ಬುಧವಾರ, ಅಕ್ಟೋಬರ್ 18, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 31

ಆಗ ಪೇಪರ್ ಓದುವುದಕ್ಕೆ ಪ್ರತೀದಿನ ಸಂಜೆ, ಹಾಲಾಡಿಯವರೆಗೆ ಹೋಗಿ ಅಲ್ಲಿ ಗೋಳಿಯವರ ಅಂಗಡಿಯಲ್ಲಿ ಕುಳಿತು, ಅವರು ತರಿಸುವ ಉದಯವಾಣಿ, ಪ್ರಜಾವಾಣಿ ಪತ್ರಿಕೆಗಳನ್ನು ಓದುತ್ತಿದ್ದೆ. “ಬೇಕಾಗಿದ್ದಾರೆ” ಎಂಬ ಅಂಕಣದಲ್ಲಿ ನನ್ನ ವಿದ್ಯೆಗೆ ಹೊಂದುವ ಪ್ರಕಟಣೆಯ ವಿವರಗಳನ್ನು ಗುರುತು ಮಾಡಿಕೊಂಡು ತಪ್ಪದೇ ಅರ್ಜಿ ಹಾಕುತ್ತಿದ್ದೆ. ಕೆಲವೊಂದು ಕಡೆ ಸಂದರ್ಶನಕ್ಕೆ ಅಂತ ಹೋಗಿಯೂ ಬಂದೆ. ಆದರೆ ಎಲ್ಲಿಯೂ ಕೆಲಸ ಸಿಗಲಿಲ್ಲ. ಒಮ್ಮೆ ಸಕಲೇಶಪುರಕ್ಕೆ ಯಾವುದೋ ಕಂಪೆನಿಯ ಲ್ಯಾಬ್ ಲ್ಲಿ ಕೆಲಸ ಮಾಡುವ ಬಗ್ಗೆ ಸಂದರ್ಶನಕ್ಕೆ ಹೋದಾಗ, ಚಿಕ್ಕಮಂಗಳೂರಿನಲ್ಲಿ ಬಸ್ ಇಳಿದು ಮತ್ತೊಂದು ಬಸ್ ಹತ್ತುವಾಗ ಆ ಬಸ್ಸಿನಲ್ಲಿ ಹುಣಿಸೇಮಕ್ಕಿಯವರೊಬ್ಬರ ಪರಿಚಯವಾಗಿ, ಅವರ ಒತ್ತಾಯಕ್ಕೆ ಮಣಿದು ಅವರ ಮನೆಯಲ್ಲಿಯೇ ಉಳಿದು ಸಂದರ್ಶನಕ್ಕೆ ಹೋಗಿ ಮರುದಿನ ಬಂದಿದ್ದೆ.  ಮತ್ತೊಮ್ಮೆ ಅಳಿಕೆಯ ಸತ್ಯಸಾಯಿ ವಿದ್ಯಾಸಂಸ್ಥೆಗೂ ಟ್ಯೂಟರ್ ಕೆಲಸಕ್ಕಾಗಿ ಹೋಗಿ, ಒಂದು ದಿನ ಇದ್ದು ಮಕ್ಕಳಿಗೆ ಪಾಠವನ್ನೂ ಮಾಡಿದ್ದೆ. ಕೆಲವು ಸಲ ಅರ್ಜಿ ಹಾಕಿದ ಮೇಲೆ ಕರೆ ಬಂದರೂ ಅವರು ಕೊಡುವ ಸಂಬಳಕ್ಕೆ ಅಷ್ಟುದೂರ ಹೋಗಿ ಉಳಿಯುವ ಧೈರ್ಯ ಸಾಲದೇ ಸುಮ್ಮನಾಗುತ್ತಿದ್ದೆ. ನಿರಾಶೆಯಾಗಿ ಒಬ್ಬನೇ ಮನೆಯ ಪಕ್ಕದಲ್ಲಿರುವ ತೋಡಿನ ಅಂಚಿನಲ್ಲಿರುವ ಹುಣಿಸೇಮರದ ಅಡಿಯಲ್ಲಿ, ಒಮ್ಮೊಮ್ಮೆ ಅದೆಷ್ಟೋ ಹೊತ್ತು ಕುಳಿತುಕೊಂಡು ಅಳುತ್ತಿದ್ದೆ. ಅಪ್ಪಯ್ಯ ಇದ್ದಿದ್ದರೆ ಅವರ ಹೆಸರಿನ ಪ್ರಭಾವದಿಂದ ಅವರ ಗುರುತಿನ ಮೇಲೆ, ಇಷ್ಟರ ಒಳಗೆ ಏನಾದರೂ ಕೆಲಸ ಸಿಗುತ್ತಿತ್ತು ಅಂತ ಸಾವಿರ ಸಲ ಅನ್ನಿಸುತ್ತಿತ್ತು. ಶಿವರಾಮ ಕಾರಂತರ ಒಂದು ಕಾದಂಬರಿಯಲ್ಲಿ  ಇದ್ದ ಮಾತು ಪದೇ ಪದೇ ಮನಸ್ಸಿಗೆ ಬರುತ್ತಿತ್ತು. ಈ ಪ್ರಪಂಚದಲ್ಲಿ, ಕೆಲವರು ಜಯಿಸುವುದಕ್ಕಾಗಿ ಹುಟ್ಟುತ್ತಾರೆ. ಕೆಲವರು ಸೋಲುವುದಕ್ಕಾಗಿ. ಅದರಲ್ಲಿ ನಾಚಿಕೆಯೇನು? ನಾವು ಬಿತ್ತಿದ ಬೀಜದಲ್ಲಿ ಉಳಿಯುವುದು ನಾಲ್ಕಾದರೆ, ಅಳಿದುಹೋಗುವುದು ಒಂಬೈನೂರ ತೊಂಬತ್ತಾರು. ಬದುಕಿನಲ್ಲಿ ಹೋರಾಟವಿಲ್ಲದೇ ಸೋತರೆ ಅದು ಸೋಲು. ಹೋರಾಡಿ ಸೋತರೆ ಅದು ಸೋಲಲ್ಲ. ಅದರಿಂದ ಅವಮಾನವಿಲ್ಲ. ಕೆಲವರು ತಾವು ಬಯಸಿದಂತೆ ಬದುಕುತ್ತಾರೆ. ಆದರೆ ಹಲವಾರು ಮಂದಿ ಸಾವಿರಕ್ಕೊಬ್ಬರಾಗಿ ಹೇಳ ಹೆಸರಿಲ್ಲದೇ ಬದುಕಿ ಸಾಯುತ್ತಾರೆ. ಆ ಬಹು ಸಂಖ್ಯಾತರ ಪಕ್ಷ ನಮ್ಮದು. ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದೆ.

ಒಂದು ದಿನ ಹಾಲಾಡಿಯಲ್ಲಿ ಪೇಪರ್ ಓದಲಿಕ್ಕೆ ಹೋಗಿದ್ದಾಗ, ಜೈರಾಮ ಹಾಲಂಬಿ ಎನ್ನುವವರು ಪೇಟೆಯಲ್ಲಿ ಸಿಕ್ಕಿದವರು, “ಹಾಲಾಡಿ ನರಸಿಂಹ ದೇವಸ್ಥಾನವು ಖಾಯಂ ಪೂಜೆಯವರಿಲ್ಲದೇ ಜೀರ್ಣಾವಸ್ಥೆಯಲ್ಲಿದೆ. ಅದರ ಬಗ್ಗೆ ಚರ್ಚಿಸಲು ಶೃಂಗೇರಿಯಿಂದ ಸ್ವಾಮಿಗಳು ಬರುತ್ತಾರೆ. ನಾವು ಊರಿನ ಕೆಲವು ಯುವಕರು ಸೇರಿ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ರಿಪೇರಿ ಮಾಡಿ, ದಾರಿಯಲ್ಲಿ ತಳಿರು ತೋರಣ ಕಟ್ಟುವ ಕೆಲಸ ಮಾಡುತ್ತೇವೆ. ಮನೆಯಲ್ಲೇ ಇದ್ದಿಯಂತಲ್ಲ ನೀನೂ ಬಾ”. ಎಂದು ಕರೆದರು. ಮರುದಿನ ಬೆಳಿಗ್ಗೆ ಹೋದವನು ಅವರೊಂದಿಗೆ ಸೇರಿ, ಹಾಲಾಡಿ ಪೇಟೆಯಿಂದ ಲಕ್ಷ್ಮೀ ನರಸಿಂಹ ದೇವಸ್ಥಾನ ದವರೆಗೆ ಇರುವ ಸುಮಾರು ಅರ್ಧ ಕಿಲೋಮೀಟರ್ ದೂರದ ರಸ್ತೆಯನ್ನು ಮಣ್ಣು ಹಾಕಿ ಸರಿಪಡಿಸಿದೆವು. ರಸ್ತೆಯ ಬದಿಯಲ್ಲಿ ಅಲ್ಲಲ್ಲಿ ಬಯಣಿಮರದ ಗೆಲ್ಲು ಹುಗಿದು ಮಾವಿನ ಎಲೆಯ ತೋರಣ ಕಟ್ಟುವ ಕೆಲಸದಲ್ಲಿ ಅವರಿಗೆ ನೆರವಾದದ್ದಾಯಿತು. ಶೃಂಗೇರಿ ಸ್ವಾಮಿಗಳು ನಿಶ್ಚಿತ ದಿನದಂದು ಆಗಮಿಸಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ವಿಷಯದಲ್ಲಿ ತಾನು ಸಹಾಯ ಮಾಡುವುದಾಗಿಯೂ, ಊರವರು ಕೈಜೋಡಿಸಬೇಕೆಂದೂ ವಿನಂತಿ ಮಾಡಿದರು. ಆ ದಿನ ಮಧ್ಯಾಹ್ನ ದೇವಸ್ಥಾನದಲ್ಲೇ ಊಟದ ವ್ಯವಸ್ಥೆಯೂ ಇದ್ದು ನಾವೆಲ್ಲ ಒಟ್ಟಿಗೇ ಪರಸ್ಪರ ಸಹಾಯ ಮಾಡುತ್ತಾ ಓಡಾಡಿದ ನೆನಪು. ಪ್ರಸಿದ್ಧ ಜ್ಯೋತಿಷಿಗಳಾದ ತಟ್ಟುವಟ್ಟು ವಿಶ್ವನಾಥ ಜೋಯಿಸರು ಆ ಬಗ್ಗೆ ಮುಂದಾಳತ್ವ ವಹಿಸಲೂ ಒಪ್ಪಿದರು. ಮುಂದೆ ಕೆಲವು ಸ್ವಹಿತಾಸಕ್ತ ವ್ಯಕ್ತಿಗಳ ಪ್ರವೇಶವಾಗಿ ಪ್ರಗತಿ ಕುಂಟಿತವಾದರೂ, ತುಂಬಾ ವರ್ಷದ ನಂತರ  ಈಗ ಆ ದೇವಸ್ಥಾನದ ಜೀರ್ಣೋದ್ಧಾರವೂ ಆಯಿತು.

ಅದೇ ವೇಳೆಯಲ್ಲಿ ಗೋರಾಜಿ ಪ್ರಭಾಕರ ಹಾಲಂಬಿಯವರ ಮಗ ಉದಯ ಹಾಲಂಬಿ ಎನ್ನುವವನು, ಒಮ್ಮೆ ಸಿಕ್ಕಿದಾಗ, “ಹಾಯ್ಕಾಡಿ ಶಾಲೆಯ ವಾರ್ಷಿಕೋತ್ಸವದಲ್ಲಿ ನಾವೊಂದು ನಾಟಕ ಮಾಡುತ್ತಿದ್ದೇವೆ. ನೀನೂ ಪಾರ್ಟು ಮಾಡು” ಅಂದ. ಆಗ ಅವನ ಜೊತೆಗೆ, ಅವನ ಅಣ್ಣ ರವಿ, ಮತ್ತು ಅರುಣ ಮತ್ತು ತಮ್ಮ ದಿನೇಶ ಹಾಗೂ ಕೆಲವರು ಯುವಕರೆಲ್ಲ ಸೇರಿ ನಾಟಕ ಮಾಡಲು ನಿರ್ಣಯಿಸಿದ್ದರು. ಅವರ ತಂದೆ ಪ್ರಭಾಕರ ಹಾಲಂಬಿಯವರನ್ನು ನಾವು ಚಿಕ್ಕಂದಿನಿಂದ ಬಲ್ಲವರು. ಮೊದಲು ಕಂಪೆನಿಯ ನಾಟಕದಲ್ಲಿ ಒಳ್ಳೆಯ ಸ್ತ್ರೀ ಪಾರ್ಟ್ ಮಾಡುತ್ತಿದ್ದರಂತೆ. ಹಾರ್ಮೋನಿಯಂ ಬಾರಿಸಿಕೊಂಡು ನಾಟಕದ ಪದ್ಯಗಳನ್ನು ಚೆನ್ನಾಗಿ ಹಾಡುತ್ತಿದ್ದರು. ಒಳ್ಳೆಯ ಕಂಠ. ನಾವು ಚಿಕ್ಕಂದಿನಲ್ಲಿ ಅವರ ಮನೆಗೆ ಹೋಗಿ ಪ್ರಭಾಕರ ಹಾಲಂಬಿಯವರ ಮಕ್ಕಳೊಡನೆ ಬೆರೆತು, ಆಟವಾಡಿ, ರಾತ್ರಿ ಅಲ್ಲಿಯೇ ಉಳಿದು ಮರುದಿನ ಬರುತ್ತಿದ್ದೆವು. ಅವರ ಮಕ್ಕಳೆಲ್ಲರಿಗೂ ನಾಟಕದ ಹುಚ್ಚು ತಂದೆಯಿಂದ ಬಂದ ಬಳುವಳಿ.

ನಾನು ಯಕ್ಷಗಾನದಲ್ಲಿ ಹಲವು ವೇಷ ಮಾಡಿದ್ದರೂ, ನಾಟಕದಲ್ಲಿ ಪಾರ್ಟು ಮಾಡಿರಲಿಲ್ಲ. ಆದರೂ ಇದೊಂದು ಅನುಭವವಾಯಿತು ಎಂದು ಒಪ್ಪಿದೆ. “ತೊಟ್ಟಿಲು ತೂಗದ ಕೈ” ಎನ್ನುವ ನಾಟಕ ಅದು. ಅದರಲ್ಲಿ ಕೆನ್ನೆಯ ಒಂದು ಬದಿಯಲ್ಲಿ ಸುಟ್ಟ ಕಲೆಯಿದ್ದು ಕುರೂಪಿಯಾದ, ಒಬ್ಬ ದುರಂತ ಕಥಾನಾಯಕಿಯ ಪಾತ್ರ ನನ್ನದು. ಇಡೀ ನಾಟಕದಲ್ಲಿ  ಕಷ್ಟ ಪಡುವುದು, ಅಳುವ ಡೈಲಾಗ್ ಗಳೇ ಇರುವುದು. ಕೆಲವು ಟ್ರಯಲ್ ಗಳ ನಂತರ ನಾಟಕದ ದಿನ ಬಂತು.

ನಾಟಕದ ದಿನ ಕೆಲವರು ಸರಿಯಾಗಿ ಬಾಯಿಪಾಠ ಕಲಿಯದಿದ್ದುದರಿಂದ ಪರದೆಯ ಹಿಂದಿನಿಂದ ಪ್ರಾಂಪ್ಟ್ ಮಾಡುವವರು ಒಬ್ಬರಿದ್ದರು. ಅವರು ಒಂದು ದೃಶ್ಯ ಮುಗಿದು, ಪಾತ್ರಗಳು ರಂಗದಿಂದ ಒಳಗೆ ಬಂದ ಕೂಡಲೇ, ಮುಂದಿನ ದೃಶ್ಯ ಯಾವುದು? ಎಂದು ನಮಗೆ ಅವರಲ್ಲಿದ್ದ ಪಟ್ಟಿಯನ್ನು ಆ ಕತ್ತಲೆಯಲ್ಲಿ ಬೆಳಕಿಗೆ ಹಿಡಿದು ನೋಡಿ ತಿಳಿಸುತ್ತಿದ್ದರು. ಆದರೆ ಅವರು ಹಿಂದಿನಿಂದ ಹೇಳಿಕೊಟ್ಟರೂ ಕೆಲವು ಪಾತ್ರಧಾರಿಗಳಿಗೆ ಅದು ಕೇಳದೇ, ಅವರದೇ ಅಂದಾಜಿನ ಮೇಲೆ ಏನೋ ಹೇಳಿ, ಇವರಿಗೆ ಆ ಡೈಲಾಗ್ ಎಲ್ಲಿದೆ? ಎಂಬುದು ತಿಳಿಯದೇ ಗೊಂದಲವಾಗುತ್ತಿತ್ತು. ಆದರೆ ಆ ಪ್ರಾಂಪ್ಟ್ ಮಾಡುವವರು ಪಾತ್ರಧಾರಿಗಳು ಒಳಗೆ ಬರುತ್ತಿದ್ದಂತೆ, ಅವರ ಹಿಂದೆ ಹೋಗಿ ಎಲ್ಲಿ ತಪ್ಪಿದ್ದು? ಅಂತ ಹೇಳಿ, ಮುಂದೆ ಸರಿ ಮಾಡಬೇಕು, ತಾನು ಈ ಕಡೆಯಲ್ಲಿ ಇರುತ್ತೇನೆ. ಜಾಗ್ರತೆ” ಎಂದು ಎಚ್ಚರಿಕೆ ಹೇಳಿ, ಆ ಕಡೆ ಈ ಕಡೆ ಓಡಾಡುತ್ತಾ ಇರುವಾಗ, ಮುಂದಿನ ದೃಶ್ಯ ಯಾವುದು? ಅದಕ್ಕೆ ಯಾರು ಯಾರು ಹೋಗಬೇಕು? ಎಂದು ಹೇಳುವ ಮೊದಲೇ, ಗಡಿಬಿಡಿಯಲ್ಲಿ ನಾನು ನನ್ನ ದೃಶ್ಯ ಎಂದು ತಿಳಿದು ಸ್ಟೇಜಿಗೆ ಹೋಗಿ ಮಾತನ್ನು ಶುರು ಮಾಡಿಬಿಟ್ಟೆ. ಆದರೆ ಅದು ನನ್ನ ದೃಶ್ಯ ಹೌದಾಗಿದ್ದರೂ ಮಧ್ಯದ ಒಂದು ಸಣ್ಣ ದೃಶ್ಯವನ್ನು ಬಿಟ್ಟು, ಮುಂದಿನ ದೃಶ್ಯದ ಮಾತನ್ನು ಹೇಳಿಬಿಟ್ಟಿದ್ದೆ. ಅದು ಅಷ್ಟು ಪ್ರಾಮುಖ್ಯ ದೃಶ್ಯವಲ್ಲದಿದ್ದರೂ ಆ ದೃಶ್ಯದಲ್ಲಿ ಬರುವ ಎದುರು ಪಾತ್ರಧಾರಿಗೆ ತಿಳಿಯದಿದ್ದರೆ, ಎಲ್ಲಾ ಅಸ್ತವ್ಯಸ್ತವಾಗುವ ಸಾಧ್ಯತೆ ಇತ್ತು. ನನಗೆ ಅದು ಗೊತ್ತಾದರೂ ಏನೂ ಮಾಡುವ ಹಾಗಿರಲಿಲ್ಲ. ಮುಂದೇನಾಗುತ್ತದೋ ಎಂದು ಗಾಬರಿಯಾಯಿತು. ಪ್ರಾಂಪ್ಟ್ ಮಾಡುವವರಿಗೆ ನಾಟಕ ಎಲ್ಲಿಗೆ ಬಂತು? ಅಂತ ತಿಳಿಯದೇ ಗಡಿಬಿಡಿಯಾಯಿತು. ಅಷ್ಟರಲ್ಲಿ ಎದುರು ಪಾತ್ರಧಾರಿಗಳಿಗೂ ಅದನ್ನು ಯಾರೋ ಹೇಳಿರಬೇಕು. ನಾನು ಒಳಗೆ ಬರುತ್ತಲೇ, ಅವರು “ಏನ್ ಮಾಡಿದ್ರಿ ಮರ್ರೆ? ನೀವು ಒಂದು ದೃಶ್ಯ ಹಾರ್ಸಿ ಬಿಟ್ರ್ಯಲೆ. ಇನ್ನೆಂತ ಮಾಡೂದ್? ನಾಟ್ಕ ಬಿದ್ದೇ ಹೋಯ್ತ್” ಎಂದು ಮತ್ತಷ್ಟು ಹೆದರಿಸಿದರು. ನಾನು “ಹೋದದ್ದು ಹೋಗಲಿ ಮರ್ರೆ. ಮುಂದಿನದ್ದು ಮಾಡುವ” ಎಂದು ಅವರಿಗೆ ಸಮಾಧಾನ ಮಾಡಬೇಕಾಯಿತು. ಸದ್ಯ ಸಭೆಯಲ್ಲಿ ಯಾರಿಗೂ ಅದು ಗೊತ್ತಾಗದಿದ್ದುದು ಪುಣ್ಯ. ಅಂತೂ ನಾಟಕ ಮುಗಿಯಿತು. ಎಲ್ಲರೂ ನಾಟಕ ಬಹಳ ಚೆನ್ನಾಗಿ ಆಯಿತು ಅನ್ನುವವರೆ. ಆದರೆ ನನಗೆ ಏನೇನೂ ಸಮಾಧಾನವಾಗಲಿಲ್ಲ.

 (ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ