ಬುಧವಾರ, ಅಕ್ಟೋಬರ್ 11, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 22

 ಆದರೂ ನಾನು ಕಾಲೇಜನ್ನು ಅವಗಣಿಸುವ ಹಾಗಿರಲಿಲ್ಲ. ನಮಗೆ ಆಗಾಗ ಕ್ಲಾಸ್ ಟೆಸ್ಟ್ ಅಂತ ಇರುತ್ತಿತ್ತು. ಅದಕ್ಕಾಗಿಯಾದರೂ ಚೂರು ಪಾರು ಓದಿಕೊಳ್ಳಬೇಕಾಗುತ್ತಿತ್ತು. ಆದರೆ ಅದನ್ನು ನಾನು ಇಲ್ಲಿ ವಿವರಿಸಿ ನಿಮ್ಮನ್ನು ಬೋರು ಹೊಡೆಸುವುದಿಲ್ಲ. ಯಾಕೆಂದರೆ ಅದು ಎಲ್ಲರ ಸಾಮಾನ್ಯ ಅನುಭವವೆ. ನಮಗೆ, ಮೊದಲು ಎರಡು ವರ್ಷ ಡಾ. ಶಾಂತರಾಮ್ ಪ್ರಿನ್ಸಿಪಾಲ್ ಆಗಿದ್ದರೆ, ಮೂರನೆಯ ವರ್ಷ ಎ. ನಾರಾಯಣ ಆಚಾರ್ಯರು ಆಗಿದ್ದರು. ಇಬ್ಬರೂ ದಕ್ಷ ವ್ಯಕ್ತಿಗಳೆ. ಕಾಲೇಜಿನ ಆಡಳಿತ ನಡೆಸಲು ಸಮರ್ಥರೆ ಆಗಿದ್ದರು. ನಮಗೆ ಲೆಕ್ಚರರ್ ಆಗಿ ಮಂಕಿ ಕೇಶವ ಮಯ್ಯರು, ಮನೋಹರ ಪೈಯವರು, ಸಿ.ಪಿ. ಅತಿಕಾರಿಗಳು, ವೆಂಕಟಕೃಷ್ಣ ಐತಾಳರು, ಕೃಷ್ಣ ಐತಾಳರು, ನಾಗರಾಜ್, ಮಂಜುನಾಥ್,  ಡಿ. ಆರ್. ಪಾಂಡುರಂಗ, ಹಯವದನ ಭಟ್ ಮೊದಲಾದವರು ಇದ್ದರು. ಕೆಲವರ ಹೆಸರು ನೆನಪಿಗೆ ಬರುತ್ತಿಲ್ಲ. ಆಗ ಜಯಪ್ರಕಾಶ ಮಾವಿನಕುಳಿ ಮತ್ತು ವಸಂತ ಬನ್ನಾಡಿಯವರೂ ಅದೇ ಕಾಲೇಜಿನಲ್ಲಿ ಇದ್ದಿದ್ದರು. ಅವರು ಹಲವಾರು ನಾಟಕಗಳನ್ನು ನಿರ್ದೇಶನ ಮಾಡುತ್ತಿದ್ದರು. ಅವರ ನಾಟಕ  ಇದೆ ಎಂದಾದರೆ ನಾನೂ ಅದರಲ್ಲಿ ಒಬ್ಬ ಪಾತ್ರದಾರಿ ಆಗಿರುತ್ತಿದ್ದೆ. ಆಗಲೇ ವಸಂತ ಬನ್ನಾಡಿಯವರ “ಕತ್ತಲೆ ದಾರಿ ದೂರ”, “ಚಾಕ್ ಸರ್ಕಲ್”, ಮಾವಿನಕುಳಿಯವರ “ಮಾರೀಚನ ಬಂಧುಗಳು” ಮುಂತಾದ ನಾಟಕಗಳಲ್ಲಿ ನಾನೂ ಅಭಿನಯಿಸಿದ್ದೆ.

ನಮ್ಮ ಕಾಲೇಜಿನಲ್ಲಿ ವರ್ಷ ಬಿಟ್ಟು ವರ್ಷ ಕಾಲೇಜ್ ಡೆ ಆಗುತ್ತಿತ್ತು. ಸಿ.ಪಿ. ಅತಿಕಾರಿಗಳು ಮತ್ತು ಶಂಭು ಶಂಕರರ ಮುಂದಾಳುತನದಲ್ಲಿ ನಡೆಯುವ ಯಕ್ಷಗಾನದಲ್ಲಿ ನಾನು ಪ್ರಥಮ ವರ್ಷ “ರುಕ್ಮಿಣಿ ಕಲ್ಯಾಣ”ದಲ್ಲಿ ರುಕ್ಮನಾಗಿ ಅಭಿನಯಿಸಿದ್ದೆ. ಆಗ ಗುರುಪ್ರಸಾದ ಐತಾಳ ಕೃಷ್ಣನಾಗಿ ಹಾಗೂ ಬಹುಷ್ಯ ಮಂಜುನಾಥ ಐತಾಳ ರುಕ್ಮಿಣಿಯಾಗಿ ಅಭಿನಯಿಸಿದ್ದ ನೆನಪು.

ಅಂತಿಮ ವರ್ಷದಲ್ಲಿ ಆಡಿದ ವಿದ್ಯುನ್ಮತಿ ಕಲ್ಯಾಣದಲ್ಲಿ ನನ್ನದು ಚಿತ್ರಕೇತ, ಆ ಅವಧಿಯಲ್ಲಿ ನಡೆದ ಒಂದು ಘಟನೆ ನೆನಪಾಗುತ್ತದೆ. ಒಬ್ಬ ಪ್ರಸಿದ್ಧರಾದ ಭಾಗವತರೇ ನಮ್ಮ ಆಟಕ್ಕೆ ಭಾಗವತರಾಗಿ ಸಿಕ್ಕಿದ್ದರು. ಒಂದು ದಿನ, ನಮ್ಮ ಟ್ರಯಲ್ ಆಗುತ್ತಿರುವಾಗ, ಜಯಂತನು (ಪ್ರಭಾಕರ ಐತಾಳ) ವಿದ್ಯುನ್ಮತಿಯ ತಂದೆ ಸುಲೋಚನನಿಗೆ (ವೆಂಕಟೇಶ ಹಂದೆ) ಹೇಳುವ ಪದ್ಯ “ಕೇಳೂ ಗಂದರ್ವೇಶ ನೀನು” ಎಂಬುದನ್ನು ಭಾಗವತರು ಬೇರೆ ಯಾವುದೋ ರಾಗದಲ್ಲಿ ಹಾಡಿದರು. ನನಗೆ ಅದು ಮೋಹನರಾಗದಲ್ಲಿ ಅಪ್ಪಯ್ಯ ಹಾಡುತ್ತಿದ್ದುದು ನೆನಪಿತ್ತು. ಮೊದಲು ಒಂದೆರಡು ಟ್ರಯಲಲ್ಲಿ ಸುಮ್ಮನಿದ್ದರೂ ಒಂದು ಸಲ ತಡೆಯಲಿಕ್ಕೆ ಆಗದೇ ಆ ಪದ್ಯವನ್ನು ಹಾಡುವಾಗ ಅರ್ಧಕ್ಕೆ ತಡೆದು ನಿಲ್ಲಿಸಿ, “ಸರ್, ನಮ್ಮ ಅಪ್ಪಯ್ಯ ಅದನ್ನು ಮೋಹನ ರಾಗದಲ್ಲಿ ಹಾಡುತ್ತಿದ್ದರು ಅಂತ ನೆನಪು. ಅದೇ ಚಂದವಲ್ಲವೇ? ಸಂಪ್ರದಾಯದಲ್ಲಿರುವುದು ಹಾಗಲ್ಲವೇ?” ಎಂದುಬಿಟ್ಟೆ. ಆ ಭಾಗವತರಿಗೆ ಒಮ್ಮೆಲೇ ಸಿಟ್ಟು ಬಂತು. ಅವಮಾನವಾಯಿತು. “ಏನು? ನೀನು ನನಗೆ ಭಾಗವತಿಕೆ ಹೇಗೆ ಮಾಡುವುದು ಎಂದು ಹೇಳಿಕೊಡುವುದೇ? ಆ ಪದ್ಯವನ್ನು ಹೀಗೆಯೂ ಹೇಳಬಹುದು. ನನಗೇ ಹೇಳಲು ಬರುತ್ತೀಯಲ್ಲ. ನಾನೂ ನಿನ್ನ ಅಪ್ಪಯ್ಯನೂ ಸಮ ಪ್ರಾಯದವರು ಗೊತ್ತುಂಟಾ?” ಎಂದು ಮುನಿಸಿಕೊಂಡು ಟ್ರಯಲ್ ನ್ನು ಅಲ್ಲಿಗೇ ನಿಲ್ಲಿಸಿದರು. ನಾನು “ಹಾಗಲ್ಲ ಮಾರಾಯ್ರೆ, ಬೇಸರಿಸಬೇಡಿ. ನನಗೆ ನಿಮ್ಮನ್ನು ನೋಯಿಸುವ ಉದ್ದೇಶ ಇರಲಿಲ್ಲ” ಎಂದು ಎಷ್ಟು ಸಮಾಧಾನ ಮಾಡಿದರೂ ಅವರು ಮತ್ತೆ ತಾಳವನ್ನು ಹಿಡಿಯಲು ಒಪ್ಪಲೇ ಇಲ್ಲ. ಅಂತೂ ಆ ದಿನ ಅಷ್ಟಕ್ಕೇ ಟ್ರಯಲ್ ನಿಂತು ಹೋಯಿತು. ಅಷ್ಟು ಮಾತ್ರವಲ್ಲ ಅಂದು ಹೋದವರು  ಮುಂದಿನ ಸಲದ ಟ್ರಯಲ್ ಗೂ ಬರದೇ ಇದ್ದಾಗ, ನಮಗೂ ಇನ್ನೇನು ಮಾಡುವುದು? ಎಂದು ಯೋಚನೆಯಾಯಿತು. ಆಟಕ್ಕೆ ಹೆಚ್ಚುದಿನವೂ ಇರಲಿಲ್ಲ. ಕೊನೆಗೆ ನಮ್ಮವರೇ ಆದ ಐರೋಡಿ ಸದಾನಂದ ಹೆಬ್ಬಾರರ ಮನೆಗೆ ಹೋಗಿ ಪರಿಸ್ಥಿತಿಯನ್ನು ವಿವರಿಸಿ, ಅವರನ್ನು ಆಟಕ್ಕೆ ಒಪ್ಪಿಸಿದೆ. ಅವರಿಂದ ಟ್ರಯಲ್ ಮಾಡಿಸಿಕೊಂಡು ಆಟ ಮಾಡಬೇಕಾಯಿತು.

 ಆಗ ಸ್ವಲ್ಪ ಯಕ್ಷಗಾನ ಗೊತ್ತಿದ್ದವರು ತಮಗೆ ಮುಖ್ಯಪಾತ್ರವೇ ಬೇಕು ಸ್ತ್ರೀ ವೇಷ ಬೇಡ, ಕಿರೀಟ ವೇಷ ಬೇಡ ಎನ್ನುತ್ತಿದ್ದುದರಿಂದ ನಮಗೆ ಎಲ್ಲರನ್ನೂ ಮೆಚ್ಚಿಸಲು ಬಹಳ ಕಷ್ಟವಾಗುತ್ತಿತ್ತು. ಹಾಗಾಗಿ ತುಂಬಾ ವೇಷಗಳು ಇರುವ ಪ್ರಸಂಗವನ್ನೇ ಆರಿಸಬೇಕಾಗಿತ್ತು. ಆದರೂ ಕೆಲವರು ಟ್ರಯಲ್ ಗೂ ಬಾರದೇ ಆಟದ ದಿನ ಎಲ್ಲ ಮಾಡುತ್ತೇವೆ ಎನ್ನುತ್ತಿದ್ದುದರಿಂದ  ಸಮಸ್ಯೆಯಾಗುತ್ತಿತ್ತು. ಅಂತೂ ಏನೇ ಆದರೂ ನಮ್ಮ ಆಟವು, ಸ್ಟೇಜ್ ಪ್ರೋಗ್ರಾಂ,ಭಾಷಣ, ಹಾಡು ,ಮಿಮಿಕ್ರಿ ಮತ್ತೆ ನಾಟಕ ಎಲ್ಲಾ ಮುಗಿದ ಮೇಲೆ ಆಗುತ್ತಿದ್ದರೂ, ಪ್ರತೀ ಸಲ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿತ್ತು.

ನಮ್ಮ ಅವಧಿಯಲ್ಲಿ ಒಂದು ಉತ್ಸಾಹಿಗಳ ಹುಡುಗರ ಗುಂಪು ಇತ್ತು. ಅವರಿಗೆ ವೆಂಕಟರಾವ್ ಎನ್ನುವ ಲೆಕ್ಚರರ್ ಮುಂದಾಳತ್ವ. ಒಮ್ಮೆ ನಾವು ಅವರ ಮಂದಾಳುತನದಲ್ಲಿ ಕೊಟಚಾದ್ರಿಗೆ ಟ್ರಕ್ಕಿಂಗ್ ಹೋದ ಅನುಭವ ಮರೆಯಲಾಗದ್ದು. ನಾವು ಮಾಮೂಲು ದಾರಿಯನ್ನು ಬಿಟ್ಟು ಕೊಲ್ಲೂರಿನಿಂದ ನೇರವಾಗಿ ಗುಡ್ಡವನ್ನು ಏರಿ ಕಾಡಿನಲ್ಲಿ ದಾರಿ ಮಾಡಿಕೊಂಡು ನಡೆದು ಆ ಕಾಡಿನ ಮಧ್ಯ ಒಂದು ರಾತ್ರಿ ಇದ್ದು, ಕೊಟಚಾದ್ರಿ ಪರ್ವತವನ್ನು ಏರಿ, ಅದರ ತುತ್ತತುದಿಯಲ್ಲಿರುವ ಸರ್ವಜ್ಞ ಪೀಠಕ್ಕೆ ಹೋಗಿದ್ದೆವು. ಅದು ಒಂದು ಅಪೂರ್ವವಾದ ಅನುಭವ.

ಸುಮಾರು ಮುವ್ವತ್ತು ಮುವತ್ತೈದು ವಿದ್ಯಾರ್ಥಿಗಳು, ಜಯರಾಮ ಎಂಬ ಲೆಕ್ಚರರ್ ರ ನೇತೃತ್ವದಲ್ಲಿ ಒಂದು ಬೆಳಿಗ್ಗೆ ಕುಂದಾಪುರದಿಂದ ಬಸ್ಸಿನಲ್ಲಿ ಹೊರಟು,  ಮಧ್ಯಾಹ್ನದ ಹೊತ್ತಿಗೆ ಕೊಲ್ಲೂರು ಸೇರಿ, ಮೂಕಾಂಬಿಕೆಯ ದರ್ಶನ ಮಾಡಿಕೊಂಡು. ಅಲ್ಲಿಯೇ ಊಟದ ಪ್ರಸಾದ ಸ್ವೀಕರಿಸಿದೆವು. ಸುಮಾರು ಮೂರು ಗಂಟೆಯ ಹೊತ್ತಿಗೆ ಕೊಟಚಾದ್ರಿ ಬೆಟ್ಟವನ್ನು ಏರಲು ಹೊರಟೆವು. ಮಾಮೂಲು ರಸ್ತೆಯಲ್ಲಿಯೇ ನಡೆದು ನಾಗೋಡಿ ಎಂಬಲ್ಲಿ ಮಣ್ಣುರಸ್ತೆಗೆ ತಿರುಗಿ ಸ್ವಲ್ಪ ಮುಂದೆ ಹೋಗುತ್ತಿದ್ದಂತೆಯೇ, ಆ ದಾರಿಯನ್ನೂ ಬಿಟ್ಟು ಬೆಟ್ಟದ ತುದಿ ಯಾವ ದಿಕ್ಕಿನಲ್ಲಿ ಕಾಣುತ್ತದೋ ಆ ದಿಕ್ಕಿಗೆ ತಿರುಗಿ, ದಟ್ಟವಾದ ಆ ಕಾಡಿನಲ್ಲಿ ನಮ್ಮದೇ ದಾರಿಯನ್ನು ಮಾಡಿಕೊಂಡು ನಡೆಯತೊಡಗಿದೆವು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ