ಗುರುವಾರ, ಸೆಪ್ಟೆಂಬರ್ 21, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ  9

ನನಗೆ ದೊಡ್ಡ ರಹಸ್ಯವೊಂದು ತಿಳಿದಂತಾಯಿತು. ಅಷ್ಟು ದೊಡ್ಡ ವೇಷಧಾರಿಯಾದರೂ ಮಂಜು ನಾಯ್ಕರಿಗೆ ದಿಗಣ ಕುಣಿಯಲಿಕ್ಕೆ ಬರುವುದಿಲ್ಲ ಎಂಬುದು. ವಿಷಯ ಗೊತ್ತಾದ ಮೇಲೆ ಅದನ್ನು ಯಾರ ಬಳಿಯಾದರೂ ಹೇಳಬೇಕಾಯಿತು. ನನ್ನ ಅಕ್ಕನ ಮಗ ವೆಂಕಟೇಶ, ಅದೇ ಒಂದೆರಡು ದಿನದಲ್ಲಿ ಅವನ ಅಪ್ಪಯ್ಯನೂ ಮೇಳದ ಯಜಮಾನರೂ ಆದ ಶ್ರೀಧರ ಹಂದೆಯವರೊಂದಿಗೆ ಆಟ ನೋಡಲು ಕ್ಯಾಂಪಿಗೆ ಬಂದಾಗ, ಅವನಲ್ಲಿ ಈ ಗುಟ್ಟು ಹೇಳಿದೆ. “ನಿನಗೆ ಗೊತ್ತಾ? ಮಂಜು ನಾಯ್ಕರಿಗೆ ದಿಗಣ ಕುಣಿಯಲು ಬರುವುದಿಲ್ಲವಂತೆ”. ಎಂದು. ಅವನು ಒಪ್ಪಲಿಲ್ಲ. “ಸಾಧ್ಯವೇ ಇಲ್ಲ” ಅಂದ.  ನಾನು ಬಿಡಲಿಲ್ಲ. ಆ ದಿನ ಪರೀಕ್ಷೆ ಮಾಡುವುದು ಎಂದು ತೀರ್ಮಾನವಾಯಿತು. ಆ ದಿನದ ರಾತ್ರಿ ಆಟದಲ್ಲೂ ಅವರು ದಿಗಣದ ಕುಣಿತ ಕುಣಿಯದೇ ಪದ್ಯವನ್ನೇ ನೇರ ಎತ್ತುಗಡೆ ಮಾಡಿದರು. ಅವನಿಗೂ ದೃಢವಾಯಿತು. ಮಂಜು ನಾಯ್ಕರಿಗೆ ಗೊತ್ತಿಲ್ಲದ ಕುಣಿತವೊಂದು ನಮಗೆ ಗೊತ್ತಿದೆ ಅಂತ ಆಯತು. ದೊಡ್ಡ ಸಂಗತಿ. ಅಷ್ಟಕ್ಕೇ ಬಿಡಲಾದೀತೇ? ಇನ್ನು ಅವರನ್ನೇ ಕೇಳಿ ಅಂತಿಮ ತೀರ್ಮಾನ ಮಾಡುವುದೆಂದು ಎಣಿಸಿದೆವು.
ನಾವಿಬ್ಬರೂ ಮರುದಿನ ರಾತ್ರಿ ಚೌಕಿಯಲ್ಲಿ ಮಂಜುನಾಯ್ಕರು ಮುಖಕ್ಕೆ ಬಣ್ಣ ಹಚ್ಚುತ್ತಾ ಕುಳಿತಾಗಲೇ, ಮೆಲ್ಲನೇ ಹೋಗಿ ಆಚೆಬದಿ ಒಬ್ಬರು, ಈಚೆಬದಿ ಒಬ್ಬರು ಕುಳಿತೆವು. ಅದೂ ಇದೂ ಮಾತಾಡುತ್ತಾ, “ನೀನು ಕೇಳು, ನೀನು ಕೇಳು” ಅಂತ ನಮ್ಮ ನಮ್ಮೊಳಗೆ ಕೈಸನ್ನೆ, ಕಣ್ಣು ಸನ್ನೆ ಆಯಿತು. ಕೊನೆಗೆ ನಾನೇ ಧೈರ್ಯಮಾಡಿ ಕೇಳಿಯೇಬಿಟ್ಟೆ. “ಹೌದಾ? ನಿಮಗೆ ದಿಗಣ ಕುಣಿಯಲು ಬರುವುದಿಲ್ಲವಂತಲ್ಲಾ” ಎಂದು. ಅವರು ತಿರುಗಿ ನನ್ನನ್ನು ಒಮ್ಮೆ ನೋಡಿ. “ಆಂ! ನಿನಗೆ ಯಾರು ಹೇಳಿದ್ದದು?” ಎಂದರು. ಅವರು ಸ್ವಲ್ಪ ಗಟ್ಟಿಯಾಗಿಯೇ ಹೇಳಿದ್ದರಿಂದ ಆಚೆ ಈಚೆ ಕುಳಿತವರಿಗೂ ಅದು ಕೇಳಿಸಿತು. “ಏನಂತೆ?” ಎಂದು ಎಲ್ಲರೂ ತಿರುಗಿ ನೋಡಿದರು. “ನಮ್ಮ ಭಾಗ್ವತರ ಮಾಣಿ, ಅಡ್ಡಿಲ್ಲೆ ಮರ್ರೆ! ನನಗೆ ದಿಗಣ ಕುಣೀಲಿಕ್ಕೆ ಬತ್ತಿಲ್ಲೆ. ಅಂಬ್ರು” ಎಂದು ಜೋರಾಗಿ ಹೇಳಿ ನಗಾಡಿದರು. ದೊಡ್ಡ ಸಾಮಗರು ಅಲ್ಲಿಯೇ ಹಿಂದಿನ ಬದಿಯಲ್ಲಿ ಅಂಗಾತ ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದು ನಿದ್ರೆಯಲ್ಲಿದ್ದವರಂತೆ ನಟಿಸುತ್ತಾ ನಮ್ಮ ಮಾತನ್ನು ಕೇಳುತ್ತಿದ್ದರು. ಎಲ್ಲರೂ ನಗಾಡಿಯಾಯಿತು.  ಯಾರು ಹೇಳಿದ್ದು? ಹೇಗೆ ಗೊತ್ತಾಯಿತು? ಅಂತ ಎಲ್ಲರೂ ಪ್ರಶ್ನೆ ಕೇಳುವವರೆ. ಸಾಮಗರು ಏನೂ ತಿಳಿಯದವರಂತೆ, ಸಂಬಂಧವೇ ಇಲ್ಲದವರಂತೆ ಸುಮ್ಮನೇ ಮಲಗಿದ್ದರು. ಅಲ್ಲಿಗೆ, ಅದು ಸುಳ್ಳು ಎಂದು ತಿಳಿಯಲು ನಮಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ನಮಗೆ ನಾಚಿಕೆಯಾಯಿತು. ನಾನೂ ವೆಂಕಟೇಶನೂ ಅಲ್ಲಿಂದ ಮೆಲ್ಲನೆ ತಪ್ಪಿಸಿಕೊಂಡು ಓಡಿಯೇಬಿಟ್ಟೆವು. ಅಂತೂ ಮುಂದೆ ತುಂಬಾ ಸಮಯದವರೆಗೆ, ನನ್ನನ್ನು ನೋಡಿದ ಕೂಡಲೇ ಅವರೆಲ್ಲಾ ಅದನ್ನೇ ಆಡಿ ಆಡಿ ತಮಾಷೆ ಮಾಡುತ್ತಿದ್ದರು.
ಚಂದ್ರ ಭಟ್ರು ಮಳೆಗಾಲದಲ್ಲಿ ಮನೆಯಲ್ಲಿ ಇರುವಾಗ ಗುಡ್ಡೆಯ ಮೇಲೆಲ್ಲಾ ತಿರುಗಿ, ಒಂದು ಸಪೂರ ಜಾತಿಯ ಬೀಳು ತರುತ್ತಿದ್ದರು. ಅದನ್ನು ಬಿಗಿಯಾಗಿ ನೆಯ್ದು ಅದರಲ್ಲಿ ವೀಳ್ಯಹಾಕುವ ಎಲೆ ಪೆಟ್ಟಿಗೆ, ಬಿಸಿ ಪಾತ್ರೆ ಇಡಲು ಇರಕಿ, ತರಕಾರಿ ಪಲ್ಯ ಬಿಸಿಯಲ್ಲಿ ನೀರು ಸೋಸುವುದಕ್ಕೆ ಸಿಬ್ಬಲು, ಕೊಡಪಾನ ಇಡುವ ಚಂಡೆ ಇತ್ಯಾದಿ ಅನೇಕ ಪರಿಕರಗಳನ್ನು ಮಾಡುತ್ತಿದ್ದರು. ಗಂಟಿಗಳು ದೂರಕ್ಕೆ ಹೋದರೆ ಗೊತ್ತಾಗಲಿ ಎಂದು ಅವುಗಳ ಕುತ್ತಿಗೆಗೆ ಮರಾಣಿ ಮಾಡಿಕಟ್ಟುತ್ತಿದ್ದರು. ಬೆಳೆದ ದೊಡ್ಡ ಬಿದಿರಿನ ಅಂಡೆಗೆ ಆಚೆ ಈಚೆ ದೇವಸ್ಥಾನದ ಗಂಟೆಯ ಮಗುವಿನಂತಹದ್ದನ್ನು ಮರದಲ್ಲಿ ಕತ್ತರಿಸಿಮಾಡಿ ದನಗಳ ಕುತ್ತಿಗೆಗೆ ಕಟ್ಟುತ್ತಿದ್ದರು. ದನಗಳು ಮೇಯುವಾಗ, ಕುತ್ತಿಗೆ ಅಲ್ಲಾಡಿಸಿದಾಗ ಅದು ಬಿದಿರಿನ ಅಂಡೆಗೆ ಜೋರಾಗಿ ಹೊಡೆದುಕೊಂಡು ಶಬ್ಧ ಆಗುತ್ತಿತ್ತು. ಕೆಲವೊಮ್ಮೆ ಆ ಮರಾಣಿ ನಮ್ಮ ಕುತ್ತಿಗೆಯಲ್ಲೂ ರಾರಾಜಿಸಿ ಆಟದ ವಸ್ತುವಾಗುತ್ತಿತ್ತು.
ಒಮ್ಮೆ ಯಕ್ಷಗಾನದ ಕಿರೀಟವನ್ನೂ ಬೀಳಿನಲ್ಲಿ ನೆಯ್ದು ಮಾಡಿ ಅದಕ್ಕೆ ಬಣ್ಣ ಹಚ್ಚಿ ಬೇಗಡೆ, ಕನ್ನಡಿಚೂರು ಹಚ್ಚಿ ಚೆನ್ನಾಗಿ ಕಾಣುವಂತೆ ಮಾಡಿದ್ದರು. ಹತ್ತಿ, ರಟ್ಟು, ಬಳೆ, ಕೊಡೆಯಹಿಡಿ, ಹುರಿ ಹಗ್ಗ ಇತ್ಯಾದಿಗಳನ್ನೆಲ್ಲ ಬಳಸಿಕೊಂಡು ವೀರಭದ್ರನ ಮುಖವಾಡ ಮಾಡಿದ್ದರು. ಅವರು ಕುಳಿತು ತನ್ಮಯರಾಗಿ ಅದನ್ನೆಲ್ಲಾ ಮಾಡುವಾಗ ನೋಡುವುದೇ ನಮಗೊಂದು ಕುಷಿ. ಅವರು ಮೂಡ್ ಇಲ್ಲದಿದ್ದ ದಿನ ಕೆಲಸ ನಿಲ್ಲಿಸಿದರೆ, ನಾವೇ “ಅದನ್ ಅಲ್ಲಿಗೇ ಬಿಟ್ರ್ಯಲೆ” ಎಂದು ನೆನಪಿಸಿ, ಕೆಲಸ ಮುಂದುವರಿಯುವಂತೆ ಮಾಡುತ್ತಿದ್ದೆವು. ಅಲ್ಲದೇ ಅವರು ಹಳೆಯ ಪಂಚೆಯನ್ನು ಹರಿದು ಅದರಲ್ಲಿ ಹುಲ್ಲನ್ನು ಬಿಗಿಯಾಗಿ ಸುತ್ತಿ ಕೇದಗೆ ಮುಂದಲೆಯ ಅಟ್ಟೆಯನ್ನು, ಅದಕ್ಕೆ ಸುತ್ತಲು ಹುಲ್ಲಿನ ಜಡೆಯನ್ನು ಮಾಡಿ, ಕೇದಗೆಮುಂದಲೆಯನ್ನು ಮನೆಯಲ್ಲೇ ತಯಾರು ಮಾಡಿದ್ದರು. ಅದನ್ನು ಕಟ್ಟಿಕೊಂಡು ಕಪ್ಪುಬಟ್ಟೆಯನ್ನು ಸುತ್ತಿ ಬಾಳೆಯ ಹಗ್ಗದಲ್ಲಿ ಬಿಗಿದು ಗೋಣಿದಾರ, ಟ್ವೈನ್ ದಾರವನ್ನು ಮೇಲಿನಿಂದ ಟೇಪ್ ನಂತೆ ಸುತ್ತಿ ಕೇದಗೆಮುಂದಲೆ ಸಿದ್ಧವಾಗುತ್ತಿತ್ತು. ಡ್ರೆಸ್ ಎಂದರೆ ಅಮ್ಮನ ಹಳೆಯ ಸೀರೆ, ಮನೆಯಲ್ಲಿರುವ ಹಳೆಯ ಬೆಡ್ ಶೀಟ್, ಗೋಣಿಚೀಲ, ಜಮಖಾನಗಳು. ಅವನ್ನೇ ಉಪಯೋಗಿಸಿಕೊಂಡು ವೇಷವನ್ನು ಮಾಡಿಕೊಳ್ಳುವುದು ನನಗೆ ಕುಷಿಯಾದ ಸಂಗತಿಯಾಗಿತ್ತು. ಮುಖಕ್ಕೆ ಪೌಡರ್, ಕುಂಕುಮ, ಅರಶಿನ, ಕಣ್ಣಿಗೆ ಕಾಡಿಗೆಗಳನ್ನು ಹಚ್ಚಿಕೊಂಡು. ವೇಷ ತಯಾರಾಗಿ ಮನ ಬಂದಂತೆ ಕುಣಿದು, ನಮ್ಮ ಆಟ ಜೋರಾಗಿ ನಡೆಯುತ್ತಿತ್ತು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ