ಭಾನುವಾರ, ಸೆಪ್ಟೆಂಬರ್ 17, 2017

*ನನ್ನೊಳಗೆ*
ಭಾಗ 5
ಅಮ್ಮ ಹೇಳಿದ ಮಾತನ್ನು ನೀವು ನಂಬುವುದಾದರೆ ಚಿಕ್ಕಂದಿನಲ್ಲಿ ನಾನು ತುಂಬಾ ಚೆಂದ ಇದ್ದೆನಂತೆ. ಚೆಂದ ಅಂದರೆ ಚೆಂದ. ದಪ್ಪ ದಪ್ಪಗೆ ಗುಂಡ ಗುಂಡಗೆ. ಕೈ ತೊಳೆದು ಮುಟ್ಟಬೇಕು, ಹಾಗೆ. ಹಾಗಾಗಿ ಹುಟ್ಟಿ ಎರಡು ಎರಡೂವರೆ ವರ್ಷದವನಿದ್ದಾಗ ನನಗೆ ಒಮ್ಮೆ ಯಾರದೋ ಕೆಟ್ಟವರ ಕಣ್ಣು ತಾಗಿ ಜ್ವರ ಬಂತು. ನಾಲ್ಕಾರು ದಿನ ಬಿಡಲೇ ಇಲ್ಲ. ಎಂತಹ ಮದ್ದು ಮಾಡಿದರೂ, ಕಂಡ ಕಂಡ ದೇವರಿಗೆ ಹರಕೆ ಹೊತ್ತರೂ ಪ್ರಯೋಜನವಾಗಲಿಲ್ಲ. ಕೊನೆಗೆ ಆಚೆ ಹಾಕಿದರೆ ಆಚೆ, ಈಚೆ ಹಾಕಿದರೆ ಈಚೆ ಎಂಬಂತಾಯಿತು. ಚೆನ್ನಾಗಿ ನಡೆದಾಡಿಕೊಂಡಿದ್ದ ಮಾಣಿ, ಆಗಾಗ ಸ್ಮೃತಿ ತಪ್ಪಲೂ ತೊಡಗಿದಾಗ ಎಲ್ಲರೂ ಗಾಬರಿಯಾದರು. ದೊಡ್ಡ ಆಸ್ಪತ್ರೆ ಅಂತ ಮಣಿಪಾಲಕ್ಕೆ ತಂದು ಡಾಕ್ಟರಿಗೆ ತೋರಿಸಿದರು. ಎಡಕಾಲು ಸಪೂರವಾಗುತ್ತಾ ಬಂದಿದೆ. ಇದು ಪೋಲಿಯೋ ಲಕ್ಷಣ ಎಂದು ಗೊತ್ತಾಯಿತು. ಏನಾದರೂ ಹೆಚ್ಚು ಕಡಿಮೆಯಾಗುವುದರ ಒಳಗೆ ಉದಾಸೀನ ಮಾಡದೇ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಿರಿ ಎಂಬ ಸೂಚನೆಯೂ ಬಂತು,

ಕೂಡಲೇ ಬೆಂಗಳೂರಿಗೆ ಬಂದು ಆಸ್ಪತ್ರೆಗೆ ಸೇರಿಸಿದರು. ತಿಂಗಳುಗಟ್ಟಳೆ ಆಸ್ಪತ್ರೆವಾಸ ಮಾಡಿದ್ದಾಯಿತು. ಅಂತೂ ಕೈಯಲ್ಲಿ ಹಣ ಇಲ್ಲದಿದ್ದರೂ ಸಾಲಸೋಲ ಮಾಡಿ ಅಷ್ಟು ಮಾಡಿದ್ದರಿಂದ ಪೋಲಿಯೋ ಉಲ್ಬಣವಾಗಿ ಕಾಲು ಪೂರ್ತಿ ಬಚ್ಚಾಗುವುದು ತಪ್ಪಿ ಸರಿಯಾಗಿ ನಡೆಯುವಷ್ಟಾಯಿತು. ಅಷ್ಟರಲ್ಲೇ ಅಮ್ಮ ಎಲ್ಲವೂ ಸರಿಯಾದರೆ ತಿರುಪತಿ   ತಿಮ್ಮಪ್ಪನ ದರ್ಶನ ಮಾಡಿ ಬರುವ ಯಾತ್ರೆಗೆ ಮಗುವಿನೊಂದಿಗೆ ಹೋಗಿ ಬರುತ್ತೇನೆ” ಎಂದು ಹರಕೆ ಹೊತ್ತದ್ದೂ ಆಯಿತು. ಅಂತೂ ಕಾಲಿಗೆ ಕಾಲು ಆಗಿ, ಗುಣವಾಗಿ ಊರಿಗೆ ಬಂದ ಒಂದೇ ವರ್ಷದಲ್ಲಿ ತಿರುಪತಿ ಯಾತ್ರೆಯನ್ನೂ ಅಪ್ಪಯ್ಯ ಅಮ್ಮ ಮತ್ತು ನನ್ನನ್ನು ಕರೆದುಕೊಂಡು ಹೋಗಿ, ಬಂದರು. ಈ ಅಂಗವಿಕಲತೆಯೇ ವಿಶೇಷ ಚೇತನವಾಗಿ ನನ್ನ ಬದುಕಿನ ದಾರಿಯಾದ ಕತೆಯನ್ನು ಮುಂದೆ ಹೇಳುತ್ತೇನೆ.

ನಾನು ಸಣ್ಣವನಿರುವಾಗ ಎಷ್ಟೋ ಆಟಗಳನ್ನು ಆಡುತ್ತಿದ್ದೆ. ನಮ್ಮ ಆಟಿಕೆ ಸಾಮಾನುಗಳು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವಂತದ್ದೇ ಆಗಿತ್ತು. ಈಗಿನಂತೆ ಪ್ಲಾಸ್ಟಿಕ್ ಆಟಿಕೆಗಳು, ಗಿಲಿಗಿಲಿ, ಡಮರು, ಕಾರು, ತಗಡು ಚಕ್ರಗಳೂ, ರಬ್ಬರ್ ಆಟಿಕೆಗಳೂ ಆಗ ಇರಲಿಲ್ಲ. ಇರಲಿಲ್ಲವೋ ನಮಗೆ ಕೊಡಿಸುವವರು ಇರಲಿಲ್ಲವೋ ಗೊತ್ತಿಲ್ಲ. ನಾನು ರಬ್ಬರ್ ಬಾಲ್ ನ್ನು ಕಂಡದ್ದೇ ಹಾಲಾಡಿ ಮರ್ಲ್ ಚಿಕ್ಕು ದೇವಸ್ಥಾನದ ಗೆಂಡದಲ್ಲಿ, ಹಬ್ಬದ ಸಮಯದಲ್ಲಿ. ಆಗ ಹಬ್ಬದ ಖರ್ಚಿಗೆ ಅಂತ ಅಪ್ಪಯ್ಯ ಕೊಡುತ್ತಿದ್ದ ಒಂದೋ ಎರಡೋ ರೂಪಾಯಿಯಲ್ಲಿ ನಾನು ಬಾಲ್ ತೆಗೆದುಕೊಂಡ ನೆನಪು.

ಆಗ ನಮ್ಮ ಪರಿಸರದಲ್ಲೇ ಎಷ್ಟು ಆಟದ ಸಾಮಾನುಗಳು ಇರುತ್ತಿದ್ದವು? ಒಣ ಅಡಿಕೆ ಹಾಳೆಯಲ್ಲಿ ಕುಳಿತು ನಮ್ಮನ್ನು ಮನೆಯ ಸುತ್ತ ಎಳೆದುಕೊಂಡು ಹೋಗುವ ಓರಗೆಯವರಿದ್ದರೆ, ಅದದಲ್ಲಿ ಕುಳಿತು ದರದರ ಎಳೆಯುವಾಗ ಆಗುವ ಕರಕರ ಸದ್ದಿಗೆ ರಗಳೆಯಾಗಿ ’ಎಂತ ಕರ್ಕರೆ ಮಕ್ಳೆ ನಿಮ್ದು? ಆಚೆ ಹೋಗಿ ಆಡಿ ಕಾಂಬ’ ಎಂದು ದೊಡ್ಡವರು ಜೋರು ಮಾಡಿ ಓಡಿಸಬೇಕು. ಬಾಳೆ ದಿಂಡಿನ ಹೊರಗಿನ ಪದರು ತೆಗೆದು ಒಳಗಿನ ದಂಟನ್ನು ಕಾರಿನ ಆಕೃತಿಯಲ್ಲಿ ಕತ್ತರಿಸಿ ಅದಕ್ಕೆ ನಾಲ್ಕು ಕಾಸಾನು ಕಾಯಿ ಬೀಜಗಳಿಗೆ ಮಧ್ಯ ತೆಂಗಿನ ಹಿಡಿಕಡ್ಡಿಯನ್ನು ಸುರಿದು, ಮುಂದೆ ಹಿಂದೆ ಚಕ್ರ ಮಾಡಿ ಓಡಿಸಿದರೆ ಅದು ನಿಲ್ಲುವುದು, ಆ ಬಾಳೆ ದಿಂಡು ಮಣ್ಣು ಹಿಡಿದು ಕಪ್ಪಾಗಿ ಸವೆದು ಹಾಳಾದ ಮೇಲೆಯೆ. ಇನ್ನು ತೆಂಗಿನ ಗರಿಯ ಓಲಿಯನ್ನು ಸುತ್ತಿ, ಮಧ್ಯ ಒಂದು ಹಿಡಿಕಡ್ಡಿ ಸಿಕ್ಕಿಸಿ ಗಿರಿಗಿಟಿ ಮಾಡಿ, ಗಟ್ಟಿಯಾಗಿ ಓಡಿದಾಗ, ಅದು ಗಾಳಿಯಲ್ಲಿ ತಿರುಗಿದಾಗ ಆಗುವ ಸಂತೋಷ, ಓಡಿ ಆಗುವ ಆಯಾಸಕ್ಕಿಂತ ಸಾವಿರ ಪಟ್ಟು ಹೆಚ್ಚಿನದ್ದಲ್ಲವೇ?. ಒಂದು ನಾಲ್ಕು ತೆಂಗಿನ ಗರಿ ಸಿಕ್ಕಿತೆಂದರೆ ಸಾಕು, ಆ ಓಲಿಯನ್ನು ಸುತ್ತಿ ನಮ್ಮ ಕನ್ನಡಕ, ವಾಚು ರೆಡಿ, ಅಮ್ಮನಿಗೆ ಹೇಳಿ ಅದರಲ್ಲಿ ಒಂದು ಗಿಳಿಯನ್ನು ಮಾಡಿಸಿದರೆ ಅದನ್ನು ಉದ್ದದ ಹಿಡಿ ಕಡ್ಡಿಗೆ ಕಟ್ಟಿ ಹಾರಿಸುವುದೆ. ಅಡಿಕೆ ಹಾಳೆಯ ಬೀಸಣಿಗೆ ಬಾಳೆಯ ಎಲೆಯ ಮಧ್ಯದ ದಂಟನ್ನು ಕತ್ತರಿಸಿ ಹಿಂದಕ್ಕೆ ಬಾಗಿಸಿ ಸಿಕ್ಕಿಸಿ ಒಂದು ರೀತಿಯ ಮುಂದಕ್ಕೆ ಹಿಂದಕ್ಕೆ ಹೋಗುವ ಆಟಿಕೆ, ಬಾಳೆಯ ದಂಟಿನ ಎರಡೂ ಬದಿ ಸೀಳಿ ಬಾಗಿಸಿ, ಅದನ್ನು ಆಚೆ ಈಚೆ ಆಡಿಸಿದಾಗ ಪಟಪಟ ಹೊಡೆದು ಕೊಳ್ಳುವ ಆಟಿಕೆ ಒಂದಾ ಎರಡಾ?. ಏನು ಖುಷಿ!. ಪೇಪರನ್ನು ಸುತ್ತಿ ಉಂಡೆ ಮಾಡಿದರೆ ಅದು ನಮ್ಮ ಬಾಲ್, ತೆಂಗಿನ ಹೆಡೆಮಂಡೆಯೇ ನಮ್ಮ ಬ್ಯಾಟ್. ಹೀಗೆ ಎಷ್ಟೋ ಆಟ ಆಗುತ್ತಿತ್ತು.

ಸಂಜೆಯಾಯಿತೆಂದರೆ ಮನೆಯಲ್ಲಿ ಚೆನ್ನೆಮಣೆ ಆಟ. ಊಟಕ್ಕೆ ಕುಳಿತುಕೊಳ್ಳುವ ಮಣೆಯ ಹಿಂಬದಿ ಚಾಕ್ ಪೀಸಿನಲ್ಲಿ ಕೋಣೆ ಬರೆದು ಪಗಡೆ ಆಟ, ಐದು ಉರುಟು ಕಲ್ಲು ಇದ್ದರೆ ಕೈಯಲ್ಲಿ ಇಟ್ಟು ಹಾರಿಸಿ ಮಗುಚಿ ಗುಡ್ಣ ಆಟ”,  ಕವಡೆ ಇದ್ದರೆ ಅಂಗಾತ ಕವುಚಿ ಹಾಕಿ ಒಂದಕ್ಕೊಂದು ಗುರಿಯಿಟ್ಟು ಹೊಡೆಯುವ ಮತ್ತೊಂದು ಆಟ. ಹೀಗೆ ಏನೇನೋ ಆಟಗಳು.

ಒಂದು ಹಣೆಯ ಮರದ ದೊಡ್ಡ ಎಲೆ ಸಿಕ್ಕಿದರೆ ಅದೇ ನಮಗೆ ಕೇದಗೆ ಮುಂದಲೆ. ಕೈಗೆ ಸಿಕ್ಕಿದ ಕೋಲುಗಳೇ ಬಿಲ್ಲು ಬಾಣಗಳು. ಅಮ್ಮನ ಹಳೆಯ ಸೀರೆ ಹಳೆಯ ಹರಿದುಹೋದ ಪಂಚೆಗಳೇ ದೇವಾನುದೇವತೆಗಳ ರಾಜ ಮಹಾರಾಜರ ಆಭರಣಗಳು. ಡ್ರೆಸ್ಸುಗಳು. ಆಗಲೇ ಕುಣಿತ ಶುರು. ತೈದತೈದತೈದ ಅಂತ. ಇಡೀ ಒಂದು ಎಕರೆಯಷ್ಟು ದೊಡ್ಡದಾದ ಹೊರ ಅಂಗಳವೇ ನಮ್ಮ ರಂಗಸ್ಥಳ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ