ಶನಿವಾರ, ನವೆಂಬರ್ 11, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 52

ಬೆಳಿಗ್ಗೆ ನನ್ನ ಅಕ್ಕ ಭಾವಯ್ಯರಿಂದ ಕಾರ್ಯಕ್ರಮ ಉದ್ಘಾಟನೆಯಾಗಿ, ಅನ್ನಪೂರ್ಣಳ ಅತ್ತಿಗೆ ಗಾಯತ್ರಿಯವರ ಶಂಕರನಾರಾಯಣ ದೇವಸ್ಥಾನದ  ಮಹಿಳಾ ತಂಡದವರ  ಲಲಿತಾಸಹಸ್ರನಾಮ ಪಾರಾಯಣದಿಂದ ಕಾರ್ಯಕ್ರಮ ಶುರುವಾಯಿತು. ಬೆಳಿಗ್ಗೆ ಶ್ರೀಕಾಂತ ಸಿದ್ಧಾಪುರ ಮತ್ತು ಮಧ್ಯಾಹ್ನದ ನಂತರ ಜನಾರ್ದನ ಹಂದೆಯವರು ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ಹೊತ್ತರು. ಉದ್ಘಾಟನೆಯ ನಂತರ ಐರೋಡಿ ನರಸಿಂಹ ಹೆಬ್ಬಾರರ ತಂಡದಿಂದ ಭಜನೆ. ಅದರಲ್ಲಿ ನೀಲಾವರ ಲಕ್ಷ್ಮೀನಾರಾಯಣಯ್ಯ, ಚಂದ್ರಶೇಖರ ಕೆದ್ಲಾಯರು, ದಯಾನಂದ ವಾರಂಬಳ್ಳಿ ಮೊದಲಾದವರು ಇದ್ದರು. ನಂತರ ಸಭಾ ಕಾರ್ಯಕ್ರಮ ಪ್ರಾರಂಭವಾಗಿ, ಸಾಲಿಗ್ರಾಮ ಮಕ್ಕಳ ಮೇಳದ ಹೆಚ್. ಶ್ರೀಧರ ಹಂದೆಯವರು, ಸುಬ್ರಮಣ್ಯ ಧಾರೇಶ್ವರ ಮತ್ತು ಶ್ರೀಧರಣ್ಣಯ್ಯ, ಅಪ್ಪಯ್ಯನ ನೆನಪುಗಳನ್ನು ಹಂಚಿಕೊಂಡರು. ಉಪ್ಪೂರರ ಮಕ್ಕಳು ಮೊಮ್ಮಕ್ಕಳಲ್ಲಿ ವಿಶೇಷ ಪ್ರತಿಭಾನ್ವಿತರಿಗೆ, ಸಾಕುಮಗನಾದ ಚಂದ್ರಭಟ್ಟರಿಗೆ ಉಪ್ಪೂರರ ನೆನಪಿನಲ್ಲಿ ಗೌರವವನ್ನೂ ಸಮರ್ಪಿಸಲಾಯಿತು. ಸಂಜೀವ ಸುವರ್ಣ, ಮಂಟಪ ಪ್ರಭಾಕರ ಉಪಾಧ್ಯರು, ಅಂಬಾತನಯ, ಶುಂಠಿ ಸತ್ಯನಾರಾಯಣ ಭಟ್ಟರು, ಕೊಳ್ಯುರು ರಾಮಚಂದ್ರ ರಾವ್, ಸಾಲಿಗ್ರಾಮ ಶಿವರಾಮ ಐತಾಳರು ಕೋಟ ಶಿವಾನಂದ ಹೊಳ್ಳರು ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದು ಸಭೆಗೆ ಕಳೆಯನ್ನು ತಂದುಕೊಟ್ಟರು. ಪ್ರೇಕ್ಷಕರ ಪರವಾಗಿ ಅಂಬಾತನಯರೂ ಮಾತನಾಡಿ, ಉಪ್ಪೂರರ ಜೊತೆಗಿನ ಅವರ ಒಡನಾಟದ ನೆನಪನ್ನು ಹಂಚಿಕೊಂಡರು.

ಆಮೇಲೆ ಮಧ್ಯಾಹ್ನ ಊಟವಾದ ನಂತರ ನೀಲಾವರ ಲಕ್ಷ್ಮಿನಾರಾಯಣಯ್ಯ ಮತ್ತು ಕಲ್ಯಾಣಪುರ ಕಾಲೇಜಿನ ಲೆಕ್ಚರರ್ ನಾರಾಯಣ ಹೆಗಡೆಯವರಿಂದ ಕರ್ಣಭೇದನದ ಭಾಗದ ಕಾವ್ಯವಾಚನವಾಯಿತು. ನಂತರ ಸುಬ್ರಮಣ್ಯ ಧಾರೇಶ್ವರರು ಅಪ್ಪಯ್ಯನ ಇಷ್ಟದ ಕೆಲವು ಪದ್ಯಗಳನ್ನು ಹಾಡಿ, ಮತ್ತೆ ಮತ್ತೆ ಅಪ್ಪಯ್ಯನ ಗುಣಗಾನ ಮಾಡಿ ಅವರಿಂದಲೇ ತಾನು ಇಷ್ಟರಮಟ್ಟಿಗೆ ಆಗಿದ್ದೇನೆ ಎಂದು ಗುರುಗಳ ಸ್ಮರಣೆಯನ್ನು ಮಾಡಿ, ಒಂದು ಸುಂದರವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮದ್ದಲೆಯಲ್ಲಿ ಸುನಿಲ್ ಭಂಡಾರಿಯವರು ಸಹಕರಿಸಿದ್ದರು.

ನಂತರ ಯಕ್ಷಗಾನ ಸಂವಾದ ಎಂಬ ಅಪರೂಪದ ಕಾರ್ಯಕ್ರಮವು ಗುಂಡ್ಮಿ ಸದಾನಂದ ಐತಾಳರ ನಿರೂಪಣೆಯಲ್ಲಿ ನಡೆಯಿತು. ಅದರಲ್ಲಿ ಹಲವು ಭಾಗವತರು ಒಂದೊಂದು ಪ್ರಸಂಗದ ಪಾತ್ರಗಳನ್ನು ವಹಿಸಿಕೊಂಡು ಪದ್ಯವನ್ನು ಹೇಳಿದರು. ಮೊದಲಿಗೆ ಹೆರಂಜಾಲು ಗೋಪಾಲ ಗಾಣಿಗರು ಮತ್ತು ರಾಘವೇಂದ್ರ ಮಯ್ಯರು ಭೀಷ್ಮವಿಜಯದ ಭಾಗವನ್ನು ಹಾಡಿದರೆ, ನಂತರ ಕೆ.ಪಿ. ಹೆಗಡೆ, ಸುಬ್ರಮಣ್ಯ ಐತಾಳರು ಕೃಷ್ಣ ಸಂಧಾನದ ಭಾಗವನ್ನೂ, ನಾರಾಯಣ ಶಬರಾಯರು, ವಿಶ್ವೇಶ್ವರ ಸೋಮಯಾಜಿಯವರು ಮತ್ತು ಕೆ.ಜೆ. ಗಣೇಶರು ಸೇರಿ, ಕೃಷ್ಣಾರ್ಜುನದ ಭಾಗವನ್ನು ಹಾಡಿ ರಂಜಿಸಿದರು. ಮದ್ದಲೆಯಲ್ಲಿ ಕೆ.ಜೆ.ಕೃಷ್ಣ ಮತ್ತು ಹಾಲಾಡಿ ಚಂದ್ರಾಚಾರ್ ಇವರು ಸಹಕರಿಸಿದರು. ನಂತರ ಸದಾನಂದ ಐತಾಳರು ಸಂಯೋಜಿಸಿದ ನನ್ನ ಕಲ್ಪನೆಯ ಒಂದು ವಿಶಿಷ್ಟ ಕಾರ್ಯಕ್ರಮ ನಡೆಯಿತು. ಅದರಲ್ಲಿ ಯಕ್ಷಗಾನದ, ಅಪರೂಪದ ಕೆಲವು ಪದ್ಯಗಳನ್ನು ಆಯ್ದುಕೊಂಡು ಮೊದಲು ಕೆ.ಜೆ. ಗಣೇಶರು ಯಕ್ಷಗಾನದಲ್ಲಿ ಹಾಡಿದರೆ, ಅದೇ ಪದ್ಯವನ್ನು ನಮ್ಮ ನೆಚ್ಚಿನ ಹಾರ್ಯಾಡಿ ಚಂದ್ರಶೇಖರ ಕೆದ್ಲಾಯರು ಸುಗಮ ಸಂಗೀತದಲ್ಲಿ ಹಾಡಿದರು. ಹಿಮ್ಮೇಳದಲ್ಲಿ ಜೊತೆಗಾರರಾಗಿ ಕೆ.ಜೆ. ಕೃಷ್ಣ ಮದ್ದಲೆವಾದಕರಾಗಿ ಸಹಕರಿಸಿದ್ದರೆ, ಹಾರ್ಮೋನಿಯಂನಲ್ಲಿ ಹಾಲಾಡಿ ಕೃಷ್ಣ ಕಾಮತ್ ರೂ, ತಬಲದಲ್ಲಿ ಗೋರಾಜಿ ಉದಯ ಹಾಲಂಬಿಯವರೂ ಮೇಳವಾದರು. ನಂತರ ನಮ್ಮ ಕುಟುಂಬದ ಕೌಟುಂಬಿಕ ಕಾರ್ಯಕ್ರಮವಾಗಿ ಉಪ್ಪೂರರ ಎಲ್ಲ ಮಕ್ಕಳು, ಮೊಮ್ಮಕ್ಕಳು, ಸಂಬಂಧಿಕರೆಲ್ಲ ಒಬ್ಬೊಬ್ಬರಾಗಿ ಹಾಡಿ ಕುಣಿದು ದಣಿದರು. ನಂತರ ಒಟ್ಟಿಗೇ ಸೇರಿ ಕೃಷ್ಣಮೂರ್ತಿಯಣ್ಣಯ್ಯ ಬರೆದ ಒಂದು ಪದ್ಯವನ್ನೂ ಹಾಡಿ ಕುಣಿದು ಸಂತೋಷಪಟ್ಟೆವು.

 ರಾತ್ರಿ ಊಟವಾದ ಮೇಲೆ ಕರ್ಣಾರ್ಜುನ ಕಾಳಗದ ಆಟ. ಮೊದಲು ಕೊಂಡದಕುಳಿ ರಾಮಚಂದ್ರಹೆಗಡೆಯವರ ಕರ್ಣ ಮಾಡಿಸಬೇಕು ಎಂದು ಅವರನ್ನು ಮಾತಾಡಿಸಿ ಒಪ್ಪಿಸಿದ್ದರೂ, ನಂತರ ಅವರು ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನಿವಾರ್ಯಕಾರಣದಿಂದ ಅನನುಕೂಲವೆಂದು ತಿಳಿಸಿದ್ದರಿಂದ, ಕೋಟ ಸುಜಯೀಂದ್ರ ಹಂದೆಯವರ ಕರ್ಣನಾಗಿ ಉತ್ತಮ ನಿರ್ವಹಣೆಯನ್ನು ಮಾಡಿದರು. ಅದರಲ್ಲಿ ಬೈಲೂರು ಸುಬ್ರಮಣ್ಯ ಐತಾಳರು ಮತ್ತು ತೋನ್ಸೆ ಜಯಂತ ಕುಮಾರರ ಭಾಗವತಿಕೆಯಾದರೆ, ಹಾಲಾಡಿ ಚಂದ್ರಾಚಾರ್ ಮತ್ತು ಸುರೇಶಣ್ಣಯ್ಯನ ಮದ್ದಲೆ ಮತ್ತು ಹಳ್ಳಾಡಿ ಸುಬ್ರಾಯ ಮಲ್ಯರ ಚಂಡೆಯ ಹಿಮ್ಮೇಳದಲ್ಲಿ, ಸುಜಯೀಂದ್ರ ಹಂದೆಯ ಕರ್ಣ, ವೆಂಕಟೇಶ ಹಂದೆಯ ಅರ್ಜುನ, ಐರೋಡಿ ರಾಜ ಹೆಬ್ಬಾರರ ಕೃಷ್ಣ, ನನ್ನದೇ ಶಲ್ಯ ಮತ್ತು ಜನಾರ್ದನ ಹಂದೆಯವರು ವೃದ್ಧ ಬ್ರಾಹ್ಮಣನಾಗಿ ಅಭಿನಯಿಸಿದರು. ಒಟ್ಟಿನಲ್ಲಿ ನಮ್ಮ ಉಪ್ಪೂರರ ಮನೆತನದ ಚರಿತ್ರೆಯಲ್ಲಿ ಅದೊಂದು ಐತಿಹಾಸಿಕ ದಾಖಲೆಯಾಗಿ ಬಹುಕಾಲದವರೆಗೂ ನೆನಪಿನಲ್ಲಿರುವ ವೈಭವದ ಒಂದು ಉತ್ಕೃಷ್ಟ ಕಾರ್ಯಕ್ರಮವಾಗಿ ಮನಸ್ಸಿನಲ್ಲಿ ಉಳಿಯುವಂತಾಯಿತು.

ಆಗಲೇ ಅಪ್ಪಯನ ಪದ್ಯಗಳ ಆಡಿಯೋ, ಲೇಖನಗಳು, ಪೋಟೋ ಇತ್ಯಾದಿ ದಾಖಲೆಗಳನ್ನು ಒಟ್ಟು ಮಾಡಬೇಕೆಂಬ ಬಯಕೆ ಬಲವಾಗತೊಡಗಿತು. ಕೃಷ್ಣಮೂರ್ತಿಯಣ್ಣನ ಹತ್ತಿರ, ಅಪ್ಪಯ್ಯ ಇರುವಾಗ ಅವನದೇ ಕ್ಯಾಮರಾದಲ್ಲಿ ತೆಗೆದಿರಿಸಿದ್ದ ಫೋಟೋಗಳನ್ನು ಕೊಡಲು ಹೇಳಿದೆ. ಅವನ ಹತ್ತಿರ ಇದ್ದವುಗಳ ಜೊತೆಗೆ ಬೆಂಗಳೂರಿನ ನರಸಿಂಹ ಹಂದೆಯವರು ಎಂಬ ಅಪ್ಪಯ್ಯನ ಅಭಿಮಾನಿಗಳಲ್ಲಿ ಇದ್ದ ಕೆಲವು ಪೋಟೋಗಳನ್ನು ಅವನು ಕಳುಹಿಸಿಕೊಟ್ಟ. ಆಗಲೇ ಫೇಸ್ ಬುಕ್ ಶುರುವಾದ ಕಾಲವದು. ಅದರಲ್ಲಿ ಅಪ್ಪಯ್ಯನ ಒಂದು ಪೇಜ್ ನ್ನು ತೆರೆದು, ನನ್ನ ಹತ್ತಿರ ಇದ್ದ ಫೋಟೋಗಳ ಜೊತೆಗೆ, ಅವುಗಳನ್ನು ಅಪ್ಲೋಡ್ ಮಾಡಿದೆ.  ನನ್ನಲ್ಲಿರುವ ಅವರ ಆಡಿಯೋ ಗಳನ್ನು ಮ್ಯೂಸಿಕ್ ಅಪ್ ಲೋಡ್ಸ್ ಎನ್ನುವ ಓಪನ್ ಕ್ಲೌಡ್ ಸೈಟ್ ಗೆ ಅಪ್ಲೋಡ್ ಮಾಡಿದೆ. ಆದರೆ ಆ ಸೈಟ್ ನಂತರ ಬ್ಯಾನ್ ಆಗಿ ಬ್ಲೋಕ್ ಆಯಿತು. ಮತ್ತು ಫೇಸ್ಬುಕ್ ನಲ್ಲಿಯೇ ನನ್ನ ತಂದೆಯವರ ಏನಾದರೂ ದಾಖಲೆಗಳಿದ್ದಲ್ಲಿ ನನಗೆ ತಿಳಿಸಲೂ ವಿನಂತಿಸಿಕೊಂಡೆ. ಹಾಗೆಯೇ, ರಮೇಶಣ್ಣಯ್ಯನೂ ಆಗ ಅಪ್ಪಯ್ಯನ ಹಲವು ಪ್ರಸಂಗಗಳ ಪದ್ಯಗಳನ್ನು ಸಭಾಲಕ್ಷಣದ ಪದ್ಯಗಳನ್ನೂ, ರಾಮಾಂಜನೇಯ ಕೃಷ್ಣಾರ್ಜುನ, ಪಟ್ಟಾಭಿಷೇಕ, ಬಬ್ರುವಾಹನ, ಲಂಕಾದಹನ, ಭೀಷ್ಮವಿಜಯ ಮುಂತಾದ ಪ್ರಸಂಗಗಳ ಪದ್ಯಗಳನ್ನು  ಕೋಟ ಮಣೂರಿನ ಅಕ್ಕನ ಮನೆಯ ಉಪ್ಪರಿಗೆಯಲ್ಲಿ ಅವನ ಟೇಪ್ ರೆಕಾರ್ಡಿನಲ್ಲಿ ರೆಕಾರ್ಡ್ ಮಾಡಿದ್ದು. ಹಾಗೂ ಅವನ ಸಂಗ್ರಹದಲ್ಲಿದ್ದ ಆಟದಲ್ಲೇ ಅವನು ರೆಕಾರ್ಡ್ ಮಾಡಿದ ಶಶಿಪ್ರಭಾ ಪರಿಣಯ, ಭೀಷ್ಮ ವಿಜಯ, ರುಕ್ಮಾಂಗದ ಚರಿತ್ರೆ ಮುಂತಾದ ಕ್ಯಾಸೆಟ್ ಗಳನ್ನೂ ಆಗಲೇ ಪ್ರತಿ ಮಾಡಿಕೊಂಡಿದ್ದು ಅದನ್ನೆಲ್ಲ ಎಮ್.ಪಿ.ತ್ರಿ.ಫೋರ್ಮೆಟ್ ಗೆ ಕನ್ವರ್ಟ್ ಮಾಡಿದೆ.

ಹೆಬ್ರಿಯ ಪ್ರಾಥಮಿಕ ಶಾಲೆಯ ಮಾಸ್ಟರರೊಬ್ಬರು, ಕಾರ್ಕಳದ ಒಬ್ಬ ಪೋಟೋಗ್ರಾಫರ್ (ಅವರ ಹೆಸರು ಏನು ಮಾಡಿದರೂ ಎಷ್ಟೇ ತಲೆ ಕೆರೆದುಕೊಂಡರೂ ಈಗ ನೆನಪಿಗೆ ಬರುತ್ತಿಲ್ಲ ) ರವರೊಂದಿಗೆ, “ಅಪ್ಪಯ್ಯನ ಪದ್ಯವಿದೆಯೇ?” ಅಂತ ಕೇಳಿಕೊಂಡು, ನಮ್ಮ ಮನೆಯನ್ನು ಹುಡುಕಿಕೊಂಡು ಬಂದವರು, ಅವರ ಹತ್ತಿರವಿದ್ದ ಅಪ್ಪಯ್ಯ ಇರುವಾಗ, ಒಮ್ಮೆ ಮುದ್ರಾಡಿಯಲ್ಲಿ ಹಿರಿಯಡ್ಕ ಗೋಪಾಲ ರಾವ್ ರ ಮದ್ದಲೆಯಲ್ಲಿ ಡಾಕ್ಟರ್ ರೊಬ್ಬರು ಮಾಡಿಸಿದ ಪದ್ಯಗಳ ಕ್ಯಾಸೆಟ್ ನ್ನು ತಂದು ಕೊಟ್ಟರು. ಆ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ. ಹಾರ್ಮೋನಿಯಂವಾದನ ನನ್ನದೇ ಆಗಿತ್ತು. ನನಗೆ ತುಂಬಾ ಖುಷಿಯಾಯಿತು. ಅದನ್ನು ಒಮ್ಮೆ ಅವರಿಗೆ ಟೇಪ್ ರೆಕಾರ್ಡರ್ ನಲ್ಲಿ ಹಾಕಿ ತೋರಿಸಿದಾಗ ಅವರು, “ಆ ಸ್ವರ ಕೇಂಡ್ ಮೈಯೆಲ್ಲ ಝುಮ್ ಅನ್ನತ್ ಮಾರಾಯ್ರೆ. ಅವ್ರೇ ಕಾಲ್ ಮೇಲ್ ಕಾಲ್ ಹಾಯ್ಕಂಡ್ ಎದ್ರಿಗೆ ಕೂಕಂಡಾಗ್ ಕಾಂತ್.  ಎಲ್ಲಾ ಹೋಯ್ತೆ, ಈಗ ಯಾರಿದ್ರ್ ಹಾಂಗ್ ಪದ ಹೇಳ್ವರ್?” ಎಂದು ಕಣ್ಣಲ್ಲಿ ನೀರು ತಂದುಕೊಂಡರು.

ಅದನ್ನು ಎಂಪಿತ್ರಿಗೆ ಪರಿವರ್ತಿಸಿ ಒಂದು ಪ್ರತಿಯನ್ನು ಅವರ ಪೆನ್ ಡ್ರೈವ್ ಗೆ ಹಾಕಿಕೊಟ್ಟೆ. ಅದರ ಪ್ರತಿಯೊಂದನ್ನು ನನ್ನ ಕಂಪ್ಯೂಟರ್ ಲ್ಲಿ ಇಟ್ಟುಕೊಂಡಿದ್ದೆ. ಆದರೆ ನನ್ನ ಗ್ರಹಚಾರ, ಕಂಪ್ಯೂಟರ್ ನ ಹಾರ್ಡ್ ಡಿಸ್ಕ್ ಹಾಳಾಗಿ ಎಲ್ಲಾ ನನ್ನ ಸಂಗ್ರಹಗಳೂ ನಾಶವಾಗಿ ಹೋಗಿಬಿಟ್ಟಿತು. ಪುಣ್ಯಕ್ಕೆ ಕೆಲವನ್ನು ಸಿಡಿ ಮಾಡಿ ಇಟ್ಟುಕೊಂಡದ್ದರಿಂದ ಬಚಾವಾದೆ. ಆದರೆ ಮಾಸ್ಟರು ಕೊಟ್ಟ ಆ ಕ್ಯಾಸೆಟ್ ನ ಅಪ್ಪಯ್ಯನ ಪದ್ಯಗಳು ಮಾತ್ರ ಹೋಯಿತೆ. ಅದರ ಬ್ಯಾಕ್ ಅಪ್ ಮಾಡಿರಲಿಲ್ಲ. ಹೊಟ್ಟೆ ಉರಿದುಹೋಯಿತು. ಪುನಹ ಅದನ್ನು ಪಡೆಯಲು ಹೆಬ್ರಿ ಮಾಸ್ಟರರನ್ನು ಸಂಪರ್ಕಿಸಲು, ಅವರ ಪೋನ್ ನಂಬರನ್ನೂ ಪಡೆದು ಇಟ್ಟುಕೊಂಡಿರಲಿಲ್ಲ. ತುಂಬಾ ಬೇಸರವಾಯಿತು. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು. ಅದು ನನ್ನ ಪಾಲಿಗೆ ತುಂಬಾ ಅಮೂಲ್ಯವಾದ ಸಂಗ್ರಹವಾಗಿತ್ತು. ಈ ಮಧ್ಯದಲ್ಲಿ ನಮ್ಮ ಸಂಬಂಧಿಕರಾದ ನಿತ್ಯಾನಂದ ಹೆಬ್ಬಾರರು ನಮ್ಮ ಮನೆಗೆ ಬಂದಾಗ ಅವರ ಮೊಬೈಲಿಗೆ ಕೆಲವು ಅಪ್ಪಯ್ಯನ ಪದ್ಯಗಳನ್ನು ಹಾಕಿ ಕೊಟ್ಟಿದ್ದೆ. ಅದರಲ್ಲಿ ಇರಬಹುದು ಅನ್ನಿಸಿ, ಅವರನ್ನು ಸಂಪರ್ಕಿಸಿ ಕೇಳಿದಾಗ ಅವರು, “ಅಯ್ಯೋ, ಆ ಫೋನ್ ಹಾಳಾಗಿ, ಎಲ್ಲಾ ಅಳಿಸಿಹೋಯಿತು ಮಾರಾಯ” ಎಂದುಬಿಟ್ಟರು. ಬೇರೆ ಯಾರ ಹತ್ತಿರವೂ ಅದು ಇರಲು ಸಾಧ್ಯವಿರಲಿಲ್ಲ. ಏನು ಮಾಡಬೇಕೆಂದೇ ತಿಳಿಯಲಿಲ್ಲ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ