ಮಂಗಳವಾರ, ನವೆಂಬರ್ 14, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 55

ಮತ್ತೆ ಯಾರಾದರೂ ಅಪ್ಪಯ್ಯನ ಹಾಡಿನ ಕ್ಯಾಸೆಟ್ ಸಂಗ್ರಹವಿದ್ದವರು ಇದ್ದಾರೆಯೇ? ಎಂದೆ. ಅವರು ಪೇಟೇಸರ ಶ್ರೀಕಾಂತ ಹೆಗಡೆಯವರು ಅಂತ ಒಬ್ಬರಲ್ಲಿ ಇರಬಹುದು, ಆದರೆ ಅದು ತುಂಬಾ ದೂರ ಆಯಿತು ಎಂದರು. ನಮಗೆ ಏನು ಮಾಡುವುದು ಗೊತ್ತಾಗಲಿಲ್ಲ. ಇಷ್ಟು ದೂರ ಬಂದು ಸುಮ್ಮನೇ ಬರಿಗೈಯಲ್ಲಿ ಹೋಗುವುದಾಯಿತಲ್ಲ ಎಂದು ದುಃಖವಾಯಿತು. ಮೂರು ಮೂರುವರೆಯ ಹೊತ್ತಿಗೆ  ಸುಬ್ರಾಯ ಭಟ್ಟರಿಂದ ಪುನಹ ಪೋನ್ ಬಂತು. ಅವರು, ಅವರ ಕೆಲಸವನ್ನು ಬೇರೆಯವರಿಗೆ ವಹಿಸಿದ್ದು, “ಉಪ್ಪೂರರನ್ನು ಕರೆದುಕೊಂಡು ಈಗಲೇ ಬನ್ನಿ” ಎಂದು ತಿಳಿಸಿದರು. ನಾವು ಒಮ್ಮೆಲೆ ಆದ ಬದಲಾವಣೆಗೆ ಹರ್ಷಿತರಾಗಿ ಸಡಗರದಿಂದ ತಿಮ್ಮಪ್ಪ ಭಾಗವತರನ್ನು ಕರೆದುಕೊಂಡು ಗಡಿಗೆಹೊಳೆ ಸುಬ್ರಾಯ ಭಟ್ಟರ ಮನೆಗೆ ಹೋದೆವು.

ಅಲ್ಲಿ ಹೋಗಿ ನೋಡುವಾಗ, ಅವರ ಕ್ಯಾಸೆಟ್ ಗಳ, ಸಿ.ಡಿ.ಗಳ ರಾಶಿಯಲ್ಲಿ ಹುಡುಕಿ, ಅವರು ನನ್ನ ಅಪ್ಪಯ್ಯ ಇರುವ ರುಕ್ಮಾಂಗದ ಚರಿತ್ರೆ, ಭೀಷ್ಮ ವಿಜಯ, ವಾಲಿವಧೆ ಕರ್ಣಾರ್ಜುನ ಮುಂತಾದ ಇಪ್ಪತ್ತು ಸಿ.ಡಿ.ಗಳನ್ನು ಪ್ರತ್ಯೇಕಿಸಿ ನಮಗಾಗಿ ಕಾಯುತ್ತಾ ಕುಳಿತಿದ್ದರು. ನಾನು ಹೋದವನೇ ಅವರು ಕೊಟ್ಟ ಸಿ.ಡಿ.ಗಳನ್ನು ಒಂದೊಂದಾಗಿ ನನ್ನ ಮಗನಿಗೆ  ಕೊಟ್ಟು ಲ್ಯಾಪ್ಟಾಪ್ ಗೆ ವರ್ಗಾಯಿಸಲು ತಿಳಿಸಿದೆ. ಅವನು ಶುರುಮಾಡಿದ. ಆದರೆ ಆಗಲೇ ಐದು ಗಂಟೆಯಾಗುತ್ತಾ ಬಂದಿತ್ತು. ಒಂದೊಂದು ಸಿ.ಡಿ.ಗೂ ಹತ್ತು ಹದಿನೈದು ನಿಮಿಷ ಬೇಕಿತ್ತು. ಮಧ್ಯ ಮಧ್ಯ ಸುಬ್ರಾಯ ಭಟ್ಟರು, ಅದು ಚಂದ ಇದೆ, ಈ ಹಾಡನ್ನು ಉಪ್ಪೂರರು ಹೇಳಿದ್ದು ಕೇಳಿ, ಅಂತ ಕೆಲವು ಪದ್ಯಗಳನ್ನೂ ಹಾಕಿ ಕೇಳಲು ಒತ್ತಾಯಿಸುತ್ತಿದ್ದರು. ಕೊನೆಗೆ ಅವರಲ್ಲಿ ಬೇರೆ ಸಿ.ಡಿ. ಇದೆಯಾ ಅಂತ ಕೇಳಿದೆ. ಅವರಿಗೆ ಅಂತ ತಂದಿಟ್ಟ ನಾಲ್ಕಾರು ಸಿ.ಡಿ.ಗಳನ್ನು ಕೊಟ್ಟರು. ನಾನೂ ಗಡಿಗೆಹೊಳೆಯವರ ಕಂಪ್ಯೂಟರ್ ನಲ್ಲಿ ಕೆಲವಷ್ಟನ್ನು ಆ ಸಿ.ಡಿ.ಗೆ ಹಾಕತೊಡಗಿದೆ. ಈ ಮಧ್ಯದಲ್ಲಿ ನನ್ನ ಹತ್ತಿರವಿದ್ದ ಸಂಗ್ರಹವನ್ನೂ ಅವರಿಗೆ ಕೊಡಬೇಕಾಗಿತ್ತು.

ಅವರು ಬಹಳ ಕಾಲದಿಂದ ಮಾಡಿಕೊಂಡು ಬಂದ ಸಂಗ್ರಹವದು. ಅಲ್ಲದೇ ಅವರು ರೆಕಾರ್ಡ್ ಮಾಡಿದ್ದ ಎಲ್ಲ ಕ್ಯಾಸೆಟ್ ಗಳನ್ನು ಯಾರಿಂದಲೋ ಎಂಪಿತ್ರಿಗೆ ಪರಿವರ್ತಿಸಿ ತುಂಬಾ ಹಣವನ್ನೂ ಖರ್ಚು ಮಾಡಿದ್ದರು. ನನಗೆ ಕೇಳಲು ದಾಕ್ಷಿಣ್ಯವಾಗಿ “ಇದಕ್ಕೆ ಏನಾದರೂ ಕೊಡಬೇಕೇ?” ಎಂದು ಕೇಳಿದೆ. ಅವರು “ಬೇಡಪ್ಪ, ನಿಮ್ಮ ಹತ್ತಿರ ದುಡ್ಡು ತೆಗೆದುಕೊಳ್ಳುವುದೇ? ನಿಮ್ಮ ಅಪ್ಪಯ್ಯನದ್ದೇ ಅಲ್ಲವೇ?” ಎಂದು ಔದಾರ್ಯ ತೋರಿದರು. ಕೊನೆಗೆ ಅವರ ಖಾಲಿ ಸಿ.ಡಿ.ಯ ಹಣವನ್ನು ಮಾತ್ರ ಕೊಟ್ಟು ಕೃತಜ್ಞತೆ ಹೇಳಿದೆ. ಸಂಜೆ ಏಳುವರೆ ಹೊತ್ತಿಗೆ ಎಲ್ಲವೂ ಮುಗಿಯಿತು ಅಂತಾಗಿ, ಅವರ ಮನೆಯಲ್ಲಿ ಕಾಫಿತಿಂಡಿಯನ್ನು ತಿಂದು ತಿಮ್ಮಪ್ಪ ಭಾಗವತರನ್ನು ಅವರ ಮನೆಗೆ ಬಿಟ್ಟು, ರಾತ್ರಿ ಸುಮಾರು ಎರಡು ಗಂಟೆಯ ಹೊತ್ತಿಗೆ ಉಡುಪಿಗೆ ಬಂದು ಮನೆಯನ್ನು ತಲುಪಿದೆವು.

ಉತ್ತರಕನ್ನಡದ ಒಬ್ಬರು ಗಣೇಶ ಹೆಗಡೆ ಎನ್ನುವವರು ಅವರ ಮನೆಯ ಅಟ್ಟದ ಮೇಲಿದ್ದ ಎಲ್ಲ ಹಳೆಯ ಕ್ಯಾಸೆಟ್ ಗಳನ್ನು ಚೆನ್ನಾಗಿ ಪ್ಯಾಕ್ ಮಾಡಿ ಕೊರಿಯರ್ ಮಾಡಿದರು. ಯಲ್ಲಾಪುರದ ಪ್ರಸನ್ನ ಹೆಗಡೆ ಎನ್ನುವವರು ಪೆನ್ ಡ್ರೈವನ್ನು ಕಳಿಸಿ ಅವರ ದಾಖಲೆಯನ್ನು ಕಳಿಸಿಕೊಟ್ಟರು. ಬೆಂಗಳೂರಿನ ಅಭಿಜಿತ್ ಹೆಗಡೆಯವರು ಅವರ ಹಾರ್ಡ್ ಡಿಸ್ಕಿನಲ್ಲಿ ಅವರ ಸಂಗ್ರಹವನ್ನು ಕಳಿಸಿ ನನ್ನದನ್ನು ಪಡೆದುಕೊಂಡರು. ಹಾಗೆಯೇ ಸುಮಾರು ಅದೇ ಸಮಯದಲ್ಲಿ ನನಗೆ ಫೇಸ್ ಬುಕ್ ನಿಂದ ಪರಿಚಯವಾದ ಬೆಂಗಳೂರಿನ ರವಿ ಮೆಡೋಡಿ, ಎ. ಎನ್. ಹೆಗಡೆಯವರು, ನಾಗರಾಜ್ ಮತ್ತಿಗಾರರು, ಎಸ್. ಜಿ. ಭಾಗವತರೂ ಅವರಲ್ಲಿರುವ ದಾಖಲೆಗಳನ್ನು, ಇವುಗಳೂ ನಿಮ್ಮ ಭಂಡಾರದಲ್ಲಿರಲಿ ಎಂದು ನನಗೆ ಕೊಟ್ಟು ಸಹಕರಿಸಿದರು. ಪರ್ಕಳದ ಮುರಳಿ ಪ್ರಭು ಅನ್ನುವವರು ನಮ್ಮ ಮನೆಗೆ ಬಂದು ಅವರೇ ರೆಕಾರ್ಡ್ ಮಾಡಿದ ಗೀತಾಂಜಲಿ ಥಿಯೇಟರ್ ನಲ್ಲಿ ಆದ ಬಹಳ ಹಿಂದಿನ ಸುಧನ್ವ ಕಾಳಗ ಆಟವನ್ನು ನಮಗೆ ಕೊಟ್ಟರು. ಅದರಲ್ಲಿ ಮಹಾಬಲ ಹೆಗಡೆಯವರ ಸುಧನ್ವ ಮತ್ತು ಚಿಟ್ಟಾಣಿಯವರ ಅರ್ಜುನ ಮತ್ತು ಅಪ್ಪಯ್ಯನ ಭಾಗವತಿಕೆ ಇತ್ತು.

ಇದೇನಪ್ಪ ಅಲ್ಲಿಗೆ ಹೋದೆ, ಇಲ್ಲಿಗೆ ಬಂದೆ, ಹಳೇ ಕ್ಯಾಸೆಟ್ ಸಿಕ್ತು. ತಂದು ಕೊಟ್ರು ಇದೇ ಪುರಾಣ ಆಯ್ತಲ್ಲ. ಇದೆಂತಹಾ ನನ್ನೊಳಗಿನ ಕತೆ ಬೋರ್ ಹೊಡಿತಾ ಇದೆ ಅಂತ ಓದುವ ನಿಮಗೆ ಅನ್ನಿಸುವ ಮೊದಲು, ನನ್ನ ಒಂದು ಯಾತ್ರೆಯ ಕತೆಯನ್ನು ಈಗ ಹೇಳುತ್ತೇನೆ. ಕತೆಯೆಂದರೆ ಕಟ್ಟು ಕತೆಯಲ್ಲ ಮಾರಾಯ್ರೆ. ನಿಜವಾಗಿ ನಡೆದದ್ದೆ.

ಶಿವರಾತ್ರಿಯ ದಿನ ನಾವು ಪಂಚ ಶಂಕರನಾರಾಯಣ ಯಾತ್ರೆಯನ್ನು ಮಾಡುತ್ತಿದ್ದ ಕತೆ ಸ್ವಾರಸ್ಯವಾದುದೇನೂ ಅಲ್ಲದಿದ್ದರೂ ಅದನ್ನು ಸುಮಾರು ಏಳೆಂಟು ವರ್ಷದಿಂದ ಮಾಡುತ್ತಾ ಬಂದಿರುವೆನಾದ್ದರಿಂದ ಹೇಳಲೇ ಬೇಕಾಗುತ್ತದೆ. ಮಹಾ ಶಿವರಾತ್ರಿಯ ದಿನ, ನಾವು ಒಂದು ಏಳೆಂಟು ಜನ ಸೇರಿಕೊಂಡು ಮಾಡುತ್ತಾ ಬಂದ ಒಂದು ಮಹಾ ಯಾತ್ರೆಯ ಕತೆ ಅದು. ಮೊದಲಿನ ಕಾಲದಲ್ಲಿಯಾದರೆ ನಡೆದುಕೊಂಡೇ ಹೋಗಬೇಕಿತ್ತು. ಈಗಲಾದರೆ ಎಲ್ಲ ಕಡೆಗೂ ರಸ್ತೆ ಸೌಲಭ್ಯವಿದ್ದು ಕಾರೋ ಬೈಕೋ ಇದ್ದರೆ ಆಯಿತು. ಪಂಚ ಶಂಕರನಾರಾಯಣ ಯಾತ್ರೆ ಅಂದರೆ ಒಂದೇ ದಿನ ಶಂಕರನಾರಾಯಣದ ಆಸು ಪಾಸು ಒಂದು ಎಪ್ಪತ್ತೈದು ಕಿಲೋಮೀಟರ್ ಸುತ್ತಳತೆಯಲ್ಲಿ ಇರುವ ಹೊಳೆ ಶಂಕರನಾರಾಯಣ, ಮಾಂಡವಿ ಶಂಕರನಾರಾಯಣ, ಬೆಳ್ವೆ ಶಂಕರನಾರಾಯಣ, ಆವರ್ಸೆ ಶಂಕರನಾರಾಯಣ ಮತ್ತು ನಮ್ಮ  ಶಂಕರನಾರಾಯಣ ದ ಶಂಕರನಾರಾಯಣ ಹೀಗೆ, ಐದು ಶಂಕರನಾರಾಯಣ ಸ್ವಾಮಿಯ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಮಾಡುವುದು. ಕ್ಷೇತ್ರ ಪುರಾಣದಲ್ಲಿ ಇರುವಂತೆ ಈ ಯಾತ್ರೆ ಮನುಷ್ಯಮಾಡಿದ ಸಕಲ ಪಾಪವನ್ನೂ ತೊಡೆದು ಹಾಕಿ, ರೋಗರುಜಿನಗಳನ್ನೂ ದೂರಮಾಡಿ ಶಾಂತಿ ನೆಮ್ಮದಿಯನ್ನು ಕೊಡುತ್ತದಂತೆ.

ಮಹಾಶಿವರಾತ್ರಿಯ ದಿನ ಬೆಳಿಗ್ಗೆ ಬೇಗ ಎದ್ದು ಶುಚಿರ್ಭೂತರಾಗಿ ವೃತಧಾರಿಗಳಾಗಬೇಕು. ಮುಸುರೆ ತಿನ್ನಬಾರದು. ಆ ದಿನ ನಾವು ಹಾಗೆಯೇ ಇದ್ದು ಮೊದಲಿಗೆ ಸೌಡದ ಹತ್ತಿರ ಇರುವ, ವಾರಾಹಿ ನದಿಯ ಮಧ್ಯದ ಶಿವಗಂಗೆಯಲ್ಲಿ ಮುಳುಗು ಹಾಕಿ ಸ್ನಾನ ಮಾಡಿ ಬಂದು ಅಲ್ಲಿಯೇ ಹತ್ತಿರವಿರುವ ಸಾಂಬಸದಾಶಿವ ದೇವಸ್ಥಾನಕ್ಕೆ ಹೋಗಿ ದೇವರಿಗೆ ಜಲಾಭಿಷೇಕ ಮಾಡಿ ಭಕ್ತಿಯಿಂದ ಪೂಜಿಸಿ ಅರ್ಚಿಸುವೆವು. ಅಲ್ಲಿಂದ ಹೊರಟು ಶಂಕರನಾರಾಯಣಕ್ಕೆ ಬಂದು, ಅಲ್ಲಿಯ ಸರೋವರದಲ್ಲಿ ಮಿಂದು ಮಡಿಯಲ್ಲಿಯೇ ಶಂಕರನಾರಾಯಣ ಸ್ವಾಮಿಯ ದರ್ಶನವನ್ನು ಮಾಡಿ ಭಕ್ತಿಯಿಂದ ಪೂಜಿಸುವುದು. ನಂತರ ಅಲ್ಲಿಂದ ಹೊರಟು ಸಿದ್ದಾಪುರದಲ್ಲಿ ಎಡಕ್ಕೆ ತಿರುಗಿ ಹೊಳೆ ಶಂಕರನಾರಾಯಣವನ್ನು ತಲುಪಿ, ಅಲ್ಲಿಯ ಹೊಳೆಯಲ್ಲಿ ಮಿಂದು ಶುಚಿರ್ಭೂತರಾಗಿ ಶಂಕರನಾರಾಯಣ ನನ್ನು ಭಕ್ತಿಯಿಂದ ಅರ್ಚಿಸಿ, ಒಂದೆರಡು ಶ್ಲೋಕ ಭಜನೆಗಳನ್ನು ಮಾಡುವೆವು  ಅಲ್ಲಿಂದ ಒಳಮಾರ್ಗವಾಗಿ ಅಮವಾಸೆಬೈಲಿನ ಮೂಲಕ ಮಾಂಡವ್ಯ ಮುನಿಯು ತಪಸ್ಸು ಮಾಡಿ ಶಂಕರನಾರಾಯಣನನ್ನು ಪ್ರತ್ಯಕ್ಷೀಕರಿಸಿಕೊಂಡ ಮಾಂಡ್ವಿ ಶಂಕರನಾರಾಯಣಕ್ಕೆ ಹೋಗಿ ಅಲ್ಲಿ ಹರಿಯುವ ವಾರಾಹಿನದಿಯಲ್ಲಿ ಮಿಂದು ಧ್ಯಾನಾದಿಗಳನ್ನು ಪೂರೈಸಿ ಮಡಿಯಲ್ಲಿ ಶಂಕರನಾರಾಯಣ ಸ್ವಾಮಿಯ ದರ್ಶನವನ್ನು ಮಾಡಿ ಅಲ್ಲಿಯೂ ಪಾರಾಯಣ ಶ್ಲೋಕ ಭಜನೆಗಳನ್ನು ಮಾಡಿ ಧನ್ಯರಾಗುವೆವು. ಅಲ್ಲಿಂದ ಗೋಳಿಯಂಗಡಿ ಮಾರ್ಗವಾಗಿ ಬಂದು ಬೆಳ್ವೆಯನ್ನು ತಲುಪಿ, ಅಲ್ಲಿ ಕೊಡಪಾನದಿಂದ ಬಾವಿಯ ನೀರನ್ನು ಸೇದಿ ತಲೆಗೆ ಹೊಯ್ದುಕೊಂಡು ಮಡಿಯಲ್ಲಿ ಶಂಕರನಾರಾಯಣನ ದರ್ಶನ ಮಾಡಿ ಪೂಜಿಸುವೆವು. ಅಲ್ಲಿಯೂ ಭಜನೆ ಶ್ಲೋಕಗಳ ಸಲ್ಲಿಕೆಯಾಗಬೇಕು.

 ಮುಂದೆ ಅಲ್ಲಿಂದ ಹೊರಟು ಗೋಳಿಯಂಗಡಿಗೆ ಬಂದು, ಅಲ್ಲಿಂದ ಎಡಕ್ಕೆ ತಿರುಗಿ ವಂಡಾರು ಮಾವಿನಕಟ್ಟೆಯ ಮೂಲಕ ಆವರ್ಸೆಯನ್ನು ತಲುಪಿ ಅಲ್ಲಿಯೂ ಬಾವಿ ನೀರಿನ ಪುಣ್ಯೋದಕದಲ್ಲಿ ಮಿಂದು ಶುಚಿಯಾಗಿ ಶಂಕರನಾರಾಯಣನ ದರ್ಶನ ಮಾಡಿ, ಶ್ಲೋಕ ಭಜನೆಗಳಿಂದ ದೇವರ ಸ್ತುತಿ ಮಾಡಿ ತೃಪ್ತರಾಗುವುದು. ಅಲ್ಲಿಂದ  ಚೋರಾಡಿ ಮಾರ್ಗವಾಗಿ ಹಾಲಾಡಿಯಿಂದ ಶಂಕರನಾರಾಯಣಕ್ಕೆ ಬಂದು ಪುನಹ ಸರೋವರಕ್ಕಿಳಿದು ಸ್ನಾನವನ್ನು ಮಾಡಿ ದೇವರ ದರ್ಶನ ಮಾಡಿ ನಮ್ಮ ತೀರ್ಥಯಾತ್ರೆಯನ್ನು ಮುಗಿಸುತ್ತೇವೆ. ಅಲ್ಲಿಗೆ ಸುಮಾರು ಮೂರುವರೆ ನಾಲ್ಕುಗಂಟೆಯಾಗುತ್ತಿತ್ತು. ದೇವಸ್ಥಾನದಲ್ಲಿಯೇ ಸಿದ್ಧವಾಗಿರುತ್ತಿದ್ದ ಫಲಾಹಾರವನ್ನು ಮುಗಿಸಿ ಮನೆಗೆ ಬರುತ್ತಿದ್ದೆವು. ಆ ರಾತ್ರಿಯೂ ಉಪವಾಸ ಮಾಡಿ ಮಲಗಿದರೆ ಮರುದಿನಕ್ಕೆ ನಮ್ಮ ವೃತ ಮುಗಿಯಿತು ಅಂತ ಲೆಕ್ಕ. ಮುಂದಿನ ವರ್ಷ ನೀವೂ ಬಂದು ಕಂಪೆನಿ ಕೊಡಬಹುದು. ಈಗಾಗಲೇ ಹೀಗೆ ಪಂಚ ಶಂಕರನಾರಾಯಣ ಯಾತ್ರೆ ಮಾಡುವ ಭಕ್ತಾಧಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು ಅದೊಂದು ಅಪೂರ್ವವಾದ ಅನುಭವವೆಂದೇ ಹೇಳಬಹುದು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ