ಬುಧವಾರ, ನವೆಂಬರ್ 1, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 43

ನಾನಾಗ ಕುಂಜಿಬೆಟ್ಟು ವಸತಿಗೃಹದಲ್ಲಿದ್ದೆ. ಮೂರು ಅಂತಸ್ತಿನ ಕಟ್ಟಡದ ಮೂರನೇ ಅಂತಸ್ತಿನಲ್ಲಿ ನನ್ನ ಮನೆ. ಅದರಲ್ಲಿ ನಾಲ್ಕು ಮನೆಗಳು. ಒಬ್ಬ ಪಯಾಝ್ ಎನ್ನುವ ಮುಸ್ಲಿಂ ರ ಮನೆಯೂ, ಮತ್ತೊಂದರಲ್ಲಿ ಪ್ರಾಣೇಶ ಎನ್ನುವ ಗಾಣಿಗರ ಮನೆಯೂ,ಮತ್ತೊಂದರಲ್ಲಿ ನಾಗಭೂಷಣ ಎನ್ನುವ ಒಬ್ಬ ಬ್ರಾಹ್ಮಣರ ಮನೆಯೂ ನಮ್ಮ ಅಂತಸ್ತಿನಲ್ಲಿತ್ತು. ಬೆಳಿಗ್ಗೆ ಒಂದೊಂದು ದಿನ ಒಬ್ಬೊಬ್ಬರ ಮನೆಯಂತೆ, ನಾನು ಒಬ್ಬನೇ ಇದ್ದೇನೆ ಎಂಬ ಕನಿಕರದಿಂದ ಕಾಫಿತಿಂಡಿ ತಂದು ಕೊಡುತ್ತಿದ್ದರು. ಮಧ್ಯಾಹ್ನ ಹೊಳ್ಳರ ಮನೆಯಲ್ಲಿ ಊಟ. ನಮ್ಮ ಸುಬ್ರಾಯರಿಗೆ ಆಗ ಮದುವೆಯಾಗಿ ಕುಂಜಿಬೆಟ್ಟು, ಶಾರದಾ ಮಂಟಪದ ಹತ್ತಿರ ಇರುವ ಸುಧೀಂದ್ರ ತೀರ್ಥ ಕಲ್ಯಾಣಮಂದಿರದ ಹತ್ತಿರ ಮನೆ ಮಾಡಿದ್ದು, ನನಗೆ ಮನೆಯಲ್ಲಿ ಅಡುಗೆ ಮಾಡುವುದು ಬೋರ್ ಅನ್ನಿಸಿದ್ದರಿಂದ, ಸಂಜೆ ಅವರು ಬನ್ನಿ ಅಂತ ಹೇಳುತ್ತಿದ್ದರೂ, ಕರೆಯದಿದ್ದರೂ ಅಲ್ಲಿಗೆ ಹೋಗುತ್ತಿದ್ದೆ. ಅವರ ಮನೆಯಲ್ಲಿ ತುಪ್ಪ ಮಿಡಿಉಪ್ಪಿನಕಾಯಿಯೊಂದಿಗೆ ಗಂಜಿಯೂಟ. 

ಕ್ರಮೇಣ ಈ ದಿನಚರಿಯೂ ಏಕತಾನತೆಯನ್ನು ತರಲು ಶುರುವಾಯಿತು. ಆಫೀಸ್ ನಲ್ಲಿಯೂ ಕೆಲಸ ಹೆಚ್ಚಾಗಿದ್ದರಿಂದ ಸಂಜೆ ಮನೆಗೆ ಬರುವಾಗಲೂ ತುಂಬಾ ಆಯಾಸವಾಗುತ್ತಿದ್ದ ಕಾಲ, ಒಮ್ಮೆ ಇದ್ದಕ್ಕಿದ್ದಂತೆ ಮದುವೆಯಾಗಬಹುದು ಅನ್ನಿಸಿತು. ಸರಿ, ಅದನ್ನು ಸ್ನೇಹಿತರಾದ ಸುಬ್ರಾಯರು ಮತ್ತು ಉಡುಪರು ಮಾತಾಡುತ್ತಿರುವಾಗ ಒಮ್ಮೆ ಹೇಳಿದೆ. ಅವರು ತಡ ಮಾಡಲಿಲ್ಲ. ಹಾಗಾದರೆ ಕಾಯುವುದು ಯಾಕೆ? ನೋಡುವ ಎಂದು ಅಲ್ಲಿ ಇಲ್ಲಿ ಅಂತ ಹೇಳಿ ಒಂದೆರೆಡು ಜಾತಕಗಳನ್ನು ತಂದುಕೊಟ್ಟರು. ನಮ್ಮ ಉಡುಪರಿಗೂ ಒಬ್ಬಳು ತಂಗಿ ಇದ್ದಳು, ಅನ್ನಪೂರ್ಣ ಎಂದು ಹೆಸರು. ಉಡುಪರಿಗೆ ಆ ಜಾತಕವನ್ನು ಕೊಡಲು ದಾಕ್ಷಿಣ್ಯ. ಕೊನೆಗೆ ಸುಬ್ರಾಯರಲ್ಲಿ ಹೇಳಿ ಅದನ್ನು ಕೊಟ್ಟು ನನಗೆ ಕೊಡಲು ಹೇಳಿದ್ದಾಯಿತು. ನನಗೂ ಅದು ಆದರೆ ಅಡ್ಡಿಲ್ಲ ಅನ್ನಿಸಿತು. ಅವಳನ್ನು ನಾನು ಉಡುಪರ ಮದುವೆಯ ಸಮಯದಲ್ಲಿ ನೋಡಿದ್ದ ನೆನಪಿತ್ತು.

ಆ ಉಡುಪರನ್ನೇ ಕರೆದುಕೊಂಡು ಪರ್ಕಳ ಜೋಯಿಸರಲ್ಲಿ ಹೋಗಿ ತೋರಿಸಿದಾಗ, ಅವರು ನೋಡಿ ಜಾತಕ ಹೊಂದುತ್ತದೆ ಅಂತ ಹೇಳಿದ್ದರಿಂದ ಅವರಿಗೆ ನನ್ನ ಜಾತಕವನ್ನು ಕೊಟ್ಟು ಅವರ ತಂದೆಯವರಲ್ಲಿ ಮಾತಾಡಲು ಹೇಳಿದೆ.  ಮನೆಗೆ ಹೋಗಿ ದಾಮೋದರ ಅಣ್ಣಯ್ಯ, ಅತ್ತಿಗೆಯರಿಗೆ ವಿಷಯ ತಿಳಿಸಿ ಅವರನ್ನು ಹಿರಿಯರೆಂಬ ನೆಲೆಯಲ್ಲಿ ನಮ್ಮ ಉಡುಪರ ತಂದೆ ಶಂಕರನಾರಾಯಣದ ಮುಕ್ತೇಸರರಾದ ಶ್ರೀಧರ ಉಡುಪರನ್ನು ಕಂಡು ಮದುವೆ ಪ್ರಾಸ್ತಾಪ ಮಾಡಿ ಬಂದಾಯಿತು. ನನ್ನ ಆಫೀಸಿನ ಸ್ನೇಹಿತರಿಗೂ ಹೇಳಿಯಾಯಿತು. ಹಾಗಾಗಿ ನಿಶ್ಚಿತಾರ್ಥದ ದಿನ ನನ್ನ ಹಲವು ಸ್ನೇಹಿತರನ್ನು ಕರೆದುಕೊಂಡು ಹೋಗಿ ಅವರ ಮತ್ತು ನನ್ನ ಬಂಧುಗಳ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥವಾಗಿ ಅದೇ ವರ್ಷ 1991 ಡಿಸಂಬರ 9 ರಂದು ಶಂಕರನಾರಾಯಣ ದೇವಸ್ಥಾನದಲ್ಲಿ ಮದುವೆಯೂ ಅದ್ದೂರಿಯಾಗಿ ನಡೆಯಿತು.

ಶಂಕರನಾರಾಯಣ ನನಗೆ ಹೊಸ ಊರೇನೂ ಅಲ್ಲ. ನಾನು ಪಿಯುಸಿ ಓದುತ್ತಿರುವಾಗ ಅಲ್ಲಿದ್ದೆನಲ್ಲ. ಆ ದೇವಸ್ಥಾನಕ್ಕೆ ಹೋಗುತ್ತಿದ್ದು ವಿಶಾಲವಾದ ಕೆರೆಯ ದಡದ ಮೇಲೆ ಆಗಾಗ ಹೋಗಿ ಕುಳಿತು ಕಾಲಕಳೆದವನು. ದೇವಸ್ಥಾನದ ಹತ್ತಿರದ ಸಾಯಿಬಾಬಾ ಮಂದಿರದಲ್ಲಿ ಪ್ರತೀದಿನ ಸಂಜೆ ಇದೇ ಉಡುಪರ ಮಕ್ಕಳು, ಸರ್ವೋತ್ತಮ ಶೇಟ್ರ ಮಕ್ಕಳು ಭಜನೆ ಮಾಡುತ್ತಿದ್ದುದನ್ನು ಆ ನಿಧಾನ ನಡೆಯ ಎರಡೇ ಸಾಲಿನ ಪದ್ಯವನ್ನು ಪುನರಾವರ್ತನೆ ಮಾಡುತ್ತಾ ಹಾಡುವುದನ್ನು ಕೇಳಿ ಆನಂದಿಸಿದವನು. ಉಡುಪರ ಮನೆಯವರಲ್ಲದಿದ್ದರೂ, ಅಲ್ಲಿನ ರಥಬೀದಿಯ ಎಲ್ಲರೂ ನನ್ನ ಗೊತ್ತಿದ್ದವರೆ. ಹಾಗಾಗಿ ಅದೊಂದು ಹೊಸ ಜಾಗ ಅಂತ ಅನ್ನಿಸಲೇ ಇಲ್ಲ.

ಶಂಕರನಾರಾಯಣದಲ್ಲಿ ಅಪ್ಪಯ್ಯನ ಮೇಳದ ಆಟ ಆದರೆ ಅದೇ ದೇವಸ್ಥಾನದಲ್ಲಿಯೇ ಬಿಡಾರ ಮಾಡುತ್ತಿದ್ದರು. ಆಟಕ್ಕೆ ಮೊದಲು ಸಂಜೆಯಹೊತ್ತಿನಲ್ಲಿ ದೇವರ ಮುಂದೆ  ಒಮ್ಮೆಎರಡು ಪೀಠಿಕೆ ಸ್ತ್ರೀ ವೇಷದವರ ಕುಣಿತವಾಗಿ, “ನೀನೇ ಕುಣಿಸುವೆ ಜೀವರನು ಶಂಕರನಾರಾಯಣ” ಎಂದು ಭಾಗವತರು ಕುಣಿಸಿಯೇ ಬಂದು, ಕಲ್ಕುಟಕನ ಗದ್ದೆಯಲ್ಲಿ ಆಟ ಆಗುತ್ತಿತ್ತು. ಮಾವಯ್ಯನೂ ಅಲ್ಲಿನ ಮುಕ್ತೇಸರರಾಗಿದ್ದು, ದೇವಸ್ಥಾನಕ್ಕಾಗಿ ಹಗಲಿರುಳೂ ದುಡಿದವರು. ಹಬ್ಬದ ಸಮಯದಲ್ಲಿ ಒಂದು ರಸೀದಿ ಪುಸ್ತಕ ಹಿಡಿದುಕೊಂಡು ನಡೆದುಕೊಂಡೇ ತಿರುಗಿ, ಬರೆಗುಂಡಿ, ಹಳ್ಳಿಹೊಳೆ ಅಂತ ಅಲ್ಲಿಯ ಅಡಿಕೆ ತೋಟದ ಸಾಹುಕಾರರ ಮನೆ ಮನೆಗಳಿಗೆ ತಿರುಗಿ, ಹಾಗೆಯೇ ಶಿವಮೊಗ್ಗ ,ತೀರ್ಥಳ್ಳಿ ಅಂತ ದೇವಸ್ಥಾನಕ್ಕೆ ಬಂದುಹೋಗುತ್ತಿದ್ದ ಭಕ್ತರ ಮನೆಗಳಿಗೆ ಹೋಗಿ ಹಬ್ಬದ ಖರ್ಚಿಗೆ ಅಂತ ಹಣ ಸಂಗ್ರಹಿಸುತ್ತಿದ್ದರು. ಹಬ್ಬದ ನಂತರ ಹಾಗೆ ಧನಸಹಾಯ ಮಾಡಿದವರಿಗೆಲ್ಲಾ ತಪ್ಪದೇ ಪ್ರಸಾದವನ್ನೂ ಕಳುಹಿಸಿಕೊಡುತ್ತಿದ್ದರು.

ಬಹಳ ಸಾತ್ವಿಕರು. ದೇವಸ್ಥಾನವನ್ನು ಹಲವು ರೀತಿಯಲ್ಲಿ ಅಭಿವೃದ್ಧಿ ಗೊಳಿಸಿದ ಅವರ ಅಣ್ಣ ಶ್ರೀನಿವಾಸ ಉಡುಪರಿಗೆ ಬೆಂಬಲವಾಗಿ ನಿಂತು ಹೆಸರಿಗಾಗಿ ದುಡಿಯದೇ ಕೇವಲ ಆತ್ಮ ಸಂತೋಷಕ್ಕಾಗಿ ದುಡಿಯುತ್ತಾ, ಅಣ್ಣನ ಕಾಲಾನಂತರ ದೇವಸ್ಥಾನದ ಮುಕ್ತೇಸರಿಕೆಯನ್ನು ಸಮರ್ಥವಾಗಿ ಮುಂದುವರಿಸಿಕೊಂಡು ಬಂದವರು.

ಅವರು ಪೇಟೆಯಲ್ಲಿ ಒಂದು ಜೀನಸಿ ಅಂಗಡಿಯನ್ನು ನಡೆಸುತ್ತಿದ್ದರು. ಅವರು ಸ್ವಲ್ಪ ಗಟ್ಟಿ ಇರುವವರೆಗೆ ಅಂಗಡಿಯ ಹುಡುಗ ಕುಮಾರ ಎಂಬವನನ್ನು ಕರೆದುಕೊಂಡು,  ಪ್ರತೀ ಶನಿವಾರ ಬೆಳಿಗ್ಗೆ ಕುಂದಾಪುರದ ಸಂತೆಗೆ ಹೋಗಿ ಅವರ ಜೀನಸಿ ಅಂಗಡಿಗೆ ಹೋಲ್ ಸೇಲಲ್ಲಿ ಬೇಕಾದ ಸಾಮಾನುಗಳನ್ನು ಖರೀದಿಸಿ ಬಸ್ಸಿಗೆ ಹಾಕಿಕೊಂಡು ತರುತ್ತಿದ್ದರು. ನಿಗರ್ವಿ. ಅವರು ಒಂದೆರಡು ನಾಟಕಗಳನ್ನೂ ಬರೆದಿಟ್ಟಿದ್ದರು.

ಅತ್ತೆಗೆ ಲಕ್ಷ್ಮಿಯೆಂಬ ಹೆಸರಿದ್ದರೂ ಅಬ್ಬಕ್ಕನೆಂದು ಊರವರಿಂದ ಕರೆಸಿಕೊಂಡು ಮನೆಗೆ ಬಂದವರಿಗೆ ಸಾಕ್ಷಾತ್ ಅನ್ನಪೂರ್ಣೆಯಾಗಿದ್ದರು. ಹೊತ್ತು ಮೀರಿ ದೇವಸ್ಥಾನವನ್ನು ನೋಡಲು ಬಂದವರಿಗೂ ಒಂದು ಮುಷ್ಟಿ ಊಟ ಹಾಕದೇ ಎಂದೂ ಕಳಿಸಿದವರಲ್ಲ.  ಆ ಊರಿನ ಹಳ್ಳಿಯಿಂದ ಶಾಲೆಗೆ ಬರುವ ಮಕ್ಕಳು, ಮಧ್ಯಾಹ್ನ ಊಟಕ್ಕೆ ಅವರ ಮನೆಗೇ ಬರುತ್ತಿದ್ದರಂತೆ. ಸಂಬಂಧಿಕರ ಮದುವೆಯ ಮನೆಯಲ್ಲಿ “ಅಬ್ಬಕ್ಕ” ಬಂದರೆ ಅಂದು ಹಸೆಮಣೆಯ ಹಾಡುಗಳು ಇದ್ದೇ ಇರುತ್ತಿತ್ತು. “ಹಸೆಗೆ ಕರೆದುತಾರೆ ವಾಸುದೇವ ಕೃಷ್ಣನ” ಎಂದೋ “ಆರತೀಯ ಮಾಡುವೆನಾ, ಆರತೀಯ ಮಾಡುವೆನಾ ರಾಮಚಂದ್ರಗೆ” ಎಂದೊ ಹಾಡಲು ತೊಡಗಿದರೆ ಹತ್ತಿರ ಕುಳಿತ ಹೆಂಗಸರೂ ಮಂತ್ರಮುಗ್ಧರಾಗಿ ಅವರ ಕೊರಳಿಗೆ ಕೊರಳಾಗಿ ಜೊತೆಗೂಡಿಸುತ್ತಿದ್ದರು.

ನನ್ನ ಮದುವೆಯಾಗಿ ಸ್ವಲ್ಪ ದಿನದಲ್ಲಿಯೇ ಒಮ್ಮೆ ಮಾವನ ಮನೆಗೆ ಹೋಗಿದ್ದಾಗ ಅಲ್ಲಿ ಪಾರ್ವತಮ್ಮ ಎಂಬ ಒಬ್ಬ ವಯೋವೃದ್ಧ ಹೆಂಗಸು ಬಂದಿದ್ದರು. ಅಂದು ಅವರು ಮನೆಗೆ ಬಂದಾಗ ಮನೆಮಂದಿಯೆಲ್ಲಾ ಅವರ ಆಶೀರ್ವಾದ ಪಡೆದುಕೊಳ್ಳಲು, ಅಕ್ಷತೆ ಹಾಕಿಸಿಕೊಂಡು ಮಾತಾಡಲು ಮುಗಿಬಿದ್ದದ್ದು  ಅವರ ಮೇಲೆ ಮನೆಯವರಿಗಿದ್ದ ಗೌರವಕ್ಕೆ ಸಾಕ್ಷಿಯಾಯಿತು.

ಅವರು ಬಹಳ ಹಿಂದಿನಿಂದಲೂ ಅಲ್ಲಿಗೆ ಆಗಾಗ ಬರುತ್ತಿದ್ದರಂತೆ. ಕುಪ್ಪೆಗುಡ್ಡೆ ಎಂಬ ಬೆಟ್ಟದ ತುದಿಯಲ್ಲಿ ಹಿಂದೆ ಕ್ರೋಢಮುನಿ ತಪಸ್ಸು ಮಾಡಿ ಶಂಕರನಾರಾಯಣ ಸ್ವಾಮಿಯು ಪ್ರತ್ಯಕ್ಷವಾದ ಒಂದು ಸಣ್ಣ ಗುಹೆಯಂತಹ  ಸ್ಥಳವಿದೆ. ಅಲ್ಲಿ ಹೋಗಿ ಆ ಪಾರ್ವತಮ್ಮ ಒಬ್ಬರೇ ಇದ್ದು, ರಾತ್ರಿ ಹಗಲು ತಪಸ್ಸು ಮಾಡುತ್ತಿದ್ದರಂತೆ. ಆಗ ಈ ಅಬ್ಬಕ್ಕ ಆ ಗುಡ್ಡವನ್ನು ಪ್ರತೀದಿನ ಹತ್ತಿ ಹೋಗಿ ಅವರಿಗೆ ಊಟ ಕೊಟ್ಟು ಬರುತ್ತಿದ್ದರಂತೆ. ಆಗ ನನ್ನ ಹೆಂಡತಿ ಅವರ ಗರ್ಭದಲ್ಲಿದ್ದಳು. ಅಬ್ಬಕ್ಕ ಅವರ ಸೇವೆಯನ್ನು ಮಾಡುತ್ತಾ, ಒಂದು ದಿನ ಊಟ ತೆಗೆದುಕೊಂಡು ಹೋಗಿ ನೋಡಿದರೆ ಅವರು ಎಲ್ಲಿಗೋ ಹೊರಟು ಹೋಗಿದ್ದರು. ನಂತರ ಮಗು ಹುಟ್ಟಿ ಸುಮಾರು ಎರಡು ವರ್ಷವಾಗಿರುವಾಗ ಅವರು ಇನ್ನೊಮ್ಮೆ ಮನೆಗೆ ಬಂದರು.  ಊಟಕ್ಕೆ ಕುಳಿತ್ತಿದ್ದಾಗ. “ಮಗುವಿಗೆ ಏನು ಹೆಸರಿಟ್ಟಿದ್ದಿ?” ಎಂದು ಅವರು ಕೇಳಿದರಂತೆ, ಅಬ್ಬಕ್ಕ, “ನೀವೇ ಒಂದು ಹೆಸರಿಡಿ” ಎಂದದ್ದಕ್ಕೆ, ಅವರು ಊಟದ ಸಮಯದಲ್ಲಿ ಕೇಳಿದ್ದೀಯಲ್ಲ, ಅನ್ನಪೂರ್ಣ ಅಂತ ಇಡು ಅಂದರಂತೆ. ಹಾಗೆಯೇ ಮಗುವಿಗೆ ಹೆಸರು ಇಟ್ಟರು.

ಪಾರ್ವತಮ್ಮ ಅವರ ಯೌವನದ ಕಾಲದಲ್ಲಿ ಅವರ ಮನೆಯನ್ನು ತೊರೆದು ಏಕಾಂತವನ್ನು ಸೇರಿ, ಒಬ್ಬರೇ ಕುಳಿತು ಬಹಳ ಕಾಲದವರೆಗೆ ಯಾರ ಹತ್ತಿರವೂ ಮಾತಾಡದೇ ತಪಸ್ಸನ್ನು ಮಾಡುತ್ತಿದ್ದರಂತೆ. ಅವರು ಮನೆಗೆ ಬಂದರೆ ಹೆಚ್ಚುಕಾಲ ನಿಲ್ಲುತ್ತಿರಲಿಲ್ಲ. ಕೊಲ್ಲೂರಿನ ಹತ್ತಿರದ ಕೊಟಚಾದ್ರಿಯಲ್ಲಿ, ಕಮಲಶಿಲೆಯ ಹತ್ತಿರ ಎರಡು ಕಿಲೋಮೀಟರ್ ದೂರದ ಒಂದು ಗುಹೆಯಲ್ಲೂ ಬಹಳಕಾಲ ತಪಸ್ಸು ಮಾಡಿದ್ದರಂತೆ.

 ಅವರು ಶಂಕರನಾರಾಯಣದ ಕುಪ್ಪೆಗುಡ್ಡೆಯಲ್ಲಿ ತಪಸ್ಸು ಮಾಡುವ ಕಾಲದಲ್ಲಿ ಆ ಪಾರ್ವತಮ್ಮ ಸುಂದರವಾದ ಯೌವನವತಿಯಾಗಿದ್ದರು. ಅವರು ಒಬ್ಬರೇ ಆ ಗುಡ್ಡದ ಮೇಲೆ ರಾತ್ರಿಯೂ ಇದ್ದು ಧ್ಯಾನ ಮಾಡುತ್ತಿದ್ದರು. ಅವರ ರಕ್ಷಣೆಗೆ ಒಂದು ನಾಗರ ಹಾವೂ ಇರುತ್ತಿತ್ತು ಎಂದುಜನ ಆಡಿಕೊಳ್ಳುತ್ತಿದ್ದರು. ಒಮ್ಮೆ ಯಾರೋ ಒಬ್ಬ ಕಿಡಿಗೇಡಿ ಅದನ್ನು ಪರೀಕ್ಷೆ ಮಾಡಲು, ಕತ್ತಲೆಯ ಹೊತ್ತಿನಲ್ಲಿ ಅಲ್ಲಿಗೆ ಹೋಗಿ ಏನೋ ತರಲೆ ಮಾಡಲು ತೊಡಗಿದನಂತೆ. ಪಾರ್ವತಮ್ಮನಿಗೆ ಇರುಸುಮುರುಸಾಗಿ ಅವನಿಗೆ ಅಲ್ಲಿಂದ ಹೊರಟುಹೋಗಲು ಹೇಳಿದರು. ಅವನು ಹೋಗಲಿಲ್ಲ. ಸುತ್ತಲೂ ಕತ್ತಲು. ತಿಂಗಳು ಬೆಳಕು ಬಿಟ್ಟರೆ ಬೇರೆ ಯಾವ ಬೆಳಕೂ ಇಲ್ಲ. ಸ್ಮಶಾನ ಮೌನ. ಗಟ್ಟಿಯಾಗಿ ಬೊಬ್ಬೆಹಾಕಿದರೂ ಕೇಳುವವರಿಲ್ಲ. ಅವನು ಇವರನ್ನೇ ನೋಡುತ್ತಾ ಎದುರಲ್ಲಿ ಕುಳಿತಿದ್ದ. “ಸುಮ್ಮನೇ ಹೋಗಪ್ಪ. ನನ್ನ ಸುದ್ದಿಗೆ ಬರಬೇಡ” ಎಂದು ಹಲವು ಪರಿಯಲ್ಲಿ ಹೇಳಿದರೂ ಹೋಗಲಿಲ್ಲ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ