ಶುಕ್ರವಾರ, ನವೆಂಬರ್ 3, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 45

ಆ ಮಧ್ಯ ರಾತ್ರಿಯಲ್ಲಿ ಫ್ರೆಶ್ ರಕ್ತಕ್ಕೆ ಎಲ್ಲಿಗೆ ಹೋಗುವುದು?. ಒಮ್ಮೆ ನನ್ನ ಸ್ನೇಹಿತರೆಲ್ಲ ಕಣ್ಣುಮುಂದೆ ಬಂದುಹೋದರು. ಆಗ ರಕ್ತವನ್ನು ಅಲ್ಲಿಯೇ ಪಡೆದು ಆಗಲೇ ಪರೀಕ್ಷೆಮಾಡಿ ಆಗಲೇ ಕಾಯಿಲೆಯವರಿಗೆ ಕೊಡುತ್ತಿದ್ದರು ಅಂತ ನೆನಪು. ಕಡೆಗೆ ನಾನೇ ಸಿದ್ಧನಾದೆ. ಮತ್ತೊಂದು ಬಾಟಲಿ ಅವಳ ದೊಡ್ಡಅತ್ತಿಗೆ ಗಾಯತ್ರಿಯವರು ಅವಳ ಆರೈಕೆಗೆಂದು ಬಂದವರು ಕೊಟ್ಟರು. ಮರುದಿನ ಕುಮಾರ ಉಡುಪರೂ ಒಂದು ಬಾಟಲಿ ರಕ್ತ ಕೊಡಬೇಕಾಯಿತು. ಏಳನೇ ದಿನ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಾಣಂತನವನ್ನು ಅವಳ ಅತ್ತಿಗೆಯ ಮುತುವರ್ಜಿಯಲ್ಲಿ ಶಂಕರನಾರಾಯಣದಲ್ಲಿ ಮುಗಿಸಿದ್ದಾಯಿತು. ಅನ್ನಪೂರ್ಣೆಯ ಹೆಸರಿನ ಮೊದಲ ಎರಡು ಅಕ್ಷರ ಮತ್ತು ನನ್ನ ಹೆಸರಿನ ಕೊನೆಯ ಎರಡು ಅಕ್ಷರವನ್ನು ಸೇರಿಸಿ “ಅನ್ವೇಷ” ಎಂದು ನಾಮಕರಣವೂ ದೇವಸ್ಥಾನದಲ್ಲಿ ಮಾಡಿದ್ದಾಯಿತು. ಮಗನ ಬಾಲಲೀಲೆಯನ್ನು ನೋಡುತ್ತಾ ಕಾಲ ಹೋದದ್ದೇ ತಿಳಿಯಲಿಲ್ಲ.

ಶಂಕರನಾರಾಯಣದ ಪೇಟೆಯಲ್ಲಿ ಆಗ ಮೂರ್ತಿ ಎನ್ನುವವರೊಬ್ಬರು ಇದ್ದರು. ನಾನು ನೋಡುವಾಗ ಅವರಿಗೆ ನಿಲ್ಲಲು ಕಾಲಿನಲ್ಲಿ ತ್ರಾಣವಿಲ್ಲದ್ದರಿಂದ ಕುಳಿತುಕೊಂಡೇ ಕೈಗಳ ಸಹಾಯದಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆವಳಿಕೊಂಡು ಹೋಗುತ್ತಿದ್ದರು. ಎಲ್ಲಿ ವಿಶೇಷ ಊಟವಾದರೂ ಅವರು ಹೋಗುತ್ತಿದ್ದರು. ಆದರೆ ಅವರು ಆ ಮನೆಯವರು ಕರೆಯದೇ ಊಟಕ್ಕೆ ಮನೆಯ ಒಳಗೆ ಹೋಗುತ್ತಿರಲಿಲ್ಲವಂತೆ. ಸುಮ್ಮನೆ ದೂರದಲ್ಲಿ ಕುಳಿತಿರುತ್ತಿದ್ದರು. ಊಟ ಸಿಗದಿದ್ದರೆ ಹಾಗೆಯೇ ಉಪವಾಸ. ರಾತ್ರಿ ದೇವಸ್ಥಾನದಲ್ಲೋ ಅಥವಾ ಯಾವುದಾದರೂ ಅಂಗಡಿಯ ಜಗುಲಿಯಲ್ಲೋ ಮಲಗುತ್ತಿದ್ದರು. ಊಟದಲ್ಲಿ ಸಿಕ್ಕಿದ ದಕ್ಷಿಣೆ ಮತ್ತು ಯಾರಾದರೂ ಪಾಪ ಅನ್ನಿಸಿ ಕೊಟ್ಟ ಹಣವನ್ನು ಒಟ್ಟು ಮಾಡಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಒಂದು ಅಕೌಂಟ್ ಓಪನ್ ಮಾಡಿ, ಅದಕ್ಕೆ ಜಮಾ ಮಾಡಿ ಇಡುತ್ತಿದ್ದರಂತೆ. ಯಾರ ಹತ್ತಿರವೂ ಮಾತಾಡುವವರಲ್ಲ. ಅವರು ಸಾಯುವಾಗ ಅವರಲ್ಲಿ ತುಂಬಾ ಹಣವಿತ್ತು ಎಂದು ಜನ ಆಡಿ ಕೊಳ್ಳುತ್ತಿದ್ದರು. ಅವರು ನಮ್ಮನ್ನು ನೋಡುತ್ತಿದ್ದ ರೀತಿ, ಆ ತೀಕ್ಷ್ಣವಾದ ಕಣ್ಣುಗಳು, ಅವರ ಆ ಕಪ್ಪುಗಡ್ಡವೇ ತುಂಬಿಕೊಂಡ ಮುಖ,  ನನಗೆ ಇಂದೂ ನೆನಪಿನಿಂದ ಮರೆಯಾಗಿಲ್ಲ.

ಹಾಲಾಡಿಯಲ್ಲಿ ಶೀನ ಭಂಡಾರಿ ಎನ್ನುವವನು, ನಾನು ಮನೆಗೆ ಹೋಗುವಾಗ ದಾರಿಯಲ್ಲಿ ಯಾವಾಗಾದರೊಮ್ಮೆ ಸಿಗುತ್ತಿದ್ದ. ನಾನು ಚಿಕ್ಕಂದಿನಲ್ಲಿರುವಾಗ ಅವನ ಅಂಗಡಿಗೆ ಹೋಗಿ ಕ್ಷೌರ ಮಾಡಿಸಿಕೊಳ್ಳುತ್ತಿದ್ದೆ. ಅಪ್ಪಯ್ಯ ಇರುವಾಗ ಹೇಳಿಕಳಿಸಿದರೆ ನಮ್ಮ ಮನೆಗೆ ಬಂದು ಎಲ್ಲರಿಗೂ ಕ್ಷೌರ ಮಾಡುತ್ತಿದ್ದ. ಪ್ರತೀ ವರ್ಷ ಚೌತಿಹಬ್ಬದ ದಿನ ನಮ್ಮ ಮನೆಗೆ ಬಂದು ಅಮ್ಮನ ಹತ್ತಿರ “ಅಮ್ಮಾ ನಾನು ನಿಮ್ಮ ಮನೆಯ ಹಕ್ಕಿನ ಭಂಡಾರಿ. ನನಗೆ “ಮರ್ಯಾದೆ” ಕೊಡುವುದನ್ನು ಬಿಡಬಾರದು ಎಂದು ಕಡಬು ಪಂಚಕಜ್ಜಾಯ ಮತ್ತು ಅಕ್ಕಿ ಕಾಯಿ ಅಂತ ಪಡೆದು ಹೋಗುತ್ತಿದ್ದವನು”. ಅವನು ಸಿಕ್ಕಿದಾಗ “ಅಯ್ಯಾ, ಈಗ ಎಲ್ಲಿದ್ರಿ? ಅನ್ನುವನು. ಅವನು ಆಗಲೇ ಮುದುಕನಾಗಿದ್ದ. ಹಲ್ಲು ಉದುರಿತ್ತು. ಮುಖವೆಲ್ಲ ನೆರಿಗೆಗಟ್ಟಿತ್ತು. ತುಂಬಾ ಕುಡಿತದ ಚಟ ಬೇರೆ. ನಾನು “ಉಡುಪಿಯಲ್ಲಿ” ಎಂದರೆ, “ಆಯ್ಲಿ, ನಿಮ್ಮ ಅಪ್ಪಯ್ಯ ಎಷ್ಟ್ ಒಳ್ಳೇವ್ರ್ ಆಗಿದ್ರ್. ಹಾಂಗಾಪ್ಕೋಯಿ ಮಕ್ಲಿಗೆಲ್ಲ ಒಂದ್ ನೆಲೆಯಾಯ್ತು”  ಎಂದು ಹರಸಿದ, ಆ ಬಾಯಿಯಲ್ಲಿಯೇ “ಅಯ್ಯ ಒಂದು ಹತ್ ರುಪಾಯ್ ಕೊಡಿನಿ” ಎನ್ನುತ್ತಿದ್ದ.

ನಾನು ಮೊದಲಿನಿಂದಲೂ ಭಿಕ್ಷುಕರಿಗೆ ಹಣ ಕೊಡುವ ವಿಚಾರದಲ್ಲಿ ಹಿಂದೆ. ಹಣ ಕೊಟ್ಟರೆ ಅದು ದಾನವಲ್ಲ, ಅದರಿಂದ ಅವರ ದೀನತೆಯನ್ನು ಇನ್ನೂ ಹೆಚ್ಚುವಂತೆ ಮಾಡಿದ ಹಾಗೆ. ಅವರನ್ನು ಕೆಡಿಸಿದಂತೆ. ಸಹಾಯ ಮಾಡುವುದಾದರೆ ಜೀವನವನ್ನೇ ಬದಲಿಸುವಷ್ಟು ಮಾಡಬೇಕು ಎನ್ನುವವ. ಅಲ್ಲದೇ ಇವನು ಸಾರಾಯಿ ಕುಡಿಯಲಿಕ್ಕೆ ಹಣ ಕೇಳುವುದು. ಆದರೂ ಒಂದೆರಡು ಬಾರಿ ಹೋಗಲಿ ಪಾಪ ಎಂದು ಕೊಟ್ಟಿದ್ದೆ. ಅವನು “ಒಳ್ಳೇದಾಗ್ಲಿ” ಅನ್ನುತ್ತಿದ್ದ. ಆದರೆ ಒಂದೊಂದು ಸಾರಿ ಅವನು ನಾನು ಕೊಟ್ಟ ಹಣವನ್ನು ಸಾರಾಯಿ ಅಂಗಡಿಗೆ ಹಾಕುತ್ತಾನಲ್ಲ ಅನ್ನಿಸಿ ನಾನು “ಹಣ ಕೊಡುವುದಿಲ್ಲ, ನನ್ನ ಹತ್ರ ಇಲ್ಲ” ಅಂದರೆ ಅವನು “ಆಯ್ಲಿ. ದೇವರು ಹಾಂಗೆ ಬುದ್ದಿ ಕೊಡ್ಲಿ” ಎಂದು ಶಾಪ ಹಾಕಿ ಹೋಗುತ್ತಿದ್ದ. ನನಗೆ ಪೆಚ್ಚೆನಿಸುತ್ತಿತ್ತು. ಆದ್ದರಿಂದ ಹಾಲಾಡಿಯಲ್ಲಿ ಬಸ್ಸಿಗೆ ಕಾಯುವಾಗ, ಅವನು ಎದುರಲ್ಲಿ ಎಲ್ಲಾದರೂ ಕಂಡರೆ ಅವನನ್ನು ಕಂಡರೂ ಕಾಣದವರಂತೆ ಎತ್ತಲೋ ನೋಡಿಕೊಂಡು ಇರಬೇಕಾಗುತ್ತಿತ್ತು.

ಮಗನನ್ನು ಕುಂಜಿಬೆಟ್ಟಿನಲ್ಲಿ ಒಂದು ಶಿಶುವಿಹಾರಕ್ಕೆ ಸೇರಿಸಿದೆವು. ಅವನು ಮೊದಲು ಶಾಲೆಗೆ ಹೋಗಲು ತಕರಾರು ಮಾಡಿದ್ದರೂ, ನಂತರ ಅಲ್ಲಿಯ ಜೊತೆಗಾರರ ಸಂಗಡ ಸೇರಿ ಆ ವಾತಾವರಣಕ್ಕೆ ಹೊಂದಿಕೊಂಡ. ಆಗ ನಾನು ಕುಂಜಿಬೆಟ್ಟಿನಲ್ಲಿ ಮಣಿಪಾಲ ರಸ್ತೆಯ ಈಚೆಬದಿಯ ನಮ್ಮ ವಸತಿಗೃಹಕ್ಕೆ ನನ್ನ ಮನೆಯನ್ನು ಬದಲಾಯಿಸಿದ್ದೆ. ರಸ್ತೆಯ ಆಚೆಯ ಬದಿಯಲ್ಲಿಯೇ ಅವನು ಹೋಗುವ ಶಿಶುಮಂದಿರವಿತ್ತು. ಒಮ್ಮೆ ನನಗೆ ಆಫೀಸಿನ ಕೆಲಸದ ಮೇಲೆ ಮಂಗಳೂರಿಗೆ ಹೋಗಬೇಕಾಗಿದ್ದು, ಅವನನ್ನು ಸ್ವಲ್ಪ ಬೇಗ ಕರೆದುಕೊಂಡು ಹೋಗಿ ಬಿಡಬೇಕು ಎಂದು ಮುಂಚಿನ ದಿನ ಹೆಂಡತಿಯೊಂದಿಗೆ ಮಾತಾಡಿದ್ದೆ. ಆದರೆ ಮರುದಿನ ಸ್ವಲ್ಪ ತಡವಾಗಿ ಎದ್ದುದರಿಂದ ಗಡಿಬಿಡಿಯಲ್ಲಿ ಅವನಿಗೆ ಸ್ನಾನಮಾಡಿಸಿ ತಿಂಡಿಕೊಟ್ಟು ಡ್ರೆಸ್ ಮಾಡಿ ನಾನೂ ಸಿದ್ಧನಾಗಿ ಹೊರಡಬೇಕು ಅನ್ನುವಾಗ, ನೋಡಿದರೆ ಮಗ ಎಲ್ಲಿಯೂ ಕಾಣುವುದಿಲ್ಲ?. ಕೂಗಿ ಕರೆದಾಯಿತು. ಅಕ್ಕಪಕ್ಕದ ಮನೆಯಲ್ಲಿ ಹೋಗಿ ಕೇಳಿಯಾಯಿತು. ಹಾಗಾದರೆ ಎಲ್ಲಿಗೆ ಹೋಗಿರಬಹುದು? ಎಂದು ಕೊಳ್ಳುತ್ತಾ ರಸ್ತೆಯ ಹತ್ತಿರ ಹುಡುಕಿಕೊಂಡು ಬಂದರೆ, ಇವನ ಶಿಶುವಿಹಾರದ ಮನೆಯವರು ಇವನ ಕೈ ಹಿಡಿದು ಕರೆದುಕೊಂಡು ಬರುತ್ತಾ “ಹ್ವಾಯ್ ಮಗ ಇಲ್ಲಿಗೆ ಬಂದನಲ್ಲಾ? ಸ್ವಲ್ಪ ಸರಿಯಾಗಿ ನೋಡಿಕೊಳ್ಳಬಾರದಾ? ಹೀಗೆ ಮಗನನ್ನು ಒಬ್ಬನನ್ನೇ ರಸ್ತೆದಾಟಿ ಬರಲು ಬಿಟ್ಟದ್ದಾ?” ಎಂದು ಕೂಗಿ ಹೇಳುತ್ತಿದ್ದಾರೆ. ಇವನು ನಮಗೆ ತಡವಾಗುತ್ತದೆ ಎಂದು ಅವಸರಮಾಡಿದ್ದರಿಂದ ಅವನಷ್ಟಕ್ಕೆ ಒಬ್ಬನೇ ರಸ್ತೆದಾಟಿ ಶಿಶುಮಂದಿರಕ್ಕೆ ಹೋಗಿಬಿಟ್ಟಿದ್ದ.

 (ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ