ಬುಧವಾರ, ನವೆಂಬರ್ 15, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 56

ಉದಯವಾಣಿ ಪೇಪರಲ್ಲಿ ಒಮ್ಮೆ, ಪೆರ್ಲ ರಾಮಚಂದ್ರ ಭಟ್ಟರು ಎನ್ನುವ ಒಬ್ಬ ಯಕ್ಷಗಾನದ ಹಳೆಯ ಕ್ಯಾಸೆಟ್ ಸಂಗ್ರಹಕಾರರ ಬಗ್ಗೆ ಒಂದು ಲೇಖನ ಬಂದಿತ್ತು. ಲೇಖನದ ಕೊನೆಯಲ್ಲಿ ಅವರ ಫೋನ್ ನಂಬರ್ ಸಹ ಕೊಟ್ಟಿದ್ದರು. ನಾನು ’ನೋಡುವ’ ಎಂದು ಆ ನಂಬರಿಗೆ ಫೋನ್ ಮಾಡಿ, ನನ್ನ ಪರಿಚಯ ಹೇಳಿಕೊಂಡು, ನನ್ನ ತಂದೆಯವರ ಯಾವುದಾದರೂ ಸಂಗ್ರಹ ನಿಮ್ಮಲ್ಲಿ ಇದೆಯೇ? ಎಂದು ಕೇಳಿದೆ. ಅವರು ಬಹಳ ಚೆನ್ನಾಗಿಯೇ ಮಾತನಾಡಿ, “ನಿಮ್ಮಲ್ಲಿ ಯಾವ ಯಾವ ಸಂಗ್ರಹ ಇದೆ?” ಎಂದು ಕೇಳಿದರು. ನಾನು ಹೇಳಿದೆ. ಅವರು “ನಮ್ಮ ಮನೆ ಎಲ್ಲಿ? ಉಡುಪಿಯಿಂದ ಎಷ್ಟು ದೂರ?” ಎಂಬುದನ್ನೆಲ್ಲಾ ಕೇಳಿ ತಿಳಿದುಕೊಂಡರು. ನಾನು ಅವರಲ್ಲಿ ನಮ್ಮ ಅಪ್ಪಯ್ಯನದ್ದು ಅಂತಹ ಯಾವ ದಾಖಲೆಯೂ ಇಲ್ಲ, ತೆಂಕಿನವರದ್ದೇ ಹೆಚ್ಚಿಗೆ ಇರುವುದು ಎಂದು ತಿಳಿದುಕೊಂಡು ಅದನ್ನು ಮರೆತು ಬಿಟ್ಟೆ.

ಒಂದು ದಿನ ಭಾನುವಾರ ಮಧ್ಯಾಹ್ನ ಊಟ ಮಾಡಿ ಸ್ವಲ್ಪ ಮಲಗಿದ್ದೆ. ಯಾರೋ ನಮ್ಮ ಮನೆಯ ಗೇಟಿನಲ್ಲಿ ನಿಂತು ಇದು “ಉಪ್ಪೂರರ ಮನೆಯೇ?” ಎಂದು ಕೇಳಿದರು. ನಾನು ಹೊರಗೆ ಬಂದು, “ಹೌದು. ನೀವು ಯಾರು ಗೊತ್ತಾಗಲಿಲ್ಲ. ಬನ್ನಿ” ಎಂದು ಒಳಗೆ ಕರೆದೆ. ಅವರು ಒಬ್ಬ ವಯೋವೃದ್ಧರು, ತಲೆಕೂದಲು ಕೆದರಿತ್ತು. ಪಂಚೆ ಉಟ್ಟು ಅದನ್ನುಎತ್ತಿ ಕಟ್ಟಿದ್ದರು, ಬಗಲಲ್ಲಿ ಒಂದು ಉದ್ದದ ಬಟ್ಟೆಯ ದೊಗಲೆ ಚೀಲ, ಬಾಯಿಯ ತುಂಬ ಬೀಡ, ಆರಾಮವಾಗಿ ಒಳಬಂದು ಸೋಫಾದಲ್ಲಿ ಕುಳಿತರು. ನಾನು, ಪರಿಚಯವಾಗಲಿಲ್ಲ ಎಂದು ಮುಖಮುಖ ನೋಡಿದೆ. “ನೀವು ಮೊನ್ನೆ ಫೋನ್ ಮಾಡಿದ್ದೀರಲ್ಲ. ಆ ರಾಮಚಂದ್ರ ಭಟ್ಟ ನಾನೆ” ಎಂದರು. ನನಗೆ ಅವರ ಸಂಗ್ರಹದ ಆಸಕ್ತಿಯನ್ನು ಕಂಡು ಬೆರಗಾಗಿ ಹೋಯಿತು. ಅವರೊಬ್ಬ ರಿಟೈರ್ಡ ಮಾಸ್ತರರು. ಅವರ ಚೀಲದಲ್ಲಿ ಒಂದಷ್ಟು ಶೇಣಿಯವರ ಹಳೆಯ ಅಮೂಲ್ಯವಾದ ಆಡಿಯೋ ಸಂಗ್ರಹಗಳಿದ್ದುವು. ಅವರಲ್ಲಿ ಇರುವ ಕ್ಯಾಸೆಟ್ ಗಳು, ಸಿಡಿಗಳು, ವಿಡಿಯೋಗಳ ಹೆಸರುಗಳನ್ನು ಒಂದು ನೋಟ್ ಪುಸ್ತಕದಲ್ಲಿ ಕ್ರಮವಾಗಿ, ಪ್ರಸಂಗದ ಹೆಸರು, ಭಾಗವತರು, ಮುಖ್ಯ ಕಲಾವಿದರ ಹೆಸರುಗಳನ್ನು ಬರೆದಿಟ್ಟುಕೊಂಡಿದ್ದರು. ಅವರ ಸಂಗ್ರಹ ಆಗಲೇ ಸಾವಿರಕ್ಕೂ ಮೇಲೆ ಇದ್ದಿರಬಹುದು. ನನ್ನಲ್ಲಿದ್ದ ಸಂಗ್ರಹಗಳನ್ನು ಅವರಿಗೆ ಡಿವಿಡಿಯಲ್ಲಿ ಹಾಕಿ ಕೊಡಲು ತಿಳಿಸಿದರು. ನಾನು ಪ್ರಸಂಗದ ಹೆಸರು ಹೇಳಿ “ಇದು ಉಂಟಾ?” ಎಂದು ಕೇಳುತ್ತಾ, ಅವರಲ್ಲಿ ಇಲ್ಲದ್ದನ್ನು ಪ್ರತಿಮಾಡಿ ಕೊಟ್ಟೆ. ಮತ್ತು ಅವರ ಸಂಗ್ರಹವನ್ನು ನೋಡಿ ಬೇಕಾದುದನ್ನು ಪಡೆದುಕೊಳ್ಳಲು, “ನಾನೇ ನಿಮ್ಮ ಮನೆಗೆ ಒಮ್ಮೆ ಬರುತ್ತೇನೆ” ಎಂದು, ಆ ದಿನ ಅವರನ್ನು ನಮ್ಮ ಮನೆಯಲ್ಲಿಯೇ ಉಳಿಸಿಕೊಂಡು, ಮರುದಿನ ಕಳಿಸಿಕೊಟ್ಟೆ. ಮತ್ತೊಮ್ಮೆ ಕಾಸರಗೋಡಿನ ಹತ್ತಿರದ ಬನ್ನತ್ತಡ್ಕ ಎಂಬಲ್ಲಿರುವ  ಅವರ ಮನೆಯನ್ನು ಹುಡುಕಿಕೊಂಡು ಕಾರಿನಲ್ಲಿ ಹೋಗಿದ್ದೆ. ಬೆಳಿಗ್ಗಿನಿಂದ ಸಂಜೆಯವರೆಗೂ ಅವರ ಸಂಗ್ರಹವನ್ನು ನೋಡಿ, ನನಗೆ ಬೇಕಾದುದನ್ನು ನನ್ನ ಹಾರ್ಡ್ ಡಿಸ್ಕ್ ಗೆ ಹಾಕಿಕೊಂಡು ಬಂದೆ. ಆದರೆ ಅವರ ಸಂಗ್ರಹ ತುಂಬಾ ಇದ್ದು, ಅವರ ಮನೆಯ ಎರಡೆರಡು ರೂಮಿನಲ್ಲಿ ಅಲ್ಲಲ್ಲಿ ಜೋಡಿಸಿ ಇಟ್ಟಿದ್ದರು. ನನಗೆ ಪೂರ್ತಿಯಾಗಿ ನೋಡಲು ಸಾಧ್ಯವಾಗಲಿಲ್ಲ. ಆದಷ್ಟು ನನ್ನ ಹಾರ್ಡ್ ಡಿಸ್ಕಿನಲ್ಲಿ ಹಾಕಿಕೊಂಡು ಬಂದೆ.

ಜೋಯಿಸರು, “ಅಪ್ಪಯ್ಯನ ವಿಡಿಯೋಗಳು ಇಲ್ಲವೇ” ಎಂದು ಆಗಾಗ ಕೇಳುತ್ತಿದ್ದರು. ಒಂದು ಬಬ್ರುವಾಹನ ಕಾಳಗ ಮಾತ್ರ ಇದ್ದದ್ದು ನೆನಪಾಗಿ “ರಮೇಶಣ್ಣಯ್ಯ ಇರುವಾಗ ಅದನ್ನು ಪ್ರತಿಮಾಡಿ ಇಟ್ಟಿದ್ದು, ನಾನೂ ನೋಡಿದ ನೆನಪಿತ್ತು. ಆದರೆ ಅದು ಮತ್ತೆ ಸಿಗಲಿಲ್ಲ” ಎಂದೆ. ಅವರು ಅಷ್ಟಕ್ಕೇ ಬಿಡಲಿಲ್ಲ. ಶುಂಠಿ ಸತ್ಯನಾರಾಯಣ ಭಟ್ ಎನ್ನುವವರನ್ನು ಕ್ಯಾಸೆಟ್ಟಿಗಾಗಿ ಮಾತಾಡಿಸುವಾಗ, ಅವರ ಹತ್ತಿರ, “ಆ ವಿಡಿಯೋದ ಬಗ್ಗೆ ಗೊತ್ತುಂಟಾ?” ಎಂದು ಕೇಳಿದರು. ಅವರು ನೆನಪು ಮಾಡಿಕೊಂಡು “ಬೆಂಗಳೂರಿನಲ್ಲಿ ವೈಕುಂಠ ಕಾರಂತರೆನ್ನುವವರ ಮೊಮ್ಮಗ ಮುರಳೀಧರ ಕಾರಂತರೆನ್ನುವವರ ಉಪನಯನದಲ್ಲಿ ಆದ ವಿಡಿಯೋ ಅದು. ತಾನು ನೋಡಿದ್ದೇನೆ” ಅಂದರು. ಜೋಯಿಸರು ತಡಮಾಡಲಿಲ್ಲ. ಬೆಂಗಳೂರಿನ ಕೃಷ್ಣಮೂರ್ತಿ ಅಣ್ಣಯ್ಯನ ಫೋನ್ ನಂಬರನ್ನು ನನ್ನಿಂದಲೇ ಪಡೆದು ಅವನಿಗೆ ಫೋನ್ ಮಾಡಿ ಅದನ್ನು ಹುಡುಕಲು ಹೇಳಿದರು. ನಾನದರ ಆಸೆಯನ್ನೇ ಬಿಟ್ಟಿದ್ದೆ.

ಕೃಷ್ಣಮೂರ್ತಿ ಅಣ್ಣನಿಗೆ ಮುರಳೀಧರ ಕಾರಂತರ ಪರಿಚಯವಿತ್ತು. ಅವರ ಮನೆಗೆ ಹೋಗಿ, “ಹೀಗೆ ಮುವ್ವತ್ತು ವರ್ಷದ ಕೆಳಗೆ, ನಿಮ್ಮ ಉಪನಯನದಲ್ಲಿ ಮಾಡಿದ ವಿಡಿಯೋ ಇದೆಯೇ?” ಎಂದು ಕೇಳಿದ. ಅವರಿಗೆ ಅದು ಇದೆಯೋ ಇಲ್ಲವೋ ಎಂದೂ ಗೊತ್ತಿರಲಿಲ್ಲ. ಕೊನೆಗೆ ಮನೆಯಲ್ಲೆಲ್ಲಾ ಹುಡುಕಿದಾಗ ಉಪನಯನ ಕಾರ್ಯಕ್ರಮದ ಮಾಸ್ಟರ್ ಪ್ರತಿಯೇ ಸಿಕ್ಕಿಬಿಟ್ಟಿತು. ಅದರ ಮಹತ್ವ ಅವರಿಗೆ ಗೊತ್ತಿರಲಿಲ್ಲ. “ಬೇಕಾದರೆ ತೆಗೆದುಕೊಂಡು ಹೋಗಿ” ಎಂದು ಕೊಟ್ಟುಬಿಟ್ಟರು. ಅದನ್ನು ಡಿವಿಡಿಗೆ ಪರಿವರ್ತಿಸಿ ಅಣ್ಣ ನಮಗೆ ಕಳಿಹಿಸಿಕೊಟ್ಟ. ಅದರಲ್ಲಿ ತೀರ್ಥಹಳ್ಳಿ ಗೋಪಾಲ ಆಚಾರ್ಯರ ಬಬ್ರುವಾಹನ, ಕೋಟ ವೈಕುಂಠನ ಚಿತ್ರಾಂಗದೆ, ಕೊಳಗಿ ಅನಂತ ಹೆಗಡೆಯವರ ಅರ್ಜುನ ಹಾಗೂ ಮೊದಲಿಗೆ ಧಾರೇಶ್ವರ, ಮಧ್ಯದಲ್ಲಿ ಕಾಳಿಂಗ ನಾವಡರು ಕೊನೆಯಲ್ಲಿ ಅಪ್ಪಯ್ಯ ಹಾಡಿದ್ದರು. ಅಂತೂ ಜೋಯಿಸರ ಉಮೇದಿನಿಂದ ಅಡಿಗೆ ಬಿದ್ದು ಕಾಲಗರ್ಭದಲ್ಲಿ ಸೇರಿಹೋದ ಮತ್ತೊಂದು ದಾಖಲೆಯು, ಮೇಲೆ ಬಿದ್ದು ನಮಗೆಲ್ಲಾ ಅಪ್ಪಯ್ಯನನ್ನು ಅದರಲ್ಲಿ ಕಣ್ತುಂಬಾ ನೋಡುವ ಹಬ್ಬವಾಯಿತು.

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿಯೂ ಜೋಯಿಸರಿಗೆ ಕೆಲವು ಹಳೆಯ ವಿಡಿಯೋಗಳು ಸಿಕ್ಕಿದವು. ಕುಂಬ್ಳೆ ಕಡೆಯ ಜಯರಾಮ ಭಟ್ ಎನ್ನುವವರು ಶಂಭುಹೆಗಡೆಯವರ ಎರಡು ವಿಡಿಯೋಗಳನ್ನು ಕೊಟ್ಟರು. ಮಹಾಬಲೇಶ್ವರ ಗಡಿಕ್ಕಾಯ್, ದತ್ತು ಸೋಮಸಾಗರರವರಿಂದಲೂ ಹಳೆಯ ದಾಖಲೆಗಳೂ ಸಿಕ್ಕಿದವು. ಕುಂದಾಪುರದ ಎಂ. ಎಂ. ಹೆಗ್ಡೆಯವರ ಮನೆಯಲ್ಲಿ, ಸಾಸ್ತಾನದ ನರಸಿಂಹ ಭಟ್ಟರಲ್ಲಿ ಅಲ್ಲಿ ಇಲ್ಲಿ ಅಂತ ಎಷ್ಟೋ ನಾವುಡರ, ಶಂಭುಹೆಗಡೆಯವರ ಆಡಿಯೋ ವಿಡಿಯೋಗಳನ್ನು  ಪಡೆದಾಯಿತು. ಇನ್ನೂ ಹಲವಾರು ಮಂದಿ “ನನ್ನ ಹತ್ತಿರವೂ ಕೆಲವು ಹಳೆಯ ಕ್ಯಾಸೆಟ್ ಗಳಿವೆ ಈಗ ಅವುಗಳನ್ನು ಉಪಯೋಗಿಸುತ್ತಿಲ್ಲ. ಬೇಕಾದರೆ ನೋಡಿ” ಎಂದು ಕೊರಿಯರ್ ನಲ್ಲಿ ಅಥವ ನನ್ನ ಮನೆಯನ್ನು ಹುಡುಕಿಕೊಂಡು ಬಂದು ಕೊಟ್ಟರು. ಸಕಲೇಶಪುರದ ವೈಕುಂಠ ಐತಾಳರು, ಸಹ ಅವರೇ ಅವರ ಮನೆಯಲ್ಲಿ ಅಪ್ಪಯ್ಯ ಹೋಗಿದ್ದಾಗ ರೆಕಾರ್ಡ್ ಮಾಡಿದ ಕೆಲವು ಕ್ಯಾಸೆಟ್ ಗಳನ್ನು ತಂದುಕೊಟ್ಟರು. ಬೆಂಗಳೂರಿನ ವಿನಯ ರಾಜೀವ ಎನ್ನುವ ಒಬ್ಬನ ಹತ್ತಿರವೂ ಅಪ್ಪಯ್ಯನ ಕೆಲವು ಪೋಟೋಗಳಿದ್ದವು. ನಾನು ಅವುಗಳನ್ನು ಸಂಗ್ರಹ ಮಾಡುತ್ತಿದ್ದೇನೆ ಎಂದು ತಿಳಿದುಕೊಂಡ ಅವನು ಅದನ್ನೂ ಕಳಿಸಿಕೊಟ್ಟ. ಮಟ್ಟಿ ಸುಬ್ರಾಯರು ಎನ್ನುವ ಒಬ್ಬ ದೊಡ್ಡ ತಾಳಮದ್ದಲೆ ಅರ್ಥದಾರಿಗಳ ಮಗ, ಹರೀಶರೂ ಒಮ್ಮೆ ನನ್ನ ಮನೆಗೆ ಬಂದವರು ಅವರ ಅಪ್ಪಯ್ಯನ ಹಲವು ಆಡಿಯೋ ವಿಡಿಯೋವನ್ನು ನೀಡಿ ನನ್ನ ಸಂಗ್ರಹವನ್ನು ಶ್ರೀಮಂತಗೊಳಿಸಿದರು. ಮುದ್ರಾಡಿಯಲ್ಲಿರುವ ಸತ್ಯಾಶ್ರಯ ಕಲ್ಕೂರರು ಜಾನುವಾರು ಕಟ್ಟೆ ಮತ್ತು ಗೋರ್ಪಾಡಿಯವರು ಹಾಡಿದ ಅವರ ತಂದೆಯವರ ನಿರೂಪಣೆಯಿರುವ ಕ್ಯಾಸೆಟ್ ಗಳನ್ನು ತಂದು ಕೊಟ್ಟರು.

ಬೊಂಬಾಯಿಯಲ್ಲಿ ಬಾಬಣ್ಣ ಹಂದೆಯವರು, ನಾನು ಅಪ್ಪಯ್ಯನ ಕ್ಯಾಸೆಟ್ ಗಳನ್ನು ಎಂಪಿತ್ರಿ ಮಾಡಿ ಇಟ್ಟುಕೊಂಡಿದ್ದೇನೆ ಎಂಬ ವಿಷಯವನ್ನು ತಿಳಿದುಕೊಂಡು, ಅವರು ಅಪ್ಪಯ್ಯ ಮತ್ತು ಕಾಳಿಂಗ ನಾವಡರು ಬೊಂಬಾಯಿಗೆ ಬಂದಿದ್ದಾಗ ರೆಕಾರ್ಡ್ ಮಾಡಿದ ಕ್ಯಾಸೆಟ್ ಗಳನ್ನು ತಂದುಕೊಟ್ಟರು. ಅದನ್ನೂ ಎಂಪಿತ್ರಿ ಮಾಡಿಕೊಟ್ಟೆ. ಕಾರ್ಕಳದ ಸದಾನಂದ ನಾಯಕರೆನ್ನುವವರೂ ಅವರಲ್ಲಿದ್ದ ಆಗ ಕಾರ್ಕಳ ವೆಂಕಟರಮಣ ದೇವಸ್ಥಾನದಲ್ಲಿ ಆಗುತ್ತಿದ್ದ ಅಪ್ಪಯ್ಯ ಮತ್ತು ನಾವಡರು ಇದ್ದ ತಾಳಮದ್ದಲೆಯ ಕ್ಯಾಸೆಟ್ ಗಳನ್ನು ತಂದುಕೊಟ್ಟರು.

 (ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ