ಗುರುವಾರ, ನವೆಂಬರ್ 23, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 64

ಅಪ್ಪಯ್ಯನ ದಿನಚರಿಯ ಪುಸ್ತಕದಲ್ಲಿ ಅಪ್ಪಯ್ಯ, ಅವರ ಜೀವನ ಚರಿತ್ರೆಯನ್ನು ಒಂದು ಕಡೆಯಲ್ಲಿ ಬರೆದಿಟ್ಟಿದ್ದರು. ಒಮ್ಮೆ ಅದನ್ನು ಓದಿ ನೋಡಿದ ನಾನು, ಅದನ್ನು ಕಂಪ್ಯೂಟರ್ ನಲ್ಲಿ ದಾಖಲಿಸಿ, ಪಿಡಿಎಫ್ ಮಾಡಿ ಅಪ್ಪಯ್ಯನ ಫೇಸ್ ಬುಕ್ ನ ಪೇಜಿನಲ್ಲಿ, ಅದರ ಎಟ್ಯಾಚ್ ಮೆಂಟ್ ಕೊಟ್ಟು ಬೇಕಾದವರು ನೋಡಿಕೊಳ್ಳಲಿ ಎಂದು ಅಪ್ಲೋಡ್ ಮಾಡಿದ್ದೆ. ಅದರ ಬಗ್ಗೆ ಒಂದು ಮಾಸಿಕದಲ್ಲಿ ವರದಿಯೂ ಬಂದಿತ್ತು. ನಾಗರಾಜ ಮತ್ತಿಗಾರರು ಅದನ್ನು ನೋಡಿದವರು, “ಅದು ಚೆನ್ನಾಗಿದೆ. ಅದನ್ನು ಪುಸ್ತಕವಾಗಿ ಮಾಡಬಹುದೇ?” ಎಂದು ನನ್ನನ್ನು ಕೇಳಿದರು. ನಾನು, “ಅದೆಲ್ಲ ಸುಮ್ಮನೆ. ಯಾರೂ ಓದುವವರಿಲ್ಲ. ಬರಿದೇ ಖರ್ಚು” ಎಂದೆ. ಅವರು ಬಿಡಲಿಲ್ಲ. “ನಾನೇ ಪುಸ್ತಕ ಮಾಡುತ್ತೇನೆ. ಅನುಮತಿಯನ್ನು ಕೊಡಿ” ಅಂದರು. ನಾನು ಅಣ್ಣಂದಿರಲ್ಲಿ ವಿಷಯ ಪ್ರಾಸ್ತಾಪಿಸಿದೆ. ಎಲ್ಲರೂ “ಅಪ್ಪಯ್ಯನ ನೆನಪು ಮತ್ತೊಮ್ಮೆ ಅಭಿಮಾನಿಗಳಲ್ಲಿ ಮರುಕಳಿಸುತ್ತದೆಯಲ್ಲ. ಮಾಡಲಿ ಅಡ್ಡಿಲ್ಲ, ನಮ್ಮಿಂದಾದ ಸಹಾಯವನ್ನೂ ಮಾಡುವ” ಎಂದು ಒಪ್ಪಿಗೆ ಕೊಟ್ಟರು. ನಾನು ಮತ್ತಿಗಾರರಿಗೆ ಒಪ್ಪಿಗೆಯನ್ನು ತಿಳಿಸಿದೆ.

ಅವರು ಬಹಳ ಮುತುವರ್ಜಿ ವಹಿಸಿ ಅಪ್ಪಯ್ಯನ ಜೀವನ ಚರಿತ್ರೆಯನ್ನು ಪುನಹ, ಅವರ ವಾಕ್ಯದಲ್ಲಿ ಬರೆದು, ಸ್ವತಹ ಡಿಟಿಪಿ ಕೆಲಸವನ್ನು ಮಾಡಿದರು. ಅದರಲ್ಲಿ ನಾನು ಆಗಲೇ ಸಂಗ್ರಹಿಸಿ ಫೇಸ್ ಬುಕ್ಕಿನ ಪೇಜಿನಲ್ಲಿ ಅಪ್ಲೋಡ್ ಮಾಡಿದ್ದ, ಹಲವಾರು ಅಪ್ಪಯ್ಯನ ಪೋಟೋಗಳನ್ನು ಅವರು ಬಳಸಿಕೊಂಡರು. ಅದರೊಂದಿಗೆ ಅಪ್ಪಯ್ಯನ ಹಲವಾರು ಶಿಷ್ಯಂದಿರಿಂದ ಲೇಖನವನ್ನೂ ಬರೆಸಿದರು. ಬರೆಯಲು ಅನುಕೂಲವಿಲ್ಲದವರ ಸಂದರ್ಶನ ಮಾಡಿ, ಅವರೇ ಬರೆದು ಅದರಲ್ಲಿ ಅಳವಡಿಸಿದರು. ಆ ಪುಸ್ತಕದಲ್ಲಿ ಸುಬ್ರಮಣ್ಯ ಧಾರೇಶ್ವರ, ಸದಾನಂದ ಐತಾಳರು, ಕೆ.ಜಿ. ರಾಮ ರಾವ್, ಕೊಳಗಿ ಕೇಶವ ಹೆಗಡೆ, ಕೆ.ಪಿ. ಹೆಗಡೆ ಮುಂತಾದವರು, ಅವರ ಮೆಚ್ಚಿನ ಗುರುಗಳಾದ ಅಪ್ಪಯ್ಯನ ಬಗ್ಗೆ ಬರೆದ ಲೇಖನವನ್ನೂ, ಚಿಟ್ಟಾಣಿ ರಾಮಚಂದ್ರ ಹೆಗಡೆ, ನೆಬ್ಬೂರು ನಾರಾಯಣ ಭಾಗವತರನ್ನು ಸಂದರ್ಶನ ಮಾಡಿ, ಅಪ್ಪಯ್ಯನ ಜೊತೆಗಿನ ಅವರ ಅನುಭವಗಳನ್ನೂ ದಾಖಲಿಸಿಕೊಂಡು, ಲೇಖನ ತಯಾರು ಮಾಡಿ ಸೇರಿಸಿದ್ದರು. ಶ್ರೀಧರಣ್ಣಯ್ಯನ ಒಂದು ಲೇಖನವೂ ಸೇರಿತು. ಹೊಸ್ತೋಟ ಭಾಗವತರಿಂದ ಒಂದು ಬೆನ್ನುಡಿಯನ್ನೂ ಬರೆಸಿ ಅಳವಡಿಸಿದರು.

 “ಪ್ರಾಚಾರ್ಯ ಪಥ” ಎಂಬ ಹೆಸರಿನಲ್ಲಿ ಮತ್ತಿಗಾರರು, ಅವರ ತಂದೆ ಸುಬ್ರಾಯ ಹೆಗಡೆಯವರ “ಯಮುನಾ ಪ್ರಕಾಶನ” ಎಂಬ ಪ್ರಕಾಶನ ಸಂಸ್ಥೆಯ ಅಡಿಯಲ್ಲಿ, ಅದನ್ನು ಒಂದು ಒಳ್ಳೆಯ ಪುಸ್ತಕವಾಗಿ ಮುದ್ರಿಸಿ ಪ್ರಕಟಿಸಿದರು. ಅದನ್ನು ಬಿಡುಗಡೆ ಮಾಡಲು ನಿಶ್ಚಯಮಾಡಿ, ರಾಜಶೇಖರ ಹೆಬ್ಬಾರರನ್ನು ಮಾತಾಡಿಸಿ, ಹಂಗಾರಕಟ್ಟೆಯ ಭಾಗವತಿಕೆ ಕೇಂದ್ರದಲ್ಲಿ ಬಿಡುಗಡೆಮಾಡಲು ಸಾಧ್ಯವೇ ಎಂದು ಕೇಳಿದೆವು. ಕೂಡಲೇ ಒಪ್ಪಿದ ಅವರು ಬಹಳ ಮುತುವರ್ಜಿ ವಹಿಸಿ, ಆ ಪುಸ್ತಕದ ಬಿಡುಗಡೆಯನ್ನು ಅಚ್ಚುಕಟ್ಟಾಗಿ ಹಾಗೂ ಅದ್ಧೂರಿಯಾಗಿ, ಮಾಡಿದರು. ಬಿಡುಗಡೆಯ ದಿನದಂದು ನೆಬ್ಬೂರರು, ಚಿಟ್ಟಾಣಿಯವರು, ಉದ್ಯಾವರ ಮಾಧವ ಆಚಾರ್ಯರು, ಎಂ. ಎಲ್. ಸಾಮಗರು, ಆನಂದ ಕುಂದರ್, ಎ. ಎಸ್. ಎನ್. ಹೆಬ್ಬಾರರು ಮುಂತಾದವರ ದೊಡ್ಡ ಪರಿವಾರವೇ ನೆರೆದು, ಅಪ್ಪಯ್ಯನನ್ನು ಬಹಳವಾಗಿ ನೆನಪು ಮಾಡಿಕೊಳ್ಳುವಂತೆ ಮಾಡಿದರು. ಅನಂತರ ರಾಜ ಹೆಬ್ಬಾರರು ಮತ್ತು ಬಳಗದವರಿಂದ ಭೀಷ್ಮಪರ್ವ ಎಂಬ ಯಕ್ಷಗಾನವೂ ನೆರವೇರಿತು.

ಮತ್ತೊಮ್ಮೆ ಎಡನೀರು ಮಠದಲ್ಲಿ ಸುಮಾರು ಹಳೆಯ ವಿಸಿಡಿಗಳು ಇವೆ ಎಂದು ಜೋಯಿಸರಿಗೆ ಹೊಸಮೂಲೆ ಗಣೇಶ ಎನ್ನುವವರಿಂದ ಗೊತ್ತಾಯಿತು. ಒಮ್ಮೆ ಅಲ್ಲಿಗೂ ಹೋಗಿ ಸ್ವಾಮಿಯವರನ್ನು ಭೇಟಿಮಾಡಿದೆವು. ಅವರು ಆ ಕ್ಯಾಸೆಟ್ ಗಳಿದ್ದ ರೂಮಿಗೇ, ಅವರ ಒಬ್ಬ ಶಿಷ್ಯನನ್ನು ನಮ್ಮೊಡನೆ ಕಳಿಸಿ ಹೋಗಿ ನೋಡಲು ಹೇಳಿದರು. ಅಲ್ಲಿ ತೆಂಕಿನ ತುಂಬಾ ವಿಡಿಯೋ ಕ್ಯಾಸೆಟ್ ಗಳಿದ್ದವು. ಆದರೆ ಅದನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಕೆಲವು ಮಣ್ಣುಹಿಡಿದು ಹಾಳಾಗಿತ್ತು. ಅದರಲ್ಲೇ ಒಂದಷ್ಟು ಕ್ಯಾಸೆಟ್ ಗಳನ್ನು ಆರಿಸಿಕೊಂಡು ಸ್ವಾಮಿಯವರ ಆಶೀರ್ವಾದವನ್ನು ಪಡೆದು, ಅವರು ಕೊಟ್ಟದ್ದನ್ನು ಒಂದು ಗೋಣಿ ಚೀಲದಲ್ಲಿ ಹಾಕಿಕೊಂಡು ತಂದದ್ದಾಯಿತು.

ನನ್ನ ಹಿರಿಯರ ಆಸ್ತಿಯು, ಚೇರಿಕೆಯಲ್ಲಿ ಮತ್ತು ಕಲ್ಲಟ್ಟೆಯಲ್ಲಿ ಇತ್ತು. ಅಲ್ಲಿಯ ಬೇಸಾಯದಲ್ಲಿ ಹೇಳಿಕೊಳ್ಳುವಂತಹ ಉತ್ಪತ್ತಿಯೇನೂ ಇರಲಿಲ್ಲ. ಮನಸ್ಸು ಕೊಟ್ಟು ಬೆಳೆದರೆ ಊಟಕ್ಕೆ ಸಾಕಾಗುವಷ್ಟು ಇದ್ದರೂ, ಕೆಲಸಕ್ಕೆ ಜನಗಳು ಸಿಕ್ಕದೇ ಬೇಸಾಯ ಮಾಡಿಸುವುದೂ ಕಷ್ಟವಾದ ಪರಿಸ್ಥಿತಿ ಇತ್ತು. ನನಗೆ ಆಗ ಮನೆಯ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗದೆ ಇರುವುದರಿಂದ, ನನ್ನ ಪಾಲಿನ ಆಸ್ತಿಯ ಹಕ್ಕಿನ ಪಾಲನ್ನು ಅಲ್ಲಿ ವಾಸವಾಗಿರುವ ಅಣ್ಣಂದಿರಿಗೆ ಬಿಟ್ಟು ಕೊಡಲು ನಿರ್ಧಾರ ಮಾಡಿದೆ. ನನ್ನ ಸ್ನೇಹಿತರಲ್ಲಿ ಈ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿದಾಗ ಹೆಚ್ಚಿನವರು, “ಬೇಡ, ಹಿರಿಯರ ಸೊತ್ತು, ಬೇಡ ಎನ್ನಬಾರದು. ನಿನಗೆ ಬೇಡದಿದ್ದರೆ ಹಾಗೆಯೇ ಬಿದ್ದಿರಲಿ.” ಎಂದು, ಕೆಲವು ಸ್ನೇಹಿತರು, “ಹಿರಿಯರದ್ದು ಪ್ರಸಾದವೆಂದು, ಪಾಲಿಗೆ ಬಂದದ್ದು ಎಂದು ಸ್ವೀಕರಿಸಬೇಕು. ಯಾಕೆ ದುಡುಕುತ್ತೀರಿ?. ಎಲ್ಲ ಬಿಟ್ಟು ಕೊಟ್ಟರೆ ಮುಂದೆ ಎಂತಹ ಕಾಲ ಬರುತ್ತದೆ, ಹೇಳುವುದು ಕಷ್ಟ. ಆಪತ್ಕಾಲದಲ್ಲಿ ಬೇಕಾಗುತ್ತದೆ” ಎಂದು ವ್ಯವಹಾರದ ಮಾತಾಡಿ, ಬುದ್ಧಿ ಹೇಳಿದರು. ಅವರಿಗೆ ನಾನು, “ನನಗೆ ಅದು ಬೇಡ. ನನಗೆ ಅಪ್ಪಯ್ಯ ಕೊಡಿಸಿದ ವಿದ್ಯೆ ಮತ್ತು ಉತ್ತಮ ಸಂಸ್ಕಾರಗಳೇ ಸಾಕು” ಎಂದು ಹೇಳಿದೆ. ಅಲ್ಲದೇ, ನನ್ನ ಜೀವನಕ್ಕೆ ಹೇಗೂ ಒಂದು ದಾರಿಯಾಗಿದೆ. ಆ ಆಸ್ತಿಯ ಹಂಗು ಬೇಡ ಎಂದು ನಿರ್ಧರಿಸಿ, ನಮಗೆ ಹಿರಿಯರು ಬಿಟ್ಟುಹೋದ ಆಸ್ತಿಯನ್ನು ಪಾಲು ಮಾಡಿಕೊಂಡು, ಚೂರು ಚೂರು ಮಾಡುವ ಬದಲು, ಅದನ್ನು ಈಗ ಮಾಡುತ್ತಿದ್ದ ಅಣ್ಣಂದಿರಿಗೆ, ಅದರಲ್ಲಿ ಇತರರ ಹಕ್ಕೂ ಇದೆ ಎನ್ನಿಸಿ “ಪರರದು” ಎನ್ನಿಸುವ ಬದಲು, ಅವರಿಗೇ ಬಿಟ್ಟುಕೊಟ್ಟರೆ, ಅದನ್ನು ಮನಸ್ಸುಕೊಟ್ಟು ಅಭಿವೃದ್ಧಿಪಡಿಸಿ ಇಟ್ಟುಕೊಳ್ಳಬಹುದು ಎಂಬ ಸ್ವಾರ್ಥವೂ ಇತ್ತು.

ನಮ್ಮ ಚೇರಿಕೆಯ ಮೂಲ ಮನೆಯ ಮತ್ತು ಕಲ್ಲಟ್ಟೆಯ ಮನೆಯ ಎರಡು ಅಣ್ಣಂದಿರಿಗೆ ನನ್ನ ಹಕ್ಕಿನ ಪಾಲನ್ನು ರಿಲೀಸ್ ಮಾಡಿ ಕಾನೂನಿನ ಪ್ರಕಾರ ಬಿಟ್ಟು ಕೊಡಲು ನಿರ್ಧರಿಸಿ, ಲಾಯರನ್ನು ಕಂಡು, ಅದರ ವಿಧಿ ವಿಧಾನಗಳ ಬಗ್ಗೆ ವಿಚಾರಿಸಿದೆ. ಅದರಲ್ಲಿ ನಮ್ಮ ಅಕ್ಕ ಮತ್ತು ಅಣ್ಣಂದಿರ ಪಾಲುಗಳೂ, ದೊಡ್ಡಪ್ಪ ಮತ್ತು ಅವರ ಮಕ್ಕಳ ಪಾಲೂ ಇದ್ದು, ನನ್ನ ಒಬ್ಬನ ಇಚ್ಛೆಯಂತೆ ಬಿಟ್ಟುಕೊಟ್ಟರೆ ಅಣ್ಣಂದಿರ ಹೆಸರಿಗೆ ರಿಜಿಸ್ಟರ್ ಆಗುವುದು ಸಾಧ್ಯವಿರಲಿಲ್ಲ. ಆದರೆ ಅದು ನನಗೆ ಸಂಬಂಧಿಸಿದ್ದಲ್ಲ ಎಂದು, ಯಾರ ಹತ್ತಿರವೂ ಚರ್ಚಿಸದೇ, ನಾನು ನನ್ನ ಹಕ್ಕಿನ ಪಾಲನ್ನು ರಿಲೀಸ್ ಪತ್ರಮಾಡಿ ಬರೆದುಕೊಟ್ಟೆ. ನಂತರ ನನ್ನ ಅಣ್ಣಂದಿರೆಲ್ಲರೂ ಅವರವರ ಪಾಲನ್ನೂ, ಮನೆಯಲ್ಲಿ ಬೇಸಾಯವನ್ನೇ ನಂಬಿಕೊಂಡಿದ್ದ ಅಣ್ಣಂದಿರಿಗೇ, ಬಿಟ್ಟುಕೊಟ್ಟದ್ದೂ ಆಯಿತು. ಅಂತೂ ಹಿರಿಯರ ಆಸ್ತಿ ಪಾಲಾಗದೇ ಉಳಿಯುವಂತಾಯಿತು. ವರ್ಷಕ್ಕೊಮ್ಮೆಯೋ, ಎರಡು ಸಲವೊ, ಅಥವ ಹಿರಿಯರ ದಿನಗಳಲ್ಲಿಯೋ, ಹಬ್ಬಕ್ಕೋ ಮತ್ತೊಂದಕ್ಕೋ ನಾವು ಹುಟ್ಟಿ ಬೆಳೆದ, ಓಡಿಯಾಡಿದ, ಆ ಮೂಲ ಮನೆಗೆ ಹೋದರೆ, ಅವರು ನಮ್ಮನ್ನು ಚಂದವಾಗಿ ಕಂಡು ಮಾತಾಡಿಸಿದರೆ, ಆಸ್ತಿಯನ್ನು ಹಾಳು ಮಾಡದೇ ಇಟ್ಟುಕೊಂಡಿದ್ದರೆ, ಅಷ್ಟೇ ಸಾಕು ಎಂದು ನಾನು ಭಾವಿಸಿದೆ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ