ಗುರುವಾರ, ನವೆಂಬರ್ 9, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 50

ಅವನು ತಟ್ಟನೇ ಯಕ್ಷಗಾನ ಕೇಂದ್ರಕ್ಕೆ ಹೋಗಲು ಒಪ್ಪಿದ. ಬಹುಷ್ಯ ಸೈಕಲ್ ಕಲಿಯುವಾಗ ಅವನ ಸ್ನೇಹಿತರ ಮುಂದೆ ನನ್ನಿಂದ ಅವಮಾನವಾದದ್ದು ನೆನಪಾಗಿ, ಕುಣಿತ ಕಲಿಯುವಾಗಲೂ ಪೆಟ್ಟು ತಿನ್ನುವ ಅವಮಾನದ ಸಂಗತಿ ಮನಸ್ಸಿಗೆ ಬಂದಿರಬೇಕು. ನನಗೂ ಅದರಿಂದ ಸಂತೋಷವಾಯಿತು. ಆಗ, ಅಲ್ಲ ಈಗಲೂ ಹಾಗೆಯೇ, ಸಂಜೀವರು ಯಾರೇ ಆಗಲಿ, ಮಕ್ಕಳು ಮುದುಕರು ಹೆಣ್ಣುಮಕ್ಕಳು ಎನ್ನದೇ, ಎಷ್ಟು ವಯಸ್ಸಿನವರಾಗಲಿ, ಅಲ್ಲಿಗೆ ಬಂದು ಯಕ್ಷಗಾನ ಕಲಿಯುವ ಆಸೆ ಎಂದು ಹೇಳಿದರೆ ಸಾಕು. ಯಕ್ಷಗಾನ ಕ್ಲಾಸಿನ ಬಿಡುವಿನ ಸಮಯದಲ್ಲಿ ಬರಲು ಹೇಳಿ ಉಚಿತವಾಗಿ ಕಲಿಸುತ್ತಿದ್ದರು. ಯಾರೇ ಬಂದರೂ ಬಂದವರಿಗೇ ಇದು ನಮಗೆ ಕಲಿಯಲು ಆಗುವುದಿಲ್ಲ ಅನ್ನಿಸಬೇಕೇ ಹೊರತು, ಅವರು ನಿರಾಶೆಗೊಳಿಸಿದ್ದಿಲ್ಲ. ಕಲಿಸುವಾಗಲೂ ಅಂತದ್ದೇ ಶಿಸ್ತು, ಪ್ರೀತಿ. ಅಂತೂ ಮಗನನ್ನು ಅವರ ಕೇಂದ್ರಕ್ಕೆ ಪ್ರತೀ ಶನಿವಾರ ಭಾನುವಾರ ಕರೆದುಕೊಂಡು ಹೋಗತೊಡಗಿದೆ. ನಮಗೆ ಶನಿವಾರ ಇಡೀದಿನ ಆಫೀಸ್ ಇದ್ದರೂ ಕೆಲವೊಮ್ಮೆ ಅವರು ಮಕ್ಕಳಿಗೆ ಕಲಿಸುವುದನ್ನು ನೋಡುತ್ತಾ ಅಲ್ಲಿಯೇ ಕುಳಿತು ಮೈಮರೆತು ಸಂಜೆಯವರೆಗೂ ಇರುತ್ತಿದ್ದೆ. ಅದೊಂದು ಗುರುಕುಲ ಇದ್ದಹಾಗೆ. ಬನ್ನಂಜೆ ಸಂಜೀವನವರು ತಾನು ಕಲಿತದ್ದನ್ನೆಲ್ಲ ಇನ್ನೊಬ್ಬರಿಗೆ ಧಾರೆಯೆರೆಯಲು ಸದಾ ಸಿದ್ದರಾಗಿದ್ದ ಒಬ್ಬ ಅಪರೂಪದ ಗುರುಗಳು. ನಿಗರ್ವಿ. ಅಲ್ಲಿ ಹೋಗಿ ಅವರು ಮಕ್ಕಳಿಗೆ ಯಕ್ಷಗಾನ ಕಲಿಸುವುದನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ.

ಅಂತೂ ಮಗ ಅಲ್ಲಿಯೇ ಎರಡು ಮೂರು ವರ್ಷ ಯಕ್ಷಗಾನ ಅಭ್ಯಾಸ ಮಾಡಿ ಹಲವಾರು ವೇಷಗಳನ್ನೂ ಅಲ್ಲಿಯ ಮಕ್ಕಳ ಜೊತೆಗೆ ಮಾಡಿದ. ಸಂಜೀವನವರ ನಿರ್ದೇಶನದಲ್ಲಿ ಅಭಿಮನ್ಯು ಕಾಳಗ, ಪಂಚವಟಿ ಜಟಾಯುಮೋಕ್ಷ. ಶ್ವೇತಕುಮಾರ ಚರಿತ್ರೆ ಮತ್ತು ಕೆಲವು ಪ್ರಾತ್ಯಕ್ಷಿಕೆಗಳಲ್ಲಿ ಭಾಗಿಯಾದ. ನಂತರ ಅವನು ಕಲಿಯುವ ಕುಂಜಿಬೆಟ್ಟು ಶಾಲೆಯಲ್ಲೂ ಕೃಷ್ಣಮೂರ್ತಿ ಉರಾಳರ ನಿರ್ದೇಶನದಲ್ಲಿ ಮೀನಾಕ್ಷಿಕಲ್ಯಾಣದಲ್ಲಿ ಮೀನಾಕ್ಷಿ ಬಬ್ರುವಾಹನ ಕಾಳಗದಲ್ಲಿ ಅರ್ಜುನ ಮುಂತಾದ ಪಾತ್ರಗಳನ್ನು ಮಾಡಿದ.   ಆಗ ನೀಲಾವರ ಲಕ್ಷ್ಮಿನಾರಾಯಣಯ್ಯನವರು ಅಲ್ಲಿ ಗುರುಗಳಾಗಿದ್ದರು. ಅವರು ಅವನಿಗೆ ತಾಳವನ್ನು ಕಲಿಸಿ, ಕೆಲವು ಪದ್ಯಗಳನ್ನು ಕಲಿಸಿಕೊಟ್ಟರು. “ಭಾಗವತರ ಮೊಮ್ಮಗನಲ್ಲವೇ?”ಎಂದು ಒಮ್ಮೆ “ಗಜಮುಖದವಗೆ” ಪದ್ಯವನ್ನು ಒಂದು ಪ್ರದರ್ಶನದಲ್ಲಿ  ಹೇಳಿಸಿದ್ದಾಯಿತು. ಸಂಜೀವನವರ ಜೊತೆಯಲ್ಲಿ ಡೆಲ್ಲಿಗೂ ಹೋಗಿ ಅವರ ಪ್ರದರ್ಶನದಲ್ಲಿ ಭಾಗವಹಿಸಿದ. ಅಂತೂ ಎಸ್ ಎಸ್ ಎಲ್ ಸಿ ಯವರೆಗೆ ಯಕ್ಷಗಾನದಲ್ಲಿ ಭಾಗವಹಿಸಿದವನು, ಮತ್ತೆ ಓದಿನ ಕಡೆಗೇ ಹೆಚ್ಚು ಗಮನಕೊಡಬೇಕಾಯಿತಾದ್ದರಿಂದ ಆ ಹವ್ಯಾಸ ಬಿಟ್ಟುಹೋಯಿತು. ಆದರೆ ಆ ಯಕ್ಷಗಾನದ ಅಭಿರುಚಿಯು ಹಾಗೆಯೇ ಉಳಿಯಲು ಅದರಿಂದ ಅನುಕೂಲವಾಯಿತು. ಸಂಜೀವರು ಹೇಳುವಂತೆ ಮೇಳಕ್ಕೆ ಸೇರಲು ಮಾತ್ರ ಯಕ್ಷಗಾನ ಕಲಿಯಬೇಕೆಂದೇನಿಲ್ಲ. ಇಂತಹ ಒಂದು ವಿದ್ಯೆಯನ್ನು ಕಲಿತವರು, ಮುಂದೆ ಕಲಾವಿದರಾಗದಿದ್ದರೂ, ಒಬ್ಬ ಒಂದು ಪ್ರಬುದ್ಧ ಯಕ್ಷಗಾನದ, ಒಳ್ಳೆಯ ಪ್ರೇಕ್ಷಕನಾಗಿ ಬಾಳಬಹುದು ಎನ್ನುವಂತೆ ಆಯಿತು.

ಮುಲ್ಕಿಯಲ್ಲಿ ಮೊರಾರ್ಜಿ ದೇಸಾಯಿ ರೆಸಿಡೆನ್ಸಿ ಶಾಲೆಯೊಂದಿತ್ತು. ಅಲ್ಲಿಯ ವಾರ್ಡನ್ ಒಬ್ಬರು ಕುಂದಾಪುರ ಮೂಲದವರಿದ್ದರು. ಒಮ್ಮೆ ಅವರ ಶಾಲೆಯ ಕರೆಂಟ್ ಬಿಲ್ಲಿನ ಬಗ್ಗೆ ಏನೋ ಸಮಸ್ಯೆಯಾಗಿ ನಮ್ಮ ಆಫೀಸಿಗೆ ಬಂದವರಿಗೆ ನಾನು ಉಪ್ಪೂರರ ಮಗ ಎಂದು ಗೊತ್ತಾಯಿತು. ಆಗಲೇ ಅವರಿಗೆ ಶಾಲೆಯಲ್ಲಿ ಉಳಿದುಕೊಂಡ ಮಕ್ಕಳಿಗೆ ನನ್ನಿಂದ ಯಕ್ಷಗಾನ ಕಲಿಸಿ ಒಂದು ಆಟ ಮಾಡಿಸಬೇಕೆಂದು ಮನಸ್ಸಾಯಿತು. ಬಂದು ಹೇಳಿದಾಗ ನಾನು ಒಪ್ಪಿಕೊಂಡೆ. ಪ್ರತೀದಿನ ನಮ್ಮ ಆಫೀಸ್ ಕೆಲಸ ಮುಗಿದ ಕೂಡಲೆ, ಸಂಜೆ ಅಲ್ಲಿಗೆ ಹೋಗಿ ಯಕ್ಷಗಾನ ತಾಳ ಹೇಳಿ ಕೊಟ್ಟು, ಆ ತಾಳದ ಕುಣಿತ ಮುಕ್ತಾಯಗಳನ್ನು ಕಲಿಸತೊಡಗಿದೆ. ಆ ಮಕ್ಕಳೂ ಬಹಳ ಉಮೇದಿನಿಂದ ಕಲಿತರು. ಸುಮಾರು ಮೂರು ನಾಲ್ಕು ತಿಂಗಳು ಹಾಗೆ ಕಲಿಸಿದೆ. ಆಮೇಲೆ ಎರಡು ಗಂಟೆಯ “ರುಕ್ಮಿಣಿ ಕಲ್ಯಾಣ” ಎಂಬ ಪ್ರಸಂಗದ ನನ್ನದೇ ಪ್ಲೋಟ್ ಆರಿಸಿಕೊಂಡು ಅದರ ಕುಣಿತ ಮಾತು ಕಲಿಸಿದೆ. ಬೈಲೂರು ಸುಬ್ರಮಣ್ಯ ಐತಾಳರನ್ನು ಭಾಗವತಿಕೆಗೆ, ಹಾಗೂ ಸುರೇಶಣ್ಣಯ್ಯನನ್ನು ಮದ್ದಲೆವಾದನಕ್ಕೆ ಕರೆಸಿ ಎರಡುದಿನ ಬೆಳಿಗ್ಗೆ ಮಧ್ಯಾಹ್ನ ಅಂತ ಬಿಡುವಿಲ್ಲದೇ ಟ್ರಯಲ್ ಮಾಡಿಸಿ  ಆಟವನ್ನು ಮಾಡಿದೆವು. ಆ ದಿನ ಒಂದು ಸಮಾರಂಭವನ್ನು ಮಾಡಿ ಚಿಕ್ಕ ಸನ್ಮಾನವನ್ನೂ ಮಾಡಿದರು. ಅವರಿಗೆ ತುಂಬಾ ಖುಷಿಯಾಗಿ ಆ ವಾರ್ಡನ್ ಮತ್ತು ಕೆಲವು ಮಕ್ಕಳು ಮುಂದಿನ ವರ್ಷವೂ ಬಂದು ಮಕ್ಕಳಿಗೆ ಮತ್ತೆ ಕಲಿಸಿ ಆಟ ಮಾಡಿಸಲು ಕೇಳಿಕೊಂಡರು. ಆದರೆ ನಾನು ಆಗಲೇ ನಮ್ಮ ಡಿಪಾರ್ಟ್ ಮೆಂಟ್ ಪರೀಕ್ಷೆಗೆ ಕುಳಿತುಕೊಳ್ಳಲು ತೀರ್ಮಾನಿಸಿ, ಓದಿಕೊಳ್ಳಲು ಸಮಯ ಬೇಕಾದ್ದರಿಂದ ಅವರ ಆಹ್ವಾನವನ್ನು ನಯವಾಗಿ “ಮತ್ತೊಮ್ಮೆ ನೋಡುವ” ಎಂದು ಮುಂದೂಡಿದೆ.

ಮುಲ್ಕಿಯಲ್ಲಿ ಸುಮಾರು ೧೯೯೮ ರಿಂದ ೨೦೦೩ ರ ವರೆಗೆ ಕೆಲಸ ಮಾಡಿದ ನನಗೆ, ಮತ್ತೆ ಉಡುಪಿಗೆ ಬರುವ ಮನಸ್ಸಾಯಿತು. ಒಂದು ಕೋರಿಕೆ ಅರ್ಜಿಯನ್ನು ಬರೆದುಕೊಂಡು ಆಗ ಅಧೀಕ್ಷಕ ಇಂಜಿನಿಯರ್ ಆಗಿದ್ದ ಭಾಸ್ಕರ ರಾಯರು ಅನ್ನುವವರಿಗೆ ಕೊಟ್ಟು, “ನನಗೆ ಉಡುಪಿಗೆ ವರ್ಗ ಮಾಡಿಸಿಕೊಡಿ” ಎಂದು ಕೇಳಿಕೊಂಡೆ. ಅವರು “ನಾನೂ ಊರುಬಿಟ್ಟು ಬಂದವ ಎಲ್ಲರೂ ಅವರವರ ಊರಿಗೆ ಹೋಗಲು ಅರ್ಜಿ ಹಾಕಿದರೆ ಪರವೂರಿನಲ್ಲಿ ಕೆಲಸ ಮಾಡುವವರು ಯಾರು?. ಮುಲ್ಕಿಗೆ ಬೇರೆ ಯಾರಾದರೂ ಬರುವವರಿದ್ದರೆ ನೋಡಿ. ಆಮೇಲೆ ನೋಡುವ” ಎಂದು ಬಿಟ್ಟರು. ನನಗೆ ನಿರಾಶೆಯಾದರೂ ಏನಾದರೂ ಮಾಡಲೇಬೇಕು ಎಂಬ ಹಠ ಬಂದಿತು. ಅಷ್ಟರವರೆಗೆ ಇಲಾಖಾಪರೀಕ್ಷೆಯನ್ನು ಪಾಸು ಮಾಡುವ ವಿಷಯದಲ್ಲಿ ಸ್ವಲ್ಪ ಅನಾಸಕ್ತಿ ತೋರಿದ್ದ ನನಗೆ ಅದರಲ್ಲಿ ಪಾಸು ಮಾಡಿಕೊಂಡು ಪ್ರೊಮೋಶನ್ ಪಡೆದುಕೊಂಡರೆ ಅಲ್ಲಿಂದ ಬಿಡುಗಡೆ ಪಡೆಯಬಹುದು ಅನ್ನಿಸಿ ಇಲಾಖಾ ಪರೀಕ್ಷೆಗೆ ಕಟ್ಟಿ ರಜೆಯನ್ನು ಹಾಕಿ ಹಠಹಿಡಿದು ಓದಿದೆ. ಎರಡೇ ಸಲದಲ್ಲಿ ಹನ್ನೊಂದು ಸಬ್ಜಕ್ಟಿನಲ್ಲಿ ಪಾಸೂ ಆಯಿತು. ಮತ್ತೆ ಪ್ರಮೋಶನ್ ಬಂದು ಉಡುಪಿಗೆ ವರ್ಗವಾಗಿ ಬಂದೆ.

ಆಫೀಸರ್ ಆಗಿ ಉಡುಪಿಗೆ ಬಂದು ವರದಿ ಮಾಡಿಕೊಂಡಾಗ ನನಗೆ ಮೊದಲೇ ಗೊತ್ತಿದ್ದ ಜಯಸೂರ್ಯ ಎನ್ನುವ ಒಬ್ಬ ದಕ್ಷ ಅಧಿಕಾರಿಗಳ ಹತ್ತಿರ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತು. ಮೊದಮೊದಲು ತುಂಬಾ ಬಿಗುವಾಗಿ ಇದ್ದಂತೆ ಕಂಡರೂ, ಅವರೂ ಯಕ್ಷಗಾನ ಪ್ರೇಮಿಗಳಾಗಿದ್ದು, ಕೊನೆಗೆ ”ದಿನೇಶ್, ಇಲ್ಲಿಯೇ ಒಂದು ತಾಳಮದ್ದಲೆ ಇದೆ. ಬರುತ್ತೀರಾ? ಸ್ವಲ್ಪ ಹೊತ್ತು ನೋಡಿ ಬರುವ” ಎಂದು ಕರೆದುಕೊಂಡು ಹೋಗುವವರೆಗೂ ಸಲಿಗೆ ಬೆಳೆಯಿತು. ಉಡುಪಿಗೆ ಬಂದಾಗ ನಾನು ಹಿಂದೆ ಕೆಲಸ ಮಾಡಿದ ಕಛೇರಿಯಲ್ಲೇ ನನ್ನ ಸೂಪರ್ ವೈಸರ್ ಆಗಿದ್ದ, ಲಕ್ಷ್ಮ ನಾಯ್ಕರು ಎನ್ನುವವರಿಗೆ ನಾನು ಮೇಲಧಿಕಾರಿಯಾಗಿ ಬಂದದ್ದು. ಅವರಿಗೂ ಸ್ವಲ್ಪದಿನ ಇರುಸು ಮುರುಸಾದರೂ ಸ್ವಲ್ಪ ದಿನದಲ್ಲಿಯೇ ಹೊಂದಾಣಿಕೆಯಾಗಿ ಸರಿಯಾಯಿತು.

ಆಗ ಮ್ಯಾನುವಲ್ ಕಡತಗಳು ಹೋಗಿ ಕಂಪ್ಯೂಟರೈಸೇಶನ್ ಆಗುತ್ತಿದ್ದ ಕಾಲ. ತುಂಬಾ ಸಮಸ್ಯೆ ಇತ್ತು. ತಪ್ಪು ತಪ್ಪು ಬಿಲ್ಲು ಬಳಕೆದಾರರಿಗೆ ಹೋಗುತ್ತಿತ್ತು. ಮೊದಲೇ ಕೆಇಬಿ ಅಂದರೆ ಕರೆಂಟ್ ಆಗಾಗ ಹೋಗುತ್ತದೆ ಆದರೆ ಬಿಲ್ಲು ಸರಿಯಾದ ಸಮಯಕ್ಕೆ ಬರುತ್ತದೋ ಇಲ್ಲವೋ, ಬಿಲ್ಲು ಕಟ್ಟದೇ ಇದ್ದರೆ ಕರೆಂಟ್ ಕಟ್ ಮಾಡಲು ತಕ್ಷಣ ಬರುತ್ತಾರೆ ಎಂಬ ಅಲರ್ಜಿಯಿದ್ದ ಜನರು, ಕೆಲವು ಸಲ ಜಗಳ ಮಾಡಲಿಕ್ಕೆಂದೇ ಆಫೀಸಿಗೆ ಬರುತ್ತಿದ್ದರು. ಎಲ್ಲ ಕೇಳಿ ಬಿಲ್ಲು ಸರಿ ಮಾಡಿ ಹೋಗುವಾಗಲೂ “ಅಂತೂ ನೀವು ಹೇಳಿದ್ದನ್ನು ನಾವು ಕೇಳಿಕೊಂಡು ಅದನ್ನೇ ಸರಿ ಎಂದು ನಂಬಬೇಕು” ಎಂದು ಬೈದೂ ಹೋದದ್ದಿದೆ.

ಒಮ್ಮೆ ನಾನು ಆಫೀಸಿಗೆ ಹೋಗಿ ಕುಳಿತಿದ್ದೆನಷ್ಟೆ. ಒಬ್ಬರು ಬಿಲ್ಲು ತಪ್ಪಾದ್ದರಿಂದ ಸಿಟ್ಟನ್ನು ತಡೆದುಕೊಳ್ಳಲು ಸಾಧ್ಯವಾಗದೇ ಬುಸುಗುಟ್ಟುತ್ತಾ “ಇವತ್ತು ಎರಡರಲ್ಲಿ ಒಂದು ತೀರ್ಮಾನವಾಗಲೇ ಬೇಕು” ಎಂದು  ನಿರ್ಣಯಿಸಿದವರಂತೆ, ಅವರು ಹಿಂದೆ ಕಟ್ಟಿದ ಎಲ್ಲ ರಸೀದಿಗಳ, ಬಿಲ್ಲುಗಳ ಫೈಲಿನೊಂದಿಗೆ ಯುದ್ಧಕ್ಕೆ ಸನ್ನದ್ಧರಾದಂತೆ ಬಿರುಸಿನಿಂದ ಬಂದು ನನ್ನ ಎದುರು ಇದ್ದ ಕುರ್ಚಿಯಲ್ಲಿ ಕುಳಿತರು. ನಾನು ತುಂಬಾ ಸಾವಧಾನದಿಂದ “ಏನು?” ಎಂದು ಮುಗುಳ್ನಗುತ್ತಾ ಕೇಳಿದೆ. ಅವರು ಒಮ್ಮೆಲೇ ಜೋರಿನಿಂದ ಶುರುಮಾಡಿದರು.

ನಾನು ಅವರು ಹೇಳಿದ್ದೆಲ್ಲವನ್ನೂ ಕೇಳಿದೆ ಮತ್ತು ಅಷ್ಟೇ ತಾಳ್ಮೆಯಿಂದ ಬಿಲ್ಲನ್ನು ನೋಡಿ ನಮ್ಮ ಕಂಪ್ಯೂಟರ್ ನಲ್ಲಿ ಪರಿಶೀಲನೆ ಮಾಡಿ ಅವರಿಗೆ ಬಿಲ್ಲಿನ ವಿವರವನ್ನು ಮನದಟ್ಟಾಗುವಂತೆ ಹೇಳಿದೆ. ತಪ್ಪು ಇರುವುದನ್ನು ತಿದ್ದಿ ಸದ್ಯದ ಪರಿಸ್ಥಿತಿಯನ್ನು ಅವರಿಗೆ ಹೇಳಿದಾಗ ಅವರಿಗೆ ಸಮಾಧಾನವಾಯಿತು. ಅಷ್ಟರಲ್ಲಿ ಅವರು, ಸಿಟ್ಟು ಇಳಿದು, ಹೋಗುವಾಗ “ನಾನು ಇಷ್ಟು ಚೆನ್ನಾಗಿ ವಿವರಿಸಿ ಉತ್ತರ ಕೊಡುವವರು ಇಲ್ಲಿ ಇರುತ್ತಾರೆ ಎಂದು ನಂಬಿಕೊಂಡು ಬರಲೇ ಇಲ್ಲ ಮಾರಾಯ್ರೆ. ಬಿಲ್ಲು ಹೇಗೇ ಇರಲಿ. ನೀವು ಇಷ್ಟು ತಾಳ್ಮೆಯಿಂದ ಮಾತನಾಡಿ, ನನ್ನನ್ನು ನೋಡಿಕೊಂಡ ರೀತಿ ತುಂಬಾ ಖುಷಿಯಾಯಿತು.” ಎಂದು ಒಂದು ಪ್ರಶಸ್ತಿಯನ್ನೂ ಕೊಟ್ಟು ನನ್ನ ಪರಿಚಯವನ್ನೂ ಕೇಳಿ ತಿಳಿದುಕೊಂಡು ಹೊರಟುಹೋದರು.

ಒಮ್ಮೆ ಹಾಗೆ ಬಿಲ್ಲನ್ನು ಸರಿಪಡಿಸಿಕೊಂಡು ಹೋಗಲು ಬಂದ ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಆಫೀಸರ್ ಒಬ್ಬರು ಹೀಗೆ ಬಿಲ್ಲು ಸರಿಪಡಿಸಿಕೊಂಡು, ಮಾತಿನ ಮಧ್ಯ ನನ್ನ ಪರಿಚಯ ಮಾಡಿಕೊಂಡರು. ನಾನು ಉಪ್ಪೂರರ ಮಗ ಎಂಬುದನ್ನು ಕೇಳಿದ ಅವರು, ನನ್ನ ಎದುರು ಕುರ್ಚಿಯಲ್ಲಿ ಕುಳಿತಿದ್ದವರು ಪಕ್ಕನೇ ಎದ್ದು “ಹೌದಾ? ನೀವು ಉಪ್ಪೂರರ ಮಗನಾ?” ಎಂದು ಒಂದು ಅದ್ಭುತವನ್ನೇ ನೋಡಿದಂತೆ ಮಾಡಿ, ಒಮ್ಮೆಲೇ ನನ್ನ ಟೇಬಲ್ಲನ್ನು ಸುತ್ತುಹಾಕಿ ಹತ್ತಿರ ಬಂದೇಬಿಟ್ಟರು. ನಾನು ಏನಾಗುತ್ತಿದೆ ಎಂದು ತಿಳಿಯದೇ ಎದ್ದು ನಿಲ್ಲುವುದರ ಒಳಗೆ, ನನ್ನನ್ನು ಗಟ್ಟಿಯಾಗಿ ಆಲಿಂಗಿಸಿಕೊಂಡು, “ನಾನು ಭಾಗವತ ಉಪ್ಪೂರರ ದೊಡ್ಡ ಅಭಿಮಾನಿ. ನನಗೆ ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು” ಎಂದು ನನ್ನನ್ನು ರೋಮಾಂಚನಗೊಳಿಸಿದ್ದರು. ಆಮೇಲೂ ಅವರು ಆಫೀಸಿಗೆ ಬಂದರೆ ನನ್ನ ಎದುರು ಕುಳಿತು ನಾಲ್ಕು ಮಾತಾಡಿ, ಒಂದಷ್ಟು ಅಪ್ಪಯ್ಯನ  ಸುದ್ಧಿಯನ್ನು,  ಸಾಲಿಗ್ರಾಮ ಮೇಳದಲ್ಲಿ ಅಪ್ಪಯ್ಯ, ತಿಮ್ಮಪ್ಪ ಮದ್ಲೆಗಾರ ಮತ್ತು ಕೆರೆಮನೆ ಕಲಾವಿದರು ಇರುವಾಗ ಅವರು ನೋಡಿದ ಆಟದ ಬಗ್ಗೆ, ಆಗಿನ ಭೀಷ್ಮ ಭೀಷ್ಮ ಭೀಷ್ಮ, ಚಂದ್ರಹಾಸ - ಬೇಡರ ಕಣ್ಣಪ್ಪ ಹಾಗೂ ಪಟ್ಟಾಭಿಷೇಕ - ಗದಾಯುದ್ಧ ಆಟದ ಸುದ್ಧಿ ಹೇಳಿ, ಕೆರೆಮನೆ ಗಜಾನನ ಹೆಗಡೆಯವರು, ಶಿರಿಯಾರ ಮಂಜು, ಹೆರಂಜಾಲು ವೆಂಕಟರಮಣ, ವೀರಭದ್ರ ನಾಯ್ಕ, ದೊಡ್ಡಸಾಮಗರ ಬಗ್ಗೆ ಹೇಳುತ್ತಿದ್ದರು. ಕುಂದಾಪುರದಲ್ಲಿ ಸಾಲಿಗ್ರಾಮ ಮೇಳಕ್ಕೂ, ಅಮೃತೇಶ್ವರಿ ಮೇಳಕ್ಕೂ ಆದ ಜೋಡಾಟ, ಅದರಲ್ಲಿ ಅಪ್ಪಯ್ಯನ ಸ್ವರ ಬಿದ್ದು ಹೋಗಿ ಮದ್ದಲೆ ಬಾರಿಸಿದ್ದು, ತಿಮ್ಮಪ್ಪ ಮದ್ಲೆಗಾರ ಭಾಗವತಿಕೆ ಮಾಡಿ ರೈಸಿದ್ದು ಅವರ ಸ್ವರ.... ಹೀಗೆ ಒಂದಷ್ಟು ಹೊತ್ತು ಮಾತಾಡಿ ತೃಪ್ತರಾಗಿ  ಹೋಗುತ್ತಿದ್ದರು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ