ಭಾನುವಾರ, ನವೆಂಬರ್ 12, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 53

ಒಮ್ಮೆ, ಸಾಲಿಗ್ರಾಮ ಮೇಳದ ಭಾಗವತರಾದ ಹಾಲಾಡಿ ರಾಘವೇಂದ್ರ ಮಯ್ಯರು ಸಿಕ್ಕಿದಾಗ “ನಾನು ಅಪ್ಪಯ್ಯನ ಪದ್ಯಗಳನ್ನು ಸಂಗ್ರಹಿಸುತ್ತಿದ್ದೇನೆ, ನಿಮಗೆ ಎಲ್ಲಾದರೂ ಅಂತಹ ಸಂಗ್ರಹ ಇದೆ ಅಂತ ಗೊತ್ತಾದರೆ ನನಗೊಂದು ಸುದ್ಧಿ ತಿಳಿಸುವಿರಾ?” ಎಂದೆ. ಅವರು ಸಾಗರದ ಬಳಿ ಒಬ್ಬರು ಅವರ ಅಭಿಮಾನಿಗಳಲ್ಲಿ ಅಪ್ಪಯ್ಯನ ಪದ್ಯಗಳಿವೆ ಎಂದೂ, ಅವರು ತನಗೆ ಸಿಕ್ಕಿದಾಗ ಅದನ್ನು ಕೇಳಿಸಿದ್ದರು ಎಂದು ಒಂದು  ಫೋನ್ ನಂಬರ್ ಕೊಟ್ಟರು. ಅವರ ಹೆಸರು ಬಾಬಣ್ಣ ಹೊಸೂರು ಅಂತ. ನಾನು ಅವರನ್ನು ಸಂಪರ್ಕಿಸಿದೆ. ಅವರಲ್ಲಿ ತುಂಬಾ ಪದ್ಯಗಳಿವೆ ಎಂದು ಗೊತ್ತಾಗಿ ಎಲ್ಲವನ್ನು ಒಂದು ಡಿವಿಡಿಗೆ ಹಾಕಿ ಕಳಿಸಿಕೊಡಲು ವಿನಂತಿಸಿದೆ.

ಅವರು ಸ್ವಲ್ಪ ದಿನದಲ್ಲಿಯೇ ಕೊರಿಯರ್ ಮೂಲಕ ಅದನ್ನು ಕಳಿಸಿಕೊಟ್ಟರು. ನೋಡಿದರೆ ಅದೆಲ್ಲವೂ ನನ್ನದೇ ಸಂಗ್ರಹ. ಯಾರೋ ಅವರಿಗೆ ಕೊಟ್ಟಿದ್ದರು. ನನಗೆ ಗೊತ್ತಾಯಿತಾದರೂ ಕಂಪ್ಯೂಟರಲ್ಲಿ ಹಾಕಿ ಸುಮ್ಮನೇ ಮೇಲೆ ಮೇಲೆ ಎಲ್ಲವನ್ನೂ ನೋಡುತ್ತಾಹೋದೆ. ಅದರಲ್ಲಿ ಮುದ್ರಾಡಿಯಲ್ಲಿ ರೆಕಾರ್ಡ್ ಮಾಡಿದ ಪದ್ಯಗಳೂ ಇದ್ದು ನಾನು ಖುಷಿಯಿಂದ ಕುಣಿದಾಡಿದೆ. ಆದರೆ ಅದು ನಾನು ರೆಕಾರ್ಡ್ ಮಾಡಿದ್ದೇ ಆಗಿತ್ತು. ಅವರಿಗೆ ಯಾರು ಕೊಟ್ಟವರು ಎಂದು ತಿಳಿಯಬೇಕಾಯಿತು. ಬಾಬಣ್ಣರಿಗೆ ಫೋನ್ ಮಾಡಿ ಆ ಸಂಗ್ರಹ ಎಲ್ಲಿ ಸಿಕ್ಕಿದ್ದು? ಅಂತ ಕೇಳಿದೆ. ಅವರು ನಿತ್ಯಾನಂದ ಹೆಬ್ಬಾರರೂ ಅವರೂ ಸ್ನೇಹಿತರೆಂದೂ ಅವರ ಮೊಬೈಲಿನಲ್ಲಿದ್ದುದನ್ನು ತಾನು ಪ್ರತಿ ಮಾಡಿಕೊಂಡೆ ಎಂದೂ ಹೇಳಿದರು. ಅಂತು ನಾನು ಕಳೆದುಹೋಯಿತು ಅಂತ ಆಸೆ ಬಿಟ್ಟಿದ್ದ ಅಮೂಲ್ಯವಾದ ಸಂಗ್ರಹ ಮತ್ತೆ ನನ್ನ ಕೈ ಸೇರಿತು. ಕೆಲವರು ಹಳೆಯ ಸಂಗ್ರಹ ಇದ್ದವರು ಬೇರೆಯವರಿಗೆ ಅದನ್ನು ಕೊಡುವುದಿಲ್ಲ. ಕೊಟ್ಟರೂ ಅದನ್ನು ನೀವು ಬೇರೆಯವರಿಗೆ ಕೊಡಬೇಡಿ ಮಾರಾಯ್ರೆ. ಎಂದು ತಾಕೀತು ಮಾಡಿಯೇ ಕೊಡುತ್ತಾರೆ. ಇನ್ನು ಕೆಲವರು, “ನನಗೆ ಕೊಟ್ಟವರು ಬೇರೆಯವರಿಗೆ ಕೊಡಬಾರದು ಎಂದಿದ್ದಾರೆ. ನೀವಾದ್ದಕ್ಕೆ ಕೊಡುತ್ತಿದ್ದೇನೆ” ಎಂದು ನನಗೆ ಕೊಟ್ಟರೆ ನಾನು ನಕ್ಕು ಈ ಕತೆ ಹೇಳಿ, ನಾನು ನನ್ನ ಸಂಗ್ರಹವನ್ನು ಕೇಳಿದವರಿಗೆಲ್ಲಾ ಕೊಡುತ್ತಾ ಇದ್ದೇನೆ. ನನ್ನ ಹತ್ತಿರ ಇರುವುದು ಹಾಳಾದರೂ ಎಲ್ಲಿಯಾದರೂ ಒಂದು ಪ್ರತಿ ಇರುತ್ತದಲ್ಲ ಎಂದು ಹೇಳುತ್ತೇನೆ.

ಆಗಲೇ ಡಿವಿಡಿ, ಟಿವಿಗಳು ಬಂದು, ಟೇಪ್ ರೆಕಾರ್ಡರ್ ಉಪಯೋಗಿಸುವವರಿಲ್ಲದೇ, ಅದು ಹಾಳಾದರೆ ಅದರ ಬಿಡಿ ಭಾಗಗಳು ಸಿಕ್ಕದೇ ಮೂಲೆ ಸೇರಿದ್ದವು. ಹಳೆಯ ಕ್ಯಾಸೆಟ್ ಗಳು ಅಟ್ಟ ಸೇರಿದ್ದವು. ಆದರೆ ಕೆಲವರು ಅದನ್ನು ಜೋಪಾನವಾಗಿ ಇಟ್ಟದ್ದು ಕಂಡು ಬಂತು. ಕೆಲವರಂತೂ ಕ್ಯಾಸೆಟ್ ಗಳನ್ನು ಅವು ಯಾವ ಸ್ಥಿತಿಯಲ್ಲಿದೆಯೋ ಹಾಗೆಯೇ ಎಸೆದಿದ್ದು ಅವುಗಳು ನೋಡುವ ಸ್ಥಿತಿಯಲ್ಲಿ ಇಲ್ಲದೇ, ಟೇಪುಗಳು ಹೊರ ಬಂದು ಫಂಗಸ್ ಹಿಡಿದು ಹಾಳಾದ ಸ್ಥಿತಿಯಲ್ಲಿ ಇರುತ್ತಿತ್ತು. ಅಂತೂ ನಾವು ಕೇಳಿದಾಗ ಅವರು ಮರುಮಾತಾಡದೇ “ನಿಮಗೆ ಉಪಯೋಗವಾಗುವುದಾದರೆ ಮಾಡಿ” ಎಂದು ಕೊಟ್ಟುಬಿಡುತ್ತಿದ್ದರು. ನಾನು ಅವುಗಳನ್ನು ನನ್ನ ಕಂಪ್ಯೂಟರಲ್ಲಿ ಗೋಲ್ಡ್ ವೇವ್ ಎಂಬ ಸಾಫ್ಟ್ ವ್ಯಾರ್ ನ್ನು ಹಾಕಿಕೊಂಡು,  ಸಿಡಿ ಮಾಡಿ ಒಂದು ಪ್ರತಿಮಾಡಿ ಅವರಿಗೆ ತಲುಪಿಸುತ್ತಿದ್ದೆ. ಎಲ್ಲವನ್ನೂ ಒಂದು ಪ್ರತಿ ಸಿ.ಡಿ. ಮಾಡಿ ಬ್ಯಾಕ್ ಅಪ್ ಇಟ್ಟುಕೊಳ್ಳುತ್ತಿದ್ದೆ. ಅಪ್ಪಯ್ಯನ ಪದ್ಯ ಇದೆಯಾ? ಅಂತ ನನ್ನಲ್ಲಿ ಕೇಳಿದವರಿಗೆಲ್ಲಾ ಒಂದು ಪ್ರತಿಯನ್ನು ಮಾಡಿ ಕೊಡುತ್ತಿದ್ದೆ.

ಈಗ ಸ್ವಲ್ಪ ಸಮಯದ ಹಿಂದೆ ನಡೆದ ಒಂದು ಘಟನೆಯನ್ನು ಹೇಳುತ್ತೇನೆ. ನಾನಾಗ ಮುಲ್ಕಿಯಲ್ಲಿದ್ದೆ ಅಂತ ನೆನಪು. ಹಿಂದೆ ಹೇಳಿದಂತೆ ನಾನು ಪ್ರತೀ ವರ್ಷ ಶಂಕರನಾರಾಯಣದಲ್ಲಿ ದೀಪೋತ್ಸವದ ಸಮಯದಲ್ಲಿ ನಮ್ಮ ಯಕ್ಷಗಾನ ಸಂಘದ ಹುಡುಗರನ್ನೆಲ್ಲಾ ಸೇರಿಸಿಕೊಂಡು ಒಂದು ಆಟವನ್ನು ಆಡಿಸುತ್ತಿದ್ದೆ. ನನ್ನ ಭಾವನವರೇ ದೇವಸ್ಥಾನದ ಮುಕ್ತೇಸರರಾದ್ದರಿಂದ ಪ್ರದರ್ಶನದ ಅವಕಾಶಕ್ಕೆ ತೊಂದರೆಯಾಗುತ್ತಿರಲಿಲ್ಲ.  ಒಂದು ಪ್ರಸಂಗದ ಮುಖ್ಯ ದೃಶ್ಯಗಳ, ಸುಮಾರು ಎರಡರಿಂದ  ಎರಡೂವರೆ ಗಂಟೆಯ ಒಂದು ಭಾಗವನ್ನು ಸುಮಾರು ಐವತ್ತು ಪದ್ಯಕ್ಕೆ ಸೀಮಿತಗೊಳಿಸಿ ಆಯ್ದುಕೊಂಡು, ಅರ್ಥವನ್ನೂ ಬರೆದು ಮಕ್ಕಳಿಗೆ ಕೊಟ್ಟು ಬಾಯಿ ಪಾಠ ಮಾಡಲು ಹೇಳಿ, ದೇವಸ್ಥಾನದಲ್ಲಿಯೇ ನಾಲ್ಕಾರು ಟ್ರಯಲ್ ಮಾಡಿಕೊಂಡೇ ಆಟ ಆಡುವುದು. ಮತ್ತೆ ನಾಲ್ಕಾರು ಕಡೆಗಳಲ್ಲಿ ಮುಂದಿನ ವರ್ಷ ಚೌತಿಗೆ, ನವರಾತ್ರಿಗೆ ಅಂತ ಐದಾರು ಆಟ ಆಡಲು ಅವಕಾಶ ಸಿಗುತ್ತಿತ್ತು.

ಒಮ್ಮೆ ಕಡಿಯಾಳಿಯಲ್ಲಿ ಆಟ. ಪ್ರಸಂಗ “ಜಾಂಬವತಿಕಲ್ಯಾಣ”. ನನ್ನದು ಕೃಷ್ಣ. ವೆಂಕಟೇಶ ಹಂದೆಯ ಜಾಂಬವಂತ ಮಾಡಿಸುವ ಅಂತ ಅವನನ್ನು ಕರೆಸಿದ್ದೆ. ಆಗ ಅವನು ಬ್ಯಾಂಕ್ ಉದ್ಯೋಗಿಯಾಗಿ ಬೆಂಗಳೂರಿನಲ್ಲಿದ್ದ. ಆಟದ ಚೌಕಿಯಲ್ಲಿ ಕುಳಿತು ನಮ್ಮ ಗೋವಿಂದ ಉರಾಳರು ನನ್ನ ಮುಖಕ್ಕೆ ಸಪೇತ ಹಾಕಿ. ಪೌಡರ್ ಹಚ್ಚಿ ನೀರಿನ ಸ್ಪಂಜ್ ನಲ್ಲಿ ಒರೆಸಿ, ಇನ್ನೇನು, ಹುಬ್ಬಿಗೆ, ಕಣ್ಣಿಗೆ ಕಾಡಿಗೆ ಹಚ್ಚಬೇಕು ಎನ್ನುವಾಗ “ರೊಯ್ಯನೆ” ಒಂದು ದೀಪದ ಹುಳು ನನ್ನ ಬಲದ ಕಿವಿಯ ಒಳಗೆ ಪ್ರವೇಶ ಮಾಡಿಬಿಟ್ಟಿತು. ನಾನು ತಲೆ ಕೊಡಕಿದೆ. ಕೈಯಿಂದ ಕಿವಿಯನ್ನು ಬಡಿದೆ. ಬೆರಳು ಹಾಕಿ ಅದನ್ನು ತೆಗೆಯಲು ಪ್ರಯತ್ನಿಸಿದೆ. ಅದು ಮತ್ತೆ ಒಳಗೇ ಹೋಯಿತೇ ವಿನಹ ಹೊರಗೆ ಬರಲಿಲ್ಲ. ಒಳಗೆ ಗುಯ್ಯ್ ಸದ್ದು ಬಿಟ್ಟರೆ ಬಲಕಿವಿ ಬಂದ್ ಆದ ಹಾಗೆಯೇ ಆಯಿತು.  ನೋವು ಹೆಚ್ಚಾಗುತ್ತಾ ಹೋದುದರಿಂದ ಮುಖಕ್ಕೆ ಬಣ್ಣ ಬಳಿದಿರುವಾಗಲೇ ಅಲ್ಲೇ ಹತ್ತಿರದ ಡಾಕ್ಟರರ ಬಳಿಗೆ ಹೋಗಿ, ತೋರಿಸಿದೆ ಅವರು ಕೊಟ್ಟ ಡ್ರಾಪ್ಸ್ ಒಂದನ್ನು ಒಮ್ಮೆ ಕಿವಿಗೆ ಹೊಯ್ದುಕೊಂಡೆ. ಆಮೇಲೆ ಹೊತ್ತಾಯಿತು ಅಂತ ಗಡಿಬಿಡಿಯಲ್ಲಿ ವೇಷ ಕಟ್ಟಿಸಿಕೊಂಡು ಆ ನೋವಿನಲ್ಲೇ ರಂಗಸ್ಥಳಕ್ಕೆ ಹೋಗಿ ಕುಣಿದೆ. ಬಲಭಾಗದಲ್ಲಿ ಏನು ಶಬ್ಧ ಆದರೂ ಕೇಳುತ್ತಿರಲಿಲ್ಲ.

ಆಟ ಹೇಗಾಯಿತೋ, ಅಂತೂ ಮುಗಿಯಿತು. ವೇಷ ಬಿಚ್ಚಿಹಾಕಿ ಅಲ್ಲಿಂದ ಮನೆಗೆ ಬಂದವನೇ ಮತ್ತೆ ಕಿವಿಯ ಒಳಗಿನ ಹುಳವನ್ನು ಹೊರಹಾಕಲು ಶತಪ್ರಯತ್ನ ಶುರುಮಾಡಲು ತೊಡಗಿದೆ. ಒಂದು ಕುಗ್ಗಿ ಕಡ್ಡಿಯನ್ನು ಕಿವಿಯ ಒಳಗೆ ಹಾಕಿ “ಮೀಂಟಿ” ಹುಳವನ್ನು ತೆಗೆಯಲು ನೋಡಿದೆ. ತೆಂಗಿನ ಎಣ್ಣೆಯನ್ನು ಕಿವಿಗೆ ಬಿಟ್ಟು ಪಟಪಟ ಅಂತ ಕಿವಿಯನ್ನು ಒತ್ತಿಹಿಡಿದು ರಭಸದಿಂದ ಆಚೆಈಚೆ ಮಾಡಿದ್ದಾಯಿತು. ಅದು ಮತ್ತೆ ಒಳಕ್ಕೇ ಹೋಗಿ, ಕಿವಿಯ ತಮ್ಮಟೆಗೆ ತಾಗಿ ನೋವು ಮಾಡಿತೇ ಹೊರತು, ಹೊರಕ್ಕೆ ಬರಲು ಒಪ್ಪಲೇ ಇಲ್ಲ. ರಾತ್ರಿ ಇಡೀ ನಿದ್ದೆ ಇಲ್ಲದೇ ಕಳೆದಾಯಿತು. ಬೆಳಿಗ್ಗೆ ಆದಾಗ ಇನ್ನೊಂದು ಸರ್ಕಸ್ ಮಾಡುವ ಮನಸ್ಸಾಯಿತು.

ಬಾಯಿಯನ್ನು ಮುಚ್ಚಿ, ಮೂಗನ್ನು ಕೈಯಿಂದ ಗಟ್ಟಿಯಾಗಿ ಹಿಡಿದು ಜೋರಾಗಿ ಉಸಿರನ್ನು ಕಿವಿಯಿಂದ ಹೊರಗೆ ಹಾಕಲು ಪ್ರಯತ್ನಿಸಿದೆ. ಆದರೂ ಕಿವಿಯ ಒಳಗಿನ ಹುಳು ಅಲ್ಲಿಯೇ ಇದ್ದು ಸತ್ಯಾಗ್ರಹ ಮಾಡಿತು. ಇನ್ನು ನನ್ನಿಂದ ಆಗುವುದಿಲ್ಲ ಅಂತ ಸೋಲನ್ನು ಒಪ್ಪಿಕೊಂಡು, ಉಡುಪಿಯ ಅಲಂಕಾರ್ ಥಿಯೇಟರ್ ಪಕ್ಕದಲ್ಲಿರುವ ಗಾಂಧಿ ಆಸ್ಪತ್ರೆಗೆ(ಈಗ ಅದು ಲಲಿತ್ ಆಸ್ಪತ್ರೆ ಆಗಿದೆ) ಹೋಗಿ ಅಲ್ಲಿ ಡಾ. ಆರ್ ವಿ. ನಾಯಕ್ ಎನ್ನುವ ಕಿವಿ ಮೂಗು ಮತ್ತು ಗಂಟಲು ತಜ್ಞರಲ್ಲಿಗೆ ಹೋಗಿ ತೋರಿಸಿದೆ. ಅವರು ಚಿಮಟ ಹಾಕಿ ನನ್ನ ಕಿವಿಯ ಒಳಗಿದ್ದ ಹುಳವನ್ನು ತೆಗೆದು ನನಗೂ, ತನ್ಮೂಲಕ ಅದಕ್ಕೂ ಬಿಡುಗಡೆ ಮಾಡಿದರು. ಸದ್ಯ ಮುಗಿಯಿತಲ್ಲ ಎಂದು ಮನೆಗೆ ಬಂದು ಮಧ್ಯಾಹ್ನ ಊಟ ಮಾಡಿ ಮಲಗಿ, ಏಳುವಾಗ ನೋಡುತ್ತೇನೆ, ಎಕ್ ಎಕ್ ಅಂತ ಎಕಡು( ಬಿಕ್ಕಳಿಕೆ) ಶುರುವಾಗ ಬೇಕೆ?. ಹೋಗುತ್ತದೆ ಅಂತ ಮೊದಲಿಗೆ ನಾನು ಕ್ಯಾರೇ ಮಾಡಲಿಲ್ಲ. ಸಂಜೆಯವರೆಗೂ ನಿಲ್ಲದೇ ಇದ್ದಾಗ ಗಾಬರಿ ಶುರುವಾಯಿತು. “ಚೆನ್ನಾಗಿ ನೀರು ಕುಡಿಯಿರಿ. ಹೋಗುತ್ತದೆ” ಎಂದು ಅನ್ನಪೂರ್ಣ ಹೇಳಿದಳು. ಗಂಟಲಲ್ಲಿ ನೀರು ಹೋಯಿತೇ ಹೊರತು ಎಕಡು ಹೋಗಲಿಲ್ಲ. ಕೊಬ್ಬರಿ ತಿನ್ನಿ. ಅಂದಳು. ತಿಂದೆ. ಯಾರಿಗಾದರೂ ಸುಳ್ಳು ಹೇಳಿದರೆ ಹಾಗಾಗುತ್ತಂತೆ. ನೆನಪು ಮಾಡಿಕೊಳ್ಳಿ ಅಂದಳು. ನೆನಪು ಮಾಡಿದೆನೋ ಇಲ್ಲವೋ, ಅಂತು ಎಕಡು ನನ್ನನ್ನು ಬಿಡುವುದಿಲ್ಲ ಎಂದಿತು. ಮರುದಿನ ಚಂದ್ರ ಭಟ್ಟರ ಮೊದಲನೇ ಮಗಳು ಸುಧಾರಾಣಿಯ  ಮದುವೆಯು ಕೋಟೇಶ್ವರದಲ್ಲಿ ಇತ್ತು. ಹೋಗಲೇ ಬೇಕು. ಮನೆಯ ಮಗಳಲ್ಲವೇ? ಹೋದೆವು.

ಮಧ್ಯಾಹ್ನದ ಹೊತ್ತಿಗೆ ನಿತ್ರಾಣವಾಗಿ ಕಣ್ಣುಕತ್ತಲೆ ಬರುವಂತಾಯಿತು. ಏನೂ ಮಾಡಲಾಗದೇ ಮದುವೆಯ ಮಂಟಪಕ್ಕೂ ಹೋಗದೇ ಕಲ್ಯಾಣಮಂದಿರದ ಮೇನೇಜರ್ ಮನೆಯ ಒಂದು ರೂಮಿನಲ್ಲಿ ಮಲಗಿಕೊಂಡೆ. ಮಧ್ಯಾಹ್ನದ ಮೇಲೆ ಇನ್ನು ಕಡೆಗಣಿಸಿದರೆ ಆಗುವುದಲ್ಲ ಅನ್ನಿಸಿ, ಮದುವೆಗೆ ಅಂತ ಬಂದಿದ್ದ ಶ್ರೀಧರಣ್ಣಯ್ಯನ ಜೊತೆಗೆ ಕೋಟೇಶ್ವರದಲ್ಲಿಯೇ ಇರುವ ಸರ್ಜನ್ ಆಸ್ಪತ್ರೆಗೆ ಹೋಗಿ, ಅಲ್ಲಿಯ ಡಾಕ್ಟರರಿಗೆ ತೋರಿಸಿದೆ. ನನ್ನ ಸ್ಥಿತಿಯನ್ನು ಕಂಡ ಆ ಡಾಕ್ಟರ್ “ನೀವು ಎಡ್ಮಿಟ್ ಆಗಲೇ ಬೇಕು. ಇಲ್ಲದಿದ್ದರೆ ಜೀವಕ್ಕೆ ಅಪಾಯ” ಎಂದರು. ಸರಿ ಎಂದು ಆ ದಿನವೇ ಎಡ್ಮಿಟ್ ಆದೆ. ನನ್ನ ಹೆಂಡತಿ ನನ್ನ ಶುಶ್ರೂಷೆಗೆ. ಆ ಡಾಕ್ಟರಿಗೆ ಇದು ಎಂತ ಕಾಯಿಲೆ ಎಂದೇ ಗೊತ್ತಾಗಲಿಲ್ಲವೇನೋ ಪಾಪ. ನನ್ನನ್ನು ಮಲಗಿಸಿ ದಿನವೂ ಬೆಳಿಗ್ಗೆ ಸಂಜೆ ಅಂತ ಡ್ರಿಪ್ಸ್ ಕೊಟ್ಟು, ಶಕ್ತಿ ತುಂಬಿದರು. ನನಗೆ ಅಸ್ತಮಾ ಇದೆ ಎಂದು ತಿಳಿದು ಅದರಲ್ಲೇ ಅದಕ್ಕೂ ಮದ್ದು ಸುರಿದರು. ಆದರೆ ಎಕಡು ಮಾತ್ರಾ ಗುಣವಾಗಲಿಲ್ಲ. ಆದರೆ ನಾನು ಸ್ವಲ್ಪ ಗಟ್ಟಿಯಾದೆ ಅಂತಾಯಿತು.

ಎರಡು ದಿನ ಕಳೆಯಿತು. ನಾನು ಡಾಕ್ಟರ್ ವಿಸಿಟ್ ಗೆ ಬಂದಾಗ, ಮೆಲ್ಲನೆ ಹೇಳಿದೆ. “ಒಂದು ವರ್ಷದ ಮೊದಲೊಮ್ಮೆ ನನಗೆ ಹೀಗೆಯೇ ಎಕಡು ಶುರುವಾಗಿತ್ತು. ಆಗ ಉಡುಪಿಯ ಯು. ಎಂ. ವೈದ್ಯ ಎನ್ನುವ ಡಾಕ್ಟರ್  ಒಂದು ಮಾತ್ರೆ ಬರೆದು ಕೊಟ್ಟಿದ್ದರು. ಅದರಿಂದ ಗುಣವಾಗಿತ್ತು. ಅವರನ್ನು ವಿಚಾರಿಸಿದರೆ ಆಗುತ್ತಿತ್ತೋ ಏನೋ” ಅಂದೆ. ಅವರು ಅದನ್ನು ಕಿವಿಯ ಮೇಲೆ ಹಾಕಿಕೊಳ್ಳಲೇ ಇಲ್ಲ ಎಂದು ಕಾಣುತ್ತದೆ. ಎಕಡಂತೂ ಗುಣವಾಗಲೇ ಇಲ್ಲ. ಕೊನೆಗೆ ಮರುದಿನ ಮತ್ತೆ ಡಾಕ್ಟರ್ ಬಂದಾಗ “ನನ್ನನ್ನು ಡಿಸ್ಚಾರ್ಜ್ ಮಾಡಿಬಿಡಿ. ನಾನು ಉಡುಪಿಗೆ ಹೋಗುತ್ತೇನೆ. ನನಗೆ ರಜೆ ಬೇರೆ ಇಲ್ಲ. ಆಫೀಸಿನಲ್ಲಿ ತುಂಬಾ ಪ್ರೊಬ್ಲೆಮ್ ಇದೆ. ಸರ್” ಎಂದು ಗೋಗರೆದೆ. ಅವರಿಗೆ ಏನನ್ನಿಸಿತೋ. “ಆಯಿತು” ಎಂದು ಅದೇ ದಿನ ಸಂಜೆ ಡಿಸ್ಚಾರ್ಜ್ ಮಾಡಿಯೂಬಿಟ್ಟರು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ