ಶುಕ್ರವಾರ, ಸೆಪ್ಟೆಂಬರ್ 29, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 16

ನಾನು ಶಂಕರನಾರಾಯಣದ ಹೈಸ್ಕೂಲ್ ಗೆ ಹೋಗುವಾಗ ನಮ್ಮ ಮನೆ ಚೇರ್ಕಿಯಿಂದ ಹಾಲಾಡಿಗೆ ಮೂರು ಮೈಲಿ, ಅಲ್ಲಿಂದ ಶಂಕರನಾರಾಯಣದ ಹೈಸ್ಕೂಲ್ ಗೆ ಐದು. ಒಟ್ಟು ಎಂಟು ಮೈಲಿ ನಡೆದು ಹೋಗಬೇಕಾಗಿತ್ತು. ನನಗೆ ಕಾಲು ನೋವು ಇದ್ದುದರಿಂದ ಕಷ್ಟವಾಗುತ್ತದೆ ಎಂದು ಅಪ್ಪಯ್ಯ ಶಂಕರನಾರಾಯಣದಲ್ಲಿ ಪುಟ್ಟಮ್ಮ ಬಾಯರಿ ಎಂಬವರ ಮನೆಯಲ್ಲಿ ಮಾತಾಡಿ, ಅಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಆದರೆ ನಾನು ಅಲ್ಲಿ ಉಳಿದದ್ದು ಕೇವಲ ಆರು ತಿಂಗಳು ಮಾತ್ರ. ಅಲ್ಲಿ ಸರಿಯಾಗುವುದಿಲ್ಲ ಎಂದು ಚೇರಿಕೆಯ ಮನೆಯಿಂದಲೇ ಹೈಸ್ಕೂಲಿಗೆ ಹೋಗಿ ಬರಲು ಶುರುಮಾಡಿದೆ.

ನಂತರ ಕೃಷ್ಣಮೂರ್ತಿ ಅಣ್ಣಯ್ಯನು ಅವನ ಹತ್ತಿರವಿದ್ದ ಒಂದು ಸೈಕಲ್ ನ್ನು ನನಗೆ ಉಪಯೋಗವಾಗುತ್ತದೆ ಎಂದು ತಿಳಿದು, ಬೆಂಗಳೂರಿನಿಂದ ಬಸ್ಸಿನಲ್ಲಿ ಹಾಕಿ ಕಳಿಸಿದ. ಹಾಗಾಗಿ ನಾನು ಸೈಕಲ್ ಕಲಿಯುವುದಾಯಿತು. ಹಾಲಾಡಿಯಿಂದ ನಮ್ಮ ಮನೆಯವರೆಗೆ ಗದ್ದೆಯ ಅಂಚಿನಲ್ಲಿ ಸೈಕಲ್ ನ್ನು ಒದ್ದಾಡಿ ದೂಡಿಕೊಂಡು ತಂದು, ಮನೆಯ ಹತ್ತಿರದ ನೆರೆಮನೆಯವರ ವಿಶಾಲ ಜಡ್ಡಿನಲ್ಲಿ ಸೈಕಲ್ಲನ್ನು ಹಲವಾರು ಸಾರಿ ಬೀಳಿಸಿ, ಏಳಿಸಿ ಸೈಕಲ್ ಬ್ಯಾಲೆನ್ಸನ್ನು  ಕಲಿತದ್ದಾಯಿತು. ಆಗಲೇ ಒಮ್ಮೆ ಶಂಕರನಾರಾಯಣಕ್ಕೆ ಅದರಲ್ಲೇ ಹತ್ತಿಕೊಂಡು ಹೋಗಿ, ಬಸ್ ನಿಲ್ದಾಣದ ಹತ್ತಿರದ ದೊಡ್ಡ ತಿರುವಿನಲ್ಲಿ ಬ್ರೇಕ್ ಹಾಕಲು ಗೊತ್ತಾಗದೇ, ಗೋಪು ಶೇಟ್ ಎಂಬವರ ಮನೆಯ ಗೋಡೆಗೆ ಗುದ್ದಿದ್ದೂ ಅಯಿತು. ಪುಣ್ಯಕ್ಕೆ ಸೈಕಲ್ಲಿಗೂ, ನನಗೂ ಹೆಚ್ಚು ಪೆಟ್ಟಾಗಲಿಲ್ಲ.

ಆದರೆ ದಿನಾ ಸೈಕಲನ್ನು ಹಾಲಾಡಿಯಿಂದ ಮನೆಗೆ ತರುವುದು ಸಾಧ್ಯವಿರಲಿಲ್ಲ. ಹಾಗಾಗಿ ಹಾಲಾಡಿ ಕೃಷ್ಣರಾಜ ಗೋಳಿಯವರನ್ನು ಬೇಡಿ, ಅವರ ಅಂಗಡಿಯ ಬದಿಯ ಉಪ್ಪಿನ ಚೀಲ ಹೇರಿ ಇಟ್ಟಿರುವ ಗೋಡೌನಿನ ಒಂದು ಮೂಲೆಯಲ್ಲಿ ಅದನ್ನು ಇಟ್ಟು, ಮನೆಗೆ ನಡದೇ ಬರಲು ಶುರುಮಾಡಿದೆ. ಆಮೇಲೆ ದಿನಾ ಮನೆಯಿಂದ ಹಾಲಾಡಿಯವರೆಗೆ ನಡೆದು, ನಂತರ ಹಾಲಾಡಿಯಲ್ಲಿ ಗೋಳಿಯರ ಅಂಗಡಿಯ ಬದಿಯ ಗೋಡೌನಿನಲ್ಲಿ ಇಡುತ್ತಿದ್ದ ಸೈಕಲ್ ನ್ನು ಏರಿ ಶಂಕರನಾರಾಯಣ ಹೈಸ್ಕೂಲಿಗೆ ಹೋಗುತ್ತಿದ್ದೆ. ಪುನಹ ಅಲ್ಲಿಯೇ ಸೈಕಲ್ ಇರಿಸಿ ಮನೆಗೆ ನಡೆದು ಬರುತ್ತಿದ್ದೆ. ಬರುವಾಗ ಕೆಲವೊಮ್ಮೆ ಗೋಳಿಯವರ ಅಂಗಡಿಯ ಪಕ್ಕದಲ್ಲಿಯೇ ಇರುವ ಕರಣಿಕರ ಹೋಟೇಲಿನಲ್ಲಿ ನೆಲಗಡಲೆ ಬಜೆಯನ್ನು (ಆಗ ನಾಲ್ಕಾಣೆ ಎಂದು ನೆನಪು) ಪಡೆದು, ಒಂದೊಂದೇ ಬೀಜವನ್ನು ತಿನ್ನುತ್ತಾ ಮನೆಗೆ ಬರುತ್ತಿದ್ದೆ.

ನಮ್ಮ ಹಾಲಾಡಿ ಶಾಲೆಯಲ್ಲಿ ಹಿಂದಿ ಮೇಸ್ಟ್ರು ಇಲ್ಲದೇ ಇರುವುದರಿಂದ ನಮಗೆ ಐದನೇ ಕ್ಲಾಸಿಗೆ ಹಿಂದಿ ಸಬ್ಜಕ್ಟೇ ಇರಲಿಲ್ಲ. ಅದು ಐಚ್ಛಿಕ ಎಂದು. ಆದ್ದರಿಂದ ಏಳನೆ ಕ್ಲಾಸಿನಲ್ಲಿ ಪಬ್ಲಿಕ್ ಪರೀಕ್ಷೆ ಇದ್ದರೂ ನಮಗೆ ಹಿಂದಿ ಇಲ್ಲದೇ ತೊಂದರೆಯಾಗಲಿಲ್ಲ. ಆದರೆ ಶಂಕರನಾರಾಯಣದ ಹೈಸ್ಕೂಲಿನಲ್ಲಿ ಎಂಟನೇ ಕ್ಲಾಸಲ್ಲಿ ಸಂಸ್ಕೃತವೂ ಒಂದು ಸಬ್ಜಕ್ಟ್ ಇದ್ದು, ನಾವು ಹಿಂದಿ ಕಲಿಯಲೇ ಬೇಕಾಯಿತು. ಮತ್ತು ಎಸ್. ಎಸ್. ಎಲ್. ಸಿ. ಯಲ್ಲಿ ಒಟ್ಟು ಹದಿಮೂರು ಮಾರ್ಕನ್ನಾದರೂ ಆ ವಿಷಯದಲ್ಲಿ ಪಡೆದು ಪಾಸಾಗಬೇಕಿತ್ತು. ಅದ್ದರಿಂದ ನಾವು ಎಷ್ಟು ಬೇಕೋ ಅಷ್ಟನ್ನೇ ಕಲಿತು ಹಿಂದಿಯನ್ನು ಕಡೆಗಣಿಸಿದ್ದೆವು.

 ಕನ್ನಡ ನನ್ನ ಆಸಕ್ತಿಯ ಸಬ್ಜಕ್ಟು. ಆಗ ಕನ್ನಡಕ್ಕೆ ಮಹಾಬಲೇಶ್ವರ ಸೋಮಯಾಜಿಗಳು ಎನ್ನುವ ಅಧ್ಯಾಪಕರೊಬ್ಬರಿದ್ದರು. ಅವರು ಪಾಠವೇನೋ ಚೆನ್ನಾಗಿ ಮಾಡುತ್ತಿದ್ದರೂ ಪ್ರತೀ ದಿನವೂ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಬಾರದೇ ತಡವಾಗಿಯೇ ಬರುತ್ತಿದ್ದುದರಿಂದ ಪ್ರಿನ್ಸಿಪಾಲರಿಂದ ಬೈಸಿಕೊಳ್ಳುತ್ತಿದ್ದರು. ಮನೆಯಲ್ಲಿ ಪೂಜೆ ಗದ್ದೆ ಕೆಲಸ, ಪುರೋಹಿತಿಕೆ ಅದೂ ಇದೂ ಅಂತ ಎಲ್ಲವನ್ನೂ ಮೈಮೇಲೆ ಹಾಕಿಕೊಂಡು ಮಾಡುತ್ತಿದ್ದರು. ಬಾಯಿಯಲ್ಲಿ ಯಾವಾಗಲೂ ಎಲೆಯಡಿಕೆ ಇರುತ್ತಿತ್ತು.  ವೇಸ್ಟಿಯನ್ನು ಚಂದವಾಗಿ ಉಟ್ಟು ತೋಳಿಲ್ಲದ ಅಂಗಿಯನ್ನು ಧರಿಸಿ ಬರುತ್ತಿದ್ದರು.

ನಾನು ಎಸ್.ಎಸ್. ಎಲ್. ಸಿಯಲ್ಲಿ ಇರುವಾಗ ನನಗೆ ಉಪನಯನವಾಯಿತು. ಸಂಧ್ಯಾವಂದನೆಯ ಮಂತ್ರಗಳನ್ನೆಲ್ಲಾ ದಾಮೋದರ ಅಣ್ಣಯ್ಯನಿಂದ ಕೇಳಿ ಕೇಳಿ ಕನ್ನಡ ನೋಡ್ಸಿನ ಕೊನೆಯಲ್ಲಿ ಬರೆದಿಟ್ಟುಕೊಂಡಿದ್ದೆ. ಒಮ್ಮೆ ನನ್ನ ನೋಡ್ಸನ್ನು ಪರಿಶೀಲಿಸುತ್ತಿರುವಾಗ ಅದನ್ನು ಸೋಮಯಾಜಿಯವರು ನೋಡಿಬಿಟ್ಟರು. ಆಗ ಏನೂ ಹೇಳಲಿಲ್ಲ. ನನ್ನ ನೋಡ್ಸನ್ನು ಹಿಡಿದುಕೊಂಡು ಹೋಗಿಯೇಬಿಟ್ಟರು. ಆಮೇಲೆ ಬಂದು ತೆಗೆದುಕೊಂಡು ಹೋಗು ಎಂದು ಕಣ್ಣುಸನ್ನೆಯಲ್ಲೇ ಹೇಳಿದ್ದಾಯಿತು. ನನಗೆ ಏನಾಯಿತೆಂದು ಗೊತ್ತಾಗಲಿಲ್ಲ. ಆದರೂ ಹೆದರಿಕೊಂಡು ಅವರ ಸ್ಟಾಪ್ ರೂಮಿಗೆ ಹೋದಾಗ, ನನ್ನನ್ನು ಅವರ ಮುಂದೆ ಕುರ್ಚಿಯಲ್ಲಿ ಕೂರಿಸಿಕೊಂಡು, “ಇದೆಂತದಾ? ಹೀಂಗೆ ಸಂಧ್ಯಾವಂದನೆ ಮಾಡೂದಾ ನೀನು? ಹೀಗೆ ತಪ್ಪು ತಪ್ಪು ಮಂತ್ರ ಹೇಳಿ ಸಂಧ್ಯಾವಂದನೆ ಮಾಡಿದರೆ ನರಕಕ್ಕೆ ಹೋಗುತ್ತಿ? ಯಾರು ಹೇಳಿಕೊಟ್ಟದ್ದು ಇದು?”. ಎಂದು ಬರೆಸಿದವರಿಗೂ ಒಂದು ಸಹಸ್ರನಾಮ ಹಾಕಿದರು. ನನಗೂ ನಿಮಗೆ ಬೇರೆಕೆಲಸ ಇಲ್ಲ ಸುಮ್ಮನೇ ಬ್ರಾಹ್ಮಣರಾಗಿ ಹುಟ್ಟಿಕೊಂಡಿರಿ. ಒಂದು ನೇಮ ನಿಷ್ಠೆ ಬೇಡವೇ? ಎಂದು ಚೆನ್ನಾಗಿ ಬೈದು, ಅದರಲ್ಲಿರುವ ತಪ್ಪುಗಳನ್ನೆಲ್ಲ ಒಂದೊಂದಾಗಿ ನನ್ನ ಮುಂದೆಯೇ ನನ್ನಿಂದಲೇ ತಿದ್ದಿ ಬರೆಸಿ, ಸರಿಪಡಿಸಿ, ಉಚ್ಚಾರವನ್ನೂ ಹೇಳಿಕೊಟ್ಟು ಕಳುಹಿಸಿಕೊಟ್ಟರು.

ನಾನು ಶಂಕರನಾರಾಯಣ ಜ್ಯೂನಿಯರ್ ಕಾಲೇಜಿಗೆ ಹೋಗುವಾಗ ಪ್ರಕಾಶ (ಹೆಸರು ಬೇರೆ ಇರಬಹುದು)ಅಂತ ಒಬ್ಬ ಹುಡುಗ ಇದ್ದ. ಅವನ ಅಜ್ಜ ದೊಡ್ಡ ಪುರೋಹಿತರು. ಪ್ರಕಾಶನೂ ಓದುವುದರಲ್ಲಿ, ಇನ್ನೊಂದರಲ್ಲಿ ಬಹಳ ಹುಷಾರು. ಒಮ್ಮೆ ನಾನು ಅಕ್ಟೋಬರ್ ರಜೆಗೆ ಕೋಟದ ಅಕ್ಕನ ಮನೆಯಲ್ಲಿ ಬಂದು ಇದ್ದಿದ್ದೆ. ಪ್ರಕಾಶನ ಅಜ್ಜನ ಮನೆಯೂ ಕೋಟ. ನಾನು ಅಕ್ಕನ ಮನೆಗೆ ಹೋಗುವ ವಿಚಾರ ಅವನಿಗೆ ತಿಳಿಸಿದ್ದೆ.
ಅವನು ಅದುಹೇಗೋ ಅವರಿವರನ್ನು ವಿಚಾರಿಸಿಕೊಂಡು, ನನ್ನ ಅಕ್ಕನ ಮನೆಗೆ ನನ್ನನ್ನು ಹುಡುಕಿಕೊಂಡು ಬಂದ. ಅನಿರೀಕ್ಷಿತವಾಗಿ ಅವನನ್ನು ಕಂಡು ಆಶ್ಚರ್ಯವಾಗಿ “ಏನಪ್ಪಾ? ನೀನು ಇಲ್ಲಿ” ಅಂದೆ. ಅದಕ್ಕೆ ಅವನು “ಮಾರಾಯಾ, ಒಂದು ಗಂಡಾಂತರ ಆಯ್ತಲ್ಲ. ಇವತ್ತು ಅಜ್ಜನ ಮನೆಯ ನವರಾತ್ರಿ ಊಟಕ್ಕೆ ಅಂತ ಬಂದೆ. ಬಂದು ನೋಡ್ತೇನೆ. ಜನಿವಾರವೇ ಇಲ್ಲ. ಎಲ್ಲೋ ಬಿದ್ದು ಹೋಯ್ತು. ಹಾಗಂತ ಜನಿವಾರ ಇಲ್ಲದೇ ಹೋದರೆ ಮರ್ಯಾದೆ ಹೋಗುತ್ತದೆ.” ಎಂದ. ಕೊನೆಗೆ ಗಂಭೀರವಾಗಿ “ಈ ಊರಿನಲ್ಲಿ ಜನಿವಾರ ಎಲ್ಲಿ ಸಿಕ್ಕುತ್ತದೆ ಅಂತ ಕೂಡ ನನಗೆ ಗೊತ್ತಿಲ್ಲ. ಈಗ ನೀನು ಒಂದು ಉಪಕಾರ ಮಾಡು. ನಿನ್ನ ಜನಿವಾರ ಇವತ್ತು ಒಂದು ದಿನದ ಮಟ್ಟಿಗೆ ನನಗೆ ಕೊಡು. ಸಂಜೆಯೇ ವಾಪಾಸು ಮುಟ್ಟಿಸುತ್ತೇನೆ” ಎಂದ. ದೋಸ್ತಿಯಲ್ಲವೇ? ನನಗೆ ಉಪಕಾರ ಮಾಡದೇ ಬೇರೆ ದಾರಿ ಇರಲಿಲ್ಲ. ಅವನು ಕೊಡದೇ ಬಿಡುವವನೂ ಅಲ್ಲ. ಅಂತೂ ತೆಗೆದು ಕೊಟ್ಟೆ. ಅವನು “ಮಾರಾಯ, ಇದನ್ನು ಯಾರ ಹತ್ರವೂ ಹೇಳಬೇಡ, ಮನೆಯಲ್ಲಿ ಗೊತ್ತಾದ್ರೆ ಕೊಂದೇ ಹಾಕತ್ರು”. ಅಂದ. ನಾನು “ಆಯಿತು” ಎಂದು ನಗಾಡಿದೆ. ಅವನು ಸಂಜೆ ಪುನಹ ಊರಿಗೆ ಹೋಗುವಾಗ ಅದನ್ನು ಕೊಟ್ಟೂ ಹೋದ. ಅವನು ಆಗ ಓದುವುದರಲ್ಲೂ ಎಷ್ಟು ಬುದ್ದಿವಂತ ಇದ್ದಿದ್ದ ಅಂದರೆ ಪಿಯುಸಿಯಲ್ಲಿ ತೊಂಬತ್ತೊ ತೊಂಬತೈದೋ ಪರ್ಸೆಂಟ್ ಮಾರ್ಕ್ ಬಂದಿದ್ದರೂ ಕಡಿಮೆಯಾಯಿತು ಅಂತ ಅದನ್ನು ರಿಜೆಕ್ಟ್ ಮಾಡಿ ಮರುವರ್ಷ ಪುನಹ ಪರೀಕ್ಷೆಗೆ ಕುಳಿತಿದ್ದ. ಆದರೆ ಗ್ರಹಚಾರಕ್ಕೆ ಎರಡನೇ ಸಲ ಮೊದಲನೆಯ ಸಲಕ್ಕಿಂತ ಸ್ವಲ್ಪ ಕಡಿಮೆಯೇ ಮಾರ್ಕ್ ಬಂತು.

ಆದರೆ ಅವನು ಮುಂದೆ ಓದಿದ ಹಾಗೆ ಕಾಣುವುದಿಲ್ಲ. ಅವನ ಊರಿನಲ್ಲಿಯೇ, ಪೇಟೆಯ ಬದಿಯಲ್ಲಿ ಒಂದು ಭವಿಷ್ಯ ಹೇಳುವ ಆಫೀಸು ತೆರೆದು, ದೊಡ್ಡ ಜೋತಿಷ್ಯಗಾರನಾಗಿ ಪ್ರಸಿದ್ಧನಾದ ಅಂತ ಕೇಳಿದೆ. ಒಮ್ಮೆ ಅವನ ನೆನಪಾಗಿ ನೋಡಿಬರುವ ಎಂದು ಅವನ ಊರಿಗೆ ಅವನನ್ನು ಹುಡುಕಿಕೊಂಡು ಹೋಗಿದ್ದೆ. ಪಾಪ ಅದೇನೋ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಈಗ ಜೋತಿಷ್ಯ ಹೇಳುವುದನ್ನು ಬಿಟ್ಟು, ಮನೆಯಲ್ಲೇ ಇದ್ದಾನೆ ಅಂತ ತಿಳಿಯಿತು. ಮನೆಯ ದಾರಿ ಸರಿಯಾಗಿ ತಿಳಿಯದೇ ವಾಪಾಸು ಬಂದೆ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ