ಶುಕ್ರವಾರ, ಅಕ್ಟೋಬರ್ 27, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 40

ಹಿಂದಿನ ದಿನ ಆ ಊದುಬತ್ತಿ ಮಾರುವ ಮನೆಯವರೂ ಅಲ್ಲಿ ಇದ್ದಿದ್ದು, ಮಗುವನ್ನು ಅವರೂ ಎತ್ತಿ ಆಡಿಸಿದ್ದರು. ನಮಗೆಲ್ಲ ಅವರ ಮೇಲೆ ಅನುಮಾನ. ಆದರೆ ನಾವು ನೋಡಲಿಲ್ಲ. ನಮ್ಮಲ್ಲಿ ಇದ್ದವರಲ್ಲಿ ಯಾರನ್ನೂ ಅನುಮಾನಿಸುವ ಹಾಗಿಲ್ಲ. ಇನ್ನು ಯಾರು ಈ ಕೆಲಸ ಮಾಡುವವರು? ಕೊನೆಗೆ ನಮ್ಮ ಮಾಸ್ಟರರು ಒಂದು ಉಪಾಯ ಮಾಡಿದರು.

ಅದೇ ಸಂಜೆ ಊದುಬತ್ತಿ ಮಾರುವವರು ರೂಮಿಗೆ ಬಂದಿದ್ದಾಗ, ಅವರಿಗೆ ಕೇಳಿಸುವಂತೆ ಸರ ಕಳೆದು ಹೋದ ವಿಷಯವನ್ನು ಜೋರಾಗಿ ಹೇಳಿ, “ನನಗೆ ಅಂಜನ ಹಾಕುವವರೊಬ್ಬರು ಗೊತ್ತುಂಟು. ನಾಳೆಯೇ ಹೋಗಿ ಅಂಜನ ಹಾಕಿಸಿ ಕಳ್ಳರನ್ನು ಪತ್ತೆ ಮಾಡುತ್ತೇನೆ” ಎಂದೂ, “ಆ ಕಳ್ಳರು ಸಿಕ್ಕಿದ ನಂತರ ಹೀಗೆಯೇ ಬಿಡುವುದಿಲ್ಲ. ಈ ಕಂಪೌಂಡಿನಲ್ಲಿ ಒಂದೇ ಕುಟುಂಬದವರಂತೆ ಇದ್ದ ನಮ್ಮಲ್ಲಿ ಒಡಕು ಹುಟ್ಟಿಸಿ, ಎಲ್ಲರನ್ನೂ ಅನುಮಾನದಿಂದ ನೋಡುವ ಹಾಗೆ ಮಾಡಿದವರು. ಅವರ ಮೇಲೆ ಪೋಲೀಸ್ ಕಂಪ್ಲೇಂಟ್ ಕೊಟ್ಟು ಜೈಲಿಗೆ ಕಳಿಸದೇ ಬಿಡುವುದಿಲ್ಲ” ಎಂದೂ ಹೇಳಿದರು. ಕೊನೆಗೆ “ಇದೇ ಕಂಪೌಂಡಿನಲ್ಲಿದ್ದವರ ಕೆಲಸ ಅದು. ಇದು ಇಲ್ಲಿಗೆ ನಿಲ್ಲಬೇಕು ಅಂತಾದರೆ, ಒಳ್ಳೆಯ ಮಾತಿನಲ್ಲಿ ನಾಳೆ ಬೆಳಗಾಗುವುದರ ಒಳಗೆ, ಮನೆಯ ಹೆಬ್ಬಾಗಿಲ ಹತ್ತಿರ ಆ ಸರ ಬಂದು ಬೀಳಬೇಕು” ಎಂದೂ ಸೇರಿಸಿದರು. ಮರುದಿನ ಸರ ಆ ಕಂಪೌಂಡಿನ ಹೆಬ್ಬಾಗಿಲ ಬಳಿಯ ಮೂಲೆಯಲ್ಲಿ ಸಿಕ್ಕಿಬಿಟ್ಟಿತು. ಅದನ್ನು ಗೋಪಾಲ ಮಾಸ್ಟರು ಪಕ್ಕದ ಮನೆಯವರಿಗೆ ಒಪ್ಪಿಸಿ, ಪ್ರಕರಣವನ್ನು ಅಲ್ಲಿಗೆ ಮುಕ್ತಾಯಗೊಳಿಸಿದರು.

ರಥಬೀದಿಯ ತೆಂಕು ದಿಕ್ಕಿನಲ್ಲಿ, ಗಣೇಶ ರಾವ್ ಎಂಬವರ ಜನರಲ್ ಕ್ರಾಪ್ಟ್ ಎಂಬ ಅಂಗಡಿ ಇತ್ತು. ಅಂಗಡಿಯ ಎದುರು ಇದ್ದ ಒಂದು ಜಾಗದಲ್ಲಿ, ಆಗ ಒಂದಷ್ಟು ಮಂದಿ ಕುಳಿತುಕೊಂಡು ಪ್ರತೀದಿನ ಸಂಜೆ ಮಾತನಾಡುತ್ತಾ ಇರುತ್ತಿದ್ದುದು ಕಾಣಬಹುದಿತ್ತು. ಅವರಲ್ಲಿ ಸುಬ್ರಮಣ್ಯ ಕೆದ್ಲಾಯರು, ಸುಬ್ರಹ್ಮಣ್ಯ ಜೋಷಿಯವರು, ರಮೇಶ ರಾವ್, ಮುರಳೀಧರ ಉಪಾಧ್ಯರು, ಮುರಾರಿ ಬಲ್ಲಾಳ್, ಭಾಸ್ಕರ ರಾವ್ ಮತ್ತು ನಮ್ಮ ಎಸ್ ವಿ ಭಟ್ಟರು, ಮುಂತಾದವರು ಇರುತ್ತಿದ್ದರು. ಅವರದ್ದೊಂದು ರಥಬೀದಿ ಗೆಳೆಯರು ಎಂಬ ಸಂಸ್ಥೆಯು ಇದ್ದು, ಪ್ರತೀ ವರ್ಷ ಸ್ಥಳೀಯ ಕಲಾವಿದರನ್ನು ಆರಿಸಿ,  ಒಬ್ಬ ದೊಡ್ದ ನಿರ್ದೇಶಕರನ್ನು ಕರೆಸಿ, ಬೇಕಾದ ಸೆಟ್ಟಿಂಗ್ ತಯಾರಿಸಿ, ಒಂದು ಒಳ್ಳೆಯ ನಾಟಕ ಮಾಡಿಸುತ್ತಿದ್ದರು. ಹಾಗೂ ಬೇರೆ ಬೇರೆ ಕಡೆಯ ತಂಡಗಳನ್ನು ಕರೆಸಿ ನಾಟಕಗಳನ್ನು ಮಾಡಿಸುತ್ತಿದ್ದರು. ಹಾಗೂ ಹಲವು ಸೃಜನಾತ್ಮಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಒಮ್ಮೆ ನಾನು ರಥಬೀದಿಯಲ್ಲಿ ಹೋಗುತ್ತಿದ್ದಾಗ, ನನ್ನನ್ನು ನೋಡಿದ, ಎಸ್. ವಿ. ಭಟ್ಟರು “ಏ ದಿನೇಶ, ಇಲ್ ಬಾರಾ”. ಎಂದು ಕರೆದರು. ನಾನು ಹೋದೆ. “ನಾವು ಈ ವರ್ಷ ಒಂದು ನಾಟಕ ಮಾಡುತ್ತಿದ್ದೇವೆ. ನೀನು ಒಂದು ಪಾರ್ಟು ಮಾಡಬೇಕು” ಎಂದರು. ನಾನು ತಲೆ ಅಲ್ಲಾಡಿಸಿದೆ.

ಆ ವರ್ಷ ಆದ ನಾಟಕ, ಶೇಕ್ಸಪಿಯರ್ ನ ಮ್ಯಾಕ್ಬೆತ್. ಅದನ್ನು ನಿರ್ದೇಶನ ಮಾಡಿದವರು ಇಕ್ಬಾಲ್ ಎಂಬವರು. ಅವರು ಬಹಳ ಸರಳವಾದ ವ್ಯಕ್ತಿ. ಎಲ್ಲರೊಡನೆ ಬೆರೆಯುವವರು. ಸದಾ ಏನಾದರೂ ಕ್ರಿಯಾತ್ಮಕವಾಗಿ ಯೋಚಿಸುವವರು. ಒಮ್ಮೊಮ್ಮೆ ಬಿಳಿ ಕಾಗದದ ಹಾಳೆ ಸಿಕ್ಕಿದರೆ ಸಾಕು, ಅದರಲ್ಲಿ ಏನೇನೋ ಗೀಚುತ್ತಿದ್ದರು. ಆಮೇಲೆ ಅದನ್ನು ನೋಡಿದರೆ ಅದೇ ಸುಂದರ ಒಂದು ಡ್ರಾಯಿಂಗ್ ಆಗುತ್ತಿತ್ತು. ಆಗಿನ ಅವರ ನಿರ್ದೇಶನದ ಇಡೀ ನಾಟಕದಲ್ಲಿ ಅವರು ಒಂದೇ ಉದ್ದವಾದ ಪರದೆಯನ್ನು ಏನೇನೆಲ್ಲ ಸಿಂಬಲ್ ಆಗಿ ಬಳಸಿದ್ದರು. ಒಮ್ಮೆ ಆ ಪರದೆಯು, ಹಡಗು ಆದರೆ, ಮತ್ತೊಮ್ಮೆ ಉಪ್ಪರಿಗೆಗೆ ಹೋಗುವ ಮೆಟ್ಟಲಿನ ಮುಂಭಾಗವಾಗುತ್ತಿತ್ತು. ಮತ್ತೊಮ್ಮೆ ಹೇಗೇಗೆಲ್ಲಾ ತಿರುಗಿಸಿ ಸಮುದ್ರದ ತೆರೆಯಾಗಿ ಪರಿವರ್ತನೆಯಾದರೆ, ಮತ್ತೊಮ್ಮೆ ಮೇಲೆ ನೆರಳು ಕೊಡುವ ಮಾಡು ಆಗುತ್ತಿತ್ತು. ಮತ್ತೊಮ್ಮೆ ಭೂತಗಳು ವಾಸ ಮಾಡುವ ಮರದ ಬಿಳಲುಗಳಾದರೆ, ಮಗದೊಮ್ಮೆ  ದೃಶ್ಯ ಬದಲಾವಣೆಯಲ್ಲಿ ಮರೆಯಾಗಲು ಸಂಚರಿಸುವ ಗೋಡೆಯಾಗುತ್ತಿತ್ತು. ಅವರ ನಿರ್ದೇಶನ ಅಂದರೆ,  ಡೈಲಾಗ್ ಗಳ ಹೇಳುವಿಕೆ, ರಂಗಚಲನೆ ನಿಲ್ಲುವ ಸ್ಥಾನ ಒಂದೊಂದು ದಿನ ಒಂದೊಂದು ತೆರನಾಗುತ್ತಿತ್ತು. ನಾಟಕದ ಪ್ರದರ್ಶನದ ಹಿಂದಿನ ದಿನದ ಗ್ರ್ಯಾಂಡ್ ಟ್ರಯಲ್ ದಿನವೂ ಅವರು ಡೈಲಾಗ್ ಡೆಲಿವರಿ ಮತ್ತು ರಂಗಚಲನೆಗಳನ್ನು  ಬದಲಿಸುತ್ತಿದ್ದರು. ಆದರೆ ಯಾವುದೇ ಗಾಬರಿ, ಉದ್ವೇಗಕ್ಕೊಳಗಾಗುತ್ತಿರಲಿಲ್ಲ. ನನ್ನದು ಆ ನಾಟಕದಲ್ಲಿ ಬರುವ ಗುಂಪಿನಲ್ಲಿ ಏನೋ ಒಂದು ಸಣ್ಣ ಪಾರ್ಟು. ಆದರೆ ಆ ನಾಟಕ ನನ್ನ ಮೇಲೆ ತುಂಬಾ ಪ್ರಭಾವ ಬೀರಿತ್ತು.

ಮುಂದಿನ ವರ್ಷ “ಶ್ರೀಮತಿ ಹೆಗ್ಗಡೆಯ ಭೇಟಿ ಪ್ರಕರಣ” ಎಂಬ ನಾಟಕ ಆಯಿತು. ಕೆ.ಜಿ. ಕೃಷ್ಣಮೂರ್ತಿಯವರ ನಿರ್ದೇಶನದ ನಾಟಕ ಅದು. ವೀಣಾ ಬನ್ನಂಜೆಯವರದ್ದು ಪ್ರಧಾನ ಪಾತ್ರ, ನಟರಾಜ ದೀಕ್ಷಿತ್, ಅವರ ತಮ್ಮ ಕೃಷ್ಣ ದೀಕ್ಷಿತ್, ರಘುರಾಮ ಭಟ್, ಮಂಜು ಕೆಜಿ, ರವಿ ಕೆಜಿ, ಮುಂತಾದವರಿದ್ದರು. ಕಥಾನಾಯಕಿಯನ್ನು ಮೇನೆಯಲ್ಲಿ ಹೊತ್ತುಕೊಂಡು ಹೋಗುವ ದೃಶ್ಯ ನನ್ನ ಮನಸ್ಸಿನಲ್ಲಿ ಇನ್ನೂ ಉಳಿದಿದೆ.

ಆಗ ನಡೆದ ಒಂದು ಘಟನೆ ನೆನಪಿಗೆ ಬರುತ್ತದೆ. ನನ್ನ ಅಮ್ಮನಿಗೆ ಆರೋಗ್ಯ ಸರಿ ಇಲ್ಲದಿದ್ದುದರಿಂದ ಅಜ್ಜರಕಾಡು ಆಸ್ಪತ್ರೆಯಲ್ಲಿ ಇದ್ದಳು. ನಾನು ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಅವಳಿಗೆ ತಿಂಡಿ, ಊಟ ಕೊಟ್ಟು ಬರುತ್ತಿದ್ದೆ. ಸಂಜೆ ಆಸ್ಪತ್ರೆಗೆ ಹೋಗಿ ಬಂದ ಮೇಲೆ, ಟ್ರಯಲ್ ಗೆ ವಾದಿರಾಜ ರಸ್ತೆಯಲ್ಲಿರುವ ಪಣಿಯಾಡಿ ಶಾಲೆಗೆ ಬಂದು, ಹಾಜರಾಗಬೇಕಿತ್ತು. ಒಮ್ಮೆ ಬರುವಾಗ ಸ್ವಲ್ಪ ತಡವಾಯಿತು. ಇನ್ನೂ ಟ್ರಯಲ್ ಶುರುವಾಗಿರಲಿಲ್ಲ. ನಾನು ಒಳಗೆ ಕಾಲಿಡುತ್ತಿರುವಾಗಲೇ “ಟ್ರಯಲ್ ಗೆ ಯಾರೂ ಸರಿಯಾದ ಸಮಯಕ್ಕೆ ಬರುವುದಿಲ್ಲ. ನಾಟಕ ಯಾರಿಗಾಗಿ ಮಾಡುವುದು? ಯಾರಿಗೂ ಜವಾಬ್ದಾರಿ ಇಲ್ಲದಿದ್ದರೆ ನಾಟಕ ಏತಕ್ಕೆ ಮಾಡಬೇಕು?” ಇತ್ಯಾದಿಯಾಗಿ ನಿರ್ದೇಶಕರು ಮತ್ತು ಕೆ. ಎಸ್.ಕೆದ್ಲಾಯರು ಗಲಾಟೆ ಮಾಡುತ್ತಿದ್ದರು. ನಾನು ಬಂದದ್ದನ್ನು ನೋಡಿದೊಡನೆ ಅವರ ಅಸಮಾಧಾನ, ಅಲ್ಲಿಯವರೆಗೂ ಬಾರದೇ ಇದ್ದ ಮುಖ್ಯ ಪಾತ್ರದ ಒಬ್ಬರ ಮೇಲಿದ್ದದ್ದು, ನನ್ನ ಮೇಲೆ ತಿರುಗಿತು. ನನಗೂ ಬೈಗುಳವಾಯಿತು. ಆಗ ನನಗೆ ಒಮ್ಮೆಲೆ ಸಿಟ್ಟು ಬಂದು, “ಹಾಗಾದರೆ ನಾಳೆಯಿಂದ ನಾನು ಬರುವುದಿಲ್ಲ. ಈ ನಾಟಕದಿಂದ ನನಗೆ ಏನೂ ಆಗಬೇಕಾದ್ದಿಲ್ಲ. ನಾನು ಮೊದಲೇ ಹೇಳಿದ್ದೆ. ನನ್ನ ಅಮ್ಮ, ಆಸ್ಪತ್ರೆಯಲ್ಲಿ ಇದ್ದವಳನ್ನು ನೋಡದೇ ಬರಲು ಸಾಧ್ಯವೇ ಇಲ್ಲ” ಎಂದು ಅಳುತ್ತಾ ಜೋರಾಗಿ ಹೇಳಿ ಹೊರಗೆ ಬಂದುಬಿಟ್ಟೆ. ಆಗ ಅಲ್ಲಿ ಇದ್ದ ಕೆಜಿ ಮಂಜುವೋ, ರವಿಯೋ ಕೂಡಲೇ ಓಡಿ ಬಂದು ನನ್ನನ್ನು ಸಮಾಧಾನ ಮಾಡಿ, ಮತ್ತೆ ಒಳಗೆ ಕರೆದು ಕೊಂಡುಹೋದರು. ಅಷ್ಟರಲ್ಲಿ ತಡಮಾಡಿದ ಆ ಮುಖ್ಯಪಾರ್ಟ್  ಮಾಡುವವರೂ ಬಂದಾಗಿತ್ತು. ಅವರ ಎದುರು ಯಾರೂ ಮಾತಾಡಲಿಲ್ಲ. ಮಾಮೂಲಿನಂತೆ ಅಷ್ಟರವರೆಗೆ ಏನೂ ನಡೆದೇ ಇಲ್ಲವೇನೋ ಅನ್ನುವಂತೆ ನಾಟಕದ ಟ್ರಯಲ್ ಶುರುವಾಯಿತು. ಆ ನಾಟಕ ತುಂಬಾ ಚೆನ್ನಾಗಿ ಆಯಿತು.

ಮೂರನೆ ವರ್ಷ ಆಡಿದ ನಾಟಕ ಚಂದ್ರಶೇಖರ ಕಂಬಾರರ “ಸಿರಿ ಸಂಪಿಗೆ” ಅದರಲ್ಲಿ ಅವಳಿ ಜವಳಿ ಎಂಬ ಬಿಂಬ ಪ್ರತಿಬಿಂಬದಂತೆ ಒಂದೇ ತರಹ ಅಭಿನಯಿಸಬೇಕಾದ ಪಾತ್ರಗಳಲ್ಲಿ ಒಂದು ಪಾತ್ರ ನನ್ನದು. ಅದರಲ್ಲಿ ನನ್ನ ಹಾಗೆಯೇ ಅಭಿನಯಿಸುವ ಇನ್ನೊಬ್ಬನ ಪಾತ್ರ ಮಾಡಿದವರು ಸುಬ್ರಮಣ್ಯ ಎಂಬವರು. ಅದನ್ನು ಉಡುಪಿಯಲ್ಲಿ ಮಾತ್ರವಲ್ಲದೇ ಕರ್ನಾಟಕದ ಅನೇಕ ಕಡೆಗಳಲ್ಲಿ ಸಂಚಾರ ಮಾಡಿ ಆಡಿದೆವು. ಆ ನಾಟಕಕ್ಕೆ ವಿಶೇಷವಾದ ಮೆರುಗು ತಂದದ್ದು ಗುರುರಾಜ ಮಾರ್ಪಳ್ಳಿಯವರ ಸಂಗೀತ.

ಆ ಮೇಲೆ ನಾನು ಸಮಯ ಹೊಂದಾಣಿಕೆ ಕಷ್ಟವಾದ್ದರಿಂದ, ನಾಟಕದಲ್ಲಿ ಪಾರ್ಟ್ ಮಾಡುವುದನ್ನು ಬಿಟ್ಟುಬಿಟ್ಟೆ. ಆದರೆ ಆಮೇಲೂ ಅವರು ಸ್ಥಳೀಯ ಕಲಾವಿದರನ್ನು ಹುಡುಕಿ, ಪ್ರಸಿದ್ಧ ನಿರ್ದೇಶಕರನ್ನು ಕರೆಸಿ ಪ್ರತೀ ವರ್ಷಕ್ಕೊಂದು ನಾಟಕ ಮಾಡಿಸುತ್ತಿದ್ದರು. ಮತ್ತು ಹೆಗ್ಗೋಡಿನ ನೀನಾಸಂ ತಂಡವನ್ನು, ಮೈಸೂರಿನ ರಂಗಾಯಣ ತಂಡವನ್ನು ಕರೆಸಿ, ಒಳ್ಳೊಳ್ಳೆಯ ನಾಟಕಗಳನ್ನು  ಪ್ರತೀವರ್ಷ ಆಡಿಸುತ್ತಿದ್ದಾರೆ. ನಾನು ಅದಕ್ಕೆಲ್ಲಾ ತಪ್ಪದೇ ನೋಡಲು ಹೋಗುತ್ತಿದ್ದೆ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ