ಗುರುವಾರ, ನವೆಂಬರ್ 16, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 57

ಉತ್ತರಕನ್ನಡದ ಚಂದಾವರ ಗಣೇಶ ಭಟ್ಟರು ಎಂಬವರು ಹಲವಾರು ಯಕ್ಷಗಾನದ ವಿಡಿಯೋ ದಾಖಲೆಗಳನ್ನು ಸಂಗ್ರಹಿಸುವವರು. ಒಮ್ಮೆ ನಮ್ಮ ಸುದರ್ಶನ ಜೋಯಿಸರು ಹಳೆಯ ಸಂಗ್ರಹಗಳನ್ನು ಹುಡುಕುತ್ತಿದ್ದಾರೆ ಎಂದು ಯಾರಿಂದಲೋ ತಿಳಿದು, ಚಂದಾವರದಿಂದ ಬೈಕಿನಲ್ಲಿ ಅವರಲ್ಲಿದ್ದ ಎಲ್ಲ ಸಿಡಿಗಳನ್ನು ಎರಡು, ಮೂರು ಚೀಲದಲ್ಲಿ ಹಾಕಿಕೊಂಡು ಕೊಲ್ಲೂರಿಗೆ ಬಂದರು. ಜೋಯಿಸರು ಒಮ್ಮೆ ಅದನ್ನೆಲ್ಲಾ ನೋಡಿ, ಅವರಲ್ಲಿಯೇ ಇರಿಸಿಕೊಂಡು ನನಗೆ ಕಳಿಸಿ, ನಮ್ಮಲ್ಲಿದ್ದ ಸಂಗ್ರಹವನ್ನು ಗಣೇಶ ಭಟ್ಟರಿಗೆ ಪ್ರತಿ ಮಾಡಿಕೊಡಿ ಎಂದರು. ಇನ್ನೊಮ್ಮೆ ಅವರು ಬಂದಾಗ ನನ್ನ ವಿಳಾಸ ಕೊಟ್ಟು ಕಳಿಸಿದರು. ಅವರಿಗೆ, ನನ್ನ ಹತ್ತಿರವಿದ್ದ ಎಲ್ಲ ವಿಡಿಯೋ ಆಡಿಯೋಗಳನ್ನು ಅವರ ಹಾರ್ಡ್ ಡಿಸ್ಕಿಗೆ ಹಾಕಿಕೊಟ್ಟೆ. ಈ ಭಟ್ಟರೊಬ್ಬರು, ಯಾರಲ್ಲಿ ಏನು ವಿಡಿಯೋ ಉಂಟು ಯಾವ ವಿಡಿಯೋಗ್ರಾಫರ್ ಆಟದಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಾರೆ ಎಂದು ನೋಡುತ್ತಾ ಇದ್ದು ಮೊದಲು ಹೋಗಿ ಪರಿಚಯ ಮಾಡಿಕೊಂಡು, ಏನಾದರೂ ಮಾಡಿ ಅವರಿಂದ ಅದನ್ನು ಸಂಗ್ರಹಿಸುತ್ತಿದ್ದರು. ಆವಾಗಿನಿಂದ ಅವರು ಆಗಾಗ ನಮ್ಮ ಮನೆಗೆ ಬಂದು, ಅವರ ಸಂಗ್ರಹದ ಒಂದು ಪ್ರತಿಯನ್ನು ನನಗೆ ಕೊಟ್ಟು, “ಇದು ನಿಮ್ಮ ಭಂಡಾರಕ್ಕೆ ಸೇರಿಸಿಕೊಳ್ಳಿ” ಎಂದು, ಮತ್ತೆ ನನ್ನಲ್ಲಿ ಏನಾದರೂ ಇದ್ದರೆ ತೆಗೆದುಕೊಂಡು ಹೋಗುತ್ತಿದ್ದಾರೆ. ಮತ್ತೆ ಅವರದನ್ನು ಕೊಡುವಾಗ “ಹ್ವಾಯ್, ಇದರಲ್ಲಿ ಇದೊಂದನ್ನು ಸದ್ಯ ಯಾರಿಗೂ ಕೊಡಬೇಡಿ ಮಾರಾಯ್ರೆ” ಅನ್ನುತ್ತಿದ್ದರು. ನಾನು ಸುಮ್ಮನೆ ಮಂದಹಾಸ ಬೀರುತ್ತಿದ್ದೆ. ಅದರ ಅರ್ಥ ಅವರಿಗೂ ಗೊತ್ತಿತ್ತು. ನನಗೂ.

ಉಡುಪಿ ಅಂಬಾಗಿಲಿನ ಹತ್ತಿರ ಇರುವ ಪುತ್ತೂರಿನಲ್ಲಿ ಭಗವತೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನವಿದೆ. ಅಲ್ಲಿಯೆ ಹತ್ತಿರ ಇರುವ ಸುಧಾಮ ಭಟ್ ಎನ್ನುವವರು, ಹಿಂದೆ ಪುತ್ತಿಗೆ ಮಠದಲ್ಲಿ ಪರಿಚಯವಾದವರು ಒಮ್ಮೆ ನಮ್ಮ ಮನೆಗೆ ಬಂದು, ಪುತ್ತೂರಿನಲ್ಲಿ ಒಂದು ಬ್ರಾಹ್ಮಣ ಸಂಘ ಇದೆ ಅದಕ್ಕೆ ಸದಸ್ಯರಾಗಲು ಹೇಳಿದರು. ಆ ಊರಿನಲ್ಲಿ ಯಾರದ್ದೂ ಹೆಚ್ಚಿಗೆ ಪರಿಚಯವಿಲ್ಲದ ನಾನು, ಅದಕ್ಕೆ ಒಪ್ಪಿ ಸದಸ್ಯನಾದೆ. ದೇವಸ್ಥಾನದಲ್ಲಿ ಪ್ರತೀ ಭಾನುವಾರ ಬೆಳಿಗ್ಗೆ ವಿಷ್ಣುಸಹಸ್ರನಾಮ ಪಾರಾಯಣ ಪ್ರತೀ ಶುಕ್ರವಾರ ಮಹಿಳೆಯರಿಗೆ ಲಕ್ಷ್ಮೀ ಶೋಭಾನೆ ಮತ್ತು ಭಜನೆ ಮತ್ತು ಪ್ರತೀ ತಿಂಗಳು ಒಂದು ಆ ಸಂಘದವರೇ ನಡೆಸುವ ಸಭಾ ಕಾರ್ಯಕ್ರಮ ಇರುತ್ತಿತ್ತು. ನಾವೂ ಪುರಸೊತ್ತಾದಾಗ ಹೋಗಲು ಶುರುಮಾಡಿದೆವು. ಅಲ್ಲಿಯವರ ಸ್ನೇಹವಾಯಿತು. ಪರಿಚಯವಾಗಿ ಒಂದು ವರ್ಷ ಆ ಬ್ರಾಹ್ಮಣ ಸಂಘದಲ್ಲಿ ಕಾರ್ಯದರ್ಶಿಯಾಗಿಯೂ ಕೆಲಸವನ್ನು ಮಾಡಿದೆ. ಆಸುಪಾಸಿನ ಸುಮಾರು ನೂರಿನ್ನೂರು ಬ್ರಾಹ್ಮಣರ ಮನೆಮನೆಗೆ ಹೋಗಿ ಆ ವರ್ಷ ಸಂಘದಿಂದ ಮಾಡಿದ ಶ್ರೀಚಕ್ರಪೂಜೆಗೆ ಆಮಂತ್ರಣ ನೀಡಿ ಬರುವ ಅವಕಾಶವೂ ಲಬ್ಯವಾಗಿ ಅವರೆಲ್ಲರ ಪರಿಚಯವೂ ಆಯಿತು. ಅನ್ನಪೂರ್ಣಳೂ ಆ ಸಮಯದಲ್ಲಿ ಮಹಿಳೆಯರ ಲಕ್ಷ್ಮೀಶೋಭಾನೆ ಭಜನೆಗೆ ಸೇರಿಕೊಂಡವಳು ಅಲ್ಲಿನ ಯಕ್ಷಗಾನ ಪ್ರದರ್ಶನಕ್ಕೆ ಸೇರಿ, ಬನ್ನಂಜೆ ಸಂಜೀವನವರ ನಿರ್ದೇಶನದಲ್ಲಿ ಆದ ಚಿತ್ರಪಟ ರಾಮಾಯಣ ಆಟದಲ್ಲಿ ಕುಣಿತ ಅಭ್ಯಾಸ ಮಾಡಿ ಯೋಗಿನಿಯ ಪಾತ್ರವನ್ನೂ ಮಾಡಿದಳು. ನಂತರವೂ ಕೆಲವು ಪ್ರದರ್ಶನಗಳಲ್ಲಿ ದಾಕ್ಷಾಯಿಣಿ, ರುಕ್ಮಿಣಿ, ತ್ರಿಲೋಕ ಸುಂದರಿ, ಕೃಷ್ಣ ಮುಂತಾದ ಪಾತ್ರಗಳನ್ನೂ ನಿರ್ವಹಿಸಿದಳು. ಮನೆಯಲ್ಲಿ ಕುಣಿತ, ಅಭಿನಯ, ಮಾತಿಗೆ ನಾನೂ ಟ್ರಯಲ್ ಕೊಡುತ್ತಿದ್ದೆ.

ಮನೋಹರ ಕುಂದರ್ ಎನ್ನುವ ಪಡುಬಿದ್ರೆ ಹತ್ತಿರದ ಪೋಟೋಗ್ರಾಫರ್ ಒಬ್ಬರ ಬಳಿ, ಹಿಂದಿನ ಹಲವು ಆಡಿಯೋ ವಿಡಿಯೋ ಮತ್ತು ಅವರೇ ಫೋಟೋ ತೆಗೆದು ಸಂಗ್ರಹಿಸಿ ಇಟ್ಟ ಹಳೆಯ ದಾಖಲೆಗಳಿದ್ದವು.  ಅವರ ಬಳಿ ನನ್ನ ಅಪ್ಪಯ್ಯನ ಕೃಷ್ಣ ಪಾರಿಜಾತ ಪ್ರಸಂಗದ ಆಕಾಶವಾಣಿಯ ಪ್ರೋಗ್ರಾಮ್ ಮತ್ತು ಅಪ್ಪಯ್ಯ ಕುಳಿತು ಪದ್ಯಹೇಳುವ ಒಂದು ಭಂಗಿಯ ಒಳ್ಳೆಯ ಫೋಟೋ  ಇದ್ದು ಅವರು ಅದನ್ನು  ನಮ್ಮ ಮನೆಗೆ ತಂದು ಕೊಟ್ಟರು. ಅವರಲ್ಲಿಯೂ ಅಪಾರ ಸಂಗ್ರಹಗಳಿವೆ. ಅವರು ದೊಡ್ಡ ಪ್ರಮಾಣದಲ್ಲಿ ಖರ್ಚುಮಾಡಿ ಅವರ ಫೋಟೋಗಳದ್ದೇ ಒಂದೆರಡು ಪುಸ್ತಕವನ್ನೂ ಮಾಡಿ ಕೈ ಸುಟ್ಟುಕೊಂಡಿದ್ದರು. ಅವರಿಗೂ ಹಳೆಯಂಗಡಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಶಿವಚಂದ್ರ ಭಟ್ ಎನ್ನುವ ಡಾಕ್ಟರರಿಗೂ ಸ್ನೇಹವಿದ್ದು, ನನ್ನ ಬಳಿ ಶಂಭುಹೆಗಡೆಯವರ ಆಟದ ವಿಡಿಯೋ ಇದೆ ಎಂದು ತಿಳಿದ ಡಾಕ್ಟರ್ ರು, ಒಂದು ದಿನ ನನ್ನನ್ನು ಹುಡುಕಿಕೊಂಡು ನಮ್ಮ ಮನೆಗೆ ಬಂದರು. ತನ್ನ ಬಳಿಯೂ ಉಪ್ಪೂರರ ಕೆಲವು ಹಳೆಯ ಪೋಟೋಗಳು ಬರಹಗಳೂ ಇವೆ. ಅದನ್ನು ನೀವು ಒಮ್ಮೆ ನೋಡಿ, ಮತ್ತೆ ಶಂಭು ಹೆಗಡೆ ಯವರು ಅಪ್ಪಯ್ಯ ಒಟ್ಟಿಗೆ ಮಾಡಿದ ಬ್ರಹ್ಮಕಪಾಲವೂ ಇದೆ ಎಂದು ತಿಳಿಸಿ ಮನಗೆ ಬರಬೇಕೆಂದೂ ಹೇಳಿದರು. ಜೊತೆಗೆ ನನ್ನ ಸಂಗ್ರಹವನ್ನು ಅವರಿಗೆ ಕೊಡಲು ಸಾಧ್ಯವೇ?” ಎಂದು ಕೇಳಿದರು. ನಾನು ಕೂಡಲೇ ಒಪ್ಪಿದೆ. ಆದರೆ ನಾನು, “ನೆಬ್ಬೂರರು ಮತ್ತು ಕೆಪ್ಪೆಕೆರೆಯವರ ಹಿಮ್ಮೇಳದಲ್ಲಿ ಮಾತ್ರ ಶಂಭು ಹೆಗಡೆಯವರು ಕುಣಿಯುತ್ತಿದ್ದುದು. ೧೯೬೮ ರ ಸಾಲಿಗ್ರಾಮ ಮೇಳದಲ್ಲಿ ಕೆರೆಮನೆ ಕಲಾವಿದರೊಂದಿಗೆ ಅಪ್ಪಯ್ಯ ಭಾಗವತಿಕೆ ಮಾಡಿದ ನಂತರ, ಶಂಭುಹೆಗಡೆಯವರಿಗೆ ಅಪ್ಪಯ್ಯ ಪದ್ಯ ಹೇಳಿದ್ದು ನನಗೆ ತಿಳಿದೇ ಇಲ್ಲ” ಎಂದೆ. ಆದರೆ ಅದಕ್ಕೆ ಅಪವಾದವೆಂಬಂತೆ ಒಮ್ಮೆ ಎಡನೀರು ಸ್ವಾಮಿಯವರ ಭಾಗವತಿಕೆಗೆ ಶಂಭು ಹೆಗಡೆಯವರು ಮಾಡಿದ ಕಂಸವಧೆಯ ಕಂಸ, ಸಾಲ್ವ ಇತ್ಯಾದಿ ಆಟಗಳು ನನಗೆ ಜೋಯಿಸರ ಸಹಾಯದಿಂದ ಸಿಕ್ಕಿದ್ದವು. ಆದರೆ ಅಪ್ಪಯ್ಯ ಮತ್ತು ಶಂಭುಹೆಗಡೆಯವರು ಇರುವ ಒಂದೇ ಒಂದು ಫೋಟೋ ಸುಜಿಯೀಂದ್ರ ಹಂದೆ ಒಮ್ಮೆ ನನಗೆ ಕಳಿಸಿ ಕೊಟ್ಟಿದ್ದ. ಅದು ಸುಮಾರು 1968 ರ ಸಾಲಿಗ್ರಾಮ ಮೇಳದಲ್ಲಿ ಕೆರೆಮನೆಯ ಕಲಾವಿದರು, ಅಪ್ಪಯ್ಯ ಒಟ್ಟಿಗೇ ಇದ್ದ ಕಾಲದ್ದೇ ಇರಬೇಕು. ಆದ್ದರಿಂದ ನಾನು ಅಂತಹ ಆಡಿಯೋ ಇರಲು ಸಾಧ್ಯವೇ ಇಲ್ಲ ಎಂದೆ. ಆದರೂ “ನೀವು ಒಂದು ಹಾರ್ಡ್ ಡಿಸ್ಕ್ ಖರೀದಿಸಿ ಇಟ್ಟುಕೊಳ್ಳಿ. ನಾನೇ ನಿಮ್ಮ ಮನೆಗೆ ಬಂದು ಅದಕ್ಕೆ ಹಾಕಿಕೊಡುತ್ತೇನೆ” ಎಂದೆ.

ಅವರನ್ನು ಅಂದು ಕಳಿಸಿಕೊಟ್ಟರೂ ನನಗೆ ರಾತ್ರಿ ನಿದ್ದೆ ಬರಲಿಲ್ಲ ಅಪ್ಪಯ್ಯನ ಪದ್ಯಕ್ಕೆ, ಬ್ರಹ್ಮಕಪಾಲದಲ್ಲಿ ಶಂಭು ಹೆಗಡೆಯವರ ಈಶ್ವರನ ಅಭಿನಯವೇ ಕಣ್ಣಮುಂದೆ ಬರುತ್ತಿತ್ತು. ಅದು ಹೇಗಿರಬಹುದು? ಎಂದು ಕಲ್ಪಸಿಕೊಳ್ಳುತ್ತಾ ಬೆಳಗು ಮಾಡಿದೆ. ಮತ್ತೆ ನನಗೆ ಮನೆಯಲ್ಲಿ ಇರಲು ಸಾಧ್ಯವಾಗಲಿಲ್ಲ. ಮರುದಿನವೇ, ಅವರಿಗೆ ಫೋನ್ ಮಾಡಿ ಬರುತ್ತಿದ್ದೇನೆ ಎಂದು ತಿಳಿಸಿ, ಹೊರಟುಬಿಟ್ಟೆ. ನಾನು ಹೋದಾಗ ಆಗಲೇ ಅಲ್ಲಿ ಔಷಧಕ್ಕೆಂದು ಬಂದು ತುಂಬಿದ್ದ ಹತ್ತಾರು ಜನರನ್ನು ಬಿಟ್ಟು ಅವರು, ನನ್ನನ್ನು ಒಳಗಿನ ಒಂದು ರೂಮಿಗೆ ಕರೆತಂದು ಕುಳ್ಳಿರಿಸಿ, ಒಂದಷ್ಟು ಫೈಲ್ ಗಳನ್ನು ಕೊಟ್ಟು ನೋಡಿ ಅಂದರು. ನಾನು “ಆ ಆಡಿಯೋವನ್ನು ಮೊದಲು ತೋರಿಸಿ” ಅಂದು ಕೇಳಿದೆ. ಹುಡುಕಿ ಕೊಟ್ಟರು. ಅದು ಶಂಭುಹೆಗಡೆಯವರಿಗೆ ಕೆಪ್ಪೆಕೆರೆಯವರು ಹಾಡಿದ ಬ್ರಹ್ಮಕಪಾಲ ಪ್ರಸಂಗದ ಆಟದ ನೇರ ರೆಕಾರ್ಡ್ ಆಗಿತ್ತು. ಅದರೆ ಆ ಫೈಲಿನಲ್ಲಿ ಉಪ್ಪೂರ್ ಶಂಭು ಹೆಗಡೆ ಎಂದು ಬರೆದಿದ್ದರು ಅಷ್ಟೆ.  ಕೆಪ್ಪೆಕೆರೆಯವರ ಸ್ವರ ಆಗ ಅಪ್ಪಯ್ಯನ ಸ್ವರವನ್ನೇ ತುಂಬಾ ಹೋಲುತ್ತಿತ್ತು. ಅವರ ಸಂಗ್ರಹವನ್ನು ಒಂದೊಂದೇ ನೋಡುತ್ತಾ ಹೋದೆ.

ಅವರಲ್ಲಿ ಶಿವರಾಮ ಹೆಗಡೆ, ಶಂಭುಹೆಗಡೆ, ಗಜಾನನ ಹೆಗಡೆಯವರ, ಹಾಗೂ ಕೆರೆಮನೆ ಮೇಳದ ಹಲವು ಹಳೆಯ ಕಾಲದ ಉತ್ತಮ ಸ್ಥಿತಿಯಲ್ಲಿರುವ ಫೋಟೋಗಳು, ಲೇಖನಗಳು ಇದ್ದವು. ಕಾಗದ ಹಳೆಯದಾಗಿ ಮಸುಕಾಗಿದ್ದ ಫೋಟೋ, ಬರಹಗಳನ್ನು ಲ್ಯಾಮಿನೇಶನ್ ಮಾಡಿ ಇಟ್ಟುಕೊಂಡಿದ್ದರು. 1966 -67 ರ ಸಮಯದ ಶಿವರಾಮ ಕಾರಂತರು ಬ್ಯಾಲೆ ಮಾಡುವಾಗ ಅಪ್ಪಯ್ಯ ಹಾಡುವ ಒಂದು ಅಪರೂಪದ ಫೋಟೋ ಕಂಡು ನನಗೆ ರೋಮಾಂಚನವಾಯಿತು. ಸುಮಾರು ಅದೇ ಕಾಲದ ಮತ್ತು ನಂತರದ ಅಪ್ಪಯ್ಯನ ಹೆಸರು ಇರುವ ಕಾರಂತರ ಆಟದ ಪುಸ್ತಕಗಳೂ, ಹ್ಯಾಂಡ್ ಬಿಲ್ಲುಗಳನ್ನೂ ಅವರು ಜೋಪಾನವಾಗಿ ಇಟ್ಟುಕೊಂಡಿದ್ದರು. ನನಗೆ ತುಂಬಾ ಖುಷಿಯಾಯಿತು. ಅದನ್ನೆಲ್ಲ ತಂದು ಪ್ರತಿಮಾಡಿಕೊಂಡು, ಅವರ ಹಾರ್ಡ್ ಡಿಸ್ಕ್ ಗೆ ನನ್ನ ಅನೇಕ ಸಂಗ್ರಹವನ್ನು ಹಾಕಿಕೊಟ್ಟೆ. ನಂತರವೂ ಅವರಿಗೆ ಆಗಾಗ ನನಗೆ ಸಿಕ್ಕಿದ ಆಡಿಯೋ ವಿಡಿಯೋಗಳನ್ನು ಅವರ ಕೋರಿಕೆಯ ಮೇರೆಗೆ ಅವರ ಹಾರ್ಡ್ ಡಿಸ್ಕ್ ಗೆ ಹಾಕಿ ಕೊಡುತ್ತಿದ್ದೆ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ