ಸೋಮವಾರ, ನವೆಂಬರ್ 20, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 61

ರಾವಣನೊಡನೆ ಸೇರಿ ದಿಗ್ವಿಜಯಕ್ಕೆ ಹೋಗಬೇಕು ಎಂದು ಶೂರ್ಪನಖಿಯು, ವಿದ್ಯುಜ್ಜಿಹ್ವನಿಗೆ ಹೇಳಿದಾಗ, ಹೇಡಿಯಾದ ಅವನು,

ಪಹಡಿ ರೂಪಕ
ಮಡದಿಬಿಡೆ | ಸಲುಗೆಕೊಡೆ | ನುಡಿಗೆ ತಡೆ | ಇರದೊಡೆ ||
ಹೊಡೆವೆ ನಡೆ | ಗಮನವಿಡೆ | ಉಡುಗೆತೊಡುಗೆ | ಗಳ ಕಡೆ||
ಎಂದು ಗದರಿಸಿದಾಗ, ಚಂದ್ರನಖಿಯು,
ಹರನ ದಯ | ವಿರಲಭಯ | ಅರಿಯ ಲಯ | ನಿಶ್ಚಯ ||
ಧುರದಿ ಜಯ | ಖರೆಯೆ ಭಯ | ತೊರೆದಿನಿಯ | ತೆರಳೆಯ ||

ಎಂದರೂ, ಒಪ್ಪದಿದ್ದಾಗ,

ಮಣಿರಂಗು ಅಷ್ಟ
ಗಂಡುಸೆ ಚೆನ್ನಾಯಿತೆ | ನಿಮ್ಮ ಎದೆ | ಗುಂಡಿಗೆ ಬಿಸಿಯಾರಿತೆ ||
ಕಂಡವರ್ ಕೈತಟ್ಟಿ | ಕೊಂಡು ನಗುವ ಇಂತಾ |
ಭಂಡ ಬಾಳುವೆಯಾಯಿತೆ | ಹೀ| ಗಾಯಿತೆ ||೧||
ಹೇಳಿರೀ ಬಾಳು ಬಾಳೆ | ಜನರೆಮ್ಮ ಹೀ | ಯಾಳಿಸುವುದನು ಕೇಳೆ ||
ಕೀಳಾಗೇಕಿಹುದು ಕ | ರಾಳ ರೂಪವ ನೀಗ |
ತಾಳಿ ಮರ್ಧಿಸಿ ನಿಮ್ಮನು | ಸಾ | ಯುವೆನು ||೨||

 ಎಂದು ಹೆದರಿಸುತ್ತಾಳೆ. ಆಗ ವಿದ್ಯುಜ್ಜಿಹ್ವನು,

ತುಜಾವಂತು ಝಂಪೆ
ದಮ್ಮಯ್ಯ ಬೇಡುವೆನೆ ಬಿಟ್ಟುಬಿಡು ಕೋಪ | ಅಮ್ಮಮ್ಮ ನೋಡೆ ನಿನ್ನಾ ಘೋರರೂಪ |
ಬೊಮ್ಮ ಬರೆದಂತಾಗಲಿನ್ನು ನಾನಳುಕೆ | ಸಮ್ಮತಿಯನಿತ್ತೆನ್ನ ಕಳುಹು ಕೊಳಗುಳಕೆ |

ಎಂದು ರಾವಣನೊಂದಿಗೆ ದಿಗ್ವಿಜಯಕ್ಕೆ ಹೊರಟು ಕಾಲಕೇಯನಲ್ಲಿಗೆ ಬಂದಾಗ, ದೂತ

ಇಂಗ್ಲೀಷ್ ನೋಟ್  ಏಕ
ಬಿತ್ತರಿಪೆನಯ್ಯ | ಬಂದಾ | ಪತ್ತನಾ ಜೀಯ ||
ನಿತ್ಯದ ಹಾಗೆಯಿ | ವತ್ತೂ ಕದ ಕಾ | ಯುತ್ತಲಿಹ ಸಮಯ ||
ಕೇಳಿದೆ ನೀವ್ಯಾರು | ಏನ್ ಬಂ | ದೂಳಿಗವೆನಲವರು ||
ಕಾಳಗಕೊಡಲುನಿ | ವಾಳಿಸೆನಾ ಕೆಳ | ಬೀಳಲು ಮತ್ತವರು ||

ಯುದ್ಧವಾಗುತ್ತದೆ.  ಯುದ್ದದಲ್ಲಿ ವಿದ್ವುಜಿಹ್ವ ಹೆದರಿ ಓಡಿದಾಗ, ಕಾಲಕೇಯನ ಮಕ್ಕಳು ತಡೆದು, ಅವನನ್ನು ಯುದ್ಧದಲ್ಲಿ ಸೋಲಿಸಿ,

ಮೋಹನ ಕಲ್ಯಾಣಿ ಆದಿ
ಮಾತನಾಡಬಾರದೇನೋ | ಭೂತಳೇಶ | ಮಾತನಾಡಬಾರದೇನೊ ||
ಬಟ್ಟಲು ಹಾಲನು ಕೊಟ್ಟು | ತೊಟ್ಟಿಲೊಳು ನಿನ್ನ ನಿಟ್ಟು||
ಗಟ್ಟಿ ಜೋಗುಳ ಹಾಡಿ | ತಟ್ಟಿ ತಟ್ಟಿ ಮಲಗಿಸುವೆವು ||
ಸಿಟ್ಟಿಲಿ ತೊಂದರೆ | ಕೊಟ್ಟರೆ ರಟ್ಟೆಯ ||
ಕಟ್ಟುತ ಹೊಡೆವೆವು | ಪೆಟ್ಟನು ಎಂದೆವೆ ||

ಎಂದು ಹೀಯಾಳಿಸುತ್ತಾರೆ.  ಕೊನೆಗೆ, ರಾವಣ ಅವನನ್ನು ಎಳೆತಂದು,

ನಾದನಾಮಕ್ರಿಯೆ ಅಷ್ಟ
ನೋಡಿದಿರಾ | ಭಟರೆ | ನೋಡಿದಿರಾ ||ಪ||
ನೋಡಿ ಭಟರೆ ನಮ್ಮ ಭೃತ್ಯ | ಮಾಡಿದಂತ ನೀಚ ಕೃತ್ಯ |
ಧುರದ ನಿಯಮ ಮೀರಿ ಪೋಪ | ಸರುವರಿಂಗು ಶಿಕ್ಷೆಯಾಪ |
ಪರಿಯ ನೋಡಿರೆನುತ ಕೋಪ | ಭರಿತನಾಗುತಾಗ ಭೂಪ ||

ಎಂದು ಕೊಂದುಬಿಡುತ್ತಾನೆ.  ಆಗ ಶೂರ್ಪನಖಿಯು ದುಃಖದಿಂದ

ದ್ವಿಪದಿ
ಕೌಳಿಕವ ನೆಂಟತನ ನೆಪದಿಂದ ಗೆದ್ದು | ಹಾಳಡವಿಗಟ್ಟಿದನು ಕಾಲ್ಕಸದೋಲ್ ಒದ್ದು |

ಎಂದು ದಂಡಕಾರಣ್ಯಕ್ಕೆ ಬರುವಲ್ಲಿಗೆ ಪ್ರಸಂಗ ಮುಗಿಯುತ್ತದೆ.

ಅದನ್ನು ಓದಿದ ಕಂದಾವರ ರಘುರಾಮ ಶೆಟ್ಟರು, “ನೀವು ಇಷ್ಟೆಲ್ಲಾ ಪ್ರಾಸ ಹಾಕಿ ಪದ್ಯ ಮಾಡಿದರೆ, ಶಬ್ಧಗಳ ಸರ್ಕಸ್ ಮಾಡಿದರೆ, ಅದನ್ನು ಓದುವ ನಮಗೇ ತ್ರಾಸವಾದೀತು ಮಾತ್ರವಲ್ಲ, ಒಟ್ಟೂ ಸಾಹಿತ್ಯಕ್ಕೆ ತೊಡಕಾಗುತ್ತದೆ. ಈಗಿನ ಭಾಗವತರಂತೂ ಅವುಗಳನ್ನು ಓದುವ ಪ್ರಯತ್ನಕ್ಕೇ ಹೋಗುವುದಿಲ್ಲ. ಅವರಿಗೆ ಅದು ಆಗುವುದಿಲ್ಲ ಎಂದು ತಮಾಷೆ ಮಾಡಿದರು. ನಾನು “ಆಟಮಾಡಲಿಕ್ಕೋಸ್ಕರ ಅದನ್ನು ಬರೆದದ್ದೇ ಅಲ್ಲ. ಸುಮ್ಮನೇ ನನ್ನ ಉಮೇದಿನಿಂದ, ನನ್ನ ಚಟಕ್ಕಾಗಿ ಬರೆದದ್ದು” ಎಂದೆ.

ಪುಸ್ತಕ ಮಾಡಿಸಲು ಶ್ರೀಧರಣ್ಣಯ್ಯನೇ ನಮ್ಮ ಎಡಿಟರ್. ಮೇಲಾಗಿ ಕನ್ನಡ ಮೇಸ್ಟ್ರೂ ಅಲ್ಲವೇ?   ಅದೆಷ್ಟೋ ಸಲ,  ತಿದ್ದಿ ತಿದ್ದೀ ಬರೆಸಿ, ಒಂದು ರೂಪಕ್ಕೆ ಬರುವಂತೆ ಮಾಡಿದ. ಅಂತೂ ಪ್ರಸಂಗ ಪ್ರಕಟವಾಗಿ ಬಿಡುಗಡೆಗೆ ಸಿದ್ಧವಾಯಿತು. ಹಂಗಾರಕಟ್ಟೆ ಭಾಗವತಿಕೆ ತರಬೇತಿ ಕೇಂದ್ರದಲ್ಲಿ ಬಿಡುಗಡೆ ಮಾಡಲು ಸಾಧ್ಯವೇ? ಎಂದು ರಾಜ ಹೆಬ್ಬಾರನಲ್ಲಿ ಕೇಳಿದೆ. ಅವನು ಕೂಡಲೇ ಒಪ್ಪಿ, ಪತ್ರಿಕೆಗಳಲ್ಲಿ ತುಂಬಾ ಪ್ರಚಾರವನ್ನೂ ಕೊಟ್ಟು, ಮುತುವರ್ಜಿಯಿಂದ ಎಲ್ಲ ಜವಾಬ್ಧಾರಿಯನ್ನೂ ವಹಿಸಿಕೊಂಡ.  ಎಂ. ಎ. ಹೆಗಡೆ ಶಿರಸಿಯವರಿಂದ ಬಿಡುಗಡೆ ಮಾಡಿಸಿದ್ದಾಯಿತು.

ಅಂದು, ಪ್ರಸಂಗ ಬಿಡುಗಡೆಯ ಸಮಾರಂಭ ಮುಗಿದ ನಂತರ, ಸದಾನಂದ ಐತಾಳರು, ಸುಬ್ರಮಣ್ಯ ಧಾರೇಶ್ವರರು, ಬೈಲೂರು ಸುಬ್ರಮಣ್ಯ ಐತಾಳರು ಮತ್ತು ರಾಘವೇಂದ್ರ ಮಯ್ಯರು ಸೇರಿ ಅದೇ ಪ್ರಸಂಗದ  ಪದ್ಯಗಳನ್ನೂ ಸುಶ್ರಾವ್ಯವಾಗಿ ಹಾಡಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು. ಆದರೆ ಪುಸ್ತಕವನ್ನು ಮಾರಾಟ ಮಾಡುವ ಉದ್ದೇಶವಿಲ್ಲದೇ ಕಾಂಬ್ಲಿಮೆಂಟರಿಯಾಗಿ ಪುಸ್ತಕವನ್ನು ಮಾಡಿದ್ದಾದರೂ ಅದರ ಪ್ರಿಂಟಿಂಗ್ ನನಗೆ ಸಮಾಧಾನವಾಗದೇ ಇರುವುದರಿಂದ, ಕೇಳಿದವರಿಗೆ ಕೊಡಲೂ ಮುಜುಗರವಾಗಿ, ಹೆಚ್ಚಿನ ಪುಸ್ತಕ ನನ್ನಲ್ಲಿಯೇ ಉಳಿಯಿತು.

ಇನ್ನೊಮ್ಮೆ ನಾನು ಬರೆದ ಇನ್ನೊಂದು ಪ್ರಸಂಗ, ಶಂಕರನಾರಾಯಣ ಮಹಾತ್ಮೆ ಪ್ರಸಂಗವನ್ನೂ, ಶಂಕರನಾರಾಯಣದಲ್ಲಿ ದೇವಸ್ಥಾನದ ಬ್ರಹ್ಮ ಕಲಶೊತ್ಸವದ ಸಮಯದಲ್ಲಿ, ನಮ್ಮ ಭಾವ ಲಕ್ಷ್ಮೀನಾರಾಯಣ ಉಡುಪರ ನೇತೃತ್ವದಲ್ಲಿ ಮುದ್ರಿಸಿ ಬಿಡುಗಡೆ ಮಾಡಿಯಾಯಿತು. ಆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೆ ಕಂದಾವರ ರಘುರಾಮ ಶೆಟ್ಟಿಯವರನ್ನೇ ಕರೆಸಿದ್ದು, ಅವರು ಅದರ ಪದ್ಯಗಳ ಬಗ್ಗೆ ಮುಕ್ತಕಂಠದಿಂದ ಹೊಗಳಿದ್ದು, ನನ್ನ ಮನಸ್ಸಿಗೆ ತೃಪ್ತಿಯಾಯಿತು. ಅದರ ಒಂದು ಪ್ರದರ್ಶನವನ್ನು ಸುಬ್ರಮಣ್ಯ ಧಾರೇಶ್ವರರು ಉಪ್ಪುಂದ ನಾಗೇಂದ್ರ, ವಿದ್ಯಾಧರ ಜಲವಳ್ಳಿ ಮುಂತಾದ ಪ್ರಸಿದ್ಧ ಕಲಾವಿದರನ್ನು ಸೇರಿಸಿಕೊಂಡು, ಒಂದು ಪ್ರದರ್ಶನವನ್ನು ಮಾಡಿದರು. ಸಾಲಿಗ್ರಾಮ ಮೇಳದಲ್ಲಿ, ನೀಲಾವರ ಮೇಳದಲ್ಲಿ ಪ್ರಯೋಗಗಳೂ ಆದವು. ಸುಮಾರು ಮೂರುಮೂರುವರೆ ಗಂಟೆಯ ಅವಧಿಯ ಪ್ರಸಂಗವಾದ್ದರಿಂದ ಮತ್ತೆ ಅಲ್ಲಲ್ಲಿ ಶಂಕರನಾರಾಯಣ ಸಂಘದವರು ಆಡಿದರು ಎಂದು ಕೇಳಿ ಸಂತೋಷಪಟ್ಟೆ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ