ಬುಧವಾರ, ಅಕ್ಟೋಬರ್ 11, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 23

ಒಬ್ಬರೊನ್ನೊಬ್ಬರು ಮಾತನಾಡಿಸುತ್ತ ತಮಾಷೆ ಮಾಡುತ್ತ ಸಾಗುತ್ತಿದ್ದುದರಿಂದ ಆಯಾಸವೇನೂ ಆಗುತ್ತಿರಲಿಲ್ಲ. ಕೆಲವರು ಅವಲಕ್ಕಿ, ಕೊಬ್ಬರಿ ತಂದರೆ, ಇನ್ನು ಕೆಲವರು ಚಾಕಲೇಟ್, ಚಿಪ್ಸ್, ಬಿಸ್ಕತ್ತು, ನೀರಿನ ಬೋಟಲ್ ಮೊದಲಾದುವುಗಳನ್ನು ಹಿಡಿದುಕೊಂಡು ಬಂದಿದ್ದರು. ಒಂದು ಜೊತೆ ಡ್ರೆಸ್ ಮತ್ತು ಸ್ನಾನಕ್ಕೆ ಪಂಚೆ ಅಂತ ಎಲ್ಲರ ಬೆನ್ನಿನಲ್ಲೂ ಒಂದೊಂದು ಬ್ಯಾಗ್ ಇತ್ತು. ಕೆಲವರಿಗೆ ತಲೆಯ ಮೇಲೊಂದು ಟೊಪ್ಪಿ.

 ಆದರೆ ಆ ಕಾಡಿನಲ್ಲಿ ಚಿರತೆ, ಹಂದಿ, ಮುಂತಾದ ಕಾಡು ಪ್ರಾಣಿಗಳು ಹೆಬ್ಬಾವು ಮತ್ತು ಇತರ ವಿಷಜಂತುಗಳು ಇರುತ್ತದೆ ಎಂಬುದು ನಮಗೆ ತಿಳಿದಿತ್ತು. ಆದರೆ ನಾವು ಅಷ್ಟು ಜನ ಒಟ್ಟಿಗೇ ಇರುವುದರಿಂದ ಅವುಗಳು ನಮ್ಮನ್ನು, ನಮ್ಮ ಗೌಜನ್ನು ನೋಡಿ ಓಡಿಹೋಗುತ್ತವೆ ಎಂಬುದು ನಮ್ಮ ಅಂದಾಜು. ಅದೂ ಅಲ್ಲದೇ ಕೆಲವು ಹುಡುಗರ ಕೈಯಲ್ಲಿ ಕತ್ತಿ, ಚೂರಿ ಮುಂತಾದ ಆಯುಧಗಳೂ ಇದ್ದುವಲ್ಲ. ಕತ್ತಲಾಗುವವರೆಗೂ ಒಂದೇ ಸಮನೆ ಆ ದಟ್ಟವಾದ ಕಾಡಿನಲ್ಲಿ ದಾರಿ ಮಾಡಿಕೊಂಡು ನಡೆದು ನಡೆದು ಇನ್ನು ಕಾಣುವುದಿಲ್ಲ ಅಂತ ಆಗುವಾಗ, ಒಂದು ನೀರಿನ ತೊರೆ ಹರಿಯುತ್ತಿರುವ ಜಾಗ ಸಿಕ್ಕಿತು ಅಂತಾಯಿತು. ಅದರ ಪಕ್ಕದಲ್ಲಿ ಸ್ವಲ್ಪ ಸಮತಟ್ಟಾದ ಜಾಗ ಇದ್ದು, ಅಲ್ಲಲ್ಲಿ ಕಲ್ಲುಗಳ ರಾಶಿ. ದೊಡ್ಡ ದೊಡ್ದಮರಗಳು ಕೆಳಗೆ ರಾಶಿರಾಶಿ ಒಣಗಿದ ಎಲೆಗಳು. ಯಾರೋ ಮೊದಲು ಉಳಿದುಕೊಂಡಿದ್ದಂತೆ ಅಲ್ಲಲ್ಲಿ ಪ್ಲಾಸ್ಟಿಕ್ ಬಾಟ್ಲಿಗಳು, ಹರಿದು ಎಸೆದ ಪೇಪರ್ ಗಳು,  ಬೆಂಕಿ ಉರಿಸಿ ಆರಿದ ಕೊಳ್ಳಿ, ಬೂದಿಗಳ ಅವಶೇಷಗಳು ಅಲ್ಲಿ ಕಾಣಿಸಿತು.

ಅಲ್ಲಿಯೇ ಉಳಿದು ರಾತ್ರಿ ಕಳೆಯಲು ಪ್ರಶಸ್ತವಾದ ಜಾಗ ಅದು ಎಂದು ತೀರ್ಮಾನಿಸಿದೆವು. ಕೆಲವರು ಆಚೀಚೆ ಹೋಗಿ ಸ್ವಲ್ಪ ಕಟ್ಟಿಗೆಯನ್ನು ತಂದು ಎರಡು ಮೂರು ಕಡೆಯಲ್ಲಿ ರಾಶಿ ಹಾಕಿದರು. ರಾತ್ರಿ ಕತ್ತಲು ಕವಿಯುತ್ತಿದ್ದಂತೆ ಬೆಂಕಿಪೆಟ್ಟಿಗೆಯಿಂದ ಕಡ್ಡಿ ಕೀರಿ ಗಾಳಿ ಊದಿ ಊದಿ, ಹೊಗೆಗೆ ಕಣ್ಣು ಕೆಂಪಾಗಿಸಿಕೊಂಡು ಬೆಂಕಿ ಹಚ್ಚಿದರು. ದೂರ ಕಣ್ಣು ಹಾಯಿಸಿದರೆ ಸುತ್ತಲೂ ಕಾರ್ಗತ್ತಲು. ಕೆಲವು ಹುಡುಗರು ಹೆದರಿಕೆಯಾದರೂ ತೋರಿಸಿಕೊಳ್ಳದೇ ಗಟ್ಟಿಯಾಗಿ ಮಾತನಾಡುತ್ತ ಪದ್ಯ ಹೇಳುತ್ತ ಇರತೊಡಗಿದರು. ಕೆಲವೊಮ್ಮೆ ಯಾರೂ ಮಾತಾಡದೇ ಇದ್ದಾಗ ಕೇಳುವ ಹರಿಯುವ ನೀರಿನ ಶಬ್ದ ಹೊರತು ಪಡಿಸಿದರೆ, ಜೀರುಂಡೆಗಳ ಕರ್ರ್ ಸದ್ದು ಮಾತ್ರ. ಕೆಲವರು ಬೆಂಕಿಯ ಸುತ್ತ ಕುಣಿದು ಹಾಡು ಹೇಳಿ ಗಮ್ಮತ್ತು ಮಾಡಿದರು. ಮತ್ತೆ ಕೆಲವರು ರೇಡಿಯೋ ಹಾಕಿ ಅದು ಗೊರಗೊರ ಎನ್ನುತ್ತಿದ್ದರೂ ಚಿತ್ರಗೀತೆ, ವಾರ್ತೆಗಳನ್ನು ಕೇಳಿದರು. ಕೊನೆಗೆ ಎಲ್ಲರೂ ಕುಣಿದು ಬಳಲಿದಾಗ ನಾವು ತಂದಿದ್ದ ಚಪಾತಿ ಪಲ್ಯವನ್ನು ಎಲ್ಲರಿಗೂ ಹಂಚಿಕೊಂಡು, ಹೊಟ್ಟೆ ತುಂಬಾ ತಿಂದದ್ದಾಯಿತು. ಒಟ್ಟಿನಲ್ಲಿ ಆ ದಟ್ಟವಾದ ಕಾಡಿನ ಮೌನ ನಮಗೆಲ್ಲಾ ಆಪ್ಯಾಯಮಾನವಾಗಿತ್ತು. ತುಂಬಾ ಚಳಿಯೂ ಇದ್ದುದರಿಂದ ತಂದ ಸ್ವೆಟರ್ ಅಥವ ಹೊದಿಕೆಯನ್ನು ಹೊದ್ದು ಅಲ್ಲಲ್ಲಿ ಕುಳಿತರು. ನಿದ್ದೆ ಬರುವಂತಾದಾಗ ನೆಲದಲ್ಲಿ ಬಟ್ಟೆ ಹಾಸಿಕೊಂಡು ಮರದ ಬುಡದಲ್ಲಿ ಒಬ್ಬೊಬ್ಬರೇ ಮಲಗಿದರು. ನಮ್ಮ ನಮ್ಮೊಳಗೆ ಚರ್ಚಿಸಿ ಎಲ್ಲರೂ ಒಟ್ಟಿಗೇ ಮಲಗುವುದು ಬೇಡ, ಕೆಲವರು ಎಚ್ಚರವಿದ್ದು ಜಾಗ್ರತೆಯಿಂದ ಸುತ್ತ ಮುತ್ತ ಕಾಡುಪ್ರಾಣಿಗಳು ಬಾರದ ಹಾಗೆ ನೋಡಿಕೊಂಡಿರಬೇಕು ಎಂದು ತೀರ್ಮಾನಿಸಿಕೊಂಡೆವು. ಹಾವು ವಿಷಜಂತುಗಳ ಭಯವಂತೂ ಇದ್ದೇ ಇತ್ತು. ಎರಡು ಬ್ಯಾಚ್ ಮಾಡಿಕೊಂಡೆವು. ಒಂದು ಬ್ಯಾಚ್ ನವರು ಮೊದಲಿಗೆ ಮಲಗಿದರು. ಅರ್ಧ ರಾತ್ರಿ ಕಳೆದ ನಂತರ ಅವರನ್ನು ಎಬ್ಬಿಸಿ ಕಾಯಲು ತಿಳಿಸಿ, ನಾವು ಮಲಗಿಕೊಂಡೆವು. ಮಧ್ಯದಲ್ಲಿ ಕಟ್ಟಿಗೆಯ ಬೆಂಕಿಯ ಅಗಸ್ಟಿಕೆ, ಚಟಚಟ ಸದ್ದಿನೊಂದಿಗೆ ರಾತ್ರಿ ಇಡೀ ಉರಿಯುತ್ತಿತ್ತು.

ರಾತ್ರಿ ಕಳೆದು ಬೆಳಕಾದಾಗ, ಒಬ್ಬೊಬ್ಬರಾಗಿ ಎದ್ದರು. ಅಲ್ಲಲ್ಲಿ ಮಲಗಿದವರನ್ನು ಅವರ ಹೊದಿಕೆಯನ್ನು ಎಳೆದು ಎಬ್ಬಿಸಿದ್ದಾಯಿತು. ಎಲ್ಲರೂ ಉತ್ಸಾಹದಿಂದಲೇ ಎದ್ದು ಹಲ್ಲುಜ್ಜಿ, ತೊರೆಯ ನೀರಿನಲ್ಲಿ ಮುಖ ತೊಳೆದು ನಿತ್ಯವಿಧಿಗಳನ್ನು ಪೂರೈಸಿಕೊಂಡೆವು. ಕೆಲವರು ಆ ಚಳಿಯಲ್ಲಿ  ಸ್ನಾನವನ್ನೂ ಮಾಡಿದರು. ಮತ್ತೆ ನಾವು ತಂದಿದ್ದ ಚಪಾತಿಯ ಕಟ್ಟನ್ನು ಬಿಡಿಸಿ ಎಲ್ಲರೂ ಹಂಚಿಕೊಂಡು ತಿಂದಾಯಿತು. ಪುನಹ ಪ್ರಯಾಣ ಮುಂದುವರಿಸಿ, ನೇರವಾಗಿ ಗುಡ್ಡವನ್ನು ಹತ್ತತೊಡಗಿದೆವು. ಕಲ್ಲು ಮುಳ್ಳುಗಳನ್ನು ಅಡ್ಡವಾದ ಮರದ ಗೆಲ್ಲು ಪೊದೆಗಳನ್ನು ಕಡಿದು, ಬದಿಗೆ ಸರಿಸಿ ಮುಂದೆ ನಮ್ಮ ಉತ್ಸಾಹಿ ತರುಣರು ಹೋಗುತ್ತಿದ್ದು ನಾವು ಅವರ ಹಿಂದೆ ನಿಧಾನವಾಗಿ ಸಾಗುತ್ತಿದ್ದೆವು. ದಾರಿಯಲ್ಲಿ ಅಡ್ಡವಾಗಿ ಬಿದ್ದ ಮರಗಳನ್ನು ಹತ್ತಿ ಇಳಿಯುವುದು, ಕೆಲವೊಮ್ಮೆ ಮರದ ಗೆಲ್ಲು ಬೀಳುಗಳನ್ನು ಆಧರಿಸಿ ಹಿಡಿದು ಮೇಲೆ ಏರಬೇಕಾದ್ದು ಅನಿವಾರ್ಯವಾಗಿತ್ತು.

 ಸ್ವಲ್ಪ ದೂರ ಹೋಗುವಾಗ ನಮ್ಮಲ್ಲಿಯ ಕೆಲವು ಹುಡುಗರು ಅವಸರ ಮಾಡಿ, ಮುಂದೆ ಹೋದುದರಿಂದ ಎರಡು ಗುಂಪಾಗಿ ಒಡೆದು ಒಂದು ಗುಂಪು ದಾರಿತಪ್ಪಿ ನಮ್ಮಿಂದ ದೂರ ಹೋಗುವಂತಾಯಿತು. ಎಲ್ಲಿ ಅಂತ ಆ ಕಾಡಿನಲ್ಲಿ ಹುಡುಕುವುದು? ಯಾವ ಕಡೆಗೆ ಹೋದರು ಅಂತ ತಿಳಿಯುವುದು ಹೇಗೆ? ಕೊನೆಗೆ ಒಬ್ಬರು ಉಪಾಯ ಹೇಳಿದರು. ಗಟ್ಟಿಯಾಗಿ ಕೂಗು ಹಾಕುವುದು. ಅವರಿಗೆ ಕೇಳಿದರೆ ಪ್ರತಿಯಾಗಿ ಕೂಗು ಹಾಕಿಯಾರು ಎಂದು. ನೋಡುವ ಎಂದು ಒಬ್ಬರ ನಂತರ ಒಬ್ಬರಂತೆ “ಕೂಯ್ ಕೂಯ್” ಎಂದು ಕೂಗಿದ್ದೇ ಕೂಗಿದ್ದು. ಮಧ್ಯ ನಿಲ್ಲಿಸಿ ಆಲಿಸುವುದು.  ಅಂತೂ ಕೂಗು ಹಾಕುತ್ತಾ ಇರುವಾಗ ಕೊನೆಗೆ ಒಮ್ಮೆ ಪ್ರತಿ ಕೂಗು ಕೇಳಿದಾಗ ಅಯ್ಯಬ್ಬ ಬದುಕಿದೆವು ಎನ್ನಿಸಿತು. ಮತ್ತೆ ಮತ್ತೆ ಕೂಗಿ, ಅವರ ಕೂಗನ್ನು ಆಲಿಸುತ್ತಾ ಆ ಕಡೆಗೆ ಹುಡುಕಿಕೊಂಡು ಹೋಗಿ,  ಪುನಹ ಒಂದಾಗಿ ಮುಂದೆ ಸಾಗಿದೆವು. ನಮ್ಮ ಗುರುಗಳು ಅವರಿಗೆ “ಹಾಗೆಲ್ಲ ಗುಂಪು ಬಿಟ್ಟು ಮುಂದೆ ಹೋಗಬಾರದು” ಎಂದು ಎಚ್ಚರಿಕೆಯನ್ನು ಕೊಟ್ಟರು.

ಅಷ್ಟರಲ್ಲಿ ನಮ್ಮಲ್ಲಿ ಒಬ್ಬರು “ಹುಶ್, ಯಾರೂ ಮಾತಾಡಬೇಡಿ. ಏನೋ ಶಬ್ದ ಕೇಳುತ್ತಿದೆ. ಸುಮ್ಮನಿರಿ” ಎಂದು ಪಿಸುಗುಟ್ಟಿದರು. ಒಬ್ಬರಿಂದ ಒಬ್ಬರಿಗೆ ಅದು ಮುಟ್ಟಿ ಎಲ್ಲರೂ ಗಾಬರಿಯಾಗಿ ಅಲ್ಲಿಯೇ ಅಲ್ಲಾಡದೇ ನಿಂತೆವು. ಒಬ್ಬರ ಮುಖವನ್ನು ಒಬ್ಬರು ನೋಡಿದರು. ಉಸಿರು ಕಟ್ಟುವ ಮೌನ.

 (ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ