ಶನಿವಾರ, ಸೆಪ್ಟೆಂಬರ್ 30, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 18

ಆಗ ಪ್ರಿನ್ಸಿಪಾಲರಾಗಿದ್ದ ಪಿ. ಶಂಕರ ನಾರಾಯಣ ಕಾರಂತರು, ತುಂಬಾ ಒಳ್ಳೆಯವರು. ದೇವರಂತಹ ಮನುಷ್ಯರು. ಶಿಸ್ತು ಸಂಯಮಕ್ಕೆ ಮತ್ತೊಂದು ಹೆಸರಿನಂತಿದ್ದರು. ಅವರು ನಮ್ಮ ಕಾಲೇಜಿನ ಎದುರು ಎತ್ತರದ ಜಾಗದಲ್ಲಿ ನಿಂತು, ಆಗಾಗ ಬೆಳಿಗ್ಗೆ ನಮ್ಮನ್ನೆಲ್ಲಾ ಎದುರು ನಿಲ್ಲಿಸಿ ಎಸ್ಸೆಮ್ಲಿ ಮಾಡುತ್ತಿದ್ದರು. ಆಗ ಅವರು ಮಾಡುವ ಭಾಷಣ ಕೇಳುವುದೇ ಒಂದು ಅನುಭವ. ಕೆಲವೊಮ್ಮೆ ಹುಡುಗರು, ಹುಡುಗಿಯರಿಗೆ ಪತ್ರ ಬರೆದು ಆ ಹುಡುಗಿಯರಿಂದ ಅವರಿಗೆ ದೂರು ಬಂದರೆ, ಅಥವ ಯಾರಾದರೂ ಜಗಳಮಾಡಿ ಹೊಡೆದಾಡಿಕೊಂಡರೆ, ಕೂಡಲೆ ಅವರು ವಿಶೇಷ ಎಸ್ಸೆಮ್ಲಿ ಕರೆಯುತ್ತಿದ್ದರು. ಆಗ ನಮ್ಮನ್ನೆಲ್ಲ ಸೇರಿಸಿ ಅವರು ಭಾಷಣ ಮಾಡುವುದಿತ್ತು. “ಮಕ್ಕಳೇ , ನೀವು ಶಾಲೆಗೆ ಬರುವುದು ವಿದ್ಯೆ ಕಲಿಯಲಿಕ್ಕೆ. ಮನೆಯವರು ನಿಮ್ಮನ್ನು ಅವರ ಸುಖವನ್ನು ತ್ಯಾಗ ಮಾಡಿ ಇಲ್ಲಿಗೆ ಕಳಿಸುತ್ತಾರೆ. ಆದರೆ ಕೆಲವರು ಇಲ್ಲಿ ಬಂದು, ಮಾಡುವುದೇ ಬೇರೆ. ಯಾರು ಯಾರಿಗೋ ಲವ್ ಲೆಟರ್ ಬರೆಯುವುದು, ಹೊಡೆದಾಡಿ ಕೈಕಾಲು ಮುರಿದುಕೊಳ್ಳುವುದು ಮಾಡುತ್ತಾರೆ. ಇದೆಲ್ಲ ನನ್ನ ಹತ್ತಿರ ನಡೆಯುವುದಿಲ್ಲ. ಯಾರು ತಪ್ಪು ಮಾಡಿದ್ದಾರೆ ಎಂದು ನನಗೆ ಗೊತ್ತಾಗುತ್ತದೆ. ಅವರಾಗಿಯೇ ನನ್ನ ಹತ್ತಿರ ಬಂದು ಮಾಡಿದ ತಪ್ಪನ್ನು ಒಪ್ಪಿಕೊಂಡರೆ ಒಳ್ಳೆಯದು. ಆದರೆ ಇಲ್ಲಿ ಅವರ ಹೆಸರನ್ನು ಹೇಳಿ ಅವರ ಮರ್ಯಾದೆ ಕಳೆಯಲು ನನಗೆ ಮನಸ್ಸು ಇಲ್ಲ. ಆದರೆ ಅವರು ಇಲ್ಲಿಯೇ ಇದ್ದಾರೆ. ನಮ್ಮ ಮಧ್ಯವೇ ಅಂತಹಾ ಕೆಟ್ಟ ಹುಡುಗರೂ ಇದ್ದಾರೆ”. (ಒಮ್ಮೆ ಎಲ್ಲರನ್ನೂ ನೋಡುತ್ತಾರೆ. ಒಂದು ಸ್ವಲ್ಪ ಹೊತ್ತು ಎಲ್ಲ ಮೌನ ಆಮೇಲೆ). “ಅವರು ಅವರಾಗಿಯೇ ಅವರನ್ನು  ತಿದ್ದಿಕೊಂಡರೆ ಆಯಿತು. ಇಲ್ಲದಿದ್ದರೆ ನನಗೆ ಏನು ಮಾಡಬೇಕೆಂದು ಗೊತ್ತು. ಮಾಡಿಯೇ ಮಾಡುತ್ತೇನೆ” ಹೀಗೆ ಅವರ ಮಾತಿನ ದಾಟಿ ಸಾಗುತ್ತಿತ್ತು. ಆದರೆ ಯಾರನ್ನೂ ಕೆಟ್ಟ ಮಾತುಗಳಿಂದಾಗಲೀ, ಮನಸ್ಸಿಗೆ ನೋವು ಉಂಟು ಮಾಡುವ ಮಾತನ್ನಾಗಲೀ ಆಡುತ್ತಿರಲಿಲ್ಲ.

ನಾನು ಆ ವರ್ಷ ಹಿಂದಿಯ ಕ್ಲಾಸ್ ಇದ್ದಾಗ, ಅದಕ್ಕೆ ಹೋಗದೆ ಹೊರಗೇ ಕಾಲೇಜಿನ ಹಿಂದಿನ ಗಾಳಿಮರದ ಬುಡದಲ್ಲೋ, ಹತ್ತಿರದ ಕಿಣಿಯವರ ಹೋಟೆಲಿನಲ್ಲೋ ಕಾಲ ಕಳೆಯುತ್ತಾ ಇರುತ್ತಿದ್ದೆ. ಹಾಗೆಯೆ ಸ್ವಲ್ಪ ಕಾಲ ಕಳೆದಿರಬಹುದು. ಏನು ಮಾಡಬೇಕೆಂದು ತಿಳಿಯಲಿಲ್ಲ. ನನ್ನ ಒಂದು ವರ್ಷ ಹಾಳಾಗುತ್ತದೆಯಲ್ಲ ಎಂಬ ಆತಂಕ. ಏನಾದರೂ ಮಾಡಲೇ ಬೇಕು ಎಂದು ನಿರ್ಧಾರ ಮಾಡಿ ಕೊನೆಗೆ, ಆಗ ಪ್ರಿನ್ಸಿಪಾಲರಾದ ಕಾರಂತರಲ್ಲಿಗೇ ಹೋಗಿ “ಸರ್, ನಾನು ಹೀಗೆ ಹೀಗೆ ಮಾಡಿದೆ” ಎಂದು ಎಲ್ಲವನ್ನೂ ತಿಳಿಸಿ, “ಏನಾದರೂ ದಾರಿ ತೋರಿಸಿ” ಎಂದು ಬೇಡಿಕೊಂಡೆ. ಅವರು ಮೊದಲು “ನಿಮಗೆಲ್ಲ ತಾವೇ ದೊಡ್ದ ಸಂಗತಿಯವರು ಎಂದು ಕೋಡು ಬಂದಿದೆ. ಹೋಗಿ ಹೋಗಿ ಪಾಠ ಹೇಳುವ ಗುರುಗಳನ್ನೇ ಎದುರು ಹಾಕಿಕೊಂಡಿದ್ದಿಯಲ್ಲ” ಎಂದು ಚೆನ್ನಾಗಿ ಬೈದರು, ಆಮೇಲೆ “ನಾನು ಹಿಂದಿ ಲೆಕ್ಚರರ್ ಹತ್ರ ಮಾತಾಡುತ್ತೇನೆ. ನೀನು ನಾಳೆಯಿಂದ ಕ್ಲಾಸಿಗೆ ಹೋಗು” ಎಂದರು. ನಾನು ಮೆಲ್ಲನೇ “ಹಿಂದಿ ಕ್ಲಾಸ್ ಬೇಡ ಸರ್. ನಾನು ಕನ್ನಡ ಕ್ಲಾಸಿಗೆ ಹೋಗುತ್ತೇನೆ. ಅನುಮತಿ ಕೊಡಿ.” ಅಂದೆ. ಅವರು ಕಣ್ಣು ಕೆಂಪು ಮಾಡಿ “ಈಗ ಮಧ್ಯದಲ್ಲಿ ಲ್ಯಾಂಗ್ವೇಜನ್ನು ಬದಲಾಯಿಸಲು ಆಗುವುದಿಲ್ಲ. ನೀನು ಹೋಗಬಹುದು” ಎಂದರು. ನಾನು ತಲೆ ತಗ್ಗಿಸಿ ಅಲ್ಲಿಯೇ ನಿಂತೆ. ಅಮೇಲೆ ಏನು ಅನ್ನಿಸಿತೋ “ನೀನು ನಾಳೆ ಬಾ. ವಿಚಾರಿಸಿ ಹೇಳುತ್ತೇನೆ” ಅಂದರು. ನನಗೆ ಅಷ್ಟು ಸಾಕಾಯಿತು. ಮರುದಿನ ತಪ್ಪದೇ ಅವರ ಕಛೇರಿಗೆ ಹೋದಾಗ “ಈ ವರ್ಷ ನೀನೆ ಯಾರ ಹತ್ತಿರವಾದರೂ ಪಾಠ ಹೇಳಿಸಿಕೊಂಡು ಕನ್ನಡ ಓದಿಕೊಂಡು ಪರೀಕ್ಷೆಗೆ ಕುಳಿತು ಪಾಸು ಮಾಡಿಕೊಂಡರೆ, ಮುಂದಿನ ವರ್ಷ ಕನ್ನಡ ಕ್ಲಾಸಿಗೆ ಸೇರಿಸಿಕೊಳ್ಳಬಹುದು” ಅಂದರು.  ನನಗೆ ಗೆದ್ದೆ ಅನ್ನಿಸಿತು. ನನಗೆ ಅದೇ ಬೇಕಾಗಿತ್ತು. ಮೊದಲ ಪಿಯುಸಿಯ ಕನ್ನಡ ಪುಸ್ತಕವನ್ನು ಖರೀದಿಸಿ, ನಾನೇ ಓದಿಕೊಂಡು ಪರೀಕ್ಷೆಗೆ ಹಾಜರಾದೆ. ನಿರೀಕ್ಷಿಸಿದಂತೆ ಪಾಸೂ ಆದೆ. ಎರಡನೇ ಪಿಯುಸಿಯಲ್ಲಿ ನನಗೆ ಕನ್ನಡ ಕ್ಲಾಸಿನಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಿದರು. ಆದರೆ ಆ ಹಿಂದಿ ಲೆಕ್ಚರರ್ ಮಹೇಂದ್ರಕುಮಾರ್ ಎದುರು ಕಂಡರೆ ನಾನು  ಆ ದಾರಿ ಬಿಟ್ಟು ಅವರು ಎದುರು ಬರುವುದನ್ನು ತಪ್ಪಿಸಿಕೊಂಡು ತಿರುಗುತ್ತಿದ್ದೆ. ಕೊನೆಯ ತನಕವೂ ನಾನು ಅವರೊಂದಿಗೆ ಮಾತೇ ಆಡಲಿಲ್ಲ. ಎರಡನೇ ಪಿಯುಸಿಯಲ್ಲೂ ಕನ್ನಡದಲ್ಲಿ ನನಗೆ ಒಳ್ಳೆಯ ಮಾರ್ಕೇ ಬಂದಿತ್ತು.

ಕಾಲೇಜಿನಲ್ಲಿ ಪ್ರತೀ ವರ್ಷ ಕಾಲೇಜ್ ಡೆ ಅಂತ ಮಾಡುತ್ತಿರಲಿಲ್ಲ ಒಂದು ವರ್ಷ ವಾರ್ಷಿಕೋತ್ಸವ ಮಾಡಿದರೆ ಮತ್ತೊಂದು ವರ್ಷ ಪ್ರವಾಸ  ಮಾಡುತ್ತಿದ್ದರು. ಹಾಗಾಗಿ ನಾನು ಎಂಟನೇ ಕ್ಲಾಸಿನಲ್ಲಿ ಹತ್ತನೇ ಕ್ಲಾಸಿನಲ್ಲಿ ಮತ್ತು ಎರಡನೇ ಪಿಯುಸಿಯಲ್ಲಿ ನಡೆದ ವಾರ್ಷಿಕೋತ್ಸವದ ಯಕ್ಷಗಾನದಲ್ಲಿ ಮುಖ್ಯ ಪಾತ್ರ ಮಾಡುವ ಅವಕಾಶ ಸಿಕ್ಕಿತ್ತು. ಆಗ ಭೋಜ ಶೆಟ್ರು ಎನ್ನುವ ಕಾಮರ್ಸ್ ಲೆಕ್ಚರರ್ ಇದ್ದರು. ಅವರೇ ಯಕ್ಷಗಾನದ ಜವಾಬ್ದಾರಿ ಹೊತ್ತು ಆಸಕ್ತಿಯಿಂದ ಕಾರ್ಯಕ್ರಮ ಮಾಡಿಸುತ್ತಿದ್ದರು. ನನಗೆ ಸ್ವಲ್ಪ ಯಕ್ಷಗಾನ ಕುಣಿತ ಗೊತ್ತಿರುವುದರಿಂದ ನಾನೇ ಉಳಿದವರಿಗೆ ಕುಣಿತವನ್ನು ಹೇಳಿಕೊಟ್ಟು ತಿದ್ದುತ್ತಿದ್ದೆ.  ಹಾಗಾಗಿ ನನಗೆ ಅಲ್ಲಿ ಸ್ವಲ್ಪ ಹೆಚ್ಚು ಮರ್ಯಾದೆ ಇತ್ತು. ಆರ್ಗೋಡು ಗೋವಿಂದರಾಯ ಶೆಣೈಯವರ ಭಾಗವತಿಕೆ, ಹಳ್ಳಾಡಿ ಸುಬ್ರಾಯ ಮಲ್ಯರ ಚಂಡೆಯ ಜೊತೆ ಇತ್ತು. ಮದನಸುಂದರಿ ಪರಿಣಯ ಅಥವ ಚಿತ್ರಕೇತ ವಿಜಯ ಎನ್ನುವ ಪ್ರಸಂಗದಲ್ಲಿ ಮದನಸುಂದರಿಯ ಪಾತ್ರ, ಹಾಗೂ ಶ್ವೇತಕುಮಾರ ಚರಿತ್ರೆಯಲ್ಲಿ ಶ್ವೇತಕುಮಾರ, ನಂತರ ಕರ್ಣಾರ್ಜುನ ಕಾಳಗದಲ್ಲಿ ಕರ್ಣನ ಪಾತ್ರವನ್ನೂ ಮಾಡಿದ್ದೆ.

 ಗೋವಿಂದ ರಾಯ ಶೆಣೈಯವರಿಗೆ ೨೦೧೬ ರಲ್ಲಿ ಉಡುಪಿಯಲ್ಲಿ ಒಂದು ಸನ್ಮಾನ ಮಾಡಿದ್ದರು. ನಾನು ಆ ಕಾರ್ಯಕ್ರಮಕ್ಕೆ ಹೋಗಿ, ಆಗಲೇ ತುಂಬಾ ವೃದ್ದರಾಗಿದ್ದ ಅವರನ್ನು ಮಾತಾಡಿಸಿಕೊಂಡು ಬಂದೆ. ಆಗ ಅವರು “ಕಾಲೇಜಿನಲ್ಲಿ  ನೀನು ಕರ್ಣ ಮಾಡಿದ್ದೀಯಲ್ಲ. ನಾನೇ ಪದ ಹೇಳಿದ್ದಲ್ಲವಾ?” ಎಂದು ಸುಮಾರು ನಲವತ್ತು ವರ್ಷಗಳ ಹಿಂದಿನ ನೆನಪನ್ನು ಮಾಡಿಕೊಂಡರು. ನನಗೆ ಖುಷಿಯಾಯ್ತು. "ಅದನ್ನೂ ನೆನಪಿಟ್ಟಿದ್ದೀರಲ್ಲ" ಎಂದು ಅವರ ಕಾಲಿಗೆ ಬಿದ್ದು ನಮಸ್ಕರಿಸಿದೆ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ