ಮಂಗಳವಾರ, ಅಕ್ಟೋಬರ್ 24, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 37

ಸ್ವಲ್ಪ ದಿನ ಕುಂದಾಪುರದ ಶ್ರೀಧರಣ್ಣಯ್ಯನ ಮನೆಯಿಂದಲೇ ಉಡುಪಿಯ ನಮ್ಮ ಆಫೀಸಿಗೆ ಓಡಾಡಿದೆ. ನನಗೆ ಉಡುಪಿಯಲ್ಲೇ ಇರುವ ಮನಸ್ಸು. ಸಂಜೆ ಆಫೀಸು ಬಿಟ್ಟ ಮೇಲೆ ಅಲ್ಲಿ ಇಲ್ಲಿ ವಿಚಾರಿಸತೊಡಗಿದೆ. ನನ್ನ ಜೊತೆಗೆ ಕೆಲಸಕ್ಕೆ ಸೇರಿದ ದೂರದೂರದ ಊರಿನ ಹುಡುಗರು ಅವರವರೇ ಸೇರಿ ಮಾತಾಡಿಕೊಂಡು ಒಟ್ಟಾಗಿ ರೂಮು ಮಾಡಿಕೊಂಡರು. ಕೊನೆಗೆ ಒಳಕಾಡಿನಲ್ಲಿ ಒಬ್ಬರ ಜೊತೆಗೆ ಇರಬಹುದು ಅಂತ ಯಾರೋ ಹೇಳಿದರು ಅಂತ ಹುಡುಕಿಕೊಂಡು ಹೋದೆ. ಅದು ಕತ್ತಲೆ ಕತ್ತಲೆಯ ಒಂದು ಸಣ್ಣ ರೂಮು. ಬಾಗಿಲ ಹೊರಗೇ, ಎದುರೇ ತೆಂಗಿನ ಮರದ ಬುಡದಲ್ಲಿ ಬಟ್ಟೆ, ಪಾತ್ರೆ ತೊಳೆದ ಗಲೀಜು ನೀರು ಅಲ್ಲಲ್ಲೇ ನಿಂತಿತ್ತು. ರೂಮು ನೋಡಿ, “ಬರುವುದಾದರೆ ನಾಳೆ ಬರುತ್ತೇನೆ” ಎಂದು ಬಂದುಬಿಟ್ಟೆ. ಇನ್ನೂ ಸ್ವಲ್ಪ ಚೆನ್ನಾಗಿರುವ ಪರಿಸರದಲ್ಲಿ ಸಿಗಬಹುದು ಎಂದು ಮತ್ತೆ ಹುಡುಕಾಟ ಮುಂದುವರಿಸಿದೆ. ಆಮೇಲೆ ರಾಜ ಹೆಬ್ಬಾರನ ಸ್ನೇಹಿತರು ಶಿರೂರಿನವರೇ ಆದ ಒಬ್ಬರು, ತೆಂಕುಪೇಟೆಯಲ್ಲಿ ತಾಜಮಹಲ್ ಹೋಟೆಲಿನ ಹಿಂದೆ ಉಪ್ಪರಿಗೆಯ ಮೇಲೆ ಒಬ್ಬರೇ ಇದ್ದಾರೆ ಎಂದು ಗೊತ್ತಾಗಿ, ಅವರನ್ನು ಕೇಳುವ ಅಂತ ಹುಡುಕಿಕೊಂಡು ಹೋದೆ. ಅವರು ಚಿನ್ನದ ಕೆಲಸ ಮಾಡುವ ಆಚಾರಿಯವರು,  ಅವರು ನನ್ನನ್ನು ನೋಡಿದ ಕೂಡಲೇ, “ನೀವು ಬರುತ್ತೀರಿ ಎಂದು ಹೆಬ್ಬಾರರು ಹೇಳಿದ್ದಾರೆ ಎಂದು. ಯಾವಾಗ ಬರುತ್ತೀರಿ?” ಎಂದು ಕೇಳಿದರು. ನಾನು ಮರುದಿನವೇ ಅಣ್ಣನಲ್ಲಿ ವಿಷಯವನ್ನು ತಿಳಿಸಿ ಅಲ್ಲಿಗೆ ಹೋಗಿ ಸೇರಿಕೊಂಡೆ.

ನಾನು ಅವರ ರೂಮಿನಲ್ಲಿ ಒಂದು, ಮೂರು ತಿಂಗಳು ಇದ್ದೆ. ಅವರು ಬೆಳಿಗ್ಗೆ ಬೇಗ ಸ್ನಾನ ಮಾಡಿ ಹೊರಟು ಹೋದರೆ, ರಾತ್ರಿ ಮಲಗಲಿಕ್ಕೆ ಮಾತ್ರ ರೂಮಿಗೆ ಬರುತ್ತಿದ್ದರು. ಬಹಳ ದಾಕ್ಷಿಣ್ಯದ ಜನ. ಮಾತೇ ಆಡುವವರಲ್ಲ. ಅವರು ನಾನು ಏಳುವ ಮೊದಲೇ ಎದ್ದು ಸ್ನಾನ ಮಾಡಿ ಹೋದರೆ, ಸಾಮಾನ್ಯ ನಾನು ಮಲಗಿದ ಮೇಲೇ ರೂಮಿಗೆ ಬರುತ್ತಿರುವುದರಿಂದ, ನನ್ನ ಮತ್ತು ಅವರ ಭೇಟಿ ಯಾವಾಗಾದರೊಮ್ಮೆ ಮಾತ್ರಾ ಆಗುತ್ತಿತ್ತು.

ಕೆಲಸ ಸಿಕ್ಕಿದ ಮೇಲೆ ನಾನು ಮೊದಲು ಮಾಡಿದ ಕೆಲಸ ಏನೆಂದರೆ, ರಮೇಶಣ್ಣಯ್ಯನಿಗೆ ಪತ್ರ ಬರೆದು, ಬಿದ್ಕಲ್ ಕಟ್ಟೆ ಸಿಂಡಿಕೇಟ್ ಬ್ಯಾಂಕಿನ ಸಾಲಕ್ಕೆ ಕಂತಿನಲ್ಲಿ ಅವನು ಪಾವತಿಸುತ್ತಿದ್ದ ಹಣವನ್ನು ಇನ್ನು ಮುಂದುವರಿಸುವುದು ಬೇಡ. ನನಗೆ ಕೆಲಸ ಸಿಕ್ಕಿದೆ. ಇನ್ನು ನಾನೇ ಕಟ್ಟಿ ಸಾಲವನ್ನು ತೀರಿಸುತ್ತೇನೆ ಎಂದದ್ದು. ಹಾಗೆಯೇ ಒಂದು ಆರು ತಿಂಗಳ ಅಂತರದಲ್ಲಿ ಸಂಬಳದಲ್ಲಿ ಒಂದಷ್ಟು ಹಣವನ್ನು ಉಳಿಸಿ, ಬಿದ್ಕಲ್ ಕಟ್ಟೆ ಬ್ಯಾಂಕಿಗೆ ಹೋಗಿ ಬಡ್ಡಿ ಸಹಿತ ಆ ಸಾಲವನ್ನು ಪೂರ್ತಿಯಾಗಿ ತೀರಿಸಿ ಬಂದೆ. ಮತ್ತು ಅಮ್ಮನು ಹೊತ್ತ ಹರಕೆಯಂತೆ ಅವಳೊಂದಿಗೆ ಕೊಲ್ಲೂರು ದೇವಸ್ಥಾನಕ್ಕೆ ಹೋಗಿ, ದೇವರಿಗೆ ಸೀರೆಯ ಹರಕೆಯನ್ನು ಕೊಟ್ಟು ಧನ್ಯನಾದೆ.

 ಆಗಲೇ ಶಂಕರ ನಾರಾಯಣದ ಶ್ರೀಧರ ಉಡುಪರ ಮಗ ಸುಬ್ರಮಣ್ಯ ಉಡುಪರು, ಒಮ್ಮೆ ತೆಂಕುಪೇಟೆಯ ಓಣಿಯಲ್ಲಿ ಆಕಸ್ಮಿಕವಾಗಿ ನನ್ನನ್ನು ನೋಡಿ “ಹ್ವಾಯ್, ನಿಮ್ಮನ್ನು ಎಲ್ಲೋ ನೋಡಿದ ಹಾಗಿತ್ತಲ್ಲ” ಎಂದು ಪರಿಚಯ ಮಾಡಿಕೊಂಡರು. ನಾನು ಶಂಕರನಾರಾಯಣ ದ ಕಾಲೇಜಿಗೆ ಹೋಗುವಾಗ ಸರ್ವೋತ್ತಮ ಶೇಟ್ ರ ಜವುಳಿ ಅಂಗಡಿಯ ಮಾಳಿಗೆಯ ರೂಮಿನಲ್ಲಿ ಇದ್ದಾಗ, ಅಲ್ಲಿಯೇ ಅವರ ಜವುಳಿ ಮಳಿಗೆಯ ಪಕ್ಕದಲ್ಲೆ ಶ್ರೀಧರ ಉಡುಪರ ಜೀನಸಿ ಅಂಗಡಿಯೂ ಇದ್ದು, ಅವರ ಅಂಗಡಿಯಲ್ಲಿಯೇ ನಾನು ಅಕ್ಕಿ, ಎಣ್ಣೆ ಮೊದಲಾದ ಸಾಮಾನುಗಳನ್ನು ತೆಗೆದುಕೊಳ್ಳುತ್ತಿದ್ದೆ. ಆಗ ಈ ಉಡುಪರು ನನ್ನನ್ನು ನೋಡಿದ್ದರಂತೆ. ಪರಿಚಯವಾದದ್ದೇ “ಹ್ವಾಯ್, ನಮ್ಮ ರೂಮಿನಲ್ಲಿ ಒಬ್ಬರು ಬಿಟ್ಟು ಹೋಗುತ್ತಿದ್ದಾರೆ. ನೀವು ಎಲ್ಲಿ ಇರುವುದು? ನಮ್ಮ ರೂಮಿಗೆ ಬರಬಹುದಾ?” ಎಂದರು. ನಾನು ಯೋಚಿಸಿ, “ನಿಮ್ಮ ರೂಮು ಎಲ್ಲಿ ಇರುವುದು? ಒಮ್ಮೆ ನೋಡಿ ಆಮೇಲೆ ಹೇಳುತ್ತೇನೆ” ಎಂದೆ.

ಮಾರನೇ ದಿವಸವೇ ಹೋಗಿ ವಾದಿರಾಜ ರಸ್ತೆಯಲ್ಲಿ ಭೋಜರಾವ್ ಕಂಪೌಂಡ್ ನಲ್ಲಿ ಇರುವ ಅವರ ರೂಮನ್ನು ನೋಡಿ ಸಮಾಧಾನವಾಗಿ, ಅದೇ ವಾರದಲ್ಲೇ ಅಲ್ಲಿಗೆ ನನ್ನ ವಾಸ್ತವ್ಯವನ್ನು ಸ್ಥಳಾಂತರ ಮಾಡಿದೆ. ಅಲ್ಲಿ ಕೊಟ್ಟಕ್ಕಿ ಸುರೇಶ ಭಟ್ರು, ಉಡುಪರು ಮತ್ತು ನಾನು. ಅಡುಗೆಗೆ ಒಂದು ಸಣ್ಣ ರೂಮು. ಮತ್ತು ಓದಲು,ಬರೆಯಲು ಕುಳಿತುಮಾತಾಡಲು, ಮಲಗಲು ಒಂದು ಹಾಲ್. ಬೇಗನೆ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡೆ. ಬೆಳಿಗ್ಗೆ ನಸುಕಿನಲ್ಲಿ ಕೆಳಗೆ ಬಾವಿಕಟ್ಟೆಯಲ್ಲಿ ಸ್ನಾನ. ಚಿಮಣೀ ಎಣ್ಣೆಯ ಸ್ಟೋವ್ ನಲ್ಲಿ ಬೆಳಿಗ್ಗೆ ಗಂಜಿಮಾಡಿದರೆ ಉಂಡು, ಆಫೀಸಿಗೆ ಹೋದರೆ ಆಯಿತು.  ಅದನ್ನೇ ಬಸಿದರೆ ಮಧ್ಯಾಹ್ನದ ಅನ್ನ, ಸಾರಿನಪುಡಿ ಜೊತೆಗೆ ಟೊಮೇಟೋ ಹಾಕಿ ಮಾಡಿದ  ಸಾರು ಅಥವ ಹಾಗೆಯೇ ಮಾಡಿದ ಸಾಂಬಾರು. ರಾತ್ರಿ ಮತ್ತೆ ಒಂದು ಅನ್ನ ಬೇಯಿಸಿದರೆ ಆಯಿತು. ಗಂಜಿ ಉಪ್ಪಿನಕಾಯಿ ತುಪ್ಪದ ಊಟ. ಬೆಳಿಗ್ಗೆ ಮಾಡಿದ ಅನ್ನವನ್ನು ಒಂದು ಚಾ ಪೆಟ್ಟಿಗೆಯ ಒಳಗಡೆ ಒಣಹುಲ್ಲು ಹಾಕಿ ಆ ಅನ್ನದ ಪಾತ್ರೆಯನ್ನು ಇಟ್ಟು ಮೇಲೆ ಗಟ್ಟಿಯಾದ ಮುಚ್ಚಳ ಹಾಕಿ, ಒಂದು ಕಲ್ಲನ್ನು ಹೇರಿದರೆ, ಅನ್ನ ಮಧ್ಯಾಹ್ನ ಊಟಕ್ಕೆ ಬಂದಾಗಲೂ ಬಿಸಿಬಿಸಿ ಇರುತ್ತಿತ್ತು.

ನಾನು ಕೆಲಸಕ್ಕೆ ಸೇರಿದಾಗ ಉಡುಪಿ ಕೆಇಬಿ ಕಛೇರಿಯಲ್ಲಿ ಮೊದಲು ತುಂಬಾ ಹುದ್ದೆ ಖಾಲಿಯಿತ್ತು. ನಮ್ಮ ಬ್ಯಾಚ್ ನಲ್ಲಿ ಒಮ್ಮೆಲೇ ಮುವ್ವತ್ತು ನಲವತ್ತು ಜನ ಹೊಸದಾಗಿ ನೇಮಕಾತಿಯಾದೆವು. ಹಿಂದೆ ಅಲ್ಲಿ ಮಾಡುತ್ತಿದ್ದ ನೌಕರರ ಕೆಲಸವನ್ನು ನಮಗೆ ಹಂಚಿ ಕೊಟ್ಟದ್ದರಿಂದ ಅಷ್ಟೇನೂ ಕೆಲಸದ ಹೊರೆ ಇರಲಿಲ್ಲ. ಆಗ ನಮ್ಮ ಲೆಕ್ಕವಿಭಾಗದ ಮುಖ್ಯಸ್ಥರಾಗಿ ಮುರಳೀಧರ ಪೈಯವರಿದ್ದರೆ ಲೆಕ್ಕಾಧಿಕಾರಿಗಳಾಗಿ ಶರಾವೋ ಎನ್ನುವವರಿದ್ದರು. ಅವರಿಗೆ ಕೆನ್ನೆಯ ತುಂಬಾ ದೊಡ್ಡ ಮೀಸೆ ಇತ್ತು. ಅವರನ್ನು ನೋಡಿದರೆ ಅವರು ತುಂಬಾ ಜೋರಿನವರು ಎನ್ನಿಸುವಂತಿದ್ದರು. ಆದರೆ ತುಂಬಾ ಪಾಪದವರು. ದಿನಕ್ಕೆ ಎರಡು, ಮೂರು ಸಲ, ಶಾಲೆಯಲ್ಲಿ ಪರೀಕ್ಷೆಯ ಸಮಯದಲ್ಲಿ ಬರುವ ಪರಿವೀಕ್ಷಕರಂತೆ ಕೈಯನ್ನು ಹಿಂದೆ ಕಟ್ಟಿಕೊಂಡು ಅವರ ಚೇಂಬರಿನಿಂದ ಹೊರಗೆ ಬಂದು, ಎಲ್ಲ ಗುಮಾಸ್ತರ ಟೇಬಲ್ಲಿನ ಹತ್ತಿರ ಬಂದು ನಾವು ಏನು ಮಾಡುತ್ತಿದ್ದೇವೆ? ಎಂದು ಇಣಕಿ ನೋಡಿ ಹೋಗುತ್ತಿದ್ದರು. ನನಗೆ ದಿವಸಕ್ಕೆ ಹೆಚ್ಚೆಂದರೆ ಮೂರು ನಾಲ್ಕು ಗಂಟೆ ಕೆಲಸ ಇದ್ದರೆ ಹೆಚ್ಚು. ಉಳಿದ ಸಮಯದಲ್ಲಿ ಸುಮ್ಮನೇ ಕುಳಿತಿರಲು ಬೇಸರವಾಗಿ ಒಮ್ಮೊಮ್ಮೆ ನಾನು ಚಿತ್ರವನ್ನು ಬಿಡಿಸುತ್ತಾ ಕುಳಿತುಕೊಳ್ಳುತ್ತಿದ್ದೆ. ನಾನು ಚಿತ್ರ ಬಿಡಿಸುವುದನ್ನು ನೋಡಿದ ನನ್ನ ಸಹೋದ್ಯೋಗಿ ಸ್ನೇಹಿತರು ಅವರ ಸೇವಾ ಪುಸ್ತಕದ ಮುಖಪುಟದಲ್ಲಿ ಒಂದು ಚಂದದ ಚಿತ್ರ ಬರೆದು ಕೊಡು ಎಂದು ಒಬ್ಬೊಬ್ಬರಾಗಿ ತಂದುಕೊಡುತ್ತಿದ್ದರು. ಒಮ್ಮೆ ನಾನು ತಲೆಯನ್ನು ಕೆಳಗೆ ಹಾಕಿ ತನ್ಮಯನಾಗಿ ಏನೋ ಚಿತ್ರವನ್ನು ಬಿಡಿಸುತ್ತಾ ಕುಳಿತಿದ್ದೆ. ಸಾಹೇಬರು ಹಿಂದಿನಿಂದ ಮೆಲ್ಲನೇ ಹತ್ತಿರ ಬಂದು ಇಣಕಿದ್ದನ್ನು ನಾನು ಗಮನಿಸಲೇ ಇಲ್ಲ. ಅವರು “ಏನು ಮಾಡುತ್ತಿದ್ದೀರಿ?”. ಎಂದು ಗದರಿಸಿದರು. ನಾನು ಒಮ್ಮೆಲೇ ಗಾಬರಿಯಾಗಿ, ತಲೆ ಎತ್ತಿ ಅವರ ಮುಖ ನೋಡಿದಾಗ ಅವರ ಮೀಸೆಯೇ ನನಗೆ ಕಂಡುಬಂದು ಹೆದರಿಕೆಯಾಯಿತು. ಸುಮ್ಮನೇ ಎದ್ದು ನಿಂತೆ. ಅವರು “ಇವತ್ತಿನ ಕೆಲಸ ಎಲ್ಲ ಮುಗಿಸಿದ್ದೀರಾ?” ಎಂದು ಕೇಳಿದರು. ನಾನು “ಹೌದು” ಎಂದೆ. “ಹಾಗಾಗಿ ಚಿತ್ರ ಬರೆಯುತ್ತಾ ಕುಳಿತಿದ್ದೀರಿ” ಎಂದು ಮೀಸೆಯ ಒಳಗೇ ನಕ್ಕು, ಮುಂದೆ ಹೋಗಿಯೇ ಬಿಟ್ಟರು. ನನಗೆ ಹೋದ ಜೀವ ಬಂದಂತಾಯಿತು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ