ಭಾನುವಾರ, ಅಕ್ಟೋಬರ್ 29, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 42

ನಾನು ಕಲ್ಲಟ್ಟೆ ಮನೆಯಲ್ಲಿ ಇದ್ದು ಕೆಲಸವನ್ನು ಹುಡುಕುತ್ತಿರುವಾಗ, ಒಂದು ನಾಯಿಮರಿಯನ್ನು ಎಲ್ಲಿಂದಲೋ ತಂದು ಸಾಕಿದ್ದೆ. ಕಾಟುನಾಯಿ. ಅದರ ಹೆಸರು ದಾಸು ಎಂದು ಇಟ್ಟಿದ್ದೆ. ಆದರೆ ಅದು ಬಿಳಿನಾಯಿ ಅಲ್ಲ. ಕೆಂಚು ಬಣ್ಣ. ಅಲ್ಲಲ್ಲಿ ಕಪ್ಪು ಕೂದಲು ಇದ್ದು ಮಚ್ಚೆಯಂತೆ ಇತ್ತು. ಅದು ನಾನು ಎಲ್ಲಿ ಹೋದರೂ ನನ್ನ ಹಿಂದೆಯೇ ಬರುತ್ತಿತ್ತು. ಆದರೆ ಮನೆಯ ಜಗುಲಿಯಿಂದ ಮೇಲೆ ಬರಲು ಅದಕ್ಕೆ ಬಿಡುತ್ತಿರಲಿಲ್ಲ. ಅದಕ್ಕೆ ಬುದ್ಧಿ ಕಲಿಸಬೇಕೆಂದು ನಾನು ಆಗ್ಗಗ ಒಂದು ಹಾಳಾದ ಪೆನ್ನನ್ನು ದೂರ ಎಸೆದು, ತರಲು ಹೇಳುತ್ತಿದ್ದೆ. ಅದು ಬಾಲ ಆಡಿಸುತ್ತಾ ನನ್ನ ಹಿಂದೆಯೇ ಬಾಯಿ ಕಳೆದುಕೊಂಡು ನಾಲಿಗೆ ಹೊರಗೆ ಹಾಕಿ ತಿರುಗುತ್ತಿತ್ತೇ ವಿನಹ, ಪೆನ್ನನ್ನು ತರಲು ಸುತರಾಂ ಹೋಗುತ್ತಿರಲಿಲ್ಲ. ಕೊನೆಗೆ ಅದರ ಮೂತಿಯನ್ನು ಪೆನ್ನು ಇರುವಲ್ಲಿ ನೆಲಕ್ಕೆ ಒತ್ತಿದರೂ, ಬಾಯಿಯಲ್ಲಿ ಕಚ್ಚಿ ಹಿಡಿಯುತ್ತಿರಲಿಲ್ಲ. ನಾನು ಹೊಡೆದರೆ ಕುಯ್ಯೋ ಮುರ್ರೋ ಎಂದು ಕೂಗಿ ನನ್ನ ಕಾಲಬಳಿಯೇ ಅಂಗಾತ ಮಲಗಿ ಶರಣಾಗುತ್ತಿತ್ತು. ನನಗೆ ನಾಯಿಗೆ ಬುದ್ಧಿ ಕಲಿಸುವ ವಿದ್ಯೆ ಗೊತ್ತಿರಲಿಲ್ಲವೋ ಅಥವ ಅದು ಅಂತಹ ಬುದ್ಧಿಕಲಿಯದ ಜಾತಿ ನಾಯಿ ಅಲ್ಲವೋ ನನಗೆ ಗೊತ್ತಾಗಲಿಲ್ಲ. ಕೊನೆಗೆ ಇದು ನನ್ನಿಂದ ಆಗುವ ಕೆಲಸವಲ್ಲ ಎಂದು ಬಿಟ್ಟುಬಿಟ್ಟೆ. ಅಂತೂ “ದಾಸೂ... “ ಎಂದು ಕರೆದರೆ ಸಾಕು. ಆ ರಾಷ್ಟ್ರದಲ್ಲಿ ಎಲ್ಲಿದ್ದರೂ ಓಡೋಡಿ ಬಂದು ನಾಲಿಗೆ ಹೊರಕ್ಕೆ ಹಾಕಿ, ಬಾಲ ಮುರಿದು ಹೋಗುವಷ್ಟು ಅಲ್ಲಾಡಿಸುತ್ತಾ ವಿನಯ ತೋರಿಸುತ್ತಿತ್ತು.

ನಾನು ದಿನಾ ಹಾಲಾಡಿ ಪೇಟೆಗೆ ಹೊರಟರೆ, ಅದೂ ಹಿಂಬಾಲಿಸುತ್ತಿದ್ದುದರಿಂದ ಬೇರೆ ನಾಯಿಗಳು ದಾರಿಯಲ್ಲಿ ಕಚ್ಚಿದರೆ ಕಷ್ಟ ಎಂದು ಅದನ್ನು ಮನೆಗೆ ಓಡಿಸುವುದೇ ಒಂದು ಕಷ್ಟದ ಕೆಲಸ ನನಗಾಗುತ್ತಿತ್ತು. ಅಂತು ಅದು ನನ್ನ ಹಿಂದೆ ಮುಂದೆ ತಿರುಗಿ ನನ್ನಿಂದ ಕಲ್ಲಿನಲ್ಲಿ ಒಂದೆರಡು ಪೆಟ್ಟುತಿಂದು ಮನೆಗೆ ಬರುತ್ತಿತ್ತು. ನನಗೆ ಉಡುಪಿಯಲ್ಲಿ ಕೆಲಸ ಸಿಕ್ಕಿದ ಮೇಲೆ ನಾನು ವಾರಕ್ಕೊಮ್ಮೆ ಮನೆಗೆ ಹೋಗುತ್ತಿದ್ದೆ. ನನ್ನನ್ನು ಕಣ್ಣಕುಡಿಯಲ್ಲಿ ಅದು ಕಂಡಿತು ಅಂತಾದರೆ ಸಾಕು, ಓಡಿ ಬಂದು ತನ್ನ ಎರಡೂ ಮುಂದಿನ ಕಾಲನ್ನು ನನ್ನ ಎದೆಯವರೆಗೂ ತಂದು ಅಪ್ಪಿಕೊಳ್ಳುವಂತೆ ಮಾಡಿ ಪ್ರೀತಿ ತೋರಿಸುತ್ತಿತ್ತು.

ಅಮ್ಮನಿಗೆ ಕಾಯಿಲೆಯಾಗಿ ಉಡುಪಿಯಲ್ಲಿ ಡಾಕ್ಟರ್ ಯು. ಎಂ. ವೈದ್ಯ ರಲ್ಲಿಗೆ ಕರೆದುತಂದು ತೋರಿಸಿದೆ. ಅವರ ಸೂಚನೆಯ ಮೇರೆಗೆ ಅಜ್ಜರಕಾಡು ಆಸ್ಪತ್ರೆಗೆ ಸೇರಿಸಿ, ಅಮ್ಮ, ಅಲ್ಲಿ ಹುಷಾರಾದ ಮೇಲೆ ಉಡುಪಿಯ ನನ್ನ ರೂಮಿನಲ್ಲಿ ಸ್ವಲ್ಪ ದಿನ ಅಮ್ಮನನ್ನು ಕರೆದುಕೊಂಡು ಬಂದು ಇರಿಸಿಕೊಂಡಿದ್ದೆ. ಬೆಳಿಗ್ಗೆ ಕೃಷ್ಣಮಠದ ಸುತ್ತ ರಥಬೀದಿಯಲ್ಲಿ ಅಮ್ಮನಿಗೆ ವಾಕಿಂಗ್ ಮಾಡಿಸುತ್ತಿದ್ದೆ. ಮನೆಯಲ್ಲಿಯೇ ಅಡುಗೆ ಮಾಡಿಕೊಳ್ಳುತ್ತಿದ್ದು, ರಾತ್ರಿ ಅವಳಿಗಾಗಿ ಚಪಾತಿ ಮಾಡಿ ಹಾಕುತ್ತಿದ್ದೆ. ಹಗಲು ಅಮ್ಮ ಒಬ್ಬಳೇ ಇರುತ್ತಿದ್ದಳಲ್ಲ, ಆಗ ನನ್ನ ರೂಮಿನ ಯಜಮಾನರಾದ ರಾಜಗೋಪಾಲ ರಾಯರ ಹೆಂಡತಿ, ಅವರ ಹೆಸರು ಏನೆಂದು ನಾನು ಕೇಳದೇ ಇದ್ದುದರಿಂದ, ನನಗೆ ಈಗಲೂ ಗೊತ್ತಿಲ್ಲ. ಅವರು ಅಮ್ಮನನ್ನು ಕೈಹಿಡಿದು ಅವರ ಮನೆಗೆ ಕರೆದುಕೊಂಡು ಹೋಗಿ, ರಸ್ತೆಯ ಬದಿಯ ಕಿಟಕಿಯ ಹತ್ತಿರ ಕೂರಿಸಿಕೊಂಡು. ಆಗಾಗ ಮಾತನಾಡಿಸುತ್ತಾ ನನಗೆ ಬಹಳ ಉಪಕಾರ ಮಾಡಿದರು. ಒಮ್ಮೆಯಂತೂ ನನ್ನ ಅಮ್ಮನ ಚಿನ್ನದಸರ ಕಕ್ಕಸು ಮನೆಯ ದಾರಿಯಲ್ಲಿ ಬಿದ್ದು ಹೋಗಿದ್ದು, ಅವಳಿಗೆ ಗೊತ್ತಾಗಲೇ ಇಲ್ಲ. ಅವರೇ ಅಕಸ್ಮಾತ್ ಅದನ್ನು ನೋಡಿ, ಹೆಕ್ಕಿ ತಂದು ಅಮ್ಮನ ಕೊರಳಿಗೆ ಹಾಕಿದ್ದರು.

ಆದರೆ ಅಮ್ಮ ಅಲ್ಲಿ ಹೆಚ್ಚುದಿನ ಅಲ್ಲಿ ಇರಲಾಗಲಿಲ್ಲ. ಸ್ವಲ್ಪ ದಿನದಲ್ಲಿಯೇ ಮತ್ತೆ ಗ್ಯಾಸ್ಟ್ರಿಕ್ ಹೆಚ್ಚಾಗಿ ಬಿದ್ದು ಬಿಟ್ಟಳು. ಆ ಮನೆಯ ತಾಯಿ, ಆಫೀಸಿನಲ್ಲಿ ಇದ್ದ ನನಗೆ ಯಾರ ಮೂಲಕವೋ ಹೇಳಿ ಕಳಿಸಿದರು. ನಾನು ಓಡಿಬಂದು ಪುನಹ ಅಮ್ಮನನ್ನು ಆಸ್ಪತ್ರೆಗೆ ಸೇರಿಸಿದೆ. ನಂತರ ಚೇರಿಕೆಯ ಲಕ್ಷ್ಮಿ ಅತ್ತಿಗೆಯು ಅಮ್ಮನನ್ನು ನೋಡಲು ಬಂದವರು, “ಊರಿನಲ್ಲಿ ಮನೆ ಅಂತ ಇದ್ದಮೇಲೆ ಇಲ್ಲಿಯೆಲ್ಲ ಇರುವುದು ಬೇಡ. ಅಮ್ಮ ಹುಷಾರಾದ ಕೂಡಲೇ ಮನೆಗೆ ಕರೆದುಕೊಂಡು ಬಂದು ಬಿಟ್ಟುಹೋಗು” ಎಂದು ಹೇಳಿದರು. ನಾನು ಒಪ್ಪಿ ಅಮ್ಮ ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ, ಅಮ್ಮನನ್ನು ಚೇರಿಕೆಯ ನಮ್ಮ ಮನೆಗೆ ಕರೆದುಕೊಂಡು ಹೋದೆ. ಅಮ್ಮನ ಹತ್ತಿರ ಯಾರಾದರೂ ಒಬ್ಬರು ಸೇವೆಗೆ ಇರಲೇ ಬೇಕಿತ್ತು. ದಪ್ಪಗೆ ಇದ್ದುದರಿಂದ ಓಡಾಡಲೂ ಕಷ್ಟವಾಗುತ್ತಿತ್ತು. ಅವಳ ಕೊನೆಯ ಕಾಲದವರೆಗೂ ಆ ಅತ್ತಿಗೆಯೇ ಅಮ್ಮನನ್ನು ನೋಡಿಕೊಂಡರು. ಮಕ್ಕಳು ಮೊಮ್ಮಕ್ಕಳೂ ರಜೆಯಲ್ಲಿ ಮತ್ತು ಪುರಸೊತ್ತು ಇದ್ದಾಗ ಬಂದು, ನೋಡಿಕೊಂಡು ಮಾತಾಡಿಸಿಕೊಂಡು ಹೋಗುತ್ತಿದ್ದರು.

ಕಲ್ಲಟ್ಟೆಯಲ್ಲಿದ್ದ ನನ್ನ ದಾಸು ನಾಯಿ, ನಾನು ಚೇರಿಕೆಯ ಮನೆಯಲ್ಲಿ ಇದ್ದುದನ್ನು ಹೇಗೋ ಪತ್ತೆ ಮಾಡಿ ಕಂಡುಹಿಡಿದು ಆಗಾಗ ಚೇರಿಕೆಗೇ ಬರಲು ಶುರುಮಾಡಿತು. ಆದರೆ ಚೇರಿಕೆಯ ಮನೆಯಲ್ಲೂ ಒಂದು ನಾಯಿ ಇದ್ದುದರಿಂದ ಅದು ದಾಸುವಿನೊಂದಿಗೆ ಜಗಳಾಡುತ್ತಿತ್ತು. ಆದರೆ ನಾನು  ಉಡುಪಿಯಿಂದ ಮನೆಗೆ ಬರುವ ಶನಿವಾರ ಮಾತ್ರ ದಾಸು, ಅದು ಹೇಗೋ ತಿಳಿದುಕೊಂಡು ಬಂದು, ನನ್ನ ಉಪಚಾರಕ್ಕಾಗಿ ಪ್ರೀತಿಯ ಒಂದು ಸ್ಪರ್ಶಕ್ಕಾಗಿ ಕಾಯುತ್ತಿತ್ತು. ದೂರದಿಂದಲೇ ಒಂದು ತರಾ ಸ್ವರದಲ್ಲಿ ಕೂಗಿ ತಾನು ಬಂದಿದ್ದೇನೆ ಎಂದು ತೋರಿಸಿಕೊಳ್ಳುತ್ತಿತ್ತು. ಆದರೆ ಆ ಮನೆಯ ನಾಯಿ ಅದಕ್ಕೆ ಹತ್ತಿರ ಬರಲು ಸುತರಾಂ ಬಿಡುತ್ತಿರಲಿಲ್ಲ. ನನಗೂ ಬೇಸರವಾಗಿ “ಅದು ನನ್ನನ್ನು ಮರೆತುಬಿಡಲಿ” ಎಂದು ಅದನ್ನು  ಹಚ್ಚಿಕೊಳ್ಳುವುದನ್ನು ಬಿಟ್ಟೆ. ಅದು ಬಂದಾಗ ಜೋರುಮಾಡಿ “ಕಲ್ಲಟ್ಟೆ ನಿನ್ನ ಮನೆ. ಅಲ್ಲಿಗೇ ಹೋಗು” ಎಂದು ಓಡಿಸುತ್ತಿದ್ದೆ. ಕೊನೆಗೊಂದು ದಿನ ಆ ದಾಸು ನಾಯಿ ನಾನು ಉಡುಪಿಗೆ ಬರುವಾಗ, ನಾನು ಹಾಲಾಡಿಗೆ ಹೋಗುವುದನ್ನು ನೋಡಿ, ಎಲ್ಲಿಂದಲೋ ಓಡಿಬಂದು ಹಿಂದಿನಿಂದ ಬರತೊಡಗಿತು, ಎಷ್ಟು ಹೊಡೆದರೂ ಹಿಂದಕ್ಕೆ ಹೋಗಲೇ ಇಲ್ಲ. ನಾನೂ ಬಂದರೆ ಬರಲಿ ಎಂದು ಸುಮ್ಮನಾದೆ. ಅದು ಹಾಲಾಡಿಯವರೆಗೂ ನನ್ನನ್ನು ಹಿಂಬಾಲಿಸಿದ್ದು ಗೊತ್ತಿತ್ತು. ನಾನು ಬಸ್ಸು ಹತ್ತಿ ಉಡುಪಿಗೆ ಹೋದೆ. ಮುಂದಿನ ವಾರ ಮತ್ತೆ ಬರುವಾಗ ಗೊತ್ತಾಯಿತು, ನನ್ನ ದಾಸು ಅದೇ ದಿನ ಹಾಲಾಡಿಯಲ್ಲಿ ಯಾವುದೋ ಬಸ್ಸಿನ ಅಡಿಯಲ್ಲಿ ಸಿಕ್ಕಿ ಸತ್ತು ಹೋಯಿತು ಅಂತ.

ಅದೇ ಸಮಯದಲ್ಲಿ ನಾನು ಕನಕದಾಸ ರಸ್ತೆಯ ಬಾಡಿಗೆ ರೂಮನ್ನು ಬಿಟ್ಟು, ಕುಂಜಿಬೆಟ್ಟಿನಲ್ಲಿ ನಮ್ಮ ಕೆಇಬಿಯದ್ದೇ ವಸತಿಗೃಹಗಳು ಆಗಿದ್ದರಿಂದ ಅಲ್ಲಿಗೇ ಹೋದೆ.

ಅಮ್ಮನಿಗೆ ಮತ್ತೆ ಆರೋಗ್ಯ ಕೆಟ್ಟು, ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದೆವು. ಅಲ್ಲಿ ಡಾ. ಯು. ಎಂ. ವೈದ್ಯರು ಅವಳನ್ನು ನೋಡಿಕೊಳ್ಳುತ್ತಿದ್ದರು. ಅವರು ಅಮ್ಮನನ್ನು ಪರಿಶೀಲಿಸಿ “ವರ್ಷ ಆಯಿತಲ್ಲ ಇನ್ನು ಹೀಗೆ” ಎಂದು ಹೇಳಿಬಿಟ್ಟರು. ಅಮ್ಮ ಮಲಗಿದಲ್ಲೇ. ಅತ್ತಿಗೆಯೇ ಆಸ್ಪತ್ರೆಯಲ್ಲಿದ್ದು ಅಮ್ಮನನ್ನು ನೋಡಿಕೊಳ್ಳುತ್ತಿದ್ದರು. ನಾನು ಪ್ರತೀದಿನ ಊಟ ಕಾಫಿತಿಂಡಿ ಕೊಟ್ಟು ನೋಡಿಕೊಂಡು ಬರುತ್ತಿದ್ದೆ.

ಒಂದು ಹದಿನೈದು ದಿನ ಕಳೆದಿರಬಹುದು. ಒಂದು ದಿನ ಬೆಳಿಗ್ಗಿನ ಜಾವ, ಇನ್ನೂ ಕತ್ತಲೆ ಕತ್ತಲೆ. ಬೆಳಕು ಸರಿಯಾಗಿ ಮೂಡಿರಲಿಲ್ಲ. ನನ್ನ ಮನೆಯ ಬಾಗಿಲು ಸದ್ದಾಯಿತು. ನಿದ್ದೆ ಕಣ್ಣಿನಲ್ಲೆ ಬಂದು ಬಾಗಿಲು ತೆರೆದೆ. ಎದುರಿಗೆ ಅತ್ತಿಗೆ ನಿಂತಿದ್ದರು. ಅವರು ಒಮ್ಮೆಯೇನೋ ಆ ನನ್ನ ಮನೆಗೆ ಬಂದದ್ದಿರಬಹುದು. ಆ ಕತ್ತಲೆಯಲ್ಲಿ ಅಜ್ಜರಕಾಡು ಆಸ್ಪತ್ರೆಯಿಂದ, ಕುಂಜಿಬೆಟ್ಟಿನ ನಮ್ಮ ಕೆಇಬಿ ವಸತಿಗೃಹದವರೆಗೆ ಸುಮಾರು ಮೂರು ಕಿಲೋಮೀಟರ್ ನಡೆದುಕೊಂಡೇ ಒಂದು ಅಂದಾಜಿನ ಮೇಲೆ ನಮ್ಮ ಮನೆಯನ್ನು ಹುಡುಕಿಕೊಂಡು ಬಂದಿದ್ದರು. ಬಾಗಿಲ ಒಳಗೆ ಕಾಲಿರಿಸುತ್ತಿದ್ದಂತೆಯೇ, ಒಮ್ಮೆಲೆ ಗದ್ಗತಿತರಾಗಿ ಕುರ್ಚಿಯ ಮೇಲೆ ಕುಸಿದು ಹೇಳಿದರು. “ಎಲ್ಲ ಮುಗೀತು ಮಾರಾಯಾ, ಅತ್ತೆ, ನಮ್ಮನ್ನು ಬಿಟ್ಟು ಹೊರಟು ಹೋದ್ರು”

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ