ಸೋಮವಾರ, ನವೆಂಬರ್ 13, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 54

ಆಸ್ಪತ್ರೆಯಿಂದ ನಾನು ಕೋಟೇಶ್ವರದಲ್ಲಿರುವ ಶ್ರೀಧರಣ್ಣಯ್ಯನ ಮನೆಗೆ ಹೋದೆ. ಅಲ್ಲಿಂದಲೇ ಡಾ. ಯು. ಎಂ. ವೈದ್ಯರಿಗೆ ಫೋನ್ ಮಾಡಿ “ನನಗೆ ಹೀಗೆ ಹೀಗೆ ಆಗಿದೆ ಮರ್ರೆ. ಎಕಡು ಶುರುವಾಗಿ  ನಿಲ್ಲಲೇ ಇಲ್ಲ. ನೀವು ಒಂದು ವರ್ಷದ ಹಿಂದೆ ನನಗೆ ಒಂದು ಮಾತ್ರೆ ಬರೆದು ಕೊಟ್ಟಿದ್ದೀರಿ. ಅದರ ಹೆಸರು ಹೇಳಿದರೆ ನಾನು ಇಲ್ಲಿ ತೆಗೆದು ಕೊಂಡು ಬದುಕುತ್ತೇನೆ” ಎಂದೆ. ಅವರು ನನ್ನ ಅಮ್ಮ ಆಸ್ಪತ್ರೆಯಲ್ಲಿದ್ದಾಗ, ಅವಳಿಗೆ ಮದ್ದು ಕೊಟ್ಟು ಗುಣ ಮಾಡಿದವರು. ಒಳ್ಳೆಯ ಡಾಕ್ಟರು. ಚೆನ್ನಾಗಿಯೇ ಪರಿಚಯವಿತ್ತು. ಅವರು, “ಎದೆ ಮತ್ತು ಹೊಟ್ಟೆಯ ಮಧ್ಯದ ವಪೆ ಎಂಬ ಭಾಗ ಸರಿಯಾಗಿ ಕೆಲಸ ಮಾಡದಿದ್ದಾಗ ಈ ಎಕಡು ಕಾಯಿಲೆ ಬರುತ್ತದೆ. ಎಂದು, ಫೋನಿನಲ್ಲಿಯೇ ವಿವರಿಸಿ, “ಪೆರಿನಾರ್ಮ್” ಎಂಬ ಮಾತ್ರೆಯನ್ನು ತೆಗೆದುಕೊಳ್ಳಿ” ಎಂದು ಅದರ ಸ್ಪೆಲ್ಲಿಂಗನ್ನೂ ಹೇಳಿ, ಬರೆಸಿ ಅದನ್ನು ತೆಗೆದುಕೊಳ್ಳಲು ಹೇಳಿದರು. ಅದನ್ನು ತರಿಸಿ ಆ ರಾತ್ರಿಯೇ ತೆಗೆದುಕೊಂಡೆ. ರಾತ್ರಿ ಚೆನ್ನಾಗಿ ನಿದ್ದೆ ಬಂದು, ಬೆಳಿಗ್ಗೆ ಆಗುವುದರೊಳಗೆ ಆವರೆಗೆ ನನ್ನನ್ನು ಬಿಡದೇ ಮೂರುವರೆ ದಿನ ಕಾಡಿದ ಶನಿ, ಎಂಬ ಎಕಡು ನನ್ನನ್ನು ಬಿಟ್ಟು ತೊಲಗಿಹೋಯಿತು.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಅಂಬರೀಶ ಭಟ್ ಎನ್ನುವವನೂ ಅವನಲ್ಲಿರುವ ಕಾಳಿಂಗ ನಾವಡರ ಹಾಗೂ ಅಪ್ಪಯ್ಯನ ಕೆಲವು ಸಂಗ್ರಹಗಳನ್ನು ಕೊಟ್ಟು, ನನ್ನಲ್ಲಿರುವುದನ್ನು ಪ್ರತಿಮಾಡಿಕೊಂಡು ಹೋಗಿದ್ದ. ಮತ್ತೊಬ್ಬ ಸುದೇಶ ಎನ್ನುವ ಹುಡುಗ, ಒಂದು ದಿನ ನಮ್ಮ ಮನೆಗೆ ಬಂದು, ನಾವಡರ ಮತ್ತು ಅಪ್ಪಯ್ಯನ ಪದ್ಯಗಳನ್ನು, ಫೋಟೋಗಳನ್ನು ನನಗೆ ಕೊಟ್ಟು ಅವನದನ್ನು ನನಗೆ ಕೊಟ್ಟ. ಮತ್ತೆಯೂ ಅವನು ಎಲ್ಲೆಲ್ಲಾ ಹೋಗಿ ನಾವಡರ ಕ್ಯಾಸೆಟ್ ಗಳನ್ನು ಹುಡುಕಿ ತಂದು, ನನಗೆ ಕೊಟ್ಟು ಎಂಪಿತ್ರಿ ಮಾಡಿಕೊಡಲು ಹೇಳುತ್ತಿದ್ದ. ನಾನು ಅದು ಯಾವುದೇ ಸ್ಥಿತಿಯಲ್ಲಿ ಇದ್ದರೂ, ಅದನ್ನು ಸರಿಪಡಿಸಿ, ಫಂಗಸ್ ತೆಗೆದು, ಹಾಳಾದ ಭಾಗವನ್ನು ತುಂಡರಿಸಿ, ಮತ್ತೆ ಮುಂದಿನ ಭಾಗಕ್ಕೆ ಅಂಟಿಸಿ, ರೆಕಾರ್ಡ್ ಮಾಡಿ ಕೊಡುತ್ತಿದ್ದೆ. ಅವನೂ ಅಲ್ಲಿ ಇಲ್ಲಿ ಅಂತ ನಾವಡರ ಹಲವು ಆಡಿಯೋ ಸಂಗ್ರಹವನ್ನೂ ಮಾಡಿ ತಂದುಕೊಡುತ್ತಿದ್ದ. ನಮ್ಮ ಆಫೀಸಿನ ಗೆಳೆಯ ವಸಂತ ಎನ್ನುವವರ ಅಣ್ಣ, ಹೆಗ್ಗರಣೆಯ ಕೇಶವ ನಾಯಕ್ ಎನ್ನುವವರೂ, ಅವರ ಹೆಚ್ಚಿನ ಹಳೆಯ ಸಂಗ್ರಹಗಳನ್ನು ನನಗೆ ಕೊಟ್ಟು ನನ್ನಲ್ಲಿರುವುದನ್ನು ತೆಗೆದುಕೊಂಡು ಹೋಗಿದ್ದರು.

ಸುಮಾರು ೨೦೧೧ರ ಹೊತ್ತಿಗೆ ನನಗೆ ಮಂಗಳೂರಿನಿಂದ ಕುಂದಾಪುರದ ಆಫೀಸಿಗೆ ವರ್ಗವಾಯಿತು. ಆಗಲೇ ಶ್ರೀಧರಣ್ಣನ ಸ್ನೇಹಿತರಾದ ಶಂಕರ ಜೋಯಿಸರ ಅಣ್ಣನ ಮಗ, ಕೊಲ್ಲೂರು ಸುದರ್ಶನ ಜೋಯಿಸರು  ಆಗ ಕುಂದಾಪುರದ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ವಿಚಾರಿಸಿಕೊಂಡು ಬಂದರು. ಅವರು ಶ್ರೀಧರ ಅಣ್ಣಯ್ಯನಿಂದ, ಅವನು ಡಾಕ್ಟರೇಟ್ ಪಡೆಯಲು  ಮಾಡುವ ಸಂಶೋಧನಾ ಗ್ರಂಥದ ಬಗ್ಗೆ ಬರೆಯುವಾಗ ಸಂಗ್ರಹಿಸಿದ ಉಡುಪಿಕೇಂದ್ರದಲ್ಲಿ 1974 ರಲ್ಲಿ, ಶಿವರಾಮ ಕಾರಂತರು ದಾಖಲಿಸಿದ ಯಕ್ಷಗಾನ ರಾಗಗಳ ದಾಖಲೀಕರಣದ ಸುಮಾರು ಹದಿನೆಂಟು ಕ್ಯಾಸೆಟ್ ಗಳನ್ನು ಸಿ ಡಿ ಮಾಡಿಸಿ, ವಾಪಾಸು ತಲುಪಿಸಲು, ನನಗೆ ಕೊಡುವುದಕ್ಕಾಗಿ ಬಂದಿದ್ದರು. ಆಗ ಪರಿಚಯವಾದ ಜೋಯಿಸರು ಮತ್ತೆ ನನ್ನ ಜೊತೆಗೆ ಹಳೆಯ ಸಂಗ್ರಹಗಳನ್ನು ಪತ್ತೆಹಚ್ಚುವಲ್ಲಿ ಜೊತೆಯಾದರು.

 ಆಗ ಅಪ್ಪಯ್ಯನ ಆಡಿಯೋ ಪೋಟೋಗಳ ಜೊತೆಗೆ, ಕಾಳಿಂಗ ನಾವಡರ, ನೆಬ್ಬೂರ್ ರ ಹಾಡುಗಳು, ಕೆರೆಮನೆ ಕಲಾವಿದರ, ಶಂಭು ಹೆಗಡೆ, ಮಹಾಬಲ ಹೆಗಡೆಯವರ ಆಟದ ವಿಡಿಯೋ ಆಡಿಯೋ ಸಂಗ್ರಹಕ್ಕೂ ತೊಡಗಿದೆವು. ಎಲ್ಲಿ ಯಾರಾದರೂ ಹಳೆಯ ಯಕ್ಷಗಾನ ಸಂಗ್ರಹ ಇದೆ ಎಂದು ಗಾಳಿ ಸುದ್ದಿ ಸಿಕ್ಕರೂ ಸಾಕು. ಅವರ ಫೋನ್ ನಂಬರ್ ಹುಡುಕಿ ಅಥವ ಅವರ ಮನೆಗೇ ಹೋಗಿ ಅಲ್ಲಿದ್ದ ದಾಖಲೆಗಳನ್ನು ಅವರನ್ನು ಕಾಡಿ ಬೇಡಿ ಪಡೆದುಕೊಂಡು ಬರಲು ಶುರುಮಾಡಿದೆವು.

 ನಮ್ಮ ಜೋಯಿಸರು ಹೀಗೆ ಹಳೆಯ ಸಂಗ್ರಹದ ಮೂಲ ಹುಡುಕುತ್ತಿದ್ದಾಗ ಉತ್ತರಕನ್ನಡ ಜಿಲ್ಲೆಯಲ್ಲಿಯ ಬಾಳೆಹದ್ದ ತಿಮ್ಮಪ್ಪ ಭಾಗವತರ ನಂಬರ್ ಸಿಕ್ಕಿತು. ಅವರಲ್ಲಿ ವಿಚಾರಿಸಿದಾಗ, ಗಡಿಗೆ ಹೊಳೆ ಸುಬ್ರಾಯಭಟ್ಟರಲ್ಲಿ ಶೇಣಿಯವರ ತುಂಬಾ ಸಂಗ್ರಹ ಇದೆ. ಅವುಗಳಲ್ಲಿ ಜೊತೆಗೆ ಅಪ್ಪಯ್ಯನದ್ದೂ ಇರಬಹುದು ಎಂದು ಗೊತ್ತಾಯಿತು. ಸರಿ ನಾನು ತಡಮಾಡಲಿಲ್ಲ. ಒಂದು ಬೆಳಿಗ್ಗೆ ಮೈಸೂರಿನಲ್ಲಿ ಓದುತ್ತಿದ್ದ ಮಗ, ಊರಿಗೆ ಬಂದಿದ್ದಾಗ, ಅವನ ಲ್ಯಾಪ್ ಟಾಪ್ ನೊಂದಿಗೆ ಅವನನ್ನು, ನನ್ನ ಹೆಂಡತಿಯನ್ನು ಹೊರಡಿಸಿ ಬೆಳಿಗ್ಗೆ ಆರು ಘಂಟೆಗೆ ಕಾರಿನಲ್ಲಿ ಹೊರಟೇಬಿಟ್ಟೆ. ಸತ್ಯ ಹೇಳುವುದಾದರೆ ನಿಜವಾಗಿ ಸಂಗ್ರಹ ಇದ್ದದ್ದು ಯಾರ ಬಳಿಯಲ್ಲಿ ಎಂದು ನನಗೆ ಗೊತ್ತಿರಲಿಲ್ಲ. ಜೋಯಿಸರು ಕೊಟ್ಟ ಒಂದೆರಡು ಫೋನ್ ನಂಬರ್ ಮಾತ್ರ ಇತ್ತು. ಶಿರಸಿಯವರೆಗೆ ಹೋದಾಗಲೇ ಮಧ್ಯಾಹ್ನವಾಗುತ್ತಾ ಬಂದಿತ್ತು. ಒಂದು ನಂಬರಿಗೆ ಫೋನ್ ಮಾಡಿದೆ. ಅದು ಬಾಳೆಹದ್ದ ತಿಮ್ಮಪ್ಪ ಹೆಗಡೆಯವರದ್ದು. ಫೋನ್ ನಲ್ಲಿ ಸಿಕ್ಕಿದ ಅವರು ನನ್ನ ಪರಿಚಯವಾಗುತ್ತಲೇ ತುಂಬಾ ಖುಷಿಯಾಗಿ ನಮ್ಮ ಮನೆಗೆ ಬನ್ನಿ ಅಂತ ಕರೆದರು.

ನಾವು ಅವರ ಮನೆಯ ಹತ್ತಿರ ಹತ್ತಿರ ಹೋಗುತ್ತಿದ್ದಂತೆಯೇ ತಿಮ್ಮಪ್ಪ ಭಾಗವತರು ರಸ್ತೆಯ ತನಕ ಬಂದು ನಮ್ಮನ್ನು ಸ್ವಾಗತಿಸಿದರು. ಮನೆಗೆ ಒಳಗೆ ಕಾಲಿಡುತ್ತಿದ್ದಂತೆಯೇ ಅವರ ತಂದೆಯವರಾದ ಕೃಷ್ಣ ಭಾಗವತರು ಹತ್ತಿರ ಬಂದು, ನನ್ನನ್ನು ಆಲಿಂಗಿಸಿಕೊಂಡು “ಉಪ್ಪೂರರನ್ನೇ ನೋಡಿದಷ್ಟು ಖುಷಿಯಾಯಿತು” ಎಂದು ಕಣ್ಣನ್ನು ತೇವಗೊಳಿಸಿಕೊಂಡರು. ನಮ್ಮನ್ನು ಕರೆದು ಉಪಚಾರ ಮಾಡಿದ ಅವರು “ ಇಲ್ಲಿ ಹತ್ತಿರದಲ್ಲಿ  ಎಲ್ಲಿ ಆಟ ಇದ್ದರೂ ನಾನು ಮರುದಿನ ಬೆಳಿಗ್ಗೆ ನಸುಕಿನಲ್ಲಿಯೇ ಆಟದ ಗರದ ಜನರೇಟರ್ ಬಳಿ ಹೋಗಿ ನಿಂತು ಅಲ್ಲಿಗೆ ಉಪ್ಪೂರರು ಮುಖ ತೊಳೆಯುವುದಕ್ಕಾಗಿ ಬರುವುದನ್ನೇ ಕಾಯುತ್ತಿದ್ದು, ಮನೆಗೆ ಕರೆತಂದು ಆತಿಥ್ಯ ಮಾಡುತ್ತಿದ್ದೆ. ಅವರು ನಮ್ಮ ಮನೆಯಲ್ಲಿ ಇದ್ದರೆ ನಮಗೆ ಅದೇನೋ ಸಂಭ್ರಮವಾಗುತ್ತಿತ್ತು ಎಂದು ಹಳೆಯ ಕೆಲವು ನೆನಪುಗಳನ್ನು ಹೇಳಿಕೊಂಡರು.  ಬಂದ ನಮಗೆ ಕಾಲು ತೊಳೆಯಲು ಹೇಳಿ ಊಟಕ್ಕೆ ಆಗಿದೆ ಬನ್ನಿ ಎಂದು ಉಪಚಾರ ಮಾಡಿದರು. ಊಟವನ್ನು ಮಾಡಿದೆವು. ತಿಮ್ಮಪ್ಪಭಾಗವತರು ಅವರ ಮಗಳೊಬ್ಬಳಿಗೆ ಸಂಗೀತ ಕಲಿಸಿದ್ದೇವೆ ಎಂದು ತಿಳಿಸಿ, ಅವಳಿಂದ ಅಲ್ಲಿಯೇ ಒಂದು ಹಾಡನ್ನೂ ಹಾಡಿ ಕೇಳಿಸಿದರು.

ನಂತರ ನಾನು ಬಂದ ವಿಷಯವನ್ನು ಪ್ರಾಸ್ತಾಪಿಸಿದೆ. ಆದರೆ ಅವರಲ್ಲಿ ಅಂತಹಾ ಯಾವುದೇ ಯಕ್ಷಗಾನದ ಸಂಗ್ರಹಗಳು ಇರಲಿಲ್ಲ. ಅವರ ಅಪ್ಪಯ್ಯನದ್ದೇ ಒಂದೆರಡು ಕ್ಯಾಸೆಟ್ಗಳನ್ನು ಕೊಟ್ಟರು. ಗಡಿಗೆಹೊಳೆ ಸುಬ್ರಾಯ ಭಟ್ಟರು ಎಂಬವರಲ್ಲಿ ಇದೆ ಎಂದು ಆಗಲೇ ಸುಬ್ರಾಯ ಭಟ್ಟರಿಗೆ ಫೋನ್ ಮಾಡಿ ನಾವು ಬಂದ ವಿಷಯವನ್ನು ತಿಳಿಸಿ ಈಗ ಬರಬಹುದೇ ಎಂದು ಕೇಳಿದರು. ಆದರೆ ಸುಬ್ರಾಯ ಭಟ್ಟರು ವೃತ್ತಿಯಿಂದ ಆಗಲೇ ನಿವೃತ್ತರಾಗಿದ್ದು ಮನಸ್ಸಿನ ಸಂತೋಷಕ್ಕೆ, ಸಮಯ ಕಳೆಯಲು ಅಲ್ಲಿ ಇಲ್ಲಿ ಪೌರೋಹಿತ್ಯ ಮಾಡುತ್ತಿದ್ದು ಯಾವುದೋ ಪೌರೋಹಿತ್ಯದಲ್ಲಿ ಬಿಝಿ ಇದ್ದು, ಆವತ್ತು ಕಷ್ಟ  ಮರಾಯ್ರೆ ನಾನು ಸ್ವಲ್ಪ ಹೊರಗಡೆ ಇದ್ದೇನೆ ಎಂದು ಹೇಳಿದರು. ಸರಿಯಾಗಿ ವಿಚಾರಿಸಿಕೊಳ್ಳದೇ ಬಂದಾಯಿತು. ಏನು ಮಾಡುವದು? ಅಷ್ಟು ದೂರ ಬಂದು ಸುಮ್ಮನೇ ಮರಳಿ ಹೋಗುವುದಾಯಿತೇ? ಎಂದು ನಮಗೆ ನಿರಾಶೆಯಾಯಿತು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ