ಶುಕ್ರವಾರ, ನವೆಂಬರ್ 24, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 65

ನನ್ನ ಜೀವನವೇ ಒಂದು ತರಹದ ಆಕಸ್ಮಿಕ. ನಾನು ಏನು ಆಗಬೇಕು ಅಂದುಕೊಂಡಿದ್ದೆನೋ, ಹಾಗೆ ನನ್ನ ಜೀವನವನ್ನು ಸಾಗಿಸಿಕೊಂಡು ಬರಲಿಲ್ಲ ಅಥವ ಗೊತ್ತು ಗುರಿಯಿಲ್ಲದ ಹಾಯಿದೋಣಿಯಂತೆ ಬದುಕು ಕರೆದತ್ತ ಇಲ್ಲಿಯರೆಗೆ ಸಾಗಿ ಬಂದದ್ದಾಯಿತು. ನನ್ನ ರಕ್ತದಲ್ಲಿಯೇ ಹರಿದು ಬಂದ ಕಲೆ ಯಕ್ಷಗಾನ. ಅದರಲ್ಲಿ ಯಾವುದೋ ಒಂದು ಭಾಗದಲ್ಲಿ, ಹಿಮ್ಮೇಳದಲ್ಲೋ ಮುಮ್ಮೇಳದಲ್ಲೋ ತೊಡಗಿಸಿಕೊಂಡು ಅದನ್ನು ಜಿತಮಾಡಿಕೊಂಡು ಬೆಳೆಯುವ ವಾತಾವರಣ, ವಿಪುಲ ಅವಕಾಶ ಎಲ್ಲವೂ ನನಗಿತ್ತು. ಆದರೆ ಹಾಗೆ ಮಾಡಲಿಲ್ಲ. ಬಾಲ್ಯದಲ್ಲಿ, ಚಿತ್ರಕಲೆಯಲ್ಲಿ ಪ್ರಾವೀಣ್ಯತೆ ಹೊಂದಿದ್ದ ಕೃಷ್ಣಮೂರ್ತಿಯಣ್ಣಯ್ಯ, ಕತೆ, ಕವನ ಬರೆದು ಕತೆಗಾರನಾಗಿ ನಮ್ಮ ಮನೆಗೆ ಕತೆ, ಕಾದಂಬರಿ ಪುಸ್ತಕಗಳನ್ನು ತಂದು ತಂದು ಹಾಕಿ, ಅದರಲ್ಲಿ ನನಗೆ ಆಸಕ್ತಿ ಹುಟ್ಟುವಂತೆ ಮಾಡಿದ  ರಮೇಶಣ್ಣಯ್ಯ, ಪ್ರಸಂಗಕರ್ತನಾಗಿ ಸಾಹಿತಿಯಾಗಿ ಡಾಕ್ಟರೇಟ್ ಪಡೆದ, ಸಾಹಿತ್ಯದ ವಿಷಯಗಳು ಬಂದಾಗ ನನ್ನ ಮೈ ಮನಸ್ಸು ತುಂಬಿಕೊಳ್ಳುವಂತೆ ಗಂಟೆಗಟ್ಟಲೆ ವಿವರಣೆ ಕೊಡುತ್ತಿದ್ದ ಶ್ರೀಧರಣ್ಣಯ್ಯ, ಇವರೆಲ್ಲರೂ ಇದ್ದ ಮನೆಯ ವಾತಾವರಣದಲ್ಲಿ ನಾನು ಬೆಳೆದರೂ, ಅದರಲ್ಲೆಲ್ಲಾ ಆಸಕ್ತಿಯನ್ನು ಹೊಂದಿದವನಾದರೂ ಯಾವುದರಲ್ಲೂ ಸಾಧನೆ ಮಾಡಲಿಲ್ಲ. ಪಿ.ಯು.ಸಿ.ಯಲ್ಲಿ ಓದುವಾಗ ಕಲೆ, ಸಾಹಿತ್ಯ ಮುಂತಾದುವುಗಳು ನನ್ನ ಆಸಕ್ತಿಯ ವಿಷಯವಾಗಿದ್ದರೂ, ಅದನ್ನು ಬಿಟ್ಟು ಏಕೋ ವಿಜ್ಞಾನವನ್ನು ಆಯ್ದುಕೊಂಡೆ. ಅದರಲ್ಲೂ ಸಾಧನೆ ಮಾಡದೇ ಓದನ್ನು ಅವಗಣಿಸಿದೆ.

ಅಪ್ಪಯ್ಯನ ಅಗಲಿಕೆಯ ನಂತರ ಬದುಕಿನ ದಿಕ್ಕೇ ಬದಲಾಗಿ, ಮನೆಯಲ್ಲಿ ಇರಲಾಗದೇ ಅವರಿವರನ್ನು ಕಾಡಿ ಬೇಡಿ, ಬಿಲ್ಸ್ ಅಕೌಂಟ್ಸ್ ಗಳೇ ಇರುವ, ಕೆಇಬಿಯಲ್ಲಿ ಕೆಲಸಕ್ಕೆ ಸೇರಿದೆ. ಅಲ್ಲಿಯೂ ಸಾಧಿಸಿ ಮೇಲೇರುವ, ದೊಡ್ಡ ಹುದ್ದೆಗಳಿಸುವ ಅವಕಾಶಕ್ಕೇನೂ ಕೊರತೆಯಿರಲಿಲ್ಲ. ಆದರೆ ನಾನು, “ಅದೆಲ್ಲ ನನಗ್ಯಾಕೆ?” ಎಂದು ಇಲಾಖಾ ಪರೀಕ್ಷೆಗೆ ಕುಳಿತುಕೊಳ್ಳುವುದನ್ನೇ ವಿಳಂಬ ಮಾಡಿ, ತಡವಾಗಿ ಕುಳಿತು ಪಾಸಾದೆ. ಕೊನೆಗೂ ಡೆಪ್ಯುಟಿ ಕಂಟ್ರೋಲರ್ ಆಗಿ ಬೆಳಗಾವಿಯ ಹತ್ತಿರದ ಚಿಕ್ಕೋಡಿ ಎಂಬಲ್ಲಿಗೆ ಪ್ರೊಮೋಶನ್ ಬಂದು ಹೋಗಲು ಅವಕಾಶ ಸಿಕ್ಕರೂ, “ಉಡುಪಿಯನ್ನು ಬಿಟ್ಟು ಅಷ್ಟು ದೂರ ಹೋಗುವುದಿಲ್ಲ” ಎಂದು ಅದನ್ನೂ ಬಿಟ್ಟುಬಿಟ್ಟೆ. ನನ್ನ ಮಗ, ಅನ್ವೇಷ, ನನ್ನಂತೆ ಉದಾಸೀನ ಮಾಡದೇ, ಮೊದಲೇ ಯೋಚಿಸಿ, ಚೆನ್ನಾಗಿಯೇ ಓದಿ, ಪಿಯುಸಿಯಲ್ಲಿ ಶೇಕಡ 96 ರಷ್ಟು ಮಾರ್ಕನ್ನು ಪಡೆದು, ಮೈಸೂರಿನಲ್ಲಿ ಇಂಜಿನಿಯರಿಂಗ್ ಗೆ ಸೇರಿದ. ಓದುತ್ತಿರುವಾಗಲೇ ಕ್ಯಾಂಪಸಿನಲ್ಲಿ ಆಯ್ಕೆಯೂ ಆಗಿ, ಒಂದು ದೊಡ್ಡ ಕಂಪೆನಿಯಲ್ಲಿ (ಒರೇಕಲ್) ಒಳ್ಳೆಯ ಕೆಲಸವನ್ನೂ ಪಡೆದ.

ಅವನ ಬದುಕಿಗೊಂದು ದಾರಿಯಾಯಿತು ಅನ್ನುವಾಗ, ಇನ್ನೂ ಐದು ವರ್ಷ ಸರ್ವೀಸ್ ಬಾಕಿ ಇದ್ದರೂ, “ದುಡಿದದ್ದು ಸಾಕು, ನನ್ನ ಬದುಕು ಇದಲ್ಲ. ನನ್ನ ಆಸಕ್ತಿಗೆ ತಕ್ಕಂತೆ, ಮನಸ್ಸಿಗೆ ಇಷ್ಟವಾಗುವಂತೆ ಇನ್ನುಳಿದ ಬಾಳನ್ನಾದರೂ ಬಾಳಲೇ ಬೇಕು” ಎಂದು ಮನಸ್ಸಿಗೆ ಅನ್ನಿಸಲು ಶುರುವಾಯಿತು. ಕ್ರಮೇಣ ಅದೇ ಗಟ್ಟಿಯಾಗಿ, ಇಷ್ಟರವರೆಗೆ ಮನಸ್ಸಿಗೆ ಹಿತವೋ ಅಹಿತವೋ ಒಟ್ಟಾರೆಯಾಗಿ “ಬದುಕಿಗೆ ಬೇಕು” ಅಂತ ದುಡಿದೆ. ಇನ್ನು ಸಾಕು. ಐದು ವರ್ಷದ ನಂತರ ನನ್ನ ಮನಸ್ಸು, ಆರೋಗ್ಯ ಹೀಗೆಯೇ ಇರುತ್ತದೆಯೋ ಇಲ್ಲವೋ. ನಾಳೆಯನ್ನು ಬಲ್ಲವರಾರು? ಆದ್ದರಿಂದ ಈಗಿನಿಂದಲೇ, ನಿರಾಳವಾಗಿ ಯಾವುದೇ ಒತ್ತಡವಿಲ್ಲದೇ, ಸ್ವತಂತ್ರವಾಗಿ, ಸ್ವಚ್ಛಂದವಾಗಿ ಬದುಕುತ್ತೇನೆ ಎಂದು ನಿರ್ಧರಿಸಿ, ಕೆಲಸದಿಂದ ಸ್ವಯಂ ನಿವೃತ್ತಿಯಾಗಲು ಮನಸ್ಸು ಮಾಡಿದೆ. ಅನ್ನಪೂರ್ಣಳ ಹತ್ತಿರ “ನಿನ್ನ ಅಭಿಪ್ರಾಯ ಏನು?” ಎಂದು ಕೇಳಿದೆ, ಅವಳೂ ಯಾವತ್ತೂ ನನ್ನ ಬದುಕಿನೊಂದಿಗೆ, ಮನಸ್ಸಿನೊಂದಿಗೆ ಹೊಂದಿಕೊಂಡು ಬಾಳಿದವಳು, ನನ್ನನ್ನು ವಿರೋಧಿಸದೇ “ನಿಮಗೆ ತಿಳಿದಂತೆ ಮಾಡಿ. ನನಗೆ ಹೇಗೂ ಆಗಬಹುದು” ಎಂದಳು.

ನಾನು ಸ್ವಯಂ ನಿವೃತ್ತಿಯಾಗಿ ಮನೆಯಲ್ಲೇ ಇರುವ ನಿರ್ಧಾರ ಮಾಡಿಯಾಯಿತು. ಆದರೆ ಸ್ನೇಹಿತರೆಲ್ಲಾ “ನಿಮಗೆ ಹುಚ್ಚಾ? ಇಷ್ಟು ಒಳ್ಳೆಯ ಕೆಲಸ ಬಿಟ್ಟು ಬಿಡುತ್ತೀರಾ? ಎಷ್ಟೋ ಜನ ಏನೂ ಕೆಲಸ ಮಾಡದೇ ಆಫೀಸಿನಲ್ಲಿ ಆರಾಮವಾಗಿ ಇಲ್ಲವೇ? ಮನಸ್ಸು ಸರಿಯಿಲ್ಲದಿದ್ದರೆ ಒಂದಷ್ಟು ದಿನ ರಜೆ ಹಾಕಿ ಮನೆಯಲ್ಲಿ ಇರಿ, ಬೇಕಾದರೆ ಎಲ್ಲದರೂ ಟೂರ್ ಗೆ  ಹೋಗಿ ಬನ್ನಿ” ಎಂದರು. “ಹಣ ಅಧಿಕಾರ ಇರುವವರೆಗೆ ಮಾತ್ರ ಮರ್ಯಾದೆ. ಆಮೇಲೆ ಮೂಸುವವರೂ ಇಲ್ಲ. ಮೂರು ಕಾಸಿನ ಬೆಲೆಕೊಡುವವರೂ ಇಲ್ಲ” ಎಂದರು. “ಒಮ್ಮೆ ನಿವೃತ್ತಿಯಾದರೆ ಸಮಯ ಕಳೆಯುವುದು ಕಷ್ಟ. ಬದುಕು ದುರ್ಭರವಾಗುತ್ತದೆ. ಕಾಯಿಲೆಯೇನೂ ಇಲ್ಲವಲ್ಲ, ನಿವೃತ್ತಿಯವರೆಗೆ, ತಾಕತ್ತು ಇರುವವರೆಗೆ ದುಡಿಯಿರಿ” ಎಂದರು. “ಮಗನಿಗೆ ಕೆಲಸವಾಗಿದೆ, ಬೇರೆ ಮಕ್ಕಳೂ ಇಲ್ಲ. ಕೈತುಂಬಾ ಸಂಬಳ ಬರುತ್ತದೆ. ಆಫೀಸಿನಲ್ಲಿಯೂ ಒಳ್ಳೆಯ ಹೆಸರಿದೆ. ಮನೆಯ ಹತ್ತಿರದಲ್ಲೇ ಆಫೀಸು ಇದೆ. ಆರೋಗ್ಯವೂ ಸರಿ ಇದೆ. ಅಂದ ಮೇಲೆ ನಿಮ್ಮ ಸಮಸ್ಯೆ ಏನು?” ಎಂದು ಕೆಲವರು “ನಿರ್ಧಾರವನ್ನು ಹಿಂತೆಗೆದುಕೊಳ್ಳಿರಿ” ಎಂದು ಒತ್ತಾಯಿಸಿ, ನೋಡಿದರು. ಎಲ್ಲವನ್ನೂ ಎಲ್ಲರ ಮಾತನ್ನೂ ಕೇಳಿದರೂ ನನ್ನ ರಾಗ ಒಂದೆ, “ನನಗೆ ಸರಳವಾಗಿ ಬದುಕಲು ಸಾಧ್ಯವಾಗುವಷ್ಟು ಪೆನ್ಶನ್ ಬರುತ್ತದಲ್ಲ. ಸಾಕು. ನಾನು ಬಯಸಿದಂತೆ ಬಾಳಲು, ನನಗೆ ಇನ್ನೊಂದು ಜನ್ಮ ಕೊಡುವವರಾರು?” ಅಂದೆ.

ನಾನು ನಿರ್ಧಾರ ಬದಲಿಸಲಿಲ್ಲ. ಅಂತೆಯೇ ನನ್ನ ಐವತ್ತೈದನೇ ವಯಸ್ಸಿನಲ್ಲಿ, ನನಗೆ ಸಮಾಜದಲ್ಲಿ ತಲೆಯೆತ್ತಿ ಬಾಳಲು ಬದುಕು ಕೊಟ್ಟ, ಸಂಸಾರವನ್ನು ಸಾಗಿಸಲು ಜೀವನಾಧಾರವಾಗಿದ್ದ, ಮೆಸ್ಕಾಂ ಎಂಬ ಸರಕಾರಿ ಕೆಲಸದಿಂದ ನಿವೃತ್ತನಾಗಿ, ಸ್ವತಂತ್ರನಾದೆ.  ನನಗೆ ಬರೆಯುವ, ಓದುವ, ನಾಟಕ, ಯಕ್ಷಗಾನದ, ಮತ್ತು ಅಲ್ಲಿ ಇಲ್ಲಿ ಪ್ರವಾಸ ಹೋಗಿ ತಿರುಗಾಡುವಂತಹ ಹಲವು ಹವ್ಯಾಸಗಳೂ ಇದ್ದುದರಿಂದ, ಹೇಗಾದರೂ ಕಾಲ ಕಳೆಯಬಹುದು ಎಂದು ನನ್ನ ಎಣಿಕೆ. ಕೆಲವರು ಹೇಳುವಂತೆ “ಹಣವೊಂದಿದ್ದರೆ ಎಲ್ಲವನ್ನೂ ಪಡೆಯಬಹುದು ಎಂಬುದಕ್ಕಿಂತ, ಮನುಷ್ಯನಿಗೆ ಹಣ ಮಾತ್ರ ಮುಖ್ಯವಲ್ಲ, ಮನಸ್ಸಿನ ನೆಮ್ಮದಿ ಮತ್ತು ಆರೋಗ್ಯ, ಜೀವನದಲ್ಲಿ ತೃಪ್ತಿ ಇವುಗಳು ಮುಖ್ಯ” ಎಂಬುದು ನನ್ನ ದೃಢನಿಲುವಾಗಿತ್ತು. ನಾಳೆಯ ಮಾತು ಈಗೇಕೆ?

ಮೊದಲಿಗೆ ನಾನು, ಆಫೀಸು, ಮನೆ ಎಂದು, ನನ್ನ ಸ್ವಂತ ಆಸೆ, ಅಭಿರುಚಿಯನ್ನು ಬಿಟ್ಟು ಇದ್ದವನಿಗೆ, ಆಫೀಸಿನ ಜಂಜಾಟದಲ್ಲಿ ಬಿಡುವಿಲ್ಲದೇ ತಲೆಕೆಡಿಸಿಕೊಂಡು ಓಡಾಡಿದವನಿಗೆ, ಒಮ್ಮೆಲೇ ಬಿಡುಗಡೆ ಸಿಕ್ಕಿದಂತಾಯಿತು. ಆದರೆ ಕೆಲಸವಿಲ್ಲದೇ ಕಾಲ ಕಳೆಯಲು ಕಷ್ಟವಾಯಿತು ಎಂದು ಅನ್ನಿಸತೊಡಗಿದಾಗ, ಲೈಬ್ರೆರಿಯ ಮೆಂಬರ್ ಆಗಿ ಪುಸ್ತಕಗಳನ್ನು ತಂದು ಓದಲು ಶುರುಮಾಡಿದೆ.  ಮನೆಯ ಪಕ್ಕದ ನಿವೇಶನದ ಖಾಲಿ ಜಾಗದಲ್ಲಿ, ಒಂದಷ್ಟು ತರಕಾರಿಗಳನ್ನು ನೆಟ್ಟು ಬೆಳೆಸುತ್ತಾ ಅವುಗಳಿಗೆ ನೀರೆರೆದು, ಪೋಷಿಸುತ್ತಾ ಅಲ್ಲಿ ಹೆಚ್ಚು ಕಾಲಕಳೆದೆ. ಶಿರಡಿ, ನಾಸಿಕ್, ದಕ್ಷಿಣ ಭಾರತ ಅಂತ ಒಂದೆರಡು ಕಡೆ ಪ್ರವಾಸವೂ ಆಯಿತು. ಹೀಗೆ ಸ್ವಲ್ಪ ದಿನದಲ್ಲೇ  ಹೊಸ ವಾತಾವರಣಕ್ಕೆ ಹೊಂದಿಕೊಂಡು, ಮನೆಯಲ್ಲಿ ಹೆಂಡತಿಯೊಂದಿಗೆ ಅಲ್ಲಿ ಇಲ್ಲಿ ಮನಸ್ವೀ ಓಡಾಡಿಕೊಂಡು ಇರತೊಡಗಿದೆ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ