ಶನಿವಾರ, ಅಕ್ಟೋಬರ್ 21, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 34

ಮನೆಯಲ್ಲಿ ಬೇಸಾಯವಿದ್ದರೂ ಎಲ್ಲವನ್ನೂ ಕೂಲಿಯವರಿಂದ ಮಾಡಿಸಿ ಕೂಲಿ ಕೊಟ್ಟು, ಆಗಬೇಕಾಗಿದ್ದುದರಿಂದ ಉತ್ಪತ್ತಿ ಅಷ್ಟಕ್ಕಷ್ಟೆ. ಆದರೂ ಸುರೇಶಣ್ಣ ಮತ್ತು ಮೇಳಕ್ಕೆ ಬಿಡುವು ಇದ್ದಾಗ ಚಂದ್ರ ಭಟ್ರು ಪೂರ್ತಿಯಾಗಿ ಕೆಲಸದವರ ಮೇಲೆ ಬಿಡದೇ ಜೊತೆಯಲ್ಲಿ ಕೆಲಸ ಮಾಡುತ್ತಿದ್ದರು. ಹಟ್ಟಿಯ ಗೊಬ್ಬರ ಹೊತ್ತು ಹೊಂಡಕ್ಕೆ ಹಾಕುವುದು, ಅಗೇಡಿಯಲ್ಲಿ ಹೆಂಗಸರು ಕಿತ್ತು ಕಟ್ಟುಮಾಡಿದ ಅಗೆಯನ್ನು ಒಂದು ಗದ್ದೆಯಿಂದ ಇನ್ನೊಂದಕ್ಕೆ ಸಾಗಿಸುವುದು, ಬತ್ತ ಒಣಗಿದಾಗ ಕೊಯ್ಲಿನ ಸಮಯದಲ್ಲಿ ಕೊಯ್ಲು ಮಾಡಿ, ಮನೆಗೆ ಸಾಗಿಸಿ ಜಪ್ಪುವುದು ಮುಂತಾದ ಎಲ್ಲದರಲ್ಲೂ ನಾನೂ ಸಹಾಯ ಮಾಡುತ್ತಿದ್ದೆ. ಏನೂ ಕೆಲಸವಿಲ್ಲದೇ ಇದ್ದಾಗಲೂ, ಸುಮ್ಮನೇ ಕುಳಿತಿರಲಾಗದೇ ಗದ್ದೆಯಲ್ಲಿ ಕುಳಿತು ಭತ್ತದ ಗಿಡದ ಬುಡದ ಭಾಗವನ್ನು ಬಹುಷ್ಯ ಅದಕ್ಕೆ ಕೂಳಿ ಅಂತ ಹೇಳುತ್ತಾರೆ ಅದನ್ನು ಕಿತ್ತುಕಿತ್ತು ರಾಶಿ ಹಾಕುತ್ತಿದ್ದೆ. ಅದನ್ನು ಹಟ್ಟಿಯಲ್ಲಿ ಗಂಟಿಗಳ ಕಾಲಬುಡದಲ್ಲಿ ಹಾಕಿದರೆ ಒಳ್ಳೆಯ ಗೊಬ್ಬರ ಆಗುತ್ತಿತ್ತು. ಆದರೆ ನನ್ನ ಆರೋಗ್ಯ ಒಂದೇ ಸಮನಾಗಿ ಇರುತ್ತಿರಲಿಲ್ಲ. ಉಬ್ಬಸ ಇತ್ತಲ್ಲ. ಅದಕ್ಕೆ ಸರಿಯಾಗಿ ಒಮ್ಮೆ ಸ್ವಲ್ಪ ನಿತ್ರಾಣ ಕಾಣಿಸಿಕೊಂಡು, ನನ್ನ ಎಡಕಾಲು ನೋಯಲು ಶುರುವಾಯಿತು. ಕುಂದಾಪುರದ ಸರಕಾರಿ ಆಸ್ಪತ್ರೆಗೆ ಹೋಗಿ ತೋರಿಸಿದೆ. ಅವರು ತೊಂದರೆ ಇಲ್ಲ ಎಂದರೂ ಪೋಲಿಯೋ ಆದ ಕಾಲೇ ಆದ್ದರಿಂದ ನಡೆಯಲಾಗದ ಹಾಗೆ ಆದರೆ ಏನು ಮಾಡುವುದು? ಎಂದು ಹೆದರಿಕೆಯಾಗಿ ಸೀದಾ ಮಣಿಪಾಲಕ್ಕೆ ಹೋದೆ. ಅಲ್ಲಿ ಓಪಿಡಿಯಲ್ಲಿ ನನ್ನನ್ನು ಪರೀಕ್ಷೆ ಮಾಡಿದ ವೈದ್ಯಕೀಯ ವಿದ್ಯಾರ್ಥಿಯೊಬ್ಬರು, “ಅದು ಹಾಗೆಯೇ, ಸುಮಾರು ನಲವತ್ತು, ಐವತ್ತು ವರ್ಷ ಆಗುತ್ತಿದ್ದ ಹಾಗೆ ಇನ್ನೂ ಸಪೂರವಾಗುತ್ತದೆ” ಎಂದು ಹೆದರಿಸಿಬಿಟ್ಟರು. ನನಗೆ ಗಾಬರಿಯಾಯಿತು.

ನನಗೆ, ಅಲ್ಲಿ ಭಾಸ್ಕರಾನಂದ ಎನ್ನುವ ಯಕ್ಷಗಾನ ಪ್ರೇಮಿಗಳೊಬ್ಬರು ಡಾಕ್ಟರ್ ಆಗಿದ್ದಾರೆ ಎಂದು ಯಾರೋ ಹೇಳಿದ್ದ ನೆನಪಾಯಿತು. ಆಗಲೇ ಅವರ ಎಪಾಯಿಂಟ್ಮೆಂಟ್  ತೆಗೆದುಕೊಂಡು ಹೋಗಿ ಭೇಟಿಯಾದೆ. ಪುಣ್ಯಕ್ಕೆ ಅವರು ನನ್ನ ಸಮಸ್ಯೆಗೆ ಸಂಬಂಧಿಸಿದ ಮೂಳೆಯ ತಜ್ಞರೇ ಆಗಿದ್ದರು. ಅವರಿಗೆ ನನ್ನ ಪರಿಚಯ ಮಾಡಿಕೊಂಡು ಕಾಲನ್ನು ತೋರಿಸಿದೆ. ಅವರು ನೀವು “ಉಪ್ಪೂರರ ಮಗನೇ, ನಿಮ್ಮನ್ನು ನೋಡಿ ಸಂತೋಷವಾಯಿತು” ಎಂದು ನನ್ನ ವಿಷಯ ಕೇಳಿಕೊಂಡು ನನ್ನ ಕಾಲನ್ನು ಪರಿಶೀಲಿಸಿದರು. ಏನೂ ತೊಂದರೆ ಇಲ್ಲ, ಎಂದರಲ್ಲದೇ ಅಪ್ಪಯ್ಯನ ಬಗ್ಗೆ ಅವರ ಹಾಡಿನ ಬಗ್ಗೆ ಹೇಳಿ ಹೊಗಳಿದರು. ನನ್ನ ಬಗ್ಗೆ ಕೇಳಿದರು.  ಮತ್ತು ನೊಂದುಕೊಂಡು, “ಈಗ ಕೆಲಸ ಎಲ್ಲ ಸಿಗುವುದು ಕಷ್ಟವೇ”, ಎಂದರು. ಕೊನೆಗೆ ಒಂದು ಉಪಾಯ ತಿಳಿಸಿದರು. ನಿಮಗೆ ಪೋಲಿಯೋ ಉಂಟಲ್ಲ ಅದನ್ನು ಉಪಯೋಗಿಸಿಕೊಂಡು ಅಂಗವಿಕಲ ಕೋಟಾದಲ್ಲಿ ಪ್ರಯತ್ನಿಸಬಹುದೋ ಎಂದರು. ಮತ್ತು ಅವರೆ, “ನಿಮಗೆ ನಾನು ಒಂದು ಪತ್ರವನ್ನು ಬರೆದು ಕೊಡುತ್ತೇನೆ. ಆದರೆ ನಮ್ಮದು ಖಾಸಗಿ ಆಸ್ಪತ್ರೆಯಾದ್ದರಿಂದ ಅದು ನಿಮಗೆ ಉಪಯೋಗ ಆಗುತ್ತದೋ ಇಲ್ಲವೋ ಗೊತ್ತಿಲ್ಲ. ಶಿಪಾರಸ್ಸು ಪತ್ರ ಎಂದು ಬೇಕಾದರೆ ತಿಳಿಯಿರಿ” ಎಂದು ಒಂದು ಪತ್ರವನ್ನು ಅಲ್ಲಿಯೇ ಬರೆದುಕೊಟ್ಟರು. ಕಾಲ ಎಲ್ಲರಿಗೂ ಒಂದೆ ತೆರನಾಗಿರುವುದಿಲ್ಲ. ಕೆಲವರಿಗೆ ಒಳ್ಳೆಯದು ಮಾಡಿದರೆ, ಕೆಲವರನ್ನು ಕಷ್ಟ ಕೊಟ್ಟು ಪರೀಕ್ಷೆ ಮಾಡುತ್ತದಂತೆ. ಆ ಕಷ್ಟ ಕಳೆದು ಸುಖ ಬಂದಾಗ ನಮಗೆ ಹಿಂದಿನದನ್ನು ಮರೆಯಲಿಕ್ಕೆ ಸಾಧ್ಯವಾಗುವುದಿಲ್ಲ. ಸುತ್ತಮುತ್ತ ಎಲ್ಲರೂ ಸುಖವಾಗಿ ಇದ್ದಾರೆ ಎನ್ನಿಸುವುದೂ, ಕಷ್ಟವೆಲ್ಲಾ ನನಗೊಬ್ಬನಿಗೇ ಬಂತು ಎನ್ನಿಸುವುದೂ ಸಹಜ. ನನಗೆ ಆದದ್ದೂ ಅದೆ. ಹಾಗಾಗಿ ಆಗಿನ ಮನಸ್ಥಿತಿ ಪರಿಸ್ಥಿತಿಗಳು ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತಿದ್ದು, ಬರೆಯಲು ತೊಡಗಿದಾಗ, ಅದರ ಇಂಚು ಇಂಚು ಒಂದೊಂದಾಗಿ ನೆನಪಿಗೆ ಬರುತ್ತಾ ಇದೆ. ಕೆಲವೊಮ್ಮೆ ಅದನ್ನು ಬರೆಯುವಾಗ ಈಗಲೂ ಕಣ್ಣಲ್ಲಿ ನೀರು ಜಿನುಗಿದ್ದಿದೆ. ಹಾಗೆ ಹೇಳುವುದಾದರೆ ಅಂದಿನ ಆ ಕಷ್ಟಗಳೆಲ್ಲ ಕಳೆದು ನನ್ನ ಕಾಲಮೇಲೆ ನಾನು ನಿಲ್ಲುವ ಹಾಗಾದ ಮೇಲೆ, ಬಂದ ಸುಖದ ಅನುಭವಗಳೇ ನನಗೆ ಅಷ್ಟು ನೆನಪಿಗೆ ಬರುತ್ತಿಲ್ಲ.

ನನ್ನ ಅಕ್ಕನ ಮಗ ವೆಂಕಟೇಶನೂ ಎಂ. ಎಸ್ಸಿ. ಮಾಡಿ ಕೆಲಸ ಹುಡುಕುತ್ತಿದ್ದ. ಅವನೂ ಮತ್ತು ನಾನು, ಒಮ್ಮೆ ಗೋವಾಕ್ಕೆ ಬ್ಯಾಂಕ್ ಪರೀಕ್ಷೆಗೆ ಒಟ್ಟಿಗೇ ಹೋಗಿ ಬರೆದು ಬಂದೆವು. ಅವನು ಅದರಲ್ಲೇ ಪಾಸ್ ಆಗಿ ಇಂಟರ್ ವ್ಯೂನಲ್ಲೂ ಗೆದ್ದು,  ಅವನಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯದಲ್ಲಿ ಕೆಲಸವೂ ಸಿಕ್ಕಿತು. ಹಾಗೆ ಒಟ್ಟಿಗೇ ಕೆಲಸ ಹುಡುಕುವಾಗ, ಒಮ್ಮೆ “ಕೆಇಬಿಗೆ ಕಾಲ್ ಫಾರ್ ಮಾಡಿದ್ದಾರೆ. ನಾನೂ ಹಾಕುತ್ತೇನೆ. ನೀನು ಹಾಕು” ಎಂದು ಅದರ ವಿವರ, ವಿಳಾಸವನ್ನು ಅವನು ನನಗೆ ಕೊಟ್ಟಿದ್ದ. ನನ್ನ ಪಾಲಿಗೆ ಭಾಸ್ಕರಾನಂದರು ಕೊಟ್ಟ ಆ ಪತ್ರವೇ ವರದಾನವಾಯಿತು. ಅದನ್ನೇ ಲಗತ್ತಿಸಿ ಕೆಇಬಿಯ ಸಹಾಯಕ ಹುದ್ದೆಗೆ ಅರ್ಜಿಯನ್ನು ಹಾಕಿದೆ.

ಇಂತಹ ಹೊತ್ತಿನಲ್ಲಿ, ನನ್ನ ಕಾಲೇಜಿನ ಸ್ನೇಹಿತ, ರಾಜ ಹೆಬ್ಬಾರ, ಒಮ್ಮೆ ನಮ್ಮ ಸಂಬಂಧಿಕರ ಒಂದು ಊಟದಲ್ಲಿ ಭೇಟಿಯಾದ. ಸಿಕ್ಕಿದವ “ಏನು ಮಾಡುತ್ತಿದ್ದೀ?” ಎಂದು ಕೇಳಿದ. ನಾನು ಹೇಳಿದೆ. ಅವನೂ ಆಗ ಬೈಂದೂರಿನ ಆಚೆ ಶಿರೂರಿನ ಪೇಟೆಯಲ್ಲಿ ಸ್ವಂತವಾಗಿ “ಸಿಂಡಿಕೇಟ್ ಫಾರ್ಮಾ” ಎನ್ನುವ ಔಷಧದ ಅಂಗಡಿ ಇಟ್ಟಿದ್ದ. “ಕೆಲಸ ಸಿಗುವವರೆಗೆ ನನ್ನ ಜೊತೆ ಇರಬಹುದಲ್ಲ. ಬಾ” ಅಂದ. ನನಗೆ ಅದೂ ಸರಿಯೆನಿಸಿತು. ಸರಿ, ಮಾರನೇ ದಿವಸವೇ ನನ್ನ ಬಟ್ಟೆಬರೆಗಳನ್ನು ಕಟ್ಟಿಕೊಂಡು ಶಿರೂರಿಗೆ ಹೋದೆ. ಓನರ್ ಪರವೂರಿನಲ್ಲಿದ್ದು ಖಾಲಿ ಇರುವ ಒಂದು ಮನೆಯು, ನನ್ನ ವಾಸಕ್ಕೆ ಸಿಕ್ಕಿತು. ಬೆಳಿಗ್ಗೆ ಕಾಫಿ,ತಿಂಡಿ ಮಧ್ಯಾಹ್ನ, ರಾತ್ರಿ ಊಟ ಹೋಟೆಲಿನಲ್ಲಿ ಆಗುತ್ತಿತ್ತು. ಅಲ್ಲಿ ಲೆಕ್ಕ ಬರೆದಿಟ್ಟು ಒಟ್ಟಿಗೆ ಪಾವತಿಸುವುದು. ಹಗಲು ಅವನ ಔಷಧದ ಅಂಗಡಿಯಲ್ಲಿ ಕೆಲಸ ಮಾಡುವುದು. ಹೀಗೆಯೇ ಮೂರ್ನಾಲ್ಕು ತಿಂಗಳು ಕಳೆಯಿತು.

ನಾನು ಶಿರೂರಿನಲ್ಲಿ ರಾಜ ಹೆಬ್ಬಾರನ ಔಷಧದ ಅಂಗಡಿಯಲ್ಲಿ ಇದ್ದಾಗ ಒಮ್ಮೆ ಮನೆಗೆ ಹೋಗಲು ಕುಂದಾಪುರಕ್ಕೆ ಹೋಗುವ ಲಾರಿ ಹತ್ತಿದೆ. ಆಗ ಬಸ್ಸುಗಳು ಕಡಿಮೆ ಇದ್ದು, ಹೆಚ್ಚಿನ ಬಸ್ಸುಗಳು ಸರ್ವೀಸ್ ಬಸ್ಸುಗಳಾಗಿದ್ದು ಎಲ್ಲಾ ಕಡೆಯಲ್ಲೂ ನಿಲ್ಲಿಸಿ ನಿಲ್ಲಿಸಿ ಹೋಗುತ್ತಿದ್ದುದರಿಂದ ನಾವು ಹೆಚ್ಚಾಗಿ ಲಾರಿಯಲ್ಲಿ ಪ್ರಯಾಣಮಾಡುವುದು ಸಾಮಾನ್ಯವಾಗಿತ್ತು. ಲಾರಿ ಹತ್ತಿದಾಗ ಅದರಲ್ಲಿ ಕಾಳಿಂಗ ನಾವಡರೂ ಇದ್ದರು. ಅದೂ ಇದೂ ಮಾತಾಡುತ್ತಾ ಎಲ್ಲಿ ಇರುವುದು? ಏನು ಮಾಡುವುದು? ಇತ್ಯಾದಿ ಕೇಳಿದ ಅವರು, ಯಕ್ಷಗಾನದ ಭಾಗವತಿಕೆಯಲ್ಲಿ ಅವರು ತಂದ ಕೆಲವು ಬದಲಾವಣೆಗಳ ಬಗ್ಗೆ ತಿಳಿಸಿದರು. ಅವುಗಳನ್ನು ಅಪ್ಪಯ್ಯ ಹೇಳುತ್ತಿದ್ದ ರೀತಿಯನ್ನು ಮೆಲುಕುಹಾಕಿದರು. ನಾನು, “ಈಚೀಚೆಗೆ ನಾನು ಆಟ ನೋಡುತ್ತಲಿಲ್ಲ” ಎಂದೆ. “ಬಿಡಬಾರದು ಮಾರಾಯ, ನಿಮ್ಮ ಅಪ್ಪಯ್ಯ ಯಕ್ಷಗಾನಕ್ಕೆ ನೀಡಿದ ಕೊಡುಗೆ ಅಪಾರ. ನೀನು ಮುಂದುವರಿಸಬೇಕು” ಎಂದರು. ನಾನು, “ಅವರೇ ಮೇಳದ ಸುದ್ದಿ ಬೇಡ ಮಕ್ಕಳೇ, ಅದು ಸುಖದ ಬಾಳು ಅಲ್ಲ” ಎಂದು ಹೇಳುತ್ತಿದ್ದರು ಎಂದೆ. ಅದು ಗುರುಗಳ ಕಾಲಕ್ಕಾಯಿತು. ಈಗ ನನ್ನನ್ನೇ ನೋಡು, ನನಗೆ ಎಷ್ಟೆಲ್ಲ ಪ್ರಸಿದ್ಧಿ ಬಂದಿದೆ. ವಿಮಾನವನ್ನು ಹತ್ತಿಯಾಯಿತು. ನೀವು ಓದಿದ ಮಕ್ಕಳು ಯಕ್ಷಗಾನಕ್ಕೆ ಹೊಸತೇನನ್ನಾದರೂ ಕೊಡಬೇಕು. ಪ್ರಸಿದ್ಧಿಗೆ ಬರಬಹುದು ಎಂದರು. ನಾನು ಸುಮ್ಮನಾದೆ. ಅವರು ಯಕ್ಷಗಾನಕ್ಕೆ ಅವರು ಅಳವಡಿಸಿದ ಕಲಾವತಿ, ಶುದ್ಧ ಸಾವೇರಿ, ಷಣ್ಮುಖಪ್ರಿಯ ಮುಂತಾದ ರಾಗಗಳ ಬಗ್ಗೆ, ಹಳೆಯ ಪ್ರಸಂಗಗಳ ಕೆಲವು ಸಂದರ್ಭಗಳಲ್ಲಿ ಅವುಗಳನ್ನು ಬಳಸುತ್ತಿರುವ ಬಗ್ಗೆ ಒಂದೆರಡು ರಾಗಗಳನ್ನು ಹಾಡಿಯೇ ತೋರಿಸಿದರು. ಕುಂದಾಪುರ ಬಂದ ಕೂಡಲೇ ನಾನು ಬರುತ್ತೇನೆ ಎಂದು ಹೇಳಿ ಲಾರಿಯಿಂದ ಇಳಿದೆ.

ನನಗೆ ಕೆಇಬಿಯಲ್ಲಿ ಕೆಲಸ ಸಿಕ್ಕಿದ ಮೇಲೆ,  ಉಡುಪಿಯಲ್ಲಿ ಇರುವಾಗ, ಅವರ ತಂದೆ ರಾಮಚಂದ್ರ ನಾವಡರಿಗೆ ಆರೋಗ್ಯ ಸರಿ ಇಲ್ಲದಾಗ, ಮಿತ್ರ ನರ್ಸಿಂಗ್ ಹೋಮ್ ಗೆ ಸೇರಿಸಿದ್ದರು. ನಾನು ಸುದ್ದಿ ತಿಳಿದು, ಮಾತಾಡಿಸಿಕೊಂಡು ಬರುವ ಎಂದು ಹೋದಾಗ ಅಲ್ಲಿ, ಕಾಳಿಂಗ ನಾವಡರು ಮತ್ತೊಮ್ಮೆ ಸಿಕ್ಕಿದರು. ಆಗಲೂ ಅವರು “ನೀನು ಭಾಗವತಿಕೆ ಕಲಿಯಬೇಕು. ಬೇಕಾದ್ರೆ ನಾನೇ ಹೇಳಿ ಕೊಡ್ತೆ. ನನ್ನ ಜೊತೆಗೆ ಬಾ. ಈ ಕೆಲಸ ಎಲ್ಲ ಎಂತಕ್ಕೆ” ಎಂದರು. ನಾನು ಮುಖ ಕೆಳಗೆ ಹಾಕಿ “ನನ್ನ ಇಳಿಸ್ವರ ಭಾಗವತಿಕೆಗೆ ಹೊಂದುವುದಿಲ್ಲ. ಅಪ್ಪಯ್ಯ ಇರುವಾಗಲೇ ಒಮ್ಮೆ ಹಾಗೆ ಹೇಳಿದ್ದರು. ತುಂಬಾ ಪ್ರಯತ್ನ ಬೇಕು ಅಂತ. ಅದಕ್ಕೆ ಪ್ರಯತ್ನವನ್ನೇ ಮಾಡಲಿಲ್ಲ ಮರ್ರೆ. ಈಗ ಕೆಲಸವೂ ಸಿಕ್ಕಿಯಾಯಿತಲ್ಲ ಇದನ್ನು ಬಿಟ್ಟು ಬರುವುದುಂಟೇ? ಎಂದೆ. ಅವರು “ಮತ್ತೆಂತ ಇಲ್ಯಾ? ಸ್ವರ ಏರಿಸಿದ ಕೂಡಲೇ ಭಾಗವತರಾತ್ರಾ? ಇಳೀ ಸ್ವರದಲ್ಲೂ. ಪರಿಣಾಮಕಾರಿಯಾಗಿ ಒಳ್ಳೇ ರೀತಿ ಪದ್ಯ ಹೇಳುಕಾತ್ತು. ಅಭ್ಯಾಸ ಮತ್ತು ಸ್ವಂತಿಕೆ ಬೇಕು ಅಷ್ಟೆ”. ಎಂದು ಹೇಳಿದರು. ನಂತರ “ಮಾರಾಯಾ ನನಗೂ ಒಂದು ಆಸೆ ಇತ್ತು. ನಾನು, ನನಗೆ ಕಲಿಸಿದ, ಬಾಳು ಕೊಟ್ಟ ಗುರುಗಳ ಮಗನಿಗೆ ಭಾಗವತಿಕೆ ಕಲಿಸಿ, ನನ್ನ ಗುರು ಋಣ ತೀರಿಸಬೇಕು ಅಂತ” ಎಂದು ನಗಾಡಿದರು.  ನಾನೂ “ಬೇಡ ಮಹರಾಯರೆ, ಅದು ನಿಮಗೆ ಆಗಲಿಕ್ಕಿಲ್ಲ” ಎಂದು ನಕ್ಕುಬಿಟ್ಟೆ. ಅವರು ಅಂದು ಅದನ್ನು ಸೀರಿಯಸ್ಸಾಗಿ ಹೇಳಿದ್ದರೋ, ತಮಾಷೆಗೆ ಹೇಳಿದ್ದರೋ ಗೊತ್ತಿಲ್ಲ.  ಅಂತೂ ನಾನು ಅವರ ಹತ್ತಿರ ಭಾಗವತಿಕೆ ಕಲಿಯಲು ಹೋಗಲಿಲ್ಲ. ಅದರಿಂದ ನನಗೆ ನಷ್ಟವಾಯಿತೋ ಇಲ್ಲವೋ, ಆದರೆ ಯಕ್ಷಗಾನಕ್ಕಂತೂ ಒಳ್ಳೆಯದೇ ಆಯಿತು ಬಿಡಿ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ