ಶುಕ್ರವಾರ, ನವೆಂಬರ್ 10, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 51

ವಿಷ್ಣುಮೂರ್ತಿ ಎನ್ನುವ ಜನತಾ ಕೊಆಪರೇಟಿವ್ ಬ್ಯಾಂಕಿನಲ್ಲಿ ಕೆಲಸ ಮಾಡುವ ನನ್ನ ಸ್ನೇಹಿತರೊಬ್ಬರಿದ್ದರು. ಅವರು ಅಲೆವೂರಿನಲ್ಲಿ ಒಂದು ಸೈಟ್ ತೆಗೆದು ಇಟ್ಟಿದ್ದರು. ಮನೆ ಕಟ್ಟಲು ಪ್ರಾರಂಭಿಸದೇ ಇರುವುದರಿಂದ ಅಲ್ಲಿಗೆ ಹೋಗುತ್ತಿರಲಿಲ್ಲ. ಒಮ್ಮೆ ಅಲ್ಲಿಗೆ ಹೋಗಿ ನೋಡಿದಾಗ ಅವರ ನಿವೇಶನದ  ಒಂದು ಬದಿಯಲ್ಲೇ ಒಂದು ಕಂಬ ಹಾಕಿ ಸೈಟಿನ ಮೂಲೆಯಿಂದ ಹಾದುಹೋಗುವಂತೆ ವಯರ್ ಎಳೆದು ಅಲ್ಲಿನ ಮತ್ತೊಂದು ಮನೆಗೆ ಕರೆಂಟ್ ಕೊಟ್ಟಿದ್ದರು. ಇದ್ದದ್ದೇ ಏಳೋ ಎಂಟೋ ಸೆಂಟ್ಸ್ ಜಾಗ, ಅದರಲ್ಲೂ ಸ್ವಲ್ಪ ಜಾಗ ಹೀಗೆ ನಷ್ಟವಾಗಿ ಹೋಗುತ್ತದೆ ಮತ್ತು ಅದರ ಅಡಿಯಲ್ಲಿ ಏನು ನೆಟ್ಟರೂ ಕೆಇಬಿಯವರು ಕಡಿದು ಹಾಕುತ್ತಾರೆ ಎಂದು ಗೊತ್ತಿದ್ದ ಮೂರ್ತಿಯವರಿಗೆ ಆತಂಕವಾಯಿತು. ನಮ್ಮ ಆಫೀಸಿಗೆ ಬಂದು ವಿಷಯ ತಿಳಿಸಿದರು. ನಾನು ಅವರನ್ನು ಕರೆದುಕೊಂಡು ನನ್ನ ಮೇಲಧಿಕಾರಿಗಳಲ್ಲಿಗೆ ಹೋಗಿ, “ಅವರಿಗೆ ಸಹಾಯ ಮಾಡಲು ಸಾಧ್ಯವೇ?” ಎಂದು ಕೇಳಿಕೊಂಡೆ.

ಅವರು ಕೂಡಲೇ ಶಾಖಾಧಿಕಾರಿಗಳಿಗೆ ಫೋನ್ ಮಾಡಿ, ಸ್ಥಳಕ್ಕೆ ಹೋಗಿ ನೋಡಿ ಬರಲು ತಿಳಿಸಿದರು. ಅಲ್ಲಿಂದ ಸ್ಥಳಪರಿಶೀಲನೆಯಾಗಿ ಅರ್ಧ ಗಂಟೆಯಲ್ಲಿ ವಸ್ತುಸ್ಥಿತಿಯ ವರದಿಯಾಯಿತು. ಆದರೆ “ಅಲ್ಲಿ ಈಗಾಗಲೇ ವಯರ್ ಎಳೆದು ಮುಂದಿನ ಮನೆಗೆ ಕರೆಂಟ್ ಕೊಟ್ಟಾಗಿದೆಯಂತಲ್ಲ. ಆಕ್ಷೇಪವಿದ್ದಲ್ಲಿ ವಯರ್ ಎಳೆಯುವಾಗಲೇ ತಿಳಿಸಬೇಕಿತ್ತು. ನಿಮಗೆ ಏನೂ ಪ್ರೋಬ್ಲೆಮ್ ಇಲ್ಲ. ಸೈಟಿನ ಒಂದು ಬದಿಯಲ್ಲಿ ವಯರ್ ಹೋಗಿದೆ. ಸ್ವಲ್ಪ ಸುಧಾರಿಸಿಕೊಳ್ಳಿ. ಹಾಗೆ ಎಲ್ಲರೂ ಅವರವರ ಖಾಸಗಿ ಜಾಗದಲ್ಲಿ ವಯರ್ ಹೋಗಬಾರದು ಎಂದು ಹೇಳುತ್ತಾ ಹೋದರೆ, ನಮ್ಮ ಕರೆಂಟನ್ನು ಯಾರಿಗೂ ಕೊಡಲು ಸಾಧ್ಯವಾಗಲಿಕ್ಕಿಲ್ಲ”. ಎಂದು ಕೈಚೆಲ್ಲಿದ್ದೂ ಆಯಿತು. ನಮ್ಮ ವಿಷ್ಣುಮೂರ್ತಿಯವರಿಗೆ ನಿರಾಶೆಯಾಯಿತು. ಆದರೂ “ಸರ್, ಆ ಮನೆಗೆ ಮತ್ತೊಂದು ಕಡೆಯಿಂದ ರಸ್ತೆ ಇದೆ. ಅಲ್ಲಿಂದ ವಯರ್ ಎಳೆದು ಕರೆಂಟ್ ಕೊಡಲು ಸಾಧ್ಯವಿದೆ. ದಯವಿಟ್ಟು ಹಾಗೆ ಆದರೂ ಮಾಡಿಕೊಡಿ” ಎಂದು ವಿನಂತಿಸಿದರು. ಅದಕ್ಕೆ “ಈಗಾಗಲೇ ಕೆಲಸ ಮಾಡಿ ಖರ್ಚು ಮಾಡಿಯಾಗಿದೆ. ಇನ್ನು ಅದನ್ನು ತೆಗೆದು ಪುನಹ ಮಾಡುವುದು ಹೇಗೆ?. ನಮ್ಮ ಇಲಾಖೆಯಲ್ಲಿ ಅದಕ್ಕೆ ಅವಕಾಶವಿಲ್ಲ. ಇನ್ನು ನಿಮಗೆ ಬೇಕೇ ಅಂತಾದರೆ ಸ್ಥಳಾಂತರದ ಖರ್ಚನ್ನು ನೀವು ಭರಿಸುವುದಾದರೆ ಕೂಡಲೇ ಮಾಡಿಸಿಕೊಡುತ್ತೇನೆ” ಎಂದು ಭರವಸೆಯನ್ನೂ ಕೊಟ್ಟರು. ವಿಷ್ಣುಮೂರ್ತಿಯವರ ಮುಖ ಸಣ್ಣಗಾಯಿತು. “ಸರ್, ನನ್ನ ತಪ್ಪಿಲ್ಲದೇ ನಾನು ಸಾವಿರಾರು ರುಪಾಯಿಯನ್ನು ಭರಿಸಬೇಕೆಂದರೆ ಯಾವ ನ್ಯಾಯ?. ದಯವಿಟ್ಟು ಏನಾದರೂ ಮಾಡಿ. ನಾನು ಅಲ್ಲಿ ಮನೆಯನ್ನು ಕಟ್ಟಲು ಶುರುಮಾಡಬೇಕು.” ಎಂದರು.

ಆದರೆ ಅವರ ಬೇಡಿಕೆ ಫಲಕಾರಿಯಾಗಲಿಲ್ಲ. ನನಗೂ ಅವರಿಗೆ ಸಹಾಯ ಮಾಡಲಾಗಲಿಲ್ಲವಲ್ಲ ಎಂದು ಬೇಸರವಾಯಿತು. ಅದೇ ಸಮಯಕ್ಕೆ ಕುಂದಾಪುರದಲ್ಲಿ ಇಂತಹುದೇ ಒಂದು ಪ್ರಕರಣದಲ್ಲಿ ಮೊದಲೇ ನಿವೇಶನ ಇದ್ದು, ಅದರ ಮೇಲೆ ಲೈನ್ ಎಳೆದುದರಿಂದ ಬಳಕೆದಾರರು ಆಕ್ಷೇಪಿಸಿ ಬಳಕೆದಾರರ ವೇದಿಕೆಯಲ್ಲಿ ದೂರು ನೀಡಿದ್ದು, ಅದರ ತೀರ್ಪು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದರಲ್ಲಿ ಬಳಕೆದಾರರ ವೇದಿಕೆಯು “ಕೆಇಬಿಯವರೇ ಅವರ ಖರ್ಚಿನಲ್ಲಿ ವಯರನ್ನು ಬದಲಾಯಿಸಿ ಕೊಡಬೇಕು ಮತ್ತು ಅದರಿಂದ ಮಾನಸಿಕವಾಗಿ ನೊಂದ ಬಳಕೆದಾರರಿಗೆ ಪರಿಹಾರವನ್ನೂ ಕೊಡಬೇಕು” ಎಂದು ಪ್ರಕರಣ ಇತ್ಯರ್ಥಗೊಳಿಸಿ ತೀರ್ಪು ನೀಡಿತ್ತು. ಅದನ್ನು ಓದಿದ ನಾನು ವಿಷ್ಣುಮೂರ್ತಿಯವರನ್ನು ಬರಲು ಹೇಳಿ, “ನನಗೆ ನನ್ನ ಸ್ಥಳದ ಮೇಲೆ ಹಾದು ಹೋದ ವಯರ್ ನ್ನು ಸ್ಥಳಾಂತರಿಸಿ ನ್ಯಾಯ ಒದಗಿಸದಿದ್ದರೆ ನಾನೂ ಬಳಕೆದಾರರ ವೇದಿಕೆಗೆ ದೂರು ಕೊಡುತ್ತೇನೆ ಎಂದು, ಆ ಪೇಪರ್ ಕಟ್ಟಿಂಗ್ ನ್ನು ಲಗತ್ತಿಸಿ ಒಂದು ಅರ್ಜಿ ಬರೆಯಿರಿ ನೋಡುವ” ಎಂದು ತಿಳಿಸಿದೆ. ಅವರು ಹಾಗೆಯೇ ಬರೆದರು. ಹದಿನೈದು ದಿನದಲ್ಲಿಯೇ ಅವರ ಕೆಲಸವೂ ಆಯಿತು. ನಂತರ ಒಮ್ಮೆ ಅವರು ನನ್ನನ್ನು ಭೇಟಿ ಮಾಡಿ ಧನ್ಯವಾದ ಹೇಳುವಾಗ, “ನೀವೇ ನಿಮ್ಮ ಆಫೀಸಿನ ವಿರುದ್ದ ಕೆಲಸ ಹೇಳಬೇಕಾಯಿತಲ್ಲ. ಆದರೆ ಅದರಿಂದ ನನಗೆ ಮಾತ್ರ ದೊಡ್ಡ ಉಪಕಾರವಾಯಿತು” ಎಂದರು. ನಾನು, “ಕಾನೂನು ಏನೇ ಇರಲಿ. ಈ ಪ್ರಕರಣದಲ್ಲಿ ನಿಮಗೆ ಅನ್ಯಾಯವಾಗಿದೆ ಎನ್ನಿಸಿತು. ಮನಃಸಾಕ್ಷಿ  ಹೇಳಿದ ಹಾಗೆ ಮಾಡಿದೆ” ಎಂದೆ.

ನನಗೆ ೨೦೦೮ ರಲ್ಲಿ ಮತ್ತೆ ಪ್ರೊಮೋಶನ್ ಬಂದು, ಲೆಕ್ಕಾಧಿಕಾರಿಯಾಗಿ ಮಂಗಳೂರಿನ ಅತ್ತಾವರ ವಿಭಾಗಕ್ಕೆ ವರ್ಗವಾಯಿತು. ಆಗ ನನಗೆ ನನ್ನ ಹವ್ಯಾಸವಾದ ಬರವಣಿಗೆ, ಯಕ್ಷಗಾನ ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಹಂಬಲ ಶುರುವಾಗತೊಡಗಿತು. ಅದೇ ಸಮಯದಲ್ಲಿ ನಾನು, ಅನ್ನಪೂರ್ಣಳ ಸಹಾಯದಿಂದ “ಬಳಗ” ಎಂಬ ಖಾಸಗಿ ಮಾಸಪತ್ರಿಕೆಯನ್ನು ತಯಾರು ಮಾಡಿ, ನಮ್ಮ ಸಂಬಂಧಿಕರಿಗೆಲ್ಲ ಕಳಿಸಿಕೊಡುತ್ತಿದ್ದೆ. ಅದರಲ್ಲಿ ನಾಲ್ಕು ಪುಟಗಳಿದ್ದು, ನನಗೆ ತಿಳಿದ ಹಲವಾರು ಸಂಗತಿಗಳನ್ನು ಅದರ ಮೊದಲ ಪುಟದಲ್ಲಿ ತಿಳಿಸುತ್ತಿದ್ದೆ. ಎರಡನೆಯ ಪುಟದಲ್ಲಿ ನಮ್ಮ ಬಳಗದವರಲ್ಲಿ ಯಾರಾದರೂ ಏನಾದರೂ ಬರೆದು ಕಳಿಸಿದರೆ ಅದನ್ನು, ಮೂರನೆಯ ಪುಟದಲ್ಲಿ ಮಕ್ಕಳಿಗೆ ಇಷ್ಟವಾಗುವ ಲೆಕ್ಕಗಳು, ಸಮಸ್ಯೆಗಳು, ಚುಟುಕುಗಳು, ಪದಬಂಧ ಇತ್ಯಾದಿಗಳನ್ನು ಅಳವಡಿಸುತ್ತಿದ್ದೆ. ಮತ್ತು ಕೊನೆಯ ಪುಟದಲ್ಲಿ ನಮ್ಮ ಸಂಬಂಧಿಕರ ಹುಟ್ಟುಹಬ್ಬ, ಮದುವೆಯ ದಿನದ ಶುಭಾಶಯವನ್ನು ಅದರಲ್ಲಿ ಹಾಕಿ ನೆನಪು ಮಾಡುತ್ತಿದ್ದೆ. ಎಲ್ಲವನ್ನೂ ಕಂಪ್ಯೂಟರಲ್ಲಿ ಟೈಪ್ ಮಾಡಿ ಒಂದು ಐವತ್ತು ಪ್ರತಿಗಳನ್ನು ಝೆರಾಕ್ಸ್ ಮಾಡಿ ಅಂಚೆಯಲ್ಲಿ ಎಲ್ಲರಿಗೂ ಕಳಿಸಿ, ಅವರು ಮೊಬೈಲಿನಲ್ಲಿ, ಅಂಚೆಯಲ್ಲಿ ಪೋನ್ ನಲ್ಲಿ ನೀಡಿದ ಪ್ರತಿಕ್ರಿಯೆಗಳನ್ನು ಕೊನೆಯ ಪುಟದಲ್ಲಿ ಸಂಗ್ರಹಿಸಿ ಹಾಕುತ್ತಿದ್ದೆ. ಸುಮಾರು ಒಂದುವರೆ ವರ್ಷಗಳ ಕಾಲ ಅದನ್ನು ಆಸಕ್ತಿಯಿಂದ ನಡೆಸಿದೆ. ನಂತರ ಆಫೀಸಿನ ಕೆಲಸಗಳ ಮಧ್ಯ ಅದೂ ಬೋರ್ ಅನ್ನಿಸಿ ನಿಲ್ಲಿಸಬೇಕಾಯಿತು.

ಉದ್ಯೋಗದಲ್ಲಿದ್ದಾಗ ಅನಿವಾರ್ಯವಾಗಿ ನನ್ನನ್ನು ತೊಡಗಿಸಿಕೊಂಡು ನನ್ನ ಜೀವವಾದ ಯಕ್ಷಗಾನವನ್ನೇ ಹತ್ತಾರು ವರ್ಷ ದೂರ ಮಾಡಿದೆನಲ್ಲ ಎಂದು ಕೆಲವೊಮ್ಮೆ ಅನ್ನಿಸಿ ಮನಸ್ಸಿನಲ್ಲಿ ಅದೇ ಕೊರೆಯತೊಡಗಿತು. ಮಂಗಳೂರಿನಲ್ಲಿ ಲೆಕ್ಕಾಧಿಕಾರಿಯಾಗಿ ಇರುವಾಗ ಅಪ್ಪಯ್ಯನ ನೆನಪು ಇದ್ದಕ್ಕಿದ್ದ ಹಾಗೆ ತೀವ್ರವಾಗಿ ಕಾಡಲು ಶುರುವಾಯಿತು. ಅವರ ನೆನಪುಗಳನ್ನು ಈ ಪ್ರಪಂಚ ಶಾಶ್ವತವಾಗಿ ಮರೆಯುವ ಮೊದಲು, ಮತ್ತೆ ಅವರನ್ನು, ಅವರ ಅಭಿಮಾನಿಗಳು ನೆನಪಿಸಿಕೊಳ್ಳುವಂತೆ ಮಾಡಬೇಕು ಎನ್ನಿಸಲೂ ಶುರುವಾಯಿತು.

ಆಗಲೇ ಶ್ರೀಧರಣ್ಣಯ್ಯ ಅಪ್ಪಯ್ಯನ ನೆನಪಿನಲ್ಲಿ  ಒಂದು ಪ್ರಶಸ್ತಿಯನ್ನು  ಒಬ್ಬ ಹಿಮ್ಮೇಳದ ಕಲಾವಿದರಿಗೆ ನೀಡುವ ಬಗ್ಗೆ, ಒಂದು ಕುಟುಂಬ ನಿಧಿಯನ್ನು ತನ್ನ ಗರಿಷ್ಠ ಪಾಲಿನೊಂದಿಗೆ ಉಡುಪಿಯ ಯಕ್ಷಗಾನ ಕಲಾರಂಗಕ್ಕೆ  ನೀಡಿದ್ದ. ಕಲಾರಂಗದ ಆಟದ ಸಮಯದಲ್ಲಿ  ಅವರು ಅಪ್ಪಯ್ಯನ ಒಡನಾಡಿಯಾಗಿದ್ದ ಯಾವುದಾದರೂ ಒಬ್ಬ ಕಲಾವಿದರಿಗೆ ಆ ನಿಧಿಯ ಬಡ್ಡಿಯಲ್ಲಿ ಪ್ರಶಸ್ತಿಯನ್ನು ನೀಡಿ ಸನ್ಮಾನವನ್ನು ಮಾಡಿಕೊಂಡು ಬರುತ್ತಿದ್ದು, ಅದನ್ನು ಈಗಲೂ ನವಂಬರ್ ನಲ್ಲಿ ಮಾಡುತ್ತಾ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಆಗಲೇ  ಅಪ್ಪಯ್ಯ ನಮ್ಮನ್ನು ಅಗಲಿ ಇಪ್ಪತ್ತೈದು ವರ್ಷಗಳಾಗುತ್ತಾ ಬಂದಿತ್ತು. ಒಂದು ಪೂರ್ತಿದಿನದ ಕಾರ್ಯಕ್ರಮವನ್ನು ನಮ್ಮ ಮೂಲಮನೆ ಚೇರಿಕೆಯಲ್ಲಿ ಮಾಡಬೇಕು ಎಂದು ನಿರ್ಣಯಿಸಿದೆ. ಅಣ್ಣಂದಿರಿಗೆ, ಅಣ್ಣನ ಅಕ್ಕನ ಮಕ್ಕಳಂದಿರಿಗೆ ಎಲ್ಲರಿಗೂ ಪತ್ರ ಬರೆದು ನನ್ನ ಆಲೋಚನೆಯನ್ನು ತಿಳಿಸಿದೆ. ಅವರೆಲ್ಲರೂ ಅದಕ್ಕೆ ಸಹಕಾರ ಕೊಡುವುದಾಗಿ ಭರವಸೆಯಿತ್ತರು. 2009 ಎಪ್ರಿಲ್ 12ರಂದು, ಅಪ್ಪಯ್ಯ ನಮ್ಮನ್ನು ಅಗಲಿ ಸರಿಯಾಗಿ ಇಪ್ಪತ್ತೈದು ವರ್ಷದ ದಿನ, ಒಂದು ಇಡೀ ದಿನದ, ಅಂದರೆ ಬೆಳಿಗ್ಗೆ ಎಂಟು ಗಂಟೆಗೆ ಪ್ರಾರಂಭವಾದರೆ ರಾತ್ರಿ ಒಂದು ಬಯಲಾಟ ಮಾಡಿ ಅದು ಮುಗಿಯುವವರೆಗೆ ಒಂದೊಂದು ಗಂಟೆಯ ವಿವಿಧ ಕಾರ್ಯಕ್ರಮಗಳು, ಬೆಳಿಗ್ಗೆ ಲಲಿತಾಸಹಸ್ರನಾಮದಿಂದ ತೊಡಗಿ, ಭಜನೆ, ಕಾವ್ಯವಾಚನ, ಅಪ್ಪಯ್ಯನ ಶಿಷ್ಯರಿಂದ ಗಾನವೈವಿಧ್ಯ, ಹಿಮ್ಮೇಳ ಮತ್ತು ಕರ್ನಾಟಕ ಸಂಗೀತದ ಒಂದು ಪ್ರಯೋಗ, ಮನೆಯವರೆಲ್ಲರೂ ಸೇರಿ ಅವರವರ ಪ್ರತಿಭಾಪ್ರದರ್ಶನ, ರಾತ್ರಿ ಒಂದು ಗಡದ್ದು ಆಟ, ಮಧ್ಯದಲ್ಲಿ ಒಂದು ಸಭಾಕಾರ್ಯಕ್ರಮ. ಅದರಲ್ಲಿ ನಮ್ಮ ಕುಟುಂಬದಲ್ಲಿಯೇ ಹೆಚ್ಚಿನ ಸಾಧನೆ ಮಾಡಿದವರಿಗೆ, ಅಪ್ಪಯ್ಯನ ಸಾಕು ಮಗನಾದ ಚಂದ್ರ ಭಟ್ಟರಿಗೆ ಸನ್ಮಾನ, ಹೀಗೆ ಕಾರ್ಯಕ್ರಮಗಳನ್ನು ರೂಪಿಸಿ ಎಲ್ಲರಿಗೂ ತಿಳಿಸಿದೆ.

ಮನೆಯಲ್ಲಿ ಸಣ್ಣಪುಟ್ಟ ರಿಪೇರಿ ಕೆಲಸಗಳನ್ನು ಮಾಡಲು ಸುಣ್ಣಬಣ್ಣ ಹೊಡೆಸಲು ದಾಮೋದರಣ್ಣಯ್ಯನ ಮಗನಿಗೆ ಹೇಳಿ ಮಾಡಿಸಿದೆ. ಮನೆಯವರೆಗೂ ರಸ್ತೆ ಸೌಕರ್ಯವಿರಲಿಲ್ಲ. ಬುಲ್ಡೋಜರ್ ತರಿಸಿ, ಪಕ್ಕದ ಸ್ಥಳದ ಯಜಮಾನರನ್ನು ವಿನಂತಿಸಿ, ಮಧ್ಯದ ಎತ್ತರದ ಧರೆಯನ್ನು ಬೀಳಿಸಿ, ದನಗಳು ಓಡಾಡುವ, ನೀರು ಹರಿಯುವ ತಗ್ಗಿನ ಓಣಿಯನ್ನೂ ಮುಚ್ಚಿ ದಾರಿಯ ಬದಿಯ ಮರಗಳನ್ನೂ ಕಡಿದು ಮನೆಯವರೆಗೆ ರಸ್ತೆಯನ್ನೂ ಮಾಡಿದ್ದಾಯಿತು. ಅದೇ ಸಮಯದಲ್ಲಿ ಶ್ರೀ ರಾಘವ ನಂಬಿಯಾರ್ ರವರನ್ನು ಭೇಟಿಯಾಗಿ, ಅಪ್ಪಯ್ಯನ ಬಗ್ಗೆ ಒಂದು ಲೇಖನವನ್ನು ಬರೆದುಕೊಡಲು ವಿನಂತಿಸಿದೆ. ಅವರು ಸಂತೋಷದಿಂದ ಒಪ್ಪಿ ಕೂಡಲೇ ಬರೆದುಕೊಟ್ಟರು. ಅದನ್ನು ಉದಯವಾಣಿಗೆ, ಪ್ರಜಾವಾಣಿ ಪತ್ರಿಕೆಗಳಿಗೆ ಕಳಿಸಿ ಪ್ರಕಟಿಸಲು ವಿನಂತಿಸಿದ ಮೇರೆಗೆ, ಅದೇ ಸಮಯದಲ್ಲಿ ಅದು ಪ್ರಕಟವೂ ಆಗಿ, ಸಂತೋಷವಾಯಿತು. ಮನೆಯ ಹತ್ತಿರದ ಮಕ್ಕಿಗದ್ದೆಯಲ್ಲಿ ಒಂದು ರಂಗಸ್ಥಳ ನಿರ್ಮಿಸಿ ಒಂದು ದೊಡ್ಡ ಟೆಂಟ್ ಹಾಕಿ ಎಲ್ಲವನ್ನೂ ಸಿದ್ಧಮಾಡಿದ್ದಾಯಿತು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ