ಸೋಮವಾರ, ನವೆಂಬರ್ 6, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 48

ಮುಲ್ಕಿಯಲ್ಲಿ ನಾರಾಯಣಗುರು ಇಂಗ್ಲೀಷ್ ಮೀಡಿಯಂ ಶಾಲೆಗೆ ಮಗನನ್ನು ಸೇರಿಸಿದೆವು. ಆಫೀಸಿನ ಹತ್ತಿರವೇ ನಮ್ಮ ವಸತಿಗೃಹ. ಇವಳಿಗೂ ನಮ್ಮ ಆಫೀಸಿನಲ್ಲಿಯೇ ಗುತ್ತಿಗೆಯ ಆಧಾರದಲ್ಲಿ ಕೆಲಸಮಾಡುವ ಅವಕಾಶ ಸಿಕ್ಕಿತು. ಮಗನಿಗೆ ಬೆಳಿಗ್ಗೆ ಮಾತ್ರ ಶಾಲೆ ಇದ್ದುದರಿಂದ ಮಧ್ಯಾಹ್ನ ಮನೆಗೆ ಬಂದಕೂಡಲೇ  ನಾವು ಆಫೀಸಿಗೆ ಹೋಗುವಾಗ ಕರೆದುಕೊಂಡು ಹೋಗಿ, ಆಫೀಸಿನ ಮೂಲೆಯಲ್ಲಿ ಒಂದು ಬಟ್ಟೆ ಹಾಸಿ ಮಲಗಿಸುತ್ತಿದ್ದೆವು. ಎಚ್ಚರವಿದ್ದಾಗ ಮನೆಯ ಎದುರಿನ ವಿಶಾಲವಾದ ಗಾಂಧಿ ಮೈದಾನದಲ್ಲಿ, ಹೊಯಿಗೆ ರಾಶಿಯಲ್ಲಿ, ಮಳೆಗಾಲದಲ್ಲಿಯಾದರೆ ಅಲ್ಲಿಯೇ ಹರಿಯುವ ತೋಡಿನ ನೀರಿನಲ್ಲಿ ಅವನಷ್ಟಕ್ಕೇ ಆಡಲು ಬಿಡುತ್ತಿದ್ದೆವು. ಅವನನ್ನು ಶಾಲೆಗೆ ಕರೆದೊಯ್ಯಲು ಮನೆಯ ಹತ್ತಿರ ವ್ಯಾನ್ ಬರುತ್ತಿತ್ತು. ತಿಂಗಳ ಅಂತ್ಯದಲ್ಲಿ ಆ ವ್ಯಾನಿನ ಬಾಡಿಗೆಯನ್ನು ಅವನ ಕಿಸೆಗೆ ಹಾಕಿ ಡ್ರೈವರ್ ನಿಗೆ ಕೊಡಲು ಹೇಳುತ್ತಿದ್ದೆವು. ಆಗ ವ್ಯಾನ್ ಬಾಡಿಗೆ ನೂರ ಐವತ್ತು ಇದ್ದು ಅವನು ನೂರೈವತ್ತೈದಕ್ಕೆ ಬಾಡಿಗೆಯನ್ನು ಒಮ್ಮೆ ಏರಿಸಿದ.

ಒಮ್ಮೆ ಶಾಲೆಯಿಂದ ಮನೆಗೆ ಬರುವಾಗ ಮಗನ ಕೈಯಲ್ಲಿ ದೊಡ್ಡ ಎರಡು ನವಿಲು ಗರಿಯಿತ್ತು. ಅವನು ಖುಷಿಯಿಂದ ಓಡೋಡಿ ಬಂದು “ಅಪ್ಪ ಅಪ್ಪ, ನವಿಲುಗರಿ ನೋಡು. ಎಷ್ಟು ಚೆಂದ ಇತ್ತಲ್ಲ” ಎಂದು ನನ್ನ ಮುಂದೆ ಹಿಡಿದ. ನನಗೆ ಅದನ್ನು ನೋಡಿ ಸಂತೋಷವಾಗುವ ಬದಲು, ಒಮ್ಮೆಲೇ ಸಿಟ್ಟು ಬಂತು. “ಅದು ಎಲ್ಲಿ ಸಿಕ್ಕಿತು?” ಎಂದು ಗದರಿಸಿದೆ. ಅದು ಯಾರದ್ದೋ ಅವನ ಜೊತೆಯ ಹುಡುಗರದಾಗಿದ್ದು, ಅವರಿಗೆ ಗೊತ್ತಿಲ್ಲದೇ ತಂದಿದ್ದ ಎಂದು ನನಗೆ ಅನುಮಾನ. ಅವನು “ಅಂಗಡಿಯವನು ಕೊಟ್ಟ” ಎಂದ. ನನಗೆ ಖಾತ್ರಿಯಾಯಿತು. ಅವನ ಹತ್ತಿರ ಹಣವಿಲ್ಲ. ಇವನು ಅಂಗಡಿಯವನಿಗೆ ಗೊತ್ತಾಗದ ಹಾಗೆ ತಂದಿರಬೇಕು ಎಂದುಕೊಂಡೆ. "ಯಾವ ಅಂಗಡಿ? ಅವನು ನಿನಗೆ ಯಾಕೆ ಕೊಟ್ಟ?. ಹೇಗೆ ಸಿಕ್ಕಿತು? ಎಂದು ಗಲಾಟೆ ಮಾಡಿ, ಆಗಲೇ ಸ್ಕೂಟರಿನಲ್ಲಿ ಅವನನ್ನು ಕೂರಿಸಿಕೊಂಡು, ಅವನು ಹೇಳಿದ ಅಂಗಡಿಗೆ ಹೋಗಿ “ನೀವು ಈ ನವಿಲು ಗರಿಯನ್ನು ಅವನಿಗೆ ಕೊಟ್ಟಿರಾ? ಎಂದು ವಿಚಾರಿಸಿದೆ. ಅವರು “ಹೌದು. ಅದಕ್ಕೆ ಅವನು ಐದು ರೂಪಾಯಿಯನ್ನೂ ಕೊಟ್ಟನಲ್ಲ” ಎಂದರು. ಅವನ ರಟ್ಟೆ ಹಿಡಿದು . “ನಿನಗೆ ಆ ದುಡ್ಡು ಎಲ್ಲಿಂದ ಬಂತು?” ಎಂದು ಜೋರು ಮಾಡಿದೆ. ಅವನು ಅಳುತ್ತಾ“ಕಿಸೆಯಲ್ಲಿತ್ತು” ಅಂದ. ಅವನು ವ್ಯಾನಿನವನಿಗೆ ನೂರೈವತ್ತು ರುಪಾಯಿ ಮಾತ್ರ ಕೊಟ್ಟಿದ್ದ. ಕಿಸೆಯಿಂದ ತೆಗೆಯುವಾಗ ಐದು ರೂಪಾಯಿ ಅಲ್ಲಿಯೇ ಉಳಿದಿತ್ತು. ವ್ಯಾನಿನವನೂ ಬಾಕಿ ಹಣವನ್ನು ಕೇಳಲಿಲ್ಲ. ಇವನು ಮತ್ತೊಮ್ಮೆ ಕಿಸೆಗೆ ಕೈ ಹಾಕುವಾಗ ಅದು ಸಿಕ್ಕಿರಬೇಕು. ಅದೇ ಹೊತ್ತಿಗೆ ಅಲ್ಲಿ ಅಂಗಡಿಯಲ್ಲಿ ಚಂದದ ನವಿಲುಗರಿಯೂ ಕಂಡಿತು. ಆದರೆ ಅವನಿಗೆ ಅದರಿಂದ ಒಂದು ಪಾಠವಾಯಿತು. ಆಗಲೇ ಅವನಿಗೆ ತಾಕೀತು ಮಾಡಿದೆ. “ನಮಗೆ ಗೊತ್ತಿಲ್ಲದೇ, ನಮಗೆ ಹೇಳದೇ ಏನೂ ಕೊಂಡುಕೊಳ್ಳಬಾರದು” ಎಂದು.

ಅವನನ್ನು ನಾವು ಬಹಳ ಮುದ್ದಿನಿಂದ ಆದರೆ ಅಷ್ಟೇ ಶಿಸ್ತಿನಿಂದ ಬೆಳೆಸಿದೆವು. ಹಬ್ಬಕ್ಕೆ ಹೋದರೆ ಏನಾದರೂ ಒಂದೇ ಆಟಿಕೆ ಕೊಡಿಸುವ ಶರತ್ತು. ಆಯ್ಕೆ ಅವನಿಗೆ. ಅದು ಬೇಕು ಇದು ಬೇಕು ಎನ್ನುವ ಹಾಗಿಲ್ಲ. ಎಲ್ಲವನ್ನೂ ನೋಡಿ ಆದ ಮೇಲೆ “ಅಪ್ಪ, ನನಗೆ ಇಂತದ್ದನ್ನು ಕೊಡಿಸಿ” ಅನ್ನುತ್ತಿದ್ದ. ಅದರಲ್ಲಿ ಹೆಚ್ಚಿನವುಗಳು ಆಟದ ಕಾರುಗಳು. ಅವುಗಳಲ್ಲಿ ಹೆಚ್ವಿನವುಗಳು ಇಂದೂ ನಮ್ಮ ಮನೆಯಲ್ಲಿ ಇದೆ. ಕುಟ್ಟಿ ಎಳೆದು ಹಾಳುಮಾಡುತ್ತಿರಲಿಲ್ಲ. ಚಿಕ್ಕಂದಿನಲ್ಲಿಯೂ ಬಿಳಿ ಪೇಪರ್ ಕೊಟ್ಟು ಪೆನ್ನು ಕೊಟ್ಟು ಗೀಚಲು ಕೊಟ್ಟರೂ, ಆ ಕಾಗದವನ್ನು ಹರಿದು ಹಾಕಲು ಬಿಡುತ್ತಿರಲಿಲ್ಲ.  ಅವನಿಗೆ ಒಂದು ಕಾಯಿನ್ ಡಬ್ಬಿ ಕೊಟ್ಟು ಅದರಲ್ಲಿ ಅವನಿಗೆ ವಿಶೇಷ ಊಟದಲ್ಲಿ ಅಥವ ಯಾರಾದರೂ ದೊಡ್ಡವರು ಹಣ ಕೊಟ್ಟಲ್ಲಿ ಅದಕ್ಕೆ ಹಾಕಿ ಇಡಲು ಹೇಳುತ್ತಿದ್ದೆವು.  ಅವನು ಹಾಗೆಯೇ ಮಾಡಿ ಅನಿವಾರ್ಯದಲ್ಲಿ ಮಾತ್ರ ಖರ್ಚು ಮಾಡುವ ಮಿತವ್ಯಯದ ಹಾಗೂ ಹೆಚ್ಚು 'ಆಯ್ಕಟ್' ಮಾಡದೇ ಎಲ್ಲ ಪರಿಸ್ಥಿತಿಗೂ ಹೊಂದಿಕೊಳ್ಳುವ ನಮ್ಮ ಗುಣವನ್ನು ಬೆಳೆಸಿಕೊಂಡ.

ಮುಲ್ಕಿಯಿಂದ ಪ್ರಮೋಶನ್ ಆಗಿ ಪುನಹ ಉಡುಪಿಗೆ ಬಂದಾಗ ಒಂದು ವರ್ಷ ಕುಂಜಿಬೆಟ್ಟಿನ ವಸತಿ ಗೃಹದಲ್ಲಿ ಇದ್ದೆ. ಉಡುಪಿಯಲ್ಲಿ ನನ್ನದೇ ಒಂದು ಸ್ವಂತ ಮನೆಯನ್ನು ಹೊಂದಬೇಕು ಎಂದು ಮನಸ್ಸಾಯಿತು. ಸೈಟ್ ತೆಗೆದುಕೊಂಡು ಮನೆ ಕಟ್ಟಿಸುವುದು ಕಷ್ಟ ಎಂದುಕೊಂಡು, ಕಟ್ಡಿಸಿದ ಮನೆಯನ್ನು ಹುಡುಕತೊಡಗಿದೆ. ಒಂದೆರಡು ಮನೆಯನ್ನು ಹೋಗಿ ನೋಡಿಯೂ ಆಯಿತು. ಒಮ್ಮೆ ನಮ್ಮ ಭಾವ ಉಡುಪರು ಮತ್ತು ಸುಬ್ರಾಯರು ಮಾತಾಡುತ್ತಿರುವಾಗ ಮನೆಯ ಬಗ್ಗೆ ಹೇಳಿದೆ. ಆಗ ಉಡುಪರು ಕಟ್ಟಿಸಿದ ಮನೆಯನ್ನು ತೆಗೆದುಕೊಳ್ಳುವುದು ಬೇಡ. ತಡವಾದರೂ ಅಡ್ಡಿಲ್ಲ ನಮಗೆ ಹೇಗೆ ಬೇಕೋ ಹಾಗೆ ಮನೆಯನ್ನು ಕಟ್ಟಿಸಿಯೇ ಬಿಡುವುದು ಒಳ್ಳೆಯದು ಎಂದರು. ಅವರೇ ಅಂಬಾಗಿಲಿನಲ್ಲಿ ಒಂದು ಸೈಟ್ ಇದೆ ಎಂದು ನನ್ನನ್ನು ಕರೆದುಕೊಂಡು ಹೋಗಿ ತೋರಿಸಿದರು. ಅದು ನನಗೂ ಒಪ್ಪಿಗೆಯಾಯಿತು. ಅಲ್ಲಿಯೇ ಈಗ ನಾನು ಇರುವ ಮನೆಯನ್ನು ಕಟ್ಟಲು ನನ್ನದೇ ಅಂದಾಜಿನ ಒಂದು ಮನೆಯ ಚಿತ್ರವನ್ನು ಬಿಡಿಸಿ ಅದರಂತೆಯೇ ಕಟ್ಟಿಕೊಡಲು ಅಂಬಲಪಾಡಿಯ ಜಗದೀಶ ಕೆದ್ಲಾಯರನ್ನು ಕೇಳಿಕೊಂಡೆ. ಅವರ ಕಾಮಗಾರಿಯ ಮೇಲ್ವಿಚಾರಣೆಯಲ್ಲಿ ನನ್ನ ಕನಸಿನಂತೆಯೇ ಆ ಮನೆ ಕಟ್ಟಿಸಿದೆ. ಮನೆ ಸಿದ್ದವಾಯಿತು. ಗೃಹಪ್ರವೇಶದ ದಿನ ಮಗನ ಉಪನಯನವನ್ನೂ ಮಾಡಿ ಹೊಸಮನೆಯನ್ನು  ಪ್ರವೇಶ ಮಾಡಿದ್ದಾಯಿತು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ