ಶನಿವಾರ, ನವೆಂಬರ್ 18, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 59

ಉಡುಪಿಯಲ್ಲಿ ಒಮ್ಮೆ ಮಂಟಪ ಪ್ರಭಾಕರ ಉಪಾಧ್ಯರು ಅವರ ಪ್ರೋಗ್ರಾಮ್ ಗೆ ಬಂದಿದ್ದಾಗ, ಆ ಪ್ರೋಗ್ರಾಮ್ ನೋಡಲು ಹೋಗಿದ್ದ ನನಗೆ ಸಿಕ್ಕಿದರು. “ನನ್ನ ಹತ್ತಿರವೂ ಒಂದಷ್ಟು ಹಳೆಯ ವಿಹೆಚ್ಎಸ್ ಕ್ಯಾಸೆಟ್ ಗಳಿವೆ ಮಾರಾಯ್ರೆ. ನಿಮಗೆ ಉಪಯೋಗ ಬರುತ್ತದಾ, ನೋಡ್ತೀರಾ? ಎಂದು ಹೇಳಿದರು. ನಾನು “ಕಳಿಸಿಕೊಡಿ” ಎಂದೆ. ಅವರು ಮುಂದಿನ ಸಲ ಉಡುಪಿಗೆ ಬಂದಾಗ, ಒಂದು ವಿಸಿಆರ್ ನ್ನೂ, ಮೂರು ದೊಡ್ಡ ರಟ್ಟಿನ ಪೆಟ್ಟಿಗೆಯ ತುಂಬಾ ಹಲವಾರು ವಿಹೆಚ್ಎಸ್ ಕ್ಯಾಸೆಟ್ ಗಳನ್ನು ಕಾರಿಗೆ ಹಾಕಿಕೊಂಡು ಬಂದು, “ಉಪ್ಪೂರ್ರೆ, ನಿಮ್ಮ ಸಂಗ್ರಹವನ್ನು ಕಂಡು ನಾನು ಬೆರಗಾಗಿದ್ದೇನೆ. ಹಾಗೆಯೇ ನನ್ನದು ಇದು ಕಸವೆಂದು ಭಾವಿಸದೇ ನಿಮ್ಮಲ್ಲಿ ಇಟ್ಟುಕೊಳ್ಳಿ” ಎಂದೂ, “ಇದನ್ನು ತೆಗೆದುಕೊಳ್ಳಿ. ಬೇಡ ಎನ್ನಿಸಿದರೆ ದಯವಿಟ್ಟು ವಾಪಾಸು ಕಳಿಸಬೇಡಿ ಸುಟ್ಟುಬಿಡಿ” ಎಂದು ನನಗೆ ಹಸ್ತಾಂತರಿಸಿದರು. ಅವುಗಳಲ್ಲಿ ಎಡನೀರು ಮಠದಲ್ಲಿ ಆಗಿದ್ದ, ಲೈವ್ ಕಾರ್ಯಕ್ರಮಗಳು, ಮಹಾಬಲ ಹೆಗಡೆಯವರ, ಶಂಭು ಹೆಗಡೆಯವರ, ಚಿಟ್ಟಾಣಿಯವರ, ಕಾಳಿಂಗ ನಾವಡರ, ಶೇಣಿಯವರ ಮತ್ತು ತೆಂಕುತಿಟ್ಟಿನ ಅಮೂಲ್ಯವಾದ ಯಕ್ಷಗಾನದ ವಿಡಿಯೋಗಳು ಸಿಕ್ಕಿದವು.  ನಾನು, ಮತ್ತಿಗಾರರು, ಕೈಗಾ ಭಾಗವತರು ಮತ್ತು ಗಣೇಶಭಟ್ರು ಒಟ್ಟಾಗಿ ಅವುಗಳನ್ನೆಲ್ಲ ಡಿವಿಡಿ ಮಾಡಿಸಿ, ದಾಖಲೆಯಾಗಿ ಇಟ್ಟುಕೊಂಡೆವು. ಹಾಗೂ ಉಡುಪಿಯ ಕಲಾರಂಗದ ಆಫೀಸಿನಲ್ಲಿಯೂ, ಎಸ್.ವಿ.ಭಟ್ ರವರಲ್ಲಿಯೂ ಕೆಲವು ಹಳೆಯ ಮತ್ತು ಈಗಿನ ಆಡಿಯೋ, ವಿಡಿಯೋಗಳನ್ನು ಪಡೆದ್ದಾಯಿತು.

ನನ್ನ ಹಳೆಯ ಹಾರ್ಡ್ ಡಿಸ್ಕ್ ಗಳಲ್ಲಿ ಒಂದು, ಒಮ್ಮೆ ಓಪನ್ನೇ ಆಗದೆ ಹಾಳಾಗಿಬಿಟ್ಟಿತು. ಪುಣ್ಯಕ್ಕೆ ನಾನು ಅದರಲ್ಲಿ ಇರುವ ಎಲ್ಲ ಫೈಲುಗಳನ್ನು ಬೇರೆಯವರಿಗೆ ಕೊಟ್ಟು, ಇಟ್ಟದ್ದರಿಂದ ಪುನಹ ಪಡೆಯುವುದು ಕಷ್ಟವಾಗಲಿಲ್ಲ. ಆಗ ಒಮ್ಮೆ ಜೋಯಿಸರಿಗೆ ಹೇಳಿದೆ. “ನೋಡಿ, ಇವುಗಳನ್ನೆಲ್ಲ ಸಿಡಿಗಳಲ್ಲಿ ಹಾಕಿ ಇಟ್ಟದ್ದೂ ಉಳಿಯುವುದಿಲ್ಲ. ಹಾರ್ಡ್ ಡಿಸ್ಕೂ ಹೆಚ್ಚು ಸಮಯ ಬಾಳಿಕೆ ಬರಲಾರದು ಅನ್ನಿಸುತ್ತದೆ. ಕಂಪ್ಯೂಟರ್ ಲ್ಲಿ ಇಟ್ಟುಕೊಳ್ಳುವುದಂತೂ ತುಂಬಾ ಅಪಾಯ. ನಾವು ಇಷ್ಟೆಲ್ಲಾ ಮಾಡಿಯೂ ಇವುಗಳನ್ನು ಮುಂದಿನವರಿಗೆ ಸಂರಕ್ಷಿಸಿ ಇಡಲು ಸಾಧ್ಯವಾಗದೇ ಇದ್ದರೆ, ನಾವು ಇಷ್ಟೆಲ್ಲ ಮಾಡಿಯೂ ವ್ಯರ್ಥವಾಗುತ್ತದಲ್ಲ ಮರ್ರೆ” ಎಂದೆ. ಅವರು “ಮತ್ತೇನು ಮಾಡುವುದು?” ಎಂದರು. ನಾನು “ಇದನ್ನು ಕ್ಲೌಡ್ ನಲ್ಲಿ ಸಂಗ್ರಹಿಸಿ ಇಡಲು ಸಾಧ್ಯವಾದರೆ ಬ್ಯಾಕ್ ಅಪ್ ಇದ್ದು, ಉಳಿಸುವುದು ಸಾಧ್ಯವಾಗುತ್ತದಾ ನೋಡಬಹುದು. ಅದರ ಬಗ್ಗೆ ನನಗೆ ಹೆಚ್ಚು ಅನುಭವ ಇಲ್ಲ” ಎಂದೆ. ಆಗ ನಮ್ಮ ನಾಲ್ಕಾರು ಆಪ್ತ ಸ್ನೇಹಿತರೊಂದಿಗೆ ವಿಚಾರಿಸಿ, ಚರ್ಚಿಸಿದೆವು.

ಆಗ ಒಂದು ಸಮಸ್ಯೆ ಎದುರಾಯಿತು. ನಮ್ಮ ಇಷ್ಟೆಲ್ಲ ಸಂಗ್ರಹಗಳಲ್ಲಿ ಯಾವುದೂ ನಮ್ಮದಲ್ಲ. ಅಲ್ಲಿ ಇಲ್ಲಿ ಸಂಗ್ರಹಿಸಿದ್ದು. ಯಾರ ಯಾರದ್ದೋ ನಿರ್ಮಾಪಕರ, ಕಲಾವಿದರ, ದಾಖಲಿಸಿದವರಿಗೆ ಅದರ ಹಕ್ಕು ಹೊರತು, ಸಂಗ್ರಹಿಸಿದ ನಮಗೆ ಅದರ ಮೇಲೆ ಯಾವುದೇ ರೀತಿಯ ಹಕ್ಕೂ ಇಲ್ಲ ಎಂದು ಕೆಲವರು ಹೇಳಿ, “ಅದನ್ನು ನೆಟ್ ಗೆ ಏರಿಸಲು ಕಾನೂನಿನ ತೊಡಕು ಇದೆಯೋ ನೋಡಿಕೊಳ್ಳಬೇಕು” ಎಂದು ಎಚ್ಚರಿಸಿದರು. ಕಾನೂನು ಏನೇ ಹೇಳಲಿ. ನಾವು ಅದನ್ನು ಮಾರಾಟಮಾಡಿ ಹಣಗಳಿಸುತ್ತಿಲ್ಲ. ಬೇರೆಯವರ ಆದಾಯವನ್ನು ಕಸಿದುಕೊಳ್ಳುತ್ತಲೂ ಇಲ್ಲ ಯಾಕೆಂದರೆ ನಾವು ಯಾವುದೇ ಫೈಲುಗಳ, ಹತ್ತಾರು ಪ್ರತಿಗಳನ್ನು ಮಾಡಿ ನಮ್ಮ ಹೆಸರು ಹಾಕಿ ಇರಿಸುವುದಿಲ್ಲ. ಯಾರಾದರೂ ಅದು ತಮ್ಮದೆಂದು ಹಕ್ಕು ಸ್ಥಾಪಿಸಿದಾಗ ನೋಡಿದರಾಯಿತು ಎಂದು ಸಮಾಧಾನ ಮಾಡಿಕೊಂಡರೂ, ಮತ್ತೇನು ಮಾಡುವುದು? ಎಂದು ತೀರ್ಮಾನಿಸುವುದು ಸಾಧ್ಯವಾಗಲಿಲ್ಲ.

ಆಗ ಜೋಯಿಸರು, ನೈಜೀರಿಯದಲ್ಲಿ ಕೆಲಸದಲ್ಲಿದ್ದು, ಆಗಾಗ ಊರಿಗೆ ಬಂದು ಒಂದಷ್ಟು ಯಕ್ಷಗಾನಗಳನ್ನು ಮಾಡಿ, ಕಲಾವಿದರಿಗೆ, ಕಲಾಭಿಮಾನಿಗಳಿಗೆ ಪರಿಚಿತರಾಗಿ,, ಜನಪ್ರಿಯರಾಗಿದ್ದ ಹಾಗೂ ಕುಂದಾಪುರದ ಉಪ್ಪಿನಕುದ್ರಿನವರೇ ಆದ ರಾಜಶೇಖರ ಹಂದೆಯವರನ್ನು ಸಂಪರ್ಕಿಸಿ, ಅವರಿಗೆ ನಮ್ಮ ಒಂದಷ್ಟು ಸಂಗ್ರಹಗಳನ್ನು ಅವರದೇ ಹಾರ್ಡ್ ಡಿಸ್ಕಿಗೆ ಹಾಕಿಕೊಟ್ಟು, ಇದನ್ನೆಲ್ಲ ಸಂರಕ್ಷಸಿ ಇಡಲು ಏನಾದರೂ ಮಾಡಲು ಸಾಧ್ಯವೇ? ಎಂದು ಚರ್ಚಿಸಿದರು. ಕೂಡಲೆ ಹಂದೆಯವರು ಧನಾತ್ಮಕವಾಗಿ ಸ್ಪಂದಿಸಿ, ಲಾನ್ ವ್ಯವಸ್ಥೆಯಿರುವ ಒಂದು ದೊಡ್ಡ ಸಾಮರ್ಥ್ಯದ ಒಂದು ಸರ್ವರ್ ನ್ನು ಕಳಿಸಿಯೇ ಬಿಟ್ಟರು. ಅದರಲ್ಲಿ ಸ್ಟೋರ್ ಮಾಡಿ ಇಡಲು, ಜೋಯಿಸರು “ಅದು ನಿಮ್ಮಲ್ಲಿಯೇ ಇರಲಿ” ಎಂದು ನನಗೆ ಕಳಿಸಿಕೊಟ್ಟರು. ನಾನು ಅದರ ಪೂರ್ಣ ಉಪಯೋಗ ತಿಳಿಯದಿದ್ದರೂ ಅದಕ್ಕೆ ನನ್ನಲ್ಲಿದ್ದ ಸಂಗ್ರಹಗಳನ್ನು ಒಂದೊಂದಾಗಿ, ಅಪ್ ಲೋಡ್ ಮಾಡುತ್ತಾ ಬರುತ್ತಿದ್ದೇನೆ.

ಮಂಗಳೂರು ಪರಿಸರದಲ್ಲಿ ನಮ್ಮ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಒಂದು ಕೆಲಸವನ್ನು, ಒಬ್ಬ ದೊಡ್ಡ ಗುತ್ತಿಗೆದಾರರಿಗೆ ವಹಿಸಿದ್ದರು. ಅದನ್ನು ಅವರು ಮಾಡಿ ಮುಗಿಸಿದ ಮೇಲೆ, ಅದಕ್ಕೆ ಸಂಬಂಧಿಸಿದ ದೊಡ್ಡ ಬಿಲ್ಲನ್ನು ಸಲ್ಲಿಸಬೇಕಾದ ಎಲ್ಲ ದಾಖಲೆಗಳೊಂದಿಗೆ ಗುತ್ತಿಗೆದಾರರು ಸಲ್ಲಿಸಿದ್ದರು. ಬಿಲ್ಲಿನ ಮೊತ್ತ ಹಲವು ಲಕ್ಷದಷ್ಟು ದೊಡ್ಡದಾದುದರಿಂದ ಬಿಲ್ಲು ಸಲ್ಲಿಸಿದ ಬೆನ್ನಿಗೇ, ಬೇಗ ಪಾಸು ಮಾಡಬೇಕು ಎನ್ನುವ ಒತ್ತಡವೋ ವಶೀಲಿಯೋ ನಡೆಯುವುದು ಸಾಮಾನ್ಯ. ಜೊತೆಗೆ ಆ ಗುತ್ತಿಗೆದಾರರು ಪ್ರಭಾವಿಗಳಾದುದರಿಂದ ಮತ್ತು ನನಗೂ ತುಂಬಾ ಪರಿಚಿತರೂ ಆದುದರಿಂದ, ಫೋನಿನಲ್ಲೇ ಒಮ್ಮೆ, “ಉಪ್ಪೂರರೆ ನಂದು ಒಂದು ಬಿಲ್ಲು ಇತ್ತು. ನಿಮಗೇನೂ ಹೇಳಬೇಕಾಗಿಲ್ಲ. ನಿಮ್ಮಲ್ಲಿ ಉಳಿಯುವುದಿಲ್ಲ ಎಂದು ಗೊತ್ತು. ಅಂತಹ ಅರ್ಜೆಂಟೇನಿಲ್ಲ. ಹೀಗೆ ಮಾತಾಡುತ್ತಾ ಮಾತಿನ ಮಧ್ಯ ನೆನಪಾಯಿತು. ಹೇಳಿದೆ” ಎಂದು ಪರೋಕ್ಷವಾಗಿ, ಬೇಗ ಪಾಸು ಮಾಡಬೇಕೆಂದು ಸೂಚನೆಯನ್ನೂ ಕೊಟ್ಟರು. ನಾನು ಅದನ್ನು ಪಾಸು ಮಾಡಲು, ನನ್ನ ಬಿಲ್ಲು ಪಾಸು ಮಾಡುವ ಗುಮಾಸ್ತರಿಗೆ ತಿಳಿಸಿದೆ. ಅದನ್ನು ಪರಿಶೀಲಿಸುವಾಗ ಆ ಹೊಸ ಕೆಲಸವನ್ನು ಕೈಗೆತ್ತಿ ಕೊಳ್ಳುವ ಸಮಯದಲ್ಲಿ, ಆ ಸ್ಥಳದಲ್ಲಿ ಮೊದಲು ಇದ್ದ ಕಂಪೆನಿಯದೇ ಆದ ಸುಮಾರು ಸಾವಿರಾರು ರೂಪಾಯಿ ಬೆಲೆಬಾಳುವ ವಿದ್ಯುತ್ ತಂತಿ, ಕಂಬ ಮತ್ತು ಇತರ ಸಾಮಗ್ರಿಗಳನ್ನು ಅವರು ಕಂಪೆನಿಯ ಉಗ್ರಾಣಕ್ಕೆ ಹಿಂತಿರುಗಿಸಬೇಕಿತ್ತು. ಆ ಕೆಲಸವು ನಡೆಯುತ್ತಿರುವಾಗಲೇ ಅದರ ಮೇಲ್ವಿಚಾರಣೆ ಮಾಡಬೇಕಾದ ಶಾಖಾಧಿಕಾರಿಗಳು ಆ ಬಗ್ಗೆ ಆಗಲೇ ಎಚ್ಚರವಹಿಸಿ ಗುತ್ತಿಗೆದಾರರಿಗೆ ಹೇಳಿ, ಅಲ್ಲಿ ಇದ್ದ ಹಳೆಯ ಸಾಮಗ್ರಿಗಳನ್ನು ವಾಪಾಸು ಮಾಡಲು ತಿಳಿಸಬೇಕಾಗಿತ್ತು. ಆದರೆ ಅವರು ಹೇಳಿಯೂ ಗುತ್ತಿಗೆದಾರರು ಕಡೆಗಣಿಸಿದರೋ, ಅಥವ ಆ ಶಾಖಾಧಿಕಾರಿಯವರೇ, ಇವರು ಪ್ರಭಾವೀ ಗುತ್ತಿಗೆದಾರರು ಎಂದು ಹೇಳಲು ಹೆದರಿ ಸುಮ್ಮನಾದರೋ, ಅಂತೂ ಅಷ್ಟು ಸಾಮಗ್ರಿಗಳು ವಾಪಾಸು ಬಾರದೆ  ಕಂಪೆನಿಗೆ ನಷ್ಟವಾಗಿತ್ತು.

ನಾನು ಗುತ್ತಿಗೆದಾರರನ್ನು ಪೋನ್ ನಲ್ಲಿ ಸಂಪರ್ಕಿಸಿ, ಅದನ್ನು ಹಿಂತಿರುಗಿಸಬೇಕಾಗುತ್ತದಲ್ಲ? ಎಂದು ತಿಳಿಸಿದೆ. ಆದರೆ ಆ ಗುತ್ತಿಗೆದಾರರು “ಆ ಸಾಮಗ್ರಿಗಳು ಈಗ ಸ್ಥಳದಲ್ಲಿಯೂ ಇಲ್ಲ. ಎಲ್ಲಿ ಹೋಯಿತೋ ನಮಗೂ ಗೊತ್ತಿಲ್ಲ. ನಾವಂತೂ ತೆಗೆದುಕೊಂಡು ಹೋಗಿಲ್ಲ. ಅದೆಲ್ಲ ಕೆಲಸದ ಮೇಲ್ವಿಚಾರಣೆ ಮಾಡುವ ಶಾಖಾಧಿಕಾರಿಗಳ ಹೊಣೆ. ಈಗ ಅದೆಲ್ಲ ಮುಗಿದ ಕತೆ. ಇನ್ನು ಏನೂ ಮಾಡಲು ಆಗುವುದಿಲ್ಲ. ಬಿಟ್ಟು ಬಿಡಿ”. ಎಂದು ಹೇಳಿದರು. ನಾನು ಒಪ್ಪಲಿಲ್ಲ. ಆ ಸಾಮಗ್ರಿಗಳು ಲಭ್ಯವಾಗದೇ ಹೋದರೆ ಹೋಗಲಿ ಅದರ ಮೌಲ್ಯವಾದರೂ ಕಂಪೆನಿಯ ಆದಾಯದ ಲೆಕ್ಕಕ್ಕೆ ಬರಲೇಬೇಕಲ್ಲ. ಇಲ್ಲದೇ ಹೋದಲ್ಲಿ ಅದನ್ನು ಒಂದೋ, ಅವರ ಬಿಲ್ಲಿನಲ್ಲಿ ವಸೂಲಿಮಾಡಬೇಕು ಇಲ್ಲವೇ ಶಾಖಾಧಿಕಾರಿಗಳ ನಿರ್ಲಕ್ಷ್ಯತನ ಎಂದು ಅವರಿಗೆ ನೋಟೀಸು ನೀಡಿ, ಅವರ ಸಂಬಳದಿಂದ ಮುರಿದುಕೊಳ್ಳಬೇಕು. ಅಂತೂ ನಿರ್ಧಿರಿಸಲು ನನಗೆ ಕಷ್ಟವಾಗಿ, ನನ್ನ ಮೇಲಧಿಕಾರಿಗಳಾದ ವಿಭಾಗಾಧಿಕಾರಿಗಳಿಗೆ ಒಂದು ನೋಟ್ ಬರೆದು, ಹೀಗೆ ಹೀಗೆ ಆಗಿದೆ. ಮುಂದೆ ಆ ಮೊತ್ತವನ್ನು ಯಾರಿಂದ ವಸೂಲಿಮಾಡಬೇಕು? ಎಂದು ನಿರ್ದೇಶನ ನೀಡಬೇಕೆಂದು ಕೇಳಿದೆ.

ಅವರು ಸೀದಾ ಸ್ವಭಾವದ ನೇರ ನಡೆಯವರು. “ಅದು ಆ ಕೆಲಸದ ಮೇಲ್ವಿಚಾರಣೆಯನ್ನು ಮಾಡುತ್ತಿದ್ದ ಆ ಶಾಖಾಧಿಕಾರಿಗಳ ಹೊಣೆಯಲ್ಲವೇ? ಆಗಲೇ ಅದನ್ನು ಉಗ್ರಾಣಕ್ಕೆ ಹಾಕಿಸಬೇಕಿತ್ತು. ಅವರದೇ ನಿರ್ಲಕ್ಷ್ಯವಾದ್ದರಿಂದ ನೋಟೀಸು ನೀಡಿ, ಅವರ ಸಂಬಳದಿಂದ ವಸೂಲಿಮಾಡಿ” ಎಂದು ತೀರ್ಮಾನ ನೀಡಿಬಿಟ್ಟರು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ