ಶುಕ್ರವಾರ, ಸೆಪ್ಟೆಂಬರ್ 22, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ ೧೦

ಹೀಗೇ ಮನೆಯಲ್ಲಿ ತಿರುಗಾಡುವಾಗ ಒಮ್ಮೆ ಆಚೆಮನೆ ಮತ್ತು ನಮ್ಮ ಮನೆಯ ಮಧ್ಯ ಭಾಗದಲ್ಲಿ ಇರುವ ಅಂಗಳದ ಮೂಲೆಯಲ್ಲಿ ಒಂದು ಜೊತೆ ಚಪ್ಪಲಿಯನ್ನು ಕಂಡೆ. ಹೊಸದೇನಲ್ಲ. ಯಾರೋ ಮರೆತು ಬಿಟ್ಟಿರಬೇಕು, ಅದು ನಮ್ಮ ಮನೆಯದ್ದಲ್ಲ ಎಂದು ಗೊತ್ತು. ಆದರೂ ಯಾರೋ ಬಿಟ್ಟು ಹೋಗಿದ್ದಾರೆ. ಬಿಳಿ ಚಪ್ಪಲಿ, ಚಂದ ಇತ್ತು. ಕಾಲಿಗೆ ಹಾಕಿಕೊಂಡೆ. ದೊಡ್ಡವರ ಚಪ್ಪಲಿಯಾದ್ದರಿಂದ ಕಾಲು ಮುಂದಕ್ಕೆ ಹೋಗಿ ಹಿಂದಿನ ಭಾಗ ಖಾಲಿ ಉಳಿಯಿತು. ಅದನ್ನು ಕತ್ತರಿಸಿದರೆ ಸರಿಯಾದೀತು ಅಂತ ತಲೆಗೆ ಹೋಯಿತು. ತಡ ಮಾಡಲಿಲ್ಲ. ಅದನ್ನು ಮನೆಗೆ ತಂದು ಚಪ್ಪಲಿಯ ಹಿಂದಿನ ಭಾಗವನ್ನು ಕತ್ತಿಯಲ್ಲಿ ಕಡಿದು ಕತ್ತರಿಸಿ ಹಾಕಿದೆ. ಹಾಕಿ ನೋಡಿದೆ. ನನ್ನ ಮಾಮೂಲಿ ಚಪ್ಪಲಿಗಿಂತ ಅದು ಚಂದ ಇತ್ತಲ್ಲ. ಕುಷಿಯಾಯಿತು. ಹಾಕಿಕೊಂಡು ಚಪ್ಪಲಿಯನ್ನು ನೆಲಕ್ಕೆ ತಾಗಿಸಿ ಜಾರಿಸುತ್ತಾ ತಿರುಗಾಡಲು ಶುರು ಮಾಡಿದೆ. ಅಮ್ಮನೋ, ಯಾರೋ ಅದನ್ನು ಕಂಡವರು “ಅದು ಯಾರದ್ದು ಮಾಣಿ? ಎಲ್ಲಿಂದ ತಂದೆ?” ಎಂದರೆ “ಅಲ್ಲಿ ಬಿದ್ದಿತ್ತಪ” ಎಂದು ಹಾರಿಕೆಯ ಉತ್ತರ ಕೊಟ್ಟೆ.
ಮರುದಿನ ಆಚೆಯ ಮನೆಯ ಸುಬ್ರಾಯ ಭಟ್ರ ಮನೆಯಲ್ಲಿ ಗಲಾಟೆ ಎದ್ದಿತ್ತು. ಅವರ ಹೆಂಡತಿ ಶಖು ಅಕ್ಕನ ಚಪ್ಪಲಿ ಕಾಣೆಯಾಗಿತ್ತು. “ಇಲ್ಲಿಯೇ ಇಟ್ಟಿದ್ದೆ. ಎಲ್ಲಿ ಹೋಯಿತು?” ಅಂತ. ಇದು ನನ್ನ ಎರಡನೆಯ ಅಥವ ಮೂರನೆಯ ಕ್ಲಾಸಿನಲ್ಲಿ ಇರುವಾಗ ನಡೆದದ್ದಿರಬಹುದು. ಆ ಸುಬ್ರಾಯ ಭಟ್ರು ನನ್ನ ಮಾಸ್ಟ್ರು ಕೂಡ ಆಗಿದ್ದರು. ಅವರ ಹುಡುಕಾಟದಲ್ಲಿ ಅದು ನಮ್ಮ ಮನೆಯಲ್ಲಿ ಪತ್ತೆಯಾಯಿತು. ಆದರೆ ಅದನ್ನು ಹಾಕಿಕೊಳ್ಳುವಂತಿರಲಿಲ್ಲ.  ಹಿಂದಿನ ಭಾಗ ಕತ್ತರಿಸಿದ್ದೆನಲ್ಲ. ನಾನು ಏನೂ ತಿಳಿಯದವನಂತೆ ಸುಮ್ಮನೇ ಇದ್ದೆ. ಅಮ್ಮನೇ ಹೇಳಿದಳು “ಅದು ನಮ್ಮ ಮಾಣಿಯ ಕೆಲಸ ಇರ್ಕ್ ಮರ್ರೆ. ಯಾವುದೋ ಮೆಟ್ಟು ಹಾಕಿಕೊಂಡು ತಿರುಗುತ್ತಿತಪ” ಅಂದಳು. ಸರಿ, ಮಾಸ್ಟ್ರಿಂದ ಬುಲಾವ್ ಬಂತು. ನಾನು ಒಮ್ಮೆ ಹೋಗದೇ ತಡಮಾಡಿದರೂ ಕೊನೆಗೆ ಎರಡನೇ ಕರೆ ಬಂದಾಗ ತಪ್ಪಿಸಿಕೊಳ್ಳಲಾರದೇ ಹೋಗಿ ಅವರ ಮುಂದೆ ಪಾಪದವನಂತೆ ತಲೆ ತಗ್ಗಿಸಿ ನಿಂತೆ. ಅವರು ಒಮ್ಮೆ ಜೋರು ಮಾಡಿ “ ಹೌದನ? ನಿನ್ನ ಕೆಲ್ಸವನಾ ಇದು? ಅಷ್ಟೂ ಗೊತ್ತಾತಿಲ್ಯಾ ನಿಂಗೆ? ಬೇರೆಯವರ ವಸ್ತು ಕದ್ದಿದ್ದೂ ಅಲ್ಲದೇ ಅದನ್ನು ಕತ್ತರಿಸಿ ಹಾಕಿಕೊಳ್ಳದ ಹಾಗೆ ಮಾಡಿಬಿಟ್ಯಲ್ಲ. ಇನ್ನು ಹೀಗೆಲ್ಲಾ ಮಾಡಬಾರದು. ಹೋಗು,.” ಅಂತ ಬುದ್ಧಿಹೇಳಿ ಬಿಟ್ಟುಬಿಟ್ಟರು. ನಮ್ಮ ಮಾಸ್ಟ್ರು ಅಲ್ಲವೇ ? ಒಮ್ಮೆ ಬಚಾವಾದರೆ ಸಾಕಿತ್ತು. ನಾಳೆ ಮತ್ತೆ ಶಾಲೆಯಲ್ಲಿ ಇದರ ಬಗ್ಗೆ ಪುನಹ ಪಾಠ ಉಂಟೋ ಏನೋ ಎಂದುಕೊಳ್ಳುತ್ತಾ ಮನೆಗೆ ಬಂದೆ.
ಇನ್ನೊಮ್ಮೆ ಏನಾಯಿತೆಂದರೆ, ನಾವು ಕಲ್ಲಟ್ಟೆಯ ಅತ್ತೆ ಮನೆಗೆ ಹೋದಾಗ ಅಲ್ಲಿ ನಮ್ಮ ಮನೆಯವರೂ, ಕಲ್ಲಟ್ಟೆಯ ಮನೆಯವರೂ ಸೇರಿ ಹಲಸಿನ ಹಪ್ಪಳ ಮಾಡುವ ಸಿದ್ಧತೆ ಮಾಡಿದ್ದರು. ಒಳ್ಳೆಯ ಸೊಳೆ ಇರುವ ಹತ್ತಾರು ಹಲಸಿನ ಕಾಯಿಯನ್ನು ತಂದು, ಕಡಿದು ಹಾಕಿದರು. ಅದನ್ನು ಸೇಡು ಸೇಡು ಮಾಡಿ ಮುಳ್ಳು ತೆಗೆದು ಒಬ್ಬರು ಹಾಕಿದರೆ ಎಲ್ಲರೂ ಸುತ್ತ ಕುಳಿತು ಸಾರೆ ಬಿಡಿಸಿ ಸೊಳೆ ತೆಗೆದರು. ಅದನ್ನು ಅಟ್ಟದಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ಅರೆಯುವ ಕಲ್ಲಿನಲ್ಲಿ ಹಾಕಿ ಒನಕೆಯಲ್ಲಿ ಕುಟ್ಟಿ ಹದವಾಗಿ ಹಿಟ್ಟು ಮಾಡಿ ಅದನ್ನು ಉಂಡೆ ಉಂಡೆ ಮಾಡಿ ಇಟ್ಟದ್ದೂ ಆಯಿತು. ಇನ್ನು ಅದನ್ನು ಒಂದು ಒತ್ತು ಮಣೆಗೆ ಹಾಕಿ ಒತ್ತಿ, ಹಪ್ಪಳ ಮಾಡಿ ಚಾಪೆಯಲ್ಲಿ ಹಾಕಿ ಒಣಗಿಸಿದರೆ  ಹಪ್ಪಳ ರೆಡಿ. ಮನೆಯಲ್ಲಿ ತುಂಬಾ ಜನ ಹೆಂಗಸರೂ, ಮಕ್ಕಳೂ ಇದ್ದರೆ ಅದೊಂದು ಸಂಭ್ರಮದ ಕೆಲಸ. ಆದರೆ ಆ ಹಿಟ್ಟು ಸ್ವಲ್ಪ ಖಾರಖಾರ ಇದ್ದರೆ ನಮಗೆ ಹಪ್ಪಳಕ್ಕಿಂತ ಹಲಸಿನ ಹಪ್ಪಳದ ಹಿಟ್ಟಿಗೆ ಬಜಬಜ ತೆಂಗಿನ ಎಣ್ಣೆ ಹಾಕಿಕೊಂಡು ಬಿಸಿಬಿಸಿಯಿರುವಾಗಲೇ ತಿನ್ನಲು ಇಷ್ಟ.
ನಾನು ಮೆಲ್ಲ ಅಮ್ಮನ ಹಿಂದಿನಿಂದ ಹೋಗಿ ಗುಸುಗುಸು ಮಾಡಿ ಬೇಡಿದ ಕೂಡಲೆ ಅಮ್ಮ ಒಮ್ಮೆ ಹಿಟ್ಟನ್ನು ಕೈಮೇಲೆ ಹಾಕಿದಳು ಅಂತಾಯಿತು. ಅದು ತಿಂದಾದ ಕೂಡಲೇ ಮತ್ತೆ ತಿನ್ನಲು ಆಸೆಯಾಯ್ತು. ಅಮ್ಮನೋ ಯಾರೋ “ “ಆಚೆ ಹೋಗ್ ಮಾಣಿ, ಈಗಲೇ ಎಲ್ಲ ತಿಂದರೆ ಹಪ್ಪಳ ಅಂತ ಮಾಡುವುದು ಯಾಕೆ?.. ಈಗ ಬೇಡ, ಹಪ್ಪಳ ಮಾಡಿಯೇ ತಿನ್ನುವ” ಎಂದರು. ನನಗೆ ಮರ್ಯಾದೆ ಹೋಯಿತು. ಬೇಕೆಂದು ಹಠ ಹಿಡಿದು ಅಳಲು ಶುರು ಮಾಡಿದೆ. ನೆಲದ ಮೇಲೆ ಬಿದ್ದು ಹೊರಳಾಡಿ ಕಿರುಚಾಡಿದೆ. ಗೋಳಾಡಿದೆ. ಕೊನೆಗೆ ನನ್ನ ರಂಪಾಟ ನೋಡಿ ಅತ್ತೆಗೆ ಸಿಟ್ಟು ಬಂತು. “ ಸುಮ್ನೇ ಆಯ್ಕಂತ್ಯಾ ಇಲ್ಯಾ? ಹೆಚ್ಚು ಹಠ ಮಾಡಿದ್ರೆ ತಲೆಯ ಮೇಲೆ ಸೆಗಣಿನೀರು ಹೊಯ್ಕಾತ್” ಅಂದರು. ಎಲ್ಲರಿಗೂ ನನ್ನ ಬೊಬ್ಬೆ ಕೇಳಿ ರಗಳೆಯಾಗಿರಬೇಕು.  ಮನೆಕೆಲಸದ ರಾಮನಿಗೆ ಇಂದಕ್ಕ ಅನ್ನುವವರು ಆಗ ಆ ಮನೆಯಲ್ಲೇ ಅತ್ತೆಯ ಜೊತೆ ಇದ್ದವರು “ ಮಾಣಿ ರಗ್ಳಿ ಜಾಸ್ತಿ ಆಯ್ತ್. ಸೆಗಣಿ ತಕಂಬಾ ರಾಮ. ಬಾಲ್ದಿಗೆ ಹಾಕಿ ನೀರಲ್ಲಿ ಕರಡಿ(ಕದಡಿ) ಹೊಯ್ವ” ಎಂದರು. ನಾನು ಹೆದರಲಿಲ್ಲ. ನಮ್ಮ ಶ್ರೀಧರ ಅಣ್ಣನೂ ಅಲ್ಲಿಯೇ ಇದ್ದು ಎಲ್ಲರೂ ಸೇರಿ ನನ್ನ ರಟ್ಟೆ ಹಿಡಿದು ಬಾವಿಕಟ್ಟೆಗೆ ಎಳೆದುಕೊಂಡೇ ಹೋದರು. ತಪ್ಪಿಸಿಕೊಳ್ಳುವ, ಬೊಬ್ಬೆ ಹೊಡೆಯುವ ನನ್ನ ಹೋರಾಟ ಮುಂದುವರಿದಿತ್ತು. ಅಷ್ಟರಲ್ಲಿ ಅನುಮಾನಿಸಿ ನಿಂತು ನೋಡುತ್ತಿದ್ದ ಕೆಲಸದ ರಾಮನಿಗೆ, ಮತ್ತೊಮ್ಮೆ ಆಜ್ಞೆಯಾಯ್ತು. ಅವನು ಏನಾದರೂ ಮಾಡಿಕೊಳ್ಳಲಿ ಎಂದು ಹಟ್ಟಿಗೆ ಹೋಗಿ ಒಂದು ಬೊಗಸೆ ಸೆಗಣಿಯನ್ನು ತಂದುಕೊಟ್ಟ. ಅದನ್ನು ಮತ್ಯಾರೋ ಬಾಲ್ದಿಗೆ ಹಾಕಿ ನೀರಿನಲ್ಲಿ ಕರಡಿ(ಕದಡಿ)ಯೇ ಬಿಟ್ಟರು. ನನ್ನನ್ನು ಎಳೆದು ಮಧ್ಯ ನಿಲ್ಲಿಸಿ ತಲೆಯ ಮೇಲೆ ಹೋಯ್ದೇ ಬಿಟ್ಟರು. ನನಗೆ ಏನಾಗುತ್ತದೆ ಅಂತ ಗೊತ್ತಾಗುವುದರ ಒಳಗೆ ಉಸಿರು ಕಟ್ಟಲು ಶುರುವಾಯಿತು. “ದಮ್ಮಯ್ಯ ಬಿಟ್ಟು ಬಿಡಿ. ಇನ್ನು ಮಾಡುವುದಿಲ್ಲ” ಎಂದು ಗೋಗರೆದೆ. ಹರಸಾಹಸ ಮಾಡಿ ಬಿಡಿಸಿಕೊಂಡು ಓಡಿಬಿಟ್ಟೆ. ಒಮ್ಮೆ ಶುದ್ದ ಆಯಿತು.. ಅಂದಿನಿಂದ ಬಹಳ ದಿನಗಳವರೆಗೆ ನಾನು ಹಠ ಮಾಡಿದರೆ ’ಬಾಲ್ದಿ ತರ್ಕಾ? ಸಗಣಿ ನೀರು ಸುರಿಕಾ” ಎನ್ನುವವರೆ. ನನಗೆ ಆ ಭಯಂಕರ ಅನುಭವದಿಂದ ಹೆದರಿಕೆಯಾಗಿ, ಹಠ ಬಿಟ್ಟು ಸುಮ್ಮನಾಗುತ್ತಿದ್ದೆ.

(ಮುಂದುವರಿಯುವುದು)

1 ಕಾಮೆಂಟ್‌: