ಭಾನುವಾರ, ಸೆಪ್ಟೆಂಬರ್ 24, 2017



ದಿನೇಶ ಉಪ್ಪೂರ:
*ನನ್ನೊಳಗೆ*

ಭಾಗ 12


ಹುಯ್ಯಾರು ಹಿರಿಯಣ್ಣ ಶೆಟ್ರು ನಮ್ಮ ಊರ ಪಟೇಲರು. ಈಗಿನ ಪ್ರತಾಪಚಂದ್ರ ಶೆಟ್ರ ತಂದೆಯವರು. ಅವರ ಮನೆಯು ಹಯ್ಕಾಡಿ ಎಂಬಲ್ಲಿ ಇತ್ತು. ಪಟೇಲರು ಎಂದರೆ ಅಷ್ಟು ಪ್ರಭಾವಿಗಳು. ಆಸುಪಾಸು ಊರಿನಲ್ಲೂ ಅವರ ಹೆಸರು ಹೇಳಿದರೆ ಜನರು ಹೆದರುತ್ತಿದ್ದರು. ಅಷ್ಟೇ ಗೌರವಿಸುತ್ತಿದ್ದರು. ಒಕ್ಕಲು ಮಸೂದೆಯ ಕಾಲಕ್ಕಿಂತ ಮೊದಲು ಅವರಿಗೆ ನಮ್ಮ ಚೇರಿಕೆ, ಗೋರಾಜಿ, ಕಾಸಾಡಿ, ಹುಯ್ಯಾರು, ಹಯ್ಕಾಡಿ ಅಂತ ಎಲ್ಲಾ ಕಡೆಯಲ್ಲೂ ಗದ್ದೆಯ ಒಡೆತನವಿದ್ದು, ಅದರ ಬೇಸಾಯವನ್ನು ದುಡಿದು ತಿನ್ನುವ ಎಷ್ಟೋ ಒಕ್ಕಲುಗಳಿಂದ ಮಾಡಿಸಿ ಗೇಣಿ ಪಡೆಯುತ್ತಿದ್ದರು. ಎಷ್ಟೋ ಸಂಸಾರಗಳು ಪ್ರಾಮಾಣಿಕವಾಗಿ ದುಡಿದು, ಗೇಣಿ ಸಲ್ಲಿಸಿ ಸುಖ ಕಷ್ಟ ಅವರಲ್ಲಿ ಹೇಳಿ ಅವರೊಂದಿಗೆ ಹಂಚಿಕೊಂಡು ಅವರಿಗೆ ನಿಷ್ಠರಾಗಿ ತೃಪ್ತಿಯಿಂದ ಬಾಳುತ್ತಿದ್ದರು. ಕಷ್ಟವೆಂದು ಅವರ ಬಳಿಗೆ ಹೋದವರು ಯಾರೂ ನಿರಾಶರಾಗಿ ಬಂದದ್ದೇ ಇಲ್ಲ. ಹುಯ್ಯಾರು ಪಟೇಲರು ಅಂದರೆ ಎಲ್ಲರೂ ನಿಯತ್ತಿನಿಂದ ಇರುತ್ತಿದ್ದರು. ಹುಯ್ಯಾರು ಪಟೇಲರು ಹೇಳಿದರು ಅಂದರೆ ಸುಳ್ಳೂ ಸತ್ಯವಾಗುತ್ತಿತ್ತು. “ಅವರು ಹೇಳಿದ್ದಾ, ಹಂಗಾರೆ ಅದೇ ಸಮ” ಎಂದು. ಊರಿನಲ್ಲಿ ಕಳ್ಳತನವೋ ಕೊಲೆಯೋ ಜಗಳವೋ ಆಗಿ ಪೋಲೀಸರು ಬರಬೇಕಾದರೂ ಮೊದಲು ಪಟೇಲರಲ್ಲಿ ಹೋಗಿ ವಿಷಯ ತಿಳಿಸಿ ಅವರ ಅನುಮತಿ ಪಡೆದೇ ಬರಬೇಕಾಗಿತ್ತು. ಸಾಮಾನ್ಯವಾಗಿ ಯಾವ ಕೇಸೂ ಪೋಲೀಸು ಠಾಣೆ, ಅಥವ ಕೋರ್ಟಿಗೆ ಅವರಿಗೆ ತಿಳಿಯದೇ ಹೋಗುತ್ತಿರಲಿಲ್ಲ. ಅವರ ಮನೆಯಲ್ಲಿಯೇ ಊರಿನ ಎಷ್ಟೋ ಗೃಹಕಲಹಗಳು ಇತ್ಯರ್ಥವಾಗುತ್ತಿತ್ತು. ಅವರೇ ಕಾನೂನಾಗಿದ್ದರು. ತಪ್ಪು ಮಾಡಿದವರಿಗೆ, ಕಳ್ಳತನ ಮಾಡಿದವರಿಗೆ ಅವರೇ ಅವರ ಕೆಲಸದ ಆಳುಗಳಿಂದಲೇ ಶಿಕ್ಷೆ ಕೊಡಿಸುತ್ತಿದ್ದರು. ಉದ್ಧಟರನ್ನೊ ತಪ್ಪಿತಸ್ಥರನ್ನು ಚೆನ್ನಾಗಿ ಥಳಿಸಿ, ಅವರ ಮನೆಯ ತೌಡುಕೋಣೆಗೆ ಎರಡುಮೂರು ದಿನಗಳವರೆಗೆ ಕೂಡಿ ಹಾಕುತ್ತಿದ್ದರಂತೆ. ಆಮೇಲೆ ಅಷ್ಟೇ ಉಪಚಾರ ಮಾಡಿ, ಬುದ್ಧಿ ಹೇಳಿ ಕಳಿಸುತ್ತಿದ್ದರು.
ಅಪ್ಪಯ್ಯನೆಂದರೆ ಅವರಿಗೆ ಏನೋ ಆದರ, ಪ್ರೀತಿ. ಮೊದಮೊದಲು ಮನೆಯ ಕಡುಬಡತನದ ಪರಿಸ್ಥಿತಿಯಲ್ಲಿ, ಅವರೇ ಅವರಿವರಿಂದ ವಿಷಯ ತಿಳಿದು, ಅಪ್ಪಯ್ಯನನ್ನು ಅವರ ಮನೆಗೆ ಕರೆಸಿಕೊಂಡು ಅದೂ ಇದೂ ಮಾತಾಡಿಸಿ, “ಏನು ಉಪ್ಪೂರ್ರೆ, ಊಟಕ್ಕೆ ಏನಾದ್ರೂ ಉಳಿಸ್ಕಂಡಿದ್ರ್ಯಾ? ಇಲ್ಯಾ?” ಅಂತ ಕೇಳಿ, ಉಪಚಾರ ಮಾಡಿ, ನಮ್ಮ ಮನೆಗೆ ಆಳಿನ ಮೂಲಕ ಅಕ್ಕಿಮುಡಿಯನ್ನು ಹೊರಿಸಿ ಕಳಿಸಿಕೊಡುತ್ತಿದ್ದರಂತೆ. ನನಗೂ ಅಪ್ಪಯ್ಯನೊಂದಿಗೆ ಪಟೇಲರ ಮನೆಗೆ ಹೋಗಿ ಅವರ ಮನೆಯ ದೊಡ್ಡ ಚಾವಡಿಯಲ್ಲಿ ಕುಳಿತು ಪಟೇಲರು ಬರುವುದನ್ನು ಕಾಯುತ್ತಿದ್ದ ನೆನಪಿದೆ. ಪ್ರಾರಂಭದಲ್ಲಿ ನಮ್ಮ ಮನೆಯೂ ಅವರ ಸಹಾಯವಿಲ್ಲದಿದ್ದರೆ ಕಟ್ಟಲು ಸಾಧ್ಯವೇ ಇಲ್ಲದ ಪರಿಸ್ಥಿತಿಯಿತ್ತು. ನಮ್ಮ ಮನೆಯಲ್ಲಿ ಏನಾದರೂ ದೇವರ ಕಾರ್ಯದ ವಿಶೇಷ ಊಟವಿದ್ದರೆ ಅಥವ ಮದುವೆ, ಉಪನಯನಗಳಲ್ಲಿ,  ಮೊದಲು ಅವರ ಮನೆಗೆ ಹೋಗಿ ಆಮಂತ್ರಣ ಕೊಟ್ಟು ಬರಬೇಕು. ಆಮೇಲೆ ಆ ಕಾರ್ಯಕ್ರಮ ಮುಗಿದ ಮೇಲೂ, ದೇವರ ಪ್ರಸಾದವನ್ನೂ, ಮಾಡಿದ ಸಿಹಿತಿಂಡಿಯನ್ನು ಅವರ ಮನೆಗೆ ಕೊಟ್ಟು ಬರುವ ಕ್ರಮ ಇತ್ತು. ಒಟ್ಟಾರೆ ಅವರು ನಮ್ಮ ಊರಿಗೇ ಅರಸರಂತಿದ್ದರು. ಒಮ್ಮೆ ಬಹಳ ಹಿಂದೆ ಚುನಾವಣೆಯ ಸಮಯದಲ್ಲಿ ನಮ್ಮ ಊರಿನಲ್ಲಿ ಓಪನ್ಓಟ್ ಆಗಿತ್ತು ಎಂದು ಜನ ಹೇಳುತ್ತಿದ್ದ ನೆನಪು. ಅಂದರೆ ಯಾರಿಗೆ ಓಟು ಹಾಕಬೇಕು ಅಂತ ಅವರು ತಿಳಿಸಿದವರಿಗೇ ಅವರ ಎದುರೇ ಕೂತು ಓಟು ಹಾಕಿಸಿದ್ದರು ಎಂದು ಪ್ರತೀತಿ. ಆಗ ನಾವೆಲ್ಲ ಇನ್ನೂ ಸಣ್ಣ ಮಕ್ಕಳು. ಈಗ ಕಾಲವೆಲ್ಲಾ ಬದಲಾಗಿ ಹೋಗಿದೆ. ಜನರಲ್ಲಿ ನಿಷ್ಠೆ ನಿಯತ್ತುಗಳೇ ಮರೆಯಾಗುತ್ತಿದೆ. ಹಣವೊಂದಿದ್ದರೆ ಏನೂ ಮಾಡಲು ಸಾಧ್ಯ ಎಂದು ಭಾವಿಸಿಕೊಳ್ಳುವವರೇ ತುಂಬಿಹೋಗಿದ್ದಾರೆ. ಹೊರತು ವಿಶ್ವಾಸ, ನಂಬಿಕೆ ಇವು ಯಾವುದೂ ಬದುಕಿಗೆ ಅನಿವಾರ್ಯವಲ್ಲವೆಂಬ ಭಾವನೆ ಮನುಷ್ಯನನ್ನು ಆವರಿಸಿದೆ. ಇರಲಿ
ಐದನೆಯ ಕ್ಲಾಸಿಗೆ ಮುದೂರಿ ಶಾಲೆಯಿಂದ ಹಾಲಾಡಿ ಶಾಲೆಗೆ ಸೇರಿದಂತೆಯೇ ನನ್ನ ಮನೆಯೂ ಚೇರಿಕೆಯಿಂದ ಕಲ್ಲಟ್ಟೆಗೆ ವರ್ಗಾವಣೆಯಾಯಿತು, ನನ್ನ ಅತ್ತೆಯ ಮನೆಯಲ್ಲಿ ಯಾರಾದರೂ ಮಕ್ಕಳು ಬೇಕು ಎಂದು, ನನ್ನನ್ನು ಕಲ್ಲಟ್ಟೆಯ ಮನೆಯಲ್ಲಿ ಇರಲು ಹೇಳಿದರು. ಅಲ್ಲಿ ಇರುವವರೆಂದರೆ, ನಾನು, ಆ ಅತ್ತೆ ಮತ್ತು ಚಂದ್ರ ಭಟ್ಟರು, ಅವರ ಹೆಂಡತಿ ಸರಸ್ವತಕ್ಕ ಅವರ ಮಕ್ಕಳು. ನಮ್ಮ ಅಂಗಳದ ಆಚೆ ಬದಿಯಲ್ಲಿ ಲಕ್ಷ್ಮೀನಾರಾಯಣ ಭಟ್ಟರು ಎಂಬ ಪುರೋಹಿತರ ಮನೆ. ಅವರಿಗೆ ಅತ್ತೆಯೇ ಆಶ್ರಯ ಕೊಟ್ಟದ್ದು. ಅದೆಲ್ಲಿಂದಲೋ ನೆಲೆಕೇಳಿಕೊಂಡು ಬಂದ ಅವರಿಗೆ ಕರುಣೆ ತೋರಿ, ಒಂದು ಹುಲ್ಲಿನ ಸೂರನ್ನೂ ಕಟ್ಟಿಸಿಕೊಟ್ಟು ಸಾಗೋಳ್ಳಿಗೆ ಸ್ವಲ್ಪ ಭೂಮಿಯನ್ನೂ ಗೇಣಿಗೆ ಕೊಟ್ಟಿದ್ದರು. ಅವರು ಊರಿನ ಆಚೆಈಚೆ ಮನೆಗಳ ಬ್ರಾಹ್ಮಣರ ಮನೆಯಲ್ಲಿ  ಪೌರೋಹಿತ್ಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರ ಮನೆಯೆಂದರೆ ಎಡಭಾಗದಲ್ಲಿ ಒಂದು ಚಿಕ್ಕ ಅಡಿಗೆ ಮನೆ, ಪಕ್ಕದಲ್ಲಿ ಒಂದು ಚಾವಡಿ. ಅಷ್ಟೆ. ಮಣ್ಣಿನ ನೆಲ ಅದು ಬ್ಯಾಟರಿ ಸೆಲ್ಲಿನ ಒಳಗಿನ ಕಪ್ಪನ್ನೊ ಅಥವ ಕರಿಯನ್ನೋ ಬೆರೆಸಿ ಚೆನ್ನಾಗಿ ಒರೆಯುವ ಕಲ್ಲಿನಿಂದ ಒರೆದು ನಯಗೊಳಿಸಿದ, ಯಾವಾಗಲೂ ಸುಮಾರಾಗಿ ಸೆಗಣಿಯ ವಾಸನೆ ಬೀರುವ ಕಂದು ಬಣ್ಣದ ನೆಲ. ಎದುರುಗಡೆ ಒಂದು ಕಿರು ಅಂಗಳ. ಪಕ್ಕದಲ್ಲೇ ತುಳಸಿ ಗಿಡಗಳ, ದಾಸವಾಳ ಮತ್ತು ಇತರ ಬಣ್ಣಬಣ್ಣದ ಹೂವಿನ ಸಣ್ಣ ತೋಟ. ಒಂದು ತೆಂಗಿನ ಮಡಲಿನಿಂದ ಮಾಡಿದ ದಿಡಕಿಯ ಮರೆ. ಅಡುಗೆಯ ಮನೆಯ ಬಾಗಿಲು ಬಿಟ್ಟರೆ ಮತ್ತೆ ಬಾಗಿಲೇ ಇರಲಿಲ್ಲ. ಚಾವಡಿಯಲ್ಲೇ ಅವರು ಮಲಗುತ್ತಿದ್ದುದು. ದೇವರ ಕೋಣೆಯು ಅಡುಗೆಯ ಮನೆಯ ಒಳಗೆ ಇತ್ತು. ಅವರು ನಮ್ಮ ಮನೆಯ ಮೇಲೆ ಎಷ್ಟು ಅವಲಂಬಿತರಾಗಿದ್ದರೆಂದರೆ ಸ್ನಾನಕ್ಕೆ ಕುಡಿಯುವ ನೀರಿಗೆ ನಮ್ಮ ಮನೆಗೇ ಬರಬೇಕು. ಅವರ ಒಂದು ದನವೂ, ನಮ್ಮ ಮನೆಯ ಹಟ್ಟಿಯಲ್ಲಿ ಇರುವುದು. ಅಲ್ಲಿಗೇ ಅವರೆ ಬಂದು ಅವರ ದನಕ್ಕೆ ಹುಲ್ಲು ಹಾಕುವುದು, ಹಾಲು ಕರೆಯುವುದೂ ಮಾಡುತ್ತಿದ್ದರು. ಸಣ್ಣ ವಯಸ್ಸಿನಲ್ಲಿ ಕೆಲವೊಂದು ಘಟನೆಗಳು ಹೇಗೆ ಮನಸ್ಸಿನಲ್ಲಿ ಹಾಗೆಯೇ ಉಳಿದುಕೊಂಡು ಬಿಡುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಅವರ ಬಗ್ಗೆ  ಒಂದು ಸ್ವಾರಸ್ಯವಾದ ಕತೆ ಹೇಳುತ್ತೇನೆ. 

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ