ಗುರುವಾರ, ನವೆಂಬರ್ 2, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 44

ಪಾರ್ವತಮ್ಮ ಹೆದರಲಿಲ್ಲ. ಅಲ್ಲಿಯೇ ಹತ್ತಿರವಿದ್ದ ಒಂದು ಎತ್ತರದ ಹುತ್ತದಂತಹ ಸ್ಥಳವನ್ನು ನೋಡಿ “ನಾಗಪ್ಪಾ, ನೀನಿರುವುದು ಸುಳ್ಳು ಅಂತ ಹೇಳ್ತಾರಂತೆ. ಅದೂ ತೀರ್ಮಾನ ಆಗಿಬಿಡ್ಲಿ. ಬಾ ಹೊರಗೆ” ಎಂದು ಹೇಳಿ ಕಣ್ಣುಮುಚ್ಚಿ ಕುಳಿತರಂತೆ. ಆಗ ಅವರು ನೋಡಿದ ಆ ಜಾಗದಿಂದ ಒಂದು ನಿಜವಾದ ನಾಗರ ಹಾವೇ ಬುಸುಗುಟ್ಟುತ್ತ ಬಂದುಬಿಟ್ಟಿತು. ಅದನ್ನು ನೋಡಿ ಇಡೀದಿನ ಹಗಲುರಾತ್ರಿ ಅವರು ಅಲ್ಲಿ ಏನು ಮಾಡುತ್ತಾರೆ ಎಂದು ಪರೀಕ್ಷೆ ಮಾಡಲು ಬಂದ ಆ ಜನ ಕ್ಷಣಮಾತ್ರದಲ್ಲಿ ಪರಾರಿ.

ಪಾರ್ವತಮ್ಮ, ಆಗಾಗ ಉಡುಪರ ಮನೆಗೆ ಬಂದು, ನಾಲ್ಕಾರು ದಿನ ಇದ್ದು ಹೋಗುತ್ತಿದ್ದರು. ಆಗ ಆ ಕತೆಯನ್ನು ಹೇಳಿ “ಹೌದಾ?” ಎಂದರೆ ಅವರು ನಿರ್ಲಿಪ್ತರಾಗಿ ಸುಮ್ಮನೇ ನಕ್ಕುಬಿಡುತ್ತಿದ್ದರು. ಆಗಲೇ ಅವರಿಗೆ ತುಂಬಾ ವಯಸ್ಸಾಗಿದ್ದು, ಇಲ್ಲಿಯೇ ಇರಿ ಎಂದರೆ ಕೇಳುತ್ತಿರಲಿಲ್ಲ. ಸ್ವಲ್ಪದಿನದಲ್ಲಿಯೇ ಹೊರಟುಬಿಡುತ್ತಿದ್ದರು. ಹಾಗೆ ಅಲ್ಲಿ ಬಂದಾಗ ಸಂಜೆ ಹೊತ್ತಿಗೆ ಅವರು ಮನೆಯವರನ್ನೆಲ್ಲ ಸುತ್ತ ಕೂರಿಸಿಕೊಂಡು ಶನಿಮಹಾತ್ಮೆ ಹಾಗೂ ಕೆಲವು ಪುರಾಣದ ಕಥೆಗಳನ್ನು ಹೇಳುವುದಿತ್ತು. ಕೊನೆಗೆ ಅವರು ವರದಳ್ಳಿಯ ಶ್ರೀಧರ ಸ್ವಾಮಿಯ ಆಶ್ರಮದಲ್ಲಿಯೇ ತುಂಬಾ ಸಮಯ ಇದ್ದರೆಂದು ಕೇಳಿದ ನೆನಪು.

ನಾನು ಮದುವೆಯಾದ ವರ್ಷ ಕವಲಾಳಿ ಸದಾನಂದ ವೈದ್ಯರು ಮತ್ತೊಮ್ಮೆ ಹಿಂದಿನ ಮಿತ್ರರೆಲ್ಲರನ್ನು ಒಟ್ಟುಮಾಡಿ ಆಟ ಮಾಡುವ ಇಚ್ಛೆ ವ್ಯಕ್ತಪಡಿಸಿದರು. ಹಾಗಾಗಿ ಬಿದ್ಕಲ್ ಕಟ್ಟೆ ಕೃಷ್ಣಯ್ಯ ಆಚಾರ್ ರ ಭಾಗವತಿಕೆಯಲ್ಲಿ ಮಾರ್ವಿ ವಾದಿರಾಜ ಹೆಬ್ಬಾರರು ರಚಿಸಿದ ಶಂಕರನಾರಾಯಣ ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಆಯ್ದುಕೊಂಡು ಶಂಕರನಾರಾಯಣ ಜಾತ್ರೆಯ ಸಮಯದಲ್ಲಿ ಅದ್ದೂರಿಯಾಗಿ ಆಡಿದೆವು. ನನ್ನದು ಶಂಕರನಾರಾಯಣ ಸ್ವಾಮಿಯ ಪಾತ್ರ. ಅದರಲ್ಲಿ ಆ ವೈದ್ಯರದು  ಖರಾಸುರನಾದರೆ, ಕಮಲಶಿಲೆಯ ರಾಮಚಂದ್ರ ಭಟ್ಟರ ರಟ್ಟಾಸುರ,ಜೋಡಿ ರಾಕ್ಷಸ ವೇಷ, ಶ್ರೀಕಾಂತ ರಾವ್ ಸಿದ್ದಾಪುರರ ಕ್ರೋಡಮುನಿ, ಶೇಖರ ಶೆಟ್ಟಿಗಾರ್, ಕುಮಾರ ಬೇರ್ಕಿ, ಪರಮೇಶ್ವರ ಉಡುಪ, ಸುಭಾಶ್ಚಂದ್ರ, ಪ್ರಸನ್ನ ಶೆಟ್ಟಿಗಾರ್ ಮೊದಲಾದವರು ಪಾತ್ರವಹಿಸಿದ್ದರು. ವಿಶೇಷ ಆಕರ್ಷಣೆಯಾಗಿ ಕೆಇಬಿ ಲೈನ್ ಮ್ಯಾನ್ ಒಬ್ಬರು ವೀರಪ್ಪ  ಗೌಡರು, ನಂದಿಯಾಗಿ ತಲೆಯಲ್ಲಿ ದೊಡ್ಡಕೋಡು ಧರಿಸಿಕೊಂಡು, ಸೊಂಟಕ್ಕೆ ಗಗ್ಗರ ಕಟ್ಟಿಕೊಂಡು ಕುಣಿಯುತ್ತಾ ಸಭೆಯ ಮಧ್ಯದಿಂದ ದೊಂದಿಬೆಳಕಿನಲ್ಲಿ ಬಂದು ಗೌಜು ಹಾರಿಸಿದರು, ಮತ್ತೊಬ್ಬರು (ಹೆಸರು ನೆನಪಿಗೆ ಬರುತ್ತಿಲ್ಲ) ವೀರಭದ್ರನಾಗಿ ಬಣ್ಣದ ತಟ್ಟಿಯನ್ನು ಕಟ್ಟಿ ಭಯಂಕರವಾಗಿ ಆರ್ಭಟಮಾಡಿ ಕುಣಿದು ಮಿಂಚಿದ್ದರು.

ಅಲ್ಲಿಂದ ಶಂಕರನಾರಾಯಣದಲ್ಲಿ ನಮ್ಮದೇ ಒಂದು ಶಂಕರನಾರಾಯಣ ಯಕ್ಷಗಾನ ಸಂಘ ಎಂಬುದನ್ನು ಪ್ರಾರಂಭಿಸಿ, ಕೆಲವು ಆಸುಪಾಸು ಮಕ್ಕಳಿಗೆ ದೇವಸ್ಥಾನದಲ್ಲಿಯೇ ಕುಣಿತವನ್ನು ಕಲಿಸಿದೆ. ಪ್ರತಿವರ್ಷ ಒಂದು ಪ್ರಸಂಗದಂತೆ ಪ್ರದರ್ಶನವನ್ನು ಬೇರೆಬೇರೆ ಕಡೆಗಳಲ್ಲಿ ನನ್ನ ನಿರ್ದೇಶನದಲ್ಲಿ ಮಾಡಿದೆವು. ಭಾಗವತರಾಗಿ ಮೋರ್ಟು ವಿಶ್ವೇಶ್ವರ ಸೋಮಯಾಜಿಯವರು, ಮತ್ತು ಬೈಲೂರು ಸುಬ್ರಮಣ್ಯ ಐತಾಳರು ಇದ್ದರು. ಮದ್ದಲೆಗೆ ಸುರೇಶಣ್ಣಯ್ಯನೆ, ಮತ್ತು ಚಂಡೆವಾದನಕ್ಕೆ ನಮ್ಮ ಸುಬ್ರಾಯ ಮಲ್ಯರು. ಮೊದಲ ವರ್ಷ ವಿದ್ಯುನ್ಮತಿ ಕಲ್ಯಾಣ, ಅದರಲ್ಲಿ ಇಬ್ಬರು ಭಾಗವತರನ್ನು ಒಟ್ಟಿಗೇ ಪದ್ಯ ಹೇಳಿಸಿ ಅಪ್ಪಯ್ಯನ ಕಾಲದಲ್ಲಿ ತುಂಬಾ ಪ್ರಸಿದ್ಧವಾಗಿದ್ದ ದ್ವಂದ್ವ ಹಿಮ್ಮೇಳದ ಪ್ರಯತ್ನವೂ ನಡೆಯಿತು. ನಂತರದ ವರ್ಷಗಳಲ್ಲಿ ಪ್ರತೀ ವರ್ಷದ ದೀಪೋತ್ಸವದಂದು ಒಂದೊಂದು ಪ್ರಸಂಗವನ್ನು ಆಡುತ್ತಿದ್ದೆವು. ರತ್ನಾವತಿ ಕಲ್ಯಾಣ, ರುಕ್ಮಿಣಿ ಸ್ವಯಂವರ, ಕರ್ಣಾರ್ಜುನ ಕಾಳಗ, ಜಾಂಬವತಿ ಕಲ್ಯಾಣ, ಭೀಷ್ಮವಿಜಯ ಮುಂತಾದ ಹಲವು ಪ್ರಸಂಗಗಳನ್ನೂ ಮತ್ತು ನಾನೇ ಬರೆದ ಚಂದ್ರನಖಿ ಪ್ರಸಂಗವನ್ನೂ ಪದ್ಯ ಮತ್ತು ಅರ್ಥ ಬರೆದು ಕೊಟ್ಟು, ಕುಣಿತ ಕಲಿಸಿ, ಅರ್ಥವನ್ನು ಹೇಳಿಕೊಟ್ಟು ಮಾಡಿಸಿದೆ. ಮತ್ತೊಂದು ವರ್ಷ ನಾನೇ ಪದ್ಯ ಬರೆದು ಪುನಃ ರಚನೆಮಾಡಿದ ಶಂಕರನಾರಾಯಣ ಮಹಾತ್ಮೆಯನ್ನು, ಜಾತ್ರೆಯ ಸಮಯದಲ್ಲಿ ಆಡಿದೆವು. ಆಗ ನಮ್ಮ ಭಾವ ಲಕ್ಷ್ಮೀನಾರಾಯಣ ಉಡುಪರೇ ದೇವಸ್ಥಾನದ ಮುಕ್ತೇಸರರಾದ್ದರಿಂದ ನಮಗೆ ಪ್ರತೀವರ್ಷ ಒಂದು ಆಟವನ್ನು ಆಡಲು ಅವಕಾಶಮಾಡಿಕೊಡುತ್ತಿದ್ದರು. ಹಟ್ಟಿಯಂಗಡಿ, ಕಡಿಯಾಳಿ,  ಅಂಬಲಪಾಡಿ, ಕುಂಭಾಶಿಯಲ್ಲಿ  ತೀರ್ಥಹಳ್ಳಿಯ ಹತ್ತಿರದ  ಭೀಮನಕಟ್ಟೆ ಮಠದಲ್ಲಿ, ಕೋಟೇಶ್ವರದಲ್ಲಿ ಕೆಲವು ಪ್ರದರ್ಶನಗಳನ್ನು ನೀಡಿದೆವು. ವಿದ್ಯುನ್ಮತಿ ಕಲ್ಯಾಣ ದ ಒಂದು ವಿಡಿಯೋವನ್ನು ನನ್ನ ಸ್ನೇಹಿತರ ಸಹಾಯದಿಂದ ಮಾಡಿದ್ದಾಯಿತು. ನಂತರ ಸುಮಾರು ಇಪ್ಪತ್ತೈದು ವರ್ಷಗಳ ನಂತರ ಪುನಹ ನನ್ನ ಮದುವೆಯ ಬೆಳ್ಳಿಹಬ್ಬದ ನೆನಪಿಗಾಗಿ ಸದಾನಂದ ವೈದ್ಯರ ಉಮೇದಿನಲ್ಲಿ ಪುನಹ ಹಿಂದೆ ಪಾತ್ರವನ್ನು ಮಾಡಿದವರನ್ನೇ ಕರೆಸಿ, ಅದೇ ಪಾತ್ರವನ್ನು ಅವರವರಿಂದಲೇ ಮಾಡಿಸಿ ಒಂದು ಪ್ರದರ್ಶನವನ್ನು ಶಂಕರನಾರಾಯಣ ಜಾತ್ರೆಯ ಸಮಯದಲ್ಲಿ ಮಾಡಿ, ಸಂತೋಷಪಟ್ಟೆವು.

ಎಸ್ ವಿ ಭಟ್ಟರು ಒಮ್ಮೆ ಸಿಕ್ಕಿದಾಗ ಅದೂ ಇದೂ ಮಾತಾಡುತ್ತ ನಾನೂ ಶ್ರೀಧರನೂ ಒಟ್ಟಿಗೇ ಇದ್ದವರು ಅಂದರು. ನಾನೂ, “ನಾನೂ, ಉಡುಪರು ಇದ್ದಹಾಗೆ” ಎಂದೆ. ಅವರು ತಟ್ಟನೆ "ಅವನು ನನ್ನ ತಂಗಿಯನ್ನು ಹಾರಿಸಿಕೊಂಡು ಹೋಗಿ ಮದುವೆಯಾದದ್ದಲ್ಲ ಗೊತ್ತಾಯ್ತ? ಅಂದರು. ನನಗೆ ಅದರ ಅರ್ಥವಾಗಿ ನಕ್ಕು “ನಾನೂ ಹಾಗೇನೂ ಉಡುಪರ ತಂಗಿಯನ್ನು ಹಾರಿಸಿಕೊಂಡು ಮದುವೆಯಾದದ್ದಲ್ಲ ಮಾರಾಯ್ರೆ. ನನ್ನ ಜೊತೆ ಅವರಿದ್ದಿದ್ದು ನನ್ನ ಗುಣ ಸ್ವಭಾವ ತಿಳಿದು, ಹಿರಿಯರು ನಿಶ್ಚಯಿಸಿಯೇ ಆದ ಮದುವೆಯೇ ಅಲ್ಲವೇ? ಅಂದೆ. ಅವರು “ಯಾರಿಗೆ ಗೊತ್ತು? ಯಾವ ಹುತ್ತದಲ್ಲಿ ಯಾವ ಹಾವು ಇರುತ್ತದೆ ಅಂತ” ಅನ್ನಬೇಕೆ?.

ಮದುವೆಯಾಗಿ ಒಂದು ವರ್ಷದಲ್ಲಿ ಅನ್ನಪೂರ್ಣೆ ಗರ್ಭಿಣಿಯಾದಳು. ಆದರೆ ಅದೇ ಸಮಯದಲ್ಲಿ ಅವಳ ಅಮ್ಮನಿಗೆ ಆರೋಗ್ಯ ಸರಿ ಇಲ್ಲದೇ ನಮ್ಮ ಕುಂಜಿಬೆಟ್ಟು ವಸತಿಗೃಹದಲ್ಲಿ ನಮ್ಮ ಮನೆಯಲ್ಲಿ ಇದ್ದವರು ಕಾಯಿಲೆಯು ಉಲ್ಬಣಗೊಂಡು ಆಸ್ಪತ್ರೆಯಲ್ಲಿ ನಿಧನರಾದರು. ಆ ದುಃಖ ಮತ್ತು ಅವರ ಉತ್ತರಕ್ರಿಯೆಯಲ್ಲಿ ತೊಡಗಿಸಿಕೊಂಡದ್ದರಿಂದಲೋ ಏನೋ ಆರು ತಿಂಗಳಾಗುತ್ತಾ ಬರುವಾಗ ಮಗು ಹೊಟ್ಟೆಯಲ್ಲಿಯೇ ಸತ್ತುಹೋಗಿ ತೆಗೆಸಬೇಕಾಯಿತು. ಎರಡು ವರ್ಷದಲ್ಲಿ ಮತ್ತೆ ಗರ್ಭಿಣಿಯಾದಳು. ಮೊದಲನೆ ಅನುಭವದಿಂದ ತುಂಬಾ ಎಚ್ಚರಿಕೆಯಿಂದ ಇದ್ದು ಮಣಿಪಾಲದಲ್ಲಿ ಡಾಕ್ಟರ್ ಉರಾಳರಿಗೆ ತಿಂಗಳು ತಿಂಗಳು ತೋರಿಸುತ್ತಿದ್ದು. ಅವಳನ್ನು ಉಡುಪಿಯಲ್ಲೇ ಇರಿಸಿಕೊಂಡೆ. ಹೆರಿಗೆಯ ನೋವು ಕಾಣಿಸಿಕೊಂಡಾಗ ನಮ್ಮ ಆಫೀಸಿನ ಜೀಪ್ ಡ್ರೈವರ್ ವಿಜಯನಿಗೆ ಹೇಳಿ, ಅವನ ಸಹಾಯದಿಂದ ಮಣಿಪಾಲಕ್ಕೆ ಸೇರಿಸಿ, ಅಲ್ಲಿ ಹೆರಿಗೆಯಾಯಿತು.

ಎಲ್ಲ ಸುಗಮವಾಗಿ ಆಯಿತು ಎಂದುಕೊಳ್ಳುವಾಗಲೇ ಮಧ್ಯರಾತ್ರಿಯ ಹೊತ್ತಿಗೆ, ಮತ್ತೆ ರಕ್ತಸ್ರಾವ ಶುರುವಾಗಿ ಡಾಕ್ಟರ್ ರಿಲ್ಲದೇ ಚಡಪಡಿಸುವಂತಾಯಿತು. ನಾನು “ಬೇರೆ ಡಾಕ್ಟರ್ ಬೇಡ. ಉರಾಳರಿಗೆ ಹೇಳಿ. ಅವರೇ ಬರಬೇಕು” ಅಂತ ಒತ್ತಾಯಿಸಿ ವಿನಂತಿಸಿಕೊಂಡೆ. ಆಗ ರಾತ್ರಿ ಒಂದು ಗಂಟೆಯ ಮೇಲೆ ಆಗಿರಬಹುದು. ಡಾಕ್ಟರ್ ಉರಾಳರಿಗೆ ಫೋನ್ ಮಾಡಿ ಅವರು ಬಂದು ಪರೀಕ್ಷೆ ಮಾಡಿದರು. ಕೂಡಲೇ ತುರ್ತಾಗಿ ಎರಡು ಬಾಟಲಿ ಫ್ರೆಶ್ ರಕ್ತ ಬೇಕು ಎಂದು ಬೇಡಿಕೆ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ