ಬುಧವಾರ, ನವೆಂಬರ್ 22, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 63

ಕೆಲವು ವರ್ಷದ ಹಿಂದೆ ಸಕ್ರಿಯವಾಗಿದ್ದು ಕಾರ್ಯದರ್ಶಿಯಾಗಿಯೂ ನಾನು ಕೆಲಸ ಮಾಡಿದ, ಪುತ್ತೂರು ಬ್ರಾಹ್ಮಣ ಸಂಘದ ಮಹಿಳೆಯರೆಲ್ಲಾ ಸೇರಿಕೊಂಡು ಪ್ರತೀ ವರ್ಷ ಒಂದೆರಡು ಆಟವನ್ನೂ ಹಬ್ಬದ ಸಮಯದಲ್ಲಿ ಮಾಡುತ್ತಿದ್ದು, ಅದರಲ್ಲಿ ಅನ್ನಪೂರ್ಣಳೂ ಒಬ್ಬಳು ವೇಷ ಮಾಡುವ ಕಲಾವಿದೆಯೆ ಎಂದು ಹಿಂದೆಯೇ ಹೇಳಿದ್ದೆ. ಆಗ ಬಡಾನಿಡಿಯೂರಿನ ಕೇಶವ ರಾವ್ ಎನ್ನುವ ಮದ್ದಲೆ ಬಾರಿಸುವವರು, ಅವರಿಗೆ ಟ್ರಯಲ್ ಮಾಡಿಸಿ ಆಟ ಮಾಡಿಸುತ್ತಿದ್ದರು. ಒಮ್ಮೆ ಮಾಯಾಗುಂಡಿ ಆನಂದ ಭಟ್ಟರೆನ್ನುವವರು, ಮಹಿಳಾ ಸಂಘದ ಸದಸ್ಯರಲ್ಲಿ “ನೀವು ಯಾವ ಯಾವುದೆಲ್ಲಾ ಪ್ರಸಂಗ ಮಾಡುವುದಕ್ಕಿಂತ ಪುತ್ತೂರು ಭಗವತೀ ಅಮ್ಮನವರ ಕ್ಷೇತ್ರ ಮಹಾತ್ಮೆಯನ್ನು ಬರೆಸಿ ಆಟ ಮಾಡಬಹುದಲ್ಲ” ಎಂದರಂತೆ. ಎಲ್ಲರಿಗೂ ಅದು ಹೌದು ಎನ್ನಿಸಿ ಅನ್ನಪೂರ್ಣಳ ಮೂಲಕ ಪ್ರಸಂಗ ಬರೆಯುವ ಹೊಣೆಯನ್ನು ನನಗೆ ವಹಿಸಿದರು. ನಾನು ಒಪ್ಪಿಕೊಂಡು, ಅಲ್ಲಿಯ ಸ್ಥಳ ಪುರಾಣವನ್ನು ಸಂಗ್ರಹಿಸಿ ಕತೆಯನ್ನು ಹುಡುಕುತ್ತಿದ್ದಾಗ, ಅಲ್ಲಿಯೇ ಸಮೀಪದಲ್ಲಿ ಮನೆಯಿರುವ ಒಬ್ಬರು, “ಬಹಳ ಹಿಂದೆ ಅಂದರೆ, ಸುಮಾರು ಮುವ್ವತ್ತು ಮುವ್ವತ್ತೈದು ವರ್ಷದ ಕೆಳಗೆ ಇಲ್ಲಿನ ಸ್ಥಳೀಯರು ಒಟ್ಟುಸೇರಿ ಯಕ್ಷಗಾನ ಸಂಘದಲ್ಲಿ ಆ ಪ್ರಸಂಗವನ್ನು ಆಟ ಮಾಡಿದ್ದರು” ಎಂಬ ಮಾಹಿತಿಯನ್ನು ಕೊಟ್ಟರು. ನನ್ನ ಹುಡುಕಾಟ, ಕತೆಯನ್ನು ಬಿಟ್ಟು ಅದನ್ನು ಆಡಿಸಿದವರ, ಪ್ರಸಂಗ ಬರೆದವರ ಹುಡುಕಾಟದತ್ತ ಹೊರಳಿತು.


ದೇವಸ್ಥಾನದ ಆವರಣದಲ್ಲಿಯೇ ಒಂದು ಯಕ್ಷಗಾನ ಸಂಘದ ಕೋಣೆ ಇದ್ದು, ಒಂದು ಯಕ್ಷಗಾನ ಸಂಘವೂ ಅಸ್ತಿತ್ವದಲ್ಲಿ ಇದ್ದು, ಪ್ರತೀ ಶುಕ್ರವಾರ ತಾಳಮದ್ದಲೆ ಹಾಗೂ ವರ್ಷದಲ್ಲಿ ಒಮ್ಮೆ ಅತಿಥಿಕಲಾವಿದರನ್ನು ಸೇರಿಸಿಕೊಂಡು ಅವರು ಆಟವನ್ನೂ ಮಾಡುತ್ತಿದ್ದರು. ಅವರ ಕೋಣೆಯಲ್ಲಿ ನನಗೆ ಬೇಕಾದ ಪ್ರಸಂಗದ ಬಗ್ಗೆ ಏನಾದರೂ ವಿಷಯ ಸಿಕ್ಕಬಹುದೇ? ಎಂದು ವಿಚಾರಿಸಿದೆ. ಅಲ್ಲಿ ಹುಡುಕಿಸಿದಾಗ ಏನೂ ಸಿಗಲಿಲ್ಲ. ಅದೇ ಸಮಯದಲ್ಲಿ ಮಹಿಳಾ ಯಕ್ಷಗಾನ ಸಂಘದಲ್ಲಿ ವೇಷ ಮಾಡುತ್ತಿದ್ದ ಸರೋಜಮ್ಮ ಎನ್ನುವವರು, ಮೊದಲು ಇದೇ ಪರಿಸರದಲ್ಲಿದ್ದು,  ಈಗ  ಅಮೇರಿಕಾದಲ್ಲಿ ನೆಲೆಸಿರುವ ಒಬ್ಬರ ಸಹಾಯದಿಂದ ಮೊದಲು ಪುತ್ತೂರು ಕ್ಷೇತ್ರಮಹಾತ್ಮೆ ಎನ್ನುವ ಪ್ರಸಂಗ ಬರೆದವರು ಬನ್ನಂಜೆಯಲ್ಲಿದ್ದ ಗುರುರಾಜ್ ರಾವ್ ಎನ್ನುವವರು ಎಂಬ ಸಮಾಚಾರವನ್ನು ಕಂಡುಹಿಡಿದರು. ಬ್ರಾಹ್ಮಣ ಸಂಘದ ಹಿರಿಯ ಸದಸ್ಯರಾದ ಪಿ.ಹೆಚ್ ಭಟ್ಟರು, ಆಗ ಯಕ್ಷಗಾನ ಸಂಘದ ಕಾರ್ಯದರ್ಶಿಯವರನ್ನು ಕರೆಸಿ ವಿಚಾರಿಸಿ, ಕೇಳಿದಾಗ, ಅವರು ನೆನಪು ಮಾಡಿಕೊಂಡು, ಬಹಳ ಹಿಂದೆ ಗುರುರಾಜ್ ರಾವ್ ಎನ್ನುವವರೊಬ್ಬರು ಬಹಳ ಆಸಕ್ತಿಯಿಂದ, ಅಲ್ಲಿ ಸಕ್ರಿಯರಾಗಿದ್ದು, ಸಂಘದಲ್ಲಿ ಭಾಗವತಿಕೆಯನ್ನು ಮಾಡಿ, ಪ್ರಸಂಗವನ್ನು ಬರೆದು ಆಡಿಸುತ್ತಿದ್ದರು ಎಂದು ಹೇಳಿದರು. ಕಾರಣಾಂತರದಿಂದ ಅವರು ಪುತ್ತೂರಿಗೆ ಬರುವುದು ನಿಂತು ಹೋಗಿದ್ದು, ಈಗ ಯಕ್ಷಗಾನದಲ್ಲೂ ಅಷ್ಟು ಕಾಣಿಸುತ್ತಿಲ್ಲ, ಮಾತ್ರವಲ್ಲ ಅವರು ಈಗ ಬನ್ನಂಜೆಯಲ್ಲೂ ಇದ್ದಂತೆ ಕಾಣುವುದಿಲ್ಲ ಎಂದರು.

ನಾವು ಆಗ ಎಲ್ಲವನ್ನೂ ಬಿಟ್ಟು, ಗುರುರಾಜರಾವ್ ಎಂಬವರನ್ನು ಪತ್ತೆ ಮಾಡಲು ಶುರುಮಾಡಿದೆವು. ನಾಲ್ಕು ಜನರಲ್ಲಿ ವಿಚಾರಿಸಿಯಾಯಿತು. ಅಂತೂ ಕೊನೆಗೆ ಅವರು ಈಗ ಗುಂಡೀಬೈಲಿನಲ್ಲಿ ಮನೆ ಮಾಡಿ ಮಗನೊಂದಿಗೆ ಇದ್ದಾರೆ ಎಂದು ಪತ್ತೆ ಮಾಡಿ, ಅವರನ್ನು ಕರೆಸಿದ ಪಿ. ಹೆಚ್. ಭಟ್ಟರು, ಅವರಲ್ಲಿ ಕ್ಷೇತ್ರಮಹಾತ್ಮೆ ಪ್ರಸಂಗವನ್ನು ನಮಗೆ ಆಡಲು ಕೊಡಬಹುದೇ? ಎಂದು ಕೇಳಿದರು. ಆಗ ಗುರುರಾಜ ರಾಯರು, ಬಹಳ ವಿನಯದಿಂದ "ನಾನು ಈಗ ಯಕ್ಷಗಾನದ ಎಲ್ಲ ಹವ್ಯಾಸವನ್ನೂ ಬಿಟ್ಟು ಬಿಟ್ಟಿದ್ದೇನೆ. ಆ ಪ್ರಸಂಗ ಬರೆದದ್ದು ಹೌದು. ಆದರೆ ಮೊನ್ನೆ ಯಾವುದೋ ಕಾರಣಕ್ಕೆ ಅಟ್ಟದ ಮೇಲಿದ್ದ ಪೆಟ್ಟಿಗೆಯನ್ನು ಹೊರ ತೆಗೆದಾಗ ಅದು ಸಿಕ್ಕಿ, ಇದರಿಂದ ಇನ್ನು ಉಪಯೋಗ ಇಲ್ಲ ಎಂದು ಹಾಗೆ ಬದಿಗೆ ಸರಿಸಿದ್ದೆ. ಈಗ ನೀವು ಅದನ್ನೇ ಕೇಳಿಬಿಟ್ಟಿರಿ. ನಾಳೆಯೇ ತರುತ್ತೇನೆ” ಎಂದು ಹೊರಟುಹೋದರು. ಗುರುರಾಜ ರಾಯರು, ಮಾರನೇ ದಿನವೇ ಆ ಪ್ರಸಂಗದ ಹಸ್ತಪ್ರತಿಯನ್ನು ತಂದು ಕೊಟ್ಟು, "ನಾನು ಈ ಹವ್ಯಾಸವೆಲ್ಲ ಸುಮ್ಮನೆ, ನಮ್ಮ ಬದುಕಿಗೆ ಅನ್ನ ಕೊಡಲಾರದವುಗಳು  ಎಂದು  ಮರೆತೇಬಿಟ್ಟಿದ್ದೆ. ನಿಮ್ಮಿಂದ ಪುನಹ ಮುವ್ವತ್ತು ನಲವತ್ತು ವರ್ಷ ಹಿಂದೆ ಹೋಗಿ, ನನ್ನ ಗತಕಾಲವನ್ನು ನೆನಪು ಮಾಡಿಕೊಳ್ಳುವಂತಾಯಿತು. ನೀವು ಇದನ್ನು ಆಡುವಂತೆ ಆದರೆ ನನಗೆ ಸಂತೋಷವೇ" ಎಂದರು.

ಗುರುರಾಜ ರಾಯರು ಹೇಳುವಂತೆ, ಮೊದಲು ಆ ಪ್ರಸಂಗದ ಹಲವಾರು ಪ್ರದರ್ಶನ ಆಗಿತ್ತಂತೆ. ಇಡೀ ರಾತ್ರಿಯ ಆಟ. ಒಮ್ಮೆ ತರಬೇತಿಯ ಸಮಯದಲ್ಲಿ ಆ ಪ್ರಸಂಗದಲ್ಲಿ ಬರುವ ಒಂದು ದೇವಿಯ “ಕನ್ನಿಕೆ” ಯೆಂಬ ಸಣ್ಣ ಪಾತ್ರಕ್ಕೆ ಹುಡುಗರು ಸಿಕ್ಕದೆಯಿದ್ದುದರಿಂದ, ಕೊನೆಗೆ ಕುಣಿತವೂ ಗೊತ್ತಿಲ್ಲದ ಒಬ್ಬ ಸಣ್ಣ ಹುಡುಗನಿಗೆ ಒತ್ತಾಯಿಸಿ, ಅವನಿಂದ ಆ ಪಾತ್ರ ಮಾಡಿಸಬೇಕಾಯಿತಂತೆ. ಆಗ ಆ ಹುಡುಗನ ಮೈಯಲ್ಲಿ ಇದ್ದ ತೊನ್ನು ರೋಗ ಆಟದ ಮರುದಿನ ನೋಡಿದಾಗ ಗುರುತೂ ಸಿಕ್ಕದಂತೆ ಮಾಯವಾಗಿ ಹೋಯಿತಂತೆ. ಅವರು ಅದನ್ನು ನೆನಪಿಸಿಕೊಂಡು ಈ ಪುತ್ತೂರಮ್ಮ ದೇವಿಯು ಬಹಳ ಕಾರಣಿಕಳು ಎಂದು ಸ್ಮರಿಸಿಕೊಂಡು, “ನಾವು ಆಗ ಎಷ್ಟೆಲ್ಲಾ ಕಷ್ಟಪಟ್ಟು ಹಗಲಿರುಳೂ ತೊಡಗಿಸಿಕೊಂಡು ಆಟ ಮಾಡಿದೆವು. ಆದರೆ ಈಗ ಅದೆಲ್ಲ ಯಾರಿಗೂ ಬೇಡವಾಗಿದೆ. ನನ್ನ ಎಲ್ಲ ಪ್ರಸಂಗ ಪುಸ್ತಕಗಳು ಆಸಕ್ತಿಗಳು, ಜೀವನದ ಉದ್ಯೋಗ, ಸಂಸಾರದ ಹೋರಾಟ ಮತ್ತು ಕಾಲದ ಮಹಿಮೆಯಿಂದ ಮನೆಯ ಅಟ್ಟವನ್ನು ಸೇರಿದ್ದು, ನೀವು ಅದನ್ನು ಉಪಯೋಗಿಸಿಕೊಳ್ಳುತ್ತೀರಿ ಅಂತಾದರೆ ಅದು ದೈವೇಚ್ಛೆ ಮತ್ತು ಅದೇ ನನ್ನ ಭಾಗ್ಯವೆಂದು ತಿಳಿಯುತ್ತೇನೆ” ಎಂದರು.

ಪುತ್ತೂರು ಕ್ಷೇತ್ರ ಮಹಾತ್ಮೆಯ ಪ್ರಸಂಗದ ಹಸ್ತಪ್ರತಿಯು ಹೀಗೆ ನನಗೆ ಸಿಕ್ಕಿದಂತಾಯಿತು. ಅದರಲ್ಲಿ ಸುಮಾರು ಇನ್ನೂರ ಎಪ್ಪತ್ತಾರು ಪದ್ಯಗಳಿದ್ದು ಆಗಿನ ಕಾಲದಲ್ಲಿ ಇಡೀ ರಾತ್ರಿ ಆಡುವಷ್ಟಿತ್ತು. ನಾನು ಅದರಲ್ಲಿ ನಮ್ಮ ಬ್ರಾಹ್ಮಣ ಸಂಘದ ಮಹಿಳಾ ತಂಡಕ್ಕೆ ಬೇಕಾಗಿ ಒಂದು, ಐವತ್ತು ಅರವತ್ತು ಪದ್ಯಕ್ಕೆ ಇಳಿಸಿ ಎರಡೂವರೆ ಗಂಟೆಯ ಆಟವನ್ನು ಮಾಡಲು ಸಿದ್ಧಮಾಡಬೇಕಾಗಿತ್ತು. ಕೆಲವು ದೃಶ್ಯಗಳನ್ನು ಕಡಿತಗೊಳಿಸಿ, ಮತ್ತೆ ಕೆಲವು ಪದ್ಯಗಳನ್ನು ಬದಲಾಯಿಸಬೇಕಾಯಿತು. ಅದಕ್ಕೆ ಗುರುರಾಜರ ಅನುಮತಿ ಕೇಳಿದೆ. ಆಗ ಅವರು “ನಿಮ್ಮ ಅಪ್ಪಯ್ಯ ನಮಗೆ ದೇವರ ಸಮಾನ. ಆದಿ ಉಡುಪಿಯಲ್ಲಿ ಆಟವಾದಾಗ ಕೆಲವೊಮ್ಮೆ ನಮ್ಮ ಅಪ್ಪಯ್ಯನ ಸ್ನೇಹದಿಂದ, ಉಪ್ಪೂರರು ನಮ್ಮ ಮನೆಗೂ ಬಂದು ಹಗಲು ಇದ್ದು ಸಂಜೆ ಹೋಗುತ್ತಿದ್ದರು. ಆಗೆಲ್ಲ ನಮಗೆ ಅವರ ಮುಂದೆ ಸುಳಿದಾಡುವುದೆಂದರೆ ಒಂದು ರೀತಿಯ ಸಂಭ್ರಮ. ಪೂಜ್ಯ ಭಾವ. ಅಂತಹ ಪುಣ್ಯಾತ್ಮರ ಮಗ ನೀವು. ನೀವು ಏನು ಬದಲಾಯಿಸಿದರೂ ನನ್ನ ಒಪ್ಪಿಗೆ ಇದೆ” ಎಂದು ಅನುಮತಿಯನ್ನು ಕೊಟ್ಟ ಪ್ರಕಾರ ಅವರ ಪ್ರಸಂಗವನ್ನು ಪರಿಷ್ಕರಿಸಿ ಒಂದು ಸ್ಕ್ರಿಪ್ಟ್ ಸಿದ್ಧಪಡಿಸಿದೆ.

ಆಗ ಮಹಿಳಾ ತಂಡದ ಆಟವನ್ನು ನಿರ್ದೇಶಿಸುತ್ತಿದ್ದ ಕೇಶವರಾವ್ ರಿಗೆ ಅದನ್ನು ಕೊಟ್ಟು ಅರ್ಥವನ್ನು ಬರೆಯಲು ತಿಳಿಸಿದೆ. ಅವರು ಸ್ವಲ್ಪ ದಿನದಲ್ಲಿಯೇ ಅರ್ಥವನ್ನು ಬರೆದು ಕೊಟ್ಟರು. ಅಂತೂ ಪ್ರಸಂಗದ ಸ್ಕ್ರಿಪ್ಟ್ ಸಿದ್ಧವಾಗಿ ಟ್ರಯಲ್ ಶುರುವಾಯಿತು. ಪುತ್ತೂರು ವಾರ್ಷಿಕ ಜಾತ್ರೆಯ ಸಮಯದಲ್ಲಿ ಆಟ ಆಡಲು ನಿರ್ಧರಿಸಿದೆವು. ಅಂದು ನಾನು ಆ ಪ್ರಸಂಗವನ್ನು ಒಂದು ಪುಸ್ತಕ ರೂಪದಲ್ಲಿ ಹೊರತರಬೇಕೆಂದು ಆಲೋಚಿಸಿದೆ. ನನ್ನ ಸ್ನೇಹಿತರಾದ ಸುಬ್ರಾಯರಿಗೆ ಹೇಳಿ, ಅವರ ಸೂರ್ಯ ಆಪ್ ಸೆಟ್ ಪ್ರಿಂಟರ್ಸ್ ಎಂಬ  ಪ್ರೆಸ್ಸಿನಲ್ಲಿ ಪುಸ್ತಕವನ್ನು ಮಾಡಿಸಿದೆ. ಜಾತ್ರೆಯ ದಿನ ಊರವರ ಸಮಕ್ಷಮದಲ್ಲಿ ಅದರ ಬಿಡುಗಡೆಯೂ ಆಗಿ, ಆ ಪ್ರಸಂಗವನ್ನು ಬರೆದ ಗುರುರಾಜ ರಾವ್ ರವರನ್ನು ದೇವಸ್ಥಾನದ ಮುಕ್ತೇಸರರಾದ ರಾಮ ಭಟ್ಟರ ಸಮ್ಮುಖದಲ್ಲಿ ಸನ್ಮಾನಿಸಿ, ಗೌರವಿಸಿದೆವು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ