ಶನಿವಾರ, ಸೆಪ್ಟೆಂಬರ್ 23, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 11

ಮಳೆಗಾಲದಲ್ಲಿ ಶಾಲೆಗೆ ರಜೆ ಬಂತೆಂದರೆ ನಮ್ಮ ಕಾಟದಿಂದ ಮನೆಯವರಿಗೆಷ್ಟು ತಲೆಬಿಸಿಯೋ, ನಮಗೆ ಅಷ್ಟೇ ಸ್ವಾತಂತ್ಯ್ಮದ ಖುಷಿ. ಆಚೀಚೆ ಮನೆಯವರ  ಗಂಟಿಗಳ ಜೊತೆಗೆ ಸ್ನೇಹಿತರೊಂದಿಗೆ, ನಮ್ಮ ಗಂಟಿಗಳನ್ನು ಹರೀನ್ ಗುಡ್ಡೆಗೆ ಮೇಯಿಸಲು ಅಟ್ಟಿಕೊಂಡು ಹೋಗುವುದೂ ಅದರಲ್ಲಿ ಒಂದು. ಬೆಳಿಗ್ಗೆ ಹೋದರೆ ಸಂಜೆಯಾದರೂ ಹೊತ್ತು ಹೋದದ್ದೇ ಗೊತ್ತಾಗುವುದಿಲ್ಲ. ಕತ್ತಲಾದರೂ ಮನೆಗೆ ಬರುವ ಮನಸ್ಸಾಗುವುದಿಲ್ಲ. ಗುಡ್ಡೆಯಲ್ಲಿ ಅದೂ ಇದೂ ಹಣ್ಣು ಪಣ್ಣು ಇರುತ್ತದಲ್ಲ. ಅದನ್ನೇ ಹಸಿವಾದರೆ ತಿಂದುಕೊಂಡು ಇರಬಹುದು. ಕಿಸ್ಕಾರ ಹಣ್ಣಿನಿಂದ ಹಿಡಿದು ಗರಚನ ಹಣ್ಣು ಇದರ ಕಾಯಿ ಹುಳಿ ಆದರೆ ಬಹಳ ರುಚಿ, ಸೂರಿ ಹಣ್ಣು, ಜಡ್ಮುಳ್ ಹಣ್ಣು, ಬುರ್ಕಿ ಹಣ್ಣು, ಚೇಂಪಿ ಹಣ್ಣು,  ನೇರಳೆ, ಬನ್ನೇರಳೆ ಒಂದಾ ಎರಡಾ. ಮನೆಯಲ್ಲಿ ಬೈಯದೇ ಇರುತ್ತಿದ್ದರೆ  ಒಂದೆರಡು ದಿನ ಅಲ್ಲಿಯೇ ಕಳೆಯಬಹುದಿತ್ತು ಎಂದೂ ಮನಸ್ಸಾಗುತ್ತದೆ. ಆದರೆ ಒಂದು ಕಷ್ಟವೆಂದರೆ ಅಲ್ಲಿ ಮಲಗಲಿಕ್ಕೆ ಸರಿಯಾದ ಜಾಗ ಇಲ್ಲ. ಮಳೆಗಾಲ, ಚಳಿ ಬೇರೆ. ಮಳೆ ಬಂದರೆ ಕಷ್ಟ. ಮಳೆಗೆ ಅಂತ ಕಂಬಳಿಕುಪ್ಪಿ ತೆಗೆದುಕೊಂಡು ಹೋಗುತ್ತಿದ್ದರೂ ಅಲ್ಲಿ ಮಲಗುವ ಧೈರ್ಯ ಹುಚ್ಚುತನದ್ದೇ. ಆದರೆ ಅಲ್ಲಿಯ ಪ್ರಕೃತಿ ಸೌಂದರ್ಯ ಸೌಂದರ್ಯವೆ. ಎಲ್ಲಿ ನೋಡಿದರೂ ಸಮತಟ್ಟಾದ ಜಾಗದ ನೆಲಕ್ಕೆ ಹಾಸಿದಂತೆ ಕರಡ ಎಂಬ ಹಸಿರುಹುಲ್ಲು. ಅಲ್ಲಲ್ಲಿ ಗೋವೆಮರಗಳು, ನೇರಳೆಮರಗಳು, ಮುಳ್ಳುಪೊದೆಗಳು, ಕಲ್ಲು ಬಂಡೆಗಳು. ಅಲ್ಲಿ ಒಂದು ಕಡೆಯಲ್ಲಿ ದೊಡ್ಡ ಧೂಪದ ಮರದ ಬುಡದಲ್ಲಿ ಯಾರೋ ಕಲ್ಲಿನ ಕಟ್ಟೆಯನ್ನು ಕಟ್ಟಿ ಕುಳಿತುಕೊಳ್ಳಲೂ ವ್ಯವಸ್ಥೆ ಮಾಡಿದ್ದರು. ಬೇಸರವಾದರೆ ಹಾಗೆಯೇ ಮುಂದಕ್ಕೆ ಹೋಗಿ ಸ್ವಲ್ಪ ಕೆಳಗೆ ಇಳಿದರೆ ಹರಿಯುವ ನೀರಿನ ತೊರೆ. ಬೇಕೆನಿಸಿದರೆ ನೀರಿನಲ್ಲಿ ಕುತ್ತಿಗೆಯವರೆಗೆ ಮುಳುಗಿ ಕುಳಿತುಕೊಳ್ಳಬಹುದು. ಹರಿಯುವ ನೀರು, ಬಾಯಾರಿದರೆ ಕುಡಿಯಲೂ ಆಗುತ್ತದೆ.
 ಈಗ ಆ ಗುಡ್ಡೆಯನ್ನು ಪೋರೆಸ್ಟ್ ಇಲಾಖೆ ಸ್ವಾಧೀನ ಮಾಡಿಕೊಂಡು ಸುತ್ತಲೂ ಬೇಲಿ ಹಾಕಿದೆಯಂತೆ. ಪ್ರತೀ ವರ್ಷ ಗೇರು ಮರವನ್ನು ಗುತ್ತಿಗೆಗೆ ಕೊಟ್ಟು ಕಾವಲು ಕಾಯುವುದಲ್ಲದೇ, ಊರಿನವರ ದನಗಳು ಬಿಡಿ, ಮನುಷ್ಯರಿಗೇ ಹೋಗಲು ಬಿಡುವುದಿಲ್ಲವಂತೆ. ಈಗ ಹಳ್ಳಿಯ ಮನೆಗಳಲ್ಲಿ ಗಂಟಿಗಳೂ ಕಡಿಮೆಯಾಗಿವೆ. ಅಷ್ಟೆಲ್ಲ ದೂರ ಹೋಗಿ ಮೇಯಿಸುವುದಕ್ಕೂ ಮನೆಯಲ್ಲಿ ಜನ ಇಲ್ಲ .
ಹಾಲಾಡಿ ಪೇಟೆಯಲ್ಲಿ ರಾಮಣ್ಣ ಶೆಟ್ರು (ಹೆಸರು ಮೋನಪ್ಪ ಶೆಟ್ರು ಅಂತ ವಿವೇಕ ಮಿತ್ಯಂತಾಯರು ತಿಳಿಸಿದರು)  ಅಂತ ಒಬ್ಬರು ಮುದುಕರಿದ್ದರು. ಅವರಿಗೆ ಸ್ವಲ್ಪ ಅರೆಮರುಳು. ಪೇಟೆಯ ರಸ್ತೆಯುದ್ದಕ್ಕೂ ತನ್ನಷ್ಟಕ್ಕೆ ಏನಾದರೂ ಮಾತನಾಡುತ್ತಾ ಹೋಗುತ್ತಿದ್ದರು. ಬೋಳು ತಲೆ, ಕುರುಚಲು ಗಡ್ಡ. ಆದರೆ ಯಾರಿಗೂ ಉಪದ್ರವ ಮಾಡುವುದಾಗಲೀ, ಹೆದರಿಸುವುದಾಗಲೀ ಮಾಡಿದವರಲ್ಲ. ನಾವು ಹಾಲಾಡಿ ಶಾಲೆಗೆ ಹೋಗುವಾಗ ಹಿರಿಯಣ್ಣ ನಾಯ್ಕರ ಮನೆಯಲ್ಲಿ ನಮ್ಮ ಮಧ್ಯಾಹ್ನದ ಬುತ್ತಿಯನ್ನು ಇಟ್ಟು ಹೋಗುತ್ತಿದ್ದೆವು. ಮಧ್ಯಾಹ್ನ ಅಲ್ಲಿಗೇ ಬಂದು ಊಟ ಮಾಡಿ ಹೋಗುವುದಿತ್ತು. ಆ ಹಿರಿಯಣ್ಣ ನಾಯ್ಕರ ಮನೆಯ ಎದುರಿಗೇ ಅವರ ಜವುಳಿ ಅಂಗಡಿ ಇತ್ತು. ಅವರೂ ನಮ್ಮ ಅಪ್ಪಯ್ಯನ ಯಕ್ಷಗಾನದ ಅಭಿಮಾನಿಗಳು. ಅನುಭವಿಗಳು. ನಾವು ಚಿಕ್ಕವರಿರುವಾಗ ಅಲ್ಲಿಯೇ ಅಪ್ಪಯ್ಯನ ಜೊತೆಗೆ ಹೋಗಿ ಬಟ್ಟೆ ತೆಗೆದು ಅದೇ ಅಂಗಡಿಯ ಎದುರು ಇರುವ ಅಚ್ಚುತ ಎಂಬವರಲ್ಲಿ ಅಳತೆ ಕೊಟ್ಟು ಅಂಗಿ ಚೆಡ್ಡಿ ಹೊಲಿಸುತ್ತಿದ್ದೆವು.
 ಈ ರಾಮಣ್ಣ ಶೆಟ್ರ ಮನೆ ಅಲ್ಲಿಯೇ ಎಲ್ಲೋ ಹತ್ತಿರದಲ್ಲಿ ಇದ್ದು ಹೆಚ್ಚಾಗಿ ಅಲ್ಲಿಯೇ ಆಚೆ ಈಚೆ ರಸ್ತೆಯಲ್ಲಿ ತಮ್ಮಷ್ಟಕ್ಕೇ ಮಾತಾಡಿಕೊಳ್ಳುತ್ತಾ ತಿರುಗಾಡುತ್ತಿದ್ದರು. ಅವರು ಹೆಚ್ಚು ಹೇಳುತ್ತಿದ್ದುದು ಹಾಲಾಡಿ ಮೇಳದ ಬಗ್ಗೆಯೇ. ಹ್ವಾಯ್ ನಿಮ್ಗ್ ಗೊತ್ತಿತ್ತಾ ? ಹಾಲಾಡಿ ಮೇಳ ಮುಂದಿನ ವರ್ಷ ಏಳತ್ತೆ. ಎನ್ನುವುದು ತಮ್ಮಷ್ಟಕ್ಕೆ. ನಮ್ಮ ಅಜ್ಜಯ್ಯ ಇರುವ ಕಾಲದಲ್ಲಿ ಹಾಲಾಡಿ ಮೇಳ ಇತ್ತಂತೆ. ಅಮೇಲೆ ಅದು ಏನೋ ಕಾರಣದಿಂದ ನಿಂತು ಹೋಗಿತ್ತು. ಆದರೆ  ಶೆಟ್ರು ಹಾಲಾಡಿ ಮೇಳ ಮುಂದಿನ ವರ್ಷ ಏಳುತ್ತದೆ ಎಂದು ಆಗಾಗ ಹೇಳುತ್ತಿದ್ದುದು ನಮಗೆ ತಮಾಷೆ.  ನಾವೂ ಅವರು ಎದುರಾದರೆ ಸಾಕು “ಹ್ವಾಯ್ ಹಾಲಾಡಿ ಮೇಳ ಏಳತ್ತಾ ಈ ವರ್ಷ? ಅಂತ ಕೇಳುವುದು. ಅವರು “'ಹೌದು. ಈ ವರ್ಷ ತಿರುಗಾಟ ಆಗೀಯೇ ಸಿದ್ದ' ಅಂತ. ನಾವು “ಕಲಾವಿದರು ಯಾರ್ಯಾರು ಮರ್ರೆ?  ಅಂದರೆ ಅವರು “ಯಾರ ಯಾರದೋ ಹೆಸರು ಹೇಳುತ್ತಾ ಮುಂದೆ ಹೋಗಿಯಾಯಿತು. ಪಾಂಡೇಶ್ವರ ಪುಟ್ಟ, ಕೊಳ್ಕೆಬೈಲ್ ಶೀನ, ಬಣ್ಣದ ಕುಷ್ಟ, ಕೊಕ್ಕರ್ಣೆ ನರಸಿಂಹ, ಮಾರ್ವಿ ಹೆಬ್ಬಾರ್ರು, ಅಂಪಾರ್ ವೈದ್ಯರು ಹೀಗೆ, ಅವರು ಹೇಳುವ ಕಲಾವಿದರಲ್ಲಿ ಕೆಲವರು ಆಗಲೇ ವಯಸ್ಸಾಗಿ ಸತ್ತೂ ಹೋಗಿಯಾಗಿತ್ತು. ನಮಗೆ ತಮಾಷೆ. ಹಾಲಾಡಿ ಮೇಳ ನಿಂತಿದ್ದರಿಂದಲೇ ಅವರಿಗೆ ತಲೆ ಕೆಟ್ಟಿತು ಅಂತ ಹೇಳುತ್ತಿದ್ದರು. ಆದರೆ ಅವರು ಈಗ ಇಲ್ಲದಿರಬಹುದು. ಯಾಕೆಂದರೆ ಅವರು ಆಗಲೇ ತುಂಬಾ ಮುದುಕರಾಗಿದ್ದರು. ಆದರೆ ಅಚ್ಚರಿ ಎಂದರೆ ಅವರ ಕನಸಿನ ಹಾಲಾಡಿ ಮೇಳ ಕೆಲವರ ಮುತುವರ್ಜಿಯಿಂದ ಪುನಹ ಪ್ರಾರಂಭವಾಗಿಯೇ ಬಿಟ್ಟಿತು. ಈಗಲೂ ಅದು ಯಶಸ್ವಿಯಾಗಿ ತಿರುಗಾಟ ಮಾಡುತ್ತಿದೆ. ಅವರು ಈಗ ಇದ್ದಿದ್ದರೆ ಎಷ್ಟು ಸಂತೋಷ ಪಡುತ್ತಿದ್ದರೋ ಏನೋ. ಅಥವ ಅವರ ಹುಚ್ಚೂ ಬಿಟ್ಟುಹೋಗುತ್ತಿತ್ತೋ ಯಾರಿಗೆ ಗೊತ್ತು.
ಆಚೆ ಮನೆಯ ಸುಬ್ರಾಯ ಭಟ್ರ ಮನೆಯಲ್ಲಿ ಮಾತ್ರ ರೇಡಿಯೋ ತಂದಿದ್ದರು. ಪ್ರತೀ ಬುಧವಾರ ರಾತ್ರಿ, ಶುಕ್ರವಾರ ಸಂಜೆ ಅದರಲ್ಲಿ ಯಕ್ಷಗಾನ ಕಾರ್ಯಕ್ರಮ ಬಿತ್ತರವಾಗುತ್ತಿತ್ತು. ನಮ್ಮ ಮನೆಯಲ್ಲಿ ರೇಡಿಯೋ ಇಲ್ಲವಾದ್ದರಿಂದ ಅದನ್ನು ಕೇಳಲು ನಮ್ಮ ಬಿಡಾರ ಅಲ್ಲಿಗೆ ಹೋಗುತ್ತಿತ್ತು.
ಶಾಲೆಯಿಂದ ಬಂದ ಕೂಡಲೇ ಚಾವಡಿಯ ಬಲಬದಿಯ ಗೋಡೆಗೆ ಹೊಡೆದ ಮೊಳೆಗೆ ಚೀಲ ಸಿಕ್ಕಿಸಿ ಡ್ರೆಸ್ ಬದಲಾಯಿಸಿ ಮುಂದಿನ ಕೆಲಸ. ವಿದ್ಯುತ್ ಇರಲಿಲ್ಲ. ಚಿಮಣಿ ದೀಪದ ಸುತ್ತಲೂ ಕುಳಿತು ಓದುತ್ತಿದ್ದೆವು. ಮನೆಯಲ್ಲಿ ದೊಡ್ಡವರು ಕತ್ತಲಲ್ಲಿ ಕುಳಿತು ಮಾತಾಡುವಾಗ ಅವರ ಸ್ವರ ಎಲ್ಲಿಂದಲೋ ಕೇಳುತ್ತಿರುವಂತೆ ಭಾಸವಾಗುತ್ತಿತ್ತು. ಬರೆಯಲು ಜಗಲಿಯಲ್ಲಿ ಕೂತು ಚಾವಡಿಯ ಮೇಲೆ ಸ್ಲೇಟ್ ಇಟ್ಟು ಬರೆಯುವುದೂ ಪುಸ್ತಕ ಓದುವುದೂ ಮಾಡುತ್ತಿದ್ದೆವು. ರಾತ್ರಿ ಬೇಗ ಊಟ, ನಿದ್ದೆ. ಚಿಮಣಿ ಎಣ್ಣೆಯ ದೀಪ ಆದುದರಿಂದ ಚಿಮಣಿ ಎಣ್ಣೆ ಉಳಿಸಲು ಬೇಗ ಮಲಗುತ್ತಿದ್ದೆವು. ಚಾವಡಿಯಲ್ಲಿ ಎಲ್ಲರೂ ಮಲಗುವುದರಿಂದ ನಿದ್ದೆ ಬರುವವರೆಗೆ ಅದೂ ಇದೂ ಮಾತಾಡುತ್ತಾ ಮಲಗುತ್ತಿದ್ದೆವು. ನೆಂಟರು ಯಾರಾದರೂ ಬಂದಿದ್ದರೆ ರಾತ್ರಿ ಹನ್ನೆರಡು, ಒಂದು ಗಂಟೆಯವರೆಗೂ ಅವರ ಮಾತುಕತೆ ಕತ್ತಲಲ್ಲೇ ನಡೆಯುತ್ತಿತ್ತು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ