ಮಂಗಳವಾರ, ನವೆಂಬರ್ 21, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 62

ಸುಮಾರು ಅದೇ ಸಮಯದಲ್ಲಿ ಅಪ್ಪಯ್ಯ ಬರೆದ ಪ್ರಸಂಗ “ಸತ್ಯಂ ವದ ಧರ್ಮಂ ಚರ” ಎಂಬ ಯಕ್ಷಗಾನ ಪ್ರಸಂಗವನ್ನು ಪ್ರಿಂಟ್ ಮಾಡುವ ಉದ್ದೇಶವಿಲ್ಲದಿದ್ದರೂ, ಒಮ್ಮೆ ಪಿಡಿಎಫ್ ಮಾಡಿಯಾದರೂ ಇಟ್ಟುಕೊಳ್ಳಬೇಕು ಎನ್ನಿಸಿತು. ಆಗಲೇ ಅಪ್ಪಯ್ಯನ ಕೈಬರಹದಲ್ಲಿರುವ ಆ ಪ್ರಸಂಗದ ಹಸ್ತ ಪ್ರತಿಯನ್ನು ನೋಡಿ, ಮುಂಬೈಯ ಪದವೀಧರ ಯಕ್ಷಗಾನ ಸಮಿತಿಯವರು ಬೇರೆ ಹಲವಾರು ಪ್ರಸಂಗಗಳ ಜೊತೆಗೆ, ಅದನ್ನೂ ಮುದ್ರಣ ಮಾಡಿದ್ದರು. ಆದರೆ ಅವರು ಅಪ್ಪಯ್ಯನು ರಂಗಕ್ಕೆ ಬೇಕಾಗುವಂತೆ ಮಧ್ಯ ಮಧ್ಯ ಕೆಲವು ಪದ್ಯಗಳನ್ನೂ, ನೋಟ್ ನಂತೆ ಬರೆದು ಇಟ್ಟಿದ್ದು, ಅದನ್ನೂ ಸೇರಿಸಿ ಅವಸರದಲ್ಲಿ ಮುದ್ರಿಸಿದ್ದುದರಿಂದ, ಅದರಲ್ಲಿ ಹಲವಾರು ದೋಷಗಳು ಇದ್ದಿತ್ತು. ನನ್ನ ಹತ್ತಿರ ಬೇರೆ ಪ್ರತಿಗಳು ಇರಲಿಲ್ಲ.

 ಒಮ್ಮೆ ಸುಬ್ರಮಣ್ಯ ಧಾರೇಶ್ವರರು  ಸಿಕ್ಕಾಗ “ನಿಮ್ಮಲ್ಲಿ ಆ ಪ್ರಸಂಗ ಇದ್ದರೆ ಒಮ್ಮೆ ಕೊಡಬಹುದೇ?” ಎಂದು ಕೇಳಿದೆ. ಆ ಪ್ರಸಂಗವನ್ನು ಅಪ್ಪಯ್ಯ ಶ್ರೀಧರಣ್ಣಯ್ಯನ ಸಹಾಯದಿಂದಲೇ ಬರೆದದ್ದಾಗಿದ್ದು, ಶ್ರೀಧರಣ್ಣಯ್ಯನ ಕೈಬರಹದ ಒಂದು ಪ್ರತಿಯನ್ನು ಧಾರೇಶ್ವರರು ಜೋಪಾನವಾಗಿ ಇಟ್ಟುಕೊಂಡಿದ್ದರು, ನಾನು ಕೇಳಿದ ಕೂಡಲೇ ಅದನ್ನು ಹುಡುಕಿ ಕಳುಹಿಸಿಕೊಟ್ಟರು. ನಾನು ಅದನ್ನು ಕಂಪ್ಯೂಟರ್ ಲ್ಲಿ ಟೈಪ್ ಮಾಡಿದೆ. ಹಲವಾರು ಪದ್ಯಗಳನ್ನು ಪುನರ್ರಚಿಸಬೇಕಾಯಿತು. ಪದ್ಯಗಳು ಹೆಚ್ಚಾಯಿತು ಅನ್ನಿಸಿ, ಒಂದೆರಡು ದೃಶ್ಯಗಳನ್ನು ತೆಗೆದು, ಸರಿ ಮಾಡಿ ಕೊಡಲು ಶ್ರೀಧರಣ್ಣಯ್ಯನಿಗೆ ಕೊಟ್ಟೆ. ಅವನೂ ಕೆಲವೊಂದು ತಿದ್ದುಪಡಿ ಮಾಡಿ ಪರಿಷ್ಕರಿಸಿದ ಮೇಲೆ, ಅದನ್ನು ಪಿಡಿಎಫ್ ಮಾಡಿ ಯಾರಾದರೂ ನೋಡಿ ಓದುವುದಾದರೆ ಓದಿಕೊಳ್ಳಲಿ ಎಂದು ಅಪ್ಪಯ್ಯನ ಫೇಸ್ ಬುಕ್ ನ ಪೇಜಿಗೆ ಎಟ್ಯಾಚ್ ಮಾಡಿ ಹಾಕಿಬಿಟ್ಟೆ.

ಹೊಸದಾಗಿ ಪ್ರಾರಂಭವಾದ ಕುಂದಾಪುರ ವಿಭಾಗಕ್ಕೆ 2011 ರ ಫೆಬ್ರವರಿಯಲ್ಲಿ ನಾನು ವರ್ಗವಾಗಿ ಬಂದಾಗ ಅಲ್ಲಿ ನನ್ನ ಬಹುಕಾಲದ ಸ್ನೇಹಿತರೂ ಆದ  ಜಗದೀಶ ರಾವ್  ಎನ್ನುವವರು ನನ್ನ ಸಹೋದ್ಯೋಗಿಯಾಗಿದ್ದರು. ಅವರು ಆಫೀಸಿನಲ್ಲಿ ಲೆಕ್ಕವಿಭಾಗದಲ್ಲಿ ಕೆಲಸ ಮಾಡಿಸುವ ಬಾಸ್ ಆದರೆ, ನಾನು ಅವರ ಕೆಲಸಗಳನ್ನು ಆಡಿಟ್ ಮಾಡುವ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ನಮ್ಮಲ್ಲಿ, ಸಾಮಾನ್ಯವಾಗಿ ಆಡಿಟ್ ನವರು ಎಂದರೆ ‘ಎಲ್ಲದರಲ್ಲೂ ತಪ್ಪು ಕಂಡು ಹಿಡಿದು, ಇಕ್ಕಟ್ಟಿಗೆ ಸಿಲುಕಿಸಿ ಚಂದ ನೋಡುವವರು’ ಅಂತ ಇತ್ತು. ಯಾಕೆಂದರೆ ಅವರು ತಪ್ಪನ್ನು ಹುಡುಕಿ ದೊಡ್ಡದು ಮಾಡಿ ಹೇಳುತ್ತಾರೆಯೇ ಹೊರತು, ಅದನ್ನು ಸರಿಮಾಡುವುದು ಹೇಗೆ? ಎಂದು ಹೇಳುವುದಿಲ್ಲ. ಆದರೆ ನಾನು ಜಗದೀಶರ ಜೊತೆಗೆ ಸೇರಿ, ಅವರು ಕೆಲಸ ಮಾಡುವಾಗಲೇ, ಅದನ್ನು ಪರಿಶೀಲಿಸಿ ತಪ್ಪಿದ್ದರೆ ಅಲ್ಲಿಯೇ ಸರಿಪಡಿಸಿ ಆದಷ್ಟು ನ್ಯೂನತೆಗಳಾಗದಂತೆ ನೋಡಿ ಎಚ್ಚರ ವಹಿಸುತ್ತಿದ್ದೆ.

ಹಾಗಾಗಿ ನಮ್ಮಲ್ಲಿ ಸಮಸ್ಯೆಗಳು ಎಲ್ಲ  ಕಛೇರಿಗಳಿಗಿಂತ ಕನಿಷ್ಟ ಮಟ್ಟದಲ್ಲಿ ಇದ್ದು, ಆಗಾಗ ನಡೆಯುವ ಮೀಟಿಂಗ್ ಗಳಲ್ಲಿ ಮೇಲಧಿಕಾರಿಗಳು, “ನಿಮ್ಮಿಬ್ಬರದೂ ಮ್ಯಾಚ್ ಪಿಕ್ಸಿಂಗೋ?” ಎಂದು ತಮಾಷೆಗೆ ಹೇಳುವವರೆಗೂ ಹೋಯಿತು. ಆಗ ನಮಗೆ ವಿಭಾಗಾಧಿಕಾರಿಗಳಾಗಿದ್ದ ಮಹದೇವಪ್ಪ ಎನ್ನುವವರೂ ಒಬ್ಬ ದಕ್ಷ ಪ್ರಾಮಾಣಿಕ ಅಧಿಕಾರಿಗಳಾಗಿದ್ದು, ನಮಗೆ ತುಂಬಾ ಸಪೊರ್ಟ್ ಮಾಡುತ್ತಿದ್ದರು. ಅವರಿಗೂ ನಮ್ಮ ಕೆಲಸ, ಗುಣಸ್ವಭಾವಗಳ ಮೇಲೆ ತೃಪ್ತಿಯಾಗಿ “ನೀವಿಬ್ಬರು ಅಧಿಕಾರಿಗಳು ನನ್ನ ಎರಡು ಭುಜಗಳು” ಎನ್ನುತ್ತಿದ್ದರು. ಆಗ ನಮ್ಮ ಕುಂದಾಪುರ ವಿಭಾಗಕ್ಕೆ ಉತ್ತಮವಾದ ಆಫೀಸು ಎಂದು ಪ್ರಶಸ್ತಿಗಳು ಬಂದಿದ್ದವು. ಒಂದು ವರ್ಷದಲ್ಲಿಯೇ ನನಗೂ ಜಗದೀಶರಿಗೂ ಕೆಲಸದಲ್ಲಿ ಅದಲುಬದಲು ಆಗಿ ಆದೇಶವಾಯಿತು. ನನಗೆ ಅಲ್ಲಿಯ ಲೆಕ್ಕಪತ್ರಗಳ ಎಲ್ಲ ವ್ಯವಹಾರಗಳೂ ತಿಳಿದಿದ್ದರಿಂದ ಅದರಿಂದ ಅಂತಹ ವ್ಯತ್ಯಾಸವೇನೂ ಆಗಲಿಲ್ಲ. 2016 ರ ಅಂತ್ಯದಲ್ಲಿ ನನಗೆ ನನ್ನ ಊರಾದ ಉಡುಪಿಗೆ ವರ್ಗವಾಯಿತು.

2014 ರಲ್ಲಿ ಮತ್ತೊಮ್ಮೆ ಅಪ್ಪಯ್ಯನ ಮುವ್ವತ್ತನೇ ವರ್ಷದ ಪುಣ್ಯ ತಿಥಿಯನ್ನು ವಿಶೇಷವಾಗಿ ಆಚರಿಸಬೇಕೆಂದು ಮನಸ್ಸಾಯಿತು. ಆಗ ಎರಡು ದಿನದ ಕಾರ್ಯಕ್ರಮವನ್ನು ನಮ್ಮ ಅಂಬಾಗಿಲಿನ ಮನೆಯ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಪೆಂಡಾಲ್ ಹಾಕಿ ಮಾಡಿದ್ದೆವು. ಮೊದಲ ದಿನ ಅಪ್ಪಯ್ಯನ ಶ್ರಾದ್ಧವಿಧಿಗಳನ್ನು ಪೂರೈಸಿದ ನಂತರ, ಮಧ್ಯಾಹ್ನ ಊಟದ ನಂತರ ನೆಬ್ಬೂರು ನಾರಾಯಣ ಭಾಗವತರನ್ನು ಕರೆಸಬೇಕೆಂದು ನಿರ್ಣಯಿಸಿ ನಮ್ಮ ಕೊಲ್ಲೂರು ಜೋಯಿಸರಿಗೆ ಹೇಳಿದೆ. ಅವರು ಕೊಲ್ಲೂರಿನ ನರಸಿಂಹ ಭಟ್ಟರ ಮೂಲಕ ನೆಬ್ಬೂರರನ್ನು ಮಾತಾಡಿಸಿ ಒಪ್ಪಿಸಿದರು. ನನ್ನ ಸ್ನೇಹಿತರಾದ ಹೆಗ್ಗರಣೆ ಕೇಶವ ನಾಯ್ಕರು ನೆಬ್ಬೂರರನ್ನು ಕರೆದುಕೊಂಡು ಬರುವ ಹೊಣೆ ಹೊತ್ತುಕೊಂಡರು. ನೆಬ್ಬೂರರು ಮಧ್ಯಾಹ್ನದಿಂದ ಸಂಜೆಯವರೆಗೂ ಅವರ ಇಷ್ಟದ ಅನೇಕ ಪದ್ಯಗಳನ್ನು ಹಾಡಿದರು. ಮದ್ದಲೆವಾದನಕ್ಕೆ ಬಿದ್ಕಲ್ ಕಟ್ಟೆ ಕೃಷ್ಣಯ್ಯ ಆಚಾರ್ ಇದ್ದರು.

ನಂತರ ಅವರ ಜೊತೆಗೆ ಸಾಲಿಗ್ರಾಮ ಮಕ್ಕಳ ಮೇಳದ ಭಾಗವತರಾದ ಹೆಚ್. ಶ್ರೀಧರ ಹಂದೆಯವರೂ, ಅವರ ಮಗ ಸುಜಿಯೀಂದ್ರ ಹಂದೆಯೂ ಸೇರಿಕೊಂಡು ಹಾಡಿದರು. ಅಂದು ಒಟ್ಟಿಗೇ ಹಾಡಿದ ಬಬ್ರುವಾಹನ ಕಾಳಗದ, ಕೃಷ್ಣಾರ್ಜುನ ಕಾಳಗದ ಪದ್ಯಗಳು ಅನ್ಯಾದೃಶವಾಗಿ ಮೂಡಿಬಂದು ಕೇಳಿದ ನಮಗೆಲ್ಲ ಅತ್ಯಂತ ಆನಂದವಾಯಿತು. ಸಂಜೆ ನೆಬ್ಬೂರರವರನ್ನು ಹಣ್ಣುತುಂಬಿದ ಹರಿವಾಣ, ಶಾಲು ಕಾಣಿಕೆಗಳನ್ನು ಸಮರ್ಪಿಸಿ ಸನ್ಮಾನವನ್ನು ಮಾಡಿದೆವು. ಮನೆಯವರೇ  ಸುಮಾರು ಅರವತ್ತು ಎಪ್ಪತ್ತು ಜನ ಒಟ್ಟಿಗೇ ಅಂದು ಭಾಗವಹಿಸಿದ್ದು, ನಂತರ ನೆಬ್ಬೂರರು ಆತ್ಮೀಯವಾಗಿ ಮಾತನಾಡಿ, “ಉಪ್ಪೂರರು ನನಗೆ ನೇರ ಗುರುಗಳಲ್ಲದಿದ್ದರೂ, ಸುಮಾರು ಎರಡು ವರ್ಷ ಇಡಗುಂಜಿ ಮೇಳದಲ್ಲಿ ಅವರು ಭಾಗವತಿಕೆ ಮಾಡುತ್ತಿದ್ದ ವರ್ಷ ಅವರಿಗೆ ಸಂಗೀತಗಾರನಾಗಿದ್ದು ಸಂಗೀತ ಮಾಡಿದ ನಂತರ, ಇಡೀ ರಾತ್ರಿ ಹಾರ್ಮೋನಿಯಂ ಬಾರಿಸುತ್ತಿದ್ದೆ. ಹಾಗಾಗಿ ನನ್ನ ಪದ್ಯಗಳಲ್ಲಿ, ಆಟದ ನಡೆಯಲ್ಲಿ ಉಪ್ಪೂರರ ಛಾಯೆ ಗಾಢವಾಗಿದ್ದು ತಾನೂ ಉಪ್ಪೂರರ ಶಿಷ್ಯನೇ” ಎಂದು ಹೃದಯ ತುಂಬಿ ಮಾತನಾಡಿದರು.

ರಾತ್ರಿ ನಮ್ಮ ಮನೆಯಲ್ಲಿ, ನಮ್ಮ ಹತ್ತಿರ ಸಂಬಂಧಿಕರೇ ಸುಮಾರು ಎಪ್ಪತ್ತು ಎಪ್ಪತೈದು ಜನ ಸೇರಿದ್ದು ಅದೊಂದು ಕೌಟುಂಬಿಕ ಕಾರ್ಯಕ್ರಮವಾಗಿದ್ದು ನಮ್ಮ ನಮ್ಮ ಸುಖಕಷ್ಟಗಳನ್ನು ಹಂಚಿಕೊಂಡು ಊಟ ಮಾಡಿ ಮಲಗಿದೆವು. ಬೆಳಿಗ್ಗೆ ಆರು ಗಂಟೆಗೇ ಎಲ್ಲರೂ ಸಿದ್ಧರಿರಬೇಕು ಎಂದು ಎಚ್ಚರಿಸಿದ್ದರಿಂದ. ಮತ್ತೆ ಬೆಳಿಗ್ಗೆ ಎಲ್ಲರೂ ಬಂದು ಸಿದ್ಧರಾದೆವು. ನನ್ನ ಅಕ್ಕನ ಮಗಳು ವೀಣ, ಯೋಗ ಟೀಚರ್ ಆಗಿ ಬೆಂಗಳೂರಿನಲ್ಲಿ ಯೋಗ ತರಗತಿಗಳನ್ನು ನಡೆಸುತ್ತಿದ್ದವಳು, ಸುಮಾರು ಒಂದು ಗಂಟೆಯಲ್ಲಿ ಹಲವಾರು ಆಸನ ಪ್ರಾಣಾಯಾಮಗಳನ್ನು ಮಾಡಿತೋರಿಸಿ, ನಂತರ ನಮಗೆಲ್ಲಾ ಕೆಲವು ಯೋಗಾಸನ ಪ್ರಾಣಾಯಾಮಗಳನ್ನು ಹೇಳಿಕೊಟ್ಟು ಮಾಡಿಸಿದಳು. ನಂತರ ಕಾಫಿ ತಿಂಡಿಯಾಯಿತು. ಅದು ಮುಗಿದ ಕೂಡಲೇ ಕೃಷ್ಣಮೂರ್ತಿಯಣ್ಣಯ್ಯನಿಂದ ಚಿತ್ರಕಲೆಯ ಬಗ್ಗೆ ಒಂದು ಗಂಟೆಯ ಪ್ರಾತ್ಯಕ್ಷಿಕೆ ನಡೆಯಿತು. ಅದು ಅವನ ಮೆಚ್ಚಿನ ಕಲೆಯಾಗಿದ್ದು ಮೊದಲು ಅವನು ಬಿಡಿಸಿದ ಅನೇಕ ಚಿತ್ರಗಳು ಪತ್ರಿಕೆಗಳಲ್ಲೂ ಪ್ರಕಟವಾಗಿತ್ತು. ನಂತರ ರಮೇಶಣ್ಣಯ್ಯನ ಮಕ್ಕಳಾದ ಅಶೋಕ, ಅಶ್ವಿನಿಯರಿಂದ ರಮೇಶಣ್ಣಯ್ಯನ ನೆನಪುಗಳು ಅಂತ ಒಂದು ಗಂಟೆಯ ಕಾರ್ಯಕ್ರಮವಾಯಿತು.

 ರಮೇಶಣ್ಣಯ್ಯ ಒಬ್ಬ ಬರಹಗಾರನಾಗಿದ್ದು ಅನೇಕ ಪತ್ರಿಕೆಗಳಲ್ಲಿ ಅವನ ಕತೆಗಳು ಕವನಗಳು ಪ್ರಕಟವಾಗಿದ್ದು, ಒಮ್ಮೆ ಉದಯವಾಣಿ ವಿಶೇಷಾಂಕದಲ್ಲಿ ಅವನ ಕತೆಗೆ ಬಹುಮಾನವೂ ಬಂದಿತ್ತು. ಅಲ್ಲದೇ ಅವನು ಕ್ಯಾಮೆರಾ ಇಟ್ಟುಕೊಂಡು ಹಲವು ಪೋಟೋ ತೆಗೆದು ಅವನೇ ಕತ್ತಲೆ ಕೋಣೆಯಲ್ಲಿ ಕೆಮಿಕಲ್ ಹಾಕಿ ರೀಲ್ ತೊಳೆದು ಪೋಟೋ ಮಾಡುತ್ತಿದ್ದ. ಟೇಪ್ ರೆಕಾರ್ಡರ್ ಹಿಡಿದುಕೊಂಡು ಆಟಕ್ಕೆ ಹೋಗಿ ಆಟದ ಹಲವು ದಾಖಲೆಗಳನ್ನು ಸಂಗ್ರಹಿಸಿದ್ದ. ಅವನು ಸಿಂಡಿಕೇಟ್ ಬ್ಯಾಂಕಿನಲ್ಲಿ ಆಫೀಸರ್ ಆಗಿದ್ದು ಅಹಮದಾಬಾದಿನಲ್ಲಿ ಕೆಲಸ ಮಾಡುತ್ತಿದ್ದಾಗಲೇ ಹೃದಯಾಘಾತವಾಗಿ ತೀರಿಕೊಂಡಿದ್ದ. ಅವನ ಮಕ್ಕಳಿಂದ ಅವನ ಪುಣ್ಯಸ್ಮರಣೆಯಾಯಿತು. ನಂತರ ಶ್ರೀಧರಣ್ಣಯ್ಯನ ಒಂದು ಗಂಟೆಯ ಉಪನ್ಯಾಸ. ಅವನೂ ಯಕ್ಷಗಾನ ಪರಂಪರೆ ಮತ್ತು ಪ್ರಯೋಗ ಎಂಬ ವಿಷಯದಲ್ಲಿ ವಿಶೇಷವಾಗಿ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದವನು. ಬಸ್ರೂರಿನ ಶಾರದಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕನಾಗಿದ್ದ. ಹಲವಾರು ಯಕ್ಷಗಾನ ಪ್ರಸಂಗವನ್ನು ಬರೆದಿದ್ದ. ಅವನ ಬದುಕಿನ ಕೆಲವು ಅನುಭವಗಳನ್ನು, ಯಕ್ಷಗಾನದ ಬಗ್ಗೆ ಅವನ ನಿಲುವು ಮತ್ತು ಅಪ್ಪಯ್ಯನ ನೆನಪುಗಳನ್ನು ಹಂಚಿಕೊಂಡ.

ನಂತರ ಮಧ್ಯಾಹ್ನ ಊಟವಾಗಿ ಮತ್ತು ನನ್ನ ಅಕ್ಕನ ಮಗಳು ಮಾಲತಿ ಮತ್ತು ಜನಾರ್ದನ ಹಂದೆಯವರು, ಗಂಡ ಹೆಂಡತಿಯರು ಸೇರಿ, ಒಂದು ಗಂಟೆಯ ವಿವಿಧ ವಿನೋದಾವಳಿಯ ಪ್ರದರ್ಶನವನ್ನು ನಡೆಸಿಕೊಟ್ಟರು. ಬಳಿಕ ಸುರೇಶಣ್ಣಯ್ಯ ಮತ್ತು ಗೌರೀಶಣ್ಣಯ್ಯ ಸೇರಿ ಮದ್ದಲೆಯ ಹಲವು ದಸ್ತುಗಳನ್ನು ಬಾರಿಸಿ ರಂಜಿಸಿದರು. ಅವರ ಜೊತೆಗೆ ಸುಜಿಯೀಂದ್ರ ಹಂದೆಯೂ ಸೇರಿಕೊಂಡು ಕೆಲವು ಪದ್ಯಗಳನ್ನು ಹೇಳಿದರು. ಆಮೇಲೆ ನಾನೂ ನನ್ನ ಅಕ್ಕನ ಮಗ ವೆಂಕಟೇಶ ಹಂದೆಯೂ ಸೇರಿಕೊಂಡು ಅಲ್ಲಿ ಇದ್ದ ಕೆಲವರಿಗೆ ಕುಣಿತದ ಕೆಲವು ಹೆಜ್ಜೆಗಳನ್ನು ಒಂದು ಗಂಟೆಯಲ್ಲಿ ಕಲಿಸಿಕೊಟ್ಟೆವು. ಅದಾದ ಮೇಲೆ ಮನೆಯ ಮಕ್ಕಳು, ಹೆಂಗಸರಿಂದ ಹಾಡು, ಕಿರುನಾಟಕ ಮುಂತಾದ ಮನೋರಂಜನೆಯ ಕಾರ್ಯಕ್ರಮಗಳು ನಡೆದವು. ಆಮೇಲೆ ಆ ದಿನದ ಎಲ್ಲ ಕಾರ್ಯಕ್ರಮದ ನಿರೂಪಣೆ ಮಾಡಿದ ಮಾಧುರಿ ಶ್ರೀರಾಮ್ ಒಟ್ಟು ಕಾರ್ಯಕ್ರಮದ ಅವಲೋಕನ ಮಾಡಿ, ಅಪ್ಪಯ್ಯನ ನೆನಪುಗಳನ್ನು ಹಂಚಿಕೊಳ್ಳಲು ಅಲ್ಲಿ ನೆರೆದ ಎಲ್ಲರಿಗೂ ಅವಕಾಶ ಮಾಡಿಕೊಟ್ಟಳು. ಎಸ್. ವಿ. ಭಟ್ಟರು, ಸುಜಯೀಂದ್ರ ಹಂದೆ, ಚಂದ್ರ ಭಟ್ಟರೂ ಸೇರಿ ಎಲ್ಲರೂ ಅಪ್ಪಯ್ಯನ ನೆನಪುಗಳನ್ನು ಮಾಡಿಕೊಂಡು ಸ್ಮರಿಸಿದರು. ಅಂತೂ ಆ ದಿನ ಸುಮಾರು ಏಳು ಗಂಟೆಯವರೆಗೂ, ಆ ಕೌಟುಂಬಿಕ ಕಾರ್ಯಕ್ರಮ ನಡೆದು ಮನೆಯವರೆಲ್ಲ ಸೇರಿ ಭಾವನೆಗಳನ್ನು ಹಂಚಿಕೊಂಡ ಒಂದು ಚಿರಸ್ಮರಣೆಯ ದಿನವಾಯಿತು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ