ಭಾನುವಾರ, ನವೆಂಬರ್ 5, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 47

ಮುಲ್ಕಿಯಲ್ಲಿ ಆಫೀಸ್ ಪಕ್ಕದಲ್ಲಿ ಶಾಖಾಧಿಕಾರಿಗಳ ಕ್ವಾರ್ಟರ್ಸ್ ಖಾಲಿ ಇದ್ದುದರಿಂದ, ಆಗ ಸುರತ್ಕಲ್ ಉಪವಿಭಾಗದಲ್ಲಿ ಉಪವಿಭಾಗಾಧಿಕಾರಿಗಳಾಗಿದ್ದ ವೇಣುಗೋಪಾಲಶೆಟ್ಟಿಯವಲ್ಲಿ, ನಾನು "ಅದನ್ನು ನನಗೆ ಕೊಡಿಸಬಹುದಾ? ಶಾಖಾಧಿಕಾರಿಗಳು ಬಂದಾಗ ಬಿಟ್ಟು ಕೊಡುತ್ತೇನೆ" ಎಂದು ಕೇಳಿಕೊಂಡೆ. ಅವರು ನೋಡುವ ಎಂದು ಮೀಟಿಂಗ್ ನಲ್ಲಿ ಶಿಪಾರಸ್ಸು ಮಾಡಿ ಅದನ್ನು ನನಗೆ ಕೊಡಿಸಿದರು. ಕೊನೆಗೆ ಶಾಖಾಧಿಕಾರಿಗಳಾಗಿ ಕೃಷ್ಣಯ್ಯ ಶೆಟ್ಟರು ಎನ್ನುವವರು  ಅಲ್ಲಿಗೆ ಬಂದಾಗ, ಅವರು ನಾಲ್ಕು ಕಿಲೋಮೀಟರ್ ದೂರದ ವಿದ್ಯುತ್ ಸಬ್ ಸ್ಟೇಶನ್ ನ ಹತ್ತಿರದ ಇನ್ನೊಂದು ವಸತಿಗೃಹದಲ್ಲಿ ಇರಲು ಒಪ್ಪಿದ್ದರಿಂದ, ನನಗೆ ಅಲ್ಲಿಯೇ ಮುಂದುವರಿಯಲು ಅವಕಾಶವಾಯಿತು. ಕೃಷ್ಣಯ್ಯ ಶೆಟ್ಟರು ನನ್ನಂತೆ ಆಟ, ತಾಳಮದ್ದಲೆ ಹುಚ್ಚಿನವರು. ಆದ್ದರಿಂದ ನಾವು ಬೇಗನೇ ಸ್ನೇಹಿತರಾದೆವು.

ಆಗ ಕಿನ್ನಿಗೋಳಿಯ ಯುಗಪುರುಷ ಎಂಬಲ್ಲಿ ತುಂಬಾ ತಾಳಮದ್ದಲೆಗಳು ನಡೆಯುತ್ತಿದ್ದವು. ಸಂಜೆ ಆಫೀಸ್ ಮುಗಿದ ಕೂಡಲೇ ನಾನೂ ಮತ್ತು ಶೆಟ್ಟರು ಅಲ್ಲಿ ಹಾಜರು. ನಮ್ಮಷ್ಟಕ್ಕೇ ಒಂದು ಬದಿಯಲ್ಲಿ ಕುಳಿತು ತಾಳಮದ್ದಲೆ ನೋಡಿ ಮರಳುತ್ತಿದ್ದೆವು. ಆಗಿನ ಒಂದು ಘಟನೆ ನೆನಪಾಗುತ್ತದೆ. ಒಮ್ಮೆ ಶರಸೇತು ಬಂಧ ತಾಳಮದ್ದಲೆಯಲ್ಲಿ ರಾಮದಾಸ ಸಾಮಗರು ಬರುವಾಗ ಸಭೆಯಲ್ಲಿ ಪ್ರೇಕ್ಷಕರು ಚಪ್ಪಾಳೆ ತಟ್ಟಿದರು. ಆಗ ಪ್ರೇಕ್ಷಕರ ಪ್ರೋತ್ಸಾಹ ತಮಗೆ ಕಡಿಮೆಯಾಯಿತು ಎಂದು ತಿಳಿದ, ಅರ್ಜುನ ಮಾಡಿದ ಶೇಣಿಯವರು ಅರ್ಥಗಾರಿಕೆಯಲ್ಲಿ ಹನುಮಂತ ಮಾಡಿದ ರಾಮದಾಸ ಸಾಮಗರಿಗೆ “ಎಂತ ಸಾಮಗರೇ, ನಿಮ್ಮ ಅರ್ಥದ ಶೈಲಿಯೇ ಸರಿ ಇಲ್ಲ ನೀವು ಹೀಗೆ ಅರ್ಥ ಹೇಳುತ್ತೀರಲ್ಲ?” ಎಂದು ಜಗಳಾಡಿದ್ದ ಘಟನೆ ನಡೆಯಿತು. ನಮಗೆ ಮುಂದೆ ಏನಾಗುತ್ತದೋ ಎಂಬಷ್ಟು ಗಾಬರಿ. ಅಲ್ಲಿಗೇ ತಾಳಮದ್ದಲೆ ನಿಂತು ಜಗಳ ಶುರುವಾಯಿತು. ಯಾರೊಬ್ಬರಿಗೂ ಅವರ ಎದುರು ಮಾತಾಡಲು ಧೈರ್ಯವಿಲ್ಲ. ಕೊನೆಗೆ ವ್ಯವಸ್ಥಾಪಕರು ಬಂದು ಇಬ್ಬರಲ್ಲು ಜಗಳ ನಿಲ್ಲಿಸಲು ಬೇಡಿಕೊಂಡರು. ತುಂಬಾ ಹೊತ್ತಿನ ಮೇಲೆ ಮತ್ತೆ ತಾಳಮದ್ದಲೆ ಮುಂದುವರಿಯಿತು.

ಮತ್ತೊಮ್ಮೆ ಬಪ್ಪನಾಡು ದೇವಸ್ಥಾನದಲ್ಲಿ ಒಂದು ಕಾರ್ಯಕ್ರಮ ಆಗಿತ್ತು. ಅದರಲ್ಲಿ ಕೊಳ್ಯೂರು ರಾಮಚಂದ್ರ ರಾಯರು,  ಸ್ತ್ರೀ ಪಾತ್ರದ ಅಭಿನಯ ಮತ್ತು ನರ್ತನವನ್ನು ಯಕ್ಷಗಾನದಲ್ಲಿ ಮಾಡಿದ ನಂತರ, ವಿದುಷಿ ಶ್ರೀಮತಿ ಪ್ರತಿಭಾ ಸಾಮಗರು ಅದೇ ಪದ್ಯವನ್ನು ಭರತ ನಾಟ್ಯದಲ್ಲಿ ಅಭಿನಯಿಸಿದ ಒಂದು ಅಪರೂಪದ ಪ್ರಯೋಗವೂ ಆಗಿತ್ತು.

ಮುಲ್ಕಿಯ ಆಫೀಸಿನಲ್ಲಿ ನಾನು ಹೋಗಿ ಕೆಲಸಕ್ಕೆ ಹಾಜರಾಗುವಾಗ ಅಲ್ಲಿ ತುಂಬಾ ಕೆಲಸಗಳು ಬಾಕಿಇತ್ತು. ಅಲ್ಲಿ ನಾನು ಲೆಕ್ಕಶಾಖೆಯ ಮೇಲ್ವಿಚಾರಕನಾಗಿದ್ದೆ. ನಾನು ಅದನ್ನು ಒಂದು ಹಂತಕ್ಕೆ ತರಲು ತುಂಬಾ ಹೆಣಗಬೇಕಾಯಿತು. ನನ್ನ ಹೆಂಡತಿಯನ್ನೂ ಆಗಾಗ ಆಫೀಸಿಗೆ ಕರೆದುಕೊಂಡು ಹೋಗಿ ಕೆಲಸಕ್ಕೆ ಸಹಾಯ ಪಡೆದೆ. ಕೊನೆಗೆ ಮಂಗಳೂರಿನ ನಮ್ಮ ಹೆಡ್ ಅಫೀಸಿನಲ್ಲಿ ಲೆಕ್ಕಾಧಿಕಾರಿಗಳಾದ ಗೋಪಾಲಕೃಷ್ಣ ಎನ್ನುವವರು ತಾತ್ಕಾಲಿಕವಾಗಿ ಇಬ್ಬರನ್ನು ಗುತ್ತಿಗೆಯ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟರು. ಆಗ ಅನ್ನಪೂರ್ಣಳನ್ನೇ ಆಫೀಸಿನ ಕೆಲಸಕ್ಕೂ ಸೇರಿಸಿದೆ. ನನಗೆ ಆಫೀಸೂ ಮನೆಯೂ ಒಂದೇ ಆಯಿತು. ಕೆಲವೊಮ್ಮೆ ರಾತ್ರಿ ತುಂಬಾ ಹೊತ್ತಿನ ವರೆಗೂ ಅಲ್ಲಿಯೇ ಇರುತ್ತಿದ್ದೆ.

ಶಾಖಾಧಿಕಾರಿಗಳಾದ ಕೃಷ್ಣಯ್ಯ ಶೆಟ್ಟರಂತೂ ಸಲಿಗೆಯ ಸ್ನೇಹಿತರಾಗಿಬಿಟ್ಟರು. ಅವರ ಸಿಗರೇಟಿನ ಛಟ ಬಿಡಿಸಲು ಮಾತ್ರಾ ಆಗಲಿಲ್ಲ.  ಒಮ್ಮೊಮ್ಮೆ ಕಂಬ ತುಂಡಾಗಿ ವಿದ್ಯುತ್ ಅಡಚಣೆಯಾದಾಗಲೂ “ಬನ್ನಿ ಉಪ್ಪೂರ್ರೆ, ಹೋಗಿ ಬರುವ” ಎಂದು ಅವರ ಬೈಕಿನಲ್ಲಿ ಹಿಂದೆ ನನ್ನನ್ನು ಕೂರಿಸಿಕೊಂಡು ಹೊರಡುತ್ತಿದ್ದರು.  ನಾನು ಆಫೀಸಿನಲ್ಲಿ ಲೆಕ್ಕಪತ್ರಗಳ ಕೆಲಸ ಮಾತ್ರಾ ನೋಡಬೇಕಾಗಿದ್ದು, “ನಾನು ಸುಮ್ಮನೇ ಯಾಕೆ ಮರ್ರೆ” ಎಂದರೂ ಕೇಳುತ್ತಿರಲಿಲ್ಲ. ಬಾರಕೂರಿನ ಹತ್ತಿರದ ಊರಿನವರಾದ ಅವರು ಶುದ್ಧ ಕುಂದಾಪುರ ಭಾಷೆಯಲ್ಲಿ “ಮನೆಯಲ್ಲಿ ಕೂತ್ಕಂಡ್ ಎಂತ ಮಾಡ್ತ್ರಿ. ಬನ್ನಿ ಕಾಂಬ” ಎಂದು ಎಲ್ಲ ತಿರುಗಾಟಕ್ಕೂ  ಎಳೆದುಕೊಂಡೇ ಹೋಗುತ್ತಿದ್ದರು.

ನನ್ನ ಕೈಕೆಳಗೆ ಕೆಲಸ ಮಾಡುವವರು ಒಳ್ಳೆಯ ಕೆಲಸಗಾರರೂ ಆಗಿದ್ದರಿಂದ ನಾನು ಮುಲ್ಕಿಯಿಂದ ಪ್ರಮೋಶನ್ ಆಗಿ ಉಡುಪಿಗೆ ಬರುವಾಗ ನಮ್ಮದು ಒಂದು ಅತ್ಯುತ್ತಮ ಶಾಖೆ ಎಂದು ಹೊಗಳುವಂತಾಗಿ ಒಂದು ಪ್ರಶಸ್ತಿ ಯೂ ಬಂತು.

ನಾನು ಹೋಟೆಲಿಗೆ ಹೋದರೆ ಮೊದಲೆಲ್ಲ ಕ್ಲೀನ್ ಮಾಡುವವರಿಗೆ ಸಪ್ಲೈ ಮಾಡುವವರಿಗೆ ಟಿಪ್ಸ್ ಕೊಡುತ್ತಿರಲಿಲ್ಲ. ಈಗ ಮನಸ್ಸು ಬದಲಾಗಿದೆ. ಅವರಿಗೆ ಸಂಬಳ ಕೊಡುತ್ತಾರಲ್ಲ ಕೆಲಸ ಮಾಡುವುದು ಅವರ ಕರ್ತವ್ಯ. ಟಿಪ್ಸ್ ಅಂತ ಕೊಟ್ಟರೆ ಅದು ಲಂಚ ಅಂತ ಆಗುವುದಿಲ್ಲವೇ ಅಂತ ನನ್ನ ಧೋರಣೆಯಾಗಿತ್ತು. ಆಫೀಸಿನಲ್ಲಿಯೂ ನಾನು ಆಫೀಸರ್ ಅಂತ ಆದಮೇಲೂ ಅವಕಾಶವಿದ್ದರೂ ಲಂಚ ತೆಗೆದುಕೊಳ್ಳಲಿಲ್ಲ. ಯಾರಾದರೂ ಹಣಕೊಡಲು ಬಂದರೆ,  ಅವರಿಗೆ  ನನಗೆ “ನನಗೆ ಎಷ್ಟು ಸಂಬಳ ಇದೆ ಎಂದು ನಿಮಗೆ ಗೊತ್ತಾ?. ಸತ್ಯ ಹೇಳುವುದಾದರೆ ನನ್ನ ದುಡಿತಕ್ಕಿಂತ, ನನ್ನ ಅರ್ಹತೆಗಿಂತ ಹೆಚ್ಚಿಗೆ ಕೊಡುತ್ತಾರೆ. ನಿಮ್ಮ ದುಡ್ಡಿಗೆ ನಾನು ಯಾಕೆ ಕೈಯೊಡ್ಡಬೇಕು?” ಎಂದು ಅವರಿಗೆ ವಿನಯದಿಂದಲೇ ಹೇಳಿ ಕಳಿಸುತ್ತಿದ್ದೆ.

 ಒಮ್ಮೆ ಕುಂದಾಪುರದಲ್ಲಿ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾಗ, ಒಬ್ಬರು ಗುತ್ತಿಗೆದಾರರು ನನ್ನ ಕೈಕೆಳಗೆ ಕೆಲಸ ಮಾಡುವ ಗುಮಾಸ್ತರ ಹತ್ತಿರ ನನಗೆ ಒಂದು ಕವರ್ ಕಳಿಸಿಕೊಟ್ಟಿದ್ದರು. ಆದರೆ ಅದು ಹಣ ಎಂದು ನನಗೆ ಗೊತ್ತಾದ್ದರಿಂದ ನಾನು ಅದನ್ನು ಮುಟ್ಟಲಿಲ್ಲ. ಅವರಿಗೆ ವಾಪಾಸು ಕೊಡಿ ಎಂದುಬಿಟ್ಟೆ. ಮತ್ತೆ ನಾನು ಅದನ್ನು ಮರೆತು ಬಿಟ್ಟೆ. ಸುಮಾರು ಒಂದು ವರ್ಷ ಅದು ನಮ್ಮ ಆಫೀಸಿನ ತಿಜೋರಿಯಲ್ಲಿ ಆಫೀಸಿನ ಹಣದ ಜೊತೆಗೇ ಇತ್ತು. ನನಗೆ ನೆನಪೇ ಹೋಗಿತ್ತು ಒಮ್ಮೆ ಅಲ್ಲಿಯ ಹಣವನ್ನು ನಾನು ಪರಿಶೀಲಿಸುವಾಗ ಅದನ್ನು ನೋಡಿ “ಅದೇನು?” ಎಂದು ಕೇಳಿದೆ. ಅವನು ನೆನಪು ಮಾಡಿದ. ವಾಪಾಸು ಮಾಡಲು ಹೋದರೆ ಕೊಟ್ಟವರು ತೆಗೆದುಕೊಳ್ಳಲಿಲ್ಲ ಹಾಗಾಗಿ ಅಲ್ಲಿಯೇ ಇಟ್ಟಿದ್ದೆ ಎಂದ. ಅದು ಅಲ್ಲಿದ್ದರೆ ತೊಂದರೆಯೇ. ಅದು ಆಫೀಸಿಗೆ ಸಂಬಂಧಿಸಿದ ಹಣ ಅಲ್ಲ. ಏನು ಮಾಡುವುದೆಂದು ಗೊತ್ತಾಗಲಿಲ್ಲ. ಕೊನೆಗೆ ನಾನು ಅವನಿಗೆ “ಅದರಿಂದ ಆಫೀಸಿನ ಎಲ್ಲರಿಗೂ ಒಂದು ಪಾರ್ಟಿ ಕೊಡಿಸಿ ಖರ್ಚುಮಾಡಿಬಿಡಿ. ಅಲ್ಲಿಡಬೇಡಿ” ಎಂದು ಹೇಳಿ ಪ್ರಕರಣವನ್ನು ಮುಗಿಸಿದೆ.

(ಮುಂದುವರೆಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ