ಶನಿವಾರ, ನವೆಂಬರ್ 4, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 46

ಉಡುಪಿಯ ವಿಭಾಗೀಯ ಕಛೇರಿಯಲ್ಲಿ ಒಂದು ವರ್ಷ ಯಾವುದೇ ಒತ್ತಡವಿಲ್ಲದೆ ಕೆಲಸ ಮಾಡಿದೆ. ನಂತರ ನನ್ನ ಕೆಲಸವನ್ನು ಬದಲಾಯಿಸಿ ಕಂದಾಯ ಶಾಖೆಗೆ ವರ್ಗಾಯಿಸಿದರು. ಆಗ ಮೆಲ್ವಿನ್ ಪಿಂಟೋ ಎನ್ನುವವರು ನಮ್ಮ ಬಾಸ್  ಆಗಿದ್ದರು. ಅವರೊಬ್ಬ ದಕ್ಷ ಅಧಿಕಾರಿಯಾಗಿದ್ದು ನಮ್ಮ ಕಂಪೆನಿಯಲ್ಲೇ ಉನ್ನತ ಹುದ್ದೆಗೆ ಏರಿ ನಿವೃತ್ತರಾದರು.

ನನಗೆ ಆಗ ಕೆಲಸದ ಒತ್ತಡ ಹೆಚ್ಚಿಗೆ ಇತ್ತು. ಮುಂದೆ ಪಿಂಟೋ ರವರಿಗೆ ಪದೋನ್ನತಿಯಾಗಿ ಮನೋಹರ ಬೈಲೂರ್ ಎನ್ನುವವರು, ನಮ್ಮ ಬಾಸ್ ಆಗಿ ಬಂದರು. ಅವರು ನನ್ನ ಬಾಸ್ ಎನ್ನುವುದಕ್ಕಿಂತ ಸ್ನೇಹಿತರಾಗಿದ್ದರು ಎನ್ನುವುದೇ ಸರಿ. ನಾನಾಗ ಉಡುಪಿ ಕುಂಜಿಬೆಟ್ಟು ವಸತಿಗೃಹದಲ್ಲಿ ಇದ್ದಿದ್ದೆ, ಮಧ್ಯಾಹ್ನ ಮನೆಗೆ ಬಂದು ಊಟಮಾಡಿ ಹೋಗುವುದೂ ಅವರ ಜೊತೆಯಲ್ಲಿ. ಸಂಜೆ ಆಫೀಸು ಬಿಟ್ಟ ಮೇಲೂ “ಬನ್ನಿ, ಸಾಕು ಕೆಲಸ ಮಾಡಿದ್ದು” ಅಂತ ಅವರೇ ಹೇಳಿ ಕರೆದುಕೊಂಡು ಹೋಗುತ್ತಿದ್ದರು. ಒಟ್ಟಿಗೇ ಕಾಫಿ ಕುಡಿದು ಮನೆಗೆ ಬರುತ್ತಿದ್ದೆವು. ಆಮೇಲೆ ಅವರಿಗೆ ಉಡುಪಿಯಲ್ಲೇ ವಿಭಾಗೀಯ ಕಛೇರಿಗೆ ಕೆಲಸದ ಬದಲಾವಣೆಯಾಯಿತು. ನಾನೂ ಅಲ್ಲಿಗೆ ಬರುತ್ತೇನೆಂದೆ. ಒಂದೇ ವಾರದಲ್ಲಿ ವಿಭಾಗಾಧಿಕಾರಿಗಳ ಹತ್ತಿರ ಮಾತಾಡಿ ಅವರ ಸೆಕ್ಷನ್ನಿಗೆ ಆದೇಶ ಹೊರಡಿಸಿ ಕರೆಸಿಕೊಂಡರು.

ಆಗ ನಮ್ಮ ಉಡುಪಿಯ ಆಫೀಸಿಗೆ ಬರುತ್ತಿದ್ದ ಒಬ್ಬ ಕುರುಚಲು ಗಡ್ಡದವ ಬೇಡಲು ಬರುತ್ತಿದ್ದವನು ನೆನಪಾಗುತ್ತಾನೆ. ಅವನು ಬಹುಷ್ಯ ಸ್ನಾನವನ್ನೇ ಮಾಡುತ್ತಿರಲಿಲ್ಲವೇನೋ. ಹತ್ತಿರ ಬಂದರೆ ಮೈ ವಾಸನೆ ಬರುತ್ತಿತ್ತು. ಬಟ್ಟೆಯೆಲ್ಲ ಮಣ್ಣು ಹಿಡಿದು ಅಸಹ್ಯವಾಗಿ ಕಾಣುತ್ತಿತ್ತು. ಆದರೆ ಅವನದ್ದೊಂದು ನಿಯತ್ತು. ಹಣಕೊಡುವವರು ಅನ್ನಿಸಿದರೆ ಮಾತ್ರ ಅವನು ಅವರ ಟೇಬಲ್ಲಿನ ಹತ್ತಿರ ಬಂದು ಸುಮ್ಮನೇ ನಿಲ್ಲುತ್ತಿದ್ದ. ಇಲ್ಲದಿದ್ದರೆ ಸುಮ್ಮನೆ ಆ ಬಾಗಿಲಿನಿಂದ ಬಂದು, ಸೀದಾ ಈ ಬಾಗಿಲಲ್ಲಿ ಹೊರಗೆ ಹೋಗುವುದು. ನಾವೇ ಪಾಪ ಅನ್ನಿಸಿ ಕರೆದು ಹಣ ಕೊಡಬೇಕು. ಅವನಿಗೆ ಕನ್ನಡ ಬರುತ್ತಿರಲಿಲ್ಲ. ಕೈಯನ್ನು ನೋಡಿ ಭವಿಷ್ಯವನ್ನೂ ಹೇಳುತ್ತಿದ್ದ. ಯಾವಾಗಲೂ, ಹಾಗೆ ಬಂದವನು, ನನ್ನ ಹಿಂದೆ ಕುಳಿತು ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ರಾಮಚಂದ್ರ ಶೆಟ್ಟಿಗಾರ್ ರ ಹತ್ತಿರ ಬಂದು ಸುಮ್ಮನೇ ನಿಲ್ಲುತ್ತಿದ್ದ. ಅವರು ಹಣವನ್ನು ಕೊಡುತ್ತಿದ್ದರು. ಅವನು ಮತ್ತೆ ಅಲ್ಲಿ ನಿಲ್ಲುವುದಿಲ್ಲ. ಆಚೆ ಈಚೆ ನೋಡದೆ ಹೊರಟೇಹೋಗುತ್ತಿದ್ದ. ಆಗ “ನೀವು ಯಾವುದೋ ಜನ್ಮದಲ್ಲಿ ಅವನ ಹತ್ತಿರ ಸಾಲ ಮಾಡಿರಬೇಕು. ಅದನ್ನೇ ಈಗ ತೀರಿಸುತ್ತಿದ್ದೀರಿ” ಎಂದು ನಾವು ಶೆಟ್ಟಿಗಾರರಿಗೆ ಹೇಳಿ ತಮಾಷೆ ಮಾಡುತ್ತಿದ್ದೆವು. ಆದರೆ ಅವನು ಯಾವಾಗಲೂ ಬರುತ್ತಿರಲಿಲ್ಲ, ವಾರಕ್ಕೊಮ್ಮೆಯೋ, ಹದಿನೈದು ದಿನಕ್ಕೊಮ್ಮೆಯೋ ಮಾತ್ರ ಬರುತ್ತಿದ್ದ.

ರಾಮಚಂದ್ರ ರಾವ್ ಎನ್ನುವ ಸಹೋದ್ಯೋಗಿಯೊಬ್ಬರ ಉಮೇದಿನಿಂದ ಒಮ್ಮೆ ಮೇ ಒಂದರ ಕಾರ್ಮಿಕ ದಿನಾಚರಣೆಯಂದು ಹೆಗ್ಗೋಡಿನ ಸಾಕೇತ ಕಲಾವಿದರಿಂದ ಚಂದ್ರಹಾಸ ಚರಿತ್ರೆ ಎಂಬ ಯಕ್ಷಗಾನ ವನ್ನು ಆಡಿಸಿದೆ ಮತ್ತೊಂದು ವರ್ಷ ಗೋಪಾಲಕೃಷ್ಣ ಶೆಟ್ಟಿ ಎನ್ನುವ ಮಂಗಳೂರಿನಿಂದ ಬರುವ ಒಬ್ಬರ ನಿರ್ದೇಶನದಲ್ಲಿ ಒಂದು ನಾಟಕವನ್ನೂ ಮಾಡಿದೆವು. ಅದರಲ್ಲಿ ಅವರದು ಒಂದು ಋಷಿಯ ಪಾತ್ರವಾದರೆ ನನ್ನದು ಆ ಋಷಿಯ ಏಕಾಗ್ರತೆಯನ್ನು ಭಂಗಗೊಳಿಸುವ ಸ್ತ್ರೀ ಪಾತ್ರವಿತ್ತು. ಒಂದು ಕಾಡಿನಲ್ಲಿ ಇರುವ ಕಾಳಿಗುಡಿಯ ಸೆಟ್ಟಿಂಗ್ ಮಾಡಿಸಿದ್ದೆವು. ಆ ಸಮಯದಲ್ಲಿ ಕೆಜಿ ಕೃಷ್ಣಮೂರ್ತಿಯವರು ನಿರ್ದೇಶನಮಾಡಿ  ಊರೂರು ತಿರುಗಾಟ ಮಾಡುತ್ತಿದ್ದ ತುಮರಿಯ ಚಿಣ್ಣರ ತಂಡದ ನಾಟಕವನ್ನು ಸುಮಾರು ಐದಾರು ವರ್ಷ ನಮ್ಮ ಕುಂಜಿಬೆಟ್ಟಿನ  ಕೆಇಬಿ ಕಾಲೋನಿಯಲ್ಲಿ ಅಲ್ಲಿಯ ಮನೆಯವರಿಂದ ಹಣ ಸಂಗ್ರಹಮಾಡಿ ಆಡಿಸಿದೆ‌.

ಹನ್ನೆರಡು ವರ್ಷದ ನಂತರ ನನಗೆ ನಮ್ಮ ಆಫೀಸಿನ ನಾಲ್ಕಾರು ಸಹೋದ್ಯೋಗಿಗಳೊಂದಿಗೆ ಪದೋನ್ನತಿ ಬಂತು. ಹತ್ತಿರದ ಕೆಲವು ಸ್ಥಳಗಳು ಭರ್ತಿಯಾಯಿತು. ನನಗೆ ಸುಳ್ಯಕ್ಕೆ ವರ್ಗವಾಯಿತು. ನನಗೆ ಉಡುಪಿಯನ್ನು ಬಿಟ್ಟು ಹೋಗಲು ಮನಸ್ಸಿಲ್ಲ. ಆದ್ದರಿಂದ ನಾನು ಹೋಗಲೂ ಇಲ್ಲ, ಬೇಡ ಎಂದು ಬರೆದುಕೊಡಲೂ ಇಲ್ಲ. ಮನೋಹರ ಬೈಲೂರ್ ರವರು ನನ್ನ ಬಾಸ್ ಆಗಿದ್ದು ಬೇಡದಿದ್ದರೆ ಬರೆಸಿಕೊಂಡು ಮೇಲಧಿಕಾರಿಗಳಿಗೆ ಕಳಿಸಬೇಕಾಗಿದ್ದವರು, ಮೇಲಿನಿಂದ ಒತ್ತಡ ಬಂದರೂ "ನೋಡುವ ಗಡಿಬಿಡಿ ಮಾಡಬೇಡಿ" ಎಂದು ದಿನವನ್ನು ತಳ್ಳಿದರು. ಆಗ ನನ್ನ ಜೊತೆಗೆ ಪದೋನ್ನತಿ ಹೊಂದಿದ ಒಬ್ಬಿಬ್ಬರು ದೂರ ಹೋಗಲಾರದೇ ಪದೋನ್ನತಿಯೆ ಬೇಡ ಎಂದು ಬರೆದೂ ಕೊಟ್ಟಾಯಿತು.

ಅಷ್ಟರಲ್ಲಿ ಕೃಷ್ಣಮೂರ್ತಿ ರಾವ್ ಎನ್ನುವ ನಮ್ಮ ಕಛೇರಿಯಲ್ಲೇ ಇದ್ದ ಕಾರ್ಯನಿರ್ವಾಹಕ ಇಂಜಿನಿಯರ್ ರಿಗೆ ಮಂಗಳೂರಿಗೆ ಅಧೀಕ್ಷಕ ಇಂಜಿನಿಯರ್ ಆಗಿ ವರ್ಗಾವಣೆಯಾಯಿತು. ಅವರು ಬಹಳ ಒಳ್ಳೆಯ ಅಧಿಕಾರಿಗಳು. ಸರಳ ಸ್ವಭಾವದವರು ಮತ್ತು ನನಗೆ ಬಂದ ವರ್ಗಾವಣೆಯ ಆದೇಶವನ್ನು ಅವರು ಅಧೀಕ್ಷಕ ಇಂಜಿನಿಯರ್ ಆದ ಮರುದಿನವೇ, ನನ್ನ ಕೋರಿಕೆಯ ಮೇರೆಗೆ ಆ ತಿಂಗಳ ಅಂತ್ಯದಲ್ಲಿ ನಿವೃತ್ತರಾಗಲಿರುವ ಮುಲ್ಕಿ ಕಛೇರಿಯ ಹುದ್ದೆಗೆ ನಿವೃತ್ತಿಯಾದ ನಂತರ ಸೇರಲು ತಿಳಿಸಿ ಆದೇಶ ಹೊರಡಿಸಿದರು.  ಉಡುಪಿಯನ್ನು ಬಿಟ್ಟು ದೂರ ಹೋಗಲು ಸುತರಾಂ ಇಷ್ಟ ಇಲ್ಲದ ನನಗೆ ಅದರಿಂದ ತುಂಬಾ ಉಪಕಾರವಾಯಿತು. ಕೂಡಲೆ ಅಲ್ಲಿಗೆ ಹೋಗಿ ಕೆಲಸಕ್ಕೆ ಹಾಜರಾದೆ.

ಕೃಷ್ಣಮೂರ್ತಿ ರಾವ್ ಮಂಗಳೂರಿನಲ್ಲಿಯೇ ಅಧೀಕ್ಷಕ ಇಂಜಿನಿಯರ್ ಆಗಿ ಸ್ವಲ್ಪ ಸಮಯದ ನಂತರ ನಿವೃತ್ತರಾದರು. ಅವರು ತುಂಬಾ ಪ್ರಾಮಾಣಿಕರು.  ಅವರು ಸರ್ವೀಸಿನ ಹೆಚ್ಚು ಭಾಗ ಬೃಹತ್ ಕಾಮಗಾರಿ ವಿಭಾಗದಲ್ಲಿ ಕೆಲಸ ಮಾಡಿದರು. ಅವರ ಸಹೋದ್ಯೋಗಿಗಳೆಲ್ಲ ಅವರವರ ಅನುಕೂಲತೆಗೆ ತಕ್ಕಂತೆ ಸ್ವಂತ ಮನೆಯನ್ನು ಮಾಡಿಕೊಂಡಿದ್ದರೂ ಇವರಿಗೆ ಆಗಲಿಲ್ಲ. ಅವರು ಸರ್ವೀಸಿನ ಕೊನೆಯಲ್ಲಿ ಸ್ವಂತ ಮನೆಕಟ್ಟಿಸಿಕೊಂಡರು. ಯಾರೋ ಈ ಬಗ್ಗೆ ನೀವಿನ್ನೂ ಮನೆಯನ್ನು ಕಟ್ಟಿಸಿಕೊಳ್ಳಲಿಲ್ಲವಾ? ಎಂದು ಕೇಳಿದಾಗ, “ನಾನು ಮೇಜರ್ ವರ್ಕ್ಸ್ ನಲ್ಲಿ ಕೆಲಸ ಮಾಡುತ್ತಿದ್ದೆನಲ್ಲ. ಆಗ ಆಫೀಸ್ ಕೆಲಸವೇ ಸಿವಿಲ್, ಬಿಲ್ಡಿಂಗ್ ಕನ್ ಶ್ಟ್ರಕ್ಷನ್ ಇತ್ಯಾದಿ ಆಗಿತ್ತು.  ಆಗ ಮನೆ ಕಟ್ಟಿಸಿದರೆ  ಆಫೀಸಿನದ್ದೇ ಸಿಮೆಂಟ್, ಕಬ್ಬಿಣ ಉಪಯೋಗಿಸಿ ಮನೆ ಕಟ್ಟಿಸಿದರು ಎಂದು ಜನ ತಿಳಿಯುತ್ತಾರೆ. ಆಗ ಹಣದ ತಾಪತ್ರಯವೂ ಇತ್ತು. ಅದಕ್ಕೆ ಸುಮ್ಮನಾದೆ” ಅಂದರಂತೆ.

ಸುಮಾರು, ಒಂದು, ಒಂದುವರೆ ವರ್ಷದ ನಂತರ ಕೃಷ್ಣಮೂರ್ತಿ ರಾವ್ ರವರು ನಮ್ಮ ಮುಲ್ಕಿ ಆಫೀಸಿಗೆ ಇನ್ಸ್ ಪೆಕ್ಷನ್ ಗೆ ಬಂದರು. ಕಡತ ಅದೂ ಇದೂ ನೋಡುತ್ತಾ. ‘ದಿನೇಶ್, ನಿಮಗೆ ಪ್ರೊಮೋಶನ್ ಬಂದಾಗ ನಾನು ಉಡುಪಿಗೇ ಹಾಕಿಸಿಕೊಡಲಿಲ್ಲ ಅಂತ ಬೇಸರ ಆಗಿರಬಹುದು. ಕ್ಷಮಿಸಿ.’ ಅಂದರು. ನಾನು ‘ಇಲ್ಲ ಸರ್, ನಾನು ಇಲ್ಲಿ ಸಂತೋಷವಾಗಿದ್ದೇನೆ. ಒಳ್ಳೆಯದಾಯಿತು.’ ಅಂದೆ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ