ಭಾನುವಾರ, ನವೆಂಬರ್ 19, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 60

ಆದರೆ ನನಗೆ ಆ ಕ್ರಮ ಅಷ್ಟು ಸರಿಯೆನಿಸಲಿಲ್ಲ. ಶಾಖಾಧಿಕಾರಿಗಳ ನಿರ್ಲಕ್ಷ್ಯವು ಅಲ್ಲಿರುವುದು ಹೌದಾದರೂ, ಆ ಹಳೆಯ ಸಾಮಗ್ರಿಗಳು ಹಾಗೆ ಕಣ್ಮರೆಯಾಗುವುದಕ್ಕೆ ಹೇಗೆ ಸಾಧ್ಯ? ಎಲ್ಲಾದರೂ ಇರಲೇ ಬೇಕಲ್ಲ? ಅದು ಆ ಗುತ್ತಿಗೆದಾರರಲ್ಲೇ ಸಾಮಾನ್ಯವಾಗಿ ಇರುತ್ತದೆ ಎಂದು ಗೊತ್ತಿದ್ದರೂ, ಅವರು ಅದನ್ನು ಒಪ್ಪಿಕೊಳ್ಳದೇ, ವಸೂಲಿ ಮಾಡುವ ಹಾಗಿಲ್ಲ. ನನಗೆ ಧರ್ಮಸಂಕಟವಾಯಿತು. ಆದರೂ ಶಾಖಾಧಿಕಾರಿಗಳಿಗೆ ಒಂದು ನೋಟೀಸು ಕೊಟ್ಟೆ. ಅವರು ಓಡಿ ಬಂದು, “ನಾನೂ ಕೆಲಸ ನಡೆಯುವಾಗಲೇ ಗುತ್ತಿಗೆದಾರರಿಗೆ ಭಾರಿ ಭಾರಿ ಹೇಳಿದ್ದೇನೆ. ಆದರೆ ಅವರು ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದೇ ಇದ್ದುದರಿಂದ ಹೀಗಾಗಿದೆ. ಆ ಹಳೆಯ ಸಾಮಗ್ರಿಗಳ ಮೊತ್ತವನ್ನು ಗುತ್ತಿಗೆದಾರರ ಬಿಲ್ಲಿನಲ್ಲಿ ಕಡಿತಗೊಳಿಸಿ, ಬಿಲ್ಲು ಪಾವತಿಮಾಡಬೇಕು” ಎಂದು ತಿಳಿಸಿ ಹಾಗೆಯೇ ಉತ್ತರವನ್ನೂ ಬರೆದುಕೊಟ್ಟರು. ಗುತ್ತಿಗೆದಾರರಿಗೂ ಒಂದು ನೋಟೀಸು ಬಿಟ್ಟೆವು. ಆದರೆ ಅವರು, ಅವರ ಬಿಲ್ಲಿನಲ್ಲಿ ಆ ಮೊತ್ತವನ್ನು ಕಡಿತಗೊಳಿಸಲು ಆಕ್ಷೇಪವಿದೆಯೆಂದು ಮಾರುತ್ತರ ಕೊಟ್ಟುಬಿಟ್ಟರು. ತೀರ್ಮಾನವಾಗದೇ ಬಿಲ್ಲು ಬಾಕಿಯಾಯಿತು. ಗುತ್ತಿಗೆದಾರರು ಬಿಲ್ಲು ಪಾವತಿಮಾಡಲು ಒತ್ತಡವನ್ನೂ ತರಲು ಶುರುಮಾಡಿದರು. ಅವರಿಗೆ ನಮ್ಮ ಕಛೇರಿ ವ್ಯವಹಾರಗಳು ಇತರ ವಿಷಯಗಳು ಗೊತ್ತಿರುವುದರಿಂದ ಅವರನ್ನು ಕರೆಸಿ ಮನವೊಲಿಸುವ ನನ್ನ ಪ್ರಯತ್ನವೂ ಕೈಗೂಡಲಿಲ್ಲ. ಕೊನೆಗೆ ನನ್ನ ಮೇಲಧಿಕಾರಿಗಳೇ, “ಆ ಬಿಲ್ಲು ಏನಾಯ್ತು? ಏನಾದರೂ ಮಾಡಿ ಬೇಗ ಇತ್ಯರ್ಥ ಮಾಡಿಬಿಡಿ” ಎನ್ನತೊಡಗಿದರು. ನನಗೆ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗಿ, ನೇರವಾಗಿ ಆಡಳಿತ ಕಛೇರಿಯ ಹಿರಿಯ ಅಧಿಕಾರಿಗಳನ್ನು ಫೋನಿನಲ್ಲಿ ಸಂಪರ್ಕಿಸಿ ಏನು ಮಾಡಬೇಕೆಂದು ಕೇಳಿದೆ. ಅವರು, “ನಮಗೆ ಬರೆಯಿರಿ ನಾವೇ ಸೂಕ್ತವಾದ ನಿರ್ದೇಶನವನ್ನು ಕೊಡುತ್ತೇವೆ” ಎಂದರು. ನಾನು ಮೊದಲಿಂದ ಎಲ್ಲ ವಿವರವನ್ನು ಕಾಣಿಸಿ ಒಂದು ದೀರ್ಘ ಪತ್ರವನ್ನು ಬರೆದೇ ಬಿಟ್ಟೆ. ಆಗ ನಮ್ಮ ವಿಭಾಗಾಧಿಕಾರಿಗಳಿಗೆ ಅದು ಗೊತ್ತಾಗಿ, “ನಿಮಗೆ ಏನು ಮಾಡಬೇಕೆಂದು ನಾನು ತಿಳಿಸಿದ ಮೇಲೂ, ನೀವು ನನಗೆ ತಿಳಿಯದಂತೆ ಆಡಳಿತ ಕಛೇರಿಗೆ ಬರೆದು, ನನಗೆ ಅವಮಾನ ಮಾಡಿದಿರಿ” ಎಂದು ಕೂಗಾಡಿಬಿಟ್ಟರು. ನನಗೆ ಏನು ಮಾಡಬೇಕೆಂದೇ ತಿಳಿಯಲಿಲ್ಲ.

ಇತ್ತ, ನಮ್ಮ ನೌಕರರ ಯೂನಿಯನ್ ಲೀಡರ್ ಗಳೂ ನನ್ನ ಚೇಂಬರಿಗೆ ಬಂದು “ನಮ್ಮ ನೌಕರರಿಂದ ಸಾಮಗ್ರಿಯ ಮೌಲ್ಯವನ್ನು ಹೇಗೆ ವಸೂಲಿ ಮಾಡುತ್ತೀರಿ?, ನಾವೂ ನೋಡುತ್ತೇವೆ” ಎಂದು ಬೆದರಿಕೆಯನ್ನೂ ಹಾಕಿಹೋದರು. ಕೊನೆಗೆ ನಾನು ಆಗ ನನ್ನ ಆಪ್ತರೂ ಅಗಿದ್ದ ಇಂಜಿನಿಯರ್ ರಲ್ಲಿಗೆ  ಖಾಸಗಿಯಾಗಿ ಹೋಗಿ, ಮಾತಾಡಿದೆ. “ಇದನ್ನು ಯಾವ ರೀತಿ ಬಗೆಹರಿಸಬೇಕು?” ಎಂದು ಎಲ್ಲ ಕಡತವನ್ನು ತೋರಿಸಿ, ಸಲಹೆಯನ್ನು ಕೇಳಿದೆ. ಅವರು ಎಲ್ಲವನ್ನೂ ಕೇಳಿಕೊಂಡರು, ಆದರೆ ನನಗೆ ಯಾವುದೇ ತೀರ್ಮಾನದ ಉತ್ತರವನ್ನೂ ಕೊಡದೇ “ನೋಡುವ” ಎಂದು ವಾಪಾಸು ಕಳಿಸಿದರು. ಆದರೆ ಅವರು ನಮ್ಮ ವಿಭಾಗಾಧಿಕಾರಿಗಳನ್ನು ಕರೆಸಿ ಏನೋ ನಿರ್ದೇಶನ ಕೊಟ್ಟಿರಬೇಕು. ಆಗಿನಿಂದ ನಮ್ಮ ವಿಭಾಗಾಧಿಕಾರಿಗಳು ಮನಸ್ಸು ಬದಲಾಯಿಸಿ, “ನೀವು ಹೇಗೆ ತೀರ್ಮಾನ ತೆಗೆದುಕೊಂಡರೂ ಅಡ್ಡಿಲ್ಲ. ಬೇಗ ಬಿಲ್ಲು ಪಾಸು ಮಾಡಿ ಮುಗಿಸಿಬಿಡಿ. ಗುತ್ತಿಗೆದಾರರು ನನ್ನನ್ನು ಕೇಳುತ್ತಿದ್ದಾರೆ” ಎಂದು ನನ್ನನ್ನು ಕರೆಸಿ ಹೇಳಿದರು. ಗುತ್ತಿಗೆದಾರರೂ ಮತ್ತೆ ಒತ್ತಾಯಿಸಲು ಬರಲಿಲ್ಲ. ನಾನು ಗುತ್ತಿಗೆದಾರರ ಬಿಲ್ಲಿನಿಂದ ಆ ಮೊತ್ತವನ್ನು ಕಡಿತಗೊಳಿಸಿಯೇ ಬಿಲ್ಲು ಪಾವತಿಸಿ ಪ್ರಕರಣ ಮುಗಿಸಿಬಿಟ್ಟೆ. ಗುತ್ತಿಗೆದಾರರೂ ನಮ್ಮ ಆಫೀಸಿಗೆ ಬಂದು “ನಮ್ಮ ಆಕ್ಷೇಪವಿದ್ದರೂ ನೀವು ಬಿಲ್ಲಿನಲ್ಲಿ ಹಣವನ್ನು ಕಡಿತ ಮಾಡಿ ನಮಗೆ ನಷ್ಟ ಮಾಡಿದಿರಿ. ನೀವಾದುದಕ್ಕೆ ಹೋಗಲಿ ಎಂದು ಬಿಟ್ಟಿದ್ದೇವೆ. ಬೇರೆ ಯಾರಾದರೂ ಆಗಿದ್ದರೆ ಒಂದು ಕೈ ನೋಡಿಕೊಳ್ಳುತ್ತಿದ್ದೆವು” ಎಂದು ಸಮಾಧಾನವಾಗಿಯೇ ಹೇಳಿ, ಮಾತಾಡಿಸಿಕೊಂಡು ಹೋದವರು, ಅದನ್ನು ಮುಂದುವರಿಸದೇ ಅಲ್ಲಿಗೆ ಬಿಟ್ಟುಬಿಟ್ಟರು.

ನಾನು ಕೆಲಸಕ್ಕೆ ಸೇರುವ ಮೊದಲು ಕಲ್ಲಟ್ಟೆಯ ಮನೆಯಲ್ಲಿದ್ದಾಗ ಬರೆದ “ಚಂದ್ರನಖಿ” ಎಂಬ ಯಕ್ಷಗಾನ ಪ್ರಸಂಗವನ್ನು ಪ್ರಿಂಟ್ ಮಾಡಿಸಬೇಕು ಅಂತ ಮನಸ್ಸಾಯಿತು. ಮತ್ತೊಮ್ಮೆ ಅದನ್ನು ರೀ ರೈಟ್ ಮಾಡಿದೆ. ಆಗಲೇ ಮೊದಲು ಬರೆದದ್ದರಲ್ಲಿ ಬಹಳಷ್ಟನ್ನು ಬದಲಾವಣೆ ಮಾಡಬೇಕಾಯಿತು. ಕೆಲವು ಪದ್ಯಗಳನ್ನೇ ಬಿಟ್ಟು, ಕೆಲವು ದೃಶ್ಯಗಳನ್ನು ಹಿಂದೆ ಮುಂದೆ ಮಾಡಿ, ಸರಿಪಡಿಸಿದೆ. ಉಡುಪಿಯ ಕಿನ್ನಿಮೂಲ್ಕಿಯ ಶ್ರೀನಿಧಿ ಪ್ರಿಂಟರ್ಸ್ ನ ಮಾಧವ ಐತಾಳರ ಪ್ರಿಂಟಿಂಗ್  ಪ್ರೆಸ್ ನಲ್ಲಿ ಪುಸ್ತಕ ಮಾಡಿಸಲು ಕೊಟ್ಟೆ. ಪುಸ್ತಕ ಖರ್ಚಾಗುವುದಿಲ್ಲ ಎಂದು ಗೊತ್ತಿದ್ದು, ಹಣ ದಂಡ ಮಾಡಬಾರದು ಎಂದು ಮುಂಜಾಗ್ರತೆಯಾಗಿ ಕೇವಲ ಐನೂರು ಪ್ರತಿಯನ್ನಷ್ಟೇ ಮಾಡಿಸಿದ್ದೆ. ಆ ಪ್ರಸಂಗದಲ್ಲಿ  ನಾನು ಆವರೆಗೆ ಓದಿ ನೋಟ್ ಮಾಡಿಕೊಂಡ ಎಲ್ಲಾ ಯಕ್ಷಗಾನ ಛಂದಸ್ಸುಗಳ, ಪದ್ಯದ ಧಾಟಿಗಳನ್ನು ಒಂದೇ ಪ್ರಸಂಗದಲ್ಲಿ ತರುವ ಒಂದು ಹುಚ್ಚಿದ್ದಿತ್ತು. ಮೊಟ್ಟಮೊದಲು ಬರೆದ ಮತ್ತು ಇಷ್ಟದ ಪ್ರಸಂಗವಾದ್ದರಿಂದ, ಅದರಲ್ಲಿ ಚಮತ್ಕಾರವಾಗಿ ಹಲವು ಶಬ್ಧಗಳನ್ನು, ಅಕ್ಷರಗಳ ಪುರಾವರ್ತನೆಯ ಜೋಡಣೆಯನ್ನು ಮಾಡಿದ್ದು, ತುಂಬಾ ಕಷ್ಟಪಟ್ಟು ಬರೆದಿದ್ದೆ. ಪ್ರಸಂಗ ಹೀಗೆ ಸಾಗುತ್ತದೆ.

ರಾವಣನ ಆಜ್ಞೆಯಂತೆ ಮಾರೀಚನು, ಶೂರ್ಪನಖಿಗೆ ಮದುವೆ ಮಾಡಲು ಕೌಳಿಕಾಲಯದ ವಿದ್ಯುಜ್ಜಿಹ್ವನಲ್ಲಿಗೆ ಬಂದು, ಶೂರ್ಪನಖಿಯ ಚಂದವನ್ನು ಬಣ್ಣಿಸಿ ಮದುವೆಯಾಗಲು ಹೇಳುತ್ತಾನೆ. ಆಗ ವಿದ್ಯುಜ್ಜಿಹ್ವನು,

ಬೇಹಾಗ್ ಏಕ
ಅಂಗಜನ | ಅಂಗನೆಯ | ಹಂಗಿಪ ಕು | ರಂಗನಯ |
ನಂಗಳಿಹ | ಭೃಂಗಲಕೆ | ಸಿಂಗ ಕಟಿ | ತುಂಗ ಕುಚೆಯ ||

ತೋರಿಸು ಎಂದಾಗ,  ಉದ್ಯಾನದಲ್ಲಿ ಚಂದ್ರನಖಿಯನ್ನು ನೋಡಿ,

ವಾರ್ಧಕ
ಕಮಲನೇತ್ರೆಯ ಕಂಡು ಮನಸೋತೆ ನನ್ನ ಹೃ |
ತ್ಕಮಲಮಂ ಸೂರೆಗೊಂಡಿಹಳಿನ್ನು ತಾಳೆ ನಾ | ಕಮಲಶರನುರುಬೆಯನ್ನರಗಳಿಗೆಯವಳ ಮುಖ | ಕಮಲ ಕಾಣದೆ ಬದುಕೆನು ||
ಕಮಲ ಪೀಠನು ಸೃಜಿಸಲೀ ಚೆಲುವನೆನಗೆಂದೆ |
ಕಮಲಗಂಧಿಯ ತೊರೆಯೆನೆಂತಾದೊಡೆನ್ನ ಕರ |
ಕಮಲಕೀಕೆಯ ಒಪ್ಪಿಸೆನುತ ಮಾರೀಚ ಪದ | ಕಮಲದೊಳು ಹೊರಳುತಿರ್ದ ||

ಎಂದು ಅಂಗಲಾಚುತ್ತಾನೆ. ಶೂರ್ಪನಖಿಯು,

ಭಾಗವತನಿಗೆ ತಾನೆ ಒಲಿದ | ರಾಗ, ನಿತ್ಯವು |
ರೋಗಿ ಬಯಸೆ ಹಾಲನಿತ್ತ | ಹಾಗೆ ಸತ್ಯವು |
ಆಗಲೆಂದು ನೀವು ಒಪ್ಪಿ | ಯೋಗ ಬಂದರೆ |
ಸಾಗಲೆನ್ನ ಮದುವೆ ಇಲ್ಲ | ವೀಗ ತೊಂದರೆ |

ಎನ್ನಲು, ಅವರಿಬ್ಬರ ಮದುವೆ ನಡೆಯುತ್ತದೆ. ಶೂರ್ಪನಖಿಯು ವಿನೋದಕ್ಕೆ ಘೋರ ರೂಪವನ್ನು ತಾಳಿ,

ಕಾಮಾಚ್ ಆದಿ
ಹರಿ (ದೇವೇಂದ್ರ)ಗಕ್ಷಿ ಹತ್ತು ನೂರು| ಮತ್ತಿವೆಯಂತೆ |ಹರಿದೇರಪತಿಗೆ (ಈಶ್ವರ)ಮೂರು||
ಹರಿ(ವಿಷ್ಣು) ಚತುರ್ಭುಜ ನಂಗ | ವಿರದು ಮಾರ(ಮನ್ಮಥ)ಗೆ ಕಲೆ |
ಹರಿಣಾಂಕ(ಚಂದ್ರ)ಗಿದೆ ಚತು | ರ್ಶಿರವಿಧಿ(ಬ್ರಹ್ಮ)ಗೆಂಬೂನ |
ವರಿತು | ನಿನಗೆ ಸೋತು | ಬಂದೆ ನಿಂತು | ನಾ ನಿನಗೋತು ||

ಎನ್ನಲು, ಕಂಡು ಹೆದರಿದ ವಿದ್ಯುಜಿಹ್ವ,,

ಜಂಜೂಟಿ ಏಕ
ಕೂಡಲು ನಿನ್ನ | ನೋಡುವೆ ಯಮನ | ಬೇಡುವೆ ಕಾಣೆ ಶಿವನಾಣೆ ||
ಕಾಡದೆ ಬೇರೆ | ಜೋಡಿಯ ಸೇರೆ | ಮಾಡೆಸಹಾಯ ನೀಡೆ ದಯ ||

ಎನ್ನಲು, ದೀನಳಾಗಿ

ಶಂಕರಾಭರಣ ಅಷ್ಟ
ಬೇಡಿಕೊಂಬೆ ಕಾ | ಪಾಡುವುದೆಂಬೆ || ಪ ||
ಹಗರಣ ವಹುದೆಂದು | ಬಗೆಯಲಿಲ್ಲಯ್ಯ | ಮುಗಿವೆನಾ ಕಯ್ಯ | ಹಗೆಯೇ ದಮ್ಮಯ್ಯ ||
ಸುಂದರಿಯಾಗೆ ನಿ | ಮ್ಮೊಂದಿಗೆ ಇರುವೆ || ನೊಂದೆಯಾ ದೊರೆಯೇ | ಸಂದೇಹ ತೊರೆಯೆ ||

ಎಂದು ಶರಣು ಬಂದಾಗ, ಧಾರಾಳತನದಿಂದ

ಭಾಮಿನಿ
ನಂದನೆಯ ಭೋಗಿಸುವುದತಿ ತ | ಪ್ಪೆಂದರಿಯನೇ ಬ್ರಹ್ಮ, ತ್ರ್ಯಂಬಕ |
ನಿಂದಲರಿಯದೆ ಭಸ್ಮವಾದನೆ ಮನ್ಮಥನು ಅಂದು ||
ನಿಂದಿಸುವರೆಂದರಿಯನೇ ಸಂ | ಕ್ರಂದನನು ಪರಪತ್ನಿಗೆಳಸಲಿ |
ಕಿಂದಿವಳ ಜೊತೆ ಬಾಳ್ವೆಯೇ? ಪ್ರಾರಬ್ಧ ಕರ್ಮವಲಾ ||

ಎಂದು ಕೌಳಿಕನಗರಕ್ಕೆ ಅವಳನ್ನು ಕರೆದೊಯ್ಯುತ್ತಾನೆ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ