ಭಾನುವಾರ, ಅಕ್ಟೋಬರ್ 1, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 19

ಸುಮಾರಿಗೆ, ಅದೇ ಸಮಯದಲ್ಲಿ
 ನಮ್ಮ ಕೃಷ್ಣಮೂರ್ತಿ ಅಣ್ಣಯ್ಯನ ಹೆಂಡತಿಯಾದ ಜಯ ಅತ್ತಿಗೆಯ ಕಾಲಿಗೆ ಬೆಂಕಿ ಹಿಡಿದು, ಕಾಲು ಸುಟ್ಟುಕೊಂಡಿದ್ದು ಮತ್ತೊಂದು ಕತೆ. ಕೃಷ್ಣಮೂರ್ತಿ ಅಣ್ಣಯ್ಯ ಆಗ ಬೆಂಗಳೂರಿನಲ್ಲಿ ಬಾಡಿಗೆ ಅಟೋರಿಕ್ಷಾ ಓಡಿಸಿಕೊಂಡು ದುಡಿಯುತ್ತಿದ್ದ. ಮನೆಯಲ್ಲಿ ಆಗ ತುಂಬಾ ಜನ. ಕೃಷ್ಣಮೂರ್ತಿ ಅಣ್ಣಯ್ಯನ ಹೆಂಡತಿ, ಅವರ ಎರಡು ಮಕ್ಕಳು, ದಾಮೋದರಣ್ಣಯ್ಯ, ದೊಡ್ಡ ಅತ್ತಿಗೆ, ಅವರ ನಾಲ್ಕುಮಕ್ಕಳು. ನಾನು, ನನಗಿಂತ ಹಿರಿಯರಾದ ಗೌರೀಶ, ಸುರೇಶರಾದ ಅಣ್ಣಂದಿರು, ಅಮ್ಮ ಹೀಗೆ. ಎರಡು ಜನ ಖಾಯಂ ಕೆಲಸದ ಆಳುಗಳು. ಒಂದು ಜೊತೆ ಹೋರಿ, ಹಾಗೂ ಒಂದು ಎಮ್ಮೆ. ಒಂದು ಜೊತೆ ಎತ್ತುಗಳು, ನಾಲ್ಕಾರು ದನಗಳು, ಕರುಗಳು, ಮನೆಯಲ್ಲಿ ಪ್ರತಿಯೊಬ್ಬರೂ ಏನಾದರೊಂದು ಕೆಲಸ ಮಾಡುತ್ತಲೇ ಇರುತ್ತಿದ್ದರು. ದನಕರುಗಳನ್ನು ಮೇಯಿಸುವುದು, ಹಟ್ಟಿಗೆ ಸೊಪ್ಪು ತರುವುದು ಹಸಿ ಹುಲ್ಲು ತಂದು, ಅದನ್ನು ದೊಡ್ಡ ಹಂಡೆಯಲ್ಲಿ ಬೇಯಿಸಿ ಅಕ್ಕಚ್ಚು ಮಾಡುವುದು. ಹಟ್ಟಿಗೊಬ್ಬರ ತೆಗೆಯುವುದು. ಹಾಲು ಕರೆಯುವುದು, ಮನೆಯ ಕಸ ಗುಡಿಸಿ, ಒರೆಸುವುದು ಅಡುಗೆ ಕೆಲಸ, ಹೊರಗಿನ ಕೆಲಸ, ಹೀಗೆ ಏನೇನೋ ಕೆಲಸಗಳು. ನಾವೂ ಹಿರಿಯರ ಜೊತೆ ಸೇರಿ ಸುಮಾರಾಗಿ ಎಲ್ಲ ಕೆಲಸದಲ್ಲೂ ಕೆಲಸದಲ್ಲಿ ನೆರವಾಗುತ್ತಿದ್ದೆವು.


 ಒಮ್ಮೆ ಜಯ ಅತ್ತಿಗೆ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ, ಕೆಳಗೆ ಉರಿಯುತ್ತಿದ್ದ ಒಲೆಯ ಬೆಂಕಿಯನ್ನು ಗಮನಿಸದೇ, ಮೇಲೆ ಡಬ್ಬದಿಂದ ಅಡುಗೆಗೆ ಸಾಮಾನು ತೆಗೆಯಲು ಹೋದದ್ದಂತೆ. ಕೆಳಗೆ ಉರಿಯುವ ಸೌದೆ ಒಲೆ. ಸೌದೆಯ ಕೊಳ್ಳಿಯಿಂದ ಬೆಂಕಿ ಹೊರಗೆ ಬಂದು ಅವರ ಸೀರೆಗೆ ತಗುಲಿದ್ದು ಗೊತ್ತಾಗಲೇ ಇಲ್ಲ. ಆಗ ಅಡುಗೆಮನೆಯಲ್ಲೂ ಯಾರೂ ಇರಲಿಲ್ಲ. ಮಧ್ಯಾಹ್ನದ ಹೊತ್ತು. ಬೆಂಕಿ ಹತ್ತಿಕೊಂಡು, ಮೇಲಕ್ಕೆ ಧಗಧಗ ಉರಿದು ಮೈ ಸುಡಲು ಶುರುವಾದಾಗಲೇ ಗೊತ್ತಾಯಿತು. ಒಮ್ಮೆಲೇ ಗಾಬರಿಯಾಗಿ ಬೊಬ್ಬೆಹಾಕಿ ಹೆದರಿಕೆಯಿಂದ ಹೊರಗೆ ಓಡಿಬಂದರು. ಓಡಿಬಂದ ರಭಸಕ್ಕೆ ಬೆಂಕಿ ಮತ್ತೂ ಹೆಚ್ಚಾಗಿ ಜ್ವಾಲೆಯಾಗಿ ಉರಿಯಿತು. ಆಚೆ ಗದ್ದೆಯಲ್ಲಿ ಹೂಟೆ ಮಾಡುತ್ತಿದ್ದ ಬೆಳ್ಳನಿಗೆ ಅವರ ಬೊಬ್ಬೆ ಕೇಳಿಸಿತು. ಆಲಿಸಿದ ಏನು? ಏನಾಯ್ತು? ಎನ್ನುತ್ತಲೇ ಹೂಡುವುದನ್ನು ಅಲ್ಲೇ ನಿಲ್ಲಿಸಿ, ಮನೆಗೆ ಓಡಿಬಂದ.

ಓಡಿಬಂದು ನೋಡಿದರೆ, ಏನು ನೋಡುವುದು? ಅತ್ತಿಗೆಯ ಮೈಗೆ ಕೈಎಲ್ಲಾ ಬೆಂಕಿ ಹತ್ತಿ ಕಪ್ಪಾಗಿ ದೊಡ್ಡದೊಡ್ಡ ಬೊಕ್ಕೆಗಳಾಗಿ ಅನ್ನ ಕುದಿ ಬಂದಂತೆ ಅಲ್ಲಲ್ಲಿ ಗುಳ್ಳೆಗಳು ಉಬ್ಬಿ ಒಡೆಯುತ್ತಿದೆ. ಬಟ್ಟೆಎಲ್ಲಾ ಸುಟ್ಟು ಮೈಗೆ ಅಂಟಿಕೊಂಡಿದೆ. ಅತ್ತಿಗೆಯಂತು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಮೈಯ ಶೇಕಡಾ ಎಂಬತ್ತರಷ್ಟು ಸುಟ್ಟು ಹೋಗಿತ್ತು. ಬೆಳ್ಳ ಏನು ಮಾಡಲೂ ತೋಚದೇ ಒಂದು ಕ್ಷಣ ಕಂಗಾಲಾದ. ಆಮೇಲೆ ಅಟ್ಟದಲ್ಲಿದ್ದ ಅವನ ಕಂಬಳಿಯನ್ನು ತೆಗೆದು ಅವರ ಮೇಲೆ ಎಸೆದು ಅಲ್ಲಲ್ಲಿ ಉರಿಯುವ ಬೆಂಕಿಯನ್ನು ಆರುವಂತೆ ಮಾಡಿದ.  ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ದೊಡ್ಡಣ್ಣಯ್ಯ ಕೂಡಲೇ ಓಡಿಬಂದು ಅವಸರವಸರವಾಗಿ ಹೊರಟು, ಶಂಕರನಾರಾಯಣಕ್ಕೆ ಹೋಗಿ ಡಾಕ್ಟರ್ ಮಧ್ಯಸ್ಥರನ್ನು ಮನೆಗೆ ಕರೆತಂದ. ಅವರು ಪರೀಕ್ಷಿಸಿ ಏನೂ ಗಾಬರಿಯಿಲ್ಲ. ಜೀವಕ್ಕೆ ಅಪಾಯವಿಲ್ಲ. ಬಾಳೆಯ ಎಲೆಯ ಮೇಲೆ ಮಲಗಿಸಿದರೆ ತಂಪಾಗುತ್ತದೆ ಎಂದು ಹೇಳಿ, ಏನೋ ಕಪ್ಪಗಿನ ಮುಲಾಮು ಕೊಟ್ಟು ಹಚ್ಚಲು ತಿಳಿಸಿದರು. ನಾನು ಸಂಜೆ ಶಂಕರನಾರಾಯಣ ಹೈಸ್ಕೂಲಿನಿಂದ ಬರುವುದರ ಒಳಗೆ ಇಷ್ಟೆಲ್ಲ ಆಗಿತ್ತು.  ನಾನು ಮನೆಗೆ ಬರುವಾಗ ಮನೆ ಬಿಕೋ ಎನ್ನುತ್ತಿತ್ತು. ಸ್ಮಶಾನ ಮೌನ.

ಕೊನೆಗೆ ತಿಂಗಳುಗಟ್ಟಲೆ ಆರೈಕೆಯಾಯಿತು. ಅತ್ತಿಗೆಯ ಅಮ್ಮನೂ ಬಂದು ಮಗಳ ಸೇವೆ ಮಾಡಿದರು. ನೊಣ ಬಾರದೇ ಇರಲಿ ಎಂದು ತೆಳುವಾದ ಬಟ್ಟೆ ಹೊದೆಸುತ್ತಿದ್ದರು. ಆಮೇಲೆ ಅದು ಮೈಗೆ ಅಂಟಿಕೊಳ್ಳುತ್ತದೆ ಎಂದು ಪ್ಲಾಸ್ಟಿಕ್ ಪೇಪರನ್ನು ಸುತ್ತಿದರು. ಆದರೆ ಒಳಗೆ ಗಾಳಿಯಾಡದೇ ಗಾಯ ಒಳಗಿಂದೊಳಗೆ ಬೇಯಲು ಶುರುವಾಗಿ, ಅವರ ಕಾಲು ಗುಣವಾಗುವ ಬದಲು ಮಾಂಸ ಮೂಳೆಗಳೂ ಕಾಣಲು ಶುರುವಾಯಿತು. ಅವರ ನರಳಿಕೆ ನೋವು ಹೇಳಿತೀರದು. ಅಪ್ಪಯ್ಯ ಒಮ್ಮೆ ಮೇಳದಿಂದ ಮನೆಗೆ ಬಂದವರು ಅವರ ಅವಸ್ಥೆಯನ್ನು ನೋಡಿ “ಇದು ಆಗುವುದಲ್ಲ. ಕೈಮೀರುವ ಮೊದಲು ಮಣಿಪಾಲಕ್ಕೆ ಸೇರಿಸುವುದೊಂದೇ ಉಳಿದದ್ದು” ಎಂದು ಮನೆಯವರೊಡನೆ ಚರ್ಚಿಸಿ, ಕೊನೆಗೆ ಮಣಿಪಾಲಕ್ಕೆ ಸಾಗಿಸುವುದು ಎಂಬ ತೀರ್ಮಾನಕ್ಕೆ ಬರಬೇಕಾಯಿತು.

ಆದರೆ ಹೇಗೆ? ನಮ್ಮ ಮನೆಯ ತನಕ ವಾಹನವೂ ಬರುವುದಿಲ್ಲ. ಬಯಲು ಗದ್ದೆಯ ಮೇಲೇ ಎರಡು ಮೈಲು ನಡೆದೇ ಹೋಗಬೇಕು. ಅತ್ತಿಗೆಯನ್ನು ನೋಡಿದರೆ ಹೊತ್ತುಕೊಂಡು ಹೋಗುವ ಪರಿಸ್ಥಿತಿಯೂ ಇಲ್ಲ. ಕೊನೆಗೆ ಕೆಲಸದಾಳು ಬೆಳ್ಳನನ್ನು ಏನು ಮಾಡುವುದಾ? ಎಂದು ಹತಾಶೆಯಿಂದ ಕೇಳಿದಾಗ  ನಮ್ಮ ಬೆಳ್ಳ ಧೈರ್ಯ ಮಾಡಿ ಒಂದು ಕಂಬಳಿಯ ಜೋಲಿ ಮಾಡಿ ಅದನ್ನು ಒಂದು ಒನಕೆಗೆ ಸಿಕ್ಕಿಸಿ ಮುಂದಿಂದ ಒಬ್ಬರು, ಹಿಂದಿನಿಂದ ಒಬ್ಬರು ಭುಜದ ಮೇಲೆ ಹೊತ್ತು ಕೊಂಡು ಅಷ್ಟು ದೂರ ನಡೆದೇ ಬೈಲು ಗದ್ದೆಯ ಅಂಚಿನಲ್ಲಿ ಹೋಗುವುದು ಅಂತ ತೀರ್ಮಾನವಾಯಿತು. ಅದು ಸಾಮಾನ್ಯದ ಕೆಲಸವಲ್ಲ. ಗದ್ದೆಯ ಅಂಚಿನ ಮೇಲೆ ಸ್ವಲ್ಪ ಬ್ಯಾಲೆನ್ಸ್ ತಪ್ಪಿದರೂ ಸಾಕು. ಅತ್ತಿಗೆ ಕೆಸರು ತುಂಬಿದ ಹದ್ದೆಗೆ ಬಿದ್ದರೆ, ಮಾಂಸದ ಮುದ್ದೆಯಾಗುತ್ತಾರೆ. ಆದರೂ ಕೆಲಸದಾಳುಗಳು ಗಟ್ಟಿ ಧೈರ್ಯ ಮಾಡಿಯೇ ಬಿಟ್ಟರು. ನಿಧಾನವಾಗಿ ಅತ್ತಿಗೆಯನ್ನು ಜೋಲಿಯಲ್ಲಿ ಕೂರಿಸಿಕೊಂಡು ಗದ್ದೆಯ ಅಂಚಿನಲ್ಲಿ ನಡೆದು  ಅರ್ಧ ದೂರದವರೆಗೆ ತಂದರು. ಅಲ್ಲಿಂದ ನನ್ನ  ಭಾವಯ್ಯನ ಕಾರಿನಲ್ಲಿ ಕರೆದುಕೊಂಡು ಹೋಗಿ ಮಣಿಪಾಲದ ಆಸ್ಪತ್ರೆಗೆ ಸೇರಿಸಿದ್ದಾಯಿತು. ಆಗಲೇ ಅತ್ತಿಗೆಗೆ ಆಗಾಗ ಪ್ರಜ್ಞೆ ತಪ್ಪುತ್ತಿತ್ತು. ಸ್ವಲ್ಪ ಹೊತ್ತು ಕಳೆದಿದ್ದರೆ ಬದುಕುತ್ತಲೇ ಇರಲಿಲ್ಲ ಎಂದರು ಅಲ್ಲಿನ ಡಾಕ್ಟರು.  ಅಲ್ಲಿ ಒಂದೆರಡು ತಿಂಗಳಿದ್ದು ಅತ್ತಿಗೆ ಹುಷಾರಾಗಿ ಮನೆಗೆ ಬಂದರು ಅಂತ ಆಯಿತು.

ಈ ಹೆಚ್ಚುವರಿ ಆಸ್ಪತ್ರೆ ಖರ್ಚಿನಿಂದ ಅಪ್ಪಯ್ಯನಿಗೆ ಮತ್ತೆ ಸಾಲವಾಯಿತು. ಅದನ್ನು ಭರಿಸಲು ಒಂದು ಉಪಾಯದ ದಾರಿ ಹಿಡಿದರು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ