ಶುಕ್ರವಾರ, ಸೆಪ್ಟೆಂಬರ್ 29, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 17

ಇನ್ನೊಬ್ಬ ಶುಭಕರ ಶೆಟ್ಟಿ (ಹೆಸರು ಬೇರೆ) ಅಂತ ಇದ್ದ. ಅವನು ಮಾತು ಮಾತಿಗೆ “ನಾನು ದೇವರನ್ನು ನಂಬುವುದಿಲ್ಲ” ಅನ್ನುತ್ತಿದ್ದ. ನಾನು “ಹೌದೌದು ಎಲ್ಲರೂ ಹೇಳುವುದು ಹಾಗೆಯೇ. ಆದರೆ ಪ್ರಸಂಗ ಬಂದರೆ “ಓ ದೇವ್ರೇ ನೀನೇ ಕಾಪಾಡು ಅಂತಾರೆ” ಅನ್ನುತ್ತಿದ್ದೆ. ಅವನು “ನಾನು ಹಾಗೆ ಹೇಳುವವನೇ ಅಲ್ಲ ನನಗೆ ದೇವರ ಹೆದರಿಕೆಯೇ ಇಲ್ಲ” ಎನ್ನುವನು. ಅವನು ಪದೇಪದೇ ಹಾಗೆ ಹೇಳುವಾಗ ನನಗೆ ಒಮ್ಮೆ ಸಿಟ್ಟೇ ಬಂದು ಬಿಟ್ಟಿತು. ಒಂದು ಸಲ “ಹಾಗಾದರೆ ಪರೀಕ್ಷೆ ಮಾಡುವನ?” ಎಂದೆ. ಅವನು ಒಪ್ಪಿದ. ಅವನನ್ನು ಬಾ ಎಂದು  ಎಳೆದುಕೊಂಡೇ ಕಾಲೇಜಿನಿಂದ ಹಿಂದಿನ ಹಾಡಿಯಲ್ಲಿರುವ ಒಂದು ಮರದ ಬುಡದಲ್ಲಿರುವ ನಾಗಬನಕ್ಕೆ ಕರೆದುಕೊಂಡು ಹೋದೆ, ಅಲ್ಲಿ ಒಂದು ನಾಗನ ಕಲ್ಲನ್ನು ತೋರಿಸಿ “ಹಾಗಾದರೆ ಇದನ್ನು ಮುಟ್ಟು ನೋಡುವ” ಅಂದೆ. ಅವನು ಹೆದರಲೇ ಇಲ್ಲ!. “ಏನಾಗುತ್ತದೆ?” ಎಂದು ಸೀದಾ ಹೋಗಿ ಆ ನಾಗನ ಕಲ್ಲನ್ನು ಮುಟ್ಟಿದ್ದೇ ಅಲ್ಲದೇ ಅದನ್ನು ಸವರುತ್ತಾ ಕುಳಿತ! ನನಗೆ ಆಶ್ಚರ್ಯ, ಜೊತೆಗೆ ಹೆದರಿಕೆ. ಅವನು ಅಷ್ಟು ಧೈರ್ಯ ಮಾಡುತ್ತಾನೆ ಎಂದು ನಾನು ಎಣಿಸಿರಲಿಲ್ಲ. ಅವನಿಗೆ ಏನಾದರೂ ಆದರೆ!, ನಾಗರ ಹಾವು ಎದ್ದು ಬಂದು ಕಚ್ಚಿದರೆ! ಅಂತ. ಇಲ್ಲ. ಹಾಗೆ ಏನೂ ಆಗಲಿಲ್ಲ. ನನಗೆ ಒಳಗೊಳಗೆ ಭಯ. ಯಾಕೆಂದರೆ ನಾನು ದೇವರನ್ನು ನಂಬುವವನು. ಮಡಿಮೈಲಿಗೆಯ ಬಗ್ಗೆ ತಿಳಿದವನು. ಅವನೊಂದಿಗೆ ಸುಮ್ಮನೇ ಮರಳಿ ಕಾಲೇಜಿಗೆ ಬಂದೆ. ತಕ್ಷಣ ನನಗೆ ಒಂದು ಕತೆ ನೆನಪಾಯಿತು.

ನಮ್ಮ ಹಾಲಾಡಿ ಹಬ್ಬ ಒಂದು ಕಾಲದಲ್ಲಿ ತುಂಬಾ ವಿಜೃಂಭಣೆಯಿಂದ ನಡೆಯುತ್ತಿತ್ತಂತೆ. ಒಮ್ಮೆ ಹಬ್ಬದ ದಿನ ಅಲ್ಲಿಯ ತೇರನ್ನು ಎಳೆಯುವಾಗ ಯಾರೋ ಮೈಲಿಗೆಯವರು ಮಿಳಿಯನ್ನು ಮುಟ್ಟಿ ಎಳೆದರು. ಅದು ದೇವರಿಗೆ ಗೊತ್ತಾಯಿತು. ಆಗ ರಥ ಒಮ್ಮೆಲೆ ಗಡಗಡ ನಡುಗಿ ಬರಬರನೇ ತನ್ನಷ್ಟಕ್ಕೇ ನಡೆದು ರಭಸದಿಂದ ಅಲ್ಲಿಯೇ ಹತ್ತಿರವಿದ್ದ ವಾರಾಹಿ ನದಿಯ ಬ್ರಹ್ಮ ಗುಂಡಿಗೆ ಪರಿವಾರದೊಂದಿಗೆ ಹೋಗಿ ಬಿತ್ತಂತೆ. ಗುಂಡಿಯ ಒಳಗೆ ಹುಡುಕಿಸಿದರೂ ಸಿಗಲಿಲ್ಲ. ಈಜು ತಜ್ಞರಿಂದ ಮುಳುಗು ಹಾಕಿಸಿ ಎಷ್ಟು ಹುಡುಕಿಸಿದರೂ ಪ್ರಯೋಜನವಾಗಲಿಲ್ಲ. ಎಷ್ಟು ಹರಕೆ ಹೊತ್ತರೂ ಹೊಳೆಯಲ್ಲಿ ಹುಣಿಸೇಹಣ್ಣು ತೊಳೆದ ಹಾಗಾಯಿತು. ತೇರು ಸಿಗಲೇ ಇಲ್ಲವಂತೆ. ಅದರ ಅವಶೇಷವೂ ಸಿಗಲಿಲ್ಲ. ಆದರೆ  ಮರು ವರ್ಷದಿಂದ ಹಿಡಿದು ಈಗಲೂ ಹಾಲಾಡಿ ಹಬ್ಬದ ದಿನ ಮಧ್ಯಾಹ್ನ ಆ ಬ್ರಹ್ಮ ಗುಂಡಿಯ ಬಳಿಯ ನೀರಿಗೆ ಕಿವಿ ಆನಿಸಿ ಕೇಳಿದರೆ ಶಂಖ ಜಾಗಟೆ ಬಾರಿಸುವುದೂ ಗಟ್ಟಿಯಾಗಿ ಮಂತ್ರ ಹೇಳುವುದೂ ಕೇಳುತ್ತದೆಯಂತೆ. ಅಲ್ಲಿ ಈಗಲೂ ಹಬ್ಬ ಆಚರಣೆಯಾಗುತ್ತಿದೆ ಎಂದು ಪ್ರತೀತಿ. ಇರಲಿ

ನಾನು ಓದುತ್ತಿರುವಾಗ ಶಂಕರನಾರಾಯಣ ಕಾರಂತರು ಎಂಬವರು ನಮ್ಮ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರು. ಗೋಪಾಲ ಶೆಟ್ಟಿಗಾರ್ ಎನ್ನುವವರು ಕ್ರಾಫ್ಟ್ ಟೀಚರ್ ಆಗಿದ್ದರೆ, ಬಾಲಕೃಷ್ಣ ಶೆಟ್ಟಿ ಎನ್ನುವವರು ಪಿಟಿ ಟೀಚರ್ ಮತ್ತು ಕೆ.ವಿ.ಐತಾಳ್, ಸುಬ್ರಾಯ ಹಂದೆ, ಸುಬ್ರಮಣ್ಯ ಜೋಷಿ, ಸೀತಾರಾಮ ಮಧ್ಯಸ್ಥ, ಭೋಜರಾಜ ಶೆಟ್ಟಿ, ವಾದಿರಾಜ ಭಟ್, ಜಿ ರಾಮರಾಯಾಚಾರ್ಯ, ದೇವೇಗೌಡ, ಗುಣಗರು, ಮಹೇಂದ್ರಕುಮಾರ್, ಜನಾರ್ದನ ಎಸ್. ಮೊದಲಾದವರು ಪ್ರಾಧ್ಯಾಪಕರಾಗಿದ್ದರು. ಇನ್ನು, ಜೊತೆಯಲ್ಲಿ ಓದಿದವರು ನಲವತ್ತು ಐವತ್ತು ಮಂದಿ ಇದ್ದು ಅವರ ಹೆಸರನ್ನು ಹೇಳಲು ಹೋಗುವುದಿಲ್ಲ. ಅಕಸ್ಮಾತ್ ಬಿಟ್ಟುಹೋದರೆ ಬಿಟ್ಟುಹೋದವರು ಏಯ್ ನನ್ನನ್ನು ಮರೆತೇ ಬಿಟ್ಟಿಯಾ ಅಂದರೆ ಕಷ್ಟ. ಹಾಗಾಗಬಾರದು. ಇರಲಿ.

ನಾನು ಎಸ್. ಎಸ್. ಎಲ್. ಸಿ. ಮುಗಿಸಿ, ಅದೇ ಕಾಲೇಜಿನಲ್ಲಿ ಪಿಯುಸಿಗೆ ಸೇರಿ ಪಿ.ಸಿ.ಎಂ.ಬಿ. ತೆಗೆದುಕೊಂಡೆ. ನನಗೆ ಮುಂದೆ ಇಂತದ್ದೇ ಆಗಬೇಕು ಎಂಬ ಗುರಿ ಇರಲಿಲ್ಲವೆಂದು ಕಾಣುತ್ತದೆ. ನಾನು ಚಿತ್ರವನ್ನು ಚೆನ್ನಾಗಿ ಬಿಡಿಸುತ್ತಿದ್ದೆ ಎಂದು ಯಾರೋ ಹೇಳಿದರು ಎಂದು ಬಯಾಲಜಿ ತೆಗೆದುಕೊಂಡೆ ಎಂದು ನೆನಪು. ಅದರ ಜೊತೆಯಲ್ಲಿ ಇಂಗ್ಲೀಷ್ ಮತ್ತು ಕನ್ನಡ ಅಥವ ಹಿಂದಿ ಭಾಷೆಯ ಎರಡು ಸಬ್ಜಕ್ಟ್ ತೆಗೆದುಕೊಳ್ಳಬೇಕಾಗಿತ್ತು. ಹಿಂದಿ ಸುಲಭ, ಕನ್ನಡದಲ್ಲಿ ಮಾರ್ಕು ಪಡೆಯುವುದು ಕಷ್ಟ ಎಂದು ನನಗೆ ಸ್ನೇಹಿತರು ಹೇಳಿದರು ಎಂದು ಹಿಂದಿಯನ್ನು ಆರಿಸಿಕೊಂಡೆ. ಆದರೆ ಮೊದಲೇ ಹೇಳಿದಂತೆ ನಾನು ಹಿಂದಿಯನ್ನು ಎಸ್. ಎಸ್ .ಎಲ್. ಸಿ. ಯಲ್ಲಿ ಹದಿಮೂರು ಮಾರ್ಕು ಬರಲು ಎಷ್ಟು ಬೇಕೋ ಅಷ್ಟು ಮಾತ್ರ ಓದಿಕೊಂಡವನು.

ಆಗ ಮಹೇಂದ್ರಕುಮಾರ್ ಎಂಬವರು ಉತ್ತರ ಕರ್ನಾಟಕದ ಕಡೆಯ ಒಬ್ಬ ಲೆಕ್ಚರರು ಹಿಂದಿಯ ಪಾಠ ಕಲಿಸಲು ಇದ್ದರು. ಅವರು ಪಾಠವನ್ನು ಓದುತ್ತಾ ಹೋಗಿ ಒಂದು ಪಿರಿಯೆಡ್ನಲ್ಲಿ ಮೂರು ನಾಲ್ಕು ಪಾಠವನ್ನು ಒಮ್ಮೆಲೇ ಮಾಡಿಬಿಟ್ಟು, “ಏನಾದರೂ ಡೌಟ್ ಇದ್ದರೆ ಕೇಳಿ” ಎಂದು ಪಾಠಮುಗಿಸಿ ಸುಮ್ಮನಾಗುತ್ತಿದ್ದರು. ಅರ್ಥವಾಗದೇ ಇದ್ದರೂ ಯಾರೂ ಪ್ರತಿ ಮಾತನ್ನಾಡದೇ ಸುಮ್ಮನಿದ್ದು, ಕೊನೆಗೆ ಬಾಯಿಪಾಠ ಹೊಡೆದರೆ ಸೈ ಎಂದು ನಿರ್ಧರಿಸಿ ಸುಮ್ಮನಾಗುತ್ತಿದ್ದರು. ಮರುದಿನ ನಾವು ಅದನ್ನೇ ಓದಬೇಕಿತ್ತು. ನನಗಂತೂ ಹಿಂದಿ ಕಷ್ಟವಾದ್ದರಿಂದ  ಅರ್ಥವೇ ಆಗುತ್ತಿರಲಿಲ್ಲ. ಒಮ್ಮೆ ಸಿಟ್ಟು ಬಂದು ಅವರು “ಏನಾದರೂ ಡೌಟ್ ಉಂಟಾ?” ಅಂದಕೂಡಲೇ. ಎದ್ದು ನಿಂತು “ಎಲ್ಲಾ ಡೌಟೇ ಸರ್ ನನಗೆ. ಏನೂ ಅರ್ಥ ಆಗಲಿಲ್ಲ. ನೀವು ಹೀಗೆ ಹರಕೆ ತೀರಿಸಿದರೆ ನಮಗೆ ಹೇಗೆ ಅರ್ಥವಾಗಬೇಕು? ನೀವು ಪಾಠ ಮಾಡುವುದು ನೋಡಿದರೆ ನಿಮಗೆ ನಮಗೆ ಅರ್ಥವಾಗಬೇಕು ಎಂದು ಇಲ್ಲವೆಂದು ಕಾಣುತ್ತದೆ. ಹೀಗೆ ಬರಿದೇ ಓದುತ್ತಾ ಹೋಗುವ ಕೆಲಸ ನಾವೇ ಮಾಡಬಹುದಲ್ಲ ಸರ್” ಎಂದುಬಿಟ್ಟೆ. ಅವರು ಅದನ್ನು ನಿರೀಕ್ಷಿಸಿರಲಿಲ್ಲ. ತುಂಬಾ ಕೋಪದಿಂದ “ಮತ್ತೆ ಹೇಗೆ ಪಾಠ ಮಾಡಬೇಕು? ನಿನ್ನಿಂದ ನಾನು ಅದನ್ನು ಕಲಿತುಕೊಳ್ಳಬೇಕೇ? ನೀನು ನನಗೆ ಪಾಠಮಾಡಲು ಹೇಳಿಕೊಡುವುದೇ?” ಎಂದು ಹಾರಾಡಿದರು. “ನಾನು ನಿಮ್ಮನ್ನೆಲ್ಲಾ ಸಾಕಿ ಉದ್ಧಾರ ಮಾಡುತ್ತೇನೆ ಎಂದು ಹಣೆಯಮೇಲೆ ಬರೆದುಕೊಂಡು ತಿರುಗಬೇಕೇ?” ಎಂದೂ, ಕೊನೆಯಲ್ಲಿ “ನನಗೇನು? ಹೇಗೆ ಪಾಠ ಮಾಡಿದರೂ ಸಂಬಳ ಬರುತ್ತದೆ. ನಿಮ್ಮ ಹಂಗೇನು?” ಎನ್ನುವ ತನಕವೂ ಮಾತಾಡಿದರು. ಇಡೀ ಕ್ಲಾಸ್ ಮೌನವಾಗಿತ್ತು. ನಾನು ಮತ್ತೆ ಮಾತಾಡಲಿಲ್ಲ. ನನ್ನ ಪಕ್ಕದಲ್ಲಿ ಕುಳಿತವರು “ನೀನು ಹಾಗೆ ಹೇಳಬಾರದಿತ್ತು, ಸುಮ್ಮನಿರು ಕುಳಿತುಕೋ” ಎಂದು ಹೇಳಿದರು. ಆದರೆ ನಾನು ಹೆದರಲಿಲ್ಲ. ಕುಳಿತುಕೊಳ್ಳಲೂ ಇಲ್ಲ. ಕೊನೆಗೆ ಅವರು “ನೋಡು ಉಪ್ಪೂರ್, ನೀನು ಇಷ್ಟು ಹೇಳಿದ ಮೇಲೆ ನಾನು ನಿನಗೊಂದು ಚಾನ್ಸ್ ಕೊಡುತ್ತೇನೆ. ನಿನಗೆ ನನ್ನ ಪಾಠ ಇಷ್ಟ ಆಗದೇ ಇದ್ದರೆ, ಈಗಲೇ ನೀನು ಹೊರಗೆ ಹೋಗಬಹುದು ಮತ್ತು ನಾಳೆಯಿಂದ ಬಾರದೆಯೂ ಇರಬಹುದು. ನಾನು ಯಾರಿಗೂ ಕಂಪ್ಲೆಂಟ್ ಕೊಡುವುದಿಲ್ಲ. ನಿನ್ನಂತವರು ಇಲ್ಲದಿದ್ದರೂ ನನಗೆ ನಷ್ಟವಿಲ್ಲ” ಅಂದರು. ನನಗೆ ಬೇಸರವಾಗಲಿಲ್ಲ. ಧೈರ್ಯ ಎಲ್ಲಿತ್ತೋ, ನನ್ನ ಪುಸ್ತಕವನ್ನು ತೆಗೆದುಕೊಂಡು ಸೀದಾ ಹೊರಗೆ ಬಂದುಬಿಟ್ಟೆ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ