ಶುಕ್ರವಾರ, ಅಕ್ಟೋಬರ್ 20, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 33

ಮರುದಿನ ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ನಾನು ಶ್ರೀನಿವಾಸ ಶೆಟ್ರ ಮನೆಗೆ ಹೋದೆ. ಆಗ ಅವರು ಇನ್ನೂ ಶಾಸಕರಾಗಿರಲಿಲ್ಲ, ಹೆಚ್ಚೇಕೆ ರಾಜಕೀಯಕ್ಕೆ ಇಳಿದಿರಲಿಲ್ಲ. ಆಗಲೇ, ಅವರನ್ನು ಕಾಣಲು ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿ, ಅವರಿಂದ ಸಹಾಯ ಪಡೆಯಲು, ಕುಟುಂಬ ವ್ಯಾಜ್ಯ ಜಾಗದ ವಿವಾದಗಳನ್ನು ಬಗೆಹರಿಸಿಕೊಳ್ಳಲು, ಅಂತ ಹತ್ತಾರು ಮಂದಿ ಅಲ್ಲಿ ಬಂದು, ಅವರ ಮನೆಯ ಮುಂದಿನ ಜಗಲಿಯಲ್ಲಿ ಸಾಲಾಗಿ ಕುಳಿತಿದ್ದರು. ಎಲ್ಲರಿಗೂ ಕಾಫಿಯೂ ಬಂತು. ಟವೆಲ್ಲನಲ್ಲಿ ಮುಖವರೆಸಿಕೊಳ್ಳುತ್ತಾ, ಲುಂಗಿ ಬನಿಯನ್ನಿನ್ನಲ್ಲಿ ಹೊರಗೆ ಬಂದ ಶೆಟ್ರು, ಕುಳಿತುಕೊಂಡು ಕಾಯುತ್ತಿದ್ದ ಎಲ್ಲರನ್ನೂ ಮಾತಾಡಿಸಿದರು, ಕೊನೆಗೆ ನನ್ನನ್ನು ನೋಡಿ “ಹೋ ಉಪ್ಪೂರ್ರೆ, ನೀವೂ ಬಂದಿರ್ಯಾ? ನಾನ್ ಅವ್ರಿಗ್ ಪೋನ್ ಮಾಡಿ ಹೇಳಿದಿ. ಒಂದ್ಸಲ ಹೋಯಿ ಬಪ್ಪ. ನಾಳೆ ನಾಡದಾಂಗ್ ಬನ್ನಿ” ಅಂದರು. ನಾಳೆ ಬೆಳಿಗ್ಗೆ ನಾನು ಮತ್ತೆ ಅವರ ಮನೆಗೆ ಹೋದೆ. ಅವರು “ಹೋ ಇವತ್ ಆಯ್ಲಿಲ್ಲೆ ಮರಾಯ್ರೆ. ನನಗೆ ಸ್ವಲ್ಪ ಬೇರೆ ಅರ್ಜೆಂಟ್ ಕೆಲ್ಸ ಬಂತ್. ನಾಳಿಗ್ ಹೋಪ”. ಅಂದ್ರು. ಮತ್ತೆ ಮರುದಿನ ಬೆಳಿಗ್ಗೆ ನಾನು ಅಲ್ಲಿ ಹಾಜರ್. ಅವರು ಬಿಜಿ. “ಹೋ ನಿಮ್ಮನ್ ಕಂಡ್ರೆ ನಂಗೇ ಬೇಜಾರಾತ್ ಮರ್ರೆ. ಇವತ್ ಬೇಡ. ನಾಳಿಗ್ ಖಂಡಿತಾ”. ಎನ್ನುವರು. ಮತ್ತೊಂದು ದಿನ ಹೋದಾಗ, ನಾವು ಹೋಗ ಬೇಕಾದವರ ಮನೆಗೆ, ಪೋನ್ ಮಾಡಿದರು. “ಅವರು ಇವತ್ ಊರಲ್ ಇಲ್ಲೆ ಅಂಬ್ರು. ನಾಳೆ ಕಾಂಬ” ಅನ್ನುವರು. ಅಲ್ಲಿ ಬರುವ ಹತ್ತಾರು ಮಂದಿ, ಅವರ ಸಹಾಯ ಬೇಡಿಬಂದವರಲ್ಲಿ ನಾನೂ ಒಬ್ಬ. ಅವರನ್ನು ಬಿಟ್ರೆ ನನಗೆ ಬೇರೆ ದಾರಿಯೇ ಇರಲಿಲ್ಲ.

ಆಗಲೇ ಶುರುವಾದ ಉಬ್ಬಸ ಕಾಯಿಲೆ ಬೇರೆ. ಮಧ್ಯರಾತ್ರಿ ಒಮ್ಮೆಲೆ ಹೆಚ್ಚಾಗುತ್ತಿತ್ತು. ಕೆಲವು ದಿನ ರಾತ್ರಿ ಇದ್ದಕ್ಕಿಂತೆಯೇ ಎಚ್ಚರಾಗಿ ಉಸಿರಾಡಲು ಕಷ್ಟವಾಗಿ, ನಿದ್ರೆ ಮಾಡಲಿಕ್ಕೇ ಆಗುತ್ತಿರಲಿಲ್ಲ. ಕುಳಿತೇ ಬೆಳಗು ಮಾಡಬೇಕಾದ ಪರಿಸ್ಥಿತಿ. ಒಮ್ಮೊಮ್ಮೆ ಅಮ್ಮನೂ ನನ್ನ ಸ್ಥಿತಿ ನೋಡಿ ಬಂದು ಹತ್ತಿರ ಕುಳಿತು ಕೊಳ್ಳುತ್ತಿದ್ದಳು. ನಾನು ಅದೇ ಒದ್ದಾಟದಲ್ಲಿ, ಅವಳಿಗೆ ಏನಾದರೂ ಕತೆ ಹೇಳುತ್ತಿದ್ದೆ. ನನ್ನ ಸಮಾಧಾನಕ್ಕೆ ಅವಳೂ ಕೇಳಿದಂತೆ ಮಾಡುತ್ತಿದ್ದಳು. ಎಲ್ಲಾ ಕಡೆ ಮದ್ದೂ ಮಾಡಿಯಾಯಿತು. ಅದರ ಮಧ್ಯೆ ಪ್ರತೀ ದಿನ ಬೆಳಿಗ್ಗೆ ಹಾಲಾಡಿ ಶ್ರೀನಿವಾಸ ಶೆಟ್ರ ಮನೆಯ ದರ್ಶನ. ಕೆಲವೊಮ್ಮೆ ನನಗೇ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹೀಗೇ ಒಂದೂ ಒಂದುವರೆ ತಿಂಗಳೇ ಕಳೆದಿರಬೇಕು. ಇಂಟರ್ ವ್ಯೂ ಕಾರ್ಡ್ ಬಂದು ಸಂದರ್ಶನದ ದಿನವೂ ಹತ್ತಿರ ಬಂದಾಯಿತು. ಶೆಟ್ರು ಬಿಜಿ. “ಹೆದರಬೇಡಿ ಉಪ್ಪೂರ್ರೆ, ಎಲ್ಲ ಮಾಡ್ವ” ಎಂದು ಧೈರ್ಯ ಬೇರೆ ಕೊಡುತ್ತಾರೆ. ನನಗೆ ಆತಂಕ.

 ಅಂತೂ ಇಂಟರ್ ವ್ಯೂಗೆ ಇನ್ನು ಎರಡು ದಿನ ಇದೆ ಎನ್ನುವಾಗ, ಅವರ ಬೈಕಿನಲ್ಲಿ ನನ್ನನ್ನು ಕೂರಿಸಿಕೊಂಡು, ಶಿರಿಯಾರದ ಹತ್ತಿರ ಒಳರಸ್ತೆಯಲ್ಲಿ ಸುಮಾರು ಎರಡು ಫರ್ಲಾಂಗ್ ದೂರ ಹೋಗಿ, ಒಬ್ಬ ಹಿರಿಯರ ಮನೆಗೆ ಕರೆದುಕೊಂಡು ಹೋದರು. ಅವರಿಗೆ ನನ್ನ ಪರಿಚಯ ಮಾಡಿಸಿ “ಇವರಿಗೆ ನೀವೊಂದು ಸಹಾಯ ಮಾಡಲೇಬೇಕು” ಎಂದು ನನ್ನ ಕುರಿತು ಹೇಳಿದರು. ಆ ವೃದ್ಧರು ಒಪ್ಪಿ, ಒಂದು ಪತ್ರ ಬರೆದು ನನಗೆ ಕೊಟ್ಟರು. “ಕೆಲಸ ಸಿಕ್ಕಿದ ಮೇಲೆ ನನ್ನನ್ನು ಮರೆಯಬಾರದು. ಒಂದು ಎಲ್.ಐ.ಸಿ. ಪಾಲಿಸಿ ಮಾಡಿಸಬೇಕು” ಅಂದರು. ಅಷ್ಟೇ ಬೇಡಿಕೆ. “ಅದು ಅಡ್ಡಿಲ್ಲಪ್ಪ. ನಾನು ಆ ಬಗ್ಗೆ ಗ್ಯಾರಂಟಿ ಕೊಡ್ತೇ” ಎಂದು ಶೆಟ್ರೇ ಹೇಳಿಯಾಯಿತು. ನಾನೂ ಒಪ್ಪಿದೆ.

ಅಂತೂ ಇಂಟರ್ ವ್ಯೂ ನ ಹಿಂದಿನ ದಿನ ಬಳ್ಳಾರಿಗೆ ಹೋಗಿ ಚಯರ್ ಮೆನ್ ರ ಮನೆ ಹುಡುಕಿ, ಅವರಿಗೆ ಆ ಪತ್ರವನ್ನು ಕೊಟ್ಟೆ. ಅವರು, “ಮರುದಿನ ಬಂದು ಇಂಟರ್ ವ್ಯೂ ಗೆ ಹಾಜರಾಗಿ. ಮತ್ತೆ ನೋಡುವ”. ಅಂತ ಹೇಳಿದರು. ನಾನು ಮರುದಿನ ಇಂಟರ್ ವ್ಯೂ ಗೆ ಹಾಜರಾದೆ. ಸುಮಾರಾಗಿ ಆಯಿತು. ಕೊನೆಗೆ ಅಲ್ಲಿಂದ, ಹತ್ತಿರವೇ ಇರುವ ಮಂತ್ರಾಲಯಕ್ಕೆ ಹೋಗಿ, ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿಕೊಂಡು ಮನೆಗೆ ಬಂದು ಸೇರಿದೆ. ಮರುದಿನವೇ ಶೆಟ್ರ ಮನೆಗೆ ಹೋಗಿ, “ಹೀಗೆ ಹೀಗೆ ಆಯಿತು” ಅಂದೆ. ಅವರು. “ಹೆದರಬೇಡಿ ಉಪ್ಪೂರ್ರೆ, ನಾನು ಮತ್ತೊಮ್ಮೆ ಅವರಿಗೆ ನೆನಪು ಮಾಡ್ತೇ. ದೇವರು ಒಳ್ಳೇದು ಮಾಡ್ತಾ”. ಅಂದರು.

ವರದಾ ಗ್ರಾಮೀಣ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ನ ಸ್ವಾಧೀನದಲ್ಲಿದ್ದ ಬ್ಯಾಂಕ್ ಆಗಿದ್ದ ಕಾಲ ಅದು. ನಾನು ಮಕ್ಕಳ ಮೇಳದ ತಿರುಗಾಟದಲ್ಲಿದ್ದಾಗ ಪರಿಚಯವಿದ್ದ ಸಿಂಡಿಕೇಟ್ ಬ್ಯಾಂಕಿನಲ್ಲಿ ದೊಡ್ಡ ಹುದ್ದೆಯಲ್ಲಿದ್ದ ಕೆ.ಎಮ್. ಉಡುಪರು ಆಗ ಮಣಿಪಾಲದಲ್ಲಿದ್ದಿದ್ದರು. ಅವರ ಮನೆಗೂ ಹೋಗಿ ಬಂದೆ. “ನಾನು ಗ್ರಾಮೀಣ ಬ್ಯಾಂಕ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದೇನೆ” ಎಂದು  “ಏನಾದರೂ ಮಾಡಿ ನನಗೆ ಕೆಲಸಕೊಡಿಸಲು ಸಾಧ್ಯವೇ?” ಎಂದು ಅವರನ್ನೂ ಕೇಳಿಕೊಂಡೆ. ಅವರು ಪ್ರಯತ್ನಿಸುವ ಎಂದು ನನ್ನಲ್ಲಿದ್ದ ವಿವರಗಳನ್ನೆಲ್ಲ ಪಡೆದರು. ಆದರೆ ಅವರ ಪ್ರಯತ್ನದಿಂದ ಆ ಬ್ಯಾಂಕಿನ ಇಂಟರ್ವ್ಯೂ ನಲ್ಲಿ ಪಾಸಾದರೂ ನನ್ನ ಹೆಸರು ಆಯ್ಕೆಯಾದವರ ಪಟ್ಟಿಯಲ್ಲಿ ವೈಟಿಂಗ್ ಲೀಸ್ಟ್ ನಲ್ಲಿ ಬಂತು. ಅಲ್ಲಿಗೆ ಮತ್ತೆ ನನ್ನ ಅದೃಷ್ಟ ಕೈಕೊಟ್ಟಿತು.

ಒಮ್ಮೆ ನಾನು ಮನೆಯಲ್ಲಿ ಸುಮ್ಮನೇ ಹೀಗೆ ಕುಳಿತಿರುವಾಗ, ನಮ್ಮ ಮನೆಗೆ ಒಬ್ಬ ಭಿಕ್ಷುಕ ಬಂದ. ನೋಡಲು ಗಟ್ಟಿ ಮುಟ್ಟಗಿದ್ದ. ಏನಾದರೂ ಕೊಡಿ ಸ್ವಾಮೀ ಅಂದ. ಅವನನ್ನು ನೋಡಿದ ಕೂಡಲೇ ನನಗೆ, “ಇಷ್ಟು ಗಟ್ಟಿ ಇದ್ದವರು, ದುಡಿದು ತಿನ್ನಬಾರದೇ?” ಅನ್ನಿಸಿ, ಅವನಿಗೆ ಅದನ್ನು ಹೇಳಿದೆ. “ನೋಡಪ್ಪ ನಾನೂ ಕೆಲಸ ಇಲ್ಲದ ನಿರುದ್ಯೋಗಿ. ಮನೆಯಲ್ಲಿ ಏನೋ ನನ್ನ ಕೈಲಾದಷ್ಟು ಕೆಲಸ ಮಾಡುತ್ತೇನೆ. ನೀನೂ ಹಾಗೆಯೇ, ಇನ್ನೊಬ್ಬರ ಮನೆಯಲ್ಲಿ ದುಡಿದಾದರೂ ತಿನ್ನಬಾರದೇ?”. ಅದಕ್ಕೆ ಅವನು “ನಿಮಗಾದರೆ ಆಸ್ತಿ ಇದೆ, ಮನೆ ಇದೆ. ನನಗೆ ಏನಿದೆ?. ಅಲ್ಲದೇ ಗುರುತು ಪರಿಚಯವಿಲ್ಲದ ನನಗೆ ಯಾರು ಕೆಲಸ ಕೊಡುತ್ತಾರೆ” ಅಂದ. ನನಗೂ ಕೆಣಕಿದಂತಾಯಿತು. ನಾನು, “ಹಾಗಾದರೆ ನಾನು ಕೆಲಸ ಕೊಡುತ್ತೇನೆ. ಇವತ್ತು ನನ್ನ ಜೊತೆಗೆ ಇದ್ದು ತೋಟದಲ್ಲಿ ಕೆಲಸ ಮಾಡು. ಸಂಜೆ ನಿನಗೆ ಮುವ್ವತ್ತು ರೂಪಾಯಿ ಕೊಡುತ್ತೇನೆ” ಅಂದೆ. ಅವನು ಮೊದಲು ಸ್ವಲ್ಪ ಅನುಮಾನಿಸಿದರೂ ಕೊನೆಗೆ ಒಪ್ಪಿಯೇ ಬಿಟ್ಟ.

ನಾನು ಅಂತಹ ಮೈಗಳ್ಳರ ವಿಷಯ ತಿಳಿದವನಾಗಿ ಅಷ್ಟಕ್ಕೇ ಅವನು ಓಡಿ ಹೋಗುತ್ತಾನೆ ಎಂದು ಭಾವಿಸಿದ್ದೆ.  ಅಮ್ಮ, “ನಿಂಗ್ ಬೇರೆ ಕೆಲಸ ಇಲ್ಲ, ಸುಮ್ನೇ ಎಂಟಾಣೆ ಕೊಟ್ಟು ಕಳಿಸೂಕಾಗ್ದಾ?” ಅಂದಳು. ಅವನು ನಿಂತೇ ಇದ್ದ. ನಾನು ಅವನಿಗೆ ಒಂದು ಹಾರೆಯನ್ನು ಕೊಟ್ಟು, ನಮ್ಮ ತೋಟಕ್ಕೆ ಕರೆದೊಯ್ದು, ಒಂದು ಕಡೆ ತೋರಿಸಿ, “ಅಲ್ಲಿಂದ ನಮ್ಮ ಬಾವಿಯ ವರೆಗೆ ಒಂದು ತೋಡು ಮಾಡು ನೋಡುವ” ಎಂದು ಹೇಳಿದೆ. ಅವನೇನು ಮಾಡುತ್ತಾನೆ ಎಂದು ನೋಡುತ್ತಾ ಅಲ್ಲಿಯೇ ನಿಂತೆ. ಅವನು ಹೇಳದೇ ಕೇಳದೇ ಓಡಿಹೋದರೆ ನಮ್ಮ ಹಾರೆಯೂ ಹೋಗುತ್ತದಲ್ಲ. ಅವನು ಸ್ವಲ್ಪ ಹೊತ್ತು ಕೆಲಸ ಮಾಡಿದ ಹಾಗೆ ಮಾಡಿ, ಇದು ನನ್ನಿಂದ ಆಗುವುದಿಲ್ಲ ಎಂದು ಹಾರೆಯನ್ನು ಅಲ್ಲಿಯೇ ಬಿಸುಟು ಹೊರಟೇ ಹೋದ. ನಾನು “ಎಲ್ಲಿಗೆ ಹೋಗುತ್ತಿ? ಬಾ ಮಾರಾಯಾ” ಎಂದು ಕರೆದರೂ ಅವನು ವಾಪಾಸು ಬರಲಿಲ್ಲ. ನಾನು ನಕ್ಕು, ಮನೆಗೆ ಬಂದು ಅಮ್ಮನಿಗೆ ವಿಷಯ ತಿಳಿಸಿದೆ. ಅವಳು, “ನಿಂಗ್ ಮರುಳು, ಅವ್ರನ್ನೆಲ್ಲ ಸಮಾ ಮಾಡೂಕಾತ್ತಾ? ಊರು ಉದ್ದಾರ ಮಾಡೂಕೆ ಹೋದ್ರೆ ಮತ್ತೆಂತ ಆತ್?“ ಎಂದು  ನಗಾಡಿದಳು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ