ಶುಕ್ರವಾರ, ನವೆಂಬರ್ 17, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 58

ಸಾಗರದ ಹತ್ತಿರದ ದೊಂಬೆ ಶಿವರಾಮಯ್ಯ ಎನ್ನುವವರಲ್ಲಿ ಸಿರಿವಂತೆಯ ತಾಳಮದ್ದಲೆಯಲ್ಲಿ ರೆಕಾರ್ಡ್ ಮಾಡಿದ ಅಪ್ಪಯ್ಯ ಮತ್ತು ನಾವಡರು, ಕಡತೋಕರು, ದಾಸಭಾಗವತರು ಇರುವ ಕೆಲವು ಕ್ಯಾಸೆಟ್ ಗಳು ಇವೆ ಎಂದು ಗೊತ್ತಾಗಿ, ಜೋಯಿಸರು ಅವರ ಮನೆಯನ್ನು ಹುಡುಕಿಕೊಂಡು ಹೋಗಿ ತಂದು ಕೊಟ್ಟರು. ಅದನ್ನೂ  ಎಂಪಿತ್ರಿಗೆ ಪರಿವರ್ತಿಸಿ ಅವರಿಗೆ ಒಂದು ಪ್ರತಿ ಕೊಟ್ಟು ನಾವೂ ಇಟ್ಟುಕೊಂಡೆವು.  ಈ ಮಧ್ಯದಲ್ಲಿ ಮತ್ತೊಮ್ಮೆ ನಾನೂ ಮತ್ತು ಜೋಯಿಸರು ಒಟ್ಟಾಗಿ ಕೋಟದ ಮಂಜುನಾಥ ಮಯ್ಯರ ಮನೆಗೆ, ಮಂಕಿ ಕೇಶವ ಮಯ್ಯರ ಮನೆಗೆ ಹೋಗಿ ಅವರ ಸಂಗ್ರಹದಲ್ಲಿದ್ದ ಕೆಲವು ಆಟದಲ್ಲಿ ನೇರವಾಗಿ ಅವರು ರೆಕಾರ್ಡ್ ಮಾಡಿದ ಕ್ಯಾಸೆಟ್ ಗಳನ್ನು ಪಡೆದುಕೊಂಡು ಬಂದೆವು. ಒಮ್ಮೆ ಸಾಗರಕ್ಕೆ ಅವರ ಕಾರಿನಲ್ಲಿ ಹೋಗಿ ಪ್ರಭಾಕರ್ ಎನ್ನುವವರಲ್ಲಿಗೆ, ಅಲ್ಲಿಂದ ನನ್ನ ಅಪ್ಪಯ್ಯನ ಶಿಷ್ಯರೇ ಆದ ಕೆ.ಜಿ. ರಾಮ ರಾವ್ ರವರಲ್ಲಿಗೆ ಹೋಗಿ, ಅವರು ಕೊಟ್ಟ ಕೆಲವು ಕ್ಯಾಸೆಟ್ ಗಳನ್ನು ತಂದದ್ದಾಯಿತು. ಜೋಯಿಸರು ಬೆಂಗಳೂರು, ಬೊಂಬಾಯಿ, ಕಾಸರಗೋಡು ಅಂತ ಯಾರ ಯಾರ ಹತ್ತಿರ ಹಳೆಯ ಸಂಗ್ರಹ ಇದೆ ಅಂತ ಕಿವಿಗೆ ಬಿತ್ತೋ, ಅವರನ್ನೆಲ್ಲಾ ಫೋನಿನಲ್ಲಿ ಸಂಪರ್ಕಿಸಿ, ಹಲವಾರು ಹಳೆಯ ಸಂಗ್ರಹಗಳನ್ನು ಪಡೆದು ನನಗೆ ಕಳಿಸಿಕೊಟ್ಟರು. ಹೀಗೆಂದ ಮಾತ್ರಕ್ಕೆ ಎಲ್ಲವೂ ನನ್ನ ಬಳಿ ಇದೆ ಎಂದು ಅರ್ಥವಲ್ಲ. ಅನೇಕರು ನಾವು ಅವರಲ್ಲಿದ್ದ ಸಂಗ್ರಹವನ್ನು ಕೇಳಲು ಹೋದಾಗ, ಸಹಕರಿಸದೇ, ಮತ್ತೆ ಬನ್ನಿ ಈಗ ಪುರಸೊತ್ತು ಇಲ್ಲ, ಅದನ್ನು ಕೊಡಲು ಆಗುವುದಿಲ್ಲ. ಎಂದು ಅವರದನ್ನು ಕೊಡದೇ, ನಮ್ಮಲ್ಲಿರುವುದನ್ನು ಕೇಳಿ ತೆಗೆದುಕೊಂಡು ಹೋದವರೂ ಇದ್ದಾರೆ. ಇಷ್ಟಾದರೂ ನಮ್ಮಲ್ಲಿ ಎಲ್ಲವೂ ಇದೆ ಎಂಬ ಅಹಂಕಾರ ನನಗಿಲ್ಲ. ಅದು ಬಿಂದು ಮಾತ್ರಾ ಆಗಿರಬಹುದು. ಅಲ್ಲಲ್ಲಿ ದಾಖಲೆಗಳು ಅಡಗಿ ಕುಳಿತಿದ್ದು ಅದು ಸಿಂಧುವಷ್ಟಿರಬಹುದು. ನಮಗಿಂತಲೂ ಹೆಚ್ಚು ಸಂಗ್ರಹ ಇರುವವರು ಇರಬಹುದು.

ಮಂಗಳೂರಿನಲ್ಲಿ ಲೆಕ್ಕಾಧಿಕಾರಿಯಾಗಿ ಕೆಲಸ ನಿರ್ವಹಿಸುವಾಗ ನಡೆದ ಒಂದು ಘಟನೆ ನೆನಪಾಗುತ್ತದೆ. ನನ್ನ ಜೀವನದಲ್ಲಿ ನಡೆದ ಇಂತಹ ಘಟನೆಗಳನ್ನು ಹೇಳದೇ ಬಿಟ್ಟರೆ, ಈ ನನ್ನ ನನ್ನೊಳಗೆ ಪೂರ್ಣವಾಗದೇ ಪ್ರಾಮಾಣಿಕವಾಗದೇ ಹೋಗುವುದರಿಂದ ಹೇಳಿ ಬಿಡುತ್ತೇನೆ. ನಮಗೊಬ್ಬರು, ಆಫೀಸಿನ ಕೇಸುಗಳನ್ನು ನೋಡಿಕೊಳ್ಳುವ ಕಂಪೆನಿಯ ವಕೀಲರಿದ್ದರು. ಅವರು ಆಗಲೇ ಮುದುಕರಾಗಿ, ವಕೀಲಿ ವೃತ್ತಿಯಿಂದ ನಿವೃತ್ತರಾಗಿದ್ದು, ಅವರ ಸಹಾಯಕರೊಬ್ಬರ ನೆರವಿನಿಂದ ಕೇಸು ನಡೆಸುತ್ತಿದ್ದರು. ನಮ್ಮ ಕಂಪೆನಿಯ ಆ ಕಛೇರಿಯಲ್ಲಿ ವಿವಾದಾತ್ಮಕವಾದ ತುಂಬಾ ಕೇಸುಗಳು ಕೋರ್ಟಿನಲ್ಲಿ ಇದ್ದು, ಪ್ರಕರಣದ ವಿಚಾರಣೆಯ ಸಮಯವನ್ನೂ ಸರಿಯಾಗಿ ನೋಡಿ ಅವರಿಗೆ ತಿಳಿಸಲು ಸಾಧ್ಯವಾಗುತ್ತಿರಲಿಲ್ಲ.

ಒಂದುದಿನ ನಾನು ಆಫೀಸಿನಲ್ಲಿ ಇದ್ದಾಗ, ಕೋರ್ಟಿನಿಂದ ಒಬ್ಬ ಅಮೀನ್ ಬಂದು, ನ್ಯಾಯಾಲಯದ ಒಂದು ಪ್ರಕರಣಕ್ಕೆ ಸಂಬಂಧಿಸಿದ ಪಿರ್ಯಾದುದಾರರ ಮೊತ್ತವನ್ನು ನ್ಯಾಯಾಲಯದ ಆದೇಶದಂತೆ ಪಾವತಿಸದೇ ಇರುವುದರಿಂದ, ನಿಮ್ಮ ಆಫೀಸಿನ ಸೊತ್ತನ್ನು ಹರಾಜು ಹಾಕಬೇಕಾಗುತ್ತದೆ. ಇಲ್ಲದಿದ್ದಲ್ಲಿ ಇನ್ನು ಇಪ್ಪತ್ತನಾಲ್ಕುಗಂಟೆಯ ಒಳಗೆ ಎರಡೂವರೆ ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಕೋರ್ಟಿಗೆ ಪಾವತಿಸಬೇಕು ಎಂದು ಕೋರ್ಟಿನಿಂದ ಜಾರಿಮಾಡಿದ ನೋಟೀಸನ್ನು ಕೊಟ್ಟ. ಆಗ ನಾನು ಆ ಹುದ್ದೆಗೆ ವರದಿ ಮಾಡಿಕೊಂಡು ಹೆಚ್ಚುದಿನವೂ ಆಗಿರಲಿಲ್ಲ. ಪ್ರಕರಣ ಏನೆಂದು ಗೊತ್ತಿಲ್ಲದ್ದರಿಂದ ಗಾಬರಿಯಾಗಿ, ಅದಕ್ಕೆ ಸಂಬಂಧಿಸಿದ ವಿವರದ ಕಡತವನ್ನು ಗುಮಾಸ್ತರಿಂದ ತರಿಸಿದೆ. ವಕೀಲರಿಗೆ ಫೋನ್ ಮಾಡಿದೆ. ಅವರು ಸಿಗಲಿಲ್ಲವಾಗಿ ಅವರ ಮನೆಗೇ ಓಡಿದೆ. ಅವರು ಕೂಲಾಗಿ “ಹೌದು ಅದೊಂದು ಮಿಸ್ಟೇಕ್ ಆಗಿದೆ. ಹಣಕಟ್ಟಲೇ ಬೇಕಾಗುತ್ತದೆ. ಸರಿಯಾದ ಸಮಯಕ್ಕೆ ನಿಮ್ಮಿಂದ ವಿವರ ಸಿಗಲಿಲ್ಲವಾದ್ದರಿಂದ ಕೋರ್ಟಿನಲ್ಲಿ ವಾದಿಸಲು ಸಾಧ್ಯವಾಗಿರಲಿಲ್ಲ. ನಾವು ತುಂಬಾ ಪ್ರಯತ್ನ ಪಟ್ಟೆವು. ಆದರೂ ಹೀಗೆ ತೀರ್ಮಾನವಾಯಿತು” ಎಂದರು.

ಅಷ್ಟು ಹಣವನ್ನು  ಒಮ್ಮೆಲೇ ಕಟ್ಟದಿದ್ದರೆ ನಮಗೆ ಗಂಡಾಂತರ. ಎಲ್ಲಿಂದ ಕಟ್ಟುವುದು? ನಾನು ಆಡಳಿತ ಕಛೇರಿಗೆ ಓಡಿದೆ. ಸಂಬಂಧಿಸಿದವರನ್ನು ಮಾತಾಡಿಸಿದೆ. ಹೀಗಾಗಿದೆ ಏನು ಮಾಡುವುದು?. ಹಣ ಕಟ್ಟಬೇಕು ಇಲ್ಲದಿದ್ದರೆ ನಮ್ಮ ಆಫೀಸಿನ ಸೊತ್ತುಗಳನ್ನು ಹರಾಜು ಹಾಕುತ್ತಾರಂತೆ ಎಂದೆ. ಅವರು ಹಣ ಪಾವತಿಸಲು ಅನುಮತಿ ಬೇಕು ಸಾಹೇಬರನ್ನು ನೋಡಿ ಹೇಳಿ ಎಂದರು. ಅಲ್ಲಿಗೂ ನೋಟ್ ಹೋಯಿತು. ನನ್ನನ್ನು ಕರೆಸಿದರು. ಅವರು ಮೊದಲೇ ನಮ್ಮ ಬಾಸು, ಎಂ.ಡಿ. ಕೇಳಬೇಕೇ? ಅದು ಹೇಗಾಯಿತು?. ನಿರ್ಲಕ್ಷಕ್ಕೆ ಕಾರಣ ಯಾರು? ಅವರ ಮೇಲೆ ಶಿಸ್ತು ಕ್ರಮತೆಗೆದುಕೊಂಡು ಈಗಲೇ ಅವರನ್ನು ಸಸ್ಪೆಂಡ್ ಮಾಡಿಬಿಡಿ” ಎಂದು ಹಾರಾಡಿಬಿಟ್ಟರು. ನನಗೆ ಹೆದರಿಕೆಯಾಯಿತು. ಅಷ್ಟಕ್ಕೇ ಸುಮ್ಮನಾಗದ ಅವರು, ನನ್ನ ಮೇಲಿನ ಕಛೇರಿಯ ಎಲ್ಲ ಅಧಿಕಾರಿಗಳನ್ನೂ ಆಗಲೇ ಫೋನ್ ಮಾಡಿ ಚೇಂಬರಿಗೆ ಕರೆಸಿದರು. ಅವರ ಎದುರಿನಲ್ಲಿ, ನನ್ನನ್ನು ತೋರಿಸಿ “ನೋಡಿ ಇವರ ಕಛೇರಿಯ ಸೊತ್ತುಗಳನ್ನು ಹರಾಜು ಹಾಕುತ್ತಾರಂತೆ. ಕಂಪೆನಿಗೆ ಇವರಿಂದ ಎರಡುವರೆ ಲಕ್ಷ ನಷ್ಟವಾಗಿದೆಯಂತೆ. ಅದಕ್ಕೆ ಯಾರು ಜವಾಬ್ದಾರಿ? ಈಗಲೇ ಈ ಪ್ರಕರಣದ ತನಿಖೆಯಾಗಲೇಬೇಕು. ತಪ್ಪಿತಸ್ಥರು ಯಾರು? ಎಂದು ಹುಡುಕಿ ವರದಿ ಮಾಡಬೇಕೆಂದೂ ಅಲ್ಲಿಯೇ ಪಾರ್ಮಾನು ಹೊರಡಿಸಿಬಿಟ್ಟರು. ನನ್ನ ಆಫೀಸಿನ ವಿಷಯವಾದ್ದರಿಂದ ಮೊದಲಿಗೆ ನಾನೇ ಬಲಿಪಶುವಾಗಬೇಕಾಯಿತು. ಹೇಗಾದರೂ ಮಾಡಿ ಹಣದ ವ್ಯವಸ್ಥೆ ಮಾಡಿ ಕೋರ್ಟಿಗೆ ಕಟ್ಟಿ ಅದನ್ನು ಮುಗಿಸಬಹುದೆಂದು ಬಂದವನಿಗೆ, ಈಗ ದಿಕ್ಕೇ ತೋಚದಾಯಿತು.

ಆಗ ನನಗೆ ಆಪ್ತರಾದ ಒಬ್ಬ ಇಂಜಿನಿಯರ್, ಆಗ ಅಲ್ಲಿಯೇ ಇದ್ದು ಅವರು ಮತ್ತೆ ನನ್ನನ್ನು ಕರೆಸಿ “ಏನಾಯಿತು?” ಎಂದು ಎಲ್ಲ ವಿವರವನ್ನು ಕೇಳಿ ತಿಳಿದುಕೊಂಡರು. ನನಗೆ ಅಳುವೇ ಬರುವಂತಾಗಿತ್ತು. ಏನೂ ತಪ್ಪು ಮಾಡದೇ  ಇದ್ದ ನನ್ನನ್ನೇ, ದೂರು ಕೊಡಲು ಬಂದವರನ್ನೇ ವಿಚಾರಣೆ ಇಲ್ಲದೇ ಜೈಲಿಗೆ ಹಾಕಲು ಸಿದ್ಧರಾದಂತೆ ಕಂಡಿತು. ಕೊನೆಗೆ ತುಂಬಾ ಹೊತ್ತಿನ ನಂತರ ನಮ್ಮ ವಿಭಾಗಾಧಿಕಾರಿಗಳೂ ಮತ್ತು ಅವರೂ ಮತ್ತೆ ಬಾಸ್ ಹತ್ತಿರ ಹೋಗಿ ಮಾತಾಡಿದರು, “ಈಗ ಹಣ ಬಿಡುಗಡೆ ಮಾಡಿ. ಕೋರ್ಟಿಗೆ ಒಮ್ಮೆ ಪಾವತಿ ಮಾಡಿ, ಸಧ್ಯದ ಗಂಡಾತರ ತಪ್ಪಿಸಿಕೊಳ್ಳುವ. ಬೇಕಾದರೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಷರತ್ತಿನ ಮೇಲೆ ಹಣ ಬಿಡುಗಡೆ ಮಾಡಿ” ಎಂದು ಮನವೊಲಿಸಿದರು. ಹಣವೂ ಮಂಜೂರಾಯಿತು. ಕೋರ್ಟಿಗೂ ಪಾವತಿಯಾಯಿತು. ಅಂತೂ ಮೊದಲಿಗೆ ದೊಡ್ಡ ಅವಗಡದಿಂದ ಪಾರಾದೆ. ಸರಿಯಾಗಿ ಕೇಸನ್ನು ಗಮನಿಸದೇ ಇಷ್ಟಕ್ಕೆಲ್ಲ ಕಾರಣರಾದ ನಮ್ಮ ಕಛೇರಿಯ ಸಿಬ್ಬಂದಿಗೂ ನೋಟೀಸು ಜಾರಿ ಮಾಡಿದ್ದಾಯಿತು. ಆ ವಕೀಲರು ನಮ್ಮ ಕಂಪೆನಿಯ ಕೇಸುಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ನೋಟೀಸು ನೀಡಿ, ಅವರನ್ನು ವಜಾ ಮಾಡಿ, ಬೇರೆ ವಕೀಲರನ್ನು ನಿಯೋಜಿಸಿದ್ದಾಯಿತು.

ನಾನು ನೋಡಿದ ಆಡಿಯೋ ವಿಡಿಯೋಗಳಲ್ಲಿ ಯಾವುದಾದರೂ ಭಾಗ ಒಳ್ಳೆಯದಿದೆ ಅನ್ನಿಸಿದರೆ ಅದನ್ನು ಕತ್ತರಿಸಿ ನನ್ನ  ಫೇಸ್ ಬುಕ್ಕಿಗೆ ಆಗಾಗ ಅಪ್ಲೋಡ್ ಮಾಡುತ್ತಿದ್ದೆ. ಅದನ್ನು ನೋಡಿದ ಶಿವಮೊಗ್ಗದ ಡಾಕ್ಟರ್ ಮಂಟಪ ರತ್ನಾಕರ ಉಪಾಧ್ಯಾಯರು, ಅವರು ಆವರೆಗೆ ಸಂಗ್ರಹಿಸಿದ ಮತ್ತು ಅವರೇ ಆಯೋಜಿಸಿದ ಹಲವಾರು ಯಕ್ಷಗಾನದ ಅಮೂಲ್ಯವಾದ ಡಿವಿಡಿಗಳ ದಾಖಲೆಗಳನ್ನು “ಇನ್ನು ನನ್ನ ಕೆಲಸವಾಯಿತು. ಇದನ್ನು ನಿಮಗೆ ಹಸ್ತಾಂತರಿಸುತ್ತೇನೆ” ಎಂದು ಮೂರ್ನಾಲ್ಕು ದೊಡ್ಡದೊಡ್ಡ ರಟ್ಟಿನ ಪೆಟ್ಟಿಗೆಗೆ ಹಾಕಿ ಕಳಿಸಿಕೊಟ್ಟರು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ