ಗುರುವಾರ, ಅಕ್ಟೋಬರ್ 26, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 38

ನಾನು ಕೆಲಸಕ್ಕೆ ಸೇರಿ ಒಂದು, ಮೂರು ನಾಲ್ಕು ತಿಂಗಳು ಆಗಿರಬಹುದು. ನನ್ನ ಬಲಗಾಲಿನ ಹೆಬ್ಬೆಟ್ಟಿನ ಹತ್ತಿರ ಒಳಭಾಗದಲ್ಲಿ ಸಣ್ಣ  ಕಜ್ಜಿಯ ಹಾಗೆ ಒಂದು ಗುಳ್ಳೆ ಆಯಿತು. ಸ್ವಲ್ಪ ತುರಿಕೆಯೂ ಇದ್ದುದರಿಂದ ಔಷಧದ ಅಂಗಡಿಗೆ ಹೋಗಿ ಏನೋ ಒಂದು ಬಿಳಿಮುಲಾಮನ್ನು ತಂದು ಹಚ್ಚಿದೆ. ಎರಡು ಮೂರು ದಿನಗಳಾದರೂ ಅದು ಹಾಗೆಯೇ ಇತ್ತು. ಆಗ ಉಡುಪಿಯಲ್ಲಿ ಆನೆ ಕಾಲುರೋಗ ತುಂಬಾ ಇತ್ತು. ಕೆಲವರ ಕಾಲನ್ನು ನೋಡಿದರೆ ಭಯವಾಗುತ್ತಿತ್ತು. ಅವರ ಕಾಲು ಆನೆಯ ಕಾಲಿನಂತೆ ತೋರವಾಗುತ್ತಾ ಹೋಗಿ, ಅಲ್ಲಲ್ಲಿ ಕಜ್ಜಿಯಂತೆ ಕಪ್ಪು ಕಪ್ಪು ಮುಳ್ಳುಗಳು ಎದ್ದು, ನಡೆಯುವಾಗ ಆ ಕಾಲನ್ನು ಎತ್ತಿ ಇಡಲು ಕಷ್ಟಪಡುವ ಜನರು ಅಲ್ಲಲ್ಲಿ ಸಿಗುತ್ತಿದ್ದರು. ಆನೆ ಕಾಲುರೋಗಕ್ಕೆ ಆಗಲೇ ಮದ್ದು ಬಂದಿದ್ದರೂ, ಅದು ಸೊಳ್ಳೆಯಿಂದ ಬರುವ ಕಾಯಿಲೆಯೆಂದೂ, ಒಮ್ಮೆ ಬಂತು ಅಂತಾದರೆ ಅದನ್ನು ಅಷ್ಟಕ್ಕೆ ನಿಲ್ಲಿಸಬಹುದೇ ಹೊರತು, ಗುಣಮಾಡಲು ಆಗುವುದಿಲ್ಲ ಎಂದು ಹೇಳುತ್ತಿದ್ದರು. ನಾನು ಸೊಳ್ಳೆಪರದೆ ಹಾಕಿಕೊಂಡು ಮಲಗುತ್ತಿದ್ದೆನಾದರೂ. ಅದರ ಒಳಗೆ ಮತ್ತು ಹೊರಗೆ ಹೋಗುವಾಗ, ಎಡೆಯಿಂದ ಕೆಲವು ಸಲ ಸೊಳ್ಳೆಗಳು ಒಳಗೆ ಬಂದು ಕಚ್ಚುತ್ತಿದ್ದವು. ನನಗೂ ಆನೆಕಾಲು ರೋಗ ಬರುತ್ತದೆಯೇನೋ ಎಂಬ ಭಯವಾಯಿತು.

ಆಗ ಮಾರುತಿ ವೀಥಿಕಾದ ಚಿತ್ತರಂಜನ್ ಸರ್ಕಲ್ಲಲ್ಲಿಯೇ ಡಾ.ಬಿ.ಬಿ. ಶೆಟ್ಟಿಯವರ ಕ್ಲಿನಿಕ್ ಇತ್ತು. ಅವರು ಯಕ್ಷಗಾನ ಕಲಾವಿದರ ದೊಡ್ಡ ಅಭಿಮಾನಿಗಳು. ಆಟನೋಡುತ್ತಿದ್ದರೋ ಇಲ್ಲವೋ, ಯಾರೇ ತಾವು ಯಕ್ಷಗಾನ ಕಲಾವಿದರು ಅಂತ ಅಲ್ಲಿಗೆ ಹೋಗಿ ಪರಿಚಯ ಹೇಳಿದರು ಅಂತಾದರೆ, ಶೆಟ್ಟರದ್ದು ಅವರಿಗೆ ಉಚಿತ ಸೇವೆ. ಕೆಲವರು ಹೋದರಂತೂ ಕಾಯಿಲೆಗೆ ಮದ್ದೂ ಕೊಟ್ಟು, ಅವರೇ ಬಸ್ಸಿಗೆ ಇರಲಿ ಅಂತ ಕಿಸೆಗೆ ಸ್ವಲ್ಪ ಹಣವನ್ನೂ ಹಾಕಿ ಕಳುಹಿಸುತ್ತಿದ್ದರು. ನಾನೂ ಅಪ್ಪಯ್ಯನೊಂದಿಗೆ ಉಡುಪಿಗೆ ಬಂದಾಗ ಅವರನ್ನು ಮಾತಾಡಿಸಲು ಹೋಗಿದ್ದು ನೆನಪಿತ್ತು. ನಾನು ಅವರ ಕ್ಲಿನಿಕ್ ಗೆ ಒಂದು ಸಂಜೆ ಹೋದೆ. ಬಹುಷ್ಯ ಯಾವುದೋ ಕಲಾವಿದರೆ ಇರಬೇಕು, ಅವರೊಡನೆ ಮಾತಾಡುತ್ತಾ, ನಗುತ್ತಾ ಆರಾಮವಾಗಿ ಕುಳಿತ್ತಿದ್ದರು. ನಾನು ಹೋಗಿ ನನ್ನ ಸಮಸ್ಯೆಯನ್ನು ಹೇಳಿದೆ. ಅವರು “ಹೋ ಹೌದಾ? ನೋಡುವ”  ಎಂದು “ಒಳಗೆ ಮಂಚದ ಮೇಲೆ ಹೋಗಿ ಮಲಗು, ಬರುತ್ತೇನೆ” ಅಂದರು. ಸುಮಾರು ಹೊತ್ತು ಬಂದವರೊಂದಿಗೆ ಅವರ ಮಾತುಕತೆಯಾಯಿತು. ಕೊನೆಗೆ ಬಂದವರಿಗೇ ಮಾತು ಮುಗಿದು ಹೋದ ಮೇಲೆ ಶೆಟ್ಟರು ಒಳಗೆ ಬಂದರು. ಬಂದವರೇ “ಯಾವ ಕಾಲು? ಎಲ್ಲಿ?” ಎಂದು ತೋರಿಸಲು ಹೇಳಿದರು. ಆಗಲೇ  ನನ್ನ ಪರಿಚಯ ಕೇಳಿ ತಿಳಿದುಕೊಂಡಾಯಿತು. ನಾನು ಎದ್ದು ಕುಳಿತು, ಕಾಲಿನ ಹೆಬ್ಬೆರಳು ಮತ್ತು ಎರಡನೆಯ ಬೆರಳಿನ ಮಧ್ಯವಿರುವ ಗುಳ್ಳೆಯನ್ನು ತೋರಿಸಿದೆ. ಅವರು ಒಮ್ಮೆ ಬಗ್ಗಿ ಹತ್ತಿರದಿಂದ ನೋಡಿದರು. “ಇದಾ?” ಎಂದು ಕೈಯ ಉಗುರಿನಲ್ಲಿ ಒಮ್ಮೆ ಜೋರಾಗಿ ಒತ್ತಿದರು. “ಇದೆಂತದೂ ಅಲ್ಲ. ಬರೀ ಕಜ್ಜಿ. ಹೋಗು, ಇದಕ್ಕೆ ಮದ್ದುಗಿದ್ದು ಏನೂ ಬೇಡ” ಎಂದು ಹೊರಗೆ ಬಂದು ನನ್ನನ್ನು ಕಳಿಸಿಬಿಟ್ಟರು. ನಾನು ಪೆಚ್ಚಾಗಿ ರೂಮಿಗೆ ಬಂದೆ. ಸ್ವಲ್ಪದಿನದಲ್ಲಿಯೇ ಅದು ಎಲ್ಲಿಹೋಯಿತು? ಅಂತ ಗೊತ್ತಾಗಲಿಲ್ಲ.

ನಮ್ಮ ಆಫೀಸಿನಲ್ಲಿ ಸತ್ಯನಾರಾಯಣ ಅಂತ ಒಬ್ಬರು ಟೈಪಿಸ್ಟ್ ಇದ್ದರು. ಅವರು ನನ್ನ ಸ್ನೇಹಿತರಾದರು. ಆಗಾಗ ಸಂಜೆ ಎಲ್ಲಾದರೂ ತಿರುಗಾಡಲು ಹೋಗುತ್ತಿದ್ದೆವು. ಅವರು ಎಲ್ಲಿ ಹೋದರೂ ನನ್ನನ್ನು ಕರೆದು “ದಿನೇಶ ಬಾರಾ.” ಎಂದು ಕರೆಯುತ್ತಿದ್ದರು. ನಾನು ಅವರೊಂದಿಗೆ ಇರಬೇಕು. ವಾರಕ್ಕೆರಡು ದಿನ ಮಹದೇವರು ಎಂಬ ಇಂಜಿನಿಯರ್ ಜೊತೆಗೆ ಡಯಾನಾ ಹೋಟೇಲಿಗೆ ಹೋಗಿ ಅಲ್ಲಿಯ ಮೆನುವನ್ನು ನೋಡಿ ಪ್ರತೀಸಲ ಒಂದೊಂದು ಬಗೆಯ ತಿಂಡಿಯನ್ನು ತಿಂದು ರುಚಿ ನೋಡಿ ಬರುತ್ತಿದ್ದೆವು. ಒಬ್ಬೊಬ್ಬರು ಒಂದೊಂದು ಸಲ ಬಿಲ್ಲು ಪಾವತಿಸುವುದು. ಹೀಗೆ ಆಗ ಡಯಾನದಲ್ಲಿ ಮಾಡುತ್ತಿದ್ದ  ಎಲ್ಲಾ ತಿಂಡಿಯ ರುಚಿ ನೋಡಿದ್ದೆವು. ನಂತರ ಅವರು, ಅವರ ಊರು ಶೃಂಗೇರಿಗೆ ವರ್ಗವಾಗಿ ಹೋಗಿದ್ದರೂ ಆಗಾಗ ಉಡುಪಿಗೆ ಬಂದು ಹೋಗಿ ಮಾಡುತ್ತಿದ್ದು, ನನ್ನ ಅನೇಕ ಸುಖಕಷ್ಟಗಳ ವಿಚಾರದಲ್ಲಿ ಸಹಭಾಗಿಗಳಾಗಿದ್ದು ನನ್ನ ಸಂಪರ್ಕದಲ್ಲಿ ಇದ್ದವರು. ಇತ್ತೀಚೆಗೆ ನಿವೃತ್ತರಾದ ಮೇಲೆ ಹೃದಯಾಘಾತದಿಂದ ತೀರಿಕೊಂಡರು.

ಉಡುಪಿಯಲ್ಲಿ ಎಸ್. ವಿ. ಭಟ್ ಎನ್ನುವ ಒಬ್ಬರು ನಮ್ಮ ಕುಟುಂಬದ ಸ್ನೇಹಿತರು. ಮೊದಲು ಶ್ರೀಧರಣ್ಣಯ್ಯ ಪಿಪಿಸಿಯಲ್ಲಿ ಪಿಯುಸಿ ಓದುತ್ತಿದ್ದಾಗ  ಅವನ ರೂಮ್ ಮೇಟ್ ಆಗಿದ್ದ ಅವರು, ಮುಂದೆ ಗೌರೀಶಅಣ್ಣ ಪಿಯುಸಿ ಓದುವಾಗ ಅವರದೆ ರೂಮಿಗೆ ಸೇರಿದ. ನಂತರ ಅತ್ತಿಗೆಯು ಮೈಯನ್ನು ಸುಟ್ಟುಕೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಇದ್ದಾಗ ಕೃಷ್ಣಮೂರ್ತಿ ಅಣ್ಣಯ್ಯನೂ ಅವರ ರೂಮಿನಲ್ಲಿಯೇ ಇದ್ದು, ಅವನ ಸ್ನೇಹಿತರೂ ಆದರು. ಅಪ್ಪಯ್ಯನ ಅಭಿಮಾನಿಗಳೂ ಆದ ಅವರು, ನಮ್ಮ ಮನೆಯವರಂತೆಯೇ ಆಗಿದ್ದರು. ಅವರು ಆಟ ನೋಡಲು ಹೋದರೆ, ಆಟ ನೋಡುವುದಕ್ಕಿಂತ ಹೆಚ್ಚಾಗಿ ಚೌಕಿಯಲ್ಲಿ ಕಲಾವಿದರ ಜೊತೆಗೇ ಅವರ ಸುಖ ಕಷ್ಟ ಮಾತಾಡುತ್ತಾ ಅಲ್ಲಿಯೇ ಹೆಚ್ಚು ಹೊತ್ತು ಕಾಲಕಳೆಯುವವರು. ಆಗ ಉಡುಪಿಯಲ್ಲಿ ಯಕ್ಷಗಾನ ಕಲಾರಂಗ ಪ್ರಾರಂಭವಾಗಿದ್ದು, ಡಾ. ಬಿ.ಬಿ. ಶೆಟ್ಟರ ಮುಂದಾಳುತನದಿಂದ ಇವರೆಲ್ಲರ ಹುರುಪಿನಿಂದ ಮಳೆಗಾಲದಲ್ಲಿ ಒಳ್ಳೊಳ್ಳೆಯ ಕಲಾವಿದರನ್ನು ಕರೆಸಿ ಆಟಗಳನ್ನು ಮಾಡಿಸುತ್ತಿದ್ದರು. ಅವರ ಆಟ ಆದರೆ ಅಪ್ಪಯ್ಯನಂತೂ ಇದ್ದೇ ಇರುತ್ತಿದ್ದರು.

ಒಮ್ಮೆ ಕಲಾರಂಗದವರು ಹವ್ಯಾಸಿ ಯಕ್ಷಗಾನ ಸ್ಪರ್ಧೆಯನ್ನು ಏರ್ಪಡಿಸಿದ್ದರು. ನಾನು ನನ್ನ ಸ್ನೇಹಿತರನ್ನು ಒಟ್ಟು ಮಾಡಿ ಅದರಲ್ಲಿ ಭಾಗವಹಿಸಲು ನಿರ್ಧರಿಸಿದೆ. “ರತ್ನಾವತಿ ಕಲ್ಯಾಣ” ಎಂಬ ಪ್ರಸಂಗವನ್ನು ಆಡುವುದು ಎಂದು ತೀರ್ಮಾನಿಸಿದೆ. ಈ ಪ್ರಸಂಗ, ನಾನು ಸುಮಾರು ಹತ್ತು ಹನ್ನೆರಡು ವರ್ಷದ ಹಿಂದೆ ಸಾಲಿಗ್ರಾಮ ಮಕ್ಕಳ ಮೇಳದ ಭಾಗವತರಾದ ಶ್ರೀಧರ ಹಂದೆಯವರು ನನ್ನನ್ನು ಮೊತ್ತ ಮೊದಲು ವೇಷಮಾಡಿಸಿ ಗೆಜ್ಜೆ ಕಟ್ಟಿಸಿ ಕುಣಿಸಿದ ಪ್ರಸಂಗ. ಅದೇ ಪ್ಲೋಟ್ ನ್ನು ಶ್ರೀಧರ ಹಂದೆಯವರನ್ನು ಕೇಳಿ ತಂದೆ.  ನನ್ನ ಅಕ್ಕನ ಮಗ ವೆಂಕಟೇಶನ ಭದ್ರಸೇನ, ಮೋಹನದಾಸ ಶ್ಯಾನುಭೋಗನ ಹನುಮನಾಯ್ಕ. ಅವನ ಅಣ್ಣಂದಿರಾದ ದೇವರಾಯ ಶ್ಯಾನುಭೋಗನ ದೃಢವರ್ಮ ಮತ್ತು ಗಣೇಶ ಶ್ಯಾನುಭೋಗನ ವಿಂದ್ಯಕೇತ, ಗುರುಪ್ರಸಾದ ಐತಾಳನ ವತ್ಸಾಖ್ಯ, ಪ್ರಕಾಶ ಹಂದೆಯ ರತ್ನಾವತಿ ಮತ್ತು ಗಿರೀಶ ಹಂದೆಯ ಚಿತ್ರಧ್ವಜ ಹಾಗೂ ನನ್ನದು ವಿದ್ಯುಲ್ಲೋಚನ ಎಂಬ ರಕ್ಕಸ ವೇಷ. ಎಲ್ಲರನ್ನೂ ಮಾತಾಡಿಸಿ ಒಪ್ಪಿಸಿಯಾಯಿತು. ಭಾಗವತರು ಯಾರು ಆಗಬಹುದು? ಎಂದು ಕೋಟದ ಮೋಹನದಾಸನ ಮನೆಯ ಜುಗುಲಿಯಲ್ಲಿ ಕುಳಿತು ನಮ್ಮಲ್ಲೇ ಒಟ್ಟಾಗಿ ಚರ್ಚಿಸಿ ಕಡೆಗೆ ವಿದ್ವಾನ್ ಗಣಪತಿ ಭಟ್ಟರು ಆದೀತು ಎಂದು ನಿರ್ಣಯಿಸಿದೆವು, ಆಗ ಅವರು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಇದ್ದರು. ಅವರನ್ನು ಮಾತಾಡಿಸಿ ಒಪ್ಪಿಸಿದ್ದಾಯಿತು. ಏಳೆಂಟು ಟ್ರಯಲನ್ನೂ ಮೋಹನ ದಾಸನ ಮನೆಯ ಹತ್ತಿರದ ದೇವಸ್ಥಾನದ ಹೊರ ಪೌಳಿಯಲ್ಲಿ ಮಾಡಿಯಾಯಿತು. ಇನ್ನೇನು ಒಂದು ಹಂತಕ್ಕೆ ಬಂದಿತು ಎನ್ನುವಾಗ, ಗಣಪತಿ ಭಟ್ಟರಿಗೆ ಯಕ್ಷರಂಗದ ತಿರುಗಾಟಕ್ಕೆ ಕರೆಬಂದಿತು. ಅವರು ಮೊದಲೇ ತಿಳಿಸಿದ್ದರು. ಕಾರಂತರ ಪ್ರೋಗ್ರಾಮಿಗೆ ಕರೆ ಬಂದರೆ ತಾನು ಹೋಗಬೇಕಾಗುತ್ತದೆ ಅಂತ. ಸ್ಪರ್ಧೆಗೆ ಇನ್ನೂ ಮೂರ್ನಾಲ್ಕು ದಿನವಷ್ಟೇ ಇದೆ. ಏನು ಮಾಡುವುದು? ಕೊನೆಗೆ ನಮ್ಮ ಶ್ರೀಧರಣ್ಣಯ್ಯನನ್ನೇ ಭಾಗವತಿಕೆ ಮಾಡಲು ಒಪ್ಪಿಸಿದೆವು.  ಮೊದಲು ನನ್ನ ಮತ್ತು ಗುರುಪ್ರಸಾದ ಐತಾಳನ ಪೀಠಿಕೆ ಸ್ತ್ರೀವೇಷವೂ ಇದ್ದು, ಸಂಪೂರ್ಣ ಒಡ್ಡೋಲಗದ ಕುಣಿತಗಳನ್ನು ಪ್ರಾಕ್ಟೀಸ್ ಮಾಡಿಕೊಂಡಿದ್ದೆವು. ಸ್ಪರ್ಧೆಯ ದಿನ ಬಂತು. ನಮ್ಮ ಆಟವೂ ಜೋರಿನಿಂದಲೇ ಆಯಿತು. ಆದರೆ ಮೂರನೆಯ ಬಹುಮಾನ ಮತ್ತು ಎರಡು ವೈಯಕ್ತಿಕ ಬಹುಮಾನಗಳು ಬಂದವು. ಆದರೂ ಬಾಲ್ಯದಲ್ಲಿ ಒಟ್ಟಿಗೇ ಸೇರಿ ಮಕ್ಕಳ ಮೇಳದಲ್ಲಿ ಅಲ್ಲಿ ಇಲ್ಲಿ ಒಟ್ಟಿಗೇ ವೇಷ ಮಾಡಿದ್ದ ನಾವು, ಹತ್ತು ಹನ್ನೆರಡು ವರ್ಷಗಳ ನಂತರ ಮತ್ತೊಮ್ಮೆ ಒಟ್ಟಿಗೇ ಸೇರಿ ಆಟ ಮಾಡಿ ಖುಷಿ ಪಟ್ಟೆವು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ