ಗುರುವಾರ, ಅಕ್ಟೋಬರ್ 26, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 39

ನಾನು ಇದ್ದ ರೂಮು, ಭೋಜರಾವ್ ಕಂಪೌಂಡ್ ಅಂತ ಅದಕ್ಕೆ ಹೆಸರು. ಅಲ್ಲಿ ನಮ್ಮ ಒಂದು ರೂಮು ಮಾತ್ರಾ ಇದ್ದದ್ದಲ್ಲ. ಅದೊಂದು ದೊಡ್ಡ ಮನೆ. ಕಂಪೌಂಡು ಗೇಟು ದಾಟಿ ಒಳಗೆ ಹೋಗುತ್ತಿದ್ದಂತೆ, ದೊಡ್ಡ ಹೆಬ್ಬಾಗಿಲು, ಅದನ್ನು ತೆರೆದು ಒಳಗೆ ಕಾಲಿರಿಸಿದರೆ ಸಿಗುವುದೇ ಒಳ ಅಂಗಳ, ಸುತ್ತ ಮನೆ. ಅದರಲ್ಲಿ ಇರುವ ಒಂದೊಂದು ರೂಮನ್ನು ವಿಂಗಡಿಸಿ ಪಾರ್ಟೀಶನ್ ಮಾಡಿ ಬೇರೆ ಬೇರೆಯಾಗಿ ಬಾಡಿಗೆಗೆ ಕೊಟ್ಟಿದ್ದರು. ನಮ್ಮ ಬಲಬದಿಯಲ್ಲಿರುವ ಮೆಟ್ಟಿಲು ಏರಿ ಉಪ್ಪರಿಗೆಗೆ ಹೋದರೆ ಅಲ್ಲಿ ನಾವಿದ್ದ ರೂಮು, ಆ ಮನೆಯ ಎಡದ ಒಂದು ಭಾಗದಲ್ಲಿ ಬಾವಿಯ ಹತ್ತಿರ, ಗೋಪಾಲ ಮಾಸ್ಟರು ಎಂಬವರು ಅವರ ಸಂಸಾರದ ಜೊತೆ ಇದ್ದರು. ಶಾಲೆಯಿಂದ ಬಂದ ಆ ಮಾಸ್ಟರು ಮನೆಗೆ ಹೋಗುವ ಮೊದಲು ನಮ್ಮ ರೂಮಿಗೆ ಬಂದು ಮಾತಾಡಿಸಿ ಹೋಗುತ್ತಿದ್ದರು. ಕೆಲವೊಮ್ಮೆ ನಮ್ಮ ರೂಮಿನಲ್ಲೇ ಊಟವನ್ನೂ ಮಾಡುತ್ತಿದ್ದರು. ಅವರ ಮನೆಯ ಬೆಳಿಗ್ಗಿನ ತಿಂಡಿ, ಅವರ ಮನೆಯಲ್ಲಿ ಮಾಡಿದ ಸಾಂಬಾರ್ ನಮ್ಮ ಮನೆಗೆ ಬಂದದ್ದು, ಅದೆಷ್ಟು ಬಾರಿಯೋ. ಅಂತೂ ಅವರು ನಮಗೆ ತುಂಬಾ ಆತ್ಮೀಯರಾಗಿದ್ದರು. ಒಳ ಅಂಗಳದ ಬಲಬದಿಯಲ್ಲಿ ಇದ್ದ ಉದ್ದವಾದ ಜಗುಲಿಯ ಅಂಚಿಗೆ ಗ್ರಿಲ್ ಹಾಕಿಸಿ ಒಂದು ರೂಮು ಮಾಡಿದ್ದು ಅದರಲ್ಲಿ ರಾಘವೇಂದ್ರ ಆಚಾರ್ ಮತ್ತು ಮಂಜುನಾಥ ಆಚಾರ್ ಎನ್ನುವ ಇಬ್ಬರು ಚಿನ್ನ ಕೆಲಸ ಮಾಡುವವರು ವಾಸವಾಗಿದ್ದರು. ಅವರು ತುಂಬ ಒಳ್ಳೆಯವರು. ಮತ್ತು ಅಂಗಳದ ಎದುರೇ ಇರುವ ಮನೆಯ ದೇವರುಕೋಣೆಯ ಭಾಗದ ಬಾಡಿಗೆ ಕೋಣೆಯಲ್ಲಿ ಒಬ್ಬರು ಊದುಬತ್ತಿಯನ್ನು ಸ್ಟಾಕ್ ಮಾಡಿಟ್ಟು, ಅದನ್ನು ಅಂಗಡಿ ಅಂಗಡಿಗೆ ಕೊಟ್ಟು ಮಾರುವವರೂ ಇದ್ದರು. ಅವರು ಯಾವಾಗಲೂ ಇರುತ್ತಿರಲಿಲ್ಲ. ಆದ್ದರಿಂದ ಆ ವ್ಯಕ್ತಿಯಲ್ಲಿ ನಮಗೆ ಅಷ್ಟು ಸಲುಗೆ ಇರಲಿಲ್ಲ. ಅಡುಗೆ ಮನೆ ಇರುವ ಈಶಾನ್ಯಭಾಗದ ಕೋಣೆ ಮತ್ತು ಒಂದು ರೂಮಿನ ಭಾಗದಲ್ಲಿ ರಥಬೀದಿಯಲ್ಲಿ ಹೂವು ಮಾರುವ ಅಂಗಡಿ ಇಟ್ಟವರೊಬ್ಬರ ಮನೆ. ಒಟ್ಟಿನಲ್ಲಿ ಆ ಮನೆಯ ತುಂಬಾ ಜನವೆ.

ನಮ್ಮ ಉಪ್ಪರಿಗೆಯ ಮತ್ತೊಂದು ಬದಿಯರೂಮಿನಲ್ಲಿ ಹಗಲು, ಮಠದಲ್ಲಿ ಕೆಲಸಮಾಡುತ್ತಾ, ಸಂಜೆ ಶಾಲೆಗೆ ಹೋಗುವ ಶ್ರೀನಿವಾಸ ಅಡಿಗರು, ಚಂದ್ರಶೇಖರ ಅಡಿಗರು, ವೆಂಕಟರಮಣ ಅಡಿಗರು ಎನ್ನುವ ಒಂದೇ ಊರಿನ ಹುಡುಗರಿದ್ದರು. ಅವರೂ ಬಹಳ ಬೇಗ ನಮ್ಮೊಂದಿಗೆ ಸ್ನೇಹದಿಂದ ಇದ್ದು ನಮ್ಮೊಡನೆ ಸೇರಿಕೊಂಡು ನಮ್ಮ ರೂಮಿಗೆ ಬಂದು ಹೋಗಿ ಮಾಡುತ್ತಿದ್ದರು. ಅವರಲ್ಲಿ ಚಂದ್ರಶೇಖರ ಅಡಿಗರು ಎನ್ನುವವರು ಚೆನ್ನಾಗಿ ಈಜುಕಲಿತವರಾಗಿದ್ದರು. ನಾವು ದಿನವೂ ಸ್ನಾನ ಮಾಡುತ್ತಿದ್ದ ಬಾವಿಗೆ, ಒಮ್ಮೆ ಕೊಡಪಾನ ಬಿತ್ತು ಅಂತ ತೆಗೆಯಲು ಇಳಿದರು. ನೀರಿನ ಅಡಿಯಲ್ಲಿ ಬಾವಿಯ ಬದಿಯ ಮಣ್ಣು ಜರಿದು ಆದ ಮೋಟೆಯೋ ಏನೋ, ಒಂದರಲ್ಲಿ ಸಿಕ್ಕಿ ಹಾಕಿಕೊಂಡು ಮೇಲೆ ಬರಲಾಗದೇ, ನಾವು ನೋಡು ನೋಡುತ್ತಿರುವಂತೆಯೆ ಉಸಿರುಕಟ್ಟಿ ಪ್ರಾಣ ಕಳೆದುಕೊಂಡರು. ನಾವು, ಅವರು ಈಗ ಬರುತ್ತಾರೆ, ಇನ್ನೊಂದು ಕ್ಷಣದಲ್ಲಿ ಬರುತ್ತಾರೆ ಎಂದು ಮೇಲೆ ನಿಂತು ಕಾಯುತ್ತಾ ಇದ್ದೆವು. ಕೊನೆಗೆ ತುಂಬಾ ಹೊತ್ತಾದ ಮೇಲೆ ಅನುಮಾನ ಬಂದು ಮೇಲಿದ್ದ ಮತ್ತೊಬ್ಬ ಅಡಿಗರು, ಬಾವಿಗೆ ಇಳಿದು ನೋಡಿದಾಗಲೇ ನಮಗೆ ತಿಳಿದದ್ದು ಅವರು ಮೇಲಕ್ಕೆ ಬರಲಾಗದೇ ಸಿಕ್ಕಿಹಾಕಿಕೊಂಡಿದ್ದು ನೀರಿನಡಿಯೇ ಉಸಿರು ಕಟ್ಟಿ ಕೊನೆಯುಸಿರೆಳೆದಿದ್ದರು ಎಂದು. ಅದೊಂದು ನಾನು ಅಲ್ಲಿ ಕಣ್ಣಾರೆ ಕಂಡ ದುರಂತವಾಯಿತು.

ಆಗ ಪುತ್ತಿಗೆ ಮಠದಲ್ಲಿ ಸುಗುಣ ಪ್ರಿಂಟರ್ಸ್ ಅಂತ ಒಂದು ಪ್ರಿಂಟಿಂಗ್ ಪ್ರೆಸ್ ನಲ್ಲಿ ಮೇನೇಜರ್ ಆಗಿರುವ ಸುಬ್ಬರಾಯರು ಎನ್ನುವವರ ಪರಿಚಯ ನಮ್ಮ ಉಡುಪರ ಮೂಲಕ ಆಯಿತು. ನಾವು ಆಫೀಸಿನ ಕೆಲಸ ಮುಗಿಸಿ, ಅವರ ಪ್ರೆಸ್ ಗೆ ಹೋಗಿ ಅದು ಇದೂ ಮಾತಾಡುತ್ತಾ ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಿದ್ದೆವು. ಅಲ್ಲಿಯೇ ಮಠದ ಉಪ್ಪರಿಗೆಯ ಮೇಲೆ ಸುಬ್ರಾಯರ ರೂಮು ಇದ್ದು. ಅಲ್ಲಿಯೂ ಹೋಗಿ ಸಲಿಗೆಯಿಂದ ಯಜಮಾನಿಕೆ ಮಾಡುತ್ತಿದ್ದೆವು. ಅವರೂ ನಮ್ಮ ರೂಮಿಗೂ ಆಗಾಗ ಬರುತ್ತಿದ್ದರು.

ಕೆಲವೊಮ್ಮೆ ರಜಾದಿನಗಳಲ್ಲಿ ನಾವು ಮತ್ತು ಆಚೆ ಈಚೆ ರೂಮಿನವರೆಲ್ಲ ಒಟ್ಟು ಸೇರಿದಾಗ, ಒಟ್ಟಿಗೇ ಕಾಫಿತಿಂಡಿಗೆ ಹೋಗಿ ಪಾರ್ಟಿ ಮಾಡುತ್ತಿದ್ದುದುಂಟು. ಹಾಗೆ ಹೋಟೆಲಿಗೆ ಹೋಗಬೇಕು ಅನ್ನಿಸಿದಾಗ ನಮ್ಮ ಮಾಸ್ಟರರು “ಚೀಟಿ ಹಾಕುವನಾ?” ಎನ್ನುತ್ತಿದ್ದರು. ಅದೊಂದು ಅದೃಷ್ಟದ ಆಟ. ಒಂದಷ್ಟು ಚೀಟಿಗಳಲ್ಲಿ ಅಲ್ಲಿದ್ದ ಎಲ್ಲರ ಹೆಸರನ್ನು ಬರೆದು, ಚಂದವಾಗಿ ಮಡಿಸಿ ರಾಶಿ ಹಾಕಿ, ಯಾರಾದರೂ ಒಬ್ಬರಿಗೆ, ಅದರಲ್ಲಿ ಒಂದು ಚೀಟಿಯನ್ನು ಎತ್ತಲು ಹೇಳುವುದು. ಆಗ ಯಾರ ಹೆಸರು ಬಂತೋ, ಅವರು ನಮ್ಮ ಎಲ್ಲರಿಗೂ ಪಾರ್ಟಿ ಕೊಡಬೇಕು.

ಹೀಗೆ ಚೀಟಿ ಹಾಕುವಾಗ, ನಮ್ಮ ಪಕ್ಕದ ರೂಮಿನಲ್ಲಿ ಇರುವ ಶ್ರೀನಿವಾಸ ಅಡಿಗರು ಎನ್ನವವರ ಹೆಸರು ಎಷ್ಟು ಸಲವಾದರೂ ಬರುತ್ತಲೇ ಇರಲಿಲ್ಲ. ನಮಗೆ ಆಶ್ಚರ್ಯ! ಅವರ ಅದೃಷ್ಟ ಅಷ್ಟು ಚೆನ್ನಾಗಿತ್ತು. ಬಹಳ ಸಮಯದ ನಂತರ ಅಂತೂ ಒಮ್ಮೆ ಅವರ ಹೆಸರು ಬಂದೇ ಬಿಟ್ಟಿತು. ನಮಗೆಲ್ಲ ಖುಷಿಯೋ ಖುಷಿ. ಆಗ ತೆಂಕುಪೇಟೆಯಲ್ಲಿ ರಾಮಭವನ ಎನ್ನುವ ಹೋಟೆಲ್ ಇದ್ದಿತ್ತು. ಎಲ್ಲರೂ ಅಲ್ಲಿಗೆ ಹೋಗಿ ನಮನಮಗೆ ಬೇಕಾದ ತಿಂಡಿಯನ್ನು ಆರ್ಡರ್ ಮಾಡಿದೆವು. ಇಷ್ಟು ದಿನ ನಮ್ಮ ದುಡ್ಡು ಖಾಲಿಮಾಡಿದ ಅಡಿಗರ ಕಿಸೆಯನ್ನು ಖಾಲಿಮಾಡುವ ಅಂತ ಎಲ್ಲರಿಗೂ ಹುಮ್ಮಸ್ಸು. ಎಲ್ಲ ತಿಂದು ಪಾರ್ಟಿ ಆದ ಮೇಲೆ, ಬಿಲ್ಲು ಕೊಡುವ ಸಮಯ ಬಂದಾಗ, ನಮ್ಮ ಗೋಪಾಲ ಮಾಸ್ಟರು ಎದ್ದು ನಿಂತು, “ನಾನು ಒಂದು ವಿಷಯ ಹೇಳಲಿಕ್ಕುಂಟು” ಎಂದು ಮೆಲ್ಲಗೆ ಶುರು ಮಾಡಿ, ಆವತ್ತು ಚೀಟಿಯಲ್ಲಿ ಮಾಡಿದ ಚೀಟಿಂಗ್ ವಿಷಯವನ್ನು ಬಯಲುಮಾಡಿದರು. ಅವರು ಒಂದು ಉಪಾಯ ಮಾಡಿದ್ದರು. ನಮಗೆ ಗೊತ್ತಿಲ್ಲದ ಹಾಗೆ ಮೊದಲೇ ಎಲ್ಲ ಚೀಟಿಯಲ್ಲೂ ಆ ಅಡಿಗರ ಹೆಸರನ್ನೇ ಬರೆದು ಹಾಕಿ, ಚೀಟಿ ಎತ್ತಲು ಹೇಳಿದ್ದರು. ಆದ್ದರಿಂದ ಅದೃಷ್ಟವಂತ ಅಡಿಗರಿಗೆ ಮೋಸಮಾಡಬಾರದು, ಹಾಗಾಗಿ ಅವರವರ ಬಿಲ್ಲನ್ನು ಅವರವರೇ ಕೊಡಬೇಕು ಅಂತ ಅವರು ವಿನಂತಿಸಿದಾಗ ನಾವೆಲ್ಲ ಹೊಟ್ಟೆತುಂಬಾ ತಿಂದವರು, ಒಮ್ಮೆ ಪೆಚ್ಚಾದರೂ, ಅವರ ಮಾತಿಗೆ ಒಪ್ಪಿ ಬಿಲ್ಲನ್ನು ಕೊಟ್ಟು ಬರಬೇಕಾಯಿತು. ಅಡಿಗರ ಅದೃಷ್ಟ ಮತ್ತೆ ಅವರನ್ನು ಗೆಲ್ಲಿಸಿತ್ತು.

ಒಮ್ಮೆ ನಮ್ಮ ಕಂಪೌಂಡ್ ನ ಪಕ್ಕದ ಮನೆಯೊಂದರ ಮಗುವನ್ನು ಗೋಪಾಲ ಮಾಸ್ಟ್ರು ಎತ್ತಿಕೊಂಡು ಬಂದು ಆಟವಾಡಿಸುತ್ತಿದ್ದರು. ನಾವೆಲ್ಲ ಅದನ್ನು ಎತ್ತಿಕೊಂಡು ಆಡಿಸುತ್ತ, ತಮಾಷೆ ಮಾಡುತ್ತ ಕಾಲ ಕಳೆದು ತುಂಬ ಹೊತ್ತಿನ ನಂತರ ಆ ಮಗುವನ್ನು ಅದರ ಮನೆಗೆ ಮಾಸ್ಟರೇ ಬಿಟ್ಟುಬಂದರು. ಸಂಜೆ ಆ ಮನೆಯವರು ಬಂದು, “ಮಗುವಿನ ಕುತ್ತಿಗೆಯಲ್ಲಿ ಒಂದು ಚಿನ್ನದ ಸರ ಇತ್ತು. ಅದನ್ನು ಯಾರಾದರೂ ನೋಡಿದ್ದಿರಾ? ಈಗ ಅದು ಕಾಣಿಸುತ್ತಿಲ್ಲ” ಎಂದು ಮಾಸ್ಟರನ್ನು ಕೇಳಿದರು. ಮಾಸ್ಟರಿಗೆ ಒಮ್ಮೆಲೇ ಶಾಕ್ ಆಯಿತು. ತಾನು ಸರವನ್ನು ನೋಡಲೇ ಇಲ್ಲ ಎಂದರು. ಆ ಮನೆಯವರು ಮತ್ತೆ ಏನೋ ಮಾತಾಡಿ ಮನೆಗೆ ಹೋದರೂ ಮಾಸ್ಟರಿಗೆ ನೆಮ್ಮದಿ ಹಾಳಾಯಿತು, ನಮ್ಮ ಬಳಿಗೆ ಬಂದು ಕಳೆದುಹೋದ ಸರದ ಬಗ್ಗೆ ಹೇಳಿ, ನಾವು ಇಲ್ಲಿಗೆ ಮಗುವನ್ನು ಕರೆದುಕೊಂಡು ಬಂದು ವಾಪಾಸು ಮಾಡುವಾಗ ಅದು ಕಳೆದುಹೋಗಿದೆಯಂತೆ. ನಮಗೆ ಬೇಕಿತ್ತ ಮಾರಾಯ್ರೆ ಇದು? ಇನ್ನೇನು ಮಾಡುವುದು? ಎಂದು ಮುಖ ಸಣ್ಣಗೆ ಮಾಡಿದರು. ನಮ್ಮಲ್ಲಿ ಯಾರಿಗೂ ಆ ಸರದ ಗೋಚರವೇ ಇರಲಿಲ್ಲ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ