ ಮಾಡಲು ಸಮಯವಿಲ್ಲ. ಇಲ್ಲಿಯೇ ಹೇಳುತ್ತೇನೆ. ನನ್ನ ಮಗಳ ಮದುವೆಗೆ ಬರಲೇಬೇಕು”.

ನಾನು ಹೇಳಿದೆ.

“ಅಡ್ಡಿಲ್ಲ. ಇಲ್ಲಿಯೇ ಹೇಳಿ ಖಂಡಿತಾ ಬರುತ್ತೇನೆ”. ಅದು ಹೇಳುವವರ ಮದುವೆಗೆ ಕರೆಯುವವರ ಮನಸ್ಸಿನ ಮೇಲೆ ಅವಲಂಬಿಸಿರುತ್ತದೆ.

ನಾನು ಆ ಮದುವೆಗೆ ಹೋದೆನೋ ಬಿಟ್ಟೆನೋ ನೆನಪಿಲ್ಲ

ಆದರೆ ಅವರು ಹೇಳುವಾಗ ಮನೆಗೆ ಬಂದು ಹೇಳಲಿಲ್ಲ ಎಂಬ ಅಪರಾಧದ ಭಾವತುಂಬಿದ ಮುಖ ಇನ್ನೂ ನನ್ನ ಕಣ್ಣಮುಂದೆ ಇದೆ.

******

ಆ ಮಾಸ್ಟರಿಗೂ ಸಾವು ಬಂತು.

ಕುಂದಾಪುರದ ಒಂದು ಹೋಟೆಲಿನಲ್ಲಿ ವೆಂಕಟರಮಣ ಅಡಿಗರು ಎಂಬ ಅವರ ಹಳೆಯ ಸ್ನೇಹಿತರನ್ನು ಕಂಡು ಮಾತಾಡಿಸಲು ಹೋದಾಗ ಅವರಿಗೆ ಹೃದಯಾಘಾತದಿಂದ ನಿಧನರಾದರು ಅಂತ ಕೇಳಿದೆ.

ಸಾವು ಎಲ್ಲರಿಗೂ ಬರುತ್ತದೆ.

*********

ಆದರೆ ಬದುಕಿದಾಗ ಮಾಡಿದ್ದೇನು ಎಂಬುದು ಮುಖ್ಯವಾಗುತ್ತದೆ.

ಸತ್ತ ಮೇಲೆ ಹೇಗೋ ಯಾರಿಗೆ ಗೊತ್ತು?

ಹೌದು.

ಎಂಬತ್ತಮೂರರ ವರೆಗೂ ಯಕ್ಷಗಾನದಲ್ಲಿ ತಾನೇ ತಾನಾಗಿ ಮೆರೆದ ಚಿಟ್ಟಾಣಿಯವರನ್ನೂ ಸಾವು ಬಿಡಲಿಲ್ಲ.

ಸತ್ತ ಮೇಲೆ ಎಲ್ಲರೂ ಅವರನ್ನು ಹೊಗಳುವವರೆ.

****


ಹೌದು. ಸತ್ತ ಮೇಲೆ ಎಲ್ಲರೂ ಅವರ ಗುಣಗಾನ ಮಾಡುವವರೆ.

ಭಟ್ಟರು ಒಮ್ಮೆ ಹೇಳಿದ್ದರು.

ಅಷ್ಟಮಠದ ಒಬ್ಬರು ಸ್ವಾಮಿಗಳು ಒಮ್ಮೆ ಹೇಳಿದ್ದರಂತೆ.

ಸತ್ತಮೇಲೆ ಸತ್ತವರನ್ನು ಹೊಗಳಬಾರದು.

ಅದರಿಂದ ಅವರ ಆತ್ಮಕ್ಕೆ ನಷ್ಟವೆ.

ಸತ್ತ ಮೇಲೆ ಅವರ ಅವಗುಣಗಳನ್ನು ಎತ್ತಿ ಆಡಿದರೆ ಅವರ ಆತ್ಮಕ್ಕೆ ಪ್ರಾಯಶ್ಚಿತ್ತವಾಗುತ್ತದೆ.

*******

ಸ್ವರ್ಗಾರೋಹಣದಲ್ಲಿ ಧರ್ಮರಾಯ ಹಾಗೆ ಅಂತೆ.

ಮೊದಲು ದ್ರೌಪದಿ ಬಿದ್ದಾಗ ಹೇಳಿದನಂತೆ.

“ಅಳಬೇಡಿ. ಅವಳ ಒಳ್ಳೆಯ ಗುಣಗಾನ ಮಾಡಬೇಡಿ.

ಅವಳು ಪಾಪಿ ಅದಕ್ಕೆ ಹೀಗಾಯಿತು”.

ಸಹದೇವ ಬಿದ್ದಾಗಲೂ ಧರ್ಮರಾಯ ಹೇಳಿದನಂತೆ.

ನೋಡಿ. ಪಾಪಿ ಇವನು. ಬಿದ್ದ.

ಇವನಿಗೆ ಮುಂದಾಗುವುದು ಗೊತ್ತಿತ್ತು.

ನಾಟಕ ಮಾಡಿದ.

ಮಹಾಭಾರತ ಯುದ್ಧವನ್ನೇ ತಪ್ಪಿಸಬಹುದಿತ್ತು.

ನಮ್ಮೊಡನೆ ಏನೂ ಗೊತ್ತಿಲ್ಲದವನಂತೆ ಇದ್ದು ನಾಟಕ ಮಾಡಿದ.

******

*ಮುಂದುವರಿಯುವುದು………*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ