ಬುಧವಾರ, ನವೆಂಬರ್ 8, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 49

ಮುಲ್ಕಿಯ ಕಛೇರಿಯಲ್ಲಿ ಆಫೀಸು ಕಸ ಗುಡಿಸುವ ಹೆಂಗಸೊಬ್ಬಳಿದ್ದಳು. ಅವಳಿಗೆ ತಿಂಗಳಿಗೆ ಐನೂರು ರುಪಾಯಿ ಸಂಬಳ. ಒಮ್ಮೆ ಅವಳನ್ನು ನೋಡಿ ಪಾಪ ಅನ್ನಿಸಿ ಕರೆದು “ನಮ್ಮ ಮನೆಯಲ್ಲಿ ಬೆಳಿಗ್ಗೆ ಗುಡಿಸಿ, ಒರೆಸುವುದು ಪಾತ್ರೆ ತೊಳೆಯುವ ಕೆಲಸ ಮಾಡಿಕೊಡುತ್ತೀಯಾ? ಅದರ ಬಗ್ಗೆ ತಿಂಗಳಿಗೆ ೧೫೦ ರೂಪಾಯಿ ಕೊಡುತ್ತೇನೆ” ಅಂತ ಕೇಳಿದೆ. ನಮ್ಮ ಮಗನೂ ಆಗ ಸಣ್ಣವನಾಗಿದ್ದ. ನಮಗೂ ಅನುಕೂಲವಾಗುತ್ತದೆ ಅನ್ನಿಸಿತು. ಅವಳು ಒಪ್ಪಿದಳು. ಆ ಹೆಂಗಸು ಒಂದು ವರ್ಷ ಕೆಲಸ ಮಾಡಿದಳು. ಒಮ್ಮೆ ಯಾರ ಹತ್ತಿರವೋ “ಆಫೀಸಿನ ಕೆಲಸದ ಒಟ್ಟಿಗೆ, ಅವರ ಮನೆ ಕೆಲಸವೂ ಮಾಡಬೇಕಲ್ಲ, ತುಂಬಾ ಕಷ್ಟವಾಗುತ್ತದೆ” ಎಂದು ಹೇಳಿದಳು ಎಂದು ಒಬ್ಬರು ನನಗೆ ಬಂದು ಹೇಳಿದರು. ನನಗೆ ಆಘಾತವಾಯಿತು. ಆ ಕಾಲದಲ್ಲಿ ಕೆಲವು ಕಡೆ ಆಫೀಸರ್ ಗಳು ಹಾಗೆ ಎಟೆಂಡರ್ ಗಳಿಂದ ಸ್ವೀಪರ್ ಗಳಿಂದ ಮನೆಯ ಕೆಲಸ ಮಾಡಿಸಿಕೊಳ್ಳುತ್ತಿದ್ದುದು ನನಗೆ ಗೊತ್ತಿತ್ತು. ನಾನು ಅವಳು ನಮ್ಮ ಮನೆಯ ಕೆಲಸ ಮಾಡಿದ ಬಗ್ಗೆ ಅವಳಿಗೆ ತೀರ ಕಡಿಮೆ ಇಲ್ಲದಂತೆ ಸಂಬಳವನ್ನೇ ಕೊಡುತ್ತಿದ್ದೆ. ಒಟ್ಟಾರೆ ಅವಳನ್ನು ನಾವು ಧರ್ಮಕ್ಕೆ ದುಡಿಸಿಕೊಳ್ಳುವ ಹಾಗೆ ಮಾತಾಡಿದ್ದು  ನನಗೆ ತುಂಬಾ ಬೇಸರವಾಯಿತು. ಅಂದೇ ಅವಳನ್ನು ಕರೆದು “ನೀನು ನಮ್ಮ ಮನೆಯಲ್ಲಿ ಧರ್ಮಕ್ಕೆ ದುಡಿಸಿಕೊಳ್ಳುವ ಹಾಗೆ ಹೇಳುತ್ತೀಯಂತಲ್ಲ. ನಾಳೆಯಿಂದ ನಮ್ಮ ಮನೆಯೆ ಕೆಲಸಕ್ಕೆ ಬರುವುದು ಬೇಡ”. ಎಂದು ಕೇಳಿದೆ. ಅವಳು “ನಾನು ಆ ಅರ್ಥದಲ್ಲಿ ಹೇಳಿದ್ದಲ್ಲ. ತಪ್ಪಾಯಿತು” ಎಂದು ಕಣ್ಣೀರು ಹಾಕಿದಳು. ಆದರೆ ನಾನು ಆಗಲೇ ನಿರ್ಧರಿಸಿಯಾಗಿತ್ತು. “ಖಡಾಖಂಡಿತವಾಗಿ ನಾಳೆಯಿಂದ ನೀನು ಆಫೀಸ್ ಕೆಲಸ ಮಾತ್ರ ಮಾಡಿದರೆ ಸಾಕು” ಎಂದೆ. ಅವಳು ಅಳುತ್ತಾ “ನನ್ನ ಮಗಳ ಓದಿಗಾದರೂ ಸಹಾಯ ಆಗುತ್ತಿತ್ತು” ಎಂದಳು. ನಾನು ಒಪ್ಪಲಿಲ್ಲ.  ಮತ್ತೆ ಮತ್ತೆ ಬಂದು ನಾನು ಮನೆ ಕೆಲಸ ಮಾಡುತ್ತೇನೆ ಎಂದು ಕೇಳಿಕೊಂಡರೂ ನಾನು ಒಪ್ಪಲೇ ಇಲ್ಲ.

ಹಳೆಯಂಗಡಿಯಲ್ಲಿ ಗುರುನಾರಾಯಣ ಹವ್ಯಾಸಿ ಯಕ್ಷಗಾನ ಸಂಘ ಎಂಬುದೊಂದು ಸಂಘವಿತ್ತು. ಅದು ತೆಂಕುತಿಟ್ಟು.  ಅವರಿಗೆ ನಾನು ಉಪ್ಪೂರರ ಮಗ ಎಂದು ಯಾರೋ ಹೇಳಿದರು ಅಂತ ಒಮ್ಮೆ ಹುಡುಕಿಕೊಂಡು ಬಂದು ಅವರ ಸಂಘದಲ್ಲಿ ವೇಷ ಮಾಡಲು ಹೇಳಿದರು. ಅಲ್ಲಿ ನಾನು ನಾಲ್ಕಾರು ವರ್ಷ ವೇಷ ಮಾಡಿದ್ದೆ. “ಧರ್ಮ ವಿಜಯ” ಎಂಬ ಒಂದು ಹೊಸಪ್ರಸಂಗದಲ್ಲಿ ಧರ್ಮವೃತ, “ಕಾರ್ತವೀರ್ಯಾರ್ಜುನ”ದಲ್ಲಿ ಕಾರ್ತವೀರ್ಯ, “ಜಾಂಬವತಿ ಕಲ್ಯಾಣ”ದಲ್ಲಿ ಜಾಂಬವ ಮುಂತಾದ ಪಾತ್ರಗಳನ್ನು ಮಾಡಿದೆ. ಅವರು ಮೊದಲು ನನಗೆ ಅವರದೇ ಯಾವುದೋ ಪ್ರಸಂಗದಲ್ಲಿ ದೇವೇಂದ್ರ ಪಾತ್ರವನ್ನು ಕೊಟ್ಟು ನನ್ನ ಆ ಪಾತ್ರವನ್ನು ನೋಡಿ, ಮುಂದಿನ ವರ್ಷದಿಂದ ನನಗೇ ಅರ್ಥವನ್ನೂ ಬರೆದುಕೊಡಲು ಹೇಳಿ ಡೈರೆಕ್ಷನನ್ನೂ ಮಾಡಲು ಹೇಳಿದರು. ನನ್ನೊಡನೆ ತುಂಬಾ ಆತ್ಮೀಯತೆಯಿಂದ ಗೌರವದಿಂದ ನಡೆದುಕೊಳ್ಳುತ್ತಿದ್ದರು. ಅಲ್ಲಿಯೇ ಕಾರ್ನಾಡಿನಲ್ಲಿ ಹರಿಹರ ದೇವಸ್ಥಾನ ಎಂಬುದಿತ್ತು. ಅಲ್ಲಿಯೂ ಪ್ರತೀ ಬುಧವಾರ ಮಧ್ಯಾಹ್ನ ತಾಳಮದ್ದಲೆಯನ್ನು ಸ್ಥಳೀಯರು ಕೆಲವರು ಸೇರಿ ಮಾಡುತ್ತಿದ್ದರು. ನಾನೂ ಕೆಲವೊಮ್ಮೆ ಅಲ್ಲಿಗೆ ಹೋಗಿ ಕೆಲವು ಅರ್ಥಗಳನ್ನು ಹೇಳುತ್ತಿದ್ದೆ. ಆದರೆ ಅದರಲ್ಲಿ ಹೆಚ್ಚು ತೊಡಗಿಸಿಕೊಳ್ಳಲಾರದೇ ಬಿಟ್ಟುಬಿಟ್ಟೆ.

ಮುಲ್ಕಿಯಲ್ಲಿದ್ದಾಗ ಉದಯವಾಣಿ ಪತ್ರಿಕೆಗೆ ಯಕ್ಷಗಾನದ ಬಗ್ಗೆ ಕೆಲವು ಲೇಖನಗಳನ್ನು ಬರೆದು ಕಳಿಸಿದ್ದೆ. ಅವುಗಳು ಶುಕ್ರವಾರದ ಕಲಾವಿಹಾರದಲ್ಲಿ ಪ್ರಕಟವಾಗಿದ್ದವು. ಅಲ್ಲಿ ಇಲ್ಲಿ ಒಟ್ಟುಮಾಡಿದ ಗಣಿತದ ಜಾಣ್ಮೆಯ ಸಮಸ್ಯೆ ಗಳನ್ನೂ ಉದಯವಾಣಿಗೆ ಒಂದೊಂದಾಗಿ ಕಳಿಸುತ್ತಿದ್ದು, ಅವುಗಳ ಉತ್ತರದೊಂದಿಗೆ ಮುಂದಿನವಾರ ಮತ್ತೊಂದು ಪ್ರಶ್ನೆ ಕಳಿಸುತ್ತಿದ್ದೆ. ಅವುಗಳೂ ಪತ್ರಿಕೆಯಲ್ಲಿ ಕೆಲವು ತಿಂಗಳವರೆಗೆ ಪ್ರಕಟವಾಯಿತು.

ಒಮ್ಮೆ ಉಡುಪಿಯ ಪರ್ಕಳದ ಸಮೀಪ ಕೆರೆಮನೆ ಮೇಳದವರ ಆಟ ಇದೆ ಎಂದು ಗೊತ್ತಾಗಿ ಆಫೀಸ್ ಮುಗಿದ ಕೂಡಲೇ ನನ್ನ ಸ್ಕೂಟರ್ ನಲ್ಲಿ ಮಗನನ್ನೂ ಹೆಂಡತಿಯನ್ನೂ ಕೂರಿಸಿಕೊಂಡು ಆಟಕ್ಕೆಂದು ಬಂದಿದ್ದೆ. ಶಂಭು ಹೆಗಡೆಯವರ ಕರ್ಣ.  ಅಷ್ಟರವರೆಗೆ ನಮ್ಮ ಬಡಗುತಿಟ್ಟಿನ ಸಂಪ್ರದಾಯದ ಕರ್ಣನನ್ನು ಮಾತ್ರ ನೋಡಿದ್ದ ನನಗೆ ಅವರ ಪಾತ್ರಚಿತ್ರಣ ಅಭಿನಯ ತುಂಬಾ ಖುಷಿಯಾಯಿತು. ರಾತ್ರಿ ಒಂದು ಗಂಟೆಗೇ ಆಟ ಮುಗಿಯಿತು. ರಾತ್ರಿ ವಾಪಾಸು ಮುಲ್ಕಿಗೆ ಹೋಗಲು ಧೈರ್ಯವಿರಲಿಲ್ಲ. ಕೊನೆಗೆ ಕುಂಜಿಬೆಟ್ಟು ಹತ್ತಿರ ಕುಮಾರ ಉಡುಪರ ಮನೆಯನ್ನು ಹುಡುಕಿಕೊಂಡು ಹೋಗಿ, ಅವರ ಮನೆಯ ಬಾಗಿಲನ್ನು ತಟ್ಟಿದೆವು. ಮೊದಲು ಒಮ್ಮೆ ಮಾತ್ರಾ ಅವರ ಮನೆಗೆ ಹೋಗಿದ್ದೆವು. ಅದೇ ಮನೆ ಹೌದೋ ಅಲ್ಲವೋ ಎಂದೂ ಅನುಮಾನವಿತ್ತು. ತುಂಬಾ ಹೊತ್ತು ಬಾಗಿಲು ಬಡಿದ ಮೇಲೆ ಅವರಿಗೆ ಎಚ್ಚರವಾಗಿ ಬಂದು ಬಾಗಿಲು ತೆರೆದರು ಅಂತ ಆಯಿತು. ಅವರ ಮುಖ ನೋಡಿದ ಮೇಲೆ ಧೈರ್ಯ. ಆ ರಾತ್ರಿ ಅಲ್ಲಿಯೇ ಉಳಿದು ಮರುದಿನ ಮುಲ್ಕಿಗೆ ಬಂದೆವು.

ನನ್ನ ಮಗನಿಗೆ ಸೈಕಲ್ ಕಲಿಸಬೇಕು ಅಂತ ತೀರ್ಮಾನಿಸಿದೆ. ಸೈಕಲ್ ಬಾಡಿಗೆ ಕೊಡುವವರ ಹತ್ತಿರ ವಿಚಾರಿಸಿ, ಒಂದು ಸೆಕೆಂಡ್ ಹ್ಯಾಂಡ್ ಸೈಕಲ್ಲನ್ನು ತೆಗೆದುಕೊಂಡೆ. ನಮ್ಮ ಕ್ವಾರ್ಟರ್ಸ್ ಎದುರಿಗೇ ದೊಡ್ಡ ಗಾಂಧಿ ಮೈದಾನ ಒಂದು ಕಡೆಯಲ್ಲಿ ಮಕ್ಕಳು ಕ್ರಿಕೆಟ್ ಆಡಿದರೆ, ಮತ್ತೊಂದು ಬದಿಯಲ್ಲಿ ವಾಲಿಬಾಲ್ ಕೋರ್ಟ್, ಮತ್ತೊಂದು ಮೂಲೆಯಲ್ಲಿ ಒಂದಷ್ಟು ದನಗಳು ಮೇಯುತ್ತಿದ್ದವು. ಅದರ ಮಧ್ಯದಲ್ಲಿ ಅವನಿಗೆ ಸೈಕಲ್ ಕಲಿಸುವ ವ್ಯವಸ್ಥೆಯಾಯಿತು. ಅವನನ್ನು ಸೀಟಿನಲ್ಲಿ ಕೂರಿಸಿ ನಾನೇ ಹ್ಯಾಂಡಲ್ ಹಿಡಿದು ದೂಡಿಕೊಂಡು ಹೋಗಬೇಕು.  ಅವನು “ಮುಂದೆ ನೋಡು” ಎಂದರೆ ಮುಂದಿನ ಚಕ್ರ ತಿರುಗುವುದನ್ನು ನೋಡುತ್ತಾನೆ. ನನಗೆ ದೂಡಿದೂಡಿ ಸಾಕಾಯಿತು. ಅವನೇ ಮಧ್ಯ ಮಧ್ಯ ಸಾಕಪ್ಪ ಇವತ್ತು ಅನ್ನುತ್ತಿದ್ದ. ಅವನಿಗೆ ಬೇರೆ ಆಟದ ಮೇಲೆ ಗಮನ. ಎರಡು ಮೂರು ದಿನ ಏನು ಮಾಡಿದರೂ ಸೈಕಲ್ ಹಿಂದಿನ ಕ್ಯಾರಿಯರ್ ನ್ನು ಹಿಡಿದುಕೊಳ್ಳದೆ ಅವನಿಗೆ ರೈಡ್ ಮಾಡಲು ಆಗಲೇ ಇಲ್ಲ. ಒಮ್ಮೆ ಸಿಟ್ಟು ಬಂದು ಒಂದು ಏಟು ಹಾಕಿದೆ. ಅವನು ಸೈಕಲ್ ಬಿಟ್ಟು ಓಡಿದ. ನಂತರ ಏನು ಮಾಡಿದರೂ ಸೈಕಲ್ ನ್ನು ಮುಟ್ಟಲೂ ಕೇಳುವುದಿಲ್ಲ. ಅಷ್ಟು ದೊಡ್ಡ ಮೈದಾನದಲ್ಲಿ ಎಲ್ಲರ ಮುಂದೆ ಅವನಿಗೆ ಹೊಡೆದದ್ದಕ್ಕೆ ಬೇಸರವಾಗಿತ್ತು.

ಅಂತೂ ಕೊನೆಗೆ ಅವನನ್ನು ಸಮಾಧಾನ ಪಡಿಸಿ ಪುನಹ ಸೈಕಲ್ ಹಿಡಿಸಲು ಸಾಕುಬೇಕಾಯಿತು. ಮುಂದೆ ಉಡುಪಿಗೆ ಬಂದ ಮೇಲೆ ಅವನಿಗೆ ಯಕ್ಷಗಾನ ಕಲಿಸುವ ಮನಸ್ಸಾಯಿತು. ಆಗ ಕುಂಜಿಬೆಟ್ಟಿನ ವಸತಿಗೃಹದಲ್ಲಿ ಇದ್ದಿದ್ದೆ. ಅವನು ಸಂಜೆ ಶಾಲೆಬಿಟ್ಟು ಮನೆಗೆ ಬಂದರೆ ಆಚೆ ಈಚೆಬದಿಯ ಮಕ್ಕಳೊಡನೆ ಆಟ ಆಡಲು ಹೋಗುತ್ತಿದ್ದ. ಇಲ್ಲದಿದ್ದರೆ ಟಿವಿ ಹಾಕಿಕೊಂಡು ಕಾರ್ಟೂನ್ ನೋಡುವುದು. ಟಿವಿ ಅಷ್ಟುಹೊತ್ತು ನೋಡುವುದು ಬೇಡ ಎಂದರೆ ಮುಷ್ಕರ ಹೂಡುತ್ತಿದ್ದ. ಅಂತಹ ಸಮಯದಲ್ಲಿ ಮಗನಿಗೆ ಯಕ್ಷಗಾನ ಕಲಿಸಬೇಕೆಂದು ನಿರ್ಧರಿಸಿದ್ದು. ಅವನನ್ನು ಒಮ್ಮೆ ಕರೆದು. “ಪ್ರತೀದಿನ ಸಂಜೆ ತಾಳ ಕುಣಿತ ಹೇಳಿಕೊಡುತ್ತೇನೆ. ನೀನು ಕಲಿಯಲೇಬೇಕು” ಎಂದೆ. ಅವನು ಹೂಂ ಎಂದರೂ ನನ್ನಿಂದ ಹೇಳಿಸಿಕೊಳ್ಳುವ ಮನಸ್ಸಿಲ್ಲದ್ದರಿಂದ ಸಂಜೆ ತಪ್ಪಿಸಿಕೊಂಡು ತಿರುಗತೊಡಗಿದ. ನನಗೆ ಒಮ್ಮೆ ಸಿಟ್ಟು ಬಂದು ಅವನನ್ನು ಕರೆದು ಹೇಳಿದೆ. “ನಾಳೆಯಿಂದ ಸಂಜೆ ನೀನು ರೆಡಿ ಇರಬೇಕು. ಬೇಕಾದರೆ ನಿನ್ನ ಸ್ನೇಹಿತರನ್ನೂ ಕೂಡಿಕೊಂಡು ಬಾ. ದಿನಾ ಒಂದೊಂದು ತಾಳ ಹೇಳಿಕೊಡುತ್ತೇನೆ. ಕಲಿಯಲೇಬೇಕು. ಅದಲ್ಲದಿದ್ದರೆ ಸಂಜೀವ ಸುವರ್ಣರು ಶನಿವಾರ, ಭಾನುವಾರ ಮಕ್ಕಳಿಗೆ ಕುಣಿತ ಹೇಳಿಕೊಡುತ್ತಿದ್ದಾರಂತೆ. ಅಲ್ಲಿಗೆ ಸೇರಬೇಕು” ಎಂದು ಶರತ್ತು ಹಾಕಿದೆ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ