ಗುರುವಾರ, ಸೆಪ್ಟೆಂಬರ್ 14, 2017

ನನ್ನೊಳಗೆ
ಭಾಗ 1
ನಾನು ಹುಟ್ಟಿದ್ದು ಹಾಲಾಡಿಯಿಂದ ಸುಮಾರು ಮೂರು ಮೂರುವರೆ ಮೈಲಿ ದಕ್ಷಿಣಕ್ಕೆ ಇರುವ ಚೇರಿಕೆ ಎಂಬ ಊರಿನಲ್ಲಿ. ಚೇರಿಕೆ ಎಂದರೆ ಒಂದು ಗ್ರಾಮದ ಹೆಸರಲ್ಲ. ಅದೊಂದು ಹತ್ತಾರು ಮನೆಗಳಿರುವ ಸಣ್ಣ ಪ್ರಾಂತ್ಯ ಅಷ್ಟೆ. ನಮ್ಮದು ಹಾಲಾಡಿ ಗ್ರಾಮವೆ. ನಮ್ಮ ಒಂದೊಂದು ಮನೆಗೂ ಒಂದೊಂದು ಹೆಸರು ಕೆಳಮನೆ, ಉಪಾಯ್ದರ ಬೆಟ್ಟು, ಕೊಮೆ, ಮೇಲ್ಚೇರ್ಕಿ, ಮುಧೂರಿ, ಮುಡಾರಿ, ಗಾಂದಾಡಿ ಹೀಗೆ. ಮಧ್ಯ ಉದ್ದಕ್ಕೆ ದೊಡ್ಡ ಬೈಲು. ಅದರ ಎಡದ ಬದಿಯಲ್ಲಿ ಉದ್ದಕ್ಕೆ ಹೊಳೆ. ಆಚೆ ಈಚೆ ಬೆಟ್ಟಗಳು. ಅಲ್ಲಿ ಒಂದು ಕಡೆ, ದಕ್ಷಿಣದ ಎತ್ತರ ಜಾಗದಲ್ಲಿ ತಮ್ಮಯ್ಯ  ಭಟ್ರ ಮನೆ. ಅದರ ಹಿಂದಿನ ಭಾಗದಲ್ಲಿರುವುದೇ ನಮ್ಮ ಮನೆ. ನಮ್ಮ ಮನೆಯ ದಕ್ಷಿಣಕ್ಕೆ ಎತ್ತರ ಜಾಗದಲ್ಲಿ ಗದ್ದೆಗಳು, ತೆಂಗು ಅಡಿಕೆ ತೋಟ, ತುದಿಯಲ್ಲಿ ಒಂದು ಬತ್ತದೇ ಇರುವ ದೊಡ್ಡ ಕೆರೆ. ಅದರಿಂದ ಆಚೆ ಮತ್ತೆ ದಟ್ಟವಾದ ಹಾಡಿ. ಆ ಕೆರೆಯ ಪಕ್ಕದಲ್ಲಿನಮ್ಮ ಕೆಲಸದ ಆಳು, ಬೆಳ್ಳ ನಾಯ್ಕನ ಮನೆ. ಅಲ್ಲಿಯೇ ಇನ್ನೊಂದು ಬದಿ, ನಮ್ಮ ತೆಂಗಿನ ತೋಟದ ಮಧ್ಯೆ ಕೊಮೆ ಬಚ್ಚಿಯ ಮನೆ. ಮೇಲು ಬದಿಯ ಮಂಗ, ಕಾಡು ಪ್ರಾಣಿಗಳಿಂದ ನಾವು ಬೆಳೆಸಿದ ಭತ್ತ ತೋಟ ಕಾಯಲಿಕ್ಕೂ ಆಯ್ತು  ಅಂತ ಬೆಳ್ಳನ ಮನೆ, ಇದ್ದಿರಬೇಕು. ಆ ಬೆಳ್ಳನ ಮನೆ ಈಗ ಇಲ್ಲ. ಅವನ ಸಂಸಾರ ದೊಡ್ಡದಾಗಿ ಹತ್ತಿರದ ಗುಡ್ಡೆಯಲ್ಲಿ ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾನೆ. ಒಟ್ಟಾರೆ ಎಲ್ಲೆಲ್ಲೂ ಹಸಿರು ಕಾಣುವ ಜಾಗ. ಗುಡ್ಡ, ಮರಗಳು

 ಆದರೆ ನನ್ನ ಅಪ್ಪಯ್ಯನ ಹೆಸರಿನ ಹಿಂದೆ ಚೇರಿಕೆ ನಾರ್ಣಪ್ಪ ಉಪ್ಪೂರರು ಎಂದು ಹಾಕಿಕೊಳ್ಳುವುದಿಲ್ಲ. ಯಾಕೆಂದರೆ ನಾವು ಮೂಲದಲ್ಲಿ ಇಲ್ಲಿ ಇದ್ದವರಲ್ಲ. ನನ್ನ ಅಜ್ಜಯ್ಯ ಶ್ರೀನಿವಾಸ ಉಪ್ಪೂರರು, ಈಗಿನ ನಮ್ಮ ಮನೆಯಿಂದ ನಾಲ್ಕು ಮೈಲಿ ಪಶ್ಚಿಮಕ್ಕಿರುವ ಕುದುರುಮನೆ ಎಂಬ ಮನೆಯಿಂದ ಅಲ್ಲಿ ಇದ್ದಾಗ, ಸಾಲ ಸೋಲ ಮಾಡಿಕೊಂಡು ಅದನ್ನು ತೀರಿಸಲು ಅಸಾಧ್ಯವಾಗಿ ಮನೆ ಆಸ್ತಿ ಮಾರಿ, ಈಗಿನ ಚೇರಿಕೆಯ ಮನೆಯ ಪಕ್ಕದ ತಮ್ಮಯ್ಯ ಭಟ್ಟರಿಂದ ಈಗಯಿರುವ ಭೂಮಿಯನ್ನು ಭೋಗ್ಯಕ್ಕೆ ಕೊಂಡು ಇಲ್ಲಿಗೆ ವಲಸೆ ಬಂದರು. ಆಗ ವಾಸಕ್ಕೆ ಮನೆ ಇಲ್ಲವಾಗಿ, ತಮ್ಮಯ್ಯ ಭಟ್ಟರ ಮನೆಯ ಒಂದು ಬದಿಯ ಓರಿಯಲ್ಲಿಯೇ ಮೊದಲು ಬಿಡಾರ ಮಾಡಿ, ನಂತರ ಪಕ್ಕದಲ್ಲಿ ಒಂದು ಸ್ವಂತ ಮನೆಯನ್ನು ಕಟ್ಟಿಕೊಂಡರು,

 ಆದರೆ ಅವರ ಹೆಸರಿನ ಆದಿಯಲ್ಲೂ ಮಾರ್ವಿ ಶ್ರೀನಿವಾಸ ಉಪ್ಪೂರರು ಎಂದೇ ಬರೆದು ಕೊಳ್ಳುತ್ತಿದ್ದು, ಮೂರು ಮೈಲಿ ದಕ್ಷಿಣಕ್ಕಿರುವ ಮಾರ್ವಿಗೂ ನಮ್ಮ ಹೆಸರಿನ ಇನಿಶಿಯಲ್ ಗೂ ಸಂಬಂಧ ಕಲ್ಪಿಸಹೋದರೆ, ಹಿಂದೆ ಮಾರ್ವಿಯ ವಿಶ್ವೇಶ್ವರ ದೇವಸ್ಥಾನದ ಪಕ್ಕದ ನಾಗಬನದ ಹತ್ತಿರ ನಮ್ಮ ಪೂರ್ವಿಕರು ಮನೆಕಟ್ಟಿ ವಾಸವಾಗಿ ಇದ್ದರು ಎಂದು ಹಿರಿಯರು ಹೇಳುತ್ತಾರೆ. ಜಾಗದಲ್ಲಿ ಈಗಲೂ ಒಂದು ಬಾವಿ, ಅರೆಯುವ ಕಲ್ಲು ಇತ್ಯಾದಿ ಇದ್ದ ನೆನಪು ಹಾಗೂ ನಮ್ಮ ದಾಯಾದಿಗಳಾದ ರಾಮಚಂದ್ರ ಉಪ್ಪೂರರು ಅಲ್ಲಿ ಇದ್ದು, ಈಗ ಅವರ ಮಗ, ಮೊಮ್ಮಕ್ಕಳು ಅಲ್ಲಿಯೇ ಇದ್ದಾರೆ. ಆದ್ದರಿಂದ ನಾವು ಎಲ್ಲಿಂದ ಮಾರ್ವಿಗೆ ಬಂದೆವು ಎಂದೂ, ಮತ್ತು ಅಲ್ಲಿಂದ ಏಕೆ ಊರು ಬಿಟ್ಟು ಹೋದೆವು ಎಂದು ಯಾರಿಗೂ ಗೊತ್ತಿಲ್ಲ.

ಆದರೆ ನಮ್ಮ ಹಿರಿಯರು ಹೇಳುವ ಪ್ರಕಾರ ಬಹಳ ಹಿಂದೆ ನಮ್ಮ ಪೂರ್ವಿಕರಿಗೆ ಇಡೀ ಮಾರ್ವಿ, ಹೆಸ್ಕುಂದ ಎನ್ನುವ ಎರಡು ದೊಡ್ಡ ಊರಿನ ಪಾರುಪತ್ಯವೇ ಇದ್ದು ತುಂಬಾ ಶ್ರೀಮಂತರಾಗಿದ್ದೇವಂತೆ. ಆಗ ವಿಷಯಲಂಪಟರಾದ ಅಣ್ಣತಮ್ಮಂದಿರು ತಮ್ಮ ಶ್ರೀಮಂತಿಕೆಯನ್ನು ಹಾಳುಮಾಡಿದರು ಎನ್ನುತ್ತಾರೆ. ಅಣ್ಣನು ಲೆಕ್ಕ ಬರೆಯುವ ಕರಣಿಕರಾದ ಹೆಗಡೆಯವರಲ್ಲಿ ಲೆಕ್ಕ ಬರೆಸಿ ಹಣಕೊಡಲು ಹೇಳಿ, ಪಡೆದುಕೊಂಡು, ಬೆಳಿಗ್ಗೆ ಕುದುರೆಯೇರಿ ಬಸ್ರೂರಿಗೆ ಸೂಳೆಯ ಮನೆಗೆ ಹೊರಟರೆ, ತಮ್ಮನಾದವನು ಅಣ್ಣನಿಗಿಂತ ನಾನೇನು ಕಮ್ಮಿ ಎಂದು ಅದೇ ಕರಣಿಕರಿಂದ, ಲೆಕ್ಕಕ್ಕೆ ಬರೆಸಿ ಹಣ ಪಡೆದು ಬಾರ್ಕೂರಿನ ಸೂಳೆಯ ಮನೆಗೆ ಹೋಗುತ್ತಿದ್ದನಂತೆ. ಲೆಕ್ಕ ಬರೆಯುವ ಕರಣಿಕರಾದ ಹೆಗಡೆಯವರು ದಿನಗಳೆದಂತೆ ಶ್ರೀಮಂತರಾಗುತ್ತಾ ಹೋದರೆ  ಲೆಕ್ಕಬಾರದ ಅಣ್ಣತಮ್ಮಂದಿರು ಡೌಲು ಮಾಡಿ ದಿವಾಳಿಯಾಗಿ ಊರುಬಿಟ್ಟರು ಎಂಬುದು ಕತೆ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ